ಭಾನುವಾರ, ಮಾರ್ಚ್ 15, 2009

ಬದುಕಿನ ಖಾಲಿ ಕ್ಯಾನ್ವಾಸ್ ಮೇಲೆ ಪ್ರೀತಿ ಎಂದಷ್ಟೇ ಬರೆದು...

ಪಿಸು ಮಾತು - ೪

ನಾಲ್ಕು ಗೋಡೆಯ ನಡುವಲ್ಲಿ ನಾವಿಬ್ಬರೂ ಮಾತ್ರ, ಎದುರು ಬದುರಿನ ಗೋಡೆಗೆ ಒರಗಿ ಕುಳಿತು ಗಡಿಯಾರವನ್ನು ದಿಟ್ಟಿಸಿದರೆ ಸಮಯ ರಾತ್ರಿಯ ೧೧:೪೫, ಎದುರು ಕುಳಿತಿದ್ದ ಗೆಳೆಯ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ ಎಂಬಂತೆ ತಲೆ ತಗ್ಗಿಸಿ ಕುಳಿತಿದ್ದ. ಇಬ್ಬರ ನಡುವು ನೀರವ ಮೌನ, ಏನೋ ಹೇಳಲೆಂಬಂತೆ ಹೊರಟು ಮತ್ತೆ ಮಾತು ಮುಂದುವರಿಸಲಾರದೆ ನಿಟ್ಟುಸಿರು ಬಿಡುತ್ತಾನೆ, ಅಮೂರ್ತದಲ್ಲಿ ದೃಷ್ಟಿಯನ್ನು ಬೆರೆಸಿ ನಿಸ್ಸಹಾಯಕವಾಗಿ ಸಣ್ಣಗೆ ನರಳುತ್ತಾನೆ. ಮತ್ತೆ ನಾನು ಮೌನ ಮುರಿಯುತ್ತೇನೆ "ಏನಾಯ್ತು, ಹೇಳು?", ಒತ್ತರಿಸಿ ಬರುವ ದುಃಖದ ಮಡುವನ್ನು ತಡೆದು ನಿಲ್ಲಿಸಿ "ಹ್ಮೂ" ಎಂದಷ್ಟೇ ಉದ್ಗರಿಸಿ ಕಣ್ಣು ಮುಚ್ಚುತ್ತಾನೆ.

"ಬೆಳಕು ಕಣ್ಣು ಚುಚ್ಚಿದಂತಾಗುತ್ತಿದೆ, ದಯವಿಟ್ಟು ಸ್ವಲ್ಪ ಹೊತ್ತು ದೀಪ ಆರಿಸುತ್ತೀಯ? ದಯವಿಟ್ಟು ಕಣೋ" ದೀನನಾಗಿ ಗೊಗರೆವ ದನಿಯಲ್ಲಿ ಕೇಳುತ್ತಾನೆ. ನಾನು ದೀಪವಾರಿಸಿ ಕುಳಿತು ಕೊಳ್ಳುತ್ತೇನೆ. ಅಮಾವಾಸ್ಯೆಗೆ ಇನ್ನೆರಡೆ ದಿನ, ಚಂದಮಾಮ ಬಹುತೇಕ ಕರಗಿದ್ದಾನೆ. ಇಡೀ ಕೋಣೆಯ ತುಂಬ ಕತ್ತಲು ವಿಕಾರವಾಗಿ ನರ್ತಿಸುತ್ತಿದೆಯೇನೋ ಎಂಬ ಭಾವ, ಅವನ ಎದೆಯಾಳದ ನೋವಿನುರಿ ಮತ್ತವನ ಉಸಿರಾಟದ ಉಚ್ಚ್ವಾಸ-ನಿಚ್ಚ್ವಾಸಗಳ ಹೊರತು ಇನ್ನಾವ ಸದ್ದು ಅಲ್ಲಿಲ್ಲ, ಅವನ ಬಿಸಿಯುಸಿರು ತಣ್ಣಗಿನ ಕೋಣೆಯ ಕಾವನ್ನು ಏರಿಸುತ್ತಿರುವಂತಿತ್ತು. ತನ್ನ ಕಾಲುಗಳನ್ನು ನೀಳವಾಗಿ ಚಾಚಿ, ಗೋಡೆಗೆ ತನ್ನ ದೇಹದ ಸಂಪೂರ್ಣವಾದ ಜವಾಬ್ದಾರಿಯನ್ನು ಹಸ್ತಾಂತರಿಸಿದಂತೆ ಕುಳಿತ. ಕಡು ಕತ್ತಲಿನಲ್ಲಿ ಒಂದು ಕಪ್ಪು ಆಕೃತಿಯ ಚಲನೆಯ ಹೊರತಾಗಿ ಇನ್ನೇನು ಕಾಣದಂತಹ ನಿರ್ವಿಕಾರ ಭಾವ.

ಇದೆ ಕತ್ತಲಿಗಾಗಿ ಕಾತರಿಸುತ್ತಿದ್ದವನಂತೆ ನನ್ನ ಹೆಸರನ್ನಷ್ಟೇ ಮೇಲು ದನಿಯಲ್ಲಿ ಉದ್ಗರಿಸಿದ. ನೀನು ಕರೆದಿದ್ದು ಕೇಳಿಸ್ತು ಎಂಬಂತೆ ನಾನು "ಹೇಳು" ಎಂದೆ. ಸಣ್ಣ ದನಿಯಲ್ಲಿ ಕಣ್ಣೀರು ಚೆಲ್ಲುತ್ತಿದ್ದವನ ದುಃಖದ ಮಡುವನ್ನು ಸೀಳಿ ಮಾತೊಂದು ಹೊರ ಬಿತ್ತು. "ಅವಳು ನನ್ನನ್ನು ಬಿಟ್ಟು ಹೋದಳು, ಅವಳ ಮನೆಯಲ್ಲಿ ಒಪ್ಪುತ್ತಿಲ್ಲವಂತೆ, ಅವಳಿಗೂ ನಾನೀಗ ಬೇಡವಂತೆ. ನನ್ನಿಂದ ಆಗುತ್ತಿಲ್ಲ ಕಣೋ, ಸೋಲುತ್ತಿದ್ದೇನೆ, ನನಗೆ ಈ ಬದುಕು ಬೇಡ ಕಣೋ" ಕಣ್ಣೀರ ಕಟ್ಟೆ ಒಡೆದಿತ್ತು, ಅವನ ವರುಷಗಳ ಶ್ರದ್ದೆಯ ಪ್ರೀತಿಯ ಕನಸ ಗೋಪುರ ಏಕಾ ಏಕಿ ಕುಸಿದಿತ್ತು, ಇನ್ನೇನನ್ನು ಹೇಳಲಾರೆ ಎಂಬಂತೆ ಅವನ ಅಳು ನೂರ್ಮಡಿಸುತ್ತಿತ್ತು. ಸಮಾಧಾನಿಸುವ ಪ್ರಯತ್ನವನ್ನು ಮಾಡದೆ ಸುಮ್ಮನೆ ಕುಳಿತೆ. ಸಮಾಧಾನದ ಮಾತು ಕೂಡ ತೀರ ಕಠೋರ ಎಂದೆನಿಸಿ ಬಿಡ ಬಹುದಾದ ಸೂಕ್ಷ್ಮ ಕ್ಷಣವದು, ಅವನ ದುಃಖದ ರಭಸ ಮಲೆನಾಡಿನ ಮುಂಗಾರಿನ ಭರವನ್ನು ಮೀರಿಸುವಂತಿತ್ತು.

ಪ್ರೀತಿಯ ಸಾವಿಗೆ ಅದರ ಆರಂಭಕ್ಕೆ ಸಿಗುವಂತೆ ಒಂದು ನಿಖರವಾದ ತಾರೀಖು ಸಿಗಲಾರದಂತೆ, ಏಕೆಂದರೆ ಅದೊಂದು ಧೀರ್ಘ ಪ್ರಕ್ರಿಯೆ. ಅದು ಒಂದು ವ್ಯವಸ್ಥಿತ ಹೊಂಚು. ಅವಳು/ಅವನು ಪ್ರೀತಿಸ್ತಿಯ ಅಂತ ಕೇಳಿ, ಹೌದು ನಾನು ನಿನ್ನನ್ನು ಪ್ರೀತಿಸ್ತಿದ್ದೇನೆ ಅಂದು ಆ ತಾರೀಖನ್ನು ತನ್ನ ದಿನಚರಿಯ ಪುಟದ ಮೂಲೆಯಲ್ಲಿ ಅತ್ಯಂತ ಪ್ರೀತಿ ಆದರಗಳಿಂದ ತಿದ್ದಿಟ್ಟು, ಕಳೆದ ವರ್ಷಗಳ ಲೆಖ್ಖ ಹೇಳಬಹುದೇನೋ, ಆದರೆ ಪ್ರೀತಿ ಕಳೆದು ಹೋದ ಬಗ್ಗೆ ಇದೇ ದಿನ ಹೀಗಾಯಿತು ಎಂದು ಹೇಳುವುದು ಬಹುಶಃ ಅಸಾಧ್ಯ. ಅಪ್ಪ-ಅಮ್ಮ, ಜಾತಿ ಇವುಗಳು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು, ಆದರೆ ಇಲ್ಲಿ ಗಮನಿಸ ಬೇಕಾದ ವಿಷಯ ಇವ್ಯಾವು ತಮ್ಮ ತಪ್ಪಿಗೆ ಅವರು ಕೊಡುತ್ತಿರುವ ಕಾರಣಗಳಲ್ಲ, ತಾವು ಮಾಡಿದ್ದು ಸರಿಯೆಂಬುದಕ್ಕೆ ಅವರು ನೀಡುವ ಸಮಜಾಯಿಷಿಗಳು. ಪ್ರೀತಿಸುತ್ತೇನೆ ಎನ್ನುತ್ತಾ ನಿಂತಿರುವಾಗ ಅದೇ ಅಪ್ಪ-ಅಮ್ಮ ಇನ್ನೆಲ್ಲೋ ತನ್ನ ಮಗ-ಮಗಳ ಬರುವಿಕೆಗೆ ಕಾದು ಕುಳಿತಿರುತ್ತಾರೆ, ಆಗ ಆ ದಿನ ಹೆತ್ತವರ ನೆನಪು ಬಂದರೆ ಅದು ನಿಜಕ್ಕೂ ಗೌರವಯುತ, ಅಂತಹವರನ್ನು ತುಂಬು ಹೃದಯದಿಂದ ಗೌರವಿಸೋಣ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಈ ಸಂಭಂದ ಇನ್ನು ಮುಂದುವರಿಸಲಾರೆ ಎಂಬ ನಿರ್ಧಾರಕ್ಕೆ ಬಂದು ನಿಲ್ಲುತ್ತಾರಲ್ಲ ಅದು ನಿಜಕ್ಕೂ ಒಂದು ಹೀನ ಕೃತ್ಯ. ದಿನ ಜೊತೆ ನಡೆದವರು ಬೇಡವಾಗಿರುತ್ತಾರೆ, ತನ್ನೆಲ್ಲ ನೋವಿಗೆ ದನಿಯಾದವರು ಹೊರೆಯೆನಿಸಿರುತ್ತಾರೆ. ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ ಅದರ ಅಗತ್ಯವಿಲ್ಲ ಎಂದು ಮನಸ್ಸಿಗೆ ಅನ್ನಿಸಿ ಬಿಡುತ್ತದೆ.

ಒಂದು ಒಳ್ಳೆ ಪ್ರೀತಿಯ ಸಂಬಂಧ ಶ್ರಧ್ಧೆಯನ್ನು ಬೇಡುತ್ತದೆ ಮತ್ತು ಪರಸ್ಪರರ ಬಗ್ಗೆ ನಂಬಿಕೆ, ವಿಶ್ವಾಸವನ್ನು ಬಯಸುತ್ತದೆ, ಅದು ಒಂದು ದಿನದಲ್ಲಿ ದಿಢೀರ್ ಎಂದು ಬೆಳೆದು ನಿಲ್ಲಲಾರದಂತೆ, ಅದು ಸಮಯ ಕೇಳುತ್ತದೆ, ದಿನ ಕಳೆದಂತೆ ಪಕ್ವ ಗೊಳ್ಳುತ್ತಾ ಸಾಗುತ್ತದೆ. ಆದರೆ ಈಗಿನ ಯಾಂತ್ರಿಕ ಯುಗದಲ್ಲಿ ಪ್ರೀತಿ ಸಹ ತನ್ನ ಸೊಬಗನ್ನು ಕಳೆದು ಕೊಳ್ಳುತ್ತಾ ಅರ್ಥ ಹೀನವಾಗುತ್ತಿದೆ. ಶ್ರದ್ದೆಯಿಲ್ಲದ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಕಾಣುತ್ತದೆ. ಅವನೇ ಎಲ್ಲ ಎಂದು ಕೊಂಡು ಬದುಕುತ್ತಿದ್ದ ಹುಡುಗಿಗೆ ಹೊರ ಜಗತ್ತು ಇನ್ನಷ್ಟು ರಂಗು ರಂಗಾಗಿ ಕಾಣುತ್ತದೆ, ಮತ್ತು ಇಷ್ಟು ದಿನ ಜೊತೆಯಲ್ಲಿದ್ದು ಉಸಿರಾದವನು ಬಣ್ಣ ಕಳೆದು ಕೊಂಡು ಬಿಳಿಚಿ ಕೊಂಡಂತೆ ಭಾಸವಾಗಿರುತ್ತಾನೆ. ಅಲ್ಲೀಗ ಅಪ್ಪ-ಅಮ್ಮನ ಮತ್ತು ಜಾತಿಯ ಸಬೂಬು ಆರಂಭವಾಗಿ ಬಿಡುತ್ತದೆ. ನಿಜವಾದ ಪ್ರೀತಿ ಹೇಗಾದರು ಮಾಡಿ ಎಲ್ಲವನ್ನು ಎದುರಿಸಿ ಎಲ್ಲರನ್ನು ಒಪ್ಪಿಸೋಣ ಎಂದೆನ್ನುತ್ತದೆ, ಆದರೆ ತಳುಕು ಪ್ರೀತಿ ಸುಮ್ಮನೆ ಬಿಡಿಸಿಕೊಂಡು ಓಡುವ ಹುನ್ನಾರದಲ್ಲಿರುತ್ತದೆ. ಇಲ್ಲಿ ಉಳಿದು ಹೋದ ಜೀವ ನರಳುತ್ತದೆ, ತಾನು ಉಳಿದು ಹೋದದ್ದಕ್ಕೆ ಕಾರಣ ಹುಡುಕಿ ಹುಡುಕಿ ಸೋಲುತ್ತದೆ, ತನ್ನ ಬಗ್ಗೆ ಒಂದು ವಿಧವಾದ ಕೀಳರಿಮೆ ಬೆಳೆಸಿಕೊಂಡು ಕತ್ತಲಿಗಾಗಿ ಹಪಹಪಿಸಿ ಮರುಗುತ್ತದೆ. ವರ್ಷಗಟ್ಟಲೆ ಕಟ್ಟಿದ ಪ್ರೀತಿಯ ಗೋಪುರ ಕೆಲವೇ ದಿನಗಳಲ್ಲಿ ನೆಲ ಸಮವಾಗಿರುತ್ತದೆ.

ಗೆಳೆಯ ಕಣ್ಣೀರಾಗಿ ಸೋತಿದ್ದ, ಅವನ ಕೈಯನ್ನು ನನ್ನ ಕೈಯಲ್ಲಿಟ್ಟು ಹೇಳಿದೆ "ಒಂದು ಒಳ್ಳೆಯ ಬದುಕನ್ನು ಬದುಕಿ ಬಿಡು, ಅವಳ ನೆನಪೇ ಬಾರದಂತ ಬದುಕು. ಈ ಬದುಕನ್ನು ಸಂಪೂರ್ಣವಾಗಿ ಬಾಳಿ ಬಿಡು, ಇಷ್ಟು ದಿನ ನಿಮ್ಮಲ್ಲಿದ್ದಿದ್ದು ಪ್ರೀತಿಯಲ್ಲ, ಅದೊಂದು ಸೆಳೆತವಷ್ಟೇ, ಪ್ರೀತಿ ಹೀಗಿರೋದಿಲ್ಲ. ಅದು ಯಾವತ್ತು ಸೋಲಲು ಬಿಡಲಾರದ ಅದಮ್ಯ ಶಕ್ತಿ. ಜೀವನದ ಬಗ್ಗೆ ಅತೀವ ಶ್ರದ್ದೆಯಿರಲಿ ಮತ್ತು ನಿನ್ನ ಜೊತೆ ನಾನಿದ್ದೇನೆ ಗೆಳೆಯನಾಗಿ, ನಿನ್ನೆಲ್ಲ ನೋವ ದನಿಗೆ ಕಿವಿಯಾಗಿ".

ಮರು ಉತ್ತರ ನೀಡಲು ಚೈತನ್ಯವಿರದೆ ಗೆಳೆಯ ನನ್ನ ಮಡಿಲಿಗೆ ಕುಸಿದಿದ್ದ, ಗದ್ಗದಿತನಾಗಿ ನನ್ನೆಡೆಗೆ ನೋಡದೆ ಕೇಳಿದ "ಅವಳು ನನ್ನನ್ನು ಯಾರಿಗೋಸ್ಕರ ತ್ಯಾಗ ಮಾಡಿದಳು". ನಾನು ಸುಮ್ಮನೆ ನಕ್ಕು ನುಡಿದೆ "ಗೆಳೆಯ ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ, ಪ್ರೀತಿಯಿಂದ ಹೊರ ನಡೆವವರು ತಮಗೆ ಇನ್ನೊಂದು ಉತ್ತಮ ಅನ್ನುವ ಆಯ್ಕೆಯ ಕಡೆ ವಲಸೆ ಹೊರಟಿರುತ್ತಾರಷ್ಟೇ, ಬಿಟ್ಟು ಹೋಗುವ ಮುನ್ನ ತಮ್ಮನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಇನ್ನೊಂದು ಅಸ್ತ್ರವೇ ಈ ತ್ಯಾಗ, ನಮ್ಮಲ್ಲಿ ಯಾರು ಕಾಣದ ಬದುಕಿಗೆ ಕೈಯಲ್ಲಿರುವುದನ್ನು ತ್ಯಾಗ ಮಾಡಿ ಹೋಗುವವರಿಲ್ಲ, ಅದು ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ."

ಗೆಳೆಯ ನಿದ್ರೆಗೆ ಜಾರಿದ್ದ, ಯಾಕೋ ನನಗೆ ಅರಿವಿಲ್ಲದಂತೆ ಮನಸ್ಸು ಕದಡಿತ್ತು. ಮತ್ತೆ ಹೊರಗಣದ ಚಂದಮಾಮ ಪೂರ್ಣನಾಗುವುದೆಂದು ಎಂಬ ಪ್ರಶ್ನೆಯೊಂದಿಗೆ ಕುಳಿತೆ, ಮತ್ತೆ ನನ್ನ ಆ ಸಾಲುಗಳು ನೆನಪಾಗಿ ಕಾಡಿದವು.
"ಜೊತೆ ನಡೆದ ಹಾದಿಯಲಿ ನೀನಿಲ್ಲದಿರೆ ಏನು
ನಿನ್ನ ಹೆಜ್ಜೆ ಗುರುತುಗಳುಂಟು
ನನ್ನ ಬದುಕ ಜೋಳಿಗೆ ಖಾಲಿಯಾಗಿದ್ದರೆ ಏನು
ಹೊರಲಾರದೆ ನೀ ಎಸೆದು ಹೋದ ಕನಸ ರಾಶಿಯಿಲ್ಲುಂಟು
ನಮ್ಮ ಪ್ರತಿ ಸೋಲಿಗೂ ಇದ್ದೆ ಇದೇ ಒಂದು ಸಂಬಂಧದ ನಂಟು
ಮತ್ತೆ ಜಿಗಿದೆದ್ದು ನಾ ಸೋಲಲಾರೆನೆಂದು ಕೂಗಿ ಹೇಳುವುದುಂಟು"