ಬುಧವಾರ, ಜನವರಿ 14, 2009

ನಾನು, ಅವಳು ಮತ್ತು ಪ್ರೀತಿ

ಪಿಸು ಮಾತು - ೧

ಪ್ರೀತಿಯ ಅವಳೇ,
"ಒಮ್ಮೆ ಗತಿಸಿದ ಸಮಯ ಮತ್ತೆ ಬಾರದು
ಪ್ರೀತಿ ಸಂದೇಶ ಮುಟ್ಟಿಸುವ ಹೊಣೆ ನನ್ನದು
ಸ್ವೀಕಾರ-ತಿರಸ್ಕಾರದ ನಿರ್ಧಾರ ನಿನ್ನದೂ
ಪ್ರೀತಿ-ಪ್ರೇಮದ ವಿಚಾರದಲ್ಲಿ ಒತ್ತಾಯ ಸಲ್ಲದು"
ಈ ಸಾಲುಗಳಿಗೆ ಸರಿಯಾಗಿ ಎಂಟು ವರ್ಷ ತುಂಬಿದೆ, ನಿನ್ನಲ್ಲಿ ಪ್ರೀತಿ ನಿವೇದನೆ ಮಾಡಿ ಮನೆಗೆ ಬಂದ ದಿನ ಮನಸ್ಸಿಗೆ ತೋಚಿದಂತೆ ಗೀಚಿಟ್ಟ ಸಾಲುಗಳಿವು, ನಾನು ನಿನ್ನಲ್ಲಿ ನನ್ನ ಭಾವನೆಯನ್ನು ಹೇಳಿಕೊಂಡು ನೆನ್ನೆಗೆ ಅಂದರೆ ಜನವರಿ ೧೨ಕ್ಕೆ ಎಂಟು ವರ್ಷ ತುಂಬಿದೆ, ನಿನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡವನು ನಿನ್ನ ಮುಖವನ್ನೂ ನೋಡಲಾಗದೆ ಹಾಗು ನಿನ್ನ ಉತ್ತರಕ್ಕೂ ಕಾಯದೆ ಅಲ್ಲಿಂದ ಕಾಲ್ಕಿತ್ತಿದ್ದೆ, ನಂತರ ನೀನು ನನ್ನ ಅಕ್ಕನಂತಹ ಗೆಳತಿಯ ಬಳಿ, ಇವನು ಹೀಗೆ ಕೇಳ್ತಾನೆ ಅಂತ ನಿರೀಕ್ಷಿಸಿಯೇ ಇರಲಿಲ್ಲ ಅಂತ ಹೇಳಿದೆ ಎಂದು ಗೊತ್ತಾದಾಗ, ನಿನ್ನ ಪ್ರೀತಿ ಇಲ್ಲದಿದ್ದರೂ ಬೇಡ ಆದರೆ ನಿನ್ನನ್ನು ನೋಯಿಸಬಾರದಿತ್ತು ಅನ್ನೋ ಉದ್ದೇಶದಿಂದ ಎಂಟು ವರ್ಷಗಳ ಹಿಂದೆ ಸಂಕ್ರಾಂತಿಯ ಹಿಂದಿನ ದಿನ ಇದೆ ರೀತಿ ಬರೆಯಲು ಕುಳಿತಿದ್ದೆ.

ಅದೊಂದು ಕ್ಷಮೆ ಕೋರಿ ಬರೆದ ಪತ್ರ. ಬರೆವ ಮುನ್ನ ಒಳ ಕೋಣೆಯಲ್ಲಿ ಮಲಗಿದ್ದ ಅಜ್ಜನ ಬಳಿ ಕೇಳಿದ್ದೆ ಸಂಕ್ರಾಂತಿ ದಿನ ನಾವು ಏನೇ ಅಂದುಕೊಂಡರು ಅದು ಆಗುತ್ತಾ ಅಂತ, ಅಜ್ಜ ಹೌದೆಂಬಂತೆ ತಲೆಯಾಡಿಸಿದ್ದರು, ಬಹುಶಃ ನಾನು ಬರೆಯುತ್ತಿದ್ದ ವಿಚಾರ ನನ್ನಜ್ಜನಿಗೆ ಗೊತ್ತಾಗಿದ್ದಿದ್ದರೆ ಅಜ್ಜನ ಕೈಯಲ್ಲಿದ್ದ ಕೋಲು ಪುಡಿಯಾಗಿ ಇವತ್ತಿಗೆ ಎಂಟು ವರ್ಷಗಳಾಗಿರುತ್ತಿತ್ತು.

ಆಮೇಲೆ ನಾನು ಆ ಪತ್ರ ನಿನ್ನ ಕೈಗಿತ್ತು ನಿನ್ನ ಕ್ಷಮಾಪಣೆ ಕೇಳಿದ್ದು, ಆಮೇಲೆ ನಾನು ಸಹ ನಿನ್ನನ್ನು ಪ್ರೀತಿಸ್ತಿದ್ದೀನಿ ಕಣೋ ಅಂತ ನೀನು ಹೇಳಿದ್ದು, ಪ್ರತಿ ಕ್ಷಣ ಬದುಕಿನ ಬಗ್ಗೆ ನೂರಾರು ಕನಸು ಹೆಣೆದಿದ್ದು, ನೀನು ಊಟ ಮಾಡದೆ ನಾನು ಮಾಡೋದಿಲ್ಲ ಅಂತ ಕಣ್ಣೀರಾಗಿದ್ದು, ಮನಸ್ಸು ಹೇಳಿದಾಗೆಲ್ಲ ಒಂದೊಂದು ಪತ್ರ ಬರೆದು ನಿನ್ನ ಕೈಸೇರಿಸಿದ್ದು, ನೀನು ಬರೆದ ಪತ್ರವನ್ನು ಎದೆಗೊತ್ತಿಕೊಂಡು ನನ್ನ ಕೋಣೆ ಕತ್ತಲಾಗಿಸಿಕೊಂಡು ನಿನ್ನ ನೆನಪಿನಲ್ಲಿ ನಾನು ರಾತ್ರಿ ಕಳೆದಿದ್ದು. ಎಂತೆಂತಹ ಅಮೂಲ್ಯ ದಿನಗಳಲ್ಲವೇ ಅವುಗಳು.

ನಮ್ಮಿಬ್ಬರ ಪ್ರೀತಿಯ ಮೊದಲ ಭೇಟಿ ಆ ತಾಲ್ಲೂಕ್ ಕಚೇರಿ ಬಸ್ ನಿಲ್ಧಾಣದ ಬಳಿ, ಅವತ್ತು ನೀನು ಮಲ್ಲಿಗೆ ಮುಡಿದಿದ್ದೆ, ಅದೆಷ್ಟು ಮುದ್ದಾಗಿ ಕಾಣಿಸುತ್ತಿದ್ದೆ ಗೊತ್ತ. ಆದರೆ ಈಗ ನೋಡು ಆ ಬಸ್ ನಿಲ್ಧಾಣದಲ್ಲಿ ನೀನಿಲ್ಲ, ಎದುರಿನ ಹೂವಿನಂಗಡಿಯವನು ನನ್ನೆಡೆಗೆ ನೋಡಿದರೆ ಅವನು ನನ್ನನ್ನು ಅಪಹಾಸ್ಯ ಮಾಡುತ್ತಿದ್ದಾನೇನೋ ಎಂದೆನಿಸುತ್ತದೆ. ಅಲ್ಲೆಲ್ಲಾ ನಿನ್ನನ್ನು ಹುಡುಕಾಡಿ ಸೋಲುತ್ತೇನೆ, ಕಣ್ಣೀರು ತುಂಬಿ ನಿಲ್ಲುತ್ತೇನೆ. ನನಗೆ ನೀನು ಹೇಳುತ್ತಿದ್ದುದು ನೆನಪಿದೆ "ಹುಡುಗರು ಅಳಬಾರದು ಕಣೋ, ಅದು ಹೇಡಿಗಳ ಲಕ್ಷಣ", ಕಣ್ಣೀರಿಗೆ ಲಿಂಗ-ಭೇಧ ಗೊತ್ತಿಲ್ಲ ಕಣೇ ಹುಡುಗಿ, ಸುಮ್ಮನೆ ಸುರಿಯುತ್ತೆ ಮುಂಗಾರಿನ ಮಳೆಯಂತೆ, ಕಣ್ಣೀರು ಬರಿಯ ಅಸಹಾಯಕತೆಯನ್ನು ತೋರುತ್ತೆ ಅದು ಯಾವುದೇ ಸಮಸ್ಯೆಗೆ ಪರಿಹಾರ ಹೇಳೋದಿಲ್ಲ ಅನ್ನೋದು ನನಗೂ ಚೆನ್ನಾಗಿ ಗೊತ್ತು, ಏನು ಮಾಡಲಿ ಹೇಳು ಮನಸ್ಸು ಕೇಳೋದಿಲ್ಲ, ನಮ್ಮ ಪ್ರೀತಿ ಪಾತ್ರರಿಗೆ ಮಾತ್ರ ನಾವು ಕಣ್ಣೀರು ಸುರಿಸುತ್ತೇವೆ, ಎಲ್ಲರಿಗು ನೀಡೋದಕ್ಕೆ ಇದು ಪುರಪಂಚಾಯತಿಯ ನಲ್ಲಿ ನೀರಲ್ಲ ಕಣೇ. ಇದನ್ನು ನೀನು ಹೇಡಿತನವೆಂದು ಕೊಂಡೆ ಎಂದರೆ ಅದು ಬದುಕಿನ ಬಹು ದೊಡ್ಡ ದುರಂತ.

ಅಮ್ಮ ನನಗೆ ಯಾವತ್ತು ಜಾತಿ ಎಂದರೆ ಏನು ಅಂತ ಹೇಳಿರಲೇ ಇಲ್ಲ ನೋಡು, ಹಾಗಾಗಿ ನನಗೆ ಗೊತ್ತಿರಲಿಲ್ಲ ನಿನ್ನನ್ನು ಮದುವೆಯಾಗಲು ನಾನು ನಿಮ್ಮ ಜಾತಿಯವನಾಗಿರಬೇಕೆಂದು. ಹುಡುಗಿ ನಿನಗೆ ಗೊತ್ತ ನಿನ್ನನ್ನು ಪ್ರೀತಿಸುವ ಮೊದಲಿಂದ ಹಾಗು ಪ್ರೀತಿಸಿದ ಮೇಲೆ ಸಹ ನನ್ನ ಜಾತಿ ಬದಲಾಗಲಿಲ್ಲ, ನನ್ನದು ಮೊದಲಿಂದ ಒಂದೇ ಜಾತಿ ಕಣೇ. ಮನೆಯಲ್ಲಿ ಒಪ್ಪೋದಿಲ್ಲ ಕಣೋ ಅಂತ ನೀನು ಗೋಗರೆದಾಗ ನನಗೇನು ಅನ್ನಿಸಿತ್ತು ಗೊತ್ತ ಗೆಳತಿ. ಈ ಕ್ಷಣದಲ್ಲಿ ನನ್ನ ಜಾತಿ ಬದಲಿಸಿ ಕೊಳ್ಳುವಂತಿದ್ದರೆ, ರೂಪ ಹೆಚ್ಚಿಸಿಕೊಳ್ಳುವಂತಿದ್ದರೆ, ಇವೆಲ್ಲ ಅಸಾಧ್ಯದ ಪರಮ ಶಿಖರಗಳು. ಓಡಿ ಹೋಗೋಣ ಅಂತ ಕೇಳಲು ನನ್ನ ಆತ್ಮ ಸಾಕ್ಷಿ ಒಪ್ಪಲಿಲ್ಲ, ಎಲ್ಲರೆದುರು ನಿನ್ನನ್ನು ಮದುವೆಯಾಗ ಬೇಕೆಂದು ನಿನ್ನ ಪ್ರೀತಿಸಲು ಆರಂಭಿಸಿದ ದಿನವೇ ತೀರ್ಮಾನಿಸಿದವರು ನಾವು. ಏನೇ ಹೇಳು ಈ ಬದುಕಿನಲ್ಲಿ ಯಾರನ್ನೇ ಆದರು ನೀನು ನನಗೆ ಬೇಡ ಅನ್ನಲು ಕಾರಣಗಳೇ ಬೇಕಾಗೋದಿಲ್ಲ.

ನೀನು ಆಗೋದಿಲ್ಲ ಅಂತ ದೂರ ನಡೆದ ಕ್ಷಣದಿಂದ ನಾನು ತತ್ತರಿಸಿದ್ದೀನಿ, ನಾನು ಹುಡುಗ ನೋಡು ಎಲ್ಲರೆದುರು ಅಳುವ ಹಕ್ಕು ಹುಡುಗರಾದ ನಮಗಿರುವುದಿಲ್ಲ, ಗೆಳೆಯರೆದುರು ಕಣ್ಣೀರಾದರೆ ಬೇಸರಿಸುತ್ತಾರೆ ಹಾಗಾಗಿ ನನ್ನ ಅಳುವಿಗೆ ಕತ್ತಲು ಬೇಕು, ಅತ್ತು ಸುಸ್ತಾಗಿ ನಿಂತಾಗ ಒರಗಲು ಗೋಡೆ ಬೇಕು, ಅಲ್ಲಿ ನೀರವ ಮೌನವಿರಬೇಕು, ನನ್ನ ಜೊತೆ ನಿನ್ನ ನೆನಪಿನ ಮಹಾಸಾಗರವಿದೆ, ಅದರ ಅಲೆಯ ಹೊಡೆತಗಳಿಗೆ ಸಿಕ್ಕು ಸೋತಿದ್ದೇನೆ ಅದರ ರಭಸದ ಹರಿವಿನಲ್ಲಿ ಮುಳುಗೇಳುತ್ತಿದ್ದೇನೆ, ಅವು ನನ್ನನ್ನು ತಂದು ದಡಕ್ಕೆಸೆಯುತ್ತವೆ, ಇನ್ನೇನು ನಾನು ಎದ್ದು ನಿಲ್ಲ ಬೇಕು, ಮತ್ತೆ ಎಳೆದೊಯ್ಯುತ್ತವೆ.

ನೀನು ಮತ್ತೆ ನನ್ನ ಬದುಕಿಗೆ ಬರುತ್ತೀಯ ಎಂದು ಕೇಳುವ ಧೈರ್ಯ ನನ್ನಲ್ಲಿಲ್ಲ, ಆದರೆ ಒಂದು ಹಂತದಲ್ಲಿ ನನ್ನ ಬದುಕು ನಿನಗೆ ಏನು ಅಲ್ಲ ಅಂತ ಅನ್ನಿಸಿತಲ್ಲ ಅದಕ್ಕೆ ನೋವಿದೆ ಗೆಳತಿ, ಹೊರಡುವ ಮುನ್ನ ನೀನು ಹೇಳಿದ್ದಿಷ್ಟು ನಿನ್ನಂತವನಿಗೆ ನನಗಿಂತ ಒಳ್ಳೆಯವಳು ಸಿಗುತ್ತಾಳೆ ಅಂತ. ಇದನ್ನು ಕೇಳಿದವನಿಗೆ ಸಾಹಿಲ್ ನ ಸಾಲುಗಳು ನೆನಪಾಗುತ್ತವೆ...
ख़त लिखने के लिए शाई है
लेकिन मेरा खून जैसा नहीं
लड़की तो मिल सकती है
मगर तुम जैसी नहीं
ಬದುಕನ್ನು ಮತ್ತೆ ಮೊದಲಿಂದ ಆರಂಭಿಸ ಹೊರಟಿದ್ದೇನೆ, ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದೆವಲ್ಲ ಅದೇ ಬಸ್ಸು ನಿಲ್ದಾಣದಿಂದ, ಈಗ ನಾನು ಒಂಟಿ, ಇಲ್ಲಿ ನೀನಿಲ್ಲ. ಅಮ್ಮ ಹೇಳಿದ್ದಾಳೆ ನಾನು ಬದುಕಲ್ಲಿ ಸೋಲಬಾರದಂತೆ. ಆದರು ನಿನ್ನ ನೆನಪು ತುಂಬಾನೆ ಕಾಡುತ್ತೆ ಕಣೇ ಮರೆಯೋಕೆ ಪ್ರಯತ್ನಿಸಿದಷ್ಟು, ನಾವಿಬ್ಬರೂ ನಡೆದು ಬಂದ ಹಾದಿ ನೆನಪಿದೆ, ಆದರೆ ಇಂದು ಆ ದಾರಿಯಲ್ಲಿ ನಾನು ಒಬ್ಬಂಟಿ ಪಯಣಿಗ, ನಿನಗೂ ಹೀಗೆ ಅನ್ಸುತ್ತಾ, ನಮ್ಮ ಎಲ್ಲ ಕನಸುಗಳಿಗೆ ನಾವೇ ವ್ಯವಸ್ಥಿತವಾಗಿ ಸಮಾಧಿ ಕಟ್ಟಿದೆವೇನೋ ಅಂತ ಯೋಚಿಸಿ ಮನಸ್ಸು ಕುಸಿಯುತ್ತಿದೆ. ನನಗೆ ಗೊತ್ತು ನಿನ್ನ ಬಳಿಯೂ ಇದಕ್ಕೆ ಉತ್ತರವಿಲ್ಲ. ನನ್ನದಲ್ಲದ ಕವನವೊಂದು ಇವತ್ತು ನನ್ನನ್ನು ತುಂಬಾನೇ ಕಾಡುತ್ತಿದೆ.
"ನಡೆದ ಹಾದಿಯ ಚಿತ್ರ ಕಣ್ಣಲ್ಲೇ ಉಳಿದಿತ್ತು
ಮತ್ತೆ ಆ ಹಾದಿಯಲೇ ಹೊರಳುತಿಹೆನು
ಹೊರಟವನ ಕಣ್ಣಲ್ಲಿ ಎಂತೆಂತ ಕನಸಿತ್ತು
ಬರಿಯ ನಿರಾಸೆಯ ಹೊತ್ತು ಮರಳುತಿಹೆನು"
-ನಾನು

( ಬರಹ ಸಂಪೂರ್ಣ ಕಾಲ್ಪನಿಕವಷ್ಟೇ, ಸುಮ್ಮನೆ ಏನಾದರು ಬರೆಯಬೇಕೆಂದು ಶುರುವಿಟ್ಟಾಗ ಬರಹ ಹೀಗೆಲ್ಲ ಕವಲೊಡೆದು ನಿಂತಿತು. ಇದು ಯಾವ ವ್ಯಕ್ತಿ, ವ್ಯಕ್ತಿತ್ವಕ್ಕೆ, ಹಾಗು ಸಂಬಂಧಕ್ಕೆ ಸಂಬಂಧಿಸಿದ್ದಲ್ಲ, ಬರಹದ ಅವಳು ಕೂಡ ಕಾಲ್ಪನಿಕ, ಹಾಗೆ ಬರೆದ ನಾನು ಎಂಬ ಪಾತ್ರ ಕೂಡ)
*** ನನ್ನ ಮನದಂಗಳದ ಅತಿಥಿಗಳಿಗೆಲ್ಲಾ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ***

15 ಕಾಮೆಂಟ್‌ಗಳು:

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಸಂಕ್ರಾಂತಿಯ ಶುಭಾಶಯಗಳು. ಆಶಾಭಾವನೆಯಿರಲಿ. ಕನಸಿನ ಹುಡುಗಿ ಕೈಹಿಡಿಯುವಳು.

shivu.k ಹೇಳಿದರು...

ರಾಜೇಶ್,

ಕಲ್ಪನೆಯಾದರೂ ಕಣ್ಣಿಗೆ ಕಟ್ಟುವಂತ ಬರವಣಿಗೆ....ನಿಮ್ಮ ಕನಸು ಕಲ್ಪನೆಗಳು ನನಸಾಗಲಿ....
ಸಂಕ್ರಾಂತಿಯ ಶುಭಾಶಯಗಳು.

Ittigecement ಹೇಳಿದರು...

ರಾಜೇಶ್...

ವಾವ್... ಎಷ್ಟು ಚಂದವಾಗಿ ಬರೆದಿದ್ದೀರಿ...

ನೀವು ನಿಮ್ಮ ಬರವಣಿಗೆಯನ್ನು ಅನುಭವಿಸಿ ಬರೆಯುತ್ತೀರಿ..
ಅದಕ್ಕೆ ಆತ್ಮೀಯವಾಗುತ್ತದೆ...
ಓದುವ ನಾವು ತಲ್ಲೀನರಾಗಿಬಿಡುತ್ತೇವೆ...!

ಇನ್ನೂ ಸ್ವಲ್ಪ ಜಾಸ್ತಿ ಬರೆದು ಕಥೆಯ ರೂಪ ಕೊಡಿರಿ...
ನಿಮ್ಮ ಇನ್ನಷ್ಟು ಕಥೆಗಳಿಗೆ ನಿರೀಕ್ಷಿಸುತ್ತಿದ್ದೇನೆ...

ಸಂಕ್ರಮಣದ ಶುಭಾಶಯಗಳು...

ಭಾರ್ಗವಿ ಹೇಳಿದರು...

ಈ ದಿನ ಸಂಕ್ರಮಣ ತಾನೆ,ನಿಮ್ಮ ಕನಸಿನ ರಾಜಕುಮಾರಿ ಸಿಗಲಿ ಅಂತ ನನ್ನಿಂದಲೂ ದೇವರಲ್ಲಿ ಒಂದು ಪ್ರಾರ್ಥನೆ:).ನಿಮಗೂ ಸಂಕ್ರಮಣದ ಶುಭಾಷಯಗಳು. ಕಲ್ಪನೆಯಾದರೂ ಚಂದದ ಬರಹ.

ಅನಾಮಧೇಯ ಹೇಳಿದರು...

habbada shubhashayagalu... ee lekhana tumba chenaagide.... ninu helidahaage "avalu" matte "naanu" kalpanika annisolla odovaaga...pratiyobrugu idu nam kathene alva annisatte...ninna ella aasegalannu neraverisali devru.

ಅನಾಮಧೇಯ ಹೇಳಿದರು...

ನಮಸ್ತೆ ರಾಜೇಶ್
ತುಂಬಾ ಚೆನ್ನಾಗಿ ಬರೆದಿದ್ದೀರ. ಇದು ಕಲ್ಪನೆ ಅಂತ ಅನಿಸುತ್ತಿಲ್ಲ ಅನುಭವಿಸಿ ಬರೆದಂತಿದೆ

ಚಿತ್ರಾ ಸಂತೋಷ್ ಹೇಳಿದರು...

ರಾಜೇಶ್..ತಡವಾಗಿ ಸಂಕ್ರಾತಿ ಹಬ್ಬದ ಶುಭಾಶಯಗಳು. ಬರಹ ತುಂಬಾನೇ ಚೆನ್ನಾಗಿದೆ...ಮುಗ್ಧತೆ, ಪ್ರೀತಿ, ಪ್ರಾಮಾಣಿಕತೆ ಎಲ್ಲವನ್ಣೂ ತುಂಬಿಕೊಂಡಿರುವ ಬರಹ..ಮತ್ತೆ ಮತ್ತೆ ಅತ್ತ ಸೆಳೆಯುತ್ತೆ.
ಎಲ್ಲಾ ಓಕೆ..ಕಾಲ್ಪನಿಕ ಅಂತ ಬರೆದಿದ್ದು ಯಾಕೆ? ಯಾರೂ ಏನೂ ತಿಳ್ಕೊಳ್ಳಲ್ಲ ಮಾರಾರ್ರೆ..(:)(:)
-ಚಿತ್ರಾ

Unknown ಹೇಳಿದರು...

hi rajesh, its really fantastic, narration is excellent as if by own experience. Still I am not able to believe that is it your own exprience or not.
Generally that type of narration will not come unless you have experience.
meet agu vicharisikolluttene.....

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಮಲ್ಲಿಕಾರ್ಜುನ ಸರ್,
ನಿಮಗೂ ಸಹ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು ಮತ್ತು ನನ್ನ ಬ್ಲಾಗ್ ಪ್ರಪಂಚಕ್ಕೆ ಆತ್ಮೀಯ ಸ್ವಾಗತ. ನಿಮ್ಮ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು. ಆಗಾಗ ಬರ್ತಾ ಇರಿ.

ಶಿವೂ ಸರ್,
ಹಾರೈಕೆಗೆ ಆಭಾರಿ, ಏನೋ ಕಲ್ಪಿಸಿ ಕೊಂಡು ಬರೆದಿದ್ದೇನೆ, ನೀವು ಇಷ್ಟ ಪಟ್ಟಿದ್ದೆ ನನಗೆ ಒಂದು ರೀತಿ ಖುಷಿ-ಖುಷಿ ಮತ್ತು ಕೋಟಿ ಧನ್ಯವಾದಗಳು.

ಪ್ರಕಾಶ್ ಸರ್,
ಬದುಕಿನ ಕೆಲವು ಭಾವನೆಗಳೇ ಹಾಲ್ಲವೇ ಅನಿವಾರ್ಯವಾಗಿ ಅನುಭವಕ್ಕೆ ಬಂದಂತೆ ಬಂದು ಬಿಡುತ್ತವೆ. ನಿಮ್ಮ ಪ್ರೋತ್ಸಾಹಕ್ಕೆ ನಾನು ಆಭಾರಿ. ಖಂಡಿತ ಬರೆಯುತ್ತೇನೆ, ನೀವು ಸಹಿಸಿಕೊಳ್ಳಲು ಸಿದ್ಧರಿರ ಬೇಕಷ್ಟೇ.
ನಿಮಗೂ ಒಂದು ಮೂಟೆಯಷ್ಟು ಧನ್ಯವಾದಗಳು.

ಭಾರ್ಗವಿ ಮೇಡಂ,
ದೇವರಿಗೆ ನೀವೆಲ್ಲ ನನ್ನ ಪರವಾಗಿ ವಿನಂತಿ ಕಳಿಸಿದರೆ ಖಂಡಿತ ಪೂರ್ಣಗೊಳಿಸುತ್ತಾನೆ ಅನ್ನೋ ನಂಬಿಕೆ ನನಗೂ ಕೂಡ. ಬರಹ ಇಷ್ಟಪಟ್ಟಿದ್ದಕ್ಕೆ ಸಾವಿರ ಸಾವಿರ ವಂದನೆ. ಹೀಗೆ ಬರುತ್ತಿರಿ.

ನಮಿತಕ್ಕ,
ನಿಮಗೂ ಸಹ ಹಬ್ಬದ ಶುಭಾಶಯಗಳು. ನನ್ನ ಬರಹಗಳೆಡಗಿನ ನಿಮ್ಮೆಲ್ಲರ ಪ್ರೀತಿ ನಾನು ಬರೆವಂತೆ ಮಾಡಿದೆ. ಕಾಲ್ಪನಿಕ ಅಂತ ಅನ್ಸೊಲ್ವಾ ಅಕ್ಕಾ :). ಹೀಗೆ ಬಂದು ಅಭಿಪ್ರಾಯ ಬಿಟ್ಟು ಹೋಗಿ.

ಅಕ್ಷಯ್,
ಅನಾಮಧೇಯನಾಗಿ ಅನಿಸಿಕೆ ಬಿಟ್ಟರೆ ಹೇಗಪ್ಪ. ನಾನು ಯಾರು ಅಂತ ಕಲ್ಪಿಸಿಕೊಳ್ಳಲಿ. ಯಾಕೆ ಕಾಲ್ಪನಿಕ ಅಂದರೆ ನನ್ನ ಹತ್ತಿರ ಉತ್ತರ ಇಲ್ಲ, ಹೀಗೆ ಸುಮ್ಮನೆ ಇದು ಕಾಲ್ಪನಿಕ ಅಷ್ಟೇ ಕಣೋ :).

ರೋಹಿಣಿಯವರೆ,
ನಮಸ್ಕಾರಗಳು. ನೀವು ಭೇಟಿ ನೀಡಿದ್ದು ಖುಷಿ ಕೊಟ್ಟಿತು. ಅನುಭವಿಸಿ ಬರೆದಿದ್ದಂತು ನಿಜ, ನೀವೆಲ್ಲ ಇಷ್ಟಪಟ್ಟರೆ ಅನುಭವಿಸಿ ಬರೆದಿದ್ದು ಸಾರ್ಥಕ. ಆಗಾಗ ಬರುತ್ತಿರ ಬೇಕು ನೀವು, ಬರುತ್ತೀರಲ್ಲ.

ಚಿತ್ರಾ,
ನಿಮ್ಮ ಹಾರೈಕೆಗಳು ಎಂದು ಬಂದರು ಸಂತೋಷವೇ, ನಿಮಗೂ ಸಂಕ್ರಮಣದ ಹಾರ್ಧಿಕ ಶುಭಾಶಯಗಳು. ಕಾಲ್ಪನಿಕ ಅಂತ ಬರೆದ ಕಾರಣ ಏನು ಇಲ್ಲ ಮಾರಾಯ್ರೆ, ಸುಮ್ಮನೆ ದುರಂತ ಪ್ರೇಮಿ ಅಂತ ಅನ್ನಿಸ್ಕೊಳ್ಳೋದು ಬೇಡ ಅಂತ. ಇದು ಕಾಲ್ಪನಿಕ ಬರಹವಷ್ಟೇ. ನೀವು ಇಷ್ಟಪಟ್ಟಿದ್ದು ನನಗೆ ರಾಶಿ ಖುಷಿ ಕೊಟ್ಟಿದೆ. ಆಗಾಗ ಬರ್ತಿರಿ ಆಯ್ತಾ.

ಪ್ರಶಾಂತ್,
ನಿರೂಪಣೆ ಇಷ್ಟ ಆಯ್ತಾ, ಧನ್ಯವಾದಗಳು. ನಂಬ ಬೇಕಪ್ಪ, ನಂಬಿಕೆಯೇ ಜೀವಾಳ. ಸದ್ಯ ನನ್ನ ಬ್ಲಾಗಿನ ದಾರಿ ನಿನಗೆ ಸಿಕ್ತಲ್ಲ :). ಖಂಡಿತ ಭೇಟಿ ಆಗೋಣ, ಆದರೆ ಬೇರೆ ಏನಾದರು ಮಾತನಾಡೋಣ, ಇದರ ಬಗ್ಗೆ ಎಲ್ಲ ಬೇಡ, ಇವೆಲ್ಲ ಹುಚ್ಚು ಮನಸ್ಸಿನ ಭಾವನೆಗಳಷ್ಟೇ, ಇದರಲ್ಲಿ ಏನು ಹುರುಳಿಲ್ಲ.

ಮತ್ತೊಮ್ಮೆ ಬಂದು ಅಭಿಪ್ರಾಯ ವ್ಯಕ್ತಪಡಿಸಿದ, ಮತ್ತು ಓದಿ ಏನು ಹೇಳದೆ ಸುಮ್ಮನೆ ಹೋದ ಎಲ್ಲರಿಗು ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆಗೆ ನಾನು ಋಣಿ. ದಯವಿಟ್ಟು ಬರ್ತಾ ಇರಿ.

-ರಾಜೇಶ್ ಮಂಜುನಾಥ್

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ಬರಹ ತುಂಬಾ ಚೆನ್ನಾಗಿದೆ ರಾಜೇಶ್ . ನನಗೆ ಏನು ಬರೆಯಬೇಕೆಂದು ಗೊತ್ತಾಗ್ತಾ ಇಲ್ಲ . ನಾನು ನಿನ್ನ ಬರಹಕ್ಕೆ ಮಾರು ಹೋಗಿದ್ದೇನೆ. ನಿನ್ನ ಆಸೆ ಆಕಾಂಕ್ಷೆಗಳು ಈಡೇರಲಿ . ಉತ್ತಮ ಬಾಳ ಸಂಗತಿ/ಗೆಳತಿ ಸಿಗಲಿ ಎಂದು ಹಾರೈಸುವ - ಲಕ್ಷ್ಮಣ

ranjith ಹೇಳಿದರು...

ಕಲ್ಪನೆ ಅಂತ ಹೇಳಿ ಕಾಲೆಳೆಯುವ ಅವಕಾಶ ತಪ್ಪಿಸಿದಿರಿ.

ಮತ್ತೆ ಹೊಳಿಗೆಯೂಟದ ಪ್ರಸ್ತಾಪ ಮಾಡೋದಿತ್ತು, ಕಲ್ಪನೆ ಅಂದ ಕಾರಣ ಅದಕ್ಕೂ ಕಲ್ಲುಬಿತ್ತು..:)

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ರಾಜೇಶ್ ಮಂಜುನಾಥ್ ಅವರೆ...
ಬರಹ ಮನಸೂರೆಗೊಳ್ಳುವಂತಿದೆ. ಮಧ್ಯೆ ಮಧ್ಯೆ ತಣ್ಣಗೆ ಸಾಗುವ ಕವಿತೆಯ ಸಾಲುಗಳು ಇಷ್ಟವಾಗುವ ಜೊತೆ ಬರಹ ಮೌನವಾಗಿ ತನ್ನಾಳವ(ತನ್ನಳಲ)ನ್ನು ತಾನೇ ತೋಡಿಕೊಳ್ಳುತ್ತ ಇನ್ನಷ್ಟು ಆಳವಾಗಿ ಸಾಗುತ್ತದೆ. ಓದಿ ಮುಗಿದಾಗ ಮನಭಾರವಾಗುತ್ತದೆ. ಕಲ್ಪನೆಯ ಬರಹ ಇಷ್ಟವಾಯ್ತು.
ಕನಸುಗಳೆಲ್ಲ ನನಸಾಗಲಿ. ಕಥೆಯೊಳಗಿನ ಅಮ್ಮನ ಹಾರೈಕೆ ನಿಜಜೀವನದಲ್ಲಿ ನಿಜವಾಗಿ ನಿಮ್ಮ ಬದುಕು ಎಲ್ಲಿಯೂ ಸೋಲದೇ ಗೆಲ್ಲಲಿ.

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಹಿರಿಯ ಗೆಳೆಯ ಲಕ್ಷ್ಮಣ್,
ನಿಮ್ಮ ಹಾರೈಕೆಗೆ ನಾನು ಆಭಾರಿ...
ನನ್ನೆಡೆಗಿನ ಮತ್ತು ನನ್ನ ಬರಹಗಳೆಡಗಿನ ನಿಮ್ಮ ಪ್ರೀತಿಗೆ ನಾನು ಚಿರ ಋಣಿ.

ರಂಜಿತ್,
ಸದ್ಯ ಕಲ್ಪನೆ ಅಂತ ಬರೆದು ಬದುಕಿತು ಬಡಜೀವ [;)]
ಹೋಳಿಗೆ ಊಟಕ್ಕೆ ಕಲ್ಲು ಬಿತ್ತೆನ್ದುಕೊಳ್ಳಬೇಡಿ, ಸ್ವಲ್ಪ ಕಾಯಬೇಕು, ಖಂಡಿತವಾಗಿ ನಿಮ್ಮನ್ನು ಆಮಂತ್ರಿಸುತ್ತೇನೆ, ಮತ್ತೆ ಬರದೆ ಕಾರಣ ಹೇಳಿದರೆ ಚೆನ್ನಾಗಿರೋದಿಲ್ಲ, ನೆನಪಿರಲಿ.

ಶಾಂತಲಾರವೇ,
ಹೊಗಳಿ ನನ್ನನ್ನು ನಾಚಿಸಿ ಬಿಟ್ಟಿದ್ದೀರಿ, ನೀವು ಈ ಬರಹ ಇಷ್ಟಪಟ್ಟಿದ್ದಕ್ಕೆ ನನಗು ಇಲ್ಲಿ ಒಳಗೊಳಗೇ ಏನೋ ಸಂತೃಪ್ತಿ. ನಿಮ್ಮ ಹಾರೈಕೆಗೆ ಅನಂತಾನಂತ ಧನ್ಯವಾದಗಳು. ಹೀಗೆ ಬರ್ತಾ ಇರಿ, ತಪ್ಪಿಸಬೇಡಿ.
-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

ಹಿತವಾಗಿದೆ ನಿಮ್ಮ ಕಲ್ಪನೆಯ ಛಾಯೆ....

Veena DhanuGowda ಹೇಳಿದರು...

Hi Rajesh,

kathe kalpananeyade agirabahudu, adare adake jeeva thumbide nima
bhavane adbhutha........ :)