ಬುಧವಾರ, ಅಕ್ಟೋಬರ್ 14, 2009

ನಾನಿನ್ನು ಬರ್ತೀನಿ... ಅಲ್ಲಿ ಸಿಗೋಣ.

ನಾನಿವತ್ತು ಬೀಗ ಹಿಡಿದು ಕೊಂಡೆ ಬ್ಲಾಗಿನ ಕಡೆ ಬಂದಿದ್ದು, ನಾನಾಗಲೆ ತೀರ್ಮಾನಿಸಿಯಾಗಿತ್ತು ಇವತ್ತಿನಿಂದ ನನ್ನ ಬ್ಲಾಗಿಗೆ ದೊಡ್ಡದೊಂದು ಬೀಗ ಹಾಕಲೇ ಬೇಕು ಅಂತ. ಇದಕ್ಕೆ ಕಾರಣ ಹಲವು, ಅದರಲ್ಲಿ ಬಹು ಮುಖ್ಯವಾದದ್ದು ಬ್ಲಾಗರ್ ಕೆಲವು ತಾಂತ್ರಿಕ ಲೋಪ-ದೋಷಗಳು ಮತ್ತೆ ಕೆಲವು ನ್ಯೂನ್ಯತೆಗಳು. ಈಗ ಹೊಸದೊಂದು ಬ್ಲಾಗಿನರಮನೆಯನ್ನು ಕಟ್ಟಿಕೊಂಡು ಅತ್ತ ವಲಸೆ ಹೊರಟಿದ್ದೇನೆ ಹೊರಟವನು ಮನೆಯ ನೆನಪಿನ ಬುತ್ತಿಯನ್ನು ಹೊತ್ತು ಹೊರಟಿದ್ದೇನೆ. ನನ್ನ ಬ್ಲಾಗಿಗೆ ವರುಷ ತುಂಬಿದ್ದಷ್ಟೇ ಅಲ್ವ, ಹಾಗಾಗಿ ಈಗ ಹೊಸ ಮನೆಗೆ ಕರೆದೊಯ್ಯುತ್ತಿದ್ದೇನೆ. ಮತ್ತೆ ಎಂದಿನಂತೆ ನೀವು ಜೊತೆಯಿರುತ್ತೀರಿ ಎಂಬ ವಿಶ್ವಾಸದಲ್ಲಿ, ನನ್ನ ಹೊಸ ಮನೆ ತೀರ ದೂರವೇನು ಇಲ್ಲ, ನಿಮ್ಮಿಂದ ಕೇವಲ ಇನ್ನೊಂದೇ ಕ್ಲಿಕ್ ನಷ್ಟು ದೂರದಲ್ಲಿದೆ. ಪ್ರೀತಿಯಿಂದ ಆಜ್ಞಾಪಿಸುತ್ತಿದ್ದೇನೆ ನೀವು ಬರಲೇ ಬೇಕು, ಬರಲಿಲ್ಲ ಅಂದ್ರೆ ನೋಡಿ ಮತ್ತೆ, ಚೆನ್ನಾಗಿರೋಲ್ಲ. ನಿಮ್ಮನ್ನು ಸ್ವಾಗತಿಸುವುದಕ್ಕೆ, ನಿಮ್ಮ ದಾರಿ ಕಾಯುತ್ತ ನನ್ನ ಹೊಸ ಮನೆಯ ಬಾಗಿಲಲ್ಲಿ ಕುಳಿತಿರುತ್ತೇನೆ.ಮಂಗಳವಾರ, ಅಕ್ಟೋಬರ್ 6, 2009

ಭಯ


ಕನಸೇ ಕದಲದ ಕಾರಿರುಳ ರಾತ್ರಿಯೊಳು
ನೆನಪ ಅಗೆದಗೆದು ತೆಗೆವ ಹುಚ್ಚನಿವ ಅಕ್ಷರಾರ್ಥಃ
ಇವನೆದೆಗೆ ಏನು ಒಗ್ಗುವುದಿಲ್ಲ, ಇವನ ನಿಂದನೆಗೆ
ಸಕಲವೂ ಎದೆ ಸುಡುವ ಜ್ವಲನ ಪದಾರ್ಥ

ಯಶದ ಹಾದಿಯ ಸರಣಿಯಾರಂಭಕು ಮುನ್ನ
ನಿರ್ಲಿಪ್ತ ಮೋರೆ ಹೊತ್ತು ಗುರಿಯ ದಿಟ್ಟಿಸುವನು
ದುಡಿದು ದಣಿಯುವ ಮುನ್ನ ವಿಶ್ರಾಂತಿ ಬೇಕಂತೆ
ಗಾವುದವು ಹೆಜ್ಜೆ ಊರದ ಎಗ್ಗ ಗಾವಿಲನು

ಬದುಕ ಶಪಿಸುತ್ತಾನೆ, ಒಳಗೆ ಕೊರಗುತ್ತಾನೆ
ಕುಸಿದು ಮರುಗುತ್ತಾನೆ ಮೂಢನಿವನು
ಸೂರ್ಯ ರಶ್ಮಿಯ ಕಾಂತಿ ಕಂಡೊಡನೆ ಮತಿ ಭ್ರಾಂತಿ
ಅಕ್ಷಿ ಪಟಲವ ಮುಚ್ಚಿ ಜಗ ಕತ್ತಲೆನ್ನುವವನಿವನು

ಒಳಗೆ ಕುಳಿತಿಹನಂತೆ, ಕಂಡು ಕಾಣದ ಹಾಗೆ
ಕಿಡಿಯ ಸೋಕಿಸಿ ಹೊತ್ತಿಸುತ ಎದೆಯ ಬೇಗೆ

ಮುಟ್ಟಿ ನೋಡಿರಿ ಒಮ್ಮೆ ಮಗ್ಗುಲು ಬದಲಿಸುವನು
ಇವನದೀಗ ನಿಮ್ಮೆದಯ ಅಂಗಳದಿ ಪಾರ್ಶ್ವ ಶಯನ
ಇವನಿಂದ ಅಡ್ಡಿ ನೂರೆಂಟು ಆತಂಕ ಇದಿರುಂಟು
ತಡೆದು ನಿಲ್ಲಿಸುವ ನಿಮ್ಮ ಹಿಡಿಯಲಾರದ ಹಾಗೆ ಗುರಿಯ ಅಯನ

ಬಲು ಚಿಕ್ಕ ಬದುಕಿಹುದು ಅಕ್ಕರೆಯು ಇರಲೆದೆಗೆ
ನಡೆವ ಹಾದಿಯ ಗುರಿಯು ಅಪರಿಮಿತವು
ಹೆಡೆಮುರಿಯ ಕಟ್ಟಿ ತಳ್ಳಿ ಬಿಡಿ ಇವನನ್ನು
ಶಾಶ್ವತವಾಗಿ ಏರಿ ಬಿಡಲಿವನು ಮರಣ ಶಯನ

"ನನ್ನ ಬ್ಲಾಗಿನಲ್ಲಿ ಮೊದಲ ಕವನ ಪ್ರಕಟಿಸಿ ಒಂದು ವರ್ಷ ಸಂದಿದೆ, ಬರೆದಿದ್ದು ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಜೊಳ್ಳೇ ಹೆಚ್ಚು ಎಂಬುದು ನನ್ನ ಮನದ ಅಂಬೋಣ. ಆದರು ಒಂದು ವರ್ಷದ ಅವಧಿಯಲ್ಲಿ ಬ್ಲಾಗು ನನಗೆ ಅನೇಕ ಆತ್ಮೀಯ ಗೆಳೆಯ, ಗೆಳತಿಯರನ್ನು, ಅಕ್ಕರೆಯ ಅಕ್ಕಂದಿರನ್ನು ಮತ್ತು ನಲ್ಮೆಯ ಅಣ್ಣಂದಿರನ್ನು ನೀಡಿದೆ, ಪ್ರತಿ ಬರಹ ಪ್ರಕಟಿಸಿದಾಗ ಜೊತೆ ನಿಂತು ತಿದ್ದಿ, ಪ್ರೋತ್ಸಾಹಿಸಿದ ನಿಮಗೆಲ್ಲ ನಾನು ಆಭಾರಿ. ನಿಮ್ಮ ಪ್ರೀತಿ ನನ್ನ ಜೊತೆ ಹೀಗೆ ಇರಲಿ ಎಂದು ಆಶಿಸುತ್ತೇನೆ."

ಮಂಗಳವಾರ, ಜೂನ್ 2, 2009

ನೀನಿಲ್ಲ ಅನ್ನೋ ಕೊರತೆ ನನ್ನನ್ನು ತುಂಬಾನೆ ಕಾಡುತ್ತೆ...

ಅಂತರಾಳ - ೭

ನಿಂಗೊತ್ತಾ ???!!!

ನಾನು ತೀರ ಚಿಕ್ಕವನಿದ್ದಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಅಮ್ಮ ಶನಿವಾರದ ಬೆಳಗಿನ ಶಾಲೆಗೆ ತಡವಾಗುತ್ತೆ ಅಂತ ಓಡೋಡಿ ಹೋದ ಮೇಲೆ ನಾನು ಸ್ನಾನದ ಮನೆಯಲ್ಲಿ ಬಿಸಿ ನೀರು ಬೆರೆಸಿಕೊಳ್ಳಲು ಬರದೆ ಬರಿ ತಣ್ಣೀರು ಸುರಿದು ಕೊಂಡು ಸ್ನಾನ ಮುಗಿಸಿದಾಗೆಲ್ಲ ನೀನು ವಿಪರೀತ ಬೇಕು ಅಂತ ಅನ್ನಿಸಿಬಿಡುತ್ತಿದ್ದೆ. ನೀನಿಲ್ಲ ಅನ್ನೋ ಕೊರಗು ಮತ್ತು ಕೊರತೆ ನನ್ನನ್ನು ಕಾಡುತ್ತಿದ್ದಿದ್ದೆ ಅಂತಹ ಕ್ಷಣಗಳಲ್ಲಿ.

ಅಮ್ಮ ಜ್ವರದಿಂದ ಹಾಸಿಗೆ ಹಿಡಿದ ದಿನಗಳಲ್ಲಿ ಅಕ್ಕಿ ಅಥವಾ ಗೋಧಿ ರವೆಯನ್ನೋ ಹುರಿದು, ಕುದಿವ ನೀರಿನಲ್ಲಿ ಹಾಕಿ, ಚೆನ್ನಾಗಿ ಬೇಯಿಸಿ ಗಂಜಿ ಮಾಡಿ ಇಳಿಸುವ ಹೊತ್ತಲ್ಲಿ ಪಾತ್ರೆಯಂಚು ಕೈ ತಾಕಿ ಸುಟ್ಟಾಗ ನೀನಿದ್ದಿದ್ರೆ ಹೀಗೆಲ್ಲ ಆಗ್ತಿರಲಿಲ್ಲ ಅಲ್ವ ಅಂತ ಕಣ್ಣೀರು ತುಂಬಿ ಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಪಾಚಿಯ ಮೇಲೆ ಕಾಲಿಟ್ಟು ಕೆಸರಲ್ಲಿ ಜಾರಿ ಬಿದ್ದು ಮನೆಗೆ ಬಂದಾಗ, ಪರೀಕ್ಷೆ ಹಿಂದಿನ ದಿನ ನಿದ್ದೆ ಬಾರದಿದ್ದಾಗ, ನಡು ಮಧ್ಯ ರಾತ್ರಿ ಬೀದಿ ನಾಯಿ ವಿಕಾರವಾಗಿ ಊಳಿಟ್ಟಾಗ, ಏನೋ ತಪ್ಪು ಮಾಡಿದಾಗ ಅಮ್ಮ ಗದರಿದಾಗ ನೀನಿಲ್ಲ ಅನ್ನೋದು ತುಂಬಾ ನೋವು ನೀಡುತ್ತಿತ್ತು.

ಎರಡನೇ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಬಿಡದೆ ಧೋ ಎಂದು ಸುರಿದ ಮಳೆಯಿಂದ ಮನೆಗೆ ಬರಲಾಗದೆ ಶಾಲೆಯ ಮೆಟ್ಟಿಲ ಮೇಲೆ ಗೆಳೆಯನ ಜೊತೆ ಕುಳಿತಿದ್ದಾಗ ಛತ್ರಿ ಹಿಡಿದು ಬಂದ ಅವನಕ್ಕ ಅವನ ತಲೆ ಒರೆಸಿ ಛತ್ರಿ ಒಳಗೆ ಸೇರಿಸಿ ಕೊಂಡಾಗ, " ಮಳೆ ನನಗೇನು ಅಲ್ಲ, ಮಳೆಯಂದ್ರೆ ಮತ್ತು ಮಳೆಯಲ್ಲಿ ನೆನೆಯೋದಂದ್ರೆ ನನಗೆ ತುಂಬಾನೆ ಇಷ್ಟ" ಅಂತ ಸುಳ್ಳೇ ನಕ್ಕು ಸಮವಸ್ತ್ರದ ಅಂಗಿಯೊಳಗೆ ಶಾಲೆ ಚೀಲ ಸೇರಿಸಿ ಕಣ್ಣೀರಾಗಿ ಮಳೆಯಲ್ಲಿ ಓಡಿದ ದಿನ. ಮನೆ ತಲುಪಿದ ಮೇಲೆ "ಮಳೆಯಲ್ಲಿ ನೆಂದು ಬಂದಿದೀಯಲ್ಲ, ಸ್ವಲ್ಪ ಹೊತ್ತು ಕಾದಿದ್ದು ಬರಬಹುದಿತ್ತಲ್ಲ" ಎಂದು ಅಮ್ಮ ರೇಗಿದಾಗ, ನನ್ನ ಪಾಲಿಗೆ ನೀನು ಯಾಕಿಲ್ಲ ಅಂತ ದೇವರಲ್ಲಿ ಜಗಳಕ್ಕೆ ನಿಲ್ಲ ಬೇಕು ಅಂತ ಅನ್ನಿಸಿ ಬಿಡುತ್ತಿತ್ತು. ನೀನಿದ್ದಿದ್ದರೆ ನಾನು ಮಳೆಯಲ್ಲಿ ನೆನೆಯುತ್ತಿರಲಿಲ್ಲ ಅಂತೇನು ಇಲ್ಲ, ಆದರೆ ನೆನೆದು ಮುದ್ದೆಯಾಗಿ ಬಂದಾಗ ಕನಿಷ್ಠ ತಲೆ ಒರೆಸಿ ಕೊಡಲಿಕ್ಕಾದರು ನೀನು ಇರುತ್ತಿದ್ದಿದ್ದರೆ ಅನ್ನೋ ತುಡಿತ ನನಗಿತ್ತು.

ಮೊನ್ನೆ ಹೀಗೆ ಈ ಯಾಂತ್ರಿಕ ನಗರಿಯ ಮಳೆಗೆ ಸಿಕ್ಕಿ ಒದ್ದೆಯಾಗಿ ಮನೆ ಸೇರಿದಾಗ ಫೋನಾಯಿಸಿದ ಅಮ್ಮ ಮದುವೆ ಬಗ್ಗೆ ಏನು ತೀರ್ಮಾನಿಸಿದೆ ಎಂದಾಗ, ಕೊನೆ ಪಕ್ಷ ನನ್ನ ತಮ್ಮ ಚಿಕ್ಕವನು, ಇಷ್ಟು ಬೇಗ ಮದುವೆ ಬೇಡ ಅಂತ ಅಮ್ಮನಿಗೆ ಒಪ್ಪಿಸಲಿಕ್ಕಾದರು ಅಥವಾ ಅಮ್ಮ ನೋಡುವ ಹುಡುಗಿ ನನ್ನ ತಮ್ಮನಿಗೆ ಸೂಕ್ತಳೋ ಇಲ್ಲವೊ ಅಂತ ನಿರ್ಧರಿಸಲು ನೀನಿರಬೇಕಿತ್ತು.

ಕೊನೆ ಪಕ್ಷ ಎದೆಯ ದುಗುಡ ತೀರ ಹೆಚ್ಚಾದಾಗ ಮುಖ ಮುಚ್ಚಿಕೊಂಡು ಮಲಗಿ ಬಿಡಲು ನಿನ್ನ ಮಡಿಲು ಬೇಕಿತ್ತು, ಅಲ್ಲಿ ತಲೆ ನೇವರಿಸಿ ಸಮಾಧಾನಿಸಲು ನನಗೂ ಒಬ್ಬಳು ಅಕ್ಕ ಇರಬೇಕಿತ್ತು.

ಶುಕ್ರವಾರ, ಏಪ್ರಿಲ್ 17, 2009

ಅಸ್ತಿತ್ವವೇ ಇಲ್ಲದ ಮೀನಿನ ಕಣ್ಣೀರಾಗಿತ್ತು ನನ್ನಳಲು ಅಂದು

ಪಿಸು ಮಾತು - ೫

(ಹುಡುಗಿಯ ಮನಸ್ಸಿನ ತುಮುಲಗಳು ಹೇಗಿರಬಹುದು ಪ್ರೀತಿಯಿಂದ ಹೊರ ನಡೆದಾಗ ಅನ್ನೋದು ಒಂದು ಯಕ್ಷ ಪ್ರಶ್ನೆಯೇ ಸರಿ, ಹೀಗಿರಬಹುದೇನೋ ಎಂದು ಊಹಿಸಿಕೊಂಡು ಈ ಪತ್ರ ಬರೆದಿದ್ದೇನೆ. ಅಂದ ಹಾಗೆ ಇದು ನನ್ನ ಹಿಂದಿನ ಬರಹಗಳಿಗೆ ಮತ್ತು ಧರಿತ್ರಿಯಲ್ಲಿ ಪ್ರಕಟವಾಗಿರುವ ಪ್ರೇಮ ಪತ್ರಕ್ಕೆ ಉತ್ತರ ನೀಡುವ ಬಾಲಿಶ ಪ್ರಯತ್ನ. ಎಂದಿನಂತೆ ತಪ್ಪಿದ್ದರೆ ಕ್ಷಮಿಸಿ ತಿದ್ದುತ್ತೀರಿ ಎಂಬ ನಂಬಿಕೆಯಿದೆ.)

ಪ್ರೇಮ ಲೋಕದ ಹಿಮ ಬಿಂದು,

ಹೀಗೆ ಕರೆಯುವ ಮುನ್ನ "ನನ್ನ ಪ್ರೀತಿಯ" ಅಂತ ಸೇರಿಸಲು ಯಾಕೋ ಇವತ್ತು ಮನಸ್ಸು ಕೇಳುತ್ತಿಲ್ಲ ಗೆಳೆಯ, ನಾನು ಆ ಯೋಗ್ಯತೆ ಕಳೆದುಕೊಂಡಿದ್ದೇನೆ ಎಂದು ನೀನು ಹೇಳುತ್ತೀಯೇನೋ, ನನ್ನ ಬಳಿ ಅದಕ್ಕೆ ಉತ್ತರವಿಲ್ಲ. ನೀನೂ ನನಗಿನ್ನು ಬೇಡ ಎಂದು ತೀರ್ಮಾನಿಸಿ ನಿನ್ನೆದುರು ಹಾಗೆ ನಿಂತು ಕಣ್ಣಿಗೆ ಕಣ್ಣು ಬೆರೆಸಲಾಗದೆ ಒತ್ತರಿಸಿ ಬರುತ್ತಿದ್ದ ದುಃಖ ತಡೆದು ಕ್ಷಮಿಸಿ ಬಿಡು ಇಲ್ಲಿಂದ ಮುಂದೆ ನಾವು ಒಂದೇ ದಾರಿಯಲ್ಲಿ ಸಾಗಲಾರೆವು ಎಂದು ನಾನೇ ಅಂದ ಕ್ಷಣ ನನಗೆ ಈ ಭೂಮಿ ಇಲ್ಲೇ ಬಾಯಿ ಬಿಟ್ಟು ಬಿಡಬಾರದೆ ಎಂದೆನಿಸಿದ್ದು ಸುಳ್ಳಲ್ಲ. ಪ್ರೀತಿಸಲು ನೂರು ಕಾರಣಗಳು ಬೇಕು, ಪ್ರೀತಿ ನಿರಾಕರಿಸಲು ಕಾರಣವೇ ಬೇಕಾಗುವುದಿಲ್ಲ ಎಂಬ ನಿನ್ನ ಮಾತನ್ನು ನಾನು ಎಂದಿಗೂ ಒಪ್ಪಲಾರೆ ಗೆಳೆಯ. ಇಂದು ಈ ಪ್ರೀತಿ ಮುಂದುವರೆಸಲು ಸಾಧ್ಯವಿಲ್ಲ ಎಂದೆನಲು ನನ್ನಲ್ಲಿ ಸಾವಿರ ಕಾರಣಗಳಿವೆ ಹುಡುಗ.

ನಿನ್ನಲ್ಲಿಂದ ಬಂದು ಅಮ್ಮನಿಗೆ ಮುಖವನ್ನು ತೋರಿಸದೇ ನೇರ ಸ್ನಾನ ಗೃಹಕ್ಕೆ ಹೋದವಳು, ಅನಾಮತ್ತು ೫ ಬಿಂದಿಗೆ ತಣ್ಣೀರು ಸುರಿದು ಕೊಂಡಿದ್ದೆ, ಆ ತಣ್ಣೀರಿನ ನಡುವೆ ನನ್ನ ಕಣ್ಣೀರು ಕಾಣದೆ ಹೋಗಿ ಬಿಡಲೆಂದು. ನನ್ನಿಂದ ಆಗಲಿಲ್ಲ ಗೆಳೆಯ, ಅಮ್ಮನಿಗೆ ಮುಖ ಕೊಟ್ಟು ಮಾತನಾಡಲಾಗಲಿಲ್ಲ, ಅಪ್ಪನ ಮಾತಿಗೆ ಉತ್ತರಿಸಲಾಗಲಿಲ್ಲ. ನಿನ್ನನ್ನು ಪ್ರೀತಿಸಿದ ಮೇಲೆ ನನ್ನ ಮನೆಯಲ್ಲಿ ನಾನು ಪರಕೀಯಳೇನೋ ಎಂದೆನಿಸಲಾರಂಭಿಸಿ ಬಿಟ್ಟಿತು ಕಣೋ.

"ನನ್ನ ಮುದ್ದು ಮಗಳೇ ನಿನಗೆ ಒಬ್ಬ ಒಳ್ಳೆ ಹುಡುಗನನ್ನು ನೋಡಿ ಅಂಗಳಕ್ಕೆಲ್ಲ ಚಪ್ಪರ ಹಾಕಿ, ಚೆಂದದ ಅಲಂಕಾರದಲ್ಲಿ, ಗುರು ಹಿರಿಯರ ಎದುರಲ್ಲಿ, ಮತ್ತು ಎಲ್ಲ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟು, ಊರಿನವರೆಲ್ಲ ಎಷ್ಟು ಚೆನ್ನಾಗಿತ್ತು ಮದುವೆ, ಹಸೆ ಮಣೆಯ ಮೇಲೆ ನಿನ್ನ ಮಗಳು ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಾಣುತ್ತಿದ್ದಳು, ಅದೆಷ್ಟು ಮುದ್ದಾಗಿದ್ದಾಳೋ ನಿನ್ನ ಮಗಳು ಎಂದೆನ್ನ ಬೇಕು" ಎಂದು ಅಪ್ಪ ನನ್ನ ತಲೆ ನೇವರಿಸಿ ನುಡಿದಾಗ ನೀನು ಅದೆಷ್ಟು ನೆನಪಾಗಿದ್ದೆ ಗೊತ್ತಾ ಗೆಳೆಯ, ನಾನು ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ಅಪ್ಪನ ಮಡಿಲಲ್ಲಿ ಮುಖ ಹುದುಗಿಸಿ ಮಲಗಿದರೆ, ಆಗ ಕಣ್ಣೀರು ತುಂಬಿ ಅಪ್ಪ ಏನೆಂದರು ಗೊತ್ತ "ಅಪ್ಪ-ಅಮ್ಮನ್ನ ಬಿಟ್ಟು ಹೋಗ ಬೇಕು ಅಂತ ಅಳ್ತೀಯಲ್ಲೋ ಕಂದ, ನನಗೆ ಗೊತ್ತು ನಿನಗೆ ಎಷ್ಟು ಕಷ್ಟ ಆಗುತ್ತೆ ಅಂತ, ಎಲ್ಲರೆದುರು ನಿನ್ನ ಮದುವೆ ತುಂಬಾ ಚೆನ್ನಾಗಿ ಮಾಡಿ ಕೊಡಬೇಕು ಅನ್ನೋದೇ ನನ್ನ ಆಸೆ, ನಿನ್ನ ನೋಡಿ ಎಲ್ಲಾರು ಎಂತಹ ಸಂಸ್ಕಾರದಿಂದ ಮಗಳನ್ನು ಬೆಳೆಸಿದ್ದಾನೆ ಅಂತ ಖುಷಿ ಪಡಬೇಕು, ಮತ್ತು ನಾನು ಅವರ ಮಾತು ಕೇಳಿ ಹೆಮ್ಮೆ ಪಡಬೇಕು." ಎಂದು ಹೇಳಿ, ಅಮ್ಮನ ಕುರಿತು "ನೋಡೇ ನಮ್ಮ ಮಗಳು ಮದುವೆ ಆಗಿ ಅಪ್ಪ-ಅಮ್ಮನ್ನ ಬಿಟ್ಟು ಹೋಗೋದಿಲ್ಲ ಅಂತ ಅಳ್ತಾ ಇದ್ದಾಳೆ." ಎಂದಾಗ ಅದಕ್ಕೆ ದನಿಗೂಡಿಸಿದ ಅಮ್ಮ "ಪುಟ್ಟ, ನಿಮ್ಮಪ್ಪನ ಒಂದೇ ಒಂದು ಆಸೆ ಕಣೋ ಬಂಗಾರಿ ಇದು, ನೀನು ಮದುವೆ ಆಗಲೇ ಬೇಕು ಕಂದ, ಹಠಮಾಡ ಬಾರದು ಚಿನ್ನಾ" ಅಂತ ನನ್ನ ಅಪ್ಪಿ ಹಿಡಿದಿದ್ದಳು. ಯಾಕೋ ನೀನು ನನ್ನ ತಬ್ಬಿ ಹಿಡಿದಿದ್ದು ಕೂಡ ಇಷ್ಟು ಹಿತವಾಗಿರಲಿಲ್ಲವೇನೋ ಅಂತ ಮೊದಲ ಬಾರಿಗೆ ಅನ್ನಿಸಿ ಬಿಟ್ಟಿತು ಕಣೋ ಗೆಳೆಯ.

ರಾತ್ರಿಯೊಬ್ಬಳೆ ಕೋಣೆ ಸೇರಿ ಸದ್ದೇ ಮಾಡದೆ ಅದೆಷ್ಟು ಅತ್ತು ಬಿಟ್ಟಿದ್ದೆ ಗೊತ್ತ ಗೆಳೆಯ, ನೀನು ತುಂಬಾ ನೆನಪಾಗಿದ್ದೆ ಅವತ್ತು. ನಾನು ಪ್ರೀತಿಸಿ ತಪ್ಪು ಮಾಡಿದೆನೇನು ಎಂಬ ಪ್ರಶ್ನೆ ಜೀವ ಹೋಗುವಷ್ಟು ಕಾಡಿದ್ದೆ ಆ ರಾತ್ರಿ. ನೀನು ಯಾವಾಗಲು ಹೇಳ್ತೀಯಲ್ಲ "ಪ್ರೀತಿಸಿದ ಮೇಲೆ ಮನೆಯವರು ಚಪ್ಪರ ಹಾಕಿ ಮದುವೆ ಮಾಡಿ ಕೊಡ ಬೇಕು ಅಂತ ನಿರೀಕ್ಷಿಸೋದು ತಪ್ಪು, ಒಪ್ಪಿದರೆ ಸಂತೋಷ, ಒಪ್ಪದಿದ್ದರೆ ನಾವು ಮದುವೆ ಆಗಿ ಇವರಿಬ್ಬರನ್ನು ಬೇರೆ ಮಾಡಿದ್ದಿದ್ದರೆ ಎಂತಹ ತಪ್ಪಾಗುತ್ತಿತ್ತು ಅಂತ ಅವರಿಗೇ ಅನ್ನಿಸಿ ಬಿಡುವಷ್ಟು ಚೆಂದಗೆ ಬದುಕಿ ಬಿಡೋಣ", ನಿನ್ನ ಜೀವನ ಪ್ರೀತಿಗೆ ನೀನೆ ಸಾಟಿ ಗೆಳೆಯ, ಆದರೆ ನನ್ನಿಂದ ಇಂದು ಸಾಧ್ಯವಾಗುತ್ತಿಲ್ಲ ಕಣೋ. ಯಾಕೋ ನನಗೆ ಇವತ್ತು ಈ ಮಾತು ಇಷ್ಟ ಆಗುತ್ತಿಲ್ಲ ಕ್ಷಮಿಸಿ ಬಿಡು ಗೆಳೆಯ. ನನ್ನ ಮದುವೆಗೆ ಚಪ್ಪರ ಇರಲೇ ಬೇಕು, ನನಗೋಸ್ಕರ ಅಲ್ಲದಿದ್ದರೂ ಅಪ್ಪ-ಅಮ್ಮನಿಗೊಸ್ಕರ ಮತ್ತು ಅವರ ಗೌರವಕ್ಕೋಸ್ಕರ. ನನ್ನಪ್ಪ ಅಂದರೆ ಊರಿನವರಿಗೆಲ್ಲ ತುಂಬು ಗೌರವ, ಅದನ್ನು ನಮ್ಮ ಸ್ವಾರ್ಥಕ್ಕಾಗಿ ಕಳೆದು ಬಿಡಲೇನೋ ಗೆಳೆಯ.

ಅಪ್ಪ-ಅಮ್ಮ ನಮ್ಮ ಪ್ರೀತಿಗೆ ಒಪ್ಪಲಾರರು ಗೆಳೆಯ ನಮ್ಮಿಬ್ಬರದು ಬೇರೆ ಬೇರೆ ಜಾತಿ, ಮತ್ತು ಜಾತಿ ಬಿಟ್ಟವಳು ಎಂದೆನಿಸಿ ಕೊಂಡು ನಿನ್ನ ಜೊತೆ ಬಂದು ಬಿಡಲು ನಾನು ಸಿದ್ಧಳಾದರು. ನಾಳೆ ನಮ್ಮ ಮಗುವಿನದು ಯಾವ ಜಾತಿ ಗೆಳೆಯ. ನೀನು ಯಾವಾಗಲು ಹೇಳುತ್ತಿದ್ದೆಯಲ್ಲ ಜಗತ್ತಿನಲ್ಲಿರುವುದು ಕೇವಲ ಎರಡೇ ಜಾತಿ ಒಂದು ಗಂಡು-ಇನ್ನೊಂದು ಹೆಣ್ಣು ಅಂತ, ಆದರೆ ಇದನ್ನು ಯಾವ ಅರ್ಜಿಯ ಜಾತಿಯ ಕಾಲಂ ನಲ್ಲಿ ಬರೆದರೆ ನಮ್ಮ ಸರ್ಕಾರ ಮಾನ್ಯತೆ ನೀಡುತ್ತದೆ ಹೇಳು ಹುಡುಗ, ನಮ್ಮದು ಹೆಸರಿಗಷ್ಟೇ ಕಣೋ ಜಾತ್ಯಾತೀತ ರಾಷ್ಟ್ರ. ನಾನು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಾದ ಕ್ಷಣ ಅಪ್ಪ-ಅಮ್ಮನನ್ನು ಕಳೆದು ಕೊಂಡು ಬಿಡುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತಿತ್ತು ಕಣೋ ಹುಡುಗ.

ನಿನ್ನನ್ನು ನೆನಪಿಸಿಕೊಂಡು ನಾನು ರಾತ್ರಿಯಿಡೀ ಅತ್ತಿದ್ದೇನೆ ಗೆಳೆಯ, ಆದರೆ ಹುಡುಗಿ ನೋಡು ನಿನ್ನಂತೆ ಎಲ್ಲವನ್ನು ಎದುರಿಸಿ ನಿಂತು ಘರ್ಜಿಸುವ ಶಕ್ತಿಯಿಲ್ಲದೆ ಹೋಯಿತು. ಅಮ್ಮ ತಾನು ಗಂಜಿ ಕುಡಿದು ನನಗೆ ಅನ್ನ ಮಾಡಿ ಹಾಕಿದ್ದಾಳೆ, ಅಪ್ಪ ಅದೇ ತನ್ನ ಹಳೆಯ ಅಂಗಿಗೆ ತೇಪೆ ಹಾಕಿಸಿ ಕೊಂಡು ನನಗೆ ಹೊಸ ಬಟ್ಟೆ ಹಬ್ಬಕ್ಕೆ ಅಂತ ತಂದು ಕೊಟ್ಟಿದ್ದಾರೆ.

ರಾತ್ರಿ ಹೊತ್ತು ಆಕಾಶದ ಚಂದಿರನನ್ನು ನೋಡು, ನಾನು ನೋಡುತ್ತೇನೆ, ಅವನಲ್ಲೂ ಕಲೆಗಳಿವೆಯಂತೆ ಪ್ರೀತಿಯಲ್ಲಿ ನನ್ನ ತಪ್ಪುಗಳಿದ್ದಂತೆ, ಅವನಲ್ಲಿ ನಿನ್ನನ್ನು ಕಾಣಲು ಯತ್ನಿಸುತ್ತೇನೆ. ಆದರೆ ಕಣ್ಣೀರ ಬೆಲೆ ಅರ್ಥವಾಗದವಳು ಎಂದೆನ್ನ ಬೇಡ ಗೆಳೆಯ, ನಿನ್ನ ಕಣ್ಣ ಬಿಂದುಗಳನ್ನು ತಡೆಯ ಬೇಕೆಂದು ಮನಸ್ಸು ನುಡಿದರು, ಆಂತರ್ಯ ಅಳುಕಿತ್ತು, ದೂರ ಹೋಗ ಹೊರಟವಳು ಮತ್ತೆ ನಿಂತು ನಕ್ಕು ಹೊರಡುವುದು ತರವಲ್ಲ ಅಲ್ವೇನೋ ಹುಡುಗ, ಮತ್ತೆ ನನಗೆ ನಿನ್ನ ಪಾಲಿನ ದೌರ್ಬಲ್ಯ ಎಂದೆನಿಸಿ ಕೊಳ್ಳುವುದು ಬೇಕಾಗಿರಲಿಲ್ಲ. ಮತ್ತೆ ನಾಳೆಯಿಂದ ನಾನಿರದ ಬದುಕಿನಲಿ ನಿನ್ನ ಕಣ್ಣೀರ ಬಿಂದುವನ್ನು ನೀನೆ ಒರೆಸಿ ಕೊಳ್ಳಬೇಕು ಕಣೋ.

"ವರ್ಷಗಟ್ಟಲೆ ಜತನದಿಂದ ಓದಿ ಕೊನೆಗೆ ಪರೀಕ್ಷೆಯನ್ನು ಬರೆಯಗೊಡದೆ ನೀನು ಅನುತ್ತೀರ್ಣ ಎಂದು ಘೋಷಿಸುತ್ತೀಯೇನೆ ಹುಡುಗಿ" ಅಂತ ನನ್ನನ್ನು ಪ್ರಶ್ನಿಸುತ್ತೀಯ ಗೆಳೆಯ, ಕ್ಷಮಿಸಿ ಬಿಡೋ ಪರೀಕ್ಷಿಸುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೇನೆ. ನಿನ್ನನ್ನು ಬಿಟ್ಟು ಹೊರಟು ಹೋಗುವುದು ನಾನು ಮಾಡುವ ಮೋಸ, ಅತ್ಯಾಚಾರ, ದ್ರೋಹ ಅಂತಾದರೆ, ಹೆತ್ತವರ ಆಸೆಗೆ ಮಣ್ಣೆರಚಿ ನಿನ್ನ ಜೊತೆಗೆ ಬಂದಾಗ ಅಪ್ಪ-ಅಮ್ಮನಿಗೆ ನನ್ನಿಂದ ಆಗುವ ನೋವಿಗೆ ಹತ್ಯೆ ಎಂದೆನ್ನ ಬಹುದಲ್ಲವೇ ಗೆಳೆಯ, ಕೊಂದು ಬಿಡಲೇ ನನ್ನ ಹೆತ್ತವರನ್ನು, ಉತ್ತರಿಸು ಹುಡುಗ.

ನೀನೆ ಹೇಳಿದಂತೆ ನಾನು ನಿನ್ನ ಬದುಕಿನ ಫುಟ್ ಪಾತ್ ಆಗಿಬಿಡುತ್ತೇನೆ, ನೀನು ನಿನ್ನದೇ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟು ಬಿಡು. ನಿಸರ್ಗವನ್ನು ಪ್ರೀತಿಸ ಹೊರಟಿದ್ದೀಯ, ಆದರೆ ಒಂದಂತು ಸತ್ಯ ಧಾರೆಯೆರೆದಷ್ಟು ದಿನ ನನ್ನ ನಿಷ್ಕಳಂಕ ಪ್ರೀತಿಯನ್ನು ಧಾರೆಯರೆದ ತೃಪ್ತಿಯಿದೆ ನನಗೆ. ಇಲ್ಲಿ ನನ್ನ ಕಣ್ಣ ಬಿಂದುವಿಗೆ ಹೊಣೆಯಾರು ಇಲ್ಲ, ಆದರೆ ನಿನ್ನ ಕಣ್ಣಲ್ಲಿ ಹನಿ ಬಿಂದುವಿಗೆ ಜಾಗ ಮಾಡಿ ಕೊಟ್ಟಿದ್ದಕ್ಕೆ ದಯವಿಟ್ಟು ಕ್ಷಮಿಸಿ ಬಿಡೋ ಗೆಳೆಯ. ಇನ್ನೇನು ಬರೆಯಲಾಗುತ್ತಿಲ್ಲ ನನ್ನಿಂದ, ಕಣ್ಣೀರ ಕಟ್ಟೆ ಒಡೆದಿದೆ ಇಲ್ಲಿ, ಜೊತೆಗೆ ಕೈ ಕೂಡ ನಡುಗುತ್ತಿದೆ ಕಣೋ.

ಇಂತಿ,
-ಅವಳೇ (?)

ಬುಧವಾರ, ಏಪ್ರಿಲ್ 15, 2009

ಸೋಲಿನ ಅಮಲು ಎಂಬ ಬದುಕಿನ ಅಪಭ್ರಂಶು

ಇಡೀ ಕೋಣೆಯ ತುಂಬಾ ಅಸ್ತವ್ಯಸ್ತವಾಗಿ ಏನೇನೋ ಹರಡಿ ಹೋಗಿದೆಯೇನೋ ಎಂಬಂತಿದೆ, ಅಲ್ಲಿಯ ಪ್ರತಿ ವಸ್ತುವು ಒಪ್ಪವಾಗಿ-ಅಚ್ಚುಕಟ್ಟಾಗಿ ತಮ್ಮ ಜಾಗದಲ್ಲಿ ಕುಳಿತಿವೆಯಾದರು ಅಲ್ಲಿ ಎಲ್ಲವು ಅವ್ಯವಸ್ಥಿತ ಅನ್ನುವ ಅಮೂರ್ತ ಭಾವ, ಅವನು ಏನನ್ನೋ ಕಳೆದು ಕೊಂಡಿರುವವನಂತೆ ಹುಡುಕಾಡುತ್ತಿದ್ದಾನೆ, ಅಲ್ಲಿರುವ ಎಲ್ಲವನ್ನು ತಡಕಾಡುತ್ತಿದ್ದಾನೆ, ಅಸಲಿಗೆ ಅವನು ಹುಡುಕುತ್ತಿರುವುದೇನು ಅಥವಾ ಹುಡುಕಲು ಅವನು ಕಳೆದುಕೊಂಡಿರುವುದೇನು ಎಂಬುದರ ಅರಿವೇ ಅವನಿಗಿಲ್ಲ. ಅಲ್ಲಿ ಕತ್ತಲಿಲ್ಲ ಆದರೂ ಅವನಿಗೆ ಪ್ರತಿ ವಸ್ತುವು ಅಗೋಚರ.

ಸುಮ್ಮನೆ ಹೆಜ್ಜೆ ಇಟ್ಟು ಹೊರಟವನ ಕಾಲಿಗೆ ಅದೇನೋ ಎಡ ತಾಕಿ ಮುಗ್ಗರಿಸುತ್ತಾನೆ, ಮತ್ತೆ ಸಾವರಿಸಿ ಕೊಂಡು ಎದ್ದು ನಿಂತು ಕಾಲಿಗೆ ಸಿಕ್ಕ ವಸ್ತುವನ್ನು ಕೈಯಲ್ಲಿ ಹಿಡಿಯ ಹೋಗುತ್ತಾನೆ, ಅದು ಸಿಗಲೊಲ್ಲದು. ಮತ್ತೆ ದಿಟ್ಟಿಸಿ ನೋಡುತ್ತಾನೆ, ಅದು ಏನು? ಊಹೂಃ ಗೊತ್ತಾಗಲಿಲ್ಲ. ನಿಧಾನವಾಗಿ ಅದರತ್ತ ಕೈ ಚಾಚಿ ಆರ್ದ್ರನಾಗುತ್ತಾನೆ, ಅದಾಗಲೇ ಅವನ ಕೈಜಾರಿದೆ. ಆದರೆ ಏನದು? ಅವನ ಮನದಲ್ಲೊಂದು ಪ್ರಶ್ನೆ ಮೂಡುತ್ತದೆ, ಮತ್ತೆ ಅದರತ್ತ ದೃಷ್ಟಿ ಹಾಯಿಸಿ ನೋಡುತ್ತಾನೆ. ಅದು ಕೈಗೆಟುಕುತ್ತಿಲ್ಲ ಮತ್ತು ಕೈಗೆಟುಕದು ಕೂಡ. ಅಷ್ಟರಲ್ಲಿ ಅದು ಅವನ ಕಣ್ಣಿಗೆ ಮಿಂಚಿದಂತೆ ಕಾಣುತ್ತದೆ, ಸಣ್ಣಗೆ ಚೀತ್ಕರಿಸುತ್ತಾನೆ...

ಹೌದು! ಇದೆ? ನಾನು ಹುಡುಕುತ್ತಿದ್ದದ್ದು ಇದೆ? ನಾನು ಕಳೆದು ಕೊಂಡಿದ್ದು ಇದೆ?

ಅದರೆಡೆಗೆ ದೃಷ್ಟಿ ನೆಟ್ಟು ಕುಳಿತುಕೊಂಡು ಬಿಕ್ಕುತ್ತಾನೆ. ಅದು ಅವನು ವರ್ಷಗಳ ಕಾಲ ತನ್ನ ಜೊತೆಗೆ ತುಂಬಾ ಜತನದಿಂದ ಕಾಯ್ದಿರಿಸಿ ಕೊಂಡು, ಇಷ್ಟಿಷ್ಟೇ ಎನುವಷ್ಟು ಕಟ್ಟಿಕೊಂಡಿದ್ದ ಅವನವೇ ಕನಸುಗಳು. ಅವನ ಮನಸ್ಸು ಮರುಗುತ್ತದೆ, ತನ್ನ ಪ್ರತಿ ಕನಸಿಗೂ ಅವನು ಒಂದು ಹೆಸರಿಟ್ಟು ಕೊಂಡಿದ್ದ. ಅವೆಲ್ಲ ಕಳೆದಿವೆ ಅಲ್ಲಿ, ಅಳಿದುಳಿದುದನೆಲ್ಲ ಕೈ ತುಂಬಾ ತುಂಬಿ ಕೊಳ್ಳಲು ಧಾವಿಸುತ್ತಾನೆ, ಕೈ ಹಿಡಿತ ಬಿಗಿಯಾದಾಗ ಸ್ವಲ್ಪವು ಉಳಿಯದೆ ಜಾರಿ ಹೋಗುವ ಜಲಧಾರೆಯಂತೆ ಅಷ್ಟೂ ಅವನ ಕೈಯಲ್ಲಿ ನಿಲ್ಲಲಾರದೆ ಜಾರುತ್ತವೆ, ಮತ್ತೆ ತಡವರಿಸುತ್ತಾನೆ, ಅವನು ಅಸಹಾಯಕನಂತೆ ನಿಲ್ಲುತ್ತಾನೆ, ಇದನ್ನೆಲ್ಲಾ ಕಳೆದು ಕೊಂಡಿದ್ದೆಲ್ಲಿ ಅನ್ನುವುದು ಅವನಿಗೆ ನೆನಪಿಗೆ ಬರುತ್ತಿಲ್ಲ. ಕಳೆದಿದ್ದನ್ನು ಕಳೆದು ಕೊಂಡಲ್ಲೇ ಹುಡುಕ ಬೇಕು ಎಂಬುದು ಅವನಿಗೂ ಗೊತ್ತಿದೆ, ಆದರೆ ಅವನಿಗೆ ಕಳೆದು ಕೊಂಡ ಸ್ಥಳದ ಗುರುತಿಲ್ಲ, ಇಲ್ಲೇ ಹುಡುಕುತ್ತೇನೆ ಅಂದು ಕೊಂಡು ಹುಡುಕುತ್ತಾನೆ, ಸಿಗಲಾರದು ಎಂಬುದು ಗೊತ್ತಿದ್ದರೂ ಮತ್ತಷ್ಟು ಆಸ್ಥೆಯಿಂದ ಹುಡುಕುತ್ತಾನೆ.

ಅವನು ಹಠಮಾರಿಯೇನಲ್ಲ, ಮೊಂಡನಂತು ಅಲ್ಲವೇ ಅಲ್ಲ. ಏನೋ ಮಾಡಲು ಹೊರಡುತ್ತಾನೆ. ಸೋಲುತ್ತೇನೆ ಎಂಬ ಇಲ್ಲದ ಭಯ ಅವನ ಮನವನ್ನು ಕಾಡುತ್ತದೆ. ಆ ಭಯದಿಂದಲೇ ಇನ್ನು ತನ್ನಿಂದಾಗದು ಎಂದು ಕೈ ಚೆಲ್ಲಿ ಕುಳಿತು ಕೊಳ್ಳುತ್ತಾನೆ, ಜೊತೆಗೆ ಅವನ ಆಂತರ್ಯದ ಶಕ್ತಿ ಕುಂದುತ್ತದೆ. ಅವನಿಗೆ ಗೆದ್ದು ಗೊತ್ತೇ ಇಲ್ಲ ಎಂಬಂತೇನು ಇಲ್ಲ. ಅವನು ಕಳೆದು ಕೊಂಡ ಎಲ್ಲ ಕನಸುಗಳು ಅವನೇ ಹೆಣೆದ ಸಂಕೀರ್ಣಗಳು, ಅದು ಅವನೇ ಬರೆದಿಟ್ಟ ಅವನದೇ ಬದುಕಿನಧ್ಯಾಯದ ಹೊನ್ನಿನ ಸಾಲುಗಳು, ಆದರೆ ಈಗ ಅವೆಲ್ಲ ಅವನಿಂದಾಗುತ್ತಿಲ್ಲ.

ಅವನು ಈಗ ಇನ್ನಾತರಲ್ಲೋ ಸೋತಿದ್ದಾನೆ, ಆ ಸೋಲು ಅವನನ್ನು ಯಾವ ಪರಿ ಹೆದರಿಸಿದೆಯೆಂದರೆ ನನ್ನಿಂದ ಏನು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದಾನೆ. ತನ್ನ ಪ್ರತಿ ಸೋಲಿಗೂ ಒಂದು ಕಾರಣ ಕೊಡುತ್ತಾನೆ. ಅವನು ಸೋಲಿನ ಗುಂಗಿನಿಂದ ಹೊರ ಬರುತ್ತಿಲ್ಲ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಲು ಇಲ್ಲ, ಅದು ತಪ್ಪು ಎಂಬುದರ ಅರಿವು ಅವನಿಗೂ ಇದೆ. ಆದರೆ ಸೋಲಿನಲ್ಲೇ ಅವನು ನೆಮ್ಮದಿ ಹುಡುಕುತ್ತಿದ್ದಾನೆ, ಸೋಲಿನ ನೋವು ಅವನಿಗೀಗ ಹಿತವೆನಿಸುತ್ತಿದೆ, ಅದಕ್ಕೇ ಒಗ್ಗಿ ಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ತನ್ನಿಂದ ಗೆಲ್ಲಲಾಗದು ಎಂದು ಈಗಾಗಲೇ ತೀರ್ಮಾನಿಸಿ ಬಿಟ್ಟಿದ್ದಾನೆ, ಪ್ರತಿ ಕನಸಿಗೂ "ಸೋತಿದ್ದೇನೆ, ನನ್ನಿಂದ ಸಾಧ್ಯವಿಲ್ಲ" ಎಂದು ಒಂದು ಅಡಿ ಬರಹ ಬರೆದು ನೇತು ಹಾಕ ಹೊರಟಿದ್ದಾನೆ.

ಎಲ್ಲಾ ಕನಸುಗಳನ್ನು ಕೋಣೆಯ ಮೂಲೆಗೆ ಗುಡಿಸಿದ್ದಾನೆ. ಈಗ ಅವನ ಕಣ್ಣಂಚಿನಲ್ಲಿ ಒಂದು ಹನಿ ಕಣ್ಣೀರು ಇಲ್ಲ, ತುಂಬಾ ಇಷ್ಟ ಪಟ್ಟು ಓದಿ ಮುಗಿಸಿದ ಪುಸ್ತಕದ ಕೊನೆಯ ಪುಟವನ್ನು ಇನ್ನೊಮ್ಮೆ ಎಂದು ಓದುವಂತೆ ಮೂಲೆ ಸೇರಿದ ಕನಸುಗಳತ್ತ ಕೊನೆಯ ಬಾರಿಗೆಂಬಂತೆ ದೃಷ್ಟಿ ಹಾಯಿಸುತ್ತಾನೆ. ಎಲ್ಲಾ ಮುಗಿಯಿತೇನು? ಎಂದು ಮನಸ್ಸಿಗಷ್ಟೇ ಕೇಳುವಂತೆ ಉದ್ಗರಿಸಿ ಕಣ್ಣು ಮುಚ್ಚುತ್ತಾನೆ.

ಮತ್ತೆ ಮೇಲ್ಚಾವಣಿಯಿಂದ ಏನೋ ಕೆಳಗೆ ಬಿದ್ದು ಒಡೆದ ಸದ್ದು, ತಿರುಗಿ ನೋಡುತ್ತಾನೆ ಅಲ್ಲಿ ಇನ್ನೊಂದು ಕನಸು ಬಿದ್ದು ಒಡೆದಿದೆ ಅದರ ಹೆಸರೇ ಬದುಕು.

ಮಂಗಳವಾರ, ಏಪ್ರಿಲ್ 7, 2009

ಕೊನೆಗೂ ಶಾಂಭವಿ ಮೇಡಂಗೆ ಹುಡುಗ ಗೊತ್ತಾಯ್ತು!!!

"ಪ್ರಭು, ಶಾಂಭವಿ ಮೇಡಂಗೆ ಗಂಡು ಸಿಕ್ಕಾಯ್ತು, ನೆನ್ನೆ ರಾತ್ರಿಯೇ ನಿಮಗೆ ಫೋನ್ ಮಾಡ್ಬೇಕು ಅಂತ ಅಂದ್ಕೊಂಡಿದ್ದೆ, ಒಳ್ಳೆಯದಾಯ್ತಲ್ವ, ನಂಗೆ ಖುಷಿಯಾಯ್ತು."

"ಹೌದು ಮುಕುಂದ್ ನಂಗು ಗೊತ್ತಾಯ್ತು ನಮ್ಮ ಅತ್ತಿಗೆ ಹೇಳಿದ್ರು, ಕೊನೆಗೂ ಗಂಡು ಸಿಕ್ತಲ್ಲ ಸದ್ಯ, ಮ್ಯಾಟ್ರಿಮೋನಿಯಲ್ ನಲ್ಲಿ ನೊಂದಾಯಿಸಿಕೊಂಡಿದ್ದು ಎಷ್ಟು ಒಳ್ಳೆದಾಯ್ತಲ್ವ ಅವರಿಗೆ, ಹುಡುಗಾನು ಒಳ್ಳೆಯವನು ಅನ್ಸುತ್ತೆ. ಏನೋ ಬಿಡಿ ಸದ್ಯ ಈಗ ಸ್ವಲ್ಪ ಮನಸ್ಸಿಗೆ ಖುಷಿಯಾಯ್ತು."

ನಾನವತ್ತು ಕಚೇರಿಗೆ ಹತ್ತು ನಿಮಿಷ ತಡ, ನನ್ನ ಎಡ-ಬಲದಲ್ಲಿ ಕುಳಿತು ಕೊಳ್ಳುವ ಸಹೋದ್ಯೋಗಿಗಳ ನಡುವೆ ಪುಂಖಾನುಪುಂಖವಾಗಿ ಹೀಗೆ ವಿಚಾರ ವಿನಿಮಯ ನಡೆಯುತ್ತಿತ್ತು. ಇವರಿಬ್ಬರು ಒಂದೇ ಊರಿನವರಲ್ಲ, ತೀರ ಹಳೆ ಪರಿಚಯದವರು ಅಲ್ಲ, ಸರಿ ಸುಮಾರು ಒಂದು ವರ್ಷದಿಂದ ಒಂದೇ ಸೂರಿನಡಿ ಕೆಲಸ ಮಾಡುತ್ತಿರುವುದರಿಂದ ಸ್ವಲ್ಪ ಜಾಸ್ತಿಯೆನ್ನುವಷ್ಟು ಆತ್ಮೀಯ ಗೆಳೆಯರು. ಇದೆಲ್ಲ ಯಾಕೆ ಹೇಳುತ್ತಿದ್ದೀನೆಂದು ಯೋಚಿಸುವಿರ, ಕಾರಣ ಇಷ್ಟೇ ಇವರಿಬ್ಬರು ಗೆಳೆತನದಲ್ಲಿ ಎಷ್ಟು ಹಳಬರೋ ಇವರಿಬ್ಬರ ಜೊತೆ ನನ್ನ ಗೆಳೆತನವು ಅಷ್ಟೆ ಹಳತು. ಆದರೆ ಶಾಂಭವಿ ಮೇಡಂ ಯಾರು? ಎಂಬುದು ನನ್ನ ಪಾಲಿಗೆ ಒಂದು ಯಕ್ಷ ಪ್ರಶ್ನೆಯಂತಾಗಿತ್ತು. ಇಬ್ಬರ ಮುಖದಲ್ಲೂ ಅದೆಂತಹುದೋ ಸಮಾಧಾನ, ತಮ್ಮ ಮನೆಯ ಮಗಳಿಗೆ ಕಷ್ಟ ಪಟ್ಟು ಹುಡುಗನ ಹುಡುಕಿ ಇನ್ನೇನು ಮದುವೆಗೆ ಸಿದ್ಧತೆ ಮಾಡಿಕೊಳ್ಳುವ ತರಾತುರಿಯಲ್ಲಿ ನನ್ನ ಇಬ್ಬರು ಸಹೋದ್ಯೋಗಿಗಳಿದ್ದಂತೆ ಕಂಡರು.

ನಾನು ಕುತೂಹಲ ತಡೆಯಲಾಗದೆ ಕೇಳಿದೆ "ಮುಕುಂದ ಯಾರು ಶಾಂಭವಿ ಮೇಡಂ", ಮುಕುಂದ ಕೂಡಲೇ "ಪ್ರಭು, ಇವನಿಗೆ ಶಾಂಭವಿ ಮೇಡಂ ಗೊತ್ತಿಲ್ಲ ನೋಡು" ಅಂದ. ನನಗೀಗ ಇನ್ನು ಕುತೂಹಲ ಹೆಚ್ಚಾಯಿತು ಪ್ರಭುವಿನ ಕಡೆ ತಿರುಗಿ ಕೇಳಿದೆ "ಯಾರೋ ಶಾಂಭವಿ ಮೇಡಂ". ಪ್ರಭು ಮಾತಿಗೆ ಶುರುವಿಟ್ಟ "ರಾಜು ಶಾಂಭವಿ ಮೇಡಂ ಗೊತ್ತಿಲ್ಲ ಅಂದ್ರೆ ಹೇಗೋ, ಎಷ್ಟು ಸಮಯದಿಂದ ಹುಡುಗನನ್ನು ಹುಡುಕುತ್ತಿದ್ದರು ಗೊತ್ತ, ಎಲ್ಲಿ ಜನ ಮಾರಾಯ ನೀನು, ಮುಕುಂದ ಇವನಿಗೆ ಏನು ಹೇಳೋದೋ?" ಅಂದ.

ನನ್ನ ಸಹನೆ ಮೀರಿತ್ತು "ಹೇಳೋ ಇಷ್ಟ ಇದ್ದರೆ ಹೇಳಿ, ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ" ಅಂದೆ. ಮುಕುಂದ ಕೂಡಲೇ ಕೇಳಿದ "ರಾತ್ರಿ :೩೦ ಕ್ಕೆ - ಟಿ. ವಿ ಯಲ್ಲಿ 'ಮುಕ್ತ ಮುಕ್ತ' ಧಾರವಾಹಿ ನೋಡಲ್ವೇನೋ?". ಒಂದು ಕಡೆ ನಗು ಇನ್ನೊಂದು ಕಡೆ ಸಿಟ್ಟು ಒತ್ತರಿಸಿ ಬಂದಿದ್ದು ಸುಳ್ಳಲ್ಲ. "ಶಾಂಭವಿ ಮೇಡಂ" ಮುಕ್ತ-ಮುಕ್ತ ಧಾರಾವಾಹಿಯ ಒಂದು ಪಾತ್ರವಂತೆ.

ಧಾರಾವಾಹಿಗಳು ಮತ್ತು ಧಾರಾವಾಹಿಯ ಪಾತ್ರಗಳು ನಮ್ಮ ನಡುವಲ್ಲೇ ನಡೆವ ಸನ್ನಿವೇಶಗಳು ಮತ್ತು ನಮ್ಮ ಮನೆಯ ಅವಿಭಾಜ್ಯ ಅಂಗಗಳೇನೋ ಎಂಬಂತೆ ಆಗಿ ಹೋಗಿದೆ, ನೋಡುವ ಪ್ರತಿಯೊಬ್ಬರೂ ಇದರಲ್ಲಿ ಅದೆಷ್ಟು ತಲ್ಲೀನರು ಅಂದರೆ ಒಂದು ದಿನವು ತಪ್ಪಿಸದೇ ನೋಡುತ್ತಾರೆ, ಅಕಸ್ಮಾತ್ ತಪ್ಪಿದರೆ ಏನೋ ಕಳೆದು ಕೊಂಡ ಅನುಭವ.

ಆಗ ನಾನು ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ, ಎಂದಿನಂತೆ ಮಧ್ಯಾನ್ಹ ಕಾಲೇಜು ಮುಗಿಸಿ ಮನೆಗೆ ಬಂದು ಬಾಗಿಲು ತಟ್ಟಿದವನಿಗೆ ಬಾಗಿಲು ತೆರೆದು ಎದುರಾಗಿದ್ದು ನನ್ನ ಅಜ್ಜಿ, ಪ್ರತಿ ದಿನ ಕಾಲೇಜಿನಿಂದ ಬಂದವನಿಗೆ ಊಟ ಮಾಡ್ತೀಯ ಅಂತ ಕೇಳಿ, ಊಟ ಬಡಿಸುತ್ತಿದ್ದ ಅಜ್ಜಿ ಅವತ್ತು ಎಂದಿನಂತಿರಲಿಲ್ಲ, ಒಂದೇ ಸಮನೆ ಅಳು, ಏನಾಯ್ತು ಅಂದರೆ ಕಾರಣ ಹೇಳಲು ಸಾಧ್ಯವಾಗದಷ್ಟು ಜೋರಾಗಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ನಾನು ದಿಕ್ಕೇ ತೋಚದಂತಾಗಿ ಕೇಳಿದೆ "ಏನಾಯ್ತು ಹೇಳಜ್ಜಿ". ಅಜ್ಜಿ ಅಳುತ್ತಲೇ ಶುರು ಮಾಡಿದರು "ಸುಮತಿಗೆ ಯಾರೋ ಚಾಕು ಹಾಕಿ ಬಿಟ್ಟರು, ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ, ಸಂಜೆ ಕ್ಕೆ ಬರ್ತಾರಲ್ಲ ಅದೇ ಡಾಕ್ಟ್ರು ಈಗಲೇ ಏನು ಹೇಳೋದಕ್ಕೆ ಆಗಲ್ಲ ಅಂದ್ರು, ಪಾಪಿ ಅವನಿಗೆ ಕೊಲೆ ಮಾಡ್ಲಿಕ್ಕೆ ಹುಡುಗೀನೆ ಬೇಕಿತ್ತಾ, ಅವಳು ಅದೆಷ್ಟು ನೊಂದಿದ್ದಾಳೆ ಈಗಾಗಲೇ" ನಾನು ಒಂದು ಕ್ಷಣ ಅವಕ್ಕಾದೆ, ಈಗ ಏನು ಮಾಡೋದು ಅಂತ ಯೋಚಿಸುವ ಮುನ್ನ ನೆನಪಾಗಿದ್ದೆಂದರೆ ಸುಮತಿ ಎಂಬ ಹೆಸರಿನವರು ನನಗೆ ತಿಳಿದ ಮಟ್ಟಿಗೆ ನಮ್ಮ ಕುಟುಂಬದಲ್ಲಿ ಅಥವಾ ನಮ್ಮ ಪರಿಚಯಸ್ಥರಲ್ಲಿ ಯಾರು ಇಲ್ಲ, ಕೊನೆಗೆ ಅಜ್ಜಿಗೆ ಮರು ಪ್ರಶ್ನೆ ಕೇಳಿದೆ ಅಂದ ಹಾಗೆ ಸುಮತಿ ಯಾರು?. ಈಗ ಅಜ್ಜಿಗೆ ಕೋಪ ಬಂದಿತ್ತು "ಬೇಕುಪ್ಪ ಸುಮತಿ ಗೊತ್ತಿಲ್ವ, :೩೦ ಕ್ಕೆ ಧಾರವಾಹಿ ಅವಳು", ಮತ್ತೆ ನನಗೆ ಮಾತೆ ಹೊರಡಲಿಲ್ಲ.

ಹೀಗೆ ಒಮ್ಮೆ ನಮ್ಮ ಅಮ್ಮನ ಪರಿಚಯದವರೊಬ್ಬರು ಮನೆಗೆ ಬಂದವರು ಅಮ್ಮನ ಬಳಿ ಮಾತನಾಡುತ್ತಾ "ಮಗನಿಗೆ ಎಲ್ಲೂ ಹುಡುಗಿ ಸಿಗಲಿಲ್ಲ, ಯಾರಾದರು ಬಡವರ ಮನೆ ಹೆಣ್ಣಾದರು ಪರವಾಗಿಲ್ಲ ಒಳ್ಳೆಯವಳಾಗಿದ್ದರೆ ಸಾಕು, ನಿಮಗೆ ಎಲ್ಲಾದರು ಗೊತ್ತಿದ್ದರೆ ಹೇಳಿ" ಅಂದರು. ಒಳಮನೆಯಿಂದ ಬಂದ ಅಜ್ಜಿ ಕೂಡಲೇ "ಸಂಜೆ :೩೦ ಕ್ಕೆ ಗುಪ್ತಗಾಮಿನಿಯಲ್ಲಿ ಬರ್ತಾಳಲ್ವ ಭಾವನ ಅವಳಿಗೂ ಹುಡುಗನ್ನ ನೋಡುತ್ತಿದ್ದಾರೆ, ನಂಗೆ ಚೆನ್ನಾಗಿ ಗೊತ್ತು ಅವಳು ತುಂಬಾ ಒಳ್ಳೆ ಹುಡುಗಿ ನಿಮ್ಮ ಮಗನಿಗೆ ಮದುವೆ ಮಾಡಿಕೊಳ್ಳುವುದಾದರೆ ನೋಡಿ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಾಗ ಅಮ್ಮನಿಗೂ, ನನಗು, ಮತ್ತು ಬಂದವರಿಗೂ ನಗು ತಡೆಯಲಾಗಿರಲಿಲ್ಲ.

ಭಾನುವಾರ, ಮಾರ್ಚ್ 15, 2009

ಬದುಕಿನ ಖಾಲಿ ಕ್ಯಾನ್ವಾಸ್ ಮೇಲೆ ಪ್ರೀತಿ ಎಂದಷ್ಟೇ ಬರೆದು...

ಪಿಸು ಮಾತು - ೪

ನಾಲ್ಕು ಗೋಡೆಯ ನಡುವಲ್ಲಿ ನಾವಿಬ್ಬರೂ ಮಾತ್ರ, ಎದುರು ಬದುರಿನ ಗೋಡೆಗೆ ಒರಗಿ ಕುಳಿತು ಗಡಿಯಾರವನ್ನು ದಿಟ್ಟಿಸಿದರೆ ಸಮಯ ರಾತ್ರಿಯ ೧೧:೪೫, ಎದುರು ಕುಳಿತಿದ್ದ ಗೆಳೆಯ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ ಎಂಬಂತೆ ತಲೆ ತಗ್ಗಿಸಿ ಕುಳಿತಿದ್ದ. ಇಬ್ಬರ ನಡುವು ನೀರವ ಮೌನ, ಏನೋ ಹೇಳಲೆಂಬಂತೆ ಹೊರಟು ಮತ್ತೆ ಮಾತು ಮುಂದುವರಿಸಲಾರದೆ ನಿಟ್ಟುಸಿರು ಬಿಡುತ್ತಾನೆ, ಅಮೂರ್ತದಲ್ಲಿ ದೃಷ್ಟಿಯನ್ನು ಬೆರೆಸಿ ನಿಸ್ಸಹಾಯಕವಾಗಿ ಸಣ್ಣಗೆ ನರಳುತ್ತಾನೆ. ಮತ್ತೆ ನಾನು ಮೌನ ಮುರಿಯುತ್ತೇನೆ "ಏನಾಯ್ತು, ಹೇಳು?", ಒತ್ತರಿಸಿ ಬರುವ ದುಃಖದ ಮಡುವನ್ನು ತಡೆದು ನಿಲ್ಲಿಸಿ "ಹ್ಮೂ" ಎಂದಷ್ಟೇ ಉದ್ಗರಿಸಿ ಕಣ್ಣು ಮುಚ್ಚುತ್ತಾನೆ.

"ಬೆಳಕು ಕಣ್ಣು ಚುಚ್ಚಿದಂತಾಗುತ್ತಿದೆ, ದಯವಿಟ್ಟು ಸ್ವಲ್ಪ ಹೊತ್ತು ದೀಪ ಆರಿಸುತ್ತೀಯ? ದಯವಿಟ್ಟು ಕಣೋ" ದೀನನಾಗಿ ಗೊಗರೆವ ದನಿಯಲ್ಲಿ ಕೇಳುತ್ತಾನೆ. ನಾನು ದೀಪವಾರಿಸಿ ಕುಳಿತು ಕೊಳ್ಳುತ್ತೇನೆ. ಅಮಾವಾಸ್ಯೆಗೆ ಇನ್ನೆರಡೆ ದಿನ, ಚಂದಮಾಮ ಬಹುತೇಕ ಕರಗಿದ್ದಾನೆ. ಇಡೀ ಕೋಣೆಯ ತುಂಬ ಕತ್ತಲು ವಿಕಾರವಾಗಿ ನರ್ತಿಸುತ್ತಿದೆಯೇನೋ ಎಂಬ ಭಾವ, ಅವನ ಎದೆಯಾಳದ ನೋವಿನುರಿ ಮತ್ತವನ ಉಸಿರಾಟದ ಉಚ್ಚ್ವಾಸ-ನಿಚ್ಚ್ವಾಸಗಳ ಹೊರತು ಇನ್ನಾವ ಸದ್ದು ಅಲ್ಲಿಲ್ಲ, ಅವನ ಬಿಸಿಯುಸಿರು ತಣ್ಣಗಿನ ಕೋಣೆಯ ಕಾವನ್ನು ಏರಿಸುತ್ತಿರುವಂತಿತ್ತು. ತನ್ನ ಕಾಲುಗಳನ್ನು ನೀಳವಾಗಿ ಚಾಚಿ, ಗೋಡೆಗೆ ತನ್ನ ದೇಹದ ಸಂಪೂರ್ಣವಾದ ಜವಾಬ್ದಾರಿಯನ್ನು ಹಸ್ತಾಂತರಿಸಿದಂತೆ ಕುಳಿತ. ಕಡು ಕತ್ತಲಿನಲ್ಲಿ ಒಂದು ಕಪ್ಪು ಆಕೃತಿಯ ಚಲನೆಯ ಹೊರತಾಗಿ ಇನ್ನೇನು ಕಾಣದಂತಹ ನಿರ್ವಿಕಾರ ಭಾವ.

ಇದೆ ಕತ್ತಲಿಗಾಗಿ ಕಾತರಿಸುತ್ತಿದ್ದವನಂತೆ ನನ್ನ ಹೆಸರನ್ನಷ್ಟೇ ಮೇಲು ದನಿಯಲ್ಲಿ ಉದ್ಗರಿಸಿದ. ನೀನು ಕರೆದಿದ್ದು ಕೇಳಿಸ್ತು ಎಂಬಂತೆ ನಾನು "ಹೇಳು" ಎಂದೆ. ಸಣ್ಣ ದನಿಯಲ್ಲಿ ಕಣ್ಣೀರು ಚೆಲ್ಲುತ್ತಿದ್ದವನ ದುಃಖದ ಮಡುವನ್ನು ಸೀಳಿ ಮಾತೊಂದು ಹೊರ ಬಿತ್ತು. "ಅವಳು ನನ್ನನ್ನು ಬಿಟ್ಟು ಹೋದಳು, ಅವಳ ಮನೆಯಲ್ಲಿ ಒಪ್ಪುತ್ತಿಲ್ಲವಂತೆ, ಅವಳಿಗೂ ನಾನೀಗ ಬೇಡವಂತೆ. ನನ್ನಿಂದ ಆಗುತ್ತಿಲ್ಲ ಕಣೋ, ಸೋಲುತ್ತಿದ್ದೇನೆ, ನನಗೆ ಈ ಬದುಕು ಬೇಡ ಕಣೋ" ಕಣ್ಣೀರ ಕಟ್ಟೆ ಒಡೆದಿತ್ತು, ಅವನ ವರುಷಗಳ ಶ್ರದ್ದೆಯ ಪ್ರೀತಿಯ ಕನಸ ಗೋಪುರ ಏಕಾ ಏಕಿ ಕುಸಿದಿತ್ತು, ಇನ್ನೇನನ್ನು ಹೇಳಲಾರೆ ಎಂಬಂತೆ ಅವನ ಅಳು ನೂರ್ಮಡಿಸುತ್ತಿತ್ತು. ಸಮಾಧಾನಿಸುವ ಪ್ರಯತ್ನವನ್ನು ಮಾಡದೆ ಸುಮ್ಮನೆ ಕುಳಿತೆ. ಸಮಾಧಾನದ ಮಾತು ಕೂಡ ತೀರ ಕಠೋರ ಎಂದೆನಿಸಿ ಬಿಡ ಬಹುದಾದ ಸೂಕ್ಷ್ಮ ಕ್ಷಣವದು, ಅವನ ದುಃಖದ ರಭಸ ಮಲೆನಾಡಿನ ಮುಂಗಾರಿನ ಭರವನ್ನು ಮೀರಿಸುವಂತಿತ್ತು.

ಪ್ರೀತಿಯ ಸಾವಿಗೆ ಅದರ ಆರಂಭಕ್ಕೆ ಸಿಗುವಂತೆ ಒಂದು ನಿಖರವಾದ ತಾರೀಖು ಸಿಗಲಾರದಂತೆ, ಏಕೆಂದರೆ ಅದೊಂದು ಧೀರ್ಘ ಪ್ರಕ್ರಿಯೆ. ಅದು ಒಂದು ವ್ಯವಸ್ಥಿತ ಹೊಂಚು. ಅವಳು/ಅವನು ಪ್ರೀತಿಸ್ತಿಯ ಅಂತ ಕೇಳಿ, ಹೌದು ನಾನು ನಿನ್ನನ್ನು ಪ್ರೀತಿಸ್ತಿದ್ದೇನೆ ಅಂದು ಆ ತಾರೀಖನ್ನು ತನ್ನ ದಿನಚರಿಯ ಪುಟದ ಮೂಲೆಯಲ್ಲಿ ಅತ್ಯಂತ ಪ್ರೀತಿ ಆದರಗಳಿಂದ ತಿದ್ದಿಟ್ಟು, ಕಳೆದ ವರ್ಷಗಳ ಲೆಖ್ಖ ಹೇಳಬಹುದೇನೋ, ಆದರೆ ಪ್ರೀತಿ ಕಳೆದು ಹೋದ ಬಗ್ಗೆ ಇದೇ ದಿನ ಹೀಗಾಯಿತು ಎಂದು ಹೇಳುವುದು ಬಹುಶಃ ಅಸಾಧ್ಯ. ಅಪ್ಪ-ಅಮ್ಮ, ಜಾತಿ ಇವುಗಳು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು, ಆದರೆ ಇಲ್ಲಿ ಗಮನಿಸ ಬೇಕಾದ ವಿಷಯ ಇವ್ಯಾವು ತಮ್ಮ ತಪ್ಪಿಗೆ ಅವರು ಕೊಡುತ್ತಿರುವ ಕಾರಣಗಳಲ್ಲ, ತಾವು ಮಾಡಿದ್ದು ಸರಿಯೆಂಬುದಕ್ಕೆ ಅವರು ನೀಡುವ ಸಮಜಾಯಿಷಿಗಳು. ಪ್ರೀತಿಸುತ್ತೇನೆ ಎನ್ನುತ್ತಾ ನಿಂತಿರುವಾಗ ಅದೇ ಅಪ್ಪ-ಅಮ್ಮ ಇನ್ನೆಲ್ಲೋ ತನ್ನ ಮಗ-ಮಗಳ ಬರುವಿಕೆಗೆ ಕಾದು ಕುಳಿತಿರುತ್ತಾರೆ, ಆಗ ಆ ದಿನ ಹೆತ್ತವರ ನೆನಪು ಬಂದರೆ ಅದು ನಿಜಕ್ಕೂ ಗೌರವಯುತ, ಅಂತಹವರನ್ನು ತುಂಬು ಹೃದಯದಿಂದ ಗೌರವಿಸೋಣ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಈ ಸಂಭಂದ ಇನ್ನು ಮುಂದುವರಿಸಲಾರೆ ಎಂಬ ನಿರ್ಧಾರಕ್ಕೆ ಬಂದು ನಿಲ್ಲುತ್ತಾರಲ್ಲ ಅದು ನಿಜಕ್ಕೂ ಒಂದು ಹೀನ ಕೃತ್ಯ. ದಿನ ಜೊತೆ ನಡೆದವರು ಬೇಡವಾಗಿರುತ್ತಾರೆ, ತನ್ನೆಲ್ಲ ನೋವಿಗೆ ದನಿಯಾದವರು ಹೊರೆಯೆನಿಸಿರುತ್ತಾರೆ. ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ ಅದರ ಅಗತ್ಯವಿಲ್ಲ ಎಂದು ಮನಸ್ಸಿಗೆ ಅನ್ನಿಸಿ ಬಿಡುತ್ತದೆ.

ಒಂದು ಒಳ್ಳೆ ಪ್ರೀತಿಯ ಸಂಬಂಧ ಶ್ರಧ್ಧೆಯನ್ನು ಬೇಡುತ್ತದೆ ಮತ್ತು ಪರಸ್ಪರರ ಬಗ್ಗೆ ನಂಬಿಕೆ, ವಿಶ್ವಾಸವನ್ನು ಬಯಸುತ್ತದೆ, ಅದು ಒಂದು ದಿನದಲ್ಲಿ ದಿಢೀರ್ ಎಂದು ಬೆಳೆದು ನಿಲ್ಲಲಾರದಂತೆ, ಅದು ಸಮಯ ಕೇಳುತ್ತದೆ, ದಿನ ಕಳೆದಂತೆ ಪಕ್ವ ಗೊಳ್ಳುತ್ತಾ ಸಾಗುತ್ತದೆ. ಆದರೆ ಈಗಿನ ಯಾಂತ್ರಿಕ ಯುಗದಲ್ಲಿ ಪ್ರೀತಿ ಸಹ ತನ್ನ ಸೊಬಗನ್ನು ಕಳೆದು ಕೊಳ್ಳುತ್ತಾ ಅರ್ಥ ಹೀನವಾಗುತ್ತಿದೆ. ಶ್ರದ್ದೆಯಿಲ್ಲದ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಕಾಣುತ್ತದೆ. ಅವನೇ ಎಲ್ಲ ಎಂದು ಕೊಂಡು ಬದುಕುತ್ತಿದ್ದ ಹುಡುಗಿಗೆ ಹೊರ ಜಗತ್ತು ಇನ್ನಷ್ಟು ರಂಗು ರಂಗಾಗಿ ಕಾಣುತ್ತದೆ, ಮತ್ತು ಇಷ್ಟು ದಿನ ಜೊತೆಯಲ್ಲಿದ್ದು ಉಸಿರಾದವನು ಬಣ್ಣ ಕಳೆದು ಕೊಂಡು ಬಿಳಿಚಿ ಕೊಂಡಂತೆ ಭಾಸವಾಗಿರುತ್ತಾನೆ. ಅಲ್ಲೀಗ ಅಪ್ಪ-ಅಮ್ಮನ ಮತ್ತು ಜಾತಿಯ ಸಬೂಬು ಆರಂಭವಾಗಿ ಬಿಡುತ್ತದೆ. ನಿಜವಾದ ಪ್ರೀತಿ ಹೇಗಾದರು ಮಾಡಿ ಎಲ್ಲವನ್ನು ಎದುರಿಸಿ ಎಲ್ಲರನ್ನು ಒಪ್ಪಿಸೋಣ ಎಂದೆನ್ನುತ್ತದೆ, ಆದರೆ ತಳುಕು ಪ್ರೀತಿ ಸುಮ್ಮನೆ ಬಿಡಿಸಿಕೊಂಡು ಓಡುವ ಹುನ್ನಾರದಲ್ಲಿರುತ್ತದೆ. ಇಲ್ಲಿ ಉಳಿದು ಹೋದ ಜೀವ ನರಳುತ್ತದೆ, ತಾನು ಉಳಿದು ಹೋದದ್ದಕ್ಕೆ ಕಾರಣ ಹುಡುಕಿ ಹುಡುಕಿ ಸೋಲುತ್ತದೆ, ತನ್ನ ಬಗ್ಗೆ ಒಂದು ವಿಧವಾದ ಕೀಳರಿಮೆ ಬೆಳೆಸಿಕೊಂಡು ಕತ್ತಲಿಗಾಗಿ ಹಪಹಪಿಸಿ ಮರುಗುತ್ತದೆ. ವರ್ಷಗಟ್ಟಲೆ ಕಟ್ಟಿದ ಪ್ರೀತಿಯ ಗೋಪುರ ಕೆಲವೇ ದಿನಗಳಲ್ಲಿ ನೆಲ ಸಮವಾಗಿರುತ್ತದೆ.

ಗೆಳೆಯ ಕಣ್ಣೀರಾಗಿ ಸೋತಿದ್ದ, ಅವನ ಕೈಯನ್ನು ನನ್ನ ಕೈಯಲ್ಲಿಟ್ಟು ಹೇಳಿದೆ "ಒಂದು ಒಳ್ಳೆಯ ಬದುಕನ್ನು ಬದುಕಿ ಬಿಡು, ಅವಳ ನೆನಪೇ ಬಾರದಂತ ಬದುಕು. ಈ ಬದುಕನ್ನು ಸಂಪೂರ್ಣವಾಗಿ ಬಾಳಿ ಬಿಡು, ಇಷ್ಟು ದಿನ ನಿಮ್ಮಲ್ಲಿದ್ದಿದ್ದು ಪ್ರೀತಿಯಲ್ಲ, ಅದೊಂದು ಸೆಳೆತವಷ್ಟೇ, ಪ್ರೀತಿ ಹೀಗಿರೋದಿಲ್ಲ. ಅದು ಯಾವತ್ತು ಸೋಲಲು ಬಿಡಲಾರದ ಅದಮ್ಯ ಶಕ್ತಿ. ಜೀವನದ ಬಗ್ಗೆ ಅತೀವ ಶ್ರದ್ದೆಯಿರಲಿ ಮತ್ತು ನಿನ್ನ ಜೊತೆ ನಾನಿದ್ದೇನೆ ಗೆಳೆಯನಾಗಿ, ನಿನ್ನೆಲ್ಲ ನೋವ ದನಿಗೆ ಕಿವಿಯಾಗಿ".

ಮರು ಉತ್ತರ ನೀಡಲು ಚೈತನ್ಯವಿರದೆ ಗೆಳೆಯ ನನ್ನ ಮಡಿಲಿಗೆ ಕುಸಿದಿದ್ದ, ಗದ್ಗದಿತನಾಗಿ ನನ್ನೆಡೆಗೆ ನೋಡದೆ ಕೇಳಿದ "ಅವಳು ನನ್ನನ್ನು ಯಾರಿಗೋಸ್ಕರ ತ್ಯಾಗ ಮಾಡಿದಳು". ನಾನು ಸುಮ್ಮನೆ ನಕ್ಕು ನುಡಿದೆ "ಗೆಳೆಯ ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ, ಪ್ರೀತಿಯಿಂದ ಹೊರ ನಡೆವವರು ತಮಗೆ ಇನ್ನೊಂದು ಉತ್ತಮ ಅನ್ನುವ ಆಯ್ಕೆಯ ಕಡೆ ವಲಸೆ ಹೊರಟಿರುತ್ತಾರಷ್ಟೇ, ಬಿಟ್ಟು ಹೋಗುವ ಮುನ್ನ ತಮ್ಮನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಇನ್ನೊಂದು ಅಸ್ತ್ರವೇ ಈ ತ್ಯಾಗ, ನಮ್ಮಲ್ಲಿ ಯಾರು ಕಾಣದ ಬದುಕಿಗೆ ಕೈಯಲ್ಲಿರುವುದನ್ನು ತ್ಯಾಗ ಮಾಡಿ ಹೋಗುವವರಿಲ್ಲ, ಅದು ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ."

ಗೆಳೆಯ ನಿದ್ರೆಗೆ ಜಾರಿದ್ದ, ಯಾಕೋ ನನಗೆ ಅರಿವಿಲ್ಲದಂತೆ ಮನಸ್ಸು ಕದಡಿತ್ತು. ಮತ್ತೆ ಹೊರಗಣದ ಚಂದಮಾಮ ಪೂರ್ಣನಾಗುವುದೆಂದು ಎಂಬ ಪ್ರಶ್ನೆಯೊಂದಿಗೆ ಕುಳಿತೆ, ಮತ್ತೆ ನನ್ನ ಆ ಸಾಲುಗಳು ನೆನಪಾಗಿ ಕಾಡಿದವು.
"ಜೊತೆ ನಡೆದ ಹಾದಿಯಲಿ ನೀನಿಲ್ಲದಿರೆ ಏನು
ನಿನ್ನ ಹೆಜ್ಜೆ ಗುರುತುಗಳುಂಟು
ನನ್ನ ಬದುಕ ಜೋಳಿಗೆ ಖಾಲಿಯಾಗಿದ್ದರೆ ಏನು
ಹೊರಲಾರದೆ ನೀ ಎಸೆದು ಹೋದ ಕನಸ ರಾಶಿಯಿಲ್ಲುಂಟು
ನಮ್ಮ ಪ್ರತಿ ಸೋಲಿಗೂ ಇದ್ದೆ ಇದೇ ಒಂದು ಸಂಬಂಧದ ನಂಟು
ಮತ್ತೆ ಜಿಗಿದೆದ್ದು ನಾ ಸೋಲಲಾರೆನೆಂದು ಕೂಗಿ ಹೇಳುವುದುಂಟು"

ಭಾನುವಾರ, ಫೆಬ್ರವರಿ 22, 2009

ಮ(ಇ)ಳೆ


ಅಂಗಳದ ಪ್ರಾಂಗಣದಿ ಮಳೆ ಹನಿಯ ಸದ್ದು
ವರುಣನಿಗೋ ವಸುಂಧರೆಯ ಪ್ರೀತಿ ಮುದ್ದು
ಮೋಡಗಳ ನಡುವಿನಲಿ ರವಿ-ಚಂದ್ರರಿದ್ದು
ನೋಡುತಿಹರು ಇವರ ಪ್ರೇಮ-ಸಲ್ಲಾಪವ ಕದ್ದು ಕದ್ದು

ಕಳೆದು ಹೋಗುತಿಹ ಪ್ರಿಯತಮಗೆ ತಡೆಯೊಡ್ಡಲೆಂದು
ಮೇಘವರ್ಷಿಣಿ ಅಬ್ಬರಿಸಿ ಗುಡುಗುತಿಹಳು!!!
ಬೆದರಿ ಓಡುತಿಹ ಅವಳನ್ನು ತಡೆಯಲೆಂಬಂತೆ
ಅಡ್ಡಗಟ್ಟಲು ನಿಂತಿಹರು ಶಿಖರದ್ವಯರು!!!

ಭುವಿಯ ಮಡಿಲ ತುಂಬುವ ಮುನ್ನ ತನಗಿಷ್ಟು ಇರಲೆಂದು
ಹಸಿರೆಲೆಯ ಚಾಚಿ ನಿಂತಿಹಳು ವನದೇವಿ ಈಗ...
ಎಲ್ಲ ಭೇದಿಸಿ ನುಗ್ಗಿ ಇಳೆಯ ಸೇರುವ ತೆರದಿ
ಮುನ್ನುಗ್ಗಿ ಬರುತಿಹನು ಮಳೆರಾಯನೀಗ...

ನಾಚಿ ನೀರಾಗಿಹಳು ಧರಿತ್ರಿಯಿಂದು
ಹಸೆಮಣೆಯನೇರಿ ಕುಳಿತಿಹ ನೀರೆಯಂತೆ!!!
ತವಕಿಸುತ್ತಿಹಳೀಗ ಸೆರೆ ಹಿಡಿದು ಕೊಳ್ಳಲು
ತನ್ನಿನಿಯನನ್ನು ಇನ್ನೆಂದು ಬಿಟ್ಟು ಹೋಗದಂತೆ!!!

(ಶಾಂತಲಕ್ಕನವರ ಮಳೆ ಚಿತ್ರದ ಸ್ಪೂರ್ತಿಯಿಂದ ಬರೆದ ಕವನ...)

ಸೋಮವಾರ, ಫೆಬ್ರವರಿ 16, 2009

ಬದುಕೆ ಇಂದು ನಾನು ನೀನಾಗುತ್ತೇನೆ... ನೀನು ನನ್ನುಸಿರಾಗಿ ಬಿಡು...ಪಿಸು ಮಾತು - ೩

ನನ್ನ ಅಂತರಾಳದ ಅಭಿಸಾರಿಕೆ,

ಇನ್ನು ಗಡಿಯಾರ ಸರಿಯಾಗಿ ಬೆಳಿಗ್ಗಿನ ಜಾವದ 6:30 ರ ಗೆರೆ ದಾಟಿಲ್ಲ, ಇವತ್ತು 14 ಫೆಬ್ರವರಿ, ಶನಿವಾರ ಪ್ರೇಮಿಗಳ ದಿನ, ನಿನ್ನ ಹಣೆಯ ಮೇಲೇರಿ ಕುಳಿತಿದ್ದ ನವಿರು ಕೂದಲನ್ನು ಸರಿಸಿ, ಅಲ್ಲೊಂದು ಸಿಹಿ ಮುತ್ತನ್ನು ಪ್ರತಿಷ್ಟಾಪಿಸಿದೆ.

ಇವತ್ತು ನಿನ್ನ ಪಾಲಿನ ಕೆಲಸಗಳೆಲ್ಲವನ್ನು ನಾನೇ ಮಾಡಿ ಮುಗಿಸಿಬಿಡಬೇಕು ಎಂದು ತೀರ್ಮಾನಿಸಿಯೇ ಎದ್ದಿದ್ದೆ, ಕಿಟಕಿಯಿಂದ ಬೀಸುತ್ತಿದ್ದ ತಂಡಿ ಗಾಳಿಯನ್ನು ತಡೆದು ನಿಲ್ಲಿಸಲು ಕಿಟಕಿಯ ಬಾಗಿಲನ್ನು ತುಸು ಓರೆ ಮಾಡಿ, ನಿನಗೆ ಹೊದಿಕೆಯನ್ನು ಹೊದ್ದಿಸಿ, ಕೋಣೆಯ ಬಾಗಿಲನ್ನು ಮುಚ್ಚಿ, ಹೊರ ಬಂದವನು. ಅಂಗಳ ಗುಡಿಸುವ ಪೊರಕೆಯನ್ನು ಕೈಯಲ್ಲಿ ಹಿಡಿದೆ, ಪೊರಕೆ ಅದೆಷ್ಟು ಒರಟಾಗಿದೆ, ನಿನ್ನ ಮೃದುಲ ಕೈಗಳಲ್ಲಿ ದಿನನಿತ್ಯ ಇದನ್ನು ಹೇಗೆ ಹಿಡಿಯುತ್ತೀಯ? ಹೀಗೆ ಯೋಚಿಸುತ್ತಾ ಅಂಗಳದ ಕಸ ಹೊಡೆದು, ನೀರೆರಚಿ, ಹೊಸ್ತಿಲು ಸಾರಿಸಿದೆ. ರಂಗೋಲಿ ಪುಡಿಯಿಂದ ಹೊಸ್ತಿಲಿನ ಮೇಲೆ ಪುಟ್ಟದಾಗಿ ನಾಲ್ಕು ಓರೆ ಗೆರೆ ಎಳೆದು, ಮಧ್ಯ ಭಾಗದಲ್ಲಿ ಒಂದು ಶಂಕು ಬರೆದು, ಅಂಗಳದಲ್ಲಿ ಒಂದು ನಕ್ಷತ್ರ ಬರೆದೆ. ನಾನು ಬರೆದಿದ್ದು ರಂಗೋಲಿಯ, ನನಗೆ ಏಕೋ ಅನುಮಾನ ಕಾಡಿತು, ಅದರ ಕೆಳಗೆ ಬರೆದು ಬಿಡಲೇ ಇದು "ರಂಗೋಲಿ" ಎಂದು, ರಂಗೋಲಿಗೆ ಬಣ್ಣ ತುಂಬುವ ಕೆಲಸ ನನ್ನಿಂದ ಸಾಧ್ಯವೇ ಇಲ್ಲ ಎಂದೆನಿಸಿ ಅದನ್ನು ಅಲ್ಲಿಯೇ ಬಿಟ್ಟೆ.

ಮುಂದಿನ ಕೆಲಸ ಕಸ ಗುಡಿಸಿ-ನೆಲ ಒರೆಸೋದು, ಒಂದು ಲೋಟ ಚಹಾ ಬೇಕೆ ಬೇಕು ಎಂದೆನಿಸಿತು, ಸ್ನಾನ ಮಾಡದೆ ಅಡುಗೆ ಮನೆ ಹೊಕ್ಕರೆ ನೀನು ದುರ್ಗಾವತಾರ ಎತ್ತುವೆ ಎಂದು ನೆನಪಾಗಿ ಸುಮ್ಮನಾದೆ. ಸೊಂಟಕ್ಕೆ ಬುದ್ದಿವಾದ ಹೇಳಿ ಒಳ ಮನೆಯ ಪೊರಕೆ ಕೈಯಲ್ಲಿ ಹಿಡಿದು, ತುಸು ಬಾಗಿ ಕಸ ಗುಡಿಸುವಾಗ, ನಾಳೆಯಿಂದ ಕಸ ಹಾಕಲೇ ಬಾರದೆಂದು ತೀರ್ಮಾನಿಸಿದೆ. ಒಂದು ಚಿಕ್ಕ ಪಾತ್ರೆಯಲ್ಲಿ ನೀರು ತುಂಬಿ, ಒರೆಸುವ ಬಟ್ಟೆಯನ್ನು ಅದರಲ್ಲಿ ನೆನೆಸಿ ತೆಗೆದು ನೆಲ ಒರೆಸಲು ಆರಂಭಿಸಿದೆ. ನನ್ನ ಬೆನ್ನು ವಿಕಾರವಾಗಿ ನರಳಲಾರಂಭಿಸಿತ್ತು, ಕಂದಾ ದಿನ ನಿತ್ಯ ನೀನು ಇಷ್ಟು ನೋವನ್ನು ಅನುಭವಿಸಿ ಇಷ್ಟೆಲ್ಲಾ ಕೆಲಸ ಮಾಡುತ್ತೀಯ, ನಾಳೆಯಿಂದ ನಿನ್ನ ಪಾಲಿನ ಅರ್ಧ ಕೆಲಸ ನಾನು ಮಾಡುತ್ತೇನೆ ಆಯ್ತಾ ಅಂದು ಕೊಂಡೆ. ಒಟ್ಟಿನಲ್ಲಿ ಮನೆ ಗುಡಿಸಿ, ಒರೆಸಿ ಮುಗಿದಾಗ ನನಗೆ ನೆಟ್ಟಗೆ ನಿಲ್ಲಲು ಸರಿಯಾಗಿ 3-4 ನಿಮಿಷ ಬೇಕಾಯಿತು, ಸೊಂಟ ಪೂರ್ಣ ಬಾಗಿ ಮಂಥರೆಯನ್ನು ಹೋಲುತ್ತಿತ್ತು. ಅದು ಹೇಗೋ ಮಾಡಿ ಸುಧಾರಿಸಿಕೊಂಡು ನಿಂತರೆ, ಸ್ನಾನಕ್ಕೆ ನೀರು ಬೆಚ್ಚಗೆ ಕಾದು ಕುಳಿತಿತ್ತು.

ಸ್ನಾನ ಮುಗಿಸಿ, ನಮ್ಮ ಬೀದಿಯ ಕೊನೆಯಲ್ಲಿರುವ ಅಮ್ಮನವರ ಗುಡಿಗೆ ಹೋಗಿ, ನಿನ್ನ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಿಸಿದೆ, ನಿನಗೆಂದು 3 ರಕ್ತಗೆಂಪು ಗುಲಾಬಿ ಹೂವು, ಅದರ ಜೊತೆಗೆ ಒಂದು ಮೊಳ ಮಲ್ಲಿಗೆ ಕೊಡುವಂತೆ, ದೇವಸ್ಥಾನದೆದುರಿನ ಹೂಮಾರುವವಳಿಗೆ ಕೇಳಿದೆ, ಅವಳು ನಸು ನಕ್ಕು ನುಲಿಯುತ್ತ ಅಮ್ಮಾವ್ರಿಗಾ ಬುದ್ಧಿ ಎಂದಳು. ಅವಳ ಮಾತಿಗೆ ಏಕಾಏಕಿ ಏನು ಉತ್ತರಿಸ ಬೇಕೆಂದು ತಿಳಿಯದೆ ಸಂಕೋಚದ ಮುದ್ದೆಯಾಗಿದ್ದೆ ನಾನು, ನೀನು ತುಂಬ ನೆನಾಪಗಿದ್ದೆ ಆವಾಗ.

ಮನೆಗೆ ಬಂದವನೇ ಪ್ರಸಾದ, ಹೂವು ದೇವರ ಕೋಣೆ ಸೇರಿಸಿ, ನೇರ ನುಗ್ಗಿದ್ದೆ ಅಡುಗೆ ಮನೆಗೆ. ಈಗ ಏನು ಮಾಡುವುದು, ಮೊದಲು ಒಲೆ ಒರೆಸಿ, ಪಾತ್ರೆ ತೊಳೆದು ಹಾಲು ಕಾಯಿಸ ಬೇಕು. ತಿಂಡಿ ಏನು ಮಾಡುವುದು, ನಿನಗೆ ಪಲಾವ್ ಇಷ್ಟ. ನನಗೆ ಮಾಡಲು ಬರುತ್ತಾ, ನಾನು ಮಾಡಿದರೆ ಅದು ಚೆನ್ನಾಗಿರುತ್ತಾ. ಆಗ ನನಗೆ ನೆನಪಾಗಿದ್ದೇನು ಗೊತ್ತೇನೆ ಶ್ರೀಮತಿ...
"ಭೀಮ ಸೇನ ನಳ ಮಹಾರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹಾನೀಯರಲ್ಲವೇ..."
ಇನ್ನೇಕೆ ತಡ, ಕೆಲಸ ಆರಂಭಿಸಿದೆ, ಒಲೆ ಸ್ವಚ್ಚವಾಗುತ್ತಿದ್ದಂತೆ, ಹಾಲಿಟ್ಟು ಕಾಯಿಸಿ, ಸ್ವಲ್ಪವೇ ಸ್ವಲ್ಪ ನೀರಿಟ್ಟು, ಮುಕ್ಕಾಲು ಭಾಗದಷ್ಟು ಹಾಲು ಸುರಿದು, ಮಿತವಾಗಿ ಟೀ ಪುಡಿ, ಹಿತವಾದಷ್ಟು ಸಕ್ಕರೆ ಬೆರೆಸಿ ಕಾಯಲು ಇಟ್ಟೆ. ಇನ್ನೊಂದೆಡೆ ತರಕಾರಿ ಹೆಚ್ಚಿ, ಅಕ್ಕಿ ಆರಿಸಿ, ಎಲ್ಲ ಮಸಾಲೆ ಹುರಿದಿಟ್ಟು ಕೊಂಡೆ. ಅಷ್ಟರಲ್ಲಾಗಲೇ ಟೀ ತಯಾರಾಗಿತ್ತು, ಆತುರದಲ್ಲಿ ಮಸಿ ಬಟ್ಟೆ ಮರೆತು ನೇರವಾಗಿ ಪಾತ್ರೆಗೆ ಕೈ ಹಾಕಿ, ಕೈ ಸುಟ್ಟಿತು . ಆಗ ನಿನ್ನ ಬಳಿ ಓಡಿ ಬರೋಣವೆಂದು ಕೊಂಡೆ, ದಿನ ನಿತ್ಯ ನೀನು ನೋವನ್ನು ಅನುಭವಿಸುವಾಗ ನಾನು ಇರೋದಿಲ್ಲ ಅಲ್ವ, ನನ್ನ ಬಗ್ಗೆ ನನಗೆ ಬೇಸರವಾಯ್ತು ರಾಣಿ. ಟೀ ಒಂದು ಲೋಟಕ್ಕೆ ಬಗ್ಗಿಸಿ, ಉಳಿದಿದ್ದನ್ನು ಫ್ಲಾಸ್ಕ್ ಗೆ ಹಾಕಿಟ್ಟೆ. ಮಸಾಲೆ ಹುರಿದು, ಹಸಿ ಮೆಣಸು, ಬೆಳ್ಳುಳ್ಳಿ ಮಿಶ್ರಣ ಮಾಡಿ, ರುಬ್ಬಿಟ್ಟು ಕೊಂಡೆ. ಹದವಾದ ಎಣ್ಣೆಯಲ್ಲಿ ಒಗ್ಗರಣೆ ಹಾಕಿ, ಎಲ್ಲ ಸೇರಿಸಿ ಕುಕ್ಕರ್ ಕೂಗಿಸಿದೆ, ಅಷ್ಟರಲ್ಲಿ ಅಡುಗೆ ಮನೆ ಸ್ವಚ್ಚ ಮಾಡಿ, ಪಾತ್ರೆ ಕೂಡ ತೊಳೆದು ಮುಗಿಸಿದೆ.

ಅಡುಗೆ ಮನೆಯಲ್ಲಿ ದಿಗ್ವಿಜಯ ಸಾಧಿಸಿದೆ ಎಂಬಂತೆ ನಿಂತು, ಪಲಾವಿನ ರುಚಿ ನೋಡಿದವನಿಗೆ ದಿಗಿಲು ಬಡಿದಿದ್ದೆಂದರೆ ಉಪ್ಪು ಹಾಕಿಯೇ ಇರಲಿಲ್ಲ. ಮತ್ತೆ ಒಂದು ಲೋಟದಲ್ಲಿ, ಸ್ವಲ್ಪ ನೀರು ತೆಗೆದು ಕೊಂಡು, ಸ್ವಲ್ಪ ಉಪ್ಪನ್ನು ಆ ನೀರಿನಲ್ಲಿ ಬೆರೆಸಿ, ಪಲಾವಿಗೆ ಸೇರಿಸಿ, ಮತ್ತೆ ಒಲೆಯ ಮೇಲಿಟ್ಟೆ. ಪಲಾವ್ ಈಗ ಬಿಸಿ ಬೆಳೆ ಬಾತ್ ಆಗ ಹೊರಟಿತ್ತು. ಇಳಿಸಿ ನೋಡಿದರೆ, ನೀರು ಸ್ವಲ್ಪ ಜಾಸ್ತಿ ಎಂದೆನಿಸಿದರು, ಪರವಾಗಿಲ್ಲ ಚೆನ್ನಾಗಿದೆ ಅಂತ ಸಮಾಧಾನವಾಯಿತು.

ಅಂದ ಹಾಗೆ ನಾನು ಈ ಪತ್ರ ಏಕೆ ಬರೆದಿಟ್ಟೆ ಗೊತ್ತ ಪ್ರಾಣವೇ, ಇವತ್ತು ಪ್ರೇಮಿಗಳ ದಿನ, ನಿನ್ನನ್ನು ಎಬ್ಬಿಸಿ ನಿನಗೆ ಶುಭ ಕೋರೋಣ ಎಂದು ಕೊಂಡರೆ, ಏಕೋ ಮನಸ್ಸಿಗೆ ನಿನ್ನ ನಿದ್ದೆ ಹಾಳು ಮಾಡುವುದು ಇಷ್ಟವಿರಲಿಲ್ಲ. ಪ್ರತಿ ದಿನ ನಾನು ಹೊರಡುವುದರೊಳಗೆ ಎಲ್ಲ ತಯಾರು ಮಾಡಿ ಕೊಡುವ ನಿನಗೆ, ಇವತ್ತಾದರೂ ನೀನು ಏಳುವ ಮುನ್ನ ಎಲ್ಲಾ ತಯಾರು ಮಾಡಿರಬೇಕು ಎಂದು ಬೇಗ ಎದ್ದೆ. ನಿನ್ನನ್ನು ಹೊರಗೆಲ್ಲಾ ಹೋಟೆಲ್ಲಿಗೆ ಕರೆದೊಯ್ದು, ಇನ್ನೆಲ್ಲೋ ಖರೀದಿಗೆ ಕರೆದೊಯ್ದು ವ್ಯಯಿಸುವುದು ನನ್ನಿಂದ ಆಗದ ಮಾತು, ಮತ್ತು ನಿನಗೆ ಅದು ಇಷ್ಟವು ಆಗಲ್ಲ. ನಾನು ನಿನ್ನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎನ್ನುವುದು, ನನ್ನ ಕೈ ಸುಟ್ಟಿತಲ್ಲ ಅಡುಗೆ ಮನೆಯ ಬೆಂಕಿ, ಅದರಷ್ಟೇ ಸತ್ಯ. ಇನ್ನೆಲ್ಲೋ ಸುಖವಾಗಿ ಬೆಳೆದು, ನನ್ನ ಮನೆಯ ನಂದಾದೀಪ ಬೆಳಗಲು ಬಂದ ಬಾಳ ಜ್ಯೋತಿ ನೀನು, ನಿನಗೆ ಅಗತ್ಯ ವಿಚಾರಗಳಲ್ಲಿ ಯಾವುದೇ ಕೊರತೆ ಮಾಡುವುದಿಲ್ಲ, ಆದರೆ ಇರುವುದರೊಳಗೆ ನಾಲ್ಕು ಕಾಸು ನಾಳಿನ ಜೀವನಕ್ಕೆ ಎತ್ತಿಡೋಣ, ನಾಳೆ ಬರುವ ನಮ್ಮ ಕಂದಮ್ಮನ ಬದುಕನ್ನು ಕಟ್ಟಲು ಆ ಸೊತ್ತನ್ನು ಬಳಸೋಣ, ಏನಂತೀಯ, ನನಗೆ ಗೊತ್ತು ನೀನು ನನ್ನ ಯಾವ ಮಾತಿಗೂ ಇಲ್ಲ ಎಂದವಳಲ್ಲ, ನೀನೀಗ ನನ್ನೆದುರು ನಿಂತಿದ್ದರೆ ಹಾಗೆ ನನ್ನ ಭುಜಕ್ಕೊರಗುತ್ತಿದ್ದೆ, ನಿನ್ನ ಕಣ್ಣೀರು ನನ್ನ ಎದೆಯ ಮೇಲೆ ಇಳಿಯುತ್ತಿತ್ತು.

ನಿನಗೆಂದು ಟೀ ತಯಾರಿದೆ, ನಿನ್ನಿಷ್ಟದ ಪಲಾವ್ ಮಾಡಿಟ್ಟಿದ್ದೇನೆ, ದೇವರ ಕೋಣೆಯಲ್ಲಿ ಸಿಂಧೂರವಿದೆ, ಅದರ ಪಕ್ಕದಲ್ಲಿ ಹೂವಿದೆ, ಮೂರು ಗುಲಾಬಿ ಮುಡಿದು, ಅದರ ಸುತ್ತ ಮಲ್ಲಿಗೆ ಏರಿಸಿ ಮುಡಿದು ಕೊಂಡು ಬಿಡು, ತಿಳಿ ಕೇಸರಿ ಬಣ್ಣದ ಸೀರೆ ಉಟ್ಟು ಸಿದ್ಧಳಾಗಿರು, ಅದರಲ್ಲಿ ನೀನು ಬಹಳ ಮುದ್ದಾಗಿ ಕಾಣುವೆ, ಇಬ್ಬರು ಕೈ ಹಿಡಿದು, ನವ ಜೋಡಿಯಂತೆ ಸಂಜೆ ಒಂದು ಸುತ್ತು ವಿಹರಿಸೋಣ, ಬದುಕಿಗಾಗಿ ಅದಿನ್ನೆಷ್ಟೋ ಕನಸುಗಳಿವೆ ನನ್ನ ಬಳಿ, ಸಂಜೆ ಎಲ್ಲಾ ಹೇಳಿ ಕೊಳ್ಳುತ್ತೇನೆ, ಮುದ್ದಾದ ಒಂದು ಬದುಕು ಕಟ್ಟಿ ಕೊಳ್ಳೋಣ, ಪ್ರೀತಿಯಿಂದ ಎಂದಿನಂತೆ ಜೊತೆ ನಡೆಯಲು ಸಿದ್ಧಳಾಗಿರು, ನಾವು ಈ ಬದುಕಿನಲ್ಲಿ ಕ್ರಮಿಸ ಬೇಕಾದ ದೂರ ಇನ್ನೂ ಬಹಳವಿದೆ.

ಇಂತಿ,
- ಕೇವಲ ನಿನ್ನವನು

ಮಂಗಳವಾರ, ಜನವರಿ 27, 2009

ಅಂದು ದೀಪಾವಳಿಯ ಪ್ರಣತಿ ದೇದೀಪ್ಯಮಾನವಾಗಿ ಜ್ವಲಿಸಲಿ

ಮನೆಯ ಹೊರಗಿನ ಕಿಟಕಿಯ ಮೊದಲ ಸರಳನ್ನು ಕೈ ಚಾಚಿ ಹಿಡಿದು ಆಚೆ ನೋಡುತ್ತಾ ನಿಂತವನಿಗೆ ಎದುರು ಮನೆಯ ಹೊಸ್ತಿಲಿನ ಬಳಿಯಿಟ್ಟಿದ್ದ ಪುಟ್ಟ ಹಣತೆ ಕೂಗಿ ಕರೆದಂತಿತ್ತು. ಅದು ಶುಕ್ರವಾರದ ರಾತ್ರಿ ಮನೆಯೆದುರು ಗುಡಿಸಿ, ನೀರು ಚೆಲ್ಲಿ, ರಂಗವಲ್ಲಿಯನಿಟ್ಟು, ಜ್ಯೋತಿ ಬೆಳಗಿಸಿದ್ದರು. ಈ ದೀಪದ ಜ್ಯೋತಿ ನನ್ನನ್ನು ಕೆಲವಾರು ವರ್ಷಗಳಷ್ಟು ಹಿಂದಕ್ಕೆ ತೇಲಿಸಿ ಕೊಂಡು ಹೋಯಿತು ನೆನಪ ನಾವೆಯಲ್ಲಿ, ಮನಸ್ಸು ತನ್ನ ನೆರಳನ್ನೇ ಬೆನ್ನಟ್ಟಿ ಓಡುವ ಪುಟ್ಟ ಮಗುವಿನಂತೆ ಓಡುತ್ತಿತ್ತು. ಆ ದಿನ ಸಂಜೆ 6:15 ರ ಸುಮಾರಿಗೆ ಅಮ್ಮ ದರಗು(ಒಣಗಿದ ಎಲೆ) ಗುಡಿಸಲು ಹೋದ ಸಣ್ಣ ವಿರಾಮದಲ್ಲಿ ನನಗೆ ಆತುರಾತುರವಾಗಿ ನೀನು ಫೋನಾಯಿಸಿದ್ದೆ. ಮನೆಯ ಫೋನು ರಿಂಗಣಿಸಿದ ತಕ್ಷಣ ಅಮ್ಮ "ಅದು ನಿನಗೇ ಕಣೋ, ಒಂದು ನಿಮಿಷ ಕೊಡುತ್ತೀನಿ, ಮತ್ತೆ ನನ್ನ ಧ್ವನಿ ಕೇಳಿದರೆ ಹಾಗೆ ಫೋನ್ ಇಟ್ಟೇ ಬಿಡುತ್ತಾರೆ ನಿನ್ನ ಗೆಳೆಯರು" ಎನ್ನುತ್ತಾ ಅಡುಗೆ ಮನೆಯಿಂದ ಸ್ಥಿರ ದೂರವಾಣಿಯ ಕಡೆಗೆ ನಡೆದರು. ನನಗೋ ಶಸ್ತ್ರಚಿಕಿತ್ಸೆಯ ಹೆಸರಿನಲ್ಲಿ ವೈದ್ಯರು ಹೊಟ್ಟೆಯನ್ನು ಸಿಗಿದು ಅನಾಮತ್ತಾಗಿ 21 ಹೊಲಿಗೆ ಹಾಕಿ ಮಲಗಿಸಿದ್ದರು, ನಾನು ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದರು ಫೋನಿನ ರಿಂಗಣ ತುಂಬ ಹಿತವಾಗಿದೆ ಎಂಬಂತೆ ಕಿವಿಗೊಟ್ಟು ಕೇಳಿದ್ದು ಸುಳ್ಳಲ್ಲ. ಫೋನನ್ನು ಕೈಗಿತ್ತ ಅಮ್ಮ "ಮಾತನಾಡಿ ಫೋನನ್ನು ಇಲ್ಲೇ ಇಟ್ಟು ಬಿಡು" ಎಂದಷ್ಟೇ ಹೇಳಿ ಒಳಗೆ ನಡೆದರು. ಫೋನನ್ನು ಕಿವಿಗಿಟ್ಟು "ಹಲೋ" ಅಂದರೆ, ಆ ಕಡೆಯಿಂದ ನೀನು "ಸದ್ಯ ನೀನೇ ಫೋನ್ ಎತ್ಕೊಂಡ್ಯಲ್ಲ, ದೀಪಾವಳಿ ಹಬ್ಬದ ಶುಭಾಶಯಗಳು, ಅಮ್ಮ ದರಗು ಗುಡಿಸಲಿಕ್ಕೆ ಹೋದರು, ಅವರು ಕಡೆ ಹೋಗುತ್ತಿದ್ದಂತೆ ಫೋನು ಮಾಡಿದೆ, ಬೆಳಿಗ್ಗೆಯಿಂದ ಅಪ್ಪ ಫೋನ್ ಹತ್ರಾನೇ ಇದ್ರೂ ಹಾಗಾಗಿ ಫೋನ್ ಮಾಡಲಿಕ್ಕಾಗಿರಲಿಲ್ಲ, ಹಾಂ! ಒಮ್ಮೆ ಮಾಡಿದೆ, ನಿಮ್ಮ ಅಮ್ಮ ಎತ್ತಿದರು ಮತ್ತೆ ಇಟ್ಬಿಟ್ಟೆ, ನನಗೆ ಭಯ ಆಯ್ತು. ನಿನಗೆ ಗೊತ್ತ ನೆನ್ನೆ ರಾತ್ರಿ ಅಪ್ಪ ಬರೋದು ತಡವಾಗಿತ್ತು, ಚಂಪಾಳಿಗೆ ವಿಪರೀತ ಹೊಟ್ಟೆ ನೋವು ಶುರುವಾಗಿ ಬಿಟ್ಟಿತ್ತು, ನಂಗೆ ಮತ್ತು ಅಮ್ಮನಿಗೆ ಏನು ಮಾಡ ಬೇಕು ಗೊತ್ತೇ ಆಗಲಿಲ್ಲ, ಕೊನೆಗೆ ಒಂಬತ್ತು ಗಂಟೆಗೆ ಚಂಪಾ ಕರು ಹಾಕಿದ್ಳು, ಗಂಡು ಕರು ಕಣೋ, ಅಮ್ಮ ಕೇಳ್ತಿದ್ರು ಏನು ಹೆಸರು ಇಡೋಣ ಅಂತ, ನಾನು ನಿನ್ನ ಹೆಸರು ಹೇಳೋಣ ಅಂದ್ಕೊಂಡೆ. ಇವತ್ತು ಸಂಜೆ ಒಂದು ಮೈನಾ ಹಕ್ಕಿ ಬಂದು, ನಮ್ಮ ಮನೆಯೆದುರಿನ ಗಿಡದಲ್ಲಿ ಕುಳಿತಿತ್ತು. ಜೋಡಿ ಮೈನಾ ನೋಡಿದರೆ ತುಂಬ ಒಳ್ಳೆಯದಂತೆ ಹಾಗಾಗಿ ಇನ್ನೊಂದು ಹುಡುಕುತ್ತಿದ್ದೆ, ಅಷ್ಟರಲ್ಲಿ ಇನ್ನೊಂದು ಬಂದು ಅದರ ಪಕ್ಕದಲ್ಲಿ ಕುಳಿತುಕೊಳ್ತು, ನೀನು ಬಂದು ನನ್ನ ಬಳಿ ನಿಂತು ಕೊಳ್ತೀಯಲ್ಲ ಹಾಗೆ. ನನಗೆ ಅದೆಷ್ಟು ಖುಷಿಯಾಯ್ತು ಗೊತ್ತ ಅವನ್ನು ನೋಡಿ. ಇವತ್ತು ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿದ್ದೆ, ನೀನು ಬೇಗ ಹುಶಾರಾಗಲಿ ಅಂತ ದೇವರಲ್ಲಿ ಕೇಳ್ಕೊಂಡು ಪೂಜೆ ಮಾಡಿಸಿದೆ, ಆದಷ್ಟು ಬೇಗ ನಾನು ನಿನ್ನ ಹೆಂಡತಿಯಾಗುವಂತಾಗಲಿ ಅಂತ ಬೇಡ್ಕೊಂಡೆ. ಆಮೇಲೆ ನಾನು ನಿನ್ನ ಪಕ್ಕದಲ್ಲೇ ಇರಬಹುದಲ್ವಾ, ನಿನ್ನ ನಲಿವಿಗೂ-ನೋವಿಗೂ ಆಸರೆಯಾಗಿ. ನೀನಿಲ್ದೆ ಹಬ್ಬ ಮಾಡೋದು ತುಂಬ ಬೇಜಾರು ಕಣೋ, ಅಪ್ಪ-ಅಮ್ಮ ಸಿಟ್ಟು ಮಾಡ್ಕೊತಾರೆ ಅಂತ ಇವೆಲ್ಲ ಮಾಡಬೇಕಷ್ಟೇ. ನಮ್ಮ ಮದುವೆಯಾದ ಮೇಲೆ ನೀನು ಬಾಗಿಲಿಗೆ ಮಾವಿನ ತೋರಣ ಕಟ್ಟು, ನಾನು ಬಾಗಿಲು ಸಾರಿಸಿ ರಂಗೋಲಿ ಹಾಕ್ತೀನಿ, ನಾನು ದೇವರ ಸಾಮಗ್ರಿ ತೊಳೆಯುತ್ತೇನೆ, ನೀನು ದೇವರ ಕೋಣೆ ಸ್ವಚ್ಚ ಮಾಡು, ಪೂಜೆ ಒಟ್ಟಿಗೆ ಮಾಡೋಣ. ಅಡುಗೆಗೆ ಸಹಾಯ ಮಾಡ್ಬೇಕು, ನಾನು ಏನು ಸಿಹಿ ಮಾಡಿದ್ರು ಸುಮ್ಮನೆ ತಿನ್ನಬೇಕು, ಅಣಕಿಸುವಂತಿಲ್ಲ. ನನಗೆ ನಿನ್ನಷ್ಟು ಚೆನ್ನಾಗಿ ಅಡುಗೆ ಮಾಡಲಿಕ್ಕೆ ಬರಲ್ಲ ಕಣೋ. ಸರಿ ಸರಿ ಹಿತ್ತಲಲ್ಲಿ ಸದ್ದಾಗುತ್ತಿದೆ, ಅಮ್ಮ ಬಂದರು ಅನ್ಸುತ್ತೆ, ಬಾಗಿಲಿಗೆ ದೀಪ ಇಡಲು ಹೇಳಿದ್ರು, ನಿನ್ನನ್ನು ತುಂಬ ಮಿಸ್ ಮಾಡ್ಕೊಳ್ತಿದೀನಿ ಕಣೋ ಗೂಬೆ, ನನ್ನ ಜೀವ ಹೋಗುವಷ್ಟು. ಸರಿ ಅಮ್ಮ ಬಂದೇ ಬಿಟ್ರು, ನಾಳೆ ಫೋನ್ ಮಾಡ್ತೀನಿ", ಇಷ್ಟು ಹೇಳಿ ನೀನು ಫೋನ್ ಇಟ್ಟಿದ್ದೆ, ನಾನು ಏನು ಮಾತನಾಡದೇ, ಸುಮ್ಮನೆ ನಿನ್ನ ಮಾತುಗಳಿಗೆ ಕಿವಿಯಾಗಿದ್ದೆ ತುಂಬು ಪ್ರೀತಿಯಿಂದ. ನನಗೆಂದು ಕೈಯಲ್ಲಿ ಒಂದು ಲೋಟ ಹಾಲು ಹಿಡಿದು ಬಂದ ಅಮ್ಮ "ನಾನು ಫೋನೆತ್ತಿದರೆ ಅದೇಕೆ ಇಟ್ಟು ಬಿಡುತ್ತಾರೋ ಪುಣ್ಯಾತ್ಮರು" ಅನ್ನುತ್ತಾ ಸ್ವಗತ ಹಾಡಿ ಫೋನನ್ನು ಸ್ವಸ್ಥಾನಕ್ಕೆ ಸೇರಿಸಿದ್ದರು. ನಾನು ಮಲಗಿದ್ದ ಮಂಚ ಕಿಟಕಿಯ ಸಮೀಪದಲ್ಲೇ ಇದ್ದಿದ್ದರಿಂದ ಹೊರಗೆ ಕಣ್ಣು ಹಾಯಿಸಿದೆ, ಕಿಟಕಿಯ ಹೊರಬಾಗದಲ್ಲಿ ಅಮ್ಮ ಹಚ್ಚಿಟ್ಟಿದ್ದ ದೀಪ ಗಾಳಿಯ ಲಯಕ್ಕೆಂಬಂತೆ ನರ್ತಿಸುತ್ತಾ ಬೆಳಗುತ್ತಿತ್ತು, ಸಣ್ಣ ಚಿಟ್ಟೆಯಂತ ಹುಳುಗಳು ದೀಪವನ್ನು ಅಣಕಿಸಲೆಂಬಂತೆ ಹಾರಿ, ಮುತ್ತಿಡುವ ಭರದಲ್ಲಿ ಸುಟ್ಟು ಧರೆಗೆ ಉರುಳುತ್ತಿದ್ದವು. ನಾನು ನಿನ್ನ ಮಾತುಗಳನ್ನು ನೆನಪಿಸಿಕೊಂಡು ಕಣ್ಣಾಲಿಗಳಲ್ಲಿ ಕಂಡು ಕಾಣದಂತೆ ಕಣ್ಣೀರು ತುಂಬಿ ಕೊಂಡಿದ್ದೆ. ಹುಡುಗಿ ನಿನಗೆ ಗೊತ್ತಿರಲಿಕ್ಕಿಲ್ಲ ಇನ್ನೇನು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ನನ್ನನ್ನು ಸಾಗಿಸುವಾಗ ಅಮ್ಮನಿಗಿಂತ ಹೆಚ್ಚು ನೆನಪಾದವಳು ನೀನು, ನಿನ್ನ ಮುಖ ಒಮ್ಮೆ ನೋಡಬೇಕು ಎಂದು ತೀವ್ರವಾಗಿ ಹಂಬಲಿಸಿದ್ದೆ ನಾನು. ಇದನ್ನೆಲ್ಲಾ ಯೋಚಿಸಿ ಕನ್ನಡಕ ತೆಗೆದಿರಿಸಿ, ಕಣ್ಣು ಒರೆಸಿಕೊಂಡು ಹೊರಗೆ ದಿಟ್ಟಿಸಿದವನಿಗೆ ಕಂಡಿದ್ದು ದೀಪಾಲಂಕಾರದಲ್ಲಿ ಸಿಂಗಾರಗೊಂಡಿದ್ದ ನಮ್ಮ ಬೀದಿ, ಪಟಾಕಿ ಸಿಡಿಸುತ್ತಿದ್ದ ಮಕ್ಕಳು, ಅವರ ಜೊತೆಗೆ ನಲಿಯುತ್ತಿದ್ದ ಹಿರಿಯರು. ನಮ್ಮ ಮನೆಗೆ ಪಟಾಕಿ ವರ್ಜ್ಯ, ಪಟಾಕಿ ಸಿಡಿಸುವುದು ಪರಿಸರ ಮಾಲಿನ್ಯಕ್ಕೆ ಕಾರಣ ಎನ್ನುತ್ತಿದ್ದ ಅಮ್ಮ, ಕೇವಲ ದೀಪ ಬೆಳಗಿದರೆ ಸಾಕು ಎಂದೇ ನನಗೆ ಬಾಲ್ಯದಿಂದ ಹೇಳುತ್ತಾ ಬಂದಿದ್ದಳು. ಅಮ್ಮ ಕ್ರಾಂತಿಕಾರಿ ಅಲ್ಲ, ಬಹಳ ದೊಡ್ಡ ಪರಿಸರ ಪ್ರೇಮಿಯಂತೆ ಮಾತನಾಡಲು ನಿಲ್ಲುವವಳು ಅಲ್ಲ, ಬೇರೆಯವರಿಗೆ ಅದು ಸರಿಯೆನ್ನಿಸಿದರೆ ಮಾಡಲಿ, ನಾವು ಮಾಡುವುದು ಬೇಡ ಎನ್ನುವ ಕಠೋರ ನಿಲುವಿನವಳು. ಆಕೆ ಬೇರೆಯವರು ತಾನು ಹೇಳಿದಂತೆ ಕೇಳಬೇಕೆಂದು ಎಂದಿಗೂ ನಿರೀಕ್ಷಿಸಿದವಳಲ್ಲ ಮತ್ತು ನಿರೀಕ್ಷಿಸುವುದು ಇಲ್ಲ. ಆದರೆ ನೀನು ಮನೆಗೆ ಚಿಕ್ಕವಳು, ಹಾಗಾಗಿ ನಿನಗೆ ಒಂದು ಹಿಡಿ ಮುದ್ದು ಜಾಸ್ತಿಯೇ, ನಿನಗೆ ಪಟಾಕಿ ಇಷ್ಟ, ನೀನು ನನಗೆ ಹೇಳ್ತಾ ಇದ್ದಿದ್ದು ಹೀಗೆ ಅಲ್ವ "ಮುಂದೆ ನೀನು ನನಗೆ ಪಟಾಕಿ ತಂದು ಕೊಡು, ನೀನು ಹೊಡೆಯೋದು ಬೇಡ, ಎರಡೇ-ಎರಡು ಪಟಾಕಿ ನಾನು ಹೊಡೆಯುತ್ತೀನಿ, ನಾನು ಧೈರ್ಯವಂತೆ ಕಣೋ, ಲಕ್ಷ್ಮಿ ಪಟಾಕಿಯೆಲ್ಲ ಹೊಡಿತೀನಿ. ನೀನು ಬೇಡ ಅನ್ನಬಾರದು ಆಯ್ತಾ, ಅನ್ನಲ್ಲ ಅಲ್ವ? ಹೇಳು, ಬೇಡ ಅನ್ನಲ್ಲ ಅಲ್ವ? " ಹೀಗೆನ್ನುತ್ತ ದುಂಬಾಲು ಬೀಳುತ್ತಿದ್ದೆ. ನಾನು ಬೇಕೆಂದೇ ನಿನಗೆ ಕಾಡಿಸಿ, ಕೊನೆಗೆ "ಬೇಡ ಅನ್ನಲ್ಲ ಕಣೋ" ಅಂದರೆ, ನೀನು "ಬೇಡ ಅಂದರು ನಾನು ಹೊಡಿತೀನಪ್ಪ" ಎಂದು ನನಗೆ ರೇಗಿಸಿ, ಮತ್ತೆ "ಹೀಗೆಂದೇ ಅಂತ ಬೇಜಾರಾಯ್ತೇನೋ?" ಅಂತ ಕೇಳುತ್ತಿದ್ದೆ, ನಿನ್ನ ಮಾತಿಗೆ ನಾನು ನಗುತ್ತಿದ್ದೆ, ಆಗ ನೀನು ನನ್ನೆದುರು ನಾಚಿ ನಿಲ್ಲುತ್ತಿದ್ದ ಮೌನ ಗೌರಿ.
"ಹೀಗೆ ನೀನಿರದ ಹೊತ್ತಲ್ಲಿ, ನೀನಿದ್ದಾಗಿನ ನಿನ್ನ ನೆನಪುಗಳು ಬಂದು ಕಾಡುತಿವೆ, ನನ್ನೆದೆಯ ಚುಚ್ಚುತಿವೆ. ನಾನು ನರಳುತ್ತೇನೆ, ನೋವ ದನಿಗೆ ಕೊರಳಾಗುತ್ತೇನೆ, ಮತ್ತೆ ನೆನಪ ಪುಟಗಳ ಮಡಿಕೆಗೆ ಮರಳುತ್ತೇನೆ, ಮತ್ತಲ್ಲೇ ಹೊರಳಾಡುತ್ತೇನೆ, ನಾಲಿಗೆ ಒಣಗುತ್ತದೆ, ಪುಟ ತಿರುವಿ ಹಾಕಲು ಅಲ್ಲಿ ಈಗ ತೇವವು ಇಲ್ಲ"
ಈಗ ನೋಡು ಹುಡುಗಿ, ನಾವಿಬ್ಬರೂ ಒಟ್ಟಾಗಿ ಆಚರಿಸುವ ಯಾವ ದೀಪಾವಳಿಯು ಬರುವುದಿಲ್ಲ ಎಂದು ಯೋಚಿಸಿದಾಗ ನನ್ನ ಆಂತರ್ಯ ನಡುಗುತ್ತದೆ, ದನಿ ಅತೀವವಾಗಿ ಕಂಪಿಸುತ್ತದೆ. ಕಿಟಕಿಯ ಮೊದಲ ಸರಳು ಹಿಡಿದು ನಿಂತವನು, ಸೋತು ಕುಸಿಯುತ್ತೇನೆ, ಕೈ ಕೊನೆಯ ಸರಳನ್ನು ತಲುಪುತ್ತದೆ. ಉರಿಯುತ್ತಿರುವ ಎದುರು ಮನೆಯ ಹಣತೆ ನಕ್ಕಂತಾಗುತ್ತದೆ. ನಾನು ಅದನ್ನು ನೋಡಲಾಗದೆ ಕಣ್ಣು ಮುಚ್ಚುತ್ತೇನೆ, ಮತ್ತೆ ನೀನು ನೆನಪಾಗುತ್ತೀಯ. ಅವಳಿರುವಾಗ ನಾವು ಹೇಗೆ ಇರಲು ಸಾಧ್ಯ ಎಂದು ಮುನಿದು ಕಂಬನಿಗಳು ಧರಣಿ ಮಾಡಲೆಂಬಂತೆ ಮೆರವಣಿಗೆ ಹೊರಡುತ್ತವೆ. ನಾನು ಅವನ್ನು ತಡೆಯ ಹೊರಡುತ್ತೇನೆ, ಅವುಗಳ ಹರಿವು ಇನ್ನು ಜೋರಾಗುತ್ತದೆ, ನಾನು ತಡೆಯಲೆತ್ನಿಸಿದಷ್ಟು. ಬರುವ ದೀಪಾವಳಿ ನಿನಗೆ ದಾಂಪತ್ಯದ ಹೊಸ ಹಬ್ಬವಾಗಬಹುದು, ಅಲ್ಲಿ ನಮ್ಮ ಪ್ರೀತಿಯ ನೆನಪಿಗೊಂದು ಹಣತೆ ಹಚ್ಚಿ, ಅದಕ್ಕೆ ನಾನು-ನೀನು ಎಂದಷ್ಟೇ ಹೆಸರಿಡು. ದೀಪ ಬೆಳಗಿ ಬಿಡಲಿ, ನೆನಪು ಕರಗುವ ತನಕ, ಜೊತೆಗೆ ನನ್ನ ಈ ಉಸಿರು ನಿಲ್ಲುವ ತನಕ.

ಬುಧವಾರ, ಜನವರಿ 14, 2009

ನಾನು, ಅವಳು ಮತ್ತು ಪ್ರೀತಿ

ಪಿಸು ಮಾತು - ೧

ಪ್ರೀತಿಯ ಅವಳೇ,
"ಒಮ್ಮೆ ಗತಿಸಿದ ಸಮಯ ಮತ್ತೆ ಬಾರದು
ಪ್ರೀತಿ ಸಂದೇಶ ಮುಟ್ಟಿಸುವ ಹೊಣೆ ನನ್ನದು
ಸ್ವೀಕಾರ-ತಿರಸ್ಕಾರದ ನಿರ್ಧಾರ ನಿನ್ನದೂ
ಪ್ರೀತಿ-ಪ್ರೇಮದ ವಿಚಾರದಲ್ಲಿ ಒತ್ತಾಯ ಸಲ್ಲದು"
ಈ ಸಾಲುಗಳಿಗೆ ಸರಿಯಾಗಿ ಎಂಟು ವರ್ಷ ತುಂಬಿದೆ, ನಿನ್ನಲ್ಲಿ ಪ್ರೀತಿ ನಿವೇದನೆ ಮಾಡಿ ಮನೆಗೆ ಬಂದ ದಿನ ಮನಸ್ಸಿಗೆ ತೋಚಿದಂತೆ ಗೀಚಿಟ್ಟ ಸಾಲುಗಳಿವು, ನಾನು ನಿನ್ನಲ್ಲಿ ನನ್ನ ಭಾವನೆಯನ್ನು ಹೇಳಿಕೊಂಡು ನೆನ್ನೆಗೆ ಅಂದರೆ ಜನವರಿ ೧೨ಕ್ಕೆ ಎಂಟು ವರ್ಷ ತುಂಬಿದೆ, ನಿನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡವನು ನಿನ್ನ ಮುಖವನ್ನೂ ನೋಡಲಾಗದೆ ಹಾಗು ನಿನ್ನ ಉತ್ತರಕ್ಕೂ ಕಾಯದೆ ಅಲ್ಲಿಂದ ಕಾಲ್ಕಿತ್ತಿದ್ದೆ, ನಂತರ ನೀನು ನನ್ನ ಅಕ್ಕನಂತಹ ಗೆಳತಿಯ ಬಳಿ, ಇವನು ಹೀಗೆ ಕೇಳ್ತಾನೆ ಅಂತ ನಿರೀಕ್ಷಿಸಿಯೇ ಇರಲಿಲ್ಲ ಅಂತ ಹೇಳಿದೆ ಎಂದು ಗೊತ್ತಾದಾಗ, ನಿನ್ನ ಪ್ರೀತಿ ಇಲ್ಲದಿದ್ದರೂ ಬೇಡ ಆದರೆ ನಿನ್ನನ್ನು ನೋಯಿಸಬಾರದಿತ್ತು ಅನ್ನೋ ಉದ್ದೇಶದಿಂದ ಎಂಟು ವರ್ಷಗಳ ಹಿಂದೆ ಸಂಕ್ರಾಂತಿಯ ಹಿಂದಿನ ದಿನ ಇದೆ ರೀತಿ ಬರೆಯಲು ಕುಳಿತಿದ್ದೆ.

ಅದೊಂದು ಕ್ಷಮೆ ಕೋರಿ ಬರೆದ ಪತ್ರ. ಬರೆವ ಮುನ್ನ ಒಳ ಕೋಣೆಯಲ್ಲಿ ಮಲಗಿದ್ದ ಅಜ್ಜನ ಬಳಿ ಕೇಳಿದ್ದೆ ಸಂಕ್ರಾಂತಿ ದಿನ ನಾವು ಏನೇ ಅಂದುಕೊಂಡರು ಅದು ಆಗುತ್ತಾ ಅಂತ, ಅಜ್ಜ ಹೌದೆಂಬಂತೆ ತಲೆಯಾಡಿಸಿದ್ದರು, ಬಹುಶಃ ನಾನು ಬರೆಯುತ್ತಿದ್ದ ವಿಚಾರ ನನ್ನಜ್ಜನಿಗೆ ಗೊತ್ತಾಗಿದ್ದಿದ್ದರೆ ಅಜ್ಜನ ಕೈಯಲ್ಲಿದ್ದ ಕೋಲು ಪುಡಿಯಾಗಿ ಇವತ್ತಿಗೆ ಎಂಟು ವರ್ಷಗಳಾಗಿರುತ್ತಿತ್ತು.

ಆಮೇಲೆ ನಾನು ಆ ಪತ್ರ ನಿನ್ನ ಕೈಗಿತ್ತು ನಿನ್ನ ಕ್ಷಮಾಪಣೆ ಕೇಳಿದ್ದು, ಆಮೇಲೆ ನಾನು ಸಹ ನಿನ್ನನ್ನು ಪ್ರೀತಿಸ್ತಿದ್ದೀನಿ ಕಣೋ ಅಂತ ನೀನು ಹೇಳಿದ್ದು, ಪ್ರತಿ ಕ್ಷಣ ಬದುಕಿನ ಬಗ್ಗೆ ನೂರಾರು ಕನಸು ಹೆಣೆದಿದ್ದು, ನೀನು ಊಟ ಮಾಡದೆ ನಾನು ಮಾಡೋದಿಲ್ಲ ಅಂತ ಕಣ್ಣೀರಾಗಿದ್ದು, ಮನಸ್ಸು ಹೇಳಿದಾಗೆಲ್ಲ ಒಂದೊಂದು ಪತ್ರ ಬರೆದು ನಿನ್ನ ಕೈಸೇರಿಸಿದ್ದು, ನೀನು ಬರೆದ ಪತ್ರವನ್ನು ಎದೆಗೊತ್ತಿಕೊಂಡು ನನ್ನ ಕೋಣೆ ಕತ್ತಲಾಗಿಸಿಕೊಂಡು ನಿನ್ನ ನೆನಪಿನಲ್ಲಿ ನಾನು ರಾತ್ರಿ ಕಳೆದಿದ್ದು. ಎಂತೆಂತಹ ಅಮೂಲ್ಯ ದಿನಗಳಲ್ಲವೇ ಅವುಗಳು.

ನಮ್ಮಿಬ್ಬರ ಪ್ರೀತಿಯ ಮೊದಲ ಭೇಟಿ ಆ ತಾಲ್ಲೂಕ್ ಕಚೇರಿ ಬಸ್ ನಿಲ್ಧಾಣದ ಬಳಿ, ಅವತ್ತು ನೀನು ಮಲ್ಲಿಗೆ ಮುಡಿದಿದ್ದೆ, ಅದೆಷ್ಟು ಮುದ್ದಾಗಿ ಕಾಣಿಸುತ್ತಿದ್ದೆ ಗೊತ್ತ. ಆದರೆ ಈಗ ನೋಡು ಆ ಬಸ್ ನಿಲ್ಧಾಣದಲ್ಲಿ ನೀನಿಲ್ಲ, ಎದುರಿನ ಹೂವಿನಂಗಡಿಯವನು ನನ್ನೆಡೆಗೆ ನೋಡಿದರೆ ಅವನು ನನ್ನನ್ನು ಅಪಹಾಸ್ಯ ಮಾಡುತ್ತಿದ್ದಾನೇನೋ ಎಂದೆನಿಸುತ್ತದೆ. ಅಲ್ಲೆಲ್ಲಾ ನಿನ್ನನ್ನು ಹುಡುಕಾಡಿ ಸೋಲುತ್ತೇನೆ, ಕಣ್ಣೀರು ತುಂಬಿ ನಿಲ್ಲುತ್ತೇನೆ. ನನಗೆ ನೀನು ಹೇಳುತ್ತಿದ್ದುದು ನೆನಪಿದೆ "ಹುಡುಗರು ಅಳಬಾರದು ಕಣೋ, ಅದು ಹೇಡಿಗಳ ಲಕ್ಷಣ", ಕಣ್ಣೀರಿಗೆ ಲಿಂಗ-ಭೇಧ ಗೊತ್ತಿಲ್ಲ ಕಣೇ ಹುಡುಗಿ, ಸುಮ್ಮನೆ ಸುರಿಯುತ್ತೆ ಮುಂಗಾರಿನ ಮಳೆಯಂತೆ, ಕಣ್ಣೀರು ಬರಿಯ ಅಸಹಾಯಕತೆಯನ್ನು ತೋರುತ್ತೆ ಅದು ಯಾವುದೇ ಸಮಸ್ಯೆಗೆ ಪರಿಹಾರ ಹೇಳೋದಿಲ್ಲ ಅನ್ನೋದು ನನಗೂ ಚೆನ್ನಾಗಿ ಗೊತ್ತು, ಏನು ಮಾಡಲಿ ಹೇಳು ಮನಸ್ಸು ಕೇಳೋದಿಲ್ಲ, ನಮ್ಮ ಪ್ರೀತಿ ಪಾತ್ರರಿಗೆ ಮಾತ್ರ ನಾವು ಕಣ್ಣೀರು ಸುರಿಸುತ್ತೇವೆ, ಎಲ್ಲರಿಗು ನೀಡೋದಕ್ಕೆ ಇದು ಪುರಪಂಚಾಯತಿಯ ನಲ್ಲಿ ನೀರಲ್ಲ ಕಣೇ. ಇದನ್ನು ನೀನು ಹೇಡಿತನವೆಂದು ಕೊಂಡೆ ಎಂದರೆ ಅದು ಬದುಕಿನ ಬಹು ದೊಡ್ಡ ದುರಂತ.

ಅಮ್ಮ ನನಗೆ ಯಾವತ್ತು ಜಾತಿ ಎಂದರೆ ಏನು ಅಂತ ಹೇಳಿರಲೇ ಇಲ್ಲ ನೋಡು, ಹಾಗಾಗಿ ನನಗೆ ಗೊತ್ತಿರಲಿಲ್ಲ ನಿನ್ನನ್ನು ಮದುವೆಯಾಗಲು ನಾನು ನಿಮ್ಮ ಜಾತಿಯವನಾಗಿರಬೇಕೆಂದು. ಹುಡುಗಿ ನಿನಗೆ ಗೊತ್ತ ನಿನ್ನನ್ನು ಪ್ರೀತಿಸುವ ಮೊದಲಿಂದ ಹಾಗು ಪ್ರೀತಿಸಿದ ಮೇಲೆ ಸಹ ನನ್ನ ಜಾತಿ ಬದಲಾಗಲಿಲ್ಲ, ನನ್ನದು ಮೊದಲಿಂದ ಒಂದೇ ಜಾತಿ ಕಣೇ. ಮನೆಯಲ್ಲಿ ಒಪ್ಪೋದಿಲ್ಲ ಕಣೋ ಅಂತ ನೀನು ಗೋಗರೆದಾಗ ನನಗೇನು ಅನ್ನಿಸಿತ್ತು ಗೊತ್ತ ಗೆಳತಿ. ಈ ಕ್ಷಣದಲ್ಲಿ ನನ್ನ ಜಾತಿ ಬದಲಿಸಿ ಕೊಳ್ಳುವಂತಿದ್ದರೆ, ರೂಪ ಹೆಚ್ಚಿಸಿಕೊಳ್ಳುವಂತಿದ್ದರೆ, ಇವೆಲ್ಲ ಅಸಾಧ್ಯದ ಪರಮ ಶಿಖರಗಳು. ಓಡಿ ಹೋಗೋಣ ಅಂತ ಕೇಳಲು ನನ್ನ ಆತ್ಮ ಸಾಕ್ಷಿ ಒಪ್ಪಲಿಲ್ಲ, ಎಲ್ಲರೆದುರು ನಿನ್ನನ್ನು ಮದುವೆಯಾಗ ಬೇಕೆಂದು ನಿನ್ನ ಪ್ರೀತಿಸಲು ಆರಂಭಿಸಿದ ದಿನವೇ ತೀರ್ಮಾನಿಸಿದವರು ನಾವು. ಏನೇ ಹೇಳು ಈ ಬದುಕಿನಲ್ಲಿ ಯಾರನ್ನೇ ಆದರು ನೀನು ನನಗೆ ಬೇಡ ಅನ್ನಲು ಕಾರಣಗಳೇ ಬೇಕಾಗೋದಿಲ್ಲ.

ನೀನು ಆಗೋದಿಲ್ಲ ಅಂತ ದೂರ ನಡೆದ ಕ್ಷಣದಿಂದ ನಾನು ತತ್ತರಿಸಿದ್ದೀನಿ, ನಾನು ಹುಡುಗ ನೋಡು ಎಲ್ಲರೆದುರು ಅಳುವ ಹಕ್ಕು ಹುಡುಗರಾದ ನಮಗಿರುವುದಿಲ್ಲ, ಗೆಳೆಯರೆದುರು ಕಣ್ಣೀರಾದರೆ ಬೇಸರಿಸುತ್ತಾರೆ ಹಾಗಾಗಿ ನನ್ನ ಅಳುವಿಗೆ ಕತ್ತಲು ಬೇಕು, ಅತ್ತು ಸುಸ್ತಾಗಿ ನಿಂತಾಗ ಒರಗಲು ಗೋಡೆ ಬೇಕು, ಅಲ್ಲಿ ನೀರವ ಮೌನವಿರಬೇಕು, ನನ್ನ ಜೊತೆ ನಿನ್ನ ನೆನಪಿನ ಮಹಾಸಾಗರವಿದೆ, ಅದರ ಅಲೆಯ ಹೊಡೆತಗಳಿಗೆ ಸಿಕ್ಕು ಸೋತಿದ್ದೇನೆ ಅದರ ರಭಸದ ಹರಿವಿನಲ್ಲಿ ಮುಳುಗೇಳುತ್ತಿದ್ದೇನೆ, ಅವು ನನ್ನನ್ನು ತಂದು ದಡಕ್ಕೆಸೆಯುತ್ತವೆ, ಇನ್ನೇನು ನಾನು ಎದ್ದು ನಿಲ್ಲ ಬೇಕು, ಮತ್ತೆ ಎಳೆದೊಯ್ಯುತ್ತವೆ.

ನೀನು ಮತ್ತೆ ನನ್ನ ಬದುಕಿಗೆ ಬರುತ್ತೀಯ ಎಂದು ಕೇಳುವ ಧೈರ್ಯ ನನ್ನಲ್ಲಿಲ್ಲ, ಆದರೆ ಒಂದು ಹಂತದಲ್ಲಿ ನನ್ನ ಬದುಕು ನಿನಗೆ ಏನು ಅಲ್ಲ ಅಂತ ಅನ್ನಿಸಿತಲ್ಲ ಅದಕ್ಕೆ ನೋವಿದೆ ಗೆಳತಿ, ಹೊರಡುವ ಮುನ್ನ ನೀನು ಹೇಳಿದ್ದಿಷ್ಟು ನಿನ್ನಂತವನಿಗೆ ನನಗಿಂತ ಒಳ್ಳೆಯವಳು ಸಿಗುತ್ತಾಳೆ ಅಂತ. ಇದನ್ನು ಕೇಳಿದವನಿಗೆ ಸಾಹಿಲ್ ನ ಸಾಲುಗಳು ನೆನಪಾಗುತ್ತವೆ...
ख़त लिखने के लिए शाई है
लेकिन मेरा खून जैसा नहीं
लड़की तो मिल सकती है
मगर तुम जैसी नहीं
ಬದುಕನ್ನು ಮತ್ತೆ ಮೊದಲಿಂದ ಆರಂಭಿಸ ಹೊರಟಿದ್ದೇನೆ, ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದೆವಲ್ಲ ಅದೇ ಬಸ್ಸು ನಿಲ್ದಾಣದಿಂದ, ಈಗ ನಾನು ಒಂಟಿ, ಇಲ್ಲಿ ನೀನಿಲ್ಲ. ಅಮ್ಮ ಹೇಳಿದ್ದಾಳೆ ನಾನು ಬದುಕಲ್ಲಿ ಸೋಲಬಾರದಂತೆ. ಆದರು ನಿನ್ನ ನೆನಪು ತುಂಬಾನೆ ಕಾಡುತ್ತೆ ಕಣೇ ಮರೆಯೋಕೆ ಪ್ರಯತ್ನಿಸಿದಷ್ಟು, ನಾವಿಬ್ಬರೂ ನಡೆದು ಬಂದ ಹಾದಿ ನೆನಪಿದೆ, ಆದರೆ ಇಂದು ಆ ದಾರಿಯಲ್ಲಿ ನಾನು ಒಬ್ಬಂಟಿ ಪಯಣಿಗ, ನಿನಗೂ ಹೀಗೆ ಅನ್ಸುತ್ತಾ, ನಮ್ಮ ಎಲ್ಲ ಕನಸುಗಳಿಗೆ ನಾವೇ ವ್ಯವಸ್ಥಿತವಾಗಿ ಸಮಾಧಿ ಕಟ್ಟಿದೆವೇನೋ ಅಂತ ಯೋಚಿಸಿ ಮನಸ್ಸು ಕುಸಿಯುತ್ತಿದೆ. ನನಗೆ ಗೊತ್ತು ನಿನ್ನ ಬಳಿಯೂ ಇದಕ್ಕೆ ಉತ್ತರವಿಲ್ಲ. ನನ್ನದಲ್ಲದ ಕವನವೊಂದು ಇವತ್ತು ನನ್ನನ್ನು ತುಂಬಾನೇ ಕಾಡುತ್ತಿದೆ.
"ನಡೆದ ಹಾದಿಯ ಚಿತ್ರ ಕಣ್ಣಲ್ಲೇ ಉಳಿದಿತ್ತು
ಮತ್ತೆ ಆ ಹಾದಿಯಲೇ ಹೊರಳುತಿಹೆನು
ಹೊರಟವನ ಕಣ್ಣಲ್ಲಿ ಎಂತೆಂತ ಕನಸಿತ್ತು
ಬರಿಯ ನಿರಾಸೆಯ ಹೊತ್ತು ಮರಳುತಿಹೆನು"
-ನಾನು

( ಬರಹ ಸಂಪೂರ್ಣ ಕಾಲ್ಪನಿಕವಷ್ಟೇ, ಸುಮ್ಮನೆ ಏನಾದರು ಬರೆಯಬೇಕೆಂದು ಶುರುವಿಟ್ಟಾಗ ಬರಹ ಹೀಗೆಲ್ಲ ಕವಲೊಡೆದು ನಿಂತಿತು. ಇದು ಯಾವ ವ್ಯಕ್ತಿ, ವ್ಯಕ್ತಿತ್ವಕ್ಕೆ, ಹಾಗು ಸಂಬಂಧಕ್ಕೆ ಸಂಬಂಧಿಸಿದ್ದಲ್ಲ, ಬರಹದ ಅವಳು ಕೂಡ ಕಾಲ್ಪನಿಕ, ಹಾಗೆ ಬರೆದ ನಾನು ಎಂಬ ಪಾತ್ರ ಕೂಡ)
*** ನನ್ನ ಮನದಂಗಳದ ಅತಿಥಿಗಳಿಗೆಲ್ಲಾ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ***

ಶನಿವಾರ, ಜನವರಿ 10, 2009

ಬರಗಾಲದಲ್ಲೊಂದು ಅಧಿಕ ಮಾಸ

ಅಂತರಾಳ - ೬

ಹೊಸ ವರ್ಷ ೨೦೦೯ನ್ನು ಸ್ವಾಗತಿಸಲು ಒಂದು ಕವನ ಬರೆಯಬೇಕೆಂಬ ಹಂಬಲ ನನ್ನದಾಗಿತ್ತು, ಹಾಗಾಗಿ ೩೧ ಡಿಸೆಂಬರ್ ಬೆಳಿಗ್ಗೆ :೩೦ ಸುಮಾರಿಗೆ ಎದ್ದು, ನನ್ನ ದಿನಚರಿ ಪುಸ್ತಕವನ್ನು ಕೈಯಲ್ಲಿ ಹಿಡಿದು ಕುಳಿತೆ, ಇದಕ್ಕೆಂದೇ ನೆನಪಿಗೆ ಬಂದಾಗ ಒಂದೊಂದು ಸಾಲನ್ನು ಬರೆದಿಟ್ಟಿದ್ದೆ, ಈಗ ಸಂಕಲನ ಮಾಡುವ ಸಮಯವಾಗಿತ್ತು. ಸುಮಾರು :೪೫ ವೇಳೆಗೆ ನನಗೆ ನನ್ನ ಕೈನೆಟಿಕ್ ನಲ್ಲಿ ಇಟ್ಟಿದ್ದ ನನ್ನ ಟಿಪ್ಪಣಿ ಪುಸ್ತಕ ನೆನಪಾಗಿ ಗಾಡಿ ಕೀಲಿ ಹುಡುಕ ತೊಡಗಿದೆ, ಬಹಳಷ್ಟು ಹೊತ್ತು ಹುಡುಕಿದರು ಸಿಗಲಿಲ್ಲ, ಕೊನೆಗೆ ನನಗೆ ನೆನಾಪಗಿದ್ದೆಂದರೆ ನನ್ನ ಕಾಲೇಜು ದಿನಗಳ ಮಿತ್ರ, ನನ್ನ ರೂಮ್ ಮೇಟ್, ಮತ್ತೀಗ ಸಹೋದ್ಯೋಗಿಯು ಆಗಿರುವ ಗೆಳೆಯ ನವೀನನ ಬಳಿ ರಾತ್ರಿ ಗಾಡಿ ಒಳಗೆ ನಿಲ್ಲಿಸುವಂತೆ ಹೇಳಿದ್ದೆ, ಅವನು ಸ್ವಲ್ಪ ಮೈಮರೆವಿನವನಾದುದರಿಂದ ಕೀಲಿ ಗಾಡಿಯಲ್ಲೇ ಬಿಟ್ಟು ಬಂದಿರಬಹುದೆಂದು, ಗಾಡಿ ನಿಲ್ಲಿಸುವ ಸ್ಥಳಕ್ಕೆ ತೆರಳಿದೆ. ಒಂದು ಕ್ಷಣ ನನ್ನ ಹೃದಯ ತನ್ನ ಕೆಲಸವನ್ನು ಮರೆತಂತೆ ಸುಮ್ಮನಾಗಿತ್ತು, ಎದೆಯೊಳಗೆ ಒಂದೆಳೆಯ ನಡುಕ, ಏಕೆಂದರೆ ಎಂದಿನ ಜಾಗದಲ್ಲಿ ನನ್ನ ಗಾಡಿ ಇಲ್ಲ. ಅತ್ತಿತ್ತ ನೋಡಿದರೂ ಗಾಡಿಯ ಸುಳಿವೇ ಇಲ್ಲ, ದಿಕ್ಕೇ ತೋಚದಂತಾಗಿ ನಿಂತವನಿಗೆ ನೆನಪಾಗಿದ್ದೇನೆಂದರೆ, ಹಿಂದಿನ ದಿನ ಸಂಜೆ ಕಛೇರಿಯಿಂದ ಹಿಂತಿರುಗಿ ಬಂದು ಗಾಡಿಯಿಂದ ಇಳಿವ ವೇಳೆಗೆ ನನಗೆ ಊರಿಂದ ಫೋನ್ ಕರೆ ಬಂದಿತ್ತು, ಹಾಗಾಗಿ ಗಾಡಿಯಿಂದ ಕೀ ತೆಗೆದವನು, ಮತ್ತೆ ಅದಕ್ಕೆ ವಾಪಸ್ಸು ಹಾಕಿ ನಿಲ್ಲಿಸಿ, ಅದಾಗಲೇ ಫೋನ್ ಕರೆಯಲ್ಲಿ ಮಗ್ನನಾಗಿದ್ದ ನವೀನನಿಗೆ ಗಾಡಿ ಒಳಗೆ ನಿಲ್ಲಿಸುವಂತೆಯೂ, ಸ್ವಲ್ಪ ಹೊತ್ತಿನಲ್ಲಿ ನಾನು ವಾಪಸ್ಸು ಬರುವುದಾಗಿಯೂ ಹೇಳಿದ್ದೆ.

ನಾವು ಒಟ್ಟು ನಾಲ್ವರು ಒಂದೇ ಮನೆಯಲ್ಲಿದ್ದೇವೆ, ನಾವೆಲ್ಲ ಕಾಲೇಜು ದಿನಗಳ ಗೆಳೆಯರು, ಈಗ ಎಲ್ಲರು ವೃತ್ತಿಪರರು. ಎಲ್ಲರಿಗೂ ಗೊತ್ತಿರುವಂತೆ ನಮ್ಮ ನವೀನನ ಸಮಸ್ಯೆ ಎಂದರೆ ಯಾರು ಏನೇ ಹೇಳುವ ಮುನ್ನ ಗೊತ್ತು ಅಂತಲೋ, ಇಲ್ಲ ಆಯ್ತು ಅಂತಲೋ ಅನ್ನುವುದು, ಆದರೆ ಎಂದಿಗೂ ಎದುರಿನವರು ಹೇಳಿದ್ದೇನು ಎಂಬುದನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ನನಗೆ ಅದು ಸ್ವಲ್ಪ ಮುಖ್ಯವಾದ ಫೋನ್ ಕರೆಯಾದುದರಿಂದ, ನಾನು ಹೇಳಿದ್ದು ಇವನು ಗಮನಿಸಿದ ಎಂದೇ ಭಾವಿಸಿದ್ದೆ. ನಮ್ಮ ಮನೆಗೆ ಎರಡು ಬಾಗಿಲಿರುವುದರಿಂದ ಇನ್ನೊಂದು ಬಾಗಿಲಿಂದ ನಾನು ಒಳಗೆ ಬಂದು ಸೇರಿದೆ. ನನ್ನ ದುರಾದೃಷ್ಟಕ್ಕೆ ಅವನು ಗಾಡಿ ಒಳಗೆ ನಿಲ್ಲಿಸಿರಲಿಲ್ಲ.

ನನ್ನ ಇನ್ನುಳಿದ ಇಬ್ಬರು ಗೆಳೆಯರು ಬಂದ ನಂತರ ಊಟ ಮಾಡಿ ಚೆನ್ನಾಗಿ ಹರಟಿ ಮಲಗುವ ಮುನ್ನ, ಇನ್ನೊಬ್ಬ ಗೆಳೆಯನಾದ ಪ್ರಸನ್ನ ಗೋಪಾಲ ಸ್ವಭಾವತಃ ಸೋಮಾರಿಯಾಗಿರುವದರಿಂದ ಅವನ ಕಾಲೆಳೆಯುತ್ತಾ ಇದ್ದ ನಮ್ಮ ನವೀನ, ರಾತ್ರಿಯೊಮ್ಮೆ ನಾಯಿ ಕೂಗಿದಾಗ ಎದ್ದು ಪ್ರಸನ್ನನನ್ನು ಎಬ್ಬಿಸಿ ನಾಯಿ ಕೂಗುತ್ತಿದೆ ಈಗ ಎದ್ದು ಹೋದರೆ ನಿನ್ನ ಗಾಡಿ(ಬಜಾಜ್ ಡಿಸ್ಕವರ್-ಕೆಂಪು ಬಣ್ಣ) ಕದಿಯಲು ಬಂದಿರಬಹುದಾದ ಕಳ್ಳ ನಿನ್ನ ಕೈಗೆ ಸಿಗುತ್ತಾನೆ ಎಂದು ಕಿಚಾಯಿಸಿ ಮಲಗಿದ್ದ, ಇಷ್ಟೆಲ್ಲಾ ಮಾತನಾಡಿದರು ಗೆಳೆಯ ಮಹಾಶಯನಿಗೆ ನನ್ನ ಗಾಡಿ ಹೊರಗೆ ಬಿಟ್ಟಿರುವುದು ನೆನಪೇ ಇರಲಿಲ್ಲ.

ಬೆಳಿಗ್ಗೆ ಬೇಗ ಎದ್ದ ನನಗೆ ೨೦೦೮ರ ಕೊನೆಯ ದಿನ ಇದೊಂದು ಆಘಾತಕಾರಿ ಘಟನೆ ಕಾದಿತ್ತು, ಇಷ್ಟೆಲ್ಲಾ ನಡೆದು, ನನ್ನ ಗಾಡಿ ಕಾಣುತ್ತಿಲ್ಲ ಎಂದು ನನ್ನ ಗೆಳೆಯರ ಬಳಿ ಹೇಳಿದರೆ, ಮೂವರು ಹೊದಿಕೆಯ ಒಳಗಿಂದಲೇ, ನಿನಗೆ ನಿದ್ರೆ ಸರಿಯಾಗಿಲ್ಲ ಅನ್ಸುತ್ತೆ, ಏನೇನೋ ಗೀಚುತ್ತಿಯಲ್ಲ ಹಾಗಾಗಿ ನಿನಗೊಂದು ರೀತಿಯ ಭ್ರಮೆ, ನಿನ್ನ ಗಾಡಿಯನ್ನು ಕಳ್ಳ ಕದ್ದಿದ್ದರೆ ನಿಜಕ್ಕೂ ಅದು ಅವನಿಗಾದ ಅನ್ಯಾಯ, ಇದನ್ನು ನಾವು ಖಂಡಿಸುತ್ತೇವೆ ಎಂದೆಲ್ಲಾ ತರಹೇವಾರಿ ಉತ್ತರ ನೀಡಿದರು. ನನ್ನ ಅವಸ್ಥೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟವೆಂಬಂತಾಗಿತ್ತು. ಅವಸ್ಥೆಯಲ್ಲಿ ನನಗೆ ನೆನಪಾಗಿದ್ದು ಪೊಲೀಸರು, ನಾನು ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿ ಬರುತ್ತೇನೆ ಎಂದಾಗ ನನ್ನ ಗೆಳೆಯರಿಗೆ ಪೂರ್ಣವಾಗಿ ಎಚ್ಚರವಾಗಿತ್ತು. ಆದರು ನಮ್ಮ ನವೀನ ತನಗೇನು ಗೊತ್ತಿಲ್ಲವೆಂಬಂತೆ ಅಮಾಯಕನಂತೆ ಪೆಚ್ಚು ಮೋರೆ ಹಾಕಿಕೊಂಡು ಕುಳಿತಿದ್ದ, ಒಂದೆಡೆ ಗಾಡಿ ಇಲ್ಲದ ನನ್ನ ಸಂಕಟ, ಇನ್ನೊಂದೆಡೆ "ನಂಗೆ ಗೊತ್ತಾಗ್ಲಿಲ್ಲ ಮಾರಾಯ" ಅಂತ ರಾಮನಾಮ ಜಪಿಸಿದಂತೆ ಸರಿ ಸುಮಾರು ನೂರೈವತ್ತು ಸಾರಿ ಹೇಳುತ್ತಿದ್ದ ನವೀನ.

ಗೆಳೆಯ ಪ್ರಸನ್ನನ ಗಾಡಿಯೇರಿ ನೇರವಾಗಿ ಪೋಲಿಸ್ ಠಾಣೆಗೆ ಹೋದರೆ, ಠಾಣೆಯ ಬಾಗಿಲಿನ ಎದುರಲ್ಲಿ ರಾಜ ಗಾಂಭೀರ್ಯದಲ್ಲಿ ನನ್ನ ಕೈನೆಟಿಕ್ ಪೊಲೀಸರ ಅತಿಥಿಯಂತೆ ನಿಂತಿತ್ತು, ಅದನ್ನು ನೋಡಿದ ನನಗೆ ಹೋದ ಜೀವ ಬಂದ ಅನುಭವ. ರಾತ್ರಿ ಕೀ ಸಮೇತ ಹೊರಗೆ ನಿಂತಿದ್ದ ಗಾಡಿಯನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದರು. ನನ್ನ ಗಾಡಿಯ ಮೂಲ ದಾಖಲೆಗಳು ಊರಿನಲ್ಲಿತ್ತು, ವಿಮೆ ಅವಧಿ ನವೆಂಬರಿನಲ್ಲಿಯೇ ಮುಗಿದು ಹೋಗಿತ್ತು. ನಮ್ಮ ಮುಂದಿದ್ದ ದೊಡ್ಡ ಸವಾಲೆಂದರೆ ಪೊಲೀಸಪ್ಪನಿಗೆ ಸಮಜಾಯಿಷಿ ನೀಡಿ, ನಮ್ಮನ್ನು ಸಮರ್ಥಿಸಿಕೊಂಡು ಗಾಡಿ ಪಡೆದುಕೊಳ್ಳುವುದು. ಎಲ್ಲವನ್ನು ಪರೀಕ್ಷಿಸಿದ ಪೋಲೀಸಪ್ಪ ಹುಸಿ ಮುನಿಸು ತೋರುತ್ತ ಬಿಡಲಾಗುವುದಿಲ್ಲ ಕನಿಷ್ಟವೆಂದರೆ ಮೂರು ಸಾವಿರ ದಂಡ ತೆರಬೇಕು ಎಂದ, ಗೆಳೆಯನ ಗಾಡಿ ತುಸು ದೂರದಲ್ಲಿ ನಿಲ್ಲಿಸಿದ್ದುದರಿಂದ ನಾನು ಕಾಲೇಜು ವಿದ್ಯಾರ್ಥಿ ಎಂದು ಕಥೆ ಹೇಳಿ ಒಪ್ಪಿಸಿ, ಇನ್ನೇನು ಹೊರಡುವುದರಲ್ಲಿದ್ದೆ.

ಆಗ ನನ್ನ ಮೂರನೇ ಗೆಳೆಯ ಶರತ್ ಪ್ರವೇಶವಾಯಿತು, ಇವನ ಮೂಲ ಸ್ವಭಾವವೆಂದರೆ ಸಮಸ್ಯೆ ಏನೇ ಇರಲಿ ಅದರ ಆಳ ತಿಳಿವ ಮುನ್ನ ನಾನು ಬಗೆಹರಿಸಿ ಬಿಡುವೆ ಎಂದು ಕಣ್ಮುಚ್ಚಿ ಮುನ್ನುಗ್ಗುವುದು, ಅಕಸ್ಮಾತ್ ಸೋತರೆ ನಾನು ಇದನ್ನು ಹೀಗೆ ಎಂದು ಕೊಂಡಿರಲಿಲ್ಲ ಕಣೋ ಎಂದು ಸಬೂಬು ಹೇಳಿ ನುಣುಚಿಕೊಳ್ಳುವುದು, ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ ಎಂಬಂತಹವನು. ಪೊಲೀಸಪ್ಪನಿಗೆ ಒಪ್ಪಿಸಿ ಸಾಧನೆ ಮಾಡಿದ್ದೇವೆ ಎಂಬಂತೆ ನಿಂತವರೆದುರು ತನ್ನ ಬಜಾಜ್ ಡಿಸ್ಕವರ್ - ನೀಲಿ ಬಣ್ಣದ ಗಾಡಿ ತಂದು ಧುತ್ತನೆ ನಿಲ್ಲಿಸಿ, ಪೊಲೀಸಪ್ಪನಿಗೆ ಉದ್ದೇಶಿಸಿ "ನೀವು ಬಿಡಲ್ಲ ಅಂದರೆ ತೊಂದರೆ ಇಲ್ಲ ನಾವು ಎಲ್ಲಾ ಮೂಲ ದಾಖಲೆಗಳನ್ನು ತಂದು ತೋರಿಸಿ ತೆಗೆದುಕೊಂಡು ಹೋಗುತ್ತೀವಿ" ಎಂದು ಒಂದೇ ಉಸಿರಿಗೆ ಹೇಳಿ, ಸಾಧನೆ ಮಾಡಿದೆ ಎಂಬಂತೆ ನಮ್ಮೆಡೆಗೆ ಖುಷಿಯ ನಗು ಬೀರಿದ, ನನಗೆ ಬಿಸಿ ತುಪ್ಪ ನುಂಗಿದ ಅನುಭವವಾಗಿತ್ತು, ಸುಮಾರು ಒಂದು ಘಂಟೆಯಿಂದ ಪೊಲೀಸಪ್ಪನಿಗೆ ತರಹೇವಾರಿ ಕಥೆ ಹೇಳಿ ಒಪ್ಪಿಸಿ, ಕೊಡಲು ದುಡ್ಡಿಲ್ಲ ಎಂಬಂತೆ ಹೇಳಿದ್ದ ನಮ್ಮೆಡೆಗೆ ಪೋಲೀಸಪ್ಪ ತನ್ನ ವಕ್ರ ದೃಷ್ಟಿ ಬೀರಿದ್ದ, ಕೊಡಲು ದುಡ್ಡೇ ಇಲ್ಲ ಎಂದಿದ್ದ ನಾನು ನನ್ನ ಗೆಳೆಯರೆಡೆಗೆ ನೋಡಿ ಮತ್ತೆ ಮೂರು ಗಾಡಿ ನೋಡಿ, ಕನಿಷ್ಠ ಸಾವಿರ ರೂಪಾಯಿ ದಂಡ ಕಟ್ಟಲೆ ಬೇಕೆಂದು ದೂರು ದಾಖಲಿಸಿದ.

ಒಂದೆಡೆ ಗಾಡಿ ಒಳಗೆ ನಿಲ್ಲಿಸು ಎಂದರೆ ಹೊರಗೇ ಬಿಟ್ಟ ಒಬ್ಬ ಗೆಳೆಯ, ಎಲ್ಲಾ ಸರಿಯಾಯಿತು ಎಂಬ ಹೊತ್ತಿನಲ್ಲಿ ಬಂದು ಎಲ್ಲಾ ಹಾಳುಗೆಡವಿದ ಇನ್ನೊಬ್ಬ ಗೆಳೆಯ. ೨೦೦೮ ನನ್ನ ಪಾಲಿಗೆ ಬರಗಾಲದಲ್ಲೊಂದು ಅಧಿಕ ಮಾಸ ತಂದಿತ್ತು, ಕೊನೆಗೆ ಸುಮಾರು ಹೊತ್ತು ಪೋಲಿಸ್ ಠಾಣೆಯಲ್ಲಿ ಕಾದು, ದಂಡ ಕಟ್ಟಿ ಗಾಡಿ ಬಿಡಿಸಿಕೊಂಡು ತರುವಾಗ ನನ್ನ ಮೂರು ಮಿತ್ರರ ನೆನಪು ಕಾಡದೇ ಇರಲಿಲ್ಲ.