ಮನೆಯ ಹೊರಗಿನ ಕಿಟಕಿಯ ಮೊದಲ ಸರಳನ್ನು ಕೈ ಚಾಚಿ ಹಿಡಿದು ಆಚೆ ನೋಡುತ್ತಾ ನಿಂತವನಿಗೆ ಎದುರು ಮನೆಯ ಹೊಸ್ತಿಲಿನ ಬಳಿಯಿಟ್ಟಿದ್ದ ಪುಟ್ಟ ಹಣತೆ ಕೂಗಿ ಕರೆದಂತಿತ್ತು. ಅದು ಶುಕ್ರವಾರದ ರಾತ್ರಿ ಮನೆಯೆದುರು ಗುಡಿಸಿ, ನೀರು ಚೆಲ್ಲಿ, ರಂಗವಲ್ಲಿಯನಿಟ್ಟು, ಜ್ಯೋತಿ ಬೆಳಗಿಸಿದ್ದರು. ಈ ದೀಪದ ಜ್ಯೋತಿ ನನ್ನನ್ನು ಕೆಲವಾರು ವರ್ಷಗಳಷ್ಟು ಹಿಂದಕ್ಕೆ ತೇಲಿಸಿ ಕೊಂಡು ಹೋಯಿತು ನೆನಪ ನಾವೆಯಲ್ಲಿ, ಮನಸ್ಸು ತನ್ನ ನೆರಳನ್ನೇ ಬೆನ್ನಟ್ಟಿ ಓಡುವ ಪುಟ್ಟ ಮಗುವಿನಂತೆ ಓಡುತ್ತಿತ್ತು.
ಆ ದಿನ ಸಂಜೆ 6:15 ರ ಸುಮಾರಿಗೆ ಅಮ್ಮ ದರಗು(ಒಣಗಿದ ಎಲೆ) ಗುಡಿಸಲು ಹೋದ ಸಣ್ಣ ವಿರಾಮದಲ್ಲಿ ನನಗೆ ಆತುರಾತುರವಾಗಿ ನೀನು ಫೋನಾಯಿಸಿದ್ದೆ. ಮನೆಯ ಫೋನು ರಿಂಗಣಿಸಿದ ತಕ್ಷಣ ಅಮ್ಮ "ಅದು ನಿನಗೇ ಕಣೋ, ಒಂದು ನಿಮಿಷ ಕೊಡುತ್ತೀನಿ, ಮತ್ತೆ ನನ್ನ ಧ್ವನಿ ಕೇಳಿದರೆ ಹಾಗೆ ಫೋನ್ ಇಟ್ಟೇ ಬಿಡುತ್ತಾರೆ ನಿನ್ನ ಗೆಳೆಯರು" ಎನ್ನುತ್ತಾ ಅಡುಗೆ ಮನೆಯಿಂದ ಸ್ಥಿರ ದೂರವಾಣಿಯ ಕಡೆಗೆ ನಡೆದರು. ನನಗೋ ಶಸ್ತ್ರಚಿಕಿತ್ಸೆಯ ಹೆಸರಿನಲ್ಲಿ ವೈದ್ಯರು ಹೊಟ್ಟೆಯನ್ನು ಸಿಗಿದು ಅನಾಮತ್ತಾಗಿ 21 ಹೊಲಿಗೆ ಹಾಕಿ ಮಲಗಿಸಿದ್ದರು, ನಾನು ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದರು ಫೋನಿನ ರಿಂಗಣ ತುಂಬ ಹಿತವಾಗಿದೆ ಎಂಬಂತೆ ಕಿವಿಗೊಟ್ಟು ಕೇಳಿದ್ದು ಸುಳ್ಳಲ್ಲ. ಫೋನನ್ನು ಕೈಗಿತ್ತ ಅಮ್ಮ "ಮಾತನಾಡಿ ಫೋನನ್ನು ಇಲ್ಲೇ ಇಟ್ಟು ಬಿಡು" ಎಂದಷ್ಟೇ ಹೇಳಿ ಒಳಗೆ ನಡೆದರು.
ಫೋನನ್ನು ಕಿವಿಗಿಟ್ಟು "ಹಲೋ" ಅಂದರೆ, ಆ ಕಡೆಯಿಂದ ನೀನು "ಸದ್ಯ ನೀನೇ ಫೋನ್ ಎತ್ಕೊಂಡ್ಯಲ್ಲ, ದೀಪಾವಳಿ ಹಬ್ಬದ ಶುಭಾಶಯಗಳು, ಅಮ್ಮ ದರಗು ಗುಡಿಸಲಿಕ್ಕೆ ಹೋದರು, ಅವರು ಆ ಕಡೆ ಹೋಗುತ್ತಿದ್ದಂತೆ ಫೋನು ಮಾಡಿದೆ, ಬೆಳಿಗ್ಗೆಯಿಂದ ಅಪ್ಪ ಫೋನ್ ಹತ್ರಾನೇ ಇದ್ರೂ ಹಾಗಾಗಿ ಫೋನ್ ಮಾಡಲಿಕ್ಕಾಗಿರಲಿಲ್ಲ, ಹಾಂ! ಒಮ್ಮೆ ಮಾಡಿದೆ, ನಿಮ್ಮ ಅಮ್ಮ ಎತ್ತಿದರು ಮತ್ತೆ ಇಟ್ಬಿಟ್ಟೆ, ನನಗೆ ಭಯ ಆಯ್ತು. ನಿನಗೆ ಗೊತ್ತ ನೆನ್ನೆ ರಾತ್ರಿ ಅಪ್ಪ ಬರೋದು ತಡವಾಗಿತ್ತು, ಚಂಪಾಳಿಗೆ ವಿಪರೀತ ಹೊಟ್ಟೆ ನೋವು ಶುರುವಾಗಿ ಬಿಟ್ಟಿತ್ತು, ನಂಗೆ ಮತ್ತು ಅಮ್ಮನಿಗೆ ಏನು ಮಾಡ ಬೇಕು ಗೊತ್ತೇ ಆಗಲಿಲ್ಲ, ಕೊನೆಗೆ ಒಂಬತ್ತು ಗಂಟೆಗೆ ಚಂಪಾ ಕರು ಹಾಕಿದ್ಳು, ಗಂಡು ಕರು ಕಣೋ, ಅಮ್ಮ ಕೇಳ್ತಿದ್ರು ಏನು ಹೆಸರು ಇಡೋಣ ಅಂತ, ನಾನು ನಿನ್ನ ಹೆಸರು ಹೇಳೋಣ ಅಂದ್ಕೊಂಡೆ. ಇವತ್ತು ಸಂಜೆ ಒಂದು ಮೈನಾ ಹಕ್ಕಿ ಬಂದು, ನಮ್ಮ ಮನೆಯೆದುರಿನ ಗಿಡದಲ್ಲಿ ಕುಳಿತಿತ್ತು. ಜೋಡಿ ಮೈನಾ ನೋಡಿದರೆ ತುಂಬ ಒಳ್ಳೆಯದಂತೆ ಹಾಗಾಗಿ ಇನ್ನೊಂದು ಹುಡುಕುತ್ತಿದ್ದೆ, ಅಷ್ಟರಲ್ಲಿ ಇನ್ನೊಂದು ಬಂದು ಅದರ ಪಕ್ಕದಲ್ಲಿ ಕುಳಿತುಕೊಳ್ತು, ನೀನು ಬಂದು ನನ್ನ ಬಳಿ ನಿಂತು ಕೊಳ್ತೀಯಲ್ಲ ಹಾಗೆ. ನನಗೆ ಅದೆಷ್ಟು ಖುಷಿಯಾಯ್ತು ಗೊತ್ತ ಅವನ್ನು ನೋಡಿ. ಇವತ್ತು ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿದ್ದೆ, ನೀನು ಬೇಗ ಹುಶಾರಾಗಲಿ ಅಂತ ದೇವರಲ್ಲಿ ಕೇಳ್ಕೊಂಡು ಪೂಜೆ ಮಾಡಿಸಿದೆ, ಆದಷ್ಟು ಬೇಗ ನಾನು ನಿನ್ನ ಹೆಂಡತಿಯಾಗುವಂತಾಗಲಿ ಅಂತ ಬೇಡ್ಕೊಂಡೆ. ಆಮೇಲೆ ನಾನು ನಿನ್ನ ಪಕ್ಕದಲ್ಲೇ ಇರಬಹುದಲ್ವಾ, ನಿನ್ನ ನಲಿವಿಗೂ-ನೋವಿಗೂ ಆಸರೆಯಾಗಿ. ನೀನಿಲ್ದೆ ಈ ಹಬ್ಬ ಮಾಡೋದು ತುಂಬ ಬೇಜಾರು ಕಣೋ, ಅಪ್ಪ-ಅಮ್ಮ ಸಿಟ್ಟು ಮಾಡ್ಕೊತಾರೆ ಅಂತ ಇವೆಲ್ಲ ಮಾಡಬೇಕಷ್ಟೇ. ನಮ್ಮ ಮದುವೆಯಾದ ಮೇಲೆ ನೀನು ಬಾಗಿಲಿಗೆ ಮಾವಿನ ತೋರಣ ಕಟ್ಟು, ನಾನು ಬಾಗಿಲು ಸಾರಿಸಿ ರಂಗೋಲಿ ಹಾಕ್ತೀನಿ, ನಾನು ದೇವರ ಸಾಮಗ್ರಿ ತೊಳೆಯುತ್ತೇನೆ, ನೀನು ದೇವರ ಕೋಣೆ ಸ್ವಚ್ಚ ಮಾಡು, ಪೂಜೆ ಒಟ್ಟಿಗೆ ಮಾಡೋಣ. ಅಡುಗೆಗೆ ಸಹಾಯ ಮಾಡ್ಬೇಕು, ನಾನು ಏನು ಸಿಹಿ ಮಾಡಿದ್ರು ಸುಮ್ಮನೆ ತಿನ್ನಬೇಕು, ಅಣಕಿಸುವಂತಿಲ್ಲ. ನನಗೆ ನಿನ್ನಷ್ಟು ಚೆನ್ನಾಗಿ ಅಡುಗೆ ಮಾಡಲಿಕ್ಕೆ ಬರಲ್ಲ ಕಣೋ. ಸರಿ ಸರಿ ಹಿತ್ತಲಲ್ಲಿ ಸದ್ದಾಗುತ್ತಿದೆ, ಅಮ್ಮ ಬಂದರು ಅನ್ಸುತ್ತೆ, ಬಾಗಿಲಿಗೆ ದೀಪ ಇಡಲು ಹೇಳಿದ್ರು, ನಿನ್ನನ್ನು ತುಂಬ ಮಿಸ್ ಮಾಡ್ಕೊಳ್ತಿದೀನಿ ಕಣೋ ಗೂಬೆ, ನನ್ನ ಜೀವ ಹೋಗುವಷ್ಟು. ಸರಿ ಅಮ್ಮ ಬಂದೇ ಬಿಟ್ರು, ನಾಳೆ ಫೋನ್ ಮಾಡ್ತೀನಿ", ಇಷ್ಟು ಹೇಳಿ ನೀನು ಫೋನ್ ಇಟ್ಟಿದ್ದೆ, ನಾನು ಏನು ಮಾತನಾಡದೇ, ಸುಮ್ಮನೆ ನಿನ್ನ ಮಾತುಗಳಿಗೆ ಕಿವಿಯಾಗಿದ್ದೆ ತುಂಬು ಪ್ರೀತಿಯಿಂದ. ನನಗೆಂದು ಕೈಯಲ್ಲಿ ಒಂದು ಲೋಟ ಹಾಲು ಹಿಡಿದು ಬಂದ ಅಮ್ಮ "ನಾನು ಫೋನೆತ್ತಿದರೆ ಅದೇಕೆ ಇಟ್ಟು ಬಿಡುತ್ತಾರೋ ಪುಣ್ಯಾತ್ಮರು" ಅನ್ನುತ್ತಾ ಸ್ವಗತ ಹಾಡಿ ಫೋನನ್ನು ಸ್ವಸ್ಥಾನಕ್ಕೆ ಸೇರಿಸಿದ್ದರು.
ನಾನು ಮಲಗಿದ್ದ ಮಂಚ ಕಿಟಕಿಯ ಸಮೀಪದಲ್ಲೇ ಇದ್ದಿದ್ದರಿಂದ ಹೊರಗೆ ಕಣ್ಣು ಹಾಯಿಸಿದೆ, ಕಿಟಕಿಯ ಹೊರಬಾಗದಲ್ಲಿ ಅಮ್ಮ ಹಚ್ಚಿಟ್ಟಿದ್ದ ದೀಪ ಗಾಳಿಯ ಲಯಕ್ಕೆಂಬಂತೆ ನರ್ತಿಸುತ್ತಾ ಬೆಳಗುತ್ತಿತ್ತು, ಸಣ್ಣ ಚಿಟ್ಟೆಯಂತ ಹುಳುಗಳು ದೀಪವನ್ನು ಅಣಕಿಸಲೆಂಬಂತೆ ಹಾರಿ, ಮುತ್ತಿಡುವ ಭರದಲ್ಲಿ ಸುಟ್ಟು ಧರೆಗೆ ಉರುಳುತ್ತಿದ್ದವು. ನಾನು ನಿನ್ನ ಮಾತುಗಳನ್ನು ನೆನಪಿಸಿಕೊಂಡು ಕಣ್ಣಾಲಿಗಳಲ್ಲಿ ಕಂಡು ಕಾಣದಂತೆ ಕಣ್ಣೀರು ತುಂಬಿ ಕೊಂಡಿದ್ದೆ. ಹುಡುಗಿ ನಿನಗೆ ಗೊತ್ತಿರಲಿಕ್ಕಿಲ್ಲ ಇನ್ನೇನು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ನನ್ನನ್ನು ಸಾಗಿಸುವಾಗ ಅಮ್ಮನಿಗಿಂತ ಹೆಚ್ಚು ನೆನಪಾದವಳು ನೀನು, ನಿನ್ನ ಮುಖ ಒಮ್ಮೆ ನೋಡಬೇಕು ಎಂದು ತೀವ್ರವಾಗಿ ಹಂಬಲಿಸಿದ್ದೆ ನಾನು. ಇದನ್ನೆಲ್ಲಾ ಯೋಚಿಸಿ ಕನ್ನಡಕ ತೆಗೆದಿರಿಸಿ, ಕಣ್ಣು ಒರೆಸಿಕೊಂಡು ಹೊರಗೆ ದಿಟ್ಟಿಸಿದವನಿಗೆ ಕಂಡಿದ್ದು ದೀಪಾಲಂಕಾರದಲ್ಲಿ ಸಿಂಗಾರಗೊಂಡಿದ್ದ ನಮ್ಮ ಬೀದಿ, ಪಟಾಕಿ ಸಿಡಿಸುತ್ತಿದ್ದ ಮಕ್ಕಳು, ಅವರ ಜೊತೆಗೆ ನಲಿಯುತ್ತಿದ್ದ ಹಿರಿಯರು.
ನಮ್ಮ ಮನೆಗೆ ಪಟಾಕಿ ವರ್ಜ್ಯ, ಪಟಾಕಿ ಸಿಡಿಸುವುದು ಪರಿಸರ ಮಾಲಿನ್ಯಕ್ಕೆ ಕಾರಣ ಎನ್ನುತ್ತಿದ್ದ ಅಮ್ಮ, ಕೇವಲ ದೀಪ ಬೆಳಗಿದರೆ ಸಾಕು ಎಂದೇ ನನಗೆ ಬಾಲ್ಯದಿಂದ ಹೇಳುತ್ತಾ ಬಂದಿದ್ದಳು. ಅಮ್ಮ ಕ್ರಾಂತಿಕಾರಿ ಅಲ್ಲ, ಬಹಳ ದೊಡ್ಡ ಪರಿಸರ ಪ್ರೇಮಿಯಂತೆ ಮಾತನಾಡಲು ನಿಲ್ಲುವವಳು ಅಲ್ಲ, ಬೇರೆಯವರಿಗೆ ಅದು ಸರಿಯೆನ್ನಿಸಿದರೆ ಮಾಡಲಿ, ನಾವು ಮಾಡುವುದು ಬೇಡ ಎನ್ನುವ ಕಠೋರ ನಿಲುವಿನವಳು. ಆಕೆ ಬೇರೆಯವರು ತಾನು ಹೇಳಿದಂತೆ ಕೇಳಬೇಕೆಂದು ಎಂದಿಗೂ ನಿರೀಕ್ಷಿಸಿದವಳಲ್ಲ ಮತ್ತು ನಿರೀಕ್ಷಿಸುವುದು ಇಲ್ಲ.
ಆದರೆ ನೀನು ಮನೆಗೆ ಚಿಕ್ಕವಳು, ಹಾಗಾಗಿ ನಿನಗೆ ಒಂದು ಹಿಡಿ ಮುದ್ದು ಜಾಸ್ತಿಯೇ, ನಿನಗೆ ಪಟಾಕಿ ಇಷ್ಟ, ನೀನು ನನಗೆ ಹೇಳ್ತಾ ಇದ್ದಿದ್ದು ಹೀಗೆ ಅಲ್ವ "ಮುಂದೆ ನೀನು ನನಗೆ ಪಟಾಕಿ ತಂದು ಕೊಡು, ನೀನು ಹೊಡೆಯೋದು ಬೇಡ, ಎರಡೇ-ಎರಡು ಪಟಾಕಿ ನಾನು ಹೊಡೆಯುತ್ತೀನಿ, ನಾನು ಧೈರ್ಯವಂತೆ ಕಣೋ, ಲಕ್ಷ್ಮಿ ಪಟಾಕಿಯೆಲ್ಲ ಹೊಡಿತೀನಿ. ನೀನು ಬೇಡ ಅನ್ನಬಾರದು ಆಯ್ತಾ, ಅನ್ನಲ್ಲ ಅಲ್ವ? ಹೇಳು, ಬೇಡ ಅನ್ನಲ್ಲ ಅಲ್ವ? " ಹೀಗೆನ್ನುತ್ತ ದುಂಬಾಲು ಬೀಳುತ್ತಿದ್ದೆ. ನಾನು ಬೇಕೆಂದೇ ನಿನಗೆ ಕಾಡಿಸಿ, ಕೊನೆಗೆ "ಬೇಡ ಅನ್ನಲ್ಲ ಕಣೋ" ಅಂದರೆ, ನೀನು "ಬೇಡ ಅಂದರು ನಾನು ಹೊಡಿತೀನಪ್ಪ" ಎಂದು ನನಗೆ ರೇಗಿಸಿ, ಮತ್ತೆ "ಹೀಗೆಂದೇ ಅಂತ ಬೇಜಾರಾಯ್ತೇನೋ?" ಅಂತ ಕೇಳುತ್ತಿದ್ದೆ, ನಿನ್ನ ಮಾತಿಗೆ ನಾನು ನಗುತ್ತಿದ್ದೆ, ಆಗ ನೀನು ನನ್ನೆದುರು ನಾಚಿ ನಿಲ್ಲುತ್ತಿದ್ದ ಮೌನ ಗೌರಿ.
"ಹೀಗೆ ನೀನಿರದ ಹೊತ್ತಲ್ಲಿ, ನೀನಿದ್ದಾಗಿನ ನಿನ್ನ ನೆನಪುಗಳು
ಬಂದು ಕಾಡುತಿವೆ, ನನ್ನೆದೆಯ ಚುಚ್ಚುತಿವೆ.
ನಾನು ನರಳುತ್ತೇನೆ, ನೋವ ದನಿಗೆ ಕೊರಳಾಗುತ್ತೇನೆ,
ಮತ್ತೆ ನೆನಪ ಪುಟಗಳ ಮಡಿಕೆಗೆ ಮರಳುತ್ತೇನೆ, ಮತ್ತಲ್ಲೇ ಹೊರಳಾಡುತ್ತೇನೆ,
ನಾಲಿಗೆ ಒಣಗುತ್ತದೆ, ಪುಟ ತಿರುವಿ ಹಾಕಲು ಅಲ್ಲಿ ಈಗ ತೇವವು ಇಲ್ಲ"
ಈಗ ನೋಡು ಹುಡುಗಿ, ನಾವಿಬ್ಬರೂ ಒಟ್ಟಾಗಿ ಆಚರಿಸುವ ಯಾವ ದೀಪಾವಳಿಯು ಬರುವುದಿಲ್ಲ ಎಂದು ಯೋಚಿಸಿದಾಗ ನನ್ನ ಆಂತರ್ಯ ನಡುಗುತ್ತದೆ, ದನಿ ಅತೀವವಾಗಿ ಕಂಪಿಸುತ್ತದೆ. ಕಿಟಕಿಯ ಮೊದಲ ಸರಳು ಹಿಡಿದು ನಿಂತವನು, ಸೋತು ಕುಸಿಯುತ್ತೇನೆ, ಕೈ ಕೊನೆಯ ಸರಳನ್ನು ತಲುಪುತ್ತದೆ. ಉರಿಯುತ್ತಿರುವ ಎದುರು ಮನೆಯ ಹಣತೆ ನಕ್ಕಂತಾಗುತ್ತದೆ. ನಾನು ಅದನ್ನು ನೋಡಲಾಗದೆ ಕಣ್ಣು ಮುಚ್ಚುತ್ತೇನೆ, ಮತ್ತೆ ನೀನು ನೆನಪಾಗುತ್ತೀಯ. ಅವಳಿರುವಾಗ ನಾವು ಹೇಗೆ ಇರಲು ಸಾಧ್ಯ ಎಂದು ಮುನಿದು ಕಂಬನಿಗಳು ಧರಣಿ ಮಾಡಲೆಂಬಂತೆ ಮೆರವಣಿಗೆ ಹೊರಡುತ್ತವೆ. ನಾನು ಅವನ್ನು ತಡೆಯ ಹೊರಡುತ್ತೇನೆ, ಅವುಗಳ ಹರಿವು ಇನ್ನು ಜೋರಾಗುತ್ತದೆ, ನಾನು ತಡೆಯಲೆತ್ನಿಸಿದಷ್ಟು.
ಬರುವ ದೀಪಾವಳಿ ನಿನಗೆ ದಾಂಪತ್ಯದ ಹೊಸ ಹಬ್ಬವಾಗಬಹುದು, ಅಲ್ಲಿ ನಮ್ಮ ಪ್ರೀತಿಯ ನೆನಪಿಗೊಂದು ಹಣತೆ ಹಚ್ಚಿ, ಅದಕ್ಕೆ ನಾನು-ನೀನು ಎಂದಷ್ಟೇ ಹೆಸರಿಡು. ದೀಪ ಬೆಳಗಿ ಬಿಡಲಿ, ನೆನಪು ಕರಗುವ ತನಕ, ಜೊತೆಗೆ ನನ್ನ ಈ ಉಸಿರು ನಿಲ್ಲುವ ತನಕ.