ನಿಂಗೊತ್ತಾ ???!!!
ನಾನು ತೀರ ಚಿಕ್ಕವನಿದ್ದಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಅಮ್ಮ ಶನಿವಾರದ ಬೆಳಗಿನ ಶಾಲೆಗೆ ತಡವಾಗುತ್ತೆ ಅಂತ ಓಡೋಡಿ ಹೋದ ಮೇಲೆ ನಾನು ಸ್ನಾನದ ಮನೆಯಲ್ಲಿ ಬಿಸಿ ನೀರು ಬೆರೆಸಿಕೊಳ್ಳಲು ಬರದೆ ಬರಿ ತಣ್ಣೀರು ಸುರಿದು ಕೊಂಡು ಸ್ನಾನ ಮುಗಿಸಿದಾಗೆಲ್ಲ ನೀನು ವಿಪರೀತ ಬೇಕು ಅಂತ ಅನ್ನಿಸಿಬಿಡುತ್ತಿದ್ದೆ. ನೀನಿಲ್ಲ ಅನ್ನೋ ಕೊರಗು ಮತ್ತು ಕೊರತೆ ನನ್ನನ್ನು ಕಾಡುತ್ತಿದ್ದಿದ್ದೆ ಅಂತಹ ಕ್ಷಣಗಳಲ್ಲಿ.
ಅಮ್ಮ ಜ್ವರದಿಂದ ಹಾಸಿಗೆ ಹಿಡಿದ ದಿನಗಳಲ್ಲಿ ಅಕ್ಕಿ ಅಥವಾ ಗೋಧಿ ರವೆಯನ್ನೋ ಹುರಿದು, ಕುದಿವ ನೀರಿನಲ್ಲಿ ಹಾಕಿ, ಚೆನ್ನಾಗಿ ಬೇಯಿಸಿ ಗಂಜಿ ಮಾಡಿ ಇಳಿಸುವ ಹೊತ್ತಲ್ಲಿ ಪಾತ್ರೆಯಂಚು ಕೈ ತಾಕಿ ಸುಟ್ಟಾಗ ನೀನಿದ್ದಿದ್ರೆ ಹೀಗೆಲ್ಲ ಆಗ್ತಿರಲಿಲ್ಲ ಅಲ್ವ ಅಂತ ಕಣ್ಣೀರು ತುಂಬಿ ಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಪಾಚಿಯ ಮೇಲೆ ಕಾಲಿಟ್ಟು ಕೆಸರಲ್ಲಿ ಜಾರಿ ಬಿದ್ದು ಮನೆಗೆ ಬಂದಾಗ, ಪರೀಕ್ಷೆ ಹಿಂದಿನ ದಿನ ನಿದ್ದೆ ಬಾರದಿದ್ದಾಗ, ನಡು ಮಧ್ಯ ರಾತ್ರಿ ಬೀದಿ ನಾಯಿ ವಿಕಾರವಾಗಿ ಊಳಿಟ್ಟಾಗ, ಏನೋ ತಪ್ಪು ಮಾಡಿದಾಗ ಅಮ್ಮ ಗದರಿದಾಗ ನೀನಿಲ್ಲ ಅನ್ನೋದು ತುಂಬಾ ನೋವು ನೀಡುತ್ತಿತ್ತು.
ಎರಡನೇ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಬಿಡದೆ ಧೋ ಎಂದು ಸುರಿದ ಮಳೆಯಿಂದ ಮನೆಗೆ ಬರಲಾಗದೆ ಶಾಲೆಯ ಮೆಟ್ಟಿಲ ಮೇಲೆ ಗೆಳೆಯನ ಜೊತೆ ಕುಳಿತಿದ್ದಾಗ ಛತ್ರಿ ಹಿಡಿದು ಬಂದ ಅವನಕ್ಕ ಅವನ ತಲೆ ಒರೆಸಿ ಛತ್ರಿ ಒಳಗೆ ಸೇರಿಸಿ ಕೊಂಡಾಗ, "ಈ ಮಳೆ ನನಗೇನು ಅಲ್ಲ, ಈ ಮಳೆಯಂದ್ರೆ ಮತ್ತು ಮಳೆಯಲ್ಲಿ ನೆನೆಯೋದಂದ್ರೆ ನನಗೆ ತುಂಬಾನೆ ಇಷ್ಟ" ಅಂತ ಸುಳ್ಳೇ ನಕ್ಕು ಸಮವಸ್ತ್ರದ ಅಂಗಿಯೊಳಗೆ ಶಾಲೆ ಚೀಲ ಸೇರಿಸಿ ಕಣ್ಣೀರಾಗಿ ಮಳೆಯಲ್ಲಿ ಓಡಿದ ದಿನ. ಮನೆ ತಲುಪಿದ ಮೇಲೆ "ಮಳೆಯಲ್ಲಿ ನೆಂದು ಬಂದಿದೀಯಲ್ಲ, ಸ್ವಲ್ಪ ಹೊತ್ತು ಕಾದಿದ್ದು ಬರಬಹುದಿತ್ತಲ್ಲ" ಎಂದು ಅಮ್ಮ ರೇಗಿದಾಗ, ನನ್ನ ಪಾಲಿಗೆ ನೀನು ಯಾಕಿಲ್ಲ ಅಂತ ದೇವರಲ್ಲಿ ಜಗಳಕ್ಕೆ ನಿಲ್ಲ ಬೇಕು ಅಂತ ಅನ್ನಿಸಿ ಬಿಡುತ್ತಿತ್ತು. ನೀನಿದ್ದಿದ್ದರೆ ನಾನು ಮಳೆಯಲ್ಲಿ ನೆನೆಯುತ್ತಿರಲಿಲ್ಲ ಅಂತೇನು ಇಲ್ಲ, ಆದರೆ ನೆನೆದು ಮುದ್ದೆಯಾಗಿ ಬಂದಾಗ ಕನಿಷ್ಠ ತಲೆ ಒರೆಸಿ ಕೊಡಲಿಕ್ಕಾದರು ನೀನು ಇರುತ್ತಿದ್ದಿದ್ದರೆ ಅನ್ನೋ ತುಡಿತ ನನಗಿತ್ತು.
ಮೊನ್ನೆ ಹೀಗೆ ಈ ಯಾಂತ್ರಿಕ ನಗರಿಯ ಮಳೆಗೆ ಸಿಕ್ಕಿ ಒದ್ದೆಯಾಗಿ ಮನೆ ಸೇರಿದಾಗ ಫೋನಾಯಿಸಿದ ಅಮ್ಮ ಮದುವೆ ಬಗ್ಗೆ ಏನು ತೀರ್ಮಾನಿಸಿದೆ ಎಂದಾಗ, ಕೊನೆ ಪಕ್ಷ ನನ್ನ ತಮ್ಮ ಚಿಕ್ಕವನು, ಇಷ್ಟು ಬೇಗ ಮದುವೆ ಬೇಡ ಅಂತ ಅಮ್ಮನಿಗೆ ಒಪ್ಪಿಸಲಿಕ್ಕಾದರು ಅಥವಾ ಅಮ್ಮ ನೋಡುವ ಹುಡುಗಿ ನನ್ನ ತಮ್ಮನಿಗೆ ಸೂಕ್ತಳೋ ಇಲ್ಲವೊ ಅಂತ ನಿರ್ಧರಿಸಲು ನೀನಿರಬೇಕಿತ್ತು.
ಕೊನೆ ಪಕ್ಷ ಎದೆಯ ದುಗುಡ ತೀರ ಹೆಚ್ಚಾದಾಗ ಮುಖ ಮುಚ್ಚಿಕೊಂಡು ಮಲಗಿ ಬಿಡಲು ನಿನ್ನ ಮಡಿಲು ಬೇಕಿತ್ತು, ಅಲ್ಲಿ ತಲೆ ನೇವರಿಸಿ ಸಮಾಧಾನಿಸಲು ನನಗೂ ಒಬ್ಬಳು ಅಕ್ಕ ಇರಬೇಕಿತ್ತು.