ಸೋಮವಾರ, ಡಿಸೆಂಬರ್ 29, 2008

ಹತ್ಯೆ!

ಸತ್ತು ಮಲಗಿಹುದು ಹಲ್ಲಿ
ನಾ ರಾತ್ರಿಯಿಡೀ ಬರೆದ ಲೇಖನದ
ಹಾಳೆಗಳ ನಡುವಲ್ಲಿ...

ನನಗೇನೋ ಆತಂಕ ಹಾಗು ಜಿಜ್ಞಾಸೆ
ಆಗಿ ಹೋಯಿತೆ ಹತ್ಯೆ, ಆಗಿ ಹೋದೆನೇ ಹಂತಕ
ದುಗುಡ ಕಳವಳವೀಗ ಮನದಲ್ಲಿ...

ಆದರೆ ನನ್ನ ಲೇಖನವ ಓದಿ ಮನನೊಂದು
ಹಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಹುದು
ನಾನು ಬರೆದುದಾದರು ಏನಿಲ್ಲಿ!

ಗುರುವಾರ, ಡಿಸೆಂಬರ್ 25, 2008

ನನ್ನ ಕನ್ನಡ ತಾಯಿ ಬಂಜೆಯಾದಳೆ...

(ನಾನೀಗ ಬರೆಯೋದಕ್ಕೆ ಶುರು ಮಾಡಿರುವ ವಿಷಯಕ್ಕೆ ಈ ಸ್ಥಳ ಸರಿಯೇ? ನನಗೆ ಖಂಡಿತ ಗೊತ್ತಿಲ್ಲ, ಮನದ ತಳಮಳಗಳನ್ನು, ನಾನು ಬರೀತಿದ್ದನ್ನು ಇಲ್ಲಿ ಪ್ರಕಟಿಸ್ತ ಬಂದಿದ್ದೇನೆ. ಈ ಬರಹ ಓದುವುದಕ್ಕಿಂತ ಮುನ್ನ ದಯವಿಟ್ಟು ಒಂದು ಮಾತು, ನಾನು ಯಾರನ್ನೋ ಹೀಗಳೆಯಲೋ, ಅಥವಾ ನಿಂದಿಸಲೋ, ಅಥವಾ ಖಂಡಿಸಲೋ ಅಂತ ಇದನ್ನು ಬರೆಯುತ್ತಿಲ್ಲ. ಇದು ನನ್ನನ್ನು ತುಂಬ ತುಂಬ ಕಾಡಿದ, ಹಾಗು ಕಾಡುತ್ತಿರುವ ವಿಚಾರ, ಆದರೆ ಉತ್ತರ ಸಿಕ್ಕಿಲ್ಲ...)

ಇತ್ತೀಚೆಗಿನ ಬಹುತೇಕ ಕನ್ನಡ ಚಲನ ಚಿತ್ರಗಳಿಗೆ ಹಿನ್ನೆಲೆ ಗಾಯಕರು ಪರಭಾಷಿಗರು. ಹೆಚ್ಚಿನ ಹಾಡುಗಳನ್ನು ಹಾಡಿದವರು ಸೋನು ನಿಗಮ್, ಉದಿತ್ ನಾರಾಯಣ್, ಶಂಕರ್ ಮಹಾದೇವನ್, ಕುನಾಲ್ ಗಾಂಜಾವಾಲ, ಸುನಿಧಿ ಚೌಹನ, ಮತ್ತು ಶ್ರೇಯಾ ಘೋಶಾಲ್. ನಾನು ಶ್ರುತಿ, ತಾಳ, ಮತ್ತು ಲಯದ ಅರಿವಿಲ್ಲದ ದಿಗ್ಮೂಡ, ಇವರುಗಳ ಹಾಡುಗಾರಿಕೆ ನಿಜಕ್ಕೂ ಮನಕ್ಕೆ ಹಿತವೆನಿಸುತ್ತದೆ, ಇದರಲ್ಲಿ ಯಾವುದೇ ಅನುಮಾನವಿಲ್ಲ, ಇವರುಗಳ ಗಾಯನ ಸಾಮರ್ಥ್ಯವನ್ನು ಇಲ್ಲಿ ಪ್ರಶ್ನಿಸುವ ಗೋಜಿಗೂ ನಾನು ಹೋಗುತ್ತಿಲ್ಲ. ಆದರೆ ನನ್ನದೊಂದು ಪ್ರಶ್ನೆ ನಮ್ಮ ಕನ್ನಡದಲ್ಲಿ ಗಾಯಕ ಪ್ರತಿಭೆಗಳೇ ಇಲ್ಲವೇ. "ನೂರು ಜನ್ಮಕೂ ನೂರಾರು ಜನ್ಮಕೂ" ಎಂದು ಹಾಡಿದ ಸ್ಪಷ್ಟ ಉಚ್ಚಾರಣೆಯ ಹಾಗು ಅದ್ಭುತ ಎಂದೆನಿಸುವಂತ ಗಾಯಕ ರಾಜೇಶ್ ಕೃಷ್ಣನ್ ಈಗ ಹಾಡುವುದನ್ನೇ ಮರೆತಿದ್ದಾರ, ಮಧುರ ಕಂಠದ ನಂದಿತಾ ಎಲ್ಲಿ ಮರೆಯಾಗಿದ್ದಾರೆ, ಇನ್ನು ಹೇಮಂತ್, ಲಕ್ಷ್ಮಿ ಚಂದ್ರ ಶೇಖರ್, ರಾಜು ಅನಂತ ಸ್ವಾಮಿ, ಕನ್ನಡದ ಜೇಸು ದಾಸ್ ರಮೇಶ್ಚಂದ್ರ, ಅಶೋಕ್ ಶರ್ಮ, ಗುರುರಾಜ್ ಕೋಟೆ ಎಲ್ಲಿ ಕಳೆದು ಹೋಗಿದ್ದಾರೆ. "ಮುರಿದಿರುವ ಕೊಳಲು ನುಡಿಸುವವರಾರು" ಎಂದು ಮೈನವಿರೇಳುವಂತೆ ಹಾಡಿದ ಗಾಯಕಿ ಅರ್ಚನಾ ಉಡುಪಾರನ್ನು ಪೂರ್ಣ ಪ್ರಮಾಣದ ಕಾರ್ಯಕ್ರಮ ನಿರೂಪಕಿ ಎಂಬಂತೆ ಮಾಡಲಾಗಿದೆ. ಅಮೃತಧಾರೆಯ ಮಧುರ ಗಾಯಕಿ ಸುಪ್ರಿಯಾ ಆಚಾರ್ಯ, ಎಂ. ಡಿ. ಪಲ್ಲವಿ, ಸಂಗೀತ ಕಟ್ಟಿ, ರತ್ನ ಮಾಲಾ ಪ್ರಕಾಶ್ ಎಲ್ಲ ತೆರೆ ಮರೆಗೆ ಸರಿದು ವರ್ಷ ಉರುಳಿದೆ.

ದೂರದರ್ಶನ ಗಾಯನ ಕಾರ್ಯಕ್ರಮಗಳಲ್ಲಿ ಮನಸೆಳೆದ ಉದಯೋನ್ಮುಖ ಗಾಯಕರಾದ ನಿತಿನ್ ರಾಜಾರಾಂ ಶಾಸ್ತ್ರೀ, ವಿನಯ್, ಚಿನ್ಮಯ್, ಆಕಾಂಕ್ಷ ಬಾದಾಮಿ ಎಲ್ಲಾ ಎಲ್ಲಿ ಅಸ್ತಂಗತರಾದರು. ಇವರ್ಯಾರು ನಮ್ಮ ಕನ್ನಡ ಚಿತ್ರ ಗೀತೆಗಳನ್ನೂ ಹಾಡಲು ಯೋಗ್ಯರಿಲ್ಲವೆ. ಪರಭಾಷಾ ಗಾಯಕರು ಕನ್ನಡ ಉಚ್ಚರಿಸುವ ರೀತಿ ನೋಡಿದರೆ ತುಂಬಾ ಹಿಂಸೆ ಎನಿಸುತ್ತದೆ. ಅವರು ಬರಿ ಹಾಡುತ್ತಾರೆ ಅಷ್ಟೆ, ಪ್ರತಿ ಸಾಲಿಗೂ ಒಂದೇ ಭಾವ, ಅವರಿಗೆ ಹಾಡುವ ಸಾಹಿತ್ಯದ ಸಾಲಿನ ಅರ್ಥ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಅಗತ್ಯವೂ ಅವರಿಗಿಲ್ಲ, ಸಂಗೀತದ ಏರಿಳಿತಕ್ಕೆ ಸರಿಯಾಗಿ ಹಾಡಿದ ಮಾತ್ರಕ್ಕೆ ಹಾಡು ಇಂಪೆನಿಸಬಹುದು, ಆದರೆ ಭಾಷೆ ಹಾಗು ಸಾಹಿತ್ಯ ಉಸಿರು ಕಟ್ಟಿ ಸಾಯುತ್ತದೆ. ಉದಾಹರಣೆಗೆ "ಹುಚ್ಚ" ಚಿತ್ರದ ಉಸಿರೇ ಉಸಿರೇ ಎಂಬ ಗೀತೆ ಸೋನು ನಿಗಮ್ ಹಾಗು ರಾಜೇಶ್ ಕೃಷ್ಣನ್ ಇಬ್ಬರೂ ಹಾಡಿದ್ದಾರೆ, ಗಾಯನದ ತುಲನೆಯಲ್ಲಿ ರಾಜೇಶ್ ಕೃಷ್ಣನ್ ಸೋನು ನಿಗಮ್ ಗಿಂತ ಲವಲೇಶವೂ ಕಡಿಮೆ ಇಲ್ಲ, ಹಾಗು ಪ್ರತಿ ಸಾಲನ್ನು ಅನುಭವಿಸಿ ಹಾಡಿದ್ದಾರೆ. ಸೋನು ಶಬ್ದ ಬಳಕೆಯನ್ನು ಕೇಳಿದರೆ ನಿಜಕ್ಕೂ ಎಂತಹ ಕನ್ನಡ ಬಲ್ಲವನಿಗೂ ಸೋಜಿಗವೆನಿಸುತ್ತದೆ, ಪ್ರೇಮ ಗೀತೆಯೊಂದನ್ನು ಆತ ಪ್ರಣಯ ಗೀತೆಯೆಂಬಂತೆ ಹಾಡಿರುವ ಬಗೆ ಖೇದವೆನಿಸುತ್ತದೆ. ಕೇಳುವುದಾದರೆ ಕೊಂಡಿ ಇಲ್ಲಿದೆ http://www.kannadaaudio.com/Songs/Moviewise/home/Hucchha.php
ವಿಪರ್ಯಾಸವೆಂದರೆ ರಾಜೇಶ್ ಹಾಡಿದ ಹಾಡು ಇಲ್ಲಿ ಲಭ್ಯವಿಲ್ಲ.

ಇದಕ್ಕೂ ಮೀರಿ ಈ ಆಮದು ಗಾಯಕರುಗಳ ಗಾಯನ ಇಷ್ಟವಾದರೆ ಅದು ನಮ್ಮ ಚಿತ್ರ ಗೀತೆ ಸಾಹಿತ್ಯದಿಂದ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್, ಕವಿರಾಜ್, ಹೃದಯ ಶಿವರವರ ಸರಳ ಹಾಗು ಅರ್ಥಪೂರ್ಣ ಸಾಹಿತ್ಯ ಕಿವಿಗೆ ಇಂಪು ನೀಡುತ್ತದೆ, ಇದರಿಂದ ಆಮದು ಗಾಯಕರ ಗಾಯನ ಸಹ್ಯವೆನಿಸಿರಬಹುದು.

ನಮ್ಮ ಗಾಯಕ-ಗಾಯಕಿಯರು ಯಾವ ರೀತಿಯಲ್ಲಿ ಈ ಆಮದು ಗಾಯಕರಿಗಿಂತ ಕಡಿಮೆ ಇದ್ದಾರೆ. ಇಂಪಾದ ದನಿಯಿದೆ, ಭಾಷಾ ಜ್ಞಾನವಿದೆ. ನಮ್ಮ ಚಿತ್ರ ರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಹಾಗು ಪ್ರಭಾವಿಗಳಿಗೆ ಈ ಪರಭಾಷಾ ವ್ಯಾಮೋಹ ಏಕೆ. ನಮ್ಮ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೇಕೆ, ಇತ್ತೀಚಿನ ದಿನಗಳಲ್ಲಿ ನಮ್ಮ ಗಾಯಕರು ಹಾಡಿದಂತಹ ಮುಖ್ಯ ಹಾಡುಗಳು ಯಾವುದೂ ಇಲ್ಲವೆನಿಸುತ್ತದೆ. ಇದೆಲ್ಲಾ ಇನ್ನೂ ಎಲ್ಲಿಯ ತನಕ? ನಮ್ಮವರು ಹೀಗೆ ಎಲೆ ಮರೆಯ ಕಾಯಾಗಿಯೇ ಉದುರಿ ಹೋಗುವರೆನು? ಕನ್ನಡ ಸಾಹಿತ್ಯ ಈ ಚಿತ್ರೋದ್ಯಮದಲ್ಲಿ ಹೀಗೆ ದುಡ್ಡಿಗೆ ಬಿಕರಿಯಾಗಿ ಹೋಗುತ್ತದೇನು? ಬರಿಯ ಪ್ರಶ್ನೆಗಳು ಕಾಡುತ್ತವೆ. ಮನಸ್ಸಿಗೆ ತುಂಬಾ ನೋವಾಗುತ್ತದೆ, ಏನು ಮಾಡಲಾಗದ ಅಸಹಾಯಕತೆ ನಮಗೇ ಅಸಹ್ಯವೆನಿಸುತ್ತದೆ.

ತಿನ್ನುವ ಅನ್ನದ ತುತ್ತಿನಲ್ಲಿ ಒಂದು ತುತ್ತು ಹಂಚಿ ತಿನ್ನೋಣ, ಆದರೆ ನಮ್ಮವರ ತುತ್ತನ್ನೇ ಕಸಿದು ಇಡೀ ತಟ್ಟೆಯನ್ನೇ ದಾನ ಮಾಡಿ ನಮ್ಮವರನ್ನು ಉಪವಾಸ ಮಲಗಿಸುವುದು ಎಂತಹ ಜಾಣತನ ಹಾಗು ಎಲ್ಲಿಯ ನ್ಯಾಯ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ, ಉತ್ತರ ಇನ್ನೆಲ್ಲೋ ಸಮಾಧಿಯಲ್ಲಿ ಆಕಳಿಸಿ ತನ್ನ ಮಗ್ಗುಲು ಬದಲಿಸುತ್ತದೆ.

ಮಂಗಳವಾರ, ಡಿಸೆಂಬರ್ 23, 2008

ಒಮ್ಮೆ ಹೀಗೂ ಆಗಿತ್ತು!

(ಏನಾದರು ಬರೆಯುತ್ತಿರುತ್ತೇನಾದರು, ಮನದ ಗೆಳೆಯ ಎಲ್ಲವನ್ನು ಸೋಸಿ, ಪ್ರಕಟಿಸಲು ಯೋಗ್ಯವೆಂಬಂತಹ ಒಂದೆರಡು ಬರಹ ಮಾತ್ರ ಎತ್ತಿ ಕೈಗಿಡುತ್ತಾನೆ. ನನ್ನ ಪ್ರೀತಿಯ ಕೆಲವು ಸಹೋದ್ಯೋಗಿಗಳು ಹಾಗು ಗೆಳೆಯರೆಲ್ಲರಿಗೂ ನನ್ನ ಬರಹಗಳೆಂದರೆ ರೋದಿಸುವ ಮಗುವಂತೆ, ಇಲ್ಲವೇ ತತ್ವ ಸಿಧ್ಧಾಂತದ ಇಳಿ ವಯಸ್ಸಿನ ಹಿರಿಯನಂತೆ. ಓದಿ ಇಷ್ಟವಾಗಿ ನಗುವಂತೆ ಏನಾದರು ಬರಿ ಎನ್ನುತ್ತಿದ್ದ ಹಿರಿಯಕ್ಕನಂತಹ ಸಹೋದ್ಯೋಗಿಯೊಬ್ಬರ ಮಾತಿನಂತೆ ಇದನ್ನು ಬರೆಯುತ್ತಿದ್ದೇನೆ, ಘಟನೆಗಳು ನಡೆದ ಕ್ಷಣದಲ್ಲಿ ನನ್ನನ್ನು ತಬ್ಬಿಬ್ಬಾಗಿಸಿ, ಕೊನೆಗೆ ಇನ್ಯಾವಾಗಲೋ ನೆನಪಿಸಿ ಕೊಂಡು ನಗುವಂತೆ ಮಾಡಿವೆ. ಪೀಠಿಕೆ ತುಂಬ ಆಯ್ತು ಅನ್ಸುತ್ತೆ, ಅಂದ ಹಾಗೆ ವಿಷಯಕ್ಕೆ ಬರ್ತೀನಿ, ಓದಿ ನಗು ಬರದಿದ್ರೆ ದಯವಿಟ್ಟು ಬಯ್ಕೊಬೇಡಿ...)

ಘಟನೆ ೧:
ನನ್ನೂರಿನಲ್ಲಿ ನನ್ನ ಆತ್ಮೀಯ ಗೆಳೆಯನೊಬ್ಬ ಛಾಯಾಚಿತ್ರಗ್ರಾಹಕ, ಹಾಗಾಗಿ ನನಗೂ ಸಹ ಚಿತ್ರ ಸೆರೆಹಿಡಿವ ಗೀಳು ಹಿಡಿಸಿದ್ದ. ಅವನು ಒಬ್ಬನೇ ಇದ್ದುದರಿಂದ, ಒಂದೇ ದಿನ ಎರಡು ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ, ಒಂದಕ್ಕೆ ನಾನು-ಇನ್ನೊಂದಕ್ಕೆ ಆತ ಹೋಗುತ್ತಿದ್ದೆವು. ಅದು ೨೦೦೩ರ ಜೂನ್ ತಿಂಗಳು, ಮೊದಲೇ ಮಳೆಗಾಲವಾದದ್ದರಿಂದ, ವಿದ್ಯುತ್ ಅಭಾವ ನಮ್ಮ ಕಡೆ ಸರ್ವೇ ಸಾಮಾನ್ಯ. ನಾನು ಗರ್ತಿಕೆರೆಯ ಬಳಿಯ ಇನ್ನೊಂದು ಸಣ್ಣ ಹಳ್ಳಿಗೆ ಹೋಗಬೇಕೆಂದು ತಿಳಿಸಿದ, ನಾನು ವಿವಿಟಾರ್ ೨೮ ಅಗಲ ಕೋನದ ಕ್ಯಾಮೆರ, ಹಾಗು ಒಂದು ನ್ಯಾಷನಲ್ ಫ್ಲಾಶ್, ಹತ್ತು ಫ್ಯುಜಿ ರೋಲಿನ ಒಂದು ಸಣ್ಣ ಗೊಂಚಲು, ಜೊತೆಗೆ ಒಂದಿಪ್ಪತ್ತು ಶೆಲ್ಲಿನದೊಂದು ಸರವನ್ನು ನನ್ನ ಕೈ ಚೀಲಕ್ಕೆ ಸೇರಿಸಿಕೊಂಡು ಹೊರಟೆ.

ಹಳ್ಳಿಮನೆಯಾದದ್ದರಿಂದ ಅವರೆಲ್ಲರಿಗೂ ಕ್ಯಾಮೆರ ಒಂದು ಕೌತುಕವೆ ಸರಿ, ಪ್ರತಿಯೊಬ್ಬರೂ ನಂದೊಂದು ಪೋಟ-ನಂದೊಂದು ಪೋಟ ಎಂದು ಮುಗಿ ಬೀಳುವವರೇ, ಇನ್ನೊಂದು ಕಡೆ ವರ-ಮಹಾಶಯನ ಅಜ್ನಾಪನೆ, ಯಾವುದೇ ಕಾರಣಕ್ಕೂ ಫೋಟೋ ೬೦-೮೦ ದಾಟ ಬಾರದು. ಹಾಗಾಗಿ ಎಲ್ಲರಿಗೂ ಸುಮ್ಮನೆ ಫ್ಲಾಶ್ ಬೆಳಕು ತೋರಿಸಿ, ಖುಷಿ ಪಡಿಸಿದೆ. ಒಬ್ಬರು ಬಂದು ನೀವು ಮಲಗಿ ಎಂದರೆ, ಮಲಗಿದ ಮರು ಕ್ಷಣದಲ್ಲಿ ಇನ್ನೊಬ್ಬರು ಬಂದು ಅಣ್ಣಾ ಫೋಟ ಹೊಡಿಲಿಕ್ಕಿತ್ತು, ಎಳ್ಬೈದ ಎಂದು ಎಬ್ಬಿಸುತ್ತಿದ್ದರು. ಶಾಸ್ತ್ರ ವಿಪರೀತವಾದದ್ದರಿಂದ ರಾತ್ರಿಯಿಡೀ ಅತ್ತ ಫೋಟೋ ತೆಗೆಯಲಿಕ್ಕಾಗದೆ, ಇತ್ತ ಸುಮ್ಮನೆ ಕುಳಿತುಕೊಳ್ಳಲು ಆಗದೆ ಕಳೆದೆ. ಕೊನೆಗೆ ಮಲಗಲು ಭಾರಿ ವ್ಯವಸ್ಥೆ ಮಾಡ್ತೀವಿ, ಚಳಿ ಬಗ್ಗೆ ಹೆದರುವ ಅಗತ್ಯವೇ ಇಲ್ಲ ಅಂದಿದ್ದ ವರನ ಕಡೆಯವರು, ಒಂದು ಈಚಲ ಚಾಪೆ, ಹಾಗು ಹಳೆಯ ಸೀರೆ ತುಂಡೊಂದನ್ನು ಹೊದ್ದು ಕೊಳ್ಳಲು ಕೊಟ್ಟರು, ಮಲೆನಾಡ ಜಡಿ ಮಳೆಯ ರಭಸ ಮತ್ತು ಭರಾಟೆ ಬಲ್ಲವನೇ ಬಲ್ಲ, ರಾತ್ರಿ ನನ್ನ ಪಾಲಿಗೆ ನರಕ ಸದೃಶವಾಗಿತ್ತು.

ಮಾರನೆ ದಿನ ಹಾರಹಾಕುವ, ಹಾಗು ತಾಳಿ ಕಟ್ಟುವ ಪ್ರತಿ ದೃಶ್ಯಾವಳಿಯ ನಡುವೆ ಎಲ್ಲ ಹಳ್ಳಿಗರು ಇಣುಕಿ ಮರೆಯಾಗುತ್ತಿದ್ದರು, ಹೇಗೇಗೋ ಹೆಣಗಾಡಿ ಫೋಟೋ ಸೆರೆ ಹಿಡಿದಿದ್ದೆ. ಕೊನೆಗೂ ಮದುವೆ ಕೊನೆಯ ಹಂತಕ್ಕೆ ಬಂದು ನಿಂತಿತ್ತು, ಎಲ್ಲ ಶಾಸ್ತ್ರ ಮುಗಿಸಿ, ಹೊರಡುವ ಮುನ್ನ, ಹುಡುಗ-ಹುಡುಗಿಯ ವಿಭಿನ್ನ ಭಂಗಿಯ ಚಿತ್ರ ತೆಗೆಯುವುದು ವಾಡಿಕೆ. ನಾನು ಹುಡುಗನ ವಿವಿಧ ಫೋಟೋಗಳನ್ನು, ಹುಡುಗ-ಹುಡುಗಿಯ ಜೋಡಿ ಫೋಟೋಗಳನ್ನು ತೆಗೆದೆ. ನಂತರ ಹುಡುಗಿಯ ಫೋಟೋ ತೆಗೆಯಲು ಅನುವಾದೆ. ಅಲ್ಲಿಯವರೆಗೂ ಇತರರು ಹೇಳುತ್ತಿದ್ದದ್ದನ್ನು ಕೇಳಿದ್ದೆ ಅದೇನೆಂದರೆ ಹುಡುಗ ಹುಡುಗಿಯ ಬಗ್ಗೆ ಸ್ವಲ್ಪ ಜಾಸ್ತಿಯೇ ಎಂಬಷ್ಟು ಪೊಸೆಸ್ಸಿವ್. ಆಕೆಯ ಫೋಟೋ ತೆಗೆಯುವ ಮುನ್ನ ಆತ ಕೇಳಿದ ಇದರ ಅಗತ್ಯ ಇದೆಯಾ ಎಂದು, ನಾನು ಹೌದು ಎಂದಷ್ಟೇ ತಲೆಯಾಡಿಸಿದೆ.

ಮದುಮಗಳಿಗೆ ಮೊಗ್ಗಿನ ಜಡೆ ಫೋಟೋ ತೆಗೆಯ ಬೇಕು, ಸ್ವಲ್ಪ ಕಡೆ ತಿರುಗಿ ನಿಲ್ತೀರ ಎಂದು ಕೇಳಿದೆ. ಆಕೆ ತಿರುಗಿ ನಿಲ್ಲುವಷ್ಟರಲ್ಲಿ, ನಮ್ಮ ವರ-ಮಹಾಶಯ ಮೇಲೆರಗಿ ಬಂದು "ನೀವೇನು ಹಿಂಗೆಲ್ಲ ಪೋಟ ತಗೀತೀರಿ " ಎಂದು ರೇಗಾಡಿದ, ಕೊನೆಗೆ ಮದರಂಗಿ ಕೈ ಫೋಟೋ ತೆಗೆಯಲು ಆಲೋಚಿಸಿ ಮದುಮಗನ ಬಳಿ ಅನುಮತಿ ಕೇಳಿದೆ, ಆತ ಸಾಧ್ಯವೇ ಇಲ್ಲವೆಂಬಂತೆ ಕುಣಿದಾಡಿದ. ನಾನು ಸೇರಿದ್ದ ಜನರಿಗೆ ತಮಾಷೆಯ ವಸ್ತುವಾಗಿ, ನೋಡುಗರ ನಗುವಿಗೆ ಆಹಾರವಾಗಿದ್ದೆ.

ಘಟನೆ ೨:
ಸುಮಾರು ೬ ವರ್ಷದ ಕೆಳಗೆ, ಗೆಳೆಯನ ಅಕ್ಕನ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮವಿತ್ತು. ನಾವು ಮೂರ್ನಾಲ್ಕು ಗೆಳೆಯರು ತುಂಬ ಆತ್ಮೀಯರಾಗಿದ್ದದ್ದರಿಂದ ಎಲ್ಲ ಸಮಯ-ಸಂಧರ್ಭಕ್ಕೂ ಒಬ್ಬರ ಮನೆಗೆ ಒಬ್ಬರು ಹೋಗುವ ಅಭ್ಯಾಸವಿಟ್ಟು ಕೊಂಡಿದ್ದೆವು. ಆ ದಿನ ಸಂಜೆ ಕಾರ್ಯಕ್ರಮವಿತ್ತು, ನಮ್ಮ ಗೆಳೆಯ ಕೆಲಸದೊತ್ತಡದಿಂದೆಂಬಂತೆ ಸಿಕ್ಕ ಒಬ್ಬ ಗೆಳೆಯನ ಬಳಿ ಆಹ್ವಾನ ಕಳಿಸಿದ. ಯಥಾಪ್ರಕಾರ ನಾವು ಸಂಜೆಗೆ ಹಾಜರು. ನಾವು ಬಂದಿದ್ದು ನೋಡಿ ಖುಷಿಯಾದ ಗೆಳೆಯ, ಅವರ ಮನೆಗೆ ಬಂದಿದ್ದ ಎಲ್ಲ ಅತಿಧಿಗಳ ಸಮ್ಮುಖದಲ್ಲಿ ಒಂದೇ ಉಸಿರಿಗೆಂಬಂತೆ ಹೇಳಿದ "ತುಂಬ ಖುಷಿಯಾಯ್ತು ಕಣ್ರೋ, ನಾನೇ ಕರೀ ಬೇಕು ಅಂತ ಅಂದ್ಕೊಂಡೆ, ನೀವ್ಯಾರು ಸಿಕ್ಕಿರಲಿಲ್ಲ, ಕರೀದೆ ಇದ್ರೂ ಬಂದ್ರಲ್ಲ ಅದೇ ಸಂತೋಷ", ಒಂದು ರೀತಿಯಲ್ಲಿ ರೇಶಿಮೆ ಬಟ್ಟೆಯಲ್ಲಿ ಪಾದುಕೆ ಸುತ್ತಿ ಪ್ರೀತಿಯಿಂದೆಂಬಂತೆ ಹೊಡೆದಂತಿತ್ತು, ಅವನು ನಾನೇ ಸ್ವತಃ ಕರಿಬೇಕು ಅಂದ್ಕೊಂಡಿದ್ದೆ ಅನ್ನ ಬೇಕಾಗಿತ್ತು, ಹೀಗೆಂದು ನೆರೆದವರೆಲ್ಲ ಮತ್ತೊಮ್ಮೆ- ಮಗದೊಮ್ಮೆ ಎಂಬಂತೆ ಅಡಿಯಿಂದ-ಮುಡಿವರೆಗೆ ನಮ್ಮ ದರ್ಶನ ಪಡೆದರು, ನಾವು ನಾಚಿ ನೀರಾಗಿದ್ದೆವು.


ಘಟನೆ ೩:
ಮಲೆನಾಡಿನ ಕೆಲವರಿಗೆ ಊಟವಾದ ಮೇಲೆ ವೀಳ್ಯದೆಲೆ ಜಗಿಯುವ ಅಭ್ಯಾಸ, ಮೊನ್ನೆ ಊರಿಗೆ ಹೋಗಿದ್ದಾಗ ನನ್ನ ಸೋದರತ್ತೆ-ಮಾವ, ಅವರ ಮಕ್ಕಳು ಮನೆಗೆ ಬಂದಿದ್ದರು, ನಾವೆಲ್ಲ ವಾರಕ್ಕೊಮ್ಮೆಯಾದರೂ ಒಟ್ಟಾಗಿ ಸೇರುವ ಅಭ್ಯಾಸ ಮೊದಲಿನಿಂದಲೂ ಇದೆ. ಮೊನ್ನೆ ಹಾಗೆ, ಊಟ ಮುಗಿಸಿ ಕುಳಿತಾಗ, ಸೋದರತ್ತೆ ಅವರ ವರ್ಷದ ಮಗನಿಗೆ ಮನೆಯೆದುರು ಬೆಳೆದ ಬಳ್ಳಿಯಿಂದ ವೀಳ್ಯದೆಲೆ ತರಲು ಹೇಳಿದರು. ಅವನು ಒಮ್ಮೆ ಹೋಗಿ, ಒಂದು ಸಣ್ಣ ಎಲೆ ತಂದು ಅವರಮ್ಮನ ಕೈಗಿತ್ತು ಇಷ್ಟೇ ಇರೋದು ಎಂದ. ಅವರಮ್ಮ, ಸರಿಯಾಗಿ ನೋಡಿ ಇನ್ನೊಂದೆರಡು ಕಿತ್ಕೋ ಬಾ ಅಂತ ಕಳಿಸಿದರು, ಮತ್ತೆ ಹೋದವ ಇಲ್ಲ ಎನ್ನುತ್ತಾ ಬಂದ. ಮತ್ತೆ ಜೋರು ಮಾಡಿ ಸರಿಯಾಗಿ ನೋಡಿಕೊಂಡು ಒಂದೆರಡು ಎಲೆ ಕಿತ್ಕೋ ಬಾ ಎಂದಾಗ, ಸಿಟ್ಟಿನಲ್ಲಿ ಹೋದ ನಮ್ಮ ಗುಂಡ ಬಳ್ಳಿಯನ್ನು ಬೇರು ಸಮೇತ ಕಿತ್ತು ತಂದಿದ್ದ, ಎಲೆ ಇಲ್ಲ ಎಂದು ಸಾಬೀತು ಮಾಡಲು, ಎಲೆ ಕೇಳಿದವರೆಲ್ಲ ಸುಸ್ತೋ ಸುಸ್ತು.

ಘಟನೆ ೪:
ನನ್ನ ಸಹೋದರ(ತಮ್ಮ) ವೃತ್ತಿಯಲ್ಲಿ ಪ್ರಖ್ಯಾತ ಫಾರ್ಮಾ ಕಂಪನಿಯೊಂದರ ಔಶಧಿಗಳ ಪ್ರತಿನಿಧಿ, ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯ ನಿರತ, ನಗರದ ಬಹುತೇಕ ವೈದ್ಯರನ್ನು ಭೇಟಿ ಮಾಡಿ ರೋಗಿಗಳು ತುಂಬಾ ಇದ್ದರೆ ಕಾದು, ನಂತರ ವೈದ್ಯರಿಗೆ ಔಶಧಿಗಳ ವಿವರ ನೀಡುತ್ತಾನೆ. ಕೆಲವು ದಿನಗಳ ಹಿಂದೆ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಭಕ್ತಾದಿಗಳು ಕಡಿಮೆಯಿದ್ದದ್ದನ್ನು ಕಂಡು ಚಕಿತಗೊಂಡ ನನ್ನ ಸಹೋದರೋತ್ತಮ ಎಂದಿನಂತೆ ಉದ್ಗರಿಸಿದ್ದ "ಅಯ್ಯೋ! ಏನಿದು ಪೇಶೆಂಟ್ಸೇ ಇಲ್ಲ", ಜೊತೆಯಲ್ಲಿದ್ದವರು ಇವನ ಕಾರ್ಯ ತತ್ಪರತೆ-ತಲ್ಲೀನತೆ ಕಂಡು ಹೌಹಾರಿದ್ದರು.

ಇತ್ತೀಚೆಗೆ ಮದುವೆಯಾದ ಗೆಳೆಯನ ಬಗ್ಗೆ ಮಾತನಾಡುವಾಗ, ನನ್ನ ತಮ್ಮ ಕೇಳಿದ "ಹುಡುಗಿಯದು ಯಾವ ಕಾಂಬಿನೇಶನ್ (ಅವರು ಔಶಧಿಗಳನ್ನು ಗುರುತಿಸುವುಸು ಇದರ ಮೇಲೆಯೇ) ", ಅವನ ಉದ್ದೇಶವಿದ್ದದ್ದು ಆಕೆ ಏನು ಮಾಡುತ್ತಿದ್ದಾಳೆ ಎಂದು ಕೇಳುವುದು. ಅದು ಅರ್ಥವಾಗ ಬೇಕಾದರೆ ನನಗೆ ಸುಸ್ತಾಗಿತ್ತು.

ನಾನು ಎಷ್ಟೋ ಬಾರಿ ಹೊರಗೆ ಹೊರಟಾಗ ಗೆಳೆಯರಿಗೆ ಕೇಳಿದ್ದುಂಟು "ರೂಮ್ shutdown ಮಾಡಿದ್ದೀರ?" ಎಂದು, ನಾನು ವೃತ್ತಿಯಲ್ಲಿ ತಂತ್ರಾಂಶ ಅಭಿಯಂತರ!

ಸೋಮವಾರ, ಡಿಸೆಂಬರ್ 22, 2008

ನೆನ್ನೆ-ನಾಳೆಗಳೆಂಬ ಎರಡು ದಿಗಂತಗಳ ನಡುವೆ...

ಅಂತರಾಳ - ೫

ಭಾನುವಾರದ
ಇಳಿ ರಾತ್ರಿಯಲಿ ಎಫ್. ಎಂ ಆಕಾಶವಾಣಿ ತಣ್ಣಗೆ ಹಳೆಯ ಕನ್ನಡ ಹಾಡುಗಳನ್ನು ಒಂದರ-ಮೇಲೊಂದರಂತೆ ಪುಂಖಾನುಪುಂಖವಾಗಿ ಪ್ರಸಾರ ಮಾಡುತ್ತಿತ್ತು. ಎಲ್ಲವು ಬಹುತೇಕ ೧೯೬೦-೧೯೮೦ ನಡುವಿನ ಅತಿ-ಮಧುರ ಕನ್ನಡ ಚಿತ್ರ ಗೀತೆಗಳು, ಪ್ರತಿ ಸಾಲನ್ನು ಮೌನವಾಗಿ ಆಹ್ಲಾದಿಸುತ್ತ ಕುಳಿತವನಿಗೆ ಸಾಲುಗಳು ತೀವ್ರವಾಗಿ ಕಾಡಲಾರಂಬಿಸಿದವು...
"ಒಂದೆ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೆ ಏತಕೋ!"
(ಗೀತೆ : ಯುಗ ಯುಗಾದಿ ಕಳೆದರೂ, ಚಿತ್ರ : ಕುಲವಧು, ಬಿಡುಗಡೆಯಾದ ವರ್ಷ : ೧೯೬೩)
ಅಲ್ಲಿಂದ ಮುಂದೆ ಗೆಳೆಯನೊಡನೆ ಅಂತರಂಗದ ವಾಕ್-ಕದನಕ್ಕಿಳಿದೆ. ನೆನ್ನೆ ಇತಿಹಾಸದ ಪುಟಗಳಲ್ಲಿ ವಿರಾಜಮಾನವಾಗಿದೆ, ನಾಳೆ ಅನಿಶ್ಚಿತತೆಯ ಹೊಸ್ತಿಲನ್ನು ದಾಟಿ ಇನ್ನು ಬರಬೇಕಿದೆ, ಇಂದು ನಮ್ಮ ಕೈಯಲ್ಲಿದೆ. ಆದರೆ ನಾವು ನೆನ್ನೆಯೆಂಬ ಭೂತ ಹಾಗು ನಾಳೆಯೆಂಬ ಭವಿಷ್ಯದಲ್ಲಿ ಬದುಕಿದ್ದೇವೆ, ಹಾಗು ಬದುಕಲು ಹವಣಿಸುತ್ತಿದ್ದೇವೆ. ನಮಗೆ ವರ್ತಮಾನದ ಇವತ್ತು ಎಂಬುದು ವರ್ಜ್ಯ, ಅದರೆಡೆಗೆ ಅದೆಂತಹುದೋ ನಿರಾಸಕ್ತಿ ಹಾಗು ಬೇಸರ. ನಾನು ೧-೨ ನೇ ತರಗತಿ ಓದುವಾಗ ಅಜ್ಜಿಯ ಮನೆಗೆ ಅಪರೂಪಕ್ಕೆ ಹೋದಾಗ, ಅಜ್ಜಿಯ ಮಗ್ಗುಲಿನಲ್ಲಿ ಮಲಗಿ ಇನ್ನೇನು ನಿದ್ರಾ ಲೋಕಕ್ಕೆ ಜಾರುವ ಮುನ್ನ ಅಜ್ಜಿಯನ್ನು ಕೇಳುತ್ತಿದ್ದೆ "ಅಜ್ಜಿ ನಾಳೆ ಏನು ತಿಂಡಿ?", ಅದಕ್ಕೆ ಅಜ್ಜಿಯದು ಸದಾ ಒಂದೇ ಉತ್ತರ "ಮಗಾ ನಾಳೆ ಕತೆ ನಾರಾಯಣ ಬಲ್ಲ" (ನನ್ನ ದೂರದೂರಿನಲ್ಲಿದ್ದ ಒಬ್ಬ ಚಿಕ್ಕಪ್ಪನ ಹೆಸರು ನಾರಾಯಣ ಆಗಿದ್ದರಿಂದ, ಬಹಳ ದಿನಗಳವರೆಗೆ ಅಜ್ಜಿ ಏಕೆ ಚಿಕ್ಕಪ್ಪನಿಗೆ ಗೊತ್ತು ಅಂತಾರೆ ಎಂಬುದು ನನ್ನಲ್ಲಿನ ಯಕ್ಷ ಪ್ರಶ್ನೆಯಾಗಿತ್ತು, ಅಜ್ಜಿ ಮಾಡುವ ತಿಂಡಿಗೂ, ಚಿಕ್ಕಪ್ಪನಿಗೋ ಏನು ಸಂಬಂಧ ಎಂಬುದು ನನಗೆ ಗೋಜಲಿನಂತಾಗಿತ್ತು. ಕೊನೆಗೊಮ್ಮೆ ನನಗೆ ಗೊತ್ತಾಗಿದ್ದು ನಾರಾಯಣ ಅಂದರೆ ಶ್ರೀ ವಿಷ್ಣು ಸ್ವರೂಪಿ ಶ್ರೀಮಾನ್ ನಾರಾಯಣ ಸ್ವಾಮಿ). ನನ್ನಜ್ಜಿ ವಾಸ್ತವ ಪ್ರಿಯೆ, ಆಕೆಗೆ ನಾಳೆಯ ಬಗ್ಗೆ ಉತ್ಸಾಹವಿದೆಯೇ ಹೊರತು ಅತೀವ ಕುತೂಹಲವಿಲ್ಲ, ಆಕೆ ಇವತ್ತನ್ನು ಬದುಕಿದ್ದಾಳೆ ಮತ್ತು ಬದುಕುತ್ತಾಳೆ.

ನಾವು ನೆನ್ನೆ ನಡೆದದ್ದಕ್ಕೆ ವಿಷಾದಿಸಿ, ರೋದಿಸುತ್ತೇವೆ. ನೆನ್ನೆ ಸೋತ ಸೋಲಿಗೆ ಇಲ್ಲಾ ಗೆದ್ದ ಗೆಲುವಿಗೆ ಕಾರಣ ಹುಡುಕುವುದು ತಪ್ಪಲ್ಲ, ಅದಕ್ಕೆ ವಿಶ್ಲೇಷಣೆಯ ಅಗತ್ಯ ಖಂಡಿತ ಇದೆ. ಆದರೆ ನೆನ್ನೆ ಸೋಲಿನಲ್ಲಿ ಮೂಲೆ ಸೇರುವುದೋ ಇಲ್ಲಾ ನೆನ್ನೆ ಗೆಲುವಿನಲ್ಲಿ ಮೈಮರೆವುದೋ ಆದಲ್ಲಿ, ಇವತ್ತು ಕೈ ಜಾರುತ್ತದೆ, ಕಾಲ ಯಾರನ್ನೂ ಕಾಯುವುದಿಲ್ಲ. ನೆನ್ನೆಯ ವಿಚಾರ ಮಾತನಾಡುತ್ತ ಇಂದಿನ ದಿನ ಕಳೆದರೆ, ಇಂದಿನ ಬಗ್ಗೆ ಮಾತನಾಡಲು ನಾಳೆಗೆ ಏನು ಉಳಿದಿರುವುದಿಲ್ಲ, ನಿಷ್ಪ್ರಯೋಜಕ ದಿನದ ಗುಲಾಮರಾಗುತ್ತೇವೆ. ನಮ್ಮಲ್ಲದೆಷ್ಟೋ ಜನ ಇಂದು ಹೊಟ್ಟೆ-ಬಟ್ಟೆ ಕಟ್ಟಿ ಕಾಣದ ನಾಳೆಯ ಬದುಕಿಗೆ ಕನಸು ಕಟ್ಟುತ್ತೇವೆ, ಮತ್ತು ಇದೇ ಪ್ರಯತ್ನದಲ್ಲಿ ಇವತ್ತನ್ನು ಹೊಸಕಿ ಹಾಕಿರುತ್ತೇವೆ, ನೆಮ್ಮದಿ ಕಳೆದುಕೊಂಡಿರುತ್ತೇವೆ, ಮತ್ತು ಬದುಕು ಹೀಗಾಗಿ ಯಾಂತ್ರಿಕ ಎಂದೆನಿಸುತ್ತದೆ. ನಮ್ಮ ಬದುಕು ಯಾಂತ್ರಿಕವಾಗಿದೆ ಎನ್ನುವ ನಾವು, ಎಂದಿಗೂ ಇದರ ಬಗ್ಗೆ ಚಿಂತಿಸಲಾರೆವು, ನಾವೆಲ್ಲ ಕಾರ್ಯ ನಿರತರು ನಾಳೆ ಕಟ್ಟಲು.

ನಾಳೆಯ ಬಗ್ಗೆ ಅದ್ಭುತವಾದ ಯೋಜನೆಗಳಿರಲಿ, ಆದರೆ ನಾಳೆ ಬರುವವರೆಗೆ ತಾಳ್ಮೆಯಿಂದ ಇವತ್ತನ್ನು ಪೂರ್ತಿಯಾಗಿ ಬದುಕೋಣ. ವಾಸ್ತವವಾಗಿ ನೆನ್ನೆಯಲ್ಲಿ ನಾವು ಇಲ್ಲವೇ ಇಲ್ಲಾ, ಜೊತೆಗೆ ನಾಳೆಯನ್ನು ನೋಡುವುದೇ ಇಲ್ಲ. ಆದರು ಈ ನೆನ್ನೆ-ನಾಳೆಯೆಂಬ ಮಾಯಾಜಿಂಕೆಯನ್ನು ಬೆನ್ನಟ್ಟಿ ಓಡುತ್ತಿದ್ದೇವೆ. ಶಾಲಾ ದಿನಗಳಲ್ಲೂ ಹೀಗೆ, ಪರೀಕ್ಷೆ ಹಿಂದಿನ ದಿನ ಒಂದು ಹಠಾತ್ ತೀರ್ಮಾನಕ್ಕೆ ಬರುತ್ತಿದ್ದೆವು, ಮುಂದಿನ ವರ್ಷದಿಂದ ಅವತ್ತಿನ ಪಾಠ ಅವತ್ತೇ ಓದಬೇಕು, ಮುಂದಿನ ವರ್ಷ ಬರಲೇ ಇಲ್ಲ, ಪ್ರತಿ ವರ್ಷ ಇದೆ ಹೇಳಿ ಮನಸ್ಸನ್ನು ಸುಮ್ಮನಾಗಿಸಿದೆವು, ಜೊತೆಗೆ ಮುಂದಿನ ವರ್ಷದ ಸುಳಿಯಲ್ಲಿ ಈ ವರ್ಷ ಮತ್ತೆ ನೆನೆಗುದಿಗೆ ಬಿತ್ತು.

ನಾವು ನಮಗಾಗಿ ಬದುಕಲಾರೆವು, ನಮ್ಮ ಆಲೋಚನೆಗಳೆಲ್ಲ ನಾನು ಎಲ್ಲರನ್ನು ಅಚ್ಚರಿಗೊಳಿಸಿ ಬಿಡುವಂತೆ ಬದುಕಲ್ಲಿ ಬೆಳೆಯ ಬೇಕು, ಎಲ್ಲರು ಮೂಗಿನ ಮೇಲೆ ಬೆರಳಿಡುವಂತೆ ಯಶಸ್ಸನ್ನು ಪಡೆಯಬೇಕು ಎನ್ನುವಂತವು. ಆದರೆ ಈ 'ಎಲ್ಲರು' ಅಂದರೆ ಯಾರು, ಅದು ನಮಗೆ ಗೊತ್ತಿಲ್ಲ. ನಾವು ಏನೋ ಸಾಧಿಸ ಬೇಕು ಎಂದು ಕೊಳ್ಳುವುದು ಇನ್ನಾರನ್ನೋ ಖುಷಿ ಪಡಿಸಲಿಕ್ಕೆ ಅಥವಾ ಇನ್ನಾರದೋ ಮನಸ್ಸಿನಲ್ಲಿ ಕಿಚ್ಚು ಹಚ್ಚಲಿಕ್ಕೆ, ನಮಗಾಗಿ ಅಲ್ಲವೇ ಅಲ್ಲ. ನಾವು ಗಾಣಕ್ಕೆ ಕಟ್ಟಿರುವ ಎತ್ತಿನಂತೆ, ತಿರುಗಬೇಕು ಹಾಗಾಗಿ ತಿರುಗುತ್ತಿದ್ದೇವೆ, ಏತಕ್ಕಾಗಿ ತಿರುಗುತ್ತಿದ್ದೇವೆ ಎಂಬುದು ನಮಗೇ ಅರ್ಥವಾಗಿರದ ಸತ್ಯ. ನಾವು ಪ್ರತಿ ದಿನ ಹೊಸ ಆಲೋಚನೆಯನ್ನು, ಯೋಜನೆಯನ್ನು ಆರಂಭಿಸುತ್ತೇವೆ, ಹೊರತಾಗಿ ಅದಾಗಲೇ ರೂಪಿತವಾಗಿ ಮತ್ತು ಆರಂಭವಾಗಿರುವ ಯೋಜನೆಯನ್ನು ಪೂರ್ಣಗೊಳಿಸಲಾರೆವು ಏಕೆಂದರೆ ಯೋಜನೆ ಆರಂಭಿಸುತ್ತಿದ್ದಂತೆ ನಮ್ಮನ್ನು ನಾಳೆ ಕಾಡುತ್ತದೆ, ಮತ್ತೆ ಅದರ ಬಗ್ಗೆ ನಮ್ಮ ಗಮನ ಹರಿಯುತ್ತದೆ, ಅಲ್ಲಿಗೆ ನೆನ್ನೆ ಇಡೀ ದಿನ ಹಾಳುಗೆಡವಿ ಇವತ್ತಿಗಾಗಿ ಹಾಕಿದ ಯೋಜನೆ ತಳ ಹಿಡಿದು ಕರಕಲಾದ ಉಪ್ಪಿಟ್ಟಾಗುತ್ತದೆ, ಮತ್ತದನ್ನು ತಿನ್ನಲಾರದೆ ಎಸೆಯುತ್ತೇವೆ. ರವೆ-ಇತರೆ ಸಾಮಗ್ರಿ-ಪರಿಶ್ರಮ ಎಲ್ಲ ವ್ಯರ್ಥ, ಜೊತೆಗೆ ಮನಸ್ಸು ಕೂಡ.

ಬದುಕಿನಲ್ಲಿ ದೂರದರ್ಶಿತ್ವ ತುಂಬಾ ಮುಖ್ಯ ಖಂಡಿತ, ನಾಳೆಯ ಬಗ್ಗೆ ಒಂದು ಸೂಚ್ಯ ಪರಿವೆ ನಮ್ಮಲ್ಲಿದ್ದರೆ ಸಾಕು. ನಾಳೆ ಗೆಲ್ಲಲು ಇಂದು ಏನು ಮಾಡ ಬೇಕು ಎಂಬ ಆಲೋಚನೆ ನಮ್ಮ ಮನದಲ್ಲಿ ಮೂಡಿದರೆ ಅರ್ಧ ಗೆದ್ದಂತೆಯೇ, ನಾಳೆ ಗೆಲ್ಲಲು ನಾಳೆ ಏನು ಮಾಡಬೇಕು ಎಂಬುದು ನಿರರ್ಥಕ ಕಾಲ ಹರಣದ ಯೋಚನೆ ಮತ್ತು ಮೂರ್ಖ ಯೋಜನೆ. ನೇರವಾಗಿ ಗುಡ್ಡದ ತುದಿಗೆ ಹಾರಿ ಕುಳಿತವರು ನಮ್ಮಲ್ಲಿ ಯಾರು ಇಲ್ಲ (ಅತಿ-ಮಾನುಷ ಶಕ್ತಿಗಳಲ್ಲಿ ನನಗೆ ನಂಬಿಕೆ ಇಲ್ಲ), ಗುಡ್ಡದ ತುದಿಯೇರಲು ಒಂದೊಂದೇ ಹೆಜ್ಜೆಯಿಡುವ ಅಗತ್ಯವಿದೆ, ದಾರಿ ಕ್ಲಿಷ್ಟವಾಗಿದೆ ಎಂಬುದರ ಅರಿವು ನಮಗಿರ ಬೇಕು. ಗುಡ್ಡದ ತುದಿಯಲ್ಲಿ ಧ್ವಜ ನೆಡಬೇಕೆಂಬ ಆಲೋಚನೆ ಸೊಗಸಾಗಿದೆ, ಇಲ್ಲೇ ನಿಂತು ಪ್ರಯತ್ನಿಸುವ ಹುಂಬತನ ಮತ್ತು ಕಾಲ ಹರಣ ಪ್ರಕ್ರಿಯೆ ಎರಡು ಬೇಡ, ಧ್ವಜ ಕೈಯಲ್ಲಿದೆ, ಮೊದಲು ಜಾಣ್ಮೆಯಿಂದ, ವೇಗವಾಗಿ ಹಾಗು ಸುರಕ್ಷಿತವಾಗಿ ಗುಡ್ಡದ ತುದಿಗೆರೋಣ, ಕೊನೆಗೆ ಧ್ವಜ ನೆಟ್ಟರಾಯಿತು ಗುರಿ ತಲುಪಿದ ನೆನಪಿಗೆ.

ಪೂರ್ತಿಯಾಗಿ ಗೆಳೆಯ ನನ್ನ ಮಾತಿಗೆ ಒಪ್ಪಿದಂತೆ ಕಾಣಲಿಲ್ಲ, ಮತ್ತವನ ಕಿವಿಯಲ್ಲಿ ಉಸುರಿದೆ "ಒಂದೆ ಒಂದು ಜನ್ಮದಲಿ, ಒಂದೇ ಬಾಲ್ಯ, ಒಂದೇ ಹರೆಯ, ನಮಗದಷ್ಟೆ ಏತಕೋ!", ಅಂದ ಹಾಗೆ ಗೆಳೆಯನ ಹೆಸರು "ಮನಸ್ಸು".

ಬುಧವಾರ, ಡಿಸೆಂಬರ್ 17, 2008

ಮೊಬೈಲ್ ಎಂಬ ಆಗಂತುಕನ ಬೆನ್ನೇರಿ ಹೊರಟು...

ಅಂತರಾಳ - ೪

ಕೋಣೆಯಲ್ಲಿನ
ನೀರವ ಮೌನ, ಮನಸ್ಸೇಕೋ ಇಂದು ಖಾಲಿ-ಖಾಲಿ... "ಕರೆದರು ಕೇಳದೆ..." ಹಾಡಿನ ಕರೆಗಂಟೆಯ ದನಿಯೊಂದಿಗೆ ನನ್ನ ಮೊಬೈಲ್, ಕೋಣೆಯ ಮೌನ ಮುರಿದಿತ್ತು, ಇನ್ನೇನು ಕುಳಿತಲ್ಲಿಂದ ಎದ್ದು ಕರೆ ಸ್ವೀಕರಿಸಬೇಕೆಂದು ಕೊಳ್ಳುವಷ್ಟರಲ್ಲಿ, ಅದು ತಪ್ಪಿದ ಕರೆಗಳ ಪಟ್ಟಿಯಲ್ಲಿ ಸೇರಿಹೋಗಿತ್ತು. ಅದನ್ನೇ ದಿಟ್ಟಿಸುತ್ತಾ ಕುಳಿತವನ ಮನಸ್ಸು - ವರ್ಷಗಳಷ್ಟು ಹಿಂದೆ ಜಾರಿತ್ತು.

ಆಗಿನ್ನೂ ಮೊಬೈಲ್ ಹಾವಳಿ ಆರಂಭವಾಗಿತ್ತಷ್ಟೇ, ದೂರದಲ್ಲಿ ಯಾರದೋ ಕೈಯಲ್ಲಿ ಮೊಬೈಲ್ ನೋಡಿದರೆ "ಓಹೋ ಅದೇ ಮೊಬೈಲಾ" ಎಂದು ಅಚ್ಚರಿಯ ಸುಳಿ ಮುಖದಲ್ಲಿ ಸುಳಿದು ಮರೆಯಾಗುತ್ತಿತ್ತು. ಸ್ಥಿರ ದೂರವಾಣಿಗೆ ಅಲವತ್ತು ಕೊಂಡು ಮಾತು ಆರಂಭಿಸಿದರೆ ಪ್ರತಿ ನಿಮಿಷಕ್ಕೆ .೨೦ ಪೈಸೆಯಂತೆ ಅದೆಷ್ಟಾಗುತ್ತಿತ್ತೋ ಎಸ್.ಟಿ.ಡಿ ಬೂತ್ ಮಾಲೀಕನೆ ಬಲ್ಲ. ಪ್ರೀತಿಯ ಹುಡುಗಿಯ ಮನೆಗೊಂದು ಖಾಲಿ ಕರೆ(ಆಂಗ್ಲದ ಬ್ಲಾಂಕ್ ಕಾಲ್) ಮಾಡಿ ಸಂಭ್ರಮಿಸುವುದು, ಅಪ್ಪಿ-ತಪ್ಪಿ ಅವಳೇ ಕರೆ ಸ್ವೀಕರಿಸಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ಮನೋಸ್ಥಿತಿ. ಮನೆಯಲ್ಲಿ ಕುಳಿತಿದ್ದಾಗ ಮನೆ ದೂರವಾಣಿ ರಿಂಗಣಿಸಿದರೆ ಶರವೇಗದಲ್ಲಿ ಬಂದು, ನೆಗೆದು, ನನಗೆ-ನನಗೆ ಎಂದು ಕೂಗಿ ದೂರವಾಣಿಯ ಕುತ್ತಿಗೆ ಹಿಡಿದು ಕಿವಿಗೆ ಒತ್ತಿ ಮನದಲ್ಲಿ ಅವಳೇ ಇರಬಹುದಾ ಎಂದು ಯೋಚಿಸುತ್ತಾ, ಅತ್ತಲಿನ ದನಿ ಬೇರೆಯಾರದೋ ಆಗಿದ್ದರೆ ಕಸಿವಿಸಿ-ಸಿಡಿಮಿಡಿಗಳನ್ನೆಲ್ಲ ತೋರಿ, ದೂರವಾಣಿಯನ್ನು ಸ್ವಸ್ಥಾನಕ್ಕೆ ಕುಕ್ಕರಿಸಿಡುವುದು, ಅಕಸ್ಮಾತ್ ಕರೆ ಅವಳದೇ ಆಗಿದ್ದರೆ "ಮತ್ತೆ ಏನೋ ವಿಶೇಷ, ಅಮ್ಮ ಇಲ್ಲೇ ಇದ್ದಾರೆ(ಹಾಗಾಗಿ ಸರಿಯಾಗಿ ಮಾತನಾಡಲು ಆಗುತ್ತಿಲ್ಲ, ಬೇಜಾರು ಮಾಡ್ಕೋಬೇಡ ಎಂಬ ಸಂಜ್ಞ ಪೂರ್ವಕ ಮಾಹಿತಿ ಕೊಟ್ಟು)". ಮಾತು ಮುಗಿಸಿ, ಅಮ್ಮನ ಕಡೆ ತಿರುಗಿ, ಆಕೆ ಕೇಳದಿದ್ದರೂ "ಅಮ್ಮ ಫ್ರೆಂಡು, ಅವನೇನಮ್ಮ ನಿಂಗೂ ಗೊತ್ತು" ಎಂದು ನಾಟಕೀಯವಾಗಿ ರಾಗ ಎಳೆದು ಮನೆಯಿಂದ ಹೊರಗೆ ಕಾಲಿಟ್ಟು, ಎಷ್ಟೋ ಹೊತ್ತಿಗೆ ತಿಂದು ಇನ್ನೆಷ್ಟೋ ಹೊತ್ತಿನ ತನಕ ಮೆಲುಕು ಹಾಕುವ ಎಮ್ಮೆಯಂತೆ, ಸವಿಯಾದ ಸಂಭಾಷಣೆಯನ್ನು ಮತ್ತು ಅವಳ ನೆನಪನ್ನು ಮತ್ತಿನ್ನೆಷ್ಟೋ ಹೊತ್ತಿನವರೆಗೆ ಮನದಲ್ಲಿ ಮೆಲುಕು ಹಾಕಿ, ಒಳಗೊಳಗೇ ನಕ್ಕು ಸಂಭ್ರಮಿಸಿ, ಮತ್ತೆ ಮುಂದಿನ ಕರೆ ಬರುವವರೆಗೆ ಕಾಯುವುದು (ಇದು ಬಹುತೇಕರ ಬದುಕ ನೈಜ ಘಟನೆ ಎಂದು ಭಾವಿಸುತ್ತೇನೆ, ಬಹುಶಃ ಅವನು ಅವಳಾಗಿರಬಹುದು, ಇಲ್ಲ ಅವಳು ಅವನಾಗಿರಬಹುದು).

ಆಮೇಲೆ ಮೊಬೈಲ್ ತನ್ನ ವ್ಯಾಪ್ತಿಯನ್ನು ನನ್ನೂರಿಗೂ ವಿಸ್ತರಿಸಿತು. ಮೊದಲಿಗೆ ನಿಮಿಷಕ್ಕೆ ಮೂರು ರೂಪಾಯಿಂದ ಆರಂಭವಾಗಿ, ನಿಮಿಷಕ್ಕೆ ಒಂದು ರೂಪಾಯಿ, ಐವತ್ತು ಪೈಸೆ, ನಲವತ್ತು ಪೈಸೆ, ಮೂವತ್ತು ಪೈಸೆ, ಇಪ್ಪತ್ತು ಪೈಸೆ, ಹತ್ತು ಪೈಸೆ, ಮತ್ತು ಕೊನೆಗೆ ನಿಗದಿತ ಸಂಖ್ಯೆಗೆ ಅನಿಯಮಿತ ಉಚಿತ ಕರೆಯವರೆಗೂ ಬಂತು(ಕರೆ ಮಾಡಿದವರಿಗೆ ಹಣ ಪಾವತಿ ಮಾಡುವ ಕಾಲ ಬಂದರು ಅಚ್ಚರಿಯಿಲ್ಲ). ನಿಜಕ್ಕೂ ಸಂಬಂಧಗಳು ಅರ್ಥ ಕಳೆದುಕೊಂಡಿದ್ದೆ ಆವಾಗ, ಮಾತುಗಳು ಮೌಲ್ಯ ಹೀನವಾದವು. ಎಸ್.ಎಂ.ಎಸ್ ಗಳು ಬೆರಳ ತುದಿಗಳ ಮೂಕ ಸಂಭಾಷಣೆಗಳಾದವು. ಅಪರಿಚಿತ ಮುಖಗಳು ಎಸ್.ಎಂ.ಎಸ್ ಮುಖಾಂತರ ನೇರ ಮನೆಯಂಗಳಕ್ಕೆ ಲಗ್ಗೆ ಇಟ್ಟವು, ಭಾವನೆಗಳು ತೀರ ಕೊಡು-ಕೊಳ್ಳುವಿಕೆಯಷ್ಟು ಅಗ್ಗ ಹಾಗು ಸುಲಭವಾದವು, ಕೊನೆ ಕೊನೆಗೆ ಎಸ್.ಎಂ.ಎಸ್ ಚಟವಾಯ್ತು, ಮೊಬೈಲ್ ಕರೆ ವ್ಯಾಧಿಯಾಯಿತು. ಎಷ್ಟೇ ಮೊಬೈಲ್ ಯಶಸ್ವೀ ಸಂಪರ್ಕ ಸಾಧನ ಎಂತೆನಿಸಿದರು, ಭಾವನೆಗಳನ್ನು ತಲುಪಿಸುವಲ್ಲಿ ಬಹಳ ಕೆಟ್ಟ ರೀತಿಯಲ್ಲಿ ಸೋತಿತು. ನಾವು ಮೊಬೈಲ್ ಇನ್ನೊಂದು ತುದಿಯಲ್ಲಿ ಮಾತನಾಡುವವರ ಭಾವನೆ ಅರಿಯದೇ ಹೋದೆವು, ಮಾತುಗಾಳು ತೀರ ಯಾಂತ್ರಿಕವಾದವು, ಎಸ್. ಎಂ. ಎಸ್ ಭಾಷೆ ಇಂಗ್ಲೀಷನ್ನು ಖಂಡ-ತುಂಡವಾಗಿಸಿತು ಜೊತೆಗೆ ನಮ್ಮಲ್ಲನೇಕರು ಬರವಣಿಗೆಯನ್ನು ಮರೆತರು, ಬೆರಳ ತುದಿ ಇದನ್ನೆಲ್ಲಾ ಮರೆವಂತೆ ಮಾಡಿತು. ಪತ್ರ ಬರೆದವನ/ ಹಸ್ತಾಕ್ಷರ ಅವರ ಮನಸ್ಥಿತಿಗೆ ಕನ್ನಡಿ ಹಿಡಿದಂತಿರುತ್ತಿತ್ತು, ಕೈಬರಹ ಸ್ವಲ್ಪ ನಡುಗಿದ್ದಂತೆ ಕಂಡು ಬಂದರೆ ಮನೆಯವರಿಗೆಲ್ಲ ಒಂದು ಆತಂಕ "ಆರೋಗ್ಯ ಸರಿಯಿದೆಯೋ? ಇಲ್ವೋ?".

ಪ್ರತಿ ಅಕ್ಷರ ಹೃದಯದ ತೇರಿನಲ್ಲೊಂದು ಪುಟ್ಟ ಪಯಣಕ್ಕೆ ಅಣಿಗೊಳಿಸುತ್ತಿತ್ತು, ಈಗ ಅಂತರ್ದೆಶಿಯ ಪತ್ರಗಳು ಅಂಗಡಿಗಲ್ಲಿಯೂ ಮಾಯವಾಗಿದೆ, ಅಲ್ಲೆಲ್ಲಾ ಮೊಬೈಲ್ ಕರೆನ್ಸಿ ಕೂಪನ್ ಗಳು ಬಂದು ಕುಳಿತಿವೆ. ಪತ್ರದ ಎಡ ಮೇಲ್ತುದಿಯಲ್ಲಿ "ಕ್ಷೇಮ", ನಡು ಮಧ್ಯದಲ್ಲಿ "ಶ್ರೀ", ಬಲ ಮೇಲ್ತುದಿಯಲ್ಲಿ "ದಿನಾಂಕ, ಸ್ಥಳ" ಬರೆದು, ತೀರ್ಥರೂಪ ತಂದೆಯವರಲ್ಲಿ ಹಾಗು ಮಾತ್ರುಶ್ರೀಯವರಾದ ತಾಯಿಯವರಲ್ಲಿ ಎಂದು ಶುರುವಿಟ್ಟು ಹಿರಿಯರಿಂದ ಆಶಿರ್ವಾದ ಬೇಡಿ, ಕಿರಿಯರಿಗೆ ಆಶೀರ್ವಾದ ನೀಡಿ, ಸಕಲರ ಆರೋಗ್ಯ-ಭಾಗ್ಯ ವಿಚಾರಿಸಿ. ಮುಂದಿನ ಸಾಲಿನಲ್ಲಿ "ಸಾಂಪ್ರತಾ" ಎಂದು ಬರೆದು ಪತ್ರ ಬರೆದ ಕಾರಣವನ್ನು ವಿವರವಾಗಿ ವಿವರಿಸಿ, ಕೊನೆಗೆ ಮತ್ತೊಮ್ಮೆ ಆಶಿರ್ವಾದ ಬೇಡಿ, ನಿಮ್ಮ ಪತ್ರಕ್ಕಾಗಿ ಕಾಯುತ್ತಿರುವ ಹಾಗು ಆಗಿಂದಾಗ್ಗೆ ಪತ್ರ ಬರೆಯುತ್ತೀರಾಗಿ ನಂಬಿರುವ ನಿಮ್ಮ ಮಗ/ಮಗಳು ಎಂದು ಸಹಿ ಹಾಕಿ, ಅಂಚೆ ಪೆಟ್ಟಿಗೆ ಸೇರಿಸಿ ಬಂದರೆ, ಮನಸ್ಸು ಊರಿಗೆ ಹೋದಷ್ಟೇ ಹಗುರ, ಪತ್ರ ಸಿಕ್ಕವರಿಗೆ ಜೊತೆಗೆ ಇದ್ದಷ್ಟು ಹತ್ತಿರ (ಇನ್ನು ಪ್ರೇಮ ಪತ್ರದ ಸೊಬಗಂತೂ ಬರೆದು, ಓದಿದವನೆ ಧನ್ಯ, ಅದರ ಬಗ್ಗೆ ಇನ್ಯಾವಾಗಲಾದರೂ ಬರೆದೇನು).

ಎದುರಿಗೆ ಸಿಕ್ಕವರಿಂದ ತಪ್ಪಿಸಿಕೊಂಡು ಮುಂದೆ ಸಾಗಲೆಂಬಂತೆ, "ನಿನ್ನ ನಂಬರ್ ಇದ್ರೆ ಕೊಡು, ಮತ್ತೆ ಕಾಲ್ ಮಾಡ್ತೀನಿ, ಈಗ ಸ್ವಲ್ಪ ಅರ್ಜೆನ್ಟ ಕೆಲಸ ಇದೆ" ಎಂಬಂತೆ ಕಾಲು ಕೀಳುವವರೇ ಹೆಚ್ಚು, ಅವರಿಗೆಲ್ಲ ಮೊಬೈಲ್ ಒಂದು ನೆಪವಾಯಿತು. ಎಲ್ಲರನ್ನು ಹಾಗು ಎಲ್ಲವನ್ನು ಹತ್ತಿರವನ್ನಾಗಿಸಲು ಬಂದ ಮೊಬೈಲ್, ಇನ್ನಷ್ಟು ದೂರ ನಿಲ್ಲಿಸಿತು, ಈಗೀಗ ಪರಿಚಿತರು, ಅಪರಿಚಿತರಾಗಿದ್ದರೆ. ಪ್ರೀತಿ ಪಾತ್ರರನ್ನು ಭೇಟಿಮಾದುವುದ ಬಿಟ್ಟು, ಕರೆ ಮಾಡಿದರಾಯ್ತು ಎಂಬಲ್ಲಿಗೆ ಸಂಬಂಧದೆಡೆಗಿನ ಅಸಡ್ಡೆ ಬೆಳೆದು ನಿಂತಿದೆ, ಇನ್-ಲ್ಯಾಂಡ್ ಲೆಟರ್ ಕೊಡಿ ಅಂತ ಅಂಗಡಿಯವನನ್ನು ಕೇಳಿದ್ದು ಮರೆತೆ ಹೋಗಿದೆ, ಹತ್ತಿರದ ಅಂಚೆ-ಪೆಟ್ಟಿಗೆ ಎಲ್ಲಿದೆ ಎಂಬುದೇ ನೆನಪಿಲ್ಲ, ಏಕೆಂದರೆ ಪತ್ರ ಬರೆದು ಕೆಲವು ವರ್ಷಗಳಾಗಿದೆ.

ಮತ್ತೆ ಮೊಬೈಲ್ ಕರೆಯುತ್ತಿದೆ "ಕರೆದರು ಕೇಳದೆ..." ಎಂದು, ತಪ್ಪಿ ಹೋದ ಕರೆಗಳ ಪಟ್ಟಿ ಸೇರುವುದರೊಳಗೆ, ಕರೆ ಸ್ವೀಕರಿಸಬೇಕಿದೆ, ಮತ್ತೆ ಒಂದು ಮುದ್ದಾದ ಪತ್ರ ಬರೆಯ ಬೇಕಿದೆ ನನ್ನ ನೆನಪಿನಂಗಳಕ್ಕೆ, ಪತ್ರ ಬರೆದ ನಂತರ ಅಂಚೆ-ಪೆಟ್ಟಿಗೆ ಬಳಿ ಸಿಗೋಣ.

ಸೋಮವಾರ, ಡಿಸೆಂಬರ್ 1, 2008

ಮದುವೆ - ಸಣ್ಣ ತಪ್ಪಿಗೆ ಹೀಗೊಂದು ಜೀವಾವಧಿ ಶಿಕ್ಷೆ

ಅಂತರಾಳ - ೩

ಎಷ್ಟೋ ಬಾರಿ ಸ್ನಾನ ಗೃಹದಲ್ಲಿ ನನ್ನ ಕಾಡಿದ ಹಾಗು ಕಾಡುವ ಪ್ರಶ್ನೆಯೆಂದರೆ, ದೇವರು ಕೈಗೆಟುಕದಂತೆ ಬೆನ್ನನ್ನು ಏಕೆ ಇಟ್ಟ.

ಈ ಬಾರಿ ಊರಿಗೆ ಹೋಗಿದ್ದರಿಂದ, ಇಷ್ಟು ಅನಿಸಿದ ಕೂಡಲೇ ಅಜ್ಜಿಯನ್ನು ಕರೆದೆ... "ಅಜ್ಜಿ ಒಂಚೂರು ಬೆನ್ನು ತಿಕ್ಕಿ ಕೊಡಿ ಬನ್ನಿ". ಅದಾಗ ತಾನೆ ಬಂದ ಮೊಮ್ಮಗನಿಗೆಂದು ಒಲೆ ಮೇಲೆ ಚಹಾ ಕಾಯಲು ಇಟ್ಟಿದ ಅಜ್ಜಿ, ಹುಸಿ ಮುನಿಸು ತೋರುತ್ತ "ಅಯ್ಯೋ ನಿನ್ನ ಸೊಕ್ಕೆ, ಈ ವಯಸ್ಸಲ್ಲಿ ನನ್ನನ್ನು ಇಷ್ಟು ಗೋಳು ಹೊಯ್ಕೊಳ್ತೀಯಲ್ಲ, ನಿನ್ನ ಅಮ್ಮನನ್ನು ಕರೆಯಬಾರದೇನು?" ಎನ್ನುತ್ತಾ ಬಂದು, ಎರಡು ಚೊಂಬು ಬಿಸಿ ನೀರು ಚೆಲ್ಲಿ, ನಿಧಾನವಾಗಿ ಮೊಮ್ಮಗನಿಗೆ ಅಭ್ಯಂಗ ಸ್ನಾನ ಮಾಡಿಸಲು ಅಣಿಯಾದರು.

ನನ್ನ ಮಾಮೂಲಿ ಮಾತಿನವರಸೆಯಂತೆ ನನ್ನ ಅಜ್ಜಿಯನ್ನು ಸರಿ ಸುಮಾರು ೫ ದಶಖ ಹಿಂದೆ ಎಳೆದೊಯ್ವ ಪ್ರಯತ್ನ ಮಾಡಿದೆ. ಮಾತು ಶುರುವಿಟ್ಟೆ "ಅಜ್ಜಿ ಅಜ್ಜನಿಗೂ ಹೀಗೆ ಸ್ನಾನ ಮಾಡಿಸಿಕೊಡ್ತಿದ್ರ?", ಮೈ ಮೇಲೆ ಕೆಂಡ ಬಿದ್ದಂತಾದ ಅಜ್ಜಿ, ಸ್ವಲ್ಪ ಸಿಡುಕು, ಸೆಡವು ಜೊತೆಗೊಂದಿನಿತು ನಗು ಸೇರಿಸಿ, ಅಂಗಳ ಸಾರಿಸುತ್ತಿದ್ದ ಅಮ್ಮನನ್ನು ಕೂಗಿ "ಕಮಲಿ, ನೋಡೇ ನಿನ್ನ ಮಗ ಎಂತ ಮಾತಾಡ್ತಾನೆ, ದೊಡ್ಡವರ ಹತ್ತಿರ ಮಾತಾಡೋ ಮಾತಾ ಇದು" ಎಂದು ಮೊಮ್ಮಗನ ಗುಣಗಾನ ಆರಂಭಿಸಿತು. ಏನು ಅರಿಯದ ನನ್ನ ಅಮ್ಮ, "ಏನಾಯ್ತಮ್ಮ?" ಎಂಬಂತೆ ಪ್ರಶ್ನೆಯೆದುರು ಹಿಡಿದು ನಿಂತರು, ಅಜ್ಜಿ "ಏನೇನೋ ಕೇಳ್ತಾನೆ ಕಣೆ" ಎಂದಷ್ಟೇ ಉತ್ತರಿಸಿ ನಾಚಿಕೆಯಿಂದೆಂಬಂತೆ ಒಳಮನೆಯ ಹಾದಿ ಹಿಡಿದರು, ನಾನು ಕಿಚಾಯಿಸುವುದು ನಿಲ್ಲಿಸಿಯೇ ಇರಲಿಲ್ಲ, ಅಮ್ಮ "ನಿನ್ನ ದಮ್ಮಯ್ಯ ಸುಮ್ನಿರೋ" ಅಂದಾಗ, ಸುಮ್ಮನೆ ನಕ್ಕೆ, ಕೂಡಲೇ ಮನೆಯೊಳಗಿಂದ ಅಜ್ಜಿಯ ಅಶರೀರವಾಣಿ ಮೊಳಗಿತು "ಬೇಗ ನಿನ್ನ ಮಗನಿಗೊಂದು ಮದುವೆ ಮಾಡು, ಬಂದವಳು ಇವನನ್ನು ಸರಿ ಮಾಡ್ತಾಳೆ. " ಬಿಸಿ ನೀರ ನಡುವೆ ಒಂದು ಬಿಂದಿಗೆ ತಣ್ಣೀರು ತಲೆ ಮೇಲೆ ಚೆಲ್ಲಿದಂತಾಯ್ತು.

ಅಮ್ಮ ಮದುವೆ ವಿಚಾರ ಮಾತನಾಡಲು ಪರವಾನಗಿ ಸಿಕ್ಕಿತೆಂಬಂತೆ ಎದುರು ನಿಂತಿದ್ದರು, ನಾನು ಮನಸ್ಸಿನೊಳಗೆ ಪ್ಲೀಸ್ ಇಷ್ಟು ಬೇಗ ಬೇಡ ಎಂಬಂತೆ ಜಾಣ ಕಿವುಡು ಪ್ರದರ್ಶಿಸುತ್ತ ಬಚ್ಚಲಿನ ಒಳ ಅಗುಣಿ ಭದ್ರ ಪಡಿಸಿದೆ.

ಅಜ್ಜಿ ಮಾತ್ರ ಯುದ್ಧ ಗೆದ್ದ ಖುಷಿಯಲ್ಲಿ ಮನೆಯೆಲ್ಲ ಓಡಾಡಿಕೊಂಡಿದ್ದರು, ನಾನು ಮಾತ್ರ ಬಾಲ ಸುಟ್ಟ ಬೆಕ್ಕಂತಾಗಿದ್ದೆ, ಅಮ್ಮ ಮಾತ್ರ ಮನೆಗೆ ಸೊಸೆ ತರುವ ಯೋಚನೆಯಲ್ಲಿ ಲೀನವಾಗಿದ್ದರು.