ಮನೆಯ ಹೊರಗಿನ ಕಿಟಕಿಯ ಮೊದಲ ಸರಳನ್ನು ಕೈ ಚಾಚಿ ಹಿಡಿದು ಆಚೆ ನೋಡುತ್ತಾ ನಿಂತವನಿಗೆ ಎದುರು ಮನೆಯ ಹೊಸ್ತಿಲಿನ ಬಳಿಯಿಟ್ಟಿದ್ದ ಪುಟ್ಟ ಹಣತೆ ಕೂಗಿ ಕರೆದಂತಿತ್ತು. ಅದು ಶುಕ್ರವಾರದ ರಾತ್ರಿ ಮನೆಯೆದುರು ಗುಡಿಸಿ, ನೀರು ಚೆಲ್ಲಿ, ರಂಗವಲ್ಲಿಯನಿಟ್ಟು, ಜ್ಯೋತಿ ಬೆಳಗಿಸಿದ್ದರು. ಈ ದೀಪದ ಜ್ಯೋತಿ ನನ್ನನ್ನು ಕೆಲವಾರು ವರ್ಷಗಳಷ್ಟು ಹಿಂದಕ್ಕೆ ತೇಲಿಸಿ ಕೊಂಡು ಹೋಯಿತು ನೆನಪ ನಾವೆಯಲ್ಲಿ, ಮನಸ್ಸು ತನ್ನ ನೆರಳನ್ನೇ ಬೆನ್ನಟ್ಟಿ ಓಡುವ ಪುಟ್ಟ ಮಗುವಿನಂತೆ ಓಡುತ್ತಿತ್ತು.
ಆ ದಿನ ಸಂಜೆ 6:15 ರ ಸುಮಾರಿಗೆ ಅಮ್ಮ ದರಗು(ಒಣಗಿದ ಎಲೆ) ಗುಡಿಸಲು ಹೋದ ಸಣ್ಣ ವಿರಾಮದಲ್ಲಿ ನನಗೆ ಆತುರಾತುರವಾಗಿ ನೀನು ಫೋನಾಯಿಸಿದ್ದೆ. ಮನೆಯ ಫೋನು ರಿಂಗಣಿಸಿದ ತಕ್ಷಣ ಅಮ್ಮ "ಅದು ನಿನಗೇ ಕಣೋ, ಒಂದು ನಿಮಿಷ ಕೊಡುತ್ತೀನಿ, ಮತ್ತೆ ನನ್ನ ಧ್ವನಿ ಕೇಳಿದರೆ ಹಾಗೆ ಫೋನ್ ಇಟ್ಟೇ ಬಿಡುತ್ತಾರೆ ನಿನ್ನ ಗೆಳೆಯರು" ಎನ್ನುತ್ತಾ ಅಡುಗೆ ಮನೆಯಿಂದ ಸ್ಥಿರ ದೂರವಾಣಿಯ ಕಡೆಗೆ ನಡೆದರು. ನನಗೋ ಶಸ್ತ್ರಚಿಕಿತ್ಸೆಯ ಹೆಸರಿನಲ್ಲಿ ವೈದ್ಯರು ಹೊಟ್ಟೆಯನ್ನು ಸಿಗಿದು ಅನಾಮತ್ತಾಗಿ 21 ಹೊಲಿಗೆ ಹಾಕಿ ಮಲಗಿಸಿದ್ದರು, ನಾನು ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದರು ಫೋನಿನ ರಿಂಗಣ ತುಂಬ ಹಿತವಾಗಿದೆ ಎಂಬಂತೆ ಕಿವಿಗೊಟ್ಟು ಕೇಳಿದ್ದು ಸುಳ್ಳಲ್ಲ. ಫೋನನ್ನು ಕೈಗಿತ್ತ ಅಮ್ಮ "ಮಾತನಾಡಿ ಫೋನನ್ನು ಇಲ್ಲೇ ಇಟ್ಟು ಬಿಡು" ಎಂದಷ್ಟೇ ಹೇಳಿ ಒಳಗೆ ನಡೆದರು.
ಫೋನನ್ನು ಕಿವಿಗಿಟ್ಟು "ಹಲೋ" ಅಂದರೆ, ಆ ಕಡೆಯಿಂದ ನೀನು "ಸದ್ಯ ನೀನೇ ಫೋನ್ ಎತ್ಕೊಂಡ್ಯಲ್ಲ, ದೀಪಾವಳಿ ಹಬ್ಬದ ಶುಭಾಶಯಗಳು, ಅಮ್ಮ ದರಗು ಗುಡಿಸಲಿಕ್ಕೆ ಹೋದರು, ಅವರು ಆ ಕಡೆ ಹೋಗುತ್ತಿದ್ದಂತೆ ಫೋನು ಮಾಡಿದೆ, ಬೆಳಿಗ್ಗೆಯಿಂದ ಅಪ್ಪ ಫೋನ್ ಹತ್ರಾನೇ ಇದ್ರೂ ಹಾಗಾಗಿ ಫೋನ್ ಮಾಡಲಿಕ್ಕಾಗಿರಲಿಲ್ಲ, ಹಾಂ! ಒಮ್ಮೆ ಮಾಡಿದೆ, ನಿಮ್ಮ ಅಮ್ಮ ಎತ್ತಿದರು ಮತ್ತೆ ಇಟ್ಬಿಟ್ಟೆ, ನನಗೆ ಭಯ ಆಯ್ತು. ನಿನಗೆ ಗೊತ್ತ ನೆನ್ನೆ ರಾತ್ರಿ ಅಪ್ಪ ಬರೋದು ತಡವಾಗಿತ್ತು, ಚಂಪಾಳಿಗೆ ವಿಪರೀತ ಹೊಟ್ಟೆ ನೋವು ಶುರುವಾಗಿ ಬಿಟ್ಟಿತ್ತು, ನಂಗೆ ಮತ್ತು ಅಮ್ಮನಿಗೆ ಏನು ಮಾಡ ಬೇಕು ಗೊತ್ತೇ ಆಗಲಿಲ್ಲ, ಕೊನೆಗೆ ಒಂಬತ್ತು ಗಂಟೆಗೆ ಚಂಪಾ ಕರು ಹಾಕಿದ್ಳು, ಗಂಡು ಕರು ಕಣೋ, ಅಮ್ಮ ಕೇಳ್ತಿದ್ರು ಏನು ಹೆಸರು ಇಡೋಣ ಅಂತ, ನಾನು ನಿನ್ನ ಹೆಸರು ಹೇಳೋಣ ಅಂದ್ಕೊಂಡೆ. ಇವತ್ತು ಸಂಜೆ ಒಂದು ಮೈನಾ ಹಕ್ಕಿ ಬಂದು, ನಮ್ಮ ಮನೆಯೆದುರಿನ ಗಿಡದಲ್ಲಿ ಕುಳಿತಿತ್ತು. ಜೋಡಿ ಮೈನಾ ನೋಡಿದರೆ ತುಂಬ ಒಳ್ಳೆಯದಂತೆ ಹಾಗಾಗಿ ಇನ್ನೊಂದು ಹುಡುಕುತ್ತಿದ್ದೆ, ಅಷ್ಟರಲ್ಲಿ ಇನ್ನೊಂದು ಬಂದು ಅದರ ಪಕ್ಕದಲ್ಲಿ ಕುಳಿತುಕೊಳ್ತು, ನೀನು ಬಂದು ನನ್ನ ಬಳಿ ನಿಂತು ಕೊಳ್ತೀಯಲ್ಲ ಹಾಗೆ. ನನಗೆ ಅದೆಷ್ಟು ಖುಷಿಯಾಯ್ತು ಗೊತ್ತ ಅವನ್ನು ನೋಡಿ. ಇವತ್ತು ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿದ್ದೆ, ನೀನು ಬೇಗ ಹುಶಾರಾಗಲಿ ಅಂತ ದೇವರಲ್ಲಿ ಕೇಳ್ಕೊಂಡು ಪೂಜೆ ಮಾಡಿಸಿದೆ, ಆದಷ್ಟು ಬೇಗ ನಾನು ನಿನ್ನ ಹೆಂಡತಿಯಾಗುವಂತಾಗಲಿ ಅಂತ ಬೇಡ್ಕೊಂಡೆ. ಆಮೇಲೆ ನಾನು ನಿನ್ನ ಪಕ್ಕದಲ್ಲೇ ಇರಬಹುದಲ್ವಾ, ನಿನ್ನ ನಲಿವಿಗೂ-ನೋವಿಗೂ ಆಸರೆಯಾಗಿ. ನೀನಿಲ್ದೆ ಈ ಹಬ್ಬ ಮಾಡೋದು ತುಂಬ ಬೇಜಾರು ಕಣೋ, ಅಪ್ಪ-ಅಮ್ಮ ಸಿಟ್ಟು ಮಾಡ್ಕೊತಾರೆ ಅಂತ ಇವೆಲ್ಲ ಮಾಡಬೇಕಷ್ಟೇ. ನಮ್ಮ ಮದುವೆಯಾದ ಮೇಲೆ ನೀನು ಬಾಗಿಲಿಗೆ ಮಾವಿನ ತೋರಣ ಕಟ್ಟು, ನಾನು ಬಾಗಿಲು ಸಾರಿಸಿ ರಂಗೋಲಿ ಹಾಕ್ತೀನಿ, ನಾನು ದೇವರ ಸಾಮಗ್ರಿ ತೊಳೆಯುತ್ತೇನೆ, ನೀನು ದೇವರ ಕೋಣೆ ಸ್ವಚ್ಚ ಮಾಡು, ಪೂಜೆ ಒಟ್ಟಿಗೆ ಮಾಡೋಣ. ಅಡುಗೆಗೆ ಸಹಾಯ ಮಾಡ್ಬೇಕು, ನಾನು ಏನು ಸಿಹಿ ಮಾಡಿದ್ರು ಸುಮ್ಮನೆ ತಿನ್ನಬೇಕು, ಅಣಕಿಸುವಂತಿಲ್ಲ. ನನಗೆ ನಿನ್ನಷ್ಟು ಚೆನ್ನಾಗಿ ಅಡುಗೆ ಮಾಡಲಿಕ್ಕೆ ಬರಲ್ಲ ಕಣೋ. ಸರಿ ಸರಿ ಹಿತ್ತಲಲ್ಲಿ ಸದ್ದಾಗುತ್ತಿದೆ, ಅಮ್ಮ ಬಂದರು ಅನ್ಸುತ್ತೆ, ಬಾಗಿಲಿಗೆ ದೀಪ ಇಡಲು ಹೇಳಿದ್ರು, ನಿನ್ನನ್ನು ತುಂಬ ಮಿಸ್ ಮಾಡ್ಕೊಳ್ತಿದೀನಿ ಕಣೋ ಗೂಬೆ, ನನ್ನ ಜೀವ ಹೋಗುವಷ್ಟು. ಸರಿ ಅಮ್ಮ ಬಂದೇ ಬಿಟ್ರು, ನಾಳೆ ಫೋನ್ ಮಾಡ್ತೀನಿ", ಇಷ್ಟು ಹೇಳಿ ನೀನು ಫೋನ್ ಇಟ್ಟಿದ್ದೆ, ನಾನು ಏನು ಮಾತನಾಡದೇ, ಸುಮ್ಮನೆ ನಿನ್ನ ಮಾತುಗಳಿಗೆ ಕಿವಿಯಾಗಿದ್ದೆ ತುಂಬು ಪ್ರೀತಿಯಿಂದ. ನನಗೆಂದು ಕೈಯಲ್ಲಿ ಒಂದು ಲೋಟ ಹಾಲು ಹಿಡಿದು ಬಂದ ಅಮ್ಮ "ನಾನು ಫೋನೆತ್ತಿದರೆ ಅದೇಕೆ ಇಟ್ಟು ಬಿಡುತ್ತಾರೋ ಪುಣ್ಯಾತ್ಮರು" ಅನ್ನುತ್ತಾ ಸ್ವಗತ ಹಾಡಿ ಫೋನನ್ನು ಸ್ವಸ್ಥಾನಕ್ಕೆ ಸೇರಿಸಿದ್ದರು.
ನಾನು ಮಲಗಿದ್ದ ಮಂಚ ಕಿಟಕಿಯ ಸಮೀಪದಲ್ಲೇ ಇದ್ದಿದ್ದರಿಂದ ಹೊರಗೆ ಕಣ್ಣು ಹಾಯಿಸಿದೆ, ಕಿಟಕಿಯ ಹೊರಬಾಗದಲ್ಲಿ ಅಮ್ಮ ಹಚ್ಚಿಟ್ಟಿದ್ದ ದೀಪ ಗಾಳಿಯ ಲಯಕ್ಕೆಂಬಂತೆ ನರ್ತಿಸುತ್ತಾ ಬೆಳಗುತ್ತಿತ್ತು, ಸಣ್ಣ ಚಿಟ್ಟೆಯಂತ ಹುಳುಗಳು ದೀಪವನ್ನು ಅಣಕಿಸಲೆಂಬಂತೆ ಹಾರಿ, ಮುತ್ತಿಡುವ ಭರದಲ್ಲಿ ಸುಟ್ಟು ಧರೆಗೆ ಉರುಳುತ್ತಿದ್ದವು. ನಾನು ನಿನ್ನ ಮಾತುಗಳನ್ನು ನೆನಪಿಸಿಕೊಂಡು ಕಣ್ಣಾಲಿಗಳಲ್ಲಿ ಕಂಡು ಕಾಣದಂತೆ ಕಣ್ಣೀರು ತುಂಬಿ ಕೊಂಡಿದ್ದೆ. ಹುಡುಗಿ ನಿನಗೆ ಗೊತ್ತಿರಲಿಕ್ಕಿಲ್ಲ ಇನ್ನೇನು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ನನ್ನನ್ನು ಸಾಗಿಸುವಾಗ ಅಮ್ಮನಿಗಿಂತ ಹೆಚ್ಚು ನೆನಪಾದವಳು ನೀನು, ನಿನ್ನ ಮುಖ ಒಮ್ಮೆ ನೋಡಬೇಕು ಎಂದು ತೀವ್ರವಾಗಿ ಹಂಬಲಿಸಿದ್ದೆ ನಾನು. ಇದನ್ನೆಲ್ಲಾ ಯೋಚಿಸಿ ಕನ್ನಡಕ ತೆಗೆದಿರಿಸಿ, ಕಣ್ಣು ಒರೆಸಿಕೊಂಡು ಹೊರಗೆ ದಿಟ್ಟಿಸಿದವನಿಗೆ ಕಂಡಿದ್ದು ದೀಪಾಲಂಕಾರದಲ್ಲಿ ಸಿಂಗಾರಗೊಂಡಿದ್ದ ನಮ್ಮ ಬೀದಿ, ಪಟಾಕಿ ಸಿಡಿಸುತ್ತಿದ್ದ ಮಕ್ಕಳು, ಅವರ ಜೊತೆಗೆ ನಲಿಯುತ್ತಿದ್ದ ಹಿರಿಯರು.
ನಮ್ಮ ಮನೆಗೆ ಪಟಾಕಿ ವರ್ಜ್ಯ, ಪಟಾಕಿ ಸಿಡಿಸುವುದು ಪರಿಸರ ಮಾಲಿನ್ಯಕ್ಕೆ ಕಾರಣ ಎನ್ನುತ್ತಿದ್ದ ಅಮ್ಮ, ಕೇವಲ ದೀಪ ಬೆಳಗಿದರೆ ಸಾಕು ಎಂದೇ ನನಗೆ ಬಾಲ್ಯದಿಂದ ಹೇಳುತ್ತಾ ಬಂದಿದ್ದಳು. ಅಮ್ಮ ಕ್ರಾಂತಿಕಾರಿ ಅಲ್ಲ, ಬಹಳ ದೊಡ್ಡ ಪರಿಸರ ಪ್ರೇಮಿಯಂತೆ ಮಾತನಾಡಲು ನಿಲ್ಲುವವಳು ಅಲ್ಲ, ಬೇರೆಯವರಿಗೆ ಅದು ಸರಿಯೆನ್ನಿಸಿದರೆ ಮಾಡಲಿ, ನಾವು ಮಾಡುವುದು ಬೇಡ ಎನ್ನುವ ಕಠೋರ ನಿಲುವಿನವಳು. ಆಕೆ ಬೇರೆಯವರು ತಾನು ಹೇಳಿದಂತೆ ಕೇಳಬೇಕೆಂದು ಎಂದಿಗೂ ನಿರೀಕ್ಷಿಸಿದವಳಲ್ಲ ಮತ್ತು ನಿರೀಕ್ಷಿಸುವುದು ಇಲ್ಲ.
ಆದರೆ ನೀನು ಮನೆಗೆ ಚಿಕ್ಕವಳು, ಹಾಗಾಗಿ ನಿನಗೆ ಒಂದು ಹಿಡಿ ಮುದ್ದು ಜಾಸ್ತಿಯೇ, ನಿನಗೆ ಪಟಾಕಿ ಇಷ್ಟ, ನೀನು ನನಗೆ ಹೇಳ್ತಾ ಇದ್ದಿದ್ದು ಹೀಗೆ ಅಲ್ವ "ಮುಂದೆ ನೀನು ನನಗೆ ಪಟಾಕಿ ತಂದು ಕೊಡು, ನೀನು ಹೊಡೆಯೋದು ಬೇಡ, ಎರಡೇ-ಎರಡು ಪಟಾಕಿ ನಾನು ಹೊಡೆಯುತ್ತೀನಿ, ನಾನು ಧೈರ್ಯವಂತೆ ಕಣೋ, ಲಕ್ಷ್ಮಿ ಪಟಾಕಿಯೆಲ್ಲ ಹೊಡಿತೀನಿ. ನೀನು ಬೇಡ ಅನ್ನಬಾರದು ಆಯ್ತಾ, ಅನ್ನಲ್ಲ ಅಲ್ವ? ಹೇಳು, ಬೇಡ ಅನ್ನಲ್ಲ ಅಲ್ವ? " ಹೀಗೆನ್ನುತ್ತ ದುಂಬಾಲು ಬೀಳುತ್ತಿದ್ದೆ. ನಾನು ಬೇಕೆಂದೇ ನಿನಗೆ ಕಾಡಿಸಿ, ಕೊನೆಗೆ "ಬೇಡ ಅನ್ನಲ್ಲ ಕಣೋ" ಅಂದರೆ, ನೀನು "ಬೇಡ ಅಂದರು ನಾನು ಹೊಡಿತೀನಪ್ಪ" ಎಂದು ನನಗೆ ರೇಗಿಸಿ, ಮತ್ತೆ "ಹೀಗೆಂದೇ ಅಂತ ಬೇಜಾರಾಯ್ತೇನೋ?" ಅಂತ ಕೇಳುತ್ತಿದ್ದೆ, ನಿನ್ನ ಮಾತಿಗೆ ನಾನು ನಗುತ್ತಿದ್ದೆ, ಆಗ ನೀನು ನನ್ನೆದುರು ನಾಚಿ ನಿಲ್ಲುತ್ತಿದ್ದ ಮೌನ ಗೌರಿ.
"ಹೀಗೆ ನೀನಿರದ ಹೊತ್ತಲ್ಲಿ, ನೀನಿದ್ದಾಗಿನ ನಿನ್ನ ನೆನಪುಗಳು
ಬಂದು ಕಾಡುತಿವೆ, ನನ್ನೆದೆಯ ಚುಚ್ಚುತಿವೆ.
ನಾನು ನರಳುತ್ತೇನೆ, ನೋವ ದನಿಗೆ ಕೊರಳಾಗುತ್ತೇನೆ,
ಮತ್ತೆ ನೆನಪ ಪುಟಗಳ ಮಡಿಕೆಗೆ ಮರಳುತ್ತೇನೆ, ಮತ್ತಲ್ಲೇ ಹೊರಳಾಡುತ್ತೇನೆ,
ನಾಲಿಗೆ ಒಣಗುತ್ತದೆ, ಪುಟ ತಿರುವಿ ಹಾಕಲು ಅಲ್ಲಿ ಈಗ ತೇವವು ಇಲ್ಲ"
ಈಗ ನೋಡು ಹುಡುಗಿ, ನಾವಿಬ್ಬರೂ ಒಟ್ಟಾಗಿ ಆಚರಿಸುವ ಯಾವ ದೀಪಾವಳಿಯು ಬರುವುದಿಲ್ಲ ಎಂದು ಯೋಚಿಸಿದಾಗ ನನ್ನ ಆಂತರ್ಯ ನಡುಗುತ್ತದೆ, ದನಿ ಅತೀವವಾಗಿ ಕಂಪಿಸುತ್ತದೆ. ಕಿಟಕಿಯ ಮೊದಲ ಸರಳು ಹಿಡಿದು ನಿಂತವನು, ಸೋತು ಕುಸಿಯುತ್ತೇನೆ, ಕೈ ಕೊನೆಯ ಸರಳನ್ನು ತಲುಪುತ್ತದೆ. ಉರಿಯುತ್ತಿರುವ ಎದುರು ಮನೆಯ ಹಣತೆ ನಕ್ಕಂತಾಗುತ್ತದೆ. ನಾನು ಅದನ್ನು ನೋಡಲಾಗದೆ ಕಣ್ಣು ಮುಚ್ಚುತ್ತೇನೆ, ಮತ್ತೆ ನೀನು ನೆನಪಾಗುತ್ತೀಯ. ಅವಳಿರುವಾಗ ನಾವು ಹೇಗೆ ಇರಲು ಸಾಧ್ಯ ಎಂದು ಮುನಿದು ಕಂಬನಿಗಳು ಧರಣಿ ಮಾಡಲೆಂಬಂತೆ ಮೆರವಣಿಗೆ ಹೊರಡುತ್ತವೆ. ನಾನು ಅವನ್ನು ತಡೆಯ ಹೊರಡುತ್ತೇನೆ, ಅವುಗಳ ಹರಿವು ಇನ್ನು ಜೋರಾಗುತ್ತದೆ, ನಾನು ತಡೆಯಲೆತ್ನಿಸಿದಷ್ಟು.
ಬರುವ ದೀಪಾವಳಿ ನಿನಗೆ ದಾಂಪತ್ಯದ ಹೊಸ ಹಬ್ಬವಾಗಬಹುದು, ಅಲ್ಲಿ ನಮ್ಮ ಪ್ರೀತಿಯ ನೆನಪಿಗೊಂದು ಹಣತೆ ಹಚ್ಚಿ, ಅದಕ್ಕೆ ನಾನು-ನೀನು ಎಂದಷ್ಟೇ ಹೆಸರಿಡು. ದೀಪ ಬೆಳಗಿ ಬಿಡಲಿ, ನೆನಪು ಕರಗುವ ತನಕ, ಜೊತೆಗೆ ನನ್ನ ಈ ಉಸಿರು ನಿಲ್ಲುವ ತನಕ.
19 ಕಾಮೆಂಟ್‌ಗಳು:
ರಾಜೇಶ್ ಮಂಜುನಾಥ್ ಅವರೆ...
ಕಲ್ಪನೆಯ ಚಿತ್ತಾರಗಳ ಅನುಭವಿಸಿ ಉದ್ಭವಿಸಿದ ಬರಹ.
ಮನೆಯಂಗಳದಿ ದೀಪ ಹಚ್ಚಲು ಜೋಡಿ ಕೈಗಳು ಬೇಕು. ಮನದಂಗಳದ ನೆನಪಿನ ದೀಪಕ್ಕೆ ತೈಲವೂ ಬೇಡ, ಬತ್ತಿಯೂ ಬೇಡ. ನೆನಪೊಂದು ಸದಾ ಮನದ ಕಂಗಳೊಳಗೆ ಆರದೆ ಉರಿವ ದೀಪವಾಗಿಬಿಡುತ್ತದೆ. ಇಂಥಹ ನೆನಪುಗಳ ದೀಪಕ್ಕಿಂತ ಉಜ್ವಲವಾಗಿ ಬೆಳಗಲು ಸಾಧ್ಯವಿರುವುದು ಚೆಂದದ ಕನಸುಗಳಿಗೆ ಮಾತ್ರ.
ಕನಸಿನರಮನೆ ಹೊಕ್ಕು ಅಲ್ಲೊಂದು ಕಲ್ಪನೆಯ ದೀಪ ಹಚ್ಚಿ. ಆ ಚೆಂದದ ದೀಪದ ಬೆಳಕು ನಿಮ್ಮ ಬಾಳನ್ನ ಬೆಳಗಿಸಲಿ. ತುಂಬ ಸುಂದರವಾಗಿ ಬರೆಯುತ್ತೀರಿ. ಎಲ್ಲವೂ ಒಳಿತಾಗಲಿ.
hey.. rajesh...
tumba chenaagi baritiya.... ellu idu kalpane annisolla... nan prakaara yaavdannu kaldukollo munche ne adanna kalkond bittidivi anno nirdaara maadodu sariyalla... namgista irodanna padkolo prati prayathna nu patbidbeku.. aaga mundond dina.. innond sala yathnisidre ivattu aa vastu nan jote irtitteno annisolla...jeevana pura koragokinta .. kone tanaka prayathna padodu olledu. so keep tryin.. Nin mundina deepavali ninna preetiya hudugi jotele aachariso haage aagli anta naanu aa devranna prartistini.
ರಾಜೇಶ್,
ಕಲ್ಪನೆಯ ದೀಪವನ್ನು ಚೆನ್ನಾಗಿ ಹಚ್ಚಿದ್ದೀರಿ.....ಹೊರಗಿನ ಮತ್ತು ಮನದೊಳಗಿನ ಚಿತ್ತಾರದ ಚಿತ್ರಗಳನ್ನು ಲೇಖನದಲ್ಲಿ ಚೆನ್ನಾಗಿ ಮೂಡಿಸಿದ್ದೀರಿ....ಅದ್ರೆ ನನ್ನದೊಂದು ಮನವಿ...ಕಲ್ಪನೆ ಯಾವಾಗಲೂ ಸಕಾರಾತ್ಮಕವಾಗಿರಲಿ....ನಾವು ಏನೇ ಅಂದುಕೊಂಡರೂ ಮೇಲೆ ಆಶ್ವಿನಿ ದೇವತೆಗಳು ಅಸ್ತು ಅನ್ನುತ್ತಿರುತ್ತಾರಂತೆ....ಅದ್ದರಿಂದ ಎಲ್ಲಾ ಸರಿ...... ಶಸ್ತ್ರ ಚಿಕಿತ್ಸೆಯ ನಕರಾತ್ಮಕ ಕಲ್ಪನೆ ಏಕೆ ಬೇಕು....ಅಲ್ಲವೇ....ಬರವಣಿಗೆಗಾಗಿ ಕೆಟ್ಟದ್ದನ್ನು ಕಲ್ಪಿಸಿಕೊಳ್ಳುವುದು ಬೇಡವೆಂದು ನನ್ನ ಭಾವನೆ....ಹೇಳಿದ ಮಾತಿನಲ್ಲಿ ತಪ್ಪಿದ್ದರೆ ಕ್ಷಮಿಸಿ.....ಥ್ಯಾಂಕ್ಸ್.....
ರಾಜೇಶ್...
ಎಷ್ಟು ಚೆನ್ನಾಗಿ ಬರೆದಿದ್ದೀರಿ..?..!!
ಮನದಣಿಯೇ ಓದಿದೆ...
ಇನ್ನೂ ಓದುವೆ.. ಬೇಜಾರಾದಗಲೆಲ್ಲ...
ನನಗೆ ನಿಮ್ಮ ಕವನವೂ ಬಹಳ ಇಷ್ಟವಾಯಿತು...
ಆ ಕವನ ಇನ್ನೂ ಬರೆಯಬಹುದು .. ಬರೆಯಿರಿ...
ಕಥನದಲ್ಲಿ ಬೇಸರವಿದ್ದರೂ....
ನಮ್ಮಲ್ಲಿಯ ನೋವು ಶಮನವಾಗುವಂತಿದೆ..
ನಮ್ಮ ನೋವು ಇದು ಅನ್ನುವಂತಿದೆ..
ಬಹುಷಃ ಅದಕ್ಕೆ ಖುಷಿಯಾಯಿತೇನೋ...
ಹೀಗೆ ಬರೆಯಿರಿ...
ಚಂದವಾದ, ಆಪ್ತವಾದ... ಕಥನಕ್ಕೆ...
ಅಭಿನಂದನೆಗಳು...
chennagide raju..
HaNateya aDiyalli...
kattaleya tavaru..
adella OK
adre kaalpanika YAKE???
ರಾಜೇಶ್,
ತುಂಬ ಮನ ಮುಟ್ಟಿತು ಬರಹ... ಬರವಣಿಗೆ ತುಂಬ ಚನ್ನಾಗಿದೆ... ಎಲ್ಲರ ಎದೆಯೆಂಬ ಗೂಡಿನಲ್ಲಿ ಪ್ರೀತಿಯ ಹಣತೆಯೊಂದು ಸದಾ ಉರಿಯುತ್ತಿರಲಿ, ಜೀವನವನ್ನು ಬೆಳಗುತ್ತಿರಲಿ. ಶುಭವಾಗಲಿ.
Heart touching article. why dont you show this to her? who knows what may happen in future. why dont you try last time. Tell her that you cannot live without her company. she may come back to your life again. Same thing happened in my life. See how happy am with him now..
ಅನಾಮಿಕ ಗೇಳೆಯ ರಾಜೇಶ,…
ಕಥೆ ಕಾಲ್ಪನಿಕವಾದರೂ, ಸತ್ಯ ಘಟನೆ ಆದರೂ ಅದರ ಅಂತಿಮ ತೀರ್ಪು ಮಾತ್ರ ಒಂದೇ ಆಗಿರುತ್ತದೆ. ಕಾಲ್ಪನಿಕವನ್ನ ಸತ್ಯ ಅಂತ ಹಾಗೂ ಸತ್ಯವನ್ನ ಕಾಲ್ಪನಿಕ ತಿಳಿದುಕೊಳ್ಳುವದು ಮನುಷ್ಯನ ದೌರ್ಬಲ್ಯ ಅಂತ ನನ್ನ ಅನಿಸಿಕೆ.
ಬಯಸಿದ್ದನ್ನ ಪಡೆಯಲು ಪ್ರಯತ್ನಿಸಬೇಕು ನಿಜ. ಆದರೆ ಅದು ಸಿಗುವದಿಲ್ಲ ಅಂತ ಖಚಿತವಾದ ಮೇಲೆ ಅದಕ್ಕೆ ಅದಕ್ಕೆ ಪ್ರಯತ್ನಿಸುವದು ಸರಿಯಲ್ಲ.
ಅತ್ಯಂತ ಪ್ರಕಾಶಮಾನವಾದ ಚೆಂದದ ದೀಪ ಕೂಡ ನಮ್ಮ ಅಂಗಳದಿಂದ ಹೋದ ಮೇಲೆ ನಮಗೆ
ಬೆಳಕು ಕೊಡಲಾರದು. ಆ ದೀಪದ ಚೆಂದ ಹಾಗೂ ಪ್ರಕಾಶವನ್ನ ನೆನೆಯುತ್ತ ದುಃಖಿಸುತ್ತಾ
ಕತ್ತಲೆಯಲ್ಲಿ ಕಳೆಯಬಾರದು.
ಕಡಿಮೆ ಬೇಳಕು ಬೀರುವ ದೀಪವಾದರೂ ಸರಿಯೇ ಆ ಬೇಳಕಲ್ಲಿ ಜೀವಿಸುವದು ಸರಿ ಅಂತ ನನ್ನ ಆಭಿಪ್ರಾಯ.
ಭಾವನಾ ಪ್ರಪಂಚದ ಕಾಲ್ಪನಿಕ ಕಥೆಗೊಂದು ನಿಖರ ಅಭಿಪ್ರಾಯ
ಇಂತಿ
ಕಿರುದೀಪ.
rajesh ravara baraha adbuta vagide yeshtu odidaru sakagta illa innu odabekemba hambala mana muttida baraha
ರಾಜೇಶ್ ಸರ್ ನಿಮಗೆ ನಾನು ಯಾರುಂತ ಗೊತ್ತಿಲ್ಲದಿರಬಹುದು, ನಾನು ನಿಮ್ಮ blog ನ ಅಭಿಮಾನಿ ಅಂತ ಹೇಳ್ಕೊಳ್ಳೋಕೆ ನಂಗೆ ಖುಷಿ ಇದೆ. ನೀವು ಬರೆದಿದ್ದು ಕಲ್ಪನೆಯಲ್ಲ ಅಂತ ಓದಿದ್ರೆ ಗೊತ್ತಾಗುತ್ತದೆ. ಇದು ಮತ್ತು ನಿಮ್ಮ ಈ ಹಿಂದಿನ article ಬಿಟ್ಟು, ಉಳಿದಿದ್ದೆಲ್ಲ ಚೆನ್ನಾಗಿದೆ. ಇದೆರಡು ಓದಿದವರಲ್ಲಿ ಹೆಚ್ಚಿನವರು ಕಂಡಿತ ಅತ್ತಿರುತ್ತಾರೆ. ನಾನು ಓದಿದಾಗೆಲ್ಲ ಅತ್ತಿದ್ದೇನೆ. ನೀವು ಪ್ರೀತಿಸಿದ ಹುಡುಗಿಗೆ ಹೇಗಾದರು ಮಾಡಿ ಒಪ್ಪಿಸಿ, ನಿಮ್ಮ ಕೈಯಲ್ಲಿ ಕಂಡಿತ ಸಾಧ್ಯವಿದೆ. ಹುಡುಗಿಯರು ಮದುವೆಯ ಸಂಧರ್ಬದಲ್ಲಿ ಹೆದರಿ ತಪ್ಪು ನಿರ್ಧಾರ ತೆಗೆದು ಕೊಳ್ಳುತ್ತಾರೆ, ಇದಕ್ಕೆ ನಾನು ಹೊರತಾಗಿಲ್ಲ. ಜೀವನವಿಡಿ ಕೊರಗುವುದಕ್ಕಿಂತ, ಒಮ್ಮೆ ಒಪ್ಪಿಸಲು ಪ್ರಯತ್ನಿಸಿ, ನಿಮ್ಮ ಜೊತೆ ಆ ಹುಡುಗಿ ತುಂಬಾ ಒಳ್ಳೆ ಬದುಕನ್ನು ಕಾಣ್ತಾಳೆ ಅನ್ನೋ ನಂಬಿಕೆ ನನಗು ಇದೆ ಮತ್ತು ಇಲ್ಲಿ ಬರೆದಿರೋ ಎಲ್ಲರಿಗು ಇದೆ ಏಕೆಂದರೆ ನಿಮ್ಮ ಭಾವನೆ ನೋಡಿದರೆ ಅದು ಅರ್ಥವಾಗುತ್ತೆ. ನಿಮ್ಮ ಪ್ರೀತಿಯ ಹುಡುಗಿ ಈ ನಿಮ್ಮ article ಓದಿದರೆ ಅವರಿಗೆ ಒಂದು ಮಾತು 'ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತಕೋ ಬೇಡಿ, ರಾಜೇಶ್ ಅವರ ಈ article ಓದಿದ ಮೇಲಾದರೂ ಅವರ ಪ್ರೀತಿ ಅರ್ಥ ಮಾಡಿಕೊಂಡು, ಅವರನ್ನು ಮತ್ತೆ ಸೇರಿ, ನಿಮ್ಮಿಬ್ಬರ ಬದುಕು ಚನ್ನಾಗಿರಲಿ ಮತ್ತು ಚನ್ನಾಗಿರುತ್ತೆ. ಮುಂದಿನ ದೀಪಾವಳಿಗೆ ಗಂಡ ಹೆಂಡತಿಯಾಗಿ ಇಬ್ಬರು ಸೇರಿ ದೀಪ ಹಚ್ಚಿ.'
ರಾಜೇಶ್ ಸರ್ ನಿಮ್ಮ article ಗಳನ್ನೂ ಪ್ರೀತಿಯಿಂದ ಓದುವ ನಮಗೆ ಇನ್ನು ಮುಂದೆ ದಯವಿಟ್ಟು ಅಳಿಸ ಬೇಡಿ, ನಮಗೆ ನಮ್ಮ life ನೆನಪಾಗಿ, ತುಂಬಾ ಅಳು ಬರುತ್ತೆ, ಆಗ ಸ್ವಲ್ಪ ಧೈರ್ಯ ಮಾಡಿದ್ರೆ ಅಂತ ಈಗ ಅನ್ಸುತ್ತೆ. ನಂಗೆ ನಿಮ್ಮಷ್ಟು ಚನ್ನಾಗಿ ಬರೆಯೋಕೆ ಬರಲ್ಲ, ನಿಮಗೆ ಬೇಜಾರಾಗಿದ್ದರೆ ನನ್ನನ್ನು ಕ್ಷಮಿಸಿಬಿಡಿ. ನಿಮ್ಮ ಪ್ರೀತಿ success ಆದರೆ, ಇಲ್ಲಿ ಅದರ ಬಗ್ಗೆ ಬರೀರಿ, ಓದಿ ಖುಷಿ ಪಡ್ತೀವಿ.
ಹೃದಯವನ್ನು ಮೆಲ್ಟ್ ಮಾಡ್ಕೊಂಡು ಬರೆದಂಗಿದೆ..:)
"ಮತ್ತೆ ನೆನಪ ಪುಟಗಳ ಮಡಿಕೆಗೆ ಮರಳುತ್ತೇನೆ, ಮತ್ತಲ್ಲೇ ಹೊರಳಾಡುತ್ತೇನೆ,
ನಾಲಿಗೆ ಒಣಗುತ್ತದೆ, ಪುಟ ತಿರುವಿ ಹಾಕಲು ಅಲ್ಲಿ ಈಗ ತೇವವು ಇಲ್ಲ"
ಈ ಸಾಲುಗಳು ಕಾಡಿದವು.
ಲಂಕೇಶ್ ರು ನೀಲು ಪದ್ಯದಲ್ಲಿ ಬರೆಯುತ್ತಾರೆ.. ಎಂತಹ ಪ್ರತಿವೃತೆಯೂ ಬೆಳ್ದಿಂಗಳ ರಾತ್ರಿಯಲಿ ಹಳೆಯ ಪ್ರಿಯಕರನನ್ನು ನೆನೆಸಿಕೊಳ್ತಾಳಂತೆ..!:)
ಬಹುಶಃ ವಿರಹವೆಂಬ ಭಾವವೇ ಹಾಗೇ ಇರ್ಬೇಕು... ಬಿಟ್ಟೆ ಅಂದ್ರೂ ಬಿಡದು... ಕೈಗೂ ಸಿಗದು..:)
ಬಹುಶಃ ಬದುಕು ಎಲ್ಲದಕ್ಕಿಂತ ದೊಡ್ಡದು ಅಂದುಕೊಂಡು ವಿರಹವನ್ನು ತರ್ಪಣ ಬಿಟ್ಟುಬಿಡೋಕೆ ಪ್ರಯತ್ನ ಪಡುವುದೇ ಮೇಲು ಅಲ್ಲವೆ?
ರಾಜೇಶ್ ಅವರೇ, ನಿಮ್ಮ ಕಲ್ಪನಾ ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ..
ಮತ್ತೆ ಮತ್ತೆ ಓದಬೇಕು ಎಂದು ಅನ್ನಿಸುತ್ತದೆ. ಹೀಗೆ ಬರೆಯಿತ್ತಿರಿ. :)-
ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಎಷ್ಟೊಂದು ಮುಗ್ಧವಾಗಿ ಪರಿಕಲ್ಪನೆಯನ್ನು ಅಕ್ಷರಗಳಲ್ಲಿ ಪೋಣಿಸಿದ್ದೀರಿ..
-ಚಿತ್ರಾ
ರಾಜೇಶ್ ಅವರೇ ಮನಸಿಗೆ ಹಿಡಿಸಿತು ನಿಮ್ಮ ಬರಹ.. ಕಣ್ಣಿನಲಿ ಕಂಬನಿ ತುಂಬಿತು..ಮೌನ ನನ್ನನ್ನಾವರಿಸಿತು..ತುಂಬಾ ಚೆನ್ನಾಗಿ ಬರೆದಿದ್ದೀರಿ....
ವಿನಾಕಾರಣವಾಗಿ ಮತ್ತು ವಿಪರೀತ ಎನಿಸಿ ಬಿಡುವಷ್ಟು ನನ್ನ ಕೆಲಸಗಳಲ್ಲಿ ತೊಡಗಿ ಹೋಗಿದ್ದೆ, ಇದೆಲ್ಲದರ ನಡುವೆ ಎಷ್ಟೇ ಬರೆದರು ಬ್ಲಾಗಿಗೆರಿಸಲು ಯೋಗ್ಯ ಅನ್ನುವಂತಹುದು ಒಂದು ಹುಟ್ಟಲಿಲ್ಲ ಎಂಬ ದುಃಖ ಬೇರೆ... ಈ ಬರಹ ಬರೆದು ಇಲ್ಲಿ ಹಾಕಿದ ಮೇಲೆ, ನನ್ನ ಅವಸ್ಥೆ ಥೇಟು ತನ್ನ ಮಗುವನ್ನು ನಡೆಯಲು ಬಿಟ್ಟು ಮರೆಯಲ್ಲಿ ನಿಂತು ನೋಡುತ್ತಾ ಆನಂದಿಸುವ ತಾಯಿಯಂತಹುದು. ಹೀಗೆ ಬರೆಯುತ್ತಿರು ಅಂತ ಪ್ರೀತಿಯಿಂದ ಕೆಲವರೆಂದರೆ, ಇಷ್ಟು ಆಳಕ್ಕೆ ಹೋಗದಿರು ಎಂದವರು ಕೆಲವರು. ಫೋನ್ ಮಾಡಿ ಕಣ್ಣೀರಾಗಿ ಇನ್ನು ಬರೆಯಲೇ ಬೇಡ ಎಂದು ಸಿಡುಕಿದ ಅದೆಷ್ಟೋ ಗೆಳೆಯರು. ನಿನ್ನ ಬ್ಲಾಗನ್ನು ಅಳಿಸಿ ಹಾಕಿ ಬಿಡು ಅಂತ ಜಿದ್ದಿಗೆ ನಿಂತಿದ್ದ ನನ್ನ ಜೀವದ ಗೆಳಯ, ಯಾಕೆ ನಿಲ್ಲಿಸಿದೆ, ಏನಾದರು ಬರೀರಿ ಓದಬೇಕೆನಿಸಿದೆ ಅಂದ ಮಿತ್ರರು, ಓದಿದರು ಓದೇ ಇಲ್ಲವೆಂಬಂತೆ ನಡೆದ ಹಲವರು, ಹೀಗೆ ಬಂದು ಹೋದ ಎಲ್ಲರಿಗು ನನ್ನ ಆತ್ಮೀಯ ಧನ್ಯವಾದಗಳು, ಮತ್ತು ಹೀಗೆ ಬರುತ್ತಿರಿ.
ಶಾಂತಲಕ್ಕ,
ನಿಮ್ಮ ಪ್ರೀತಿ ಮತ್ತು ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು, ನೀವೆಲ್ಲ ಹೀಗೆ ಬರ್ತಾ ಇದ್ದರೆ ಬರೆಯೋದಕ್ಕೆ ನನಗೆ ಶಕ್ತಿ ಬಂದಂತೆ.
ನಮೀತಕ್ಕ,
ಪರವಾಗಿಲ್ವೆ ನಾನು ಸುಳ್ಳನ್ನು(!) ಇಷ್ಟು ಚೆನ್ನಾಗಿ ಬರೀತೀನ, ಕೊರಗುವಂತಹ ವಿಚಾರ ಏನು ಇಲ್ಲ, ನನ್ನ ಬಗ್ಗೆ ನಿಮಗೆ ಗೊತ್ತಲ್ಲ, ಇಷ್ಟ ಪಟ್ಟಿದ್ದಕ್ಕೆ, ಮತ್ತು ಪ್ರೀತಿಯ ಪ್ರೋತ್ಸಾಹ ಮತ್ತು ನಲ್ಮೆಯ ಬುದ್ದಿವಾದಕ್ಕೆ ಹೃದಯಪೂರ್ವಕ ಧನ್ಯವಾದಗಳು.
ಶಿವೂ ಸರ್,
ಅಶ್ವಿನಿ ದೇವತೆಗಳಿಗೆ ತಪ್ಪು ಕಾಣಿಕೆ ಸಲ್ಲಿಸಿ, ಮುಂದಿನ ಬರಹ ಬರೆಯಲು ಕುಳಿತು ಕೊಳ್ಳುವೆ, ಬರಿ ಧನಾತ್ಮಕತೆ ತುಂಬಿರುವಂತೆ ಏನಾದರು ಬರೆಯುತ್ತೇನೆ. ತಪ್ಪನ್ನು ತಿದ್ದುವವರು ದೇವರಿಗೆ ಸಮಾನ ಅಂತಾರೆ, ಹಾಗಾಗಿ ಕ್ಷಮಿಸುವ ಮಾತೇ ಇಲ್ಲ, ಹಿರಿಯರು ಚಿಕ್ಕವರ ಕ್ಷಮೆ ಕೇಳಿದರೆ ಮತ್ತೆ ಚಿಕ್ಕವರ ಆಯಸ್ಸು ಕಡಿಮೆಯಾಗುತ್ತಂತೆ. ತಪ್ಪಿದ್ದಲ್ಲಿ ತಿದ್ದಿ, ಸರಿಪಡಿಸಿಕೊಂಡು ನಡೆಯುವುದು ನನ್ನ ಜವಬ್ದಾರಿ, ನನಗೆ ಸರಿಯೆನಿಸಿದರೆ ಖಂಡಿತ ಅಳವಡಿಸಿಕೊಳ್ಳುವೆ, ನಿಮ್ಮ ಪ್ರೀತಿಗೆ ನಾನು ಋಣಿ.
ಪ್ರಕಾಶ್ ಸರ್,
ವಿರಹ ಅದೇಕೋ ಗೊತ್ತಿಲ್ಲ ಎಲ್ಲರಿಗೂ ಇಷ್ಟವಾಗುತ್ತದಂತೆ, ಅದರ ನೋವು-ನರಳುವಿಕೆ ಎಲ್ಲರ ಮನಸ್ಸಿಗೂ ಆಪ್ತವಾಗುತ್ತದೆ. ನಿಮ್ಮ ಮೆಚ್ಚುಗೆಗೆ ನಾನು ಸಂಕೋಚದ ಮುದ್ದೆ ಇಲ್ಲಿ, ಧನ್ಯವಾದಗಳು.
ಗುರುವರ್ಯ,
ಉಪೇಂದ್ರನ ಪಕ್ಕ ಅಭಿಮಾನಿಯಾದಂತಿದೆ...
ನೀನು ನನ್ನ ಬರಹಗಳ ಬಹು ದೊಡ್ಡ ವಿಮರ್ಶಕ, ನೀನು ಇದನ್ನು ಇಷ್ಟಪಟ್ಟಿದ್ದೆ ನನಗೆ ಸಂತೋಷ ನೀಡಿದೆ.
"ಹಣತೆಯ ಅಡಿಯಲ್ಲಿ
ಕತ್ತಲೆಯ ತವರು"
"ಇದರ ಅರಿವಿದ್ದರು
ಹಣತೆ ಉರಿಯುವುದು ಇನ್ನೂ ಜೋರು
ಮತ್ತೆ ಬೆಳಗುವುದು ಇಡೀ eಊರು" ಏನಂತೀಯ?
ಶರತ್,
ಇಲ್ಲಿ ಬಂದಿದ್ದಕ್ಕೆ, ಮತ್ತು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ತುಂಬ ತುಂಬ ಧನ್ಯವಾದಗಳು, ಹೀಗೆ ಬರುತ್ತಿರಿ.
ಪವಿತ್ರ,
ಅವತ್ತಿಂದ ಕಾಯುತ್ತಿದ್ದೇನೆ, ಅವಳು(?) ಬರಲೇ ಇಲ್ಲ!!!
ಅಂದ ಹಾಗೆ ಯಾರಿಗೆ ತೋರಿಸಲಿ ಈ ಬರಹ, ತೋರಿಸಿ ಏನು ಹೇಳಲಿ ಮತ್ತು ಏನು ಕೇಳಲಿ. ಅಕ್ಕರೆಗೆ ಆಭಾರಿ, ಮತ್ತು ಈ ನನ್ನ ಲೇಖನ ಬರಿಯ ಕಲ್ಪನೆಯಷ್ಟೇ, ಅನುಮಾನ ಬೇಡ.
ಆತ್ಮೀಯ ಗೆಳೆಯ ಕಿರು ದೀಪ,
ನೀವು ನೀಡಿದ "ಭಾವನಾ ಪ್ರಪಂಚದ ಕಾಲ್ಪನಿಕ ಕಥೆಗೊಂದು ನಿಖರ ಅಭಿಪ್ರಾಯ"ಕ್ಕೆ ನನ್ನ ಕೋಟಿ ಕೋಟಿ ಪ್ರಖರ ಪ್ರೀತಿಯ ಪ್ರತಿ ವಂದನೆಗಳು. ನಿಮ್ಮ ಪ್ರತಿ ಸಾಲು ಅಪ್ಪಟ ಸತ್ಯ, "ಅತ್ಯಂತ ಪ್ರಕಾಶಮಾನವಾದ ಚೆಂದದ ದೀಪ ಕೂಡ ನಮ್ಮ ಅಂಗಳದಿಂದ ಹೋದ ಮೇಲೆ ನಮಗೆ ಬೆಳಕು ಕೊಡಲಾರದು", ಪ್ರೀತಿಯ ಬೇಗೆಯಲ್ಲಿ ಸಿಕ್ಕು ಸೋತು, ನರಳುವ ಜೀವಗಳಿಗೆ ಬರೆದ ಬರಹವಿದಷ್ಟೇ, ನನ್ನ ಜೀವನಕ್ಕೂ ಇದಕ್ಕೂ ಯಾವುದೇ ಸಂಭಂಧವಿಲ್ಲ.
ದಯವಿಟ್ಟು ಹೀಗೆ ಬರುತ್ತಿರಿ, ನಿಮ್ಮ ಅಭಿಪ್ರಾಯ ತುಂಬ ಆಪ್ತವೆನಿಸುತ್ತದೆ.
-ರಾಜೇಶ್ ಮಂಜುನಾಥ್
ರೋಹಿಣಿ,
ನನ್ನ ಬರಹಕ್ಕಿಂತ ತಾಳ್ಮೆಯಿಂದ ಓದುವ ನಿಮ್ಮ ಪ್ರೀತಿ ನನ್ನ ಈ ಬರಹಗಳನ್ನು ಸಹ್ಯವಾಗಿಸಿವೆ. ನೀವೆಲ್ಲ ಇಷ್ಟೊಂದು ಇಷ್ಟಪಟ್ಟರೆ ಬರೆಯಬೇಕೆಂಬ ಉತ್ಸಾಹ ಇಮ್ಮಡಿಯಾಗುತ್ತದೆ. ಧನ್ಯವಾದಗಳು, ತಪ್ಪಿಸದೇ ಬರುತ್ತಿರಿ.
ವಸುಮತಿ,
ನಿಮ್ಮ ಅಭಿಪ್ರಾಯಕ್ಕೆ ಹೇಗೆ ಪ್ರತಿಕ್ರಿಯಿಸ ಬೇಕು ಎಂಬುದೇ ಅರ್ಥವಾಗುತ್ತಿಲ್ಲ. ನನ್ನ ಬ್ಲಾಗ್ ನ ಅಭಿಮಾನಿಯೆಂದು ಹೇಳಿದ್ದೀರಿ ನಿಮ್ಮ ಪ್ರೀತಿಗೆ ನಾನು ಆಭಾರಿ. ದಯವಿಟ್ಟು ಕ್ಷಮೆಯಿರಲಿ ನನ್ನ ಈ ಬರಹ ಕಾಲ್ಪನಿಕವಷ್ಟೇ. ನಾವು ಭಾವ ಜೀವಿಗಳು, ನೋಡುವ ಮಾತು ಕೇಳುವ ಪ್ರತಿ ವಿಚಾರವನ್ನು ಒಳ ಹೊಕ್ಕು ನೋಡುವ ಯತ್ನದಲ್ಲಿ ಎದುರಿರುವ ಪಾತ್ರ ನಮ್ಮಲ್ಲಿ ಆವಾಹನೆಯಾಗುತ್ತದೆ. ಅದು ನಾವೇ ಎಂದು ಕೊಳ್ಳುತ್ತೇವೆ, ಬಹುಶಃ ಯಾವುದೇ ಬರಹ ಓದುವಾಗ ನಿಸ್ಸಂಶಯವಾಗಿ ಹಾಗೆ ಓದಬೇಕು, ಹಾಗೆ ಓದಿದಾಗ ಬರಹಗಾರನ ನಿಜ ಪ್ರಯತ್ನ ಸಾರ್ಥಕವಾಗುತ್ತದೆ ಮತ್ತು ಬರಹ ಆಪ್ತವಾಗುತ್ತದೆ.
ಒಪ್ಪಿಸಲು ಪ್ರಯತ್ನಿಸಲು ನನ್ನ ಬದುಕಿನಲ್ಲಿ ಅಂತಹ ಹುಡುಗಿಯ ಪ್ರವೇಶವೇ ಆಗಿಲ್ಲ, ಅಕಸ್ಮಾತ್ ಅವಳು ಬಂದು ಮತ್ತೆ ಬಿಟ್ಟು ಹೋಗುತ್ತೇನೆ ಎಂದರೆ ಖಂಡಿತ ಈ ಬರಹ ಅವಳ ಕೈಗಿಡುತ್ತೇನೆ(!). ನಿಮ್ಮ ಪ್ರೀತಿಯ ಹಾರೈಕೆಗೆ ನನ್ನ ತುಂಬು ಹೃದಯದ ಕೃತಜ್ಞತೆ.
ನಿಮ್ಮನ್ನು ಅಳಿಸಬೇಕೆಂಬ ಉದ್ದೇಶ ಲವಲೇಶದಷ್ಟು ನನಗಿರಲಿಲ್ಲ, ಬರವಣಿಗೆ ಹಾದಿ ತಪ್ಪಿದಾಗ ಹೀಗೆಲ್ಲ ಆಯಿತು ಅನ್ನಿಸುತ್ತದೆ. ಕೊನೆಯಲ್ಲಿ ಒಂದು ಮಾತು ಅಪಾರ್ಥ ಭಾವಿಸ ಬೇಡಿ, ಪ್ರತಿಯೊಬ್ಬ ಸಂತನಿಗೊಂದು ಹಿನ್ನೆಲೆ, ಪ್ರತಿಯೊಬ್ಬ ಪಾಪಿಗೊಂದು ಭವಿಷ್ಯವಿದ್ದೆ ಇರುತ್ತದಂತೆ. ಹಾಗೆಯೇ ನೀವು ನಿಮ್ಮ ದಾಂಪತ್ಯದಲ್ಲಿ ಹೆಚ್ಚಿನ ಕಾಳಜಿ ವಹಿಸಿ, ಯಾರಿಗೆ ಗೊತ್ತು ನೀವು ಕಳೆದು ಕೊಂಡಿದ್ದಕ್ಕಿಂತ ಹೆಚ್ಚಿನ ಪ್ರೀತಿ ನಿಮ್ಮ ಬಾಳ ಸಂಗಾತಿ ನೀಡಬಹುದು, ಈಗ ನಿಮ್ಮ ಹಳೆಯ ಗೆಳೆಯನನ್ನು ನೆನೆಯುತ್ತ ಕುಳಿತರೆ ಅದು ನೀವೇ ನಿಮ್ಮ ಕೈಯಾರೆ ನಿಮ್ಮ ಬಾಳ ಸಂಗಾತಿಗೆ ಮಾಡುತ್ತಿರುವ ಅನ್ಯಾಯವಾಗುತ್ತದೆ, ನಮ್ಮಿಂದ ನಮ್ಮ ಬದುಕಲ್ಲಿ ಬದುಕಾಗ ಬಂದವರಿಗೆ ನೋವಾಗಬಾರದಲ್ಲವೇ, ಒಮ್ಮೆ ಯೋಚಿಸಿ, ಹಳೆಯದನ್ನೆಲ್ಲ ಮರೆತು ಬಿಡಿ, ಒಬ್ಬ ಭಗ್ನ ಪ್ರೇಮಿ ಮಾತ್ರ ಬದುಕನ್ನು ಅದ್ಭುತವೆನ್ನುವಂತೆ ಬದುಕಲು ಸಾಧ್ಯ ಎಂದು ಎಲ್ಲೋ ಓದಿದ ನೆನಪು. ಚೆಂದನೆಯ ಬದುಕನ್ನು ಬದುಕಿ ಬಿಡಿ, ನನ್ನೆಲ್ಲ ಶುಭ ಹಾರೈಕೆಗಳು ನಿಮಗೆ.
ಯಶಸ್ವಿಯಾಗಲು ನನ್ನದಾವುದು ಪ್ರೇಮ ಕಥೆಯಿಲ್ಲ... ಆದರೆ ಎಂದಾದರೂ ಮದುವೆಯಾದರೆ ಆಹ್ವಾನಿಸುತ್ತೇನೆ, ಖಂಡಿತ ಬನ್ನಿ. ನನ್ನ ಬರಹಗಳೆಡಗಿನ ನಿಮ್ಮ ಪ್ರೀತಿ ಹೀಗೆ ಮುಂದುವರೆಯಲಿ, ಇನ್ನು ಮುಂದೆ ಅಳಿಸುವುದಿಲ್ಲ ಎಂದು ಆಶ್ವಾಸನೆ ನೀಡುತ್ತೇನೆ.
ಪ್ರೀತಿಯಿರಲಿ,
-ರಾಜೇಶ್ ಮಂಜುನಾಥ್
ಪ್ರೀತಿಯ ಗೆಳೆಯ ರಾಜೇಶಗೆ,
ನನ್ನ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಿನ್ನ ಬರಹದಲ್ಲಿನ ಕಕ್ಕುಲಾತಿ ನನಗೆ ಅರ್ಥವಾಗುತ್ತದೆ ಗೆಳೆಯ.
ಶುಭ್ರ ಮನಸ್ಸಿನಾಳದಿಂದ ಬರೆದರೆ ತಾನಾಗಿಯೇ ಬರಹ ಆಪ್ತವಾಗುತ್ತದೆ.
ನೀನು ವಸುಮತಿಗೆ ಬರೆದ ಪ್ರತಿಕ್ರಿಯೆಯು ನಿನಗೆ ಕೂಡ ಅನ್ವಯಿಸುತ್ತದೆ. ದಯವಿಟ್ಟು ನಿನೊಮ್ಮೆ ತಿರುಗಿ ಓದು.
ನಾನು ಹೇಳಿದ್ದು ನಿಜ ಅಲ್ವಾ ಸುಳ್ಳು ಹೇಳ್ಬೆಡ.
ಇಂತಿ
ನಿನಗೆ ಗೊತ್ತಿರುವ ಅನಾಮಧೇಯ
ಕಿರುದೀಪ
ಪ್ರೀತಿಯ ರಾಜೇಶ್,
ತುಂಬಾ ತಡವಾಗಿ ಈ ನಿಮ್ಮ ಲೇಖನ ಓದುತ್ತಿರುವುದಕ್ಕೆ ಕ್ಷಮೆ ಇರಲಿ.
ನಿಮ್ಮ ಈ ಪರಿಯ ನೆನಪು ಮನಕ್ಕೆ ನಾಟಿತು..
ಯಾವ ಶಸ್ತ್ರ ಕ್ರಿಯೆಗೆ ನೀವು ಒಳಗಾಗಿದ್ದಿರಿ?
ನಿಜವಾದ ಪ್ರೀತಿಯ (ಕಲ್ಪನೆ) ಮೌನದಲ್ಲೆ ವರ್ಣಿಸುತ್ತಾ ಹೋಗಿದ್ದಿರಿ..... ನೆನಪುಗಳ ಅಂಗಳದಲಿ ನೋವಿನ ಛಾಯೆ ಮೂಡಿಸಿರುವ ಪರಿ ತುಂಬಾನೇ ನೈಜವಾಗಿದೆ.
ದೀಪದ ಬೆಳಕಿನಲ್ಲಿ ಕಳೆದು ಹೋಗುತ್ತಿರುವ ಪ್ರೀತಿಗೆ ಹರಸುತ ವಿದಾಯ ಹೇಳುವಾಗ ಅದರಲ್ಲಿರುವ ನೋವು ,.... ಇವೆಲ್ಲವೂ ನೈಜತೆಯಿಂದ ತುಂಬಿದೆ...
ತುಂಬಾ ಇಷ್ಟವಾಯಿತು. ಹೊಸ ಲೇಖನಗಳನ್ನು ಬರೆಯುತ್ತಿರಿ..
-ಇಂಚರ
Hello,
I seriously don't know how many times i have read this article. Even now i read your blogs when i feel alone. i will be soo relaxed.
Try updating your blogs when u r free...
With many thanks,
Veena :)
ಕಾಮೆಂಟ್ ಪೋಸ್ಟ್ ಮಾಡಿ