ಶುಕ್ರವಾರ, ನವೆಂಬರ್ 21, 2008

ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು....

ಅಂತರಾಳ - ೨

ಅದು
ಏಪ್ರಿಲ್ ತಿಂಗಳ ಕೊನೆಯ ವಾರ, ಮಲೆನಾಡಾದರು ಸಹ ಹೊರಗಡೆ ಸುಡು ಬಿಸಿಲು, ಇದರ ಜೊತೆ ಮನೆಯೊಳಗೆ ಜ್ವರದಿಂದ ನನ್ನ ಮೈ ವಿಪರೀತ ಸುಡುತ್ತಿತ್ತು, ಬೆಳಿಗ್ಗೆಯಿಂದ ಮನೆಯಲ್ಲಿ ಒಬ್ಬಂಟಿ, ನಾರು ಮತ್ತು ಹತ್ತಿ ಮಿಶ್ರಿತ ಹಾಸಿಗೆಯ ಮೇಲೆ ಚಡಪಡಿಸಿ, ಮಗ್ಗುಲು ಬದಲಿಸಿ ಮಲಗಿ, ಒಂದು ಪಾರ್ಶ್ವ ಪೂರ್ತಿ ಜಡ್ಡು ಹಿಡಿದಂತಾಗಿತ್ತು. ಪರೀಕ್ಷೆಗೆ ಕೆಲವೇ ದಿನಗಳು ಉಳಿದಿದ್ದು, ಒಂದೆಡೆ ಆತಂಕ ಇನ್ನೊಂದೆಡೆ ಪೂರ್ಣ ನಿತ್ರಾಣವಾಗಿಸಿದ್ದ ಜ್ವರ, ಬರಲಿದ್ದ ಎಲೆಕ್ಟ್ರಾನಿಕ್ಸ್ ಪರೀಕ್ಷೆಗೆ ಅಲ್ಲೇ ಪಕ್ಕದಲ್ಲಿದ್ದ ಪುಸ್ತಕ ಕೈಗೆತ್ತಿಕೊಂಡು ಒಂದೊಂದು ಸಾಲನ್ನು ಕಾದಂಬರಿ ಓದುವಂತೆ ಶ್ರದ್ದೆಯಿಂದ ಪಠಿಸತೊಡಗಿದೆ. ಅದಾವ ಮಾಯೆಯೋಳು ನಿದ್ರೆಗೆ ಶರಣಾಗಿದ್ದೆನೊ ಅರಿವೇ ಆಗಿರಲಿಲ್ಲ.

ಇದ್ದಕ್ಕಿದ್ದಂತೆ ಒಂದು ಕೈ ನನ್ನ ತಲೆ ನೇವರಿಸಿ, ಹಣೆಯ ಮೇಲೆ ಸ್ಥಾಪಿತವಾಗಿತ್ತು. ಬೆಚ್ಚನೆಯ ಸ್ಪರ್ಶದ ಹಿತಾನುಭವ ನನ್ನನ್ನು ನಿದ್ರಾ ಲೋಕದಿಂದ ಆಚೆಗೆ ಕರೆ ತಂದು ನಿಲ್ಲಿಸಿತ್ತು. ಕಣ್ತೆರೆದು ನೋಡಿದರೆ ಹಿತ ಸ್ಪರ್ಶ ನೀಡಿದಾಕೆಯ ಕಣ್ಣಲ್ಲಿ ಅಶ್ರುಧಾರೆ. ಗದ್ಗತಿತ ಮೆಲು ದನಿಯಲ್ಲಿ "ಏನೋ ಜ್ವರ ಇನ್ನು ಕಡಿಮೆಯಾಗಿಲ್ಲ, ನಾಡಿದ್ದೇ ಪರೀಕ್ಷೆ ನಿಂಗೆ" ಅಂತಷ್ಟೇ ಕೇಳಿ ನೇರ ಒಳ ಮನೆಗೆ ನಡೆದಳಾಕೆ. ನನ್ನ ಮನದಲ್ಲಿ 'ಒಂದು ಕ್ಷಣ ಈಕೆ ನನ್ನ ಜೊತೆ ಕುಳಿತು ಮಾತನಾಡುವುದ ಬಿಟ್ಟು, ಏನು ಅಷ್ಟೊಂದು ಆತುರದ ಕೆಲಸ ಮಾಡಲಿಕ್ಕೆ ಮನೆಯೊಳಗೆ ನಡೆದಳು' ಎಂಬ ಅಸಹನೆಯ ಅಲೆ.

ನನ್ನ ಮನಸ್ಸು ತಡೆಯಲೇ ಇಲ್ಲ, ಎರಡು ಬಾರಿ ಜೋರಾಗಿ ಕರೆದೆ, ಆಕೆ ಬರಲಿಲ್ಲ, ಕೂಗಿ ಕಿರುಚಾಡುವುದು ನಮ್ಮ ಜಾಯಮನವಲ್ಲವಾದುದರಿಂದ ನಿಧಾನವಾಗಿ ಹಾಸಿಗೆಯಿಂದ ಎದ್ದು ಗೋಡೆಯ ಆಸರೆ ಬಳಸಿ ಮನೆಯೊಳಗೆ ಹೆಜ್ಜೆ ಹಾಕಿದೆ, ಅಡುಗೆ ಮನೆಯತ್ತ ದೃಷ್ಟಿ ಹಾಯಿಸಿದೆ, ಅಲ್ಲೂ ಇಲ್ಲದ ಕಾರಣ, ಮನೆಯ ಹಿಂಭಾಗಕ್ಕೆ ನಡೆದೆ, ಆಕೆ ಅಲ್ಲೂ ಇಲ್ಲಾ!. ನನ್ನ ಸಹನೆಯ ಅಣೆಕಟ್ಟಿಗೆ ಕೋಪ ಪ್ರವಾಹದ ತರಂಗಗಳು ಒಂದೇ ಸಮನೆ ತಾಕುತ್ತಿದ್ದವು. ಎಲ್ಲಿ ಹೋದಳೀಕೆ?

ದೇವರ ಮನೆಯಲ್ಲಿ ಆರತಿ ತಟ್ಟೆಯ ಸದ್ದಾಯ್ತು ಎಂದು ಸೀದಾ ಅಲ್ಲಿಗೆ ಧಾವಿಸಿದೆ, ಆಕೆ ಜೋರಾಗಿ ಬಿಕ್ಕುತ್ತಿದ್ದಳು, ಕಣ್ಣು ಕೆಂಪಾಗಿತ್ತು. "ಏನಾಯ್ತು" ಎಂಬ ನನ್ನ ಪ್ರಶ್ನೆಗೆ ಆಕೆಯ ಒಂದೇ ಉತ್ತರ "ನಿಂಗೆನಾದ್ರು ಆದ್ರೆ ನಂಗೆ ಯಾರಿದ್ದಾರೋ?". ಅದು ನನ್ನ ಪ್ರಶ್ನೆಗೆ ಉತ್ತರವೋ ಇಲ್ಲಾ ಆಕೆಯ ಮರು ಪ್ರಶ್ನೆಯೊ ಅರಿವಾಗಲಿಲ್ಲ ನನಗೆ. ಅದು ನನ್ನ ತಾಯಿ, ಆಕೆಯ ದುಃಖದ ಕಟ್ಟೆಯೊಡೆದಿತ್ತು, "ನಿನ್ನೆದುರು ಅತ್ತರೆ ನೀನು ಬೇಜಾರುಮಾಡ್ಕೊತೀಯ, ಹಾಗಾಗಿ ಒಳಗೆ ಬಂದೆ ಕಣಪ್ಪ", ನಾನು ನಿರುತ್ತರನಾಗಿ ನಿಂತಿದ್ದೆ, ಸಮಾಧಾನಮಾಡುವ ಶಕ್ತಿಯು ನನ್ನಲ್ಲಿ ಉಳಿದಿರಲಿಲ್ಲ. ಸುಮ್ಮನೆ ನಿಂತಲ್ಲಿಯೇ ಕುಸಿದು ಕುಳಿತೆ. ಓಡಿ ಬಂದು ಮತ್ತೆ ಆಸರೆಯಾದಳು, ನನ್ನಲ್ಲಿ ಮತ್ತೆ ಧೈರ್ಯ ತುಂಬಲು ಶುರುವಿಟ್ಟಳು.

ಇದು ನಡೆದು ಸರಿ ಸುಮಾರು - ವರ್ಷ ಕಳೆದಿದೆ, ಈಗಲೂ ದಿನ ನನ್ನ ಸ್ಮೃತಿ ಪಟಲದಿಂದ ಮಾಸಿಲ್ಲ, ಎಂದೆಂದಿಗೂ ಮಾಸುವುದಿಲ್ಲ. ಪ್ರತಿ ಬಾರಿ ಸೋತಾಗಲು, ಹೀಗೆ ಹಿತ ನುಡಿಗಳಿಂದ ಮೃದು ಮಾತಿನಿಂದ ನನ್ನನ್ನು ತಿದ್ದಿ ನಡೆಸಿದವಳು ಮತ್ತು ನಡೆಸುವವಳು, ಗೆದ್ದಾಗ ಪ್ರೋತ್ಸಾಹಿಸಿ, ಬೆನ್ನು ತಟ್ಟಿ ಮುಂದಿನ ಗುರಿಗೆ ಣಿಗೊಳಿಸುವವಳು. ಬದುಕ ಎಲ್ಲ ಮಜಲುಗಳನ್ನು ತುಂಬ ಹತ್ತಿರದಿಂದ ಪರಿಚಯಿಸಿದವಳು ನನ್ನ ಅಮ್ಮ.

ಬಾರಿ ದೀಪಾವಳಿ ಹಬ್ಬ ಮುಗಿಸಿ, ಬೆಂಗಳೂರಿಗೆ ವಾಪಸು ಹೊರಟು ನಿಂತಾಗ ಮತ್ತೆ ಆಕೆಯ ಕಣ್ಣಾಲಿಗಳಲ್ಲಿ ದುಃಖ ಮಡುಗಟ್ಟಿತ್ತು, ಅದನ್ನು ಒಳಗೊಳಗೇ ನುಂಗಿ ನನ್ನೆಡೆಗೊಂದು ನಗು ಬೀರಿ, "ತಲುಪಿದ ಕೂಡಲೇ ಫೋನ್ ಮಾಡು" ಎಂದು ನುಡಿದು ನೇರ ಮನೆಯೊಳಗೆ ಧಾವಿಸಿದಳು. ನನ್ನ ಬಾಲ್ಯದ ಎಳೆ ಎಳೆಗಳನ್ನೂ ನೆನಪಿನಂಗಳಕ್ಕೆ ತಂದಿಕ್ಕಿ ವಾಸ್ತವ ಕದವಿಕ್ಕಿಕೊಂಡಿತು. ಬಸ್ಸಿನಲ್ಲಿ ಕುಳಿತ ನಾನು ಕಣ್ಣೀರಾಗಿದ್ದೆ ಅಮ್ಮನ ನೆನಪಿನಲ್ಲಿ, ಬಸ್ಸು ಬೆಂಗಳೂರಿನ ಕಡೆಗೆ ಹೊರಟಿತ್ತು, ಅನಿವಾರ್ಯ ಪಯಣ ಮುಂದುವರಿದಿತ್ತು.

ಹೃದಯಾಂತರಾಳದಿಂದ ಉದ್ಗರಿಸಿದೆ ಅಮ್ಮಾ ನಿನಗೆ ನನ್ನ ಸಾಷ್ಟಾಂಗ ನಮನ.....

ಬುಧವಾರ, ನವೆಂಬರ್ 12, 2008

ಮನದಂಗಳದಲ್ಲಿ ಒಂದು ಆಟ... ಭಾವನೆಗಳ ಹೊಯ್ದಾಟ

ಅಂತರಾಳ - ೧

ಲಗೋರಿ
.....
ಎಲ್ಲಾ ಏಟುಗಳಿಂದ ತಪ್ಪಿಸಿಕೊಂಡು, ಚೆಂಡಿನ ಹೊಡೆತಕ್ಕೆ ಚದುರಿ ಹಾರಿದ ಎಲ್ಲ ಕಲ್ಲುಗಳನ್ನು ಅಷ್ಟೇ ಶ್ರದ್ದೆ ಮತ್ತು ಉತ್ಸಾಹದಿಂದ ಹೆಕ್ಕಿ, ಅವಷ್ಟೂ ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಗೆದ್ದೇ ಅಂತ ಕೂಗಿ ಹೇಳಿದ ದನಿ. ಇನ್ನೇನು ಆ ದನಿ ಮಾರ್ದನಿಯಾಗಬೇಕು... ಆದರೆ ಜೊತೆಯಾಗಿ ಆಡಿ, ಪ್ರತಿ ಹೆಜ್ಜೆ ಹೆಜ್ಜೆಗೂ ಜೊತೆಗಿದ್ದವರು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿದು ವಿದಾಯ ಹೇಳಿ ಬಿಡುತ್ತಾರೆ...

ಮನಸ್ಸು ವಿಪರೀತವಾಗಿ ಹೆದರಿ, ನರಳಿ ಬಿಡುತ್ತೆ. ಮುಂದೆ ಏನು? ಅವರಿಲ್ಲದೆ ಈ ಆಟ ಹೇಗೆ? ಇನ್ನು ಮತ್ತೆ ಗೆದ್ದು ಲಗೋರಿ ಎಂದು ಕೂಗುವುದೆಂದು... ಅಸಲಿಗೆ ಗೆಲ್ತೀನ??? ನೂರು ಪ್ರಶ್ನೆಗಳ ಹಾದಿಗೆ... ಮೂರು ದೂರದ ಉತ್ತರ...

ಇದನ್ನ ಓದಿದವರ ಮನಸ್ಸಿನ್ನಲ್ಲಿ ಒಂದು ಪ್ರೇಮ ವೈಫಲ್ಯದ ಸ್ನಿಗ್ಧ ಚಿತ್ರಣ ಕಂಡು ಬರಬಹುದು. ಆದರೆ ಇಲ್ಲಿ ನಾನು ಬರೆಯುತ್ತಿರೋದು ಹಠಾತ್ತನೆ ನಮ್ಮಿಂದ, ನಮ್ಮ ಬದುಕಿಂದ ದೂರವಾಗಿ ಹೋಗುವವರ ಬಗ್ಗೆ, ಕೇವಲ ಒಬ್ಬ ಪ್ರೇಮಿ, ಒಬ್ಬಳು ಪ್ರೇಯಸಿಯ ಬಗ್ಗೆಯಲ್ಲ. ಇಂದೆಲ್ಲಾ ಜೊತೆಯಾಗಿದ್ದು ನಾಳೆಯೆಂಬ ಹೊಸ ದಿನದ ಹೊಸ್ತಿಲಿನಲ್ಲಿ ಅನಿಶ್ಚಿತತೆಯ ಸುಳಿಗೆ ಸಿಲುಕಿ ಮರೆಯಾಗುವ ಗೆಳೆಯರ ಬಗ್ಗೆ, ಬಾಲ್ಯದಿಂದಲೂ ತುಂಬ ಅಕ್ಕರೆಯಿಂದ ನೀನು ಹೀಗಿರಬೇಕು-ಹಾಗಿರಬೇಕು ಎಂದು ಹುರಿದುಂಬಿಸಿ, ಪ್ರೋತ್ಸಾಹಿಸಿ, ನಮ್ಮನ್ನು ಸಲಹಿ ಇನ್ನೇನು ನಾನು ಚೆನ್ನಗಿರ್ತೀನಿ ಅಂತ ನಿರ್ಧರಿಸುವ ಹೊತ್ತಿಗೆ ಸರಿಯಾಗಿ ತಮಗೆ ತಡವಾಯ್ತು, ಎಂಬಂತೆ ಬದುಕ ಪಯಣವ ಮೊಟಕುಗೊಳಿಸಿ ಹೊರಟು ನಡೆವ ನಮ್ಮ ಹಿರಿಯ ಜೀವಗಳ ಬಗ್ಗೆ. ಹೀಗೆ ನಮ್ಮ ಪ್ರೀತಿಪಾತ್ರರು ನಮ್ಮನ್ನು ಅಗಲಿ ಹೋದಾಗ ಮನಸ್ಸೆಲ್ಲ ಅನಾಥ, ಬದುಕು ಒಂಟಿ ಒಂಟಿ, ನಡೆವ ದಾರಿಯಲ್ಲಿ ಒಬ್ಬಂಟಿ ಪಯಣಿಗರು ನಾವಾಗ. ಬಿಟ್ಟು ಹೋದವರನ್ನು ಮತ್ತೆ ಕೂಗಿ ಕೇಳಬೇಕೆನಿಸುತ್ತದೆ "ಮತ್ತೆ ಹಿಂತಿರುಗಿ ಬರಲಾರಿರ ನೀವೆಂದು".

ಮತ್ತೆ ಬದುಕು ನಡೆಯಲೇ ಬೇಕು, ನಮ್ಮವರ ಕನಸುಗಳ ಶಿಖರದ ಕಾಮಗಾರಿ ಮುಂದುವರಿಯಲೇ ಬೇಕು. ಕೊನೆಗೆ ನಮಗೋಸ್ಕರವಾಗಿಯಾದರು ಈ ಪಯಣ ಮುಂದುವರಿಯಬೇಕು (ಏಕೆಂದರೆ ಇಡಿ ಬದುಕ ಅಸ್ತಿತ್ವ ನಿಲ್ಲುವುದು ನಮ್ಮ ಸ್ವಾರ್ಥದ ಮೇಲೆ). ಹೊರಟು ನಡೆದವರ ದಾರಿಗೆ ಹೂಮಳೆಗರೆದು, ನಮಸ್ಕರಿಸಿ, ಇಷ್ಟು ದಿನ ಬದುಕ ಬದುಕಾಗಿದ್ದದ್ದಕ್ಕೆ ವಂದಿಸಿ ಬದುಕಿನೆಡೆಗೆ ಮುಖ ಮಾಡಿ ಹೊರಟ ಹಾಗೆ. ನಿಜಕ್ಕೂ ಈ ಬದುಕು ಎಂತೆಂತ ಅನುಭವಗಳನ್ನು ಕಣ್ಣೆದುರಿಗೆ ತಂದು ಕೆಡವಿ, ಅನುಭವಿಸು ಎಂದು ಹೇಳಿ ಎದ್ದು ನಡೆಯುತ್ತೆ. ಅದೆಲ್ಲವನ್ನೂ ಅತ್ಯಂತ ಮುತುವರ್ಜಿಯಿಂದ ಆರಿಸಿಕೊಂಡು, ನಮ್ಮ ಕನಸಿನ ಜೊತೆ ಪೋಣಿಸಿಕೊಂಡು ಮುದ್ದಾದ ಹಾರವನ್ನಾಗಿಸಿ ಕೊಂಡು, ಅದನ್ನ ಧರಿಸಿ ಮುನ್ನಡೆಯ ಬೇಕಾದವರು ನಾವು. ಆ ಹಾರ ಎಷ್ಟು ದಿನ, ಎಲ್ಲಿಯವರೆಗೆ ನಮ್ಮ ಬಳಿ ಉಳಿಯುತ್ತೆ ಎನ್ನುವುದು ನಮ್ಮ ಮನೋಬಲದ ಮೇಲೆ ನಿರ್ಧರಿತ. ಉಳಿಸಿಕೊಂಡರೆ ಕೊನೆ ತನಕ, ಕಳೆದುಕೊಂಡರೆ ಜೊತೆ ಇದ್ದ ತನಕ, ಆದರೆ ಈ ಪಯಣದ ಹಾದಿಯಲ್ಲಿ ಅದನ್ನ ಕಾಪಾಡಿ, ಆದರಿಸಿ, ಹಾಗು ರಕ್ಷಿಸಿಕೊಂಡ ತೃಪ್ತಿಯಿರಬೇಕು, ಕೊನೆಗೊಂದು ದಿನ ಅನಿವಾರ್ಯವಾಗಿ ಕಳೆದುಕೊಂಡರೆ ಅದರಲ್ಲಿ ನನ್ನ ತಪ್ಪಿಲ್ಲ ಎನ್ನುವಷ್ಟು ಮನಸ್ಸು ನಿರ್ಮಲವಾಗಿರಬೇಕು, ಇಲ್ಲದಿದ್ದರೆ ಮನಸ್ಸು ಮೈಲಿಗೆ ಎನ್ನಿಸಿಕೊಳ್ಳುತ್ತದೆ, ಹಾಗಾಗಬಾರದಷ್ಟೇ.

ಪ್ರೀತಿಯೆಂದಿಗು ಸಾಯುವುದಿಲ್ಲ, ಬದುಕ ಕಾರಣಗಳಿಗೆ ಸಿಕ್ಕಿ ನಲುಗಿ ಮರೆಯಾಗಬಹುದು, ಆದರೆ ಎಂದೆಂದಿಗೂ ಮರೆಯಲಾಗುವುದಿಲ್ಲ. ಕಳೆದುಕೊಂಡಿದ್ದು ಮತ್ತೆ ಸಿಗಬಹುದು, ಸಿಕ್ಕಿದ್ದು ಮತ್ತೆ ಕಳೆದುಹೋಗಬಹುದು. ಮನಸ್ಸು ಗಟ್ಟಿಯಿರಲಿ, ಆದರೆ ಕಲ್ಲಾಗದಿರಲಿ.

ಮತ್ತೆ ಕನಸುಗಳೆಂಬ ಕಲ್ಲುಗಳನ್ನು ಎದುರಾಳಿಯ ಚೆಂಡಿನ ಹೊಡೆತಕ್ಕೆ ಸಿಲುಕದೆ ಹೆಕ್ಕಿ, ಜೋಡಿಸಿ ಮತ್ತೆ ಜೋರಾಗಿ ಲಗೋರಿ ಎಂದು ಕೂಗಿ, ವಿಜಯ ದುಂಧುಬಿ ಮೊಳಗಿಸ ಬೇಕಾಗಿದೆ, ಸರಿ ನಾನು ಹೊರಟೆ ಆಟಕ್ಕೆ ತಡವಾಯ್ತು... ಮತ್ತೆ ಸಿಕ್ತೀನಿ ಆಟ ಗೆದ್ದ ನಂತರ.

ಸೋಮವಾರ, ನವೆಂಬರ್ 10, 2008

ನೆನಪುಗಳು...

ಅಬ್ಬಾ ನೆನಪುಗಳೇ ನೀವದೆಷ್ಟೊಂದು ಕ್ರೂರ !!!
ಘನ ಘೋರನಿಮ್ಮ ಪರಿಪಾಠ...

ಅಬ್ಬರಿಸುವಿರಿ ಏಕಾಂತದೊಳು ಬಂದು...
ಚೀತ್ಕರಿಸುವಿರಿ ಮನದ ನೆಮ್ಮದಿಯೆಲ್ಲವ ಕೊಂದು...
ಹೃದಯದಾಳದೊಳು ನಿಮ್ಮ ನಳಿಕೆಯನು ತೂರಿ...
ಇನಿತಿನಿತು ಎನುವಷ್ಟು ರಕ್ತವನು ಜಿನುಗಿಸಿ, ಮನವನ್ನು ಹಿಂಡುವಿರಿ...

ಕಳೆದ ದಿನಗಳಿಗೆಲ್ಲಾ ಇಡಲಾರೆವೂ ಲೆಕ್ಕ, ಎದೆಯಾಳದಲ್ಲೇ ಮಡುಗಟ್ಟಿದೆ ಬಿಕ್ಕ...
ನೆನಪುಗಳೇ ನೀವಂದು ತಂದ ಎಲ್ಲ ಕನಸುಗಳನ್ನ ಕೈಗೂಡಿಸಿ ಕೊಳ್ಳಬೇಕಿದೆ...
ಹೆದರಿಸದಿರಿ ನೀವು ಏನೇನೋ ನೆನಪಿಸಿ... ಕದಡದಿರಿ ಮನದ ತಿಳಿಯನ್ನು...

ನನ್ನನ್ನು ದಯವಿಟ್ಟು ಬಿಟ್ಟುಬಿಡಿ ಏಕಾಂತದಲ್ಲಿಂದು !!!
ಯಾರಂದರೋ ಕಾಣೆ ನೀವೊಂದು ವರವೆಂದು ???
ನೆನಪುಗಳೇ ನೆನಪಿರಲಿ ನಾನಿನ್ನು ಸೋತಿಲ್ಲ, ನಿಮ್ಮ ಸಹವಾಸವು ಬೇಕಿಲ್ಲ !!!
ನೀವಿಲ್ಲಿ ನಿಲ್ಲದಿರಿ, ಬಿಟ್ಟೆನ್ನ ಹೊರಟುಬಿಡಿ, ಮತ್ತೆಂದು ಬಾರದಿರಿ...

ಶುಕ್ರವಾರ, ನವೆಂಬರ್ 7, 2008

ವಿಪರ್ಯಾಸ

ನಿನ್ನನ್ನು ನೋಡುತ್ತಾ ಇದ್ದರೆ ಸರಾಗವಾಗಿ ಕಳೆಯುತ್ತಿತ್ತು
ತರಗತಿಯ ಆ ವೇಳೆಗಳು....
ಇದರಿಂದ ವರ್ಷಗಳು ಉರುಳಿದರು
ಖಾಲಿಯೇ ಇರುತ್ತಿತ್ತು ನನ್ನ ನೋಟ್ಸಿನ ಹಾಳೆಗಳು...

ಆತ್ಮ ಸ್ತೈರ್ಯ

ಮರೆಯಲೆಲ್ಲೋ ಪ್ರೀತಿ ನಿಂತು ನನ್ನ ನೋಡಿ ನಕ್ಕ ಹಾಗಿದೆ...
ಎದೆಯಲಿಂದು ನೆನಪು ತಾನು ಬೇಗುದಿಗೆ ಬಿದ್ದಿದೆ !!!
ಬಿಟ್ಟು ಹೋದವರ ನೆನಪು ಮನವನೆಲ್ಲಾ ಕಾಡಿದೆ...
ಸುರಿವ ಹನಿಯು ಮತ್ತೆ ತಾನು ಮೋಡ ಸೇರಿದಂತಿದೆ !!!

ಬದುಕೇ ಹೀಗೆ ಏನೋ ಎಂದು... ಒಂದೂ ಅರ್ಥವಾಗದು !!!
ಎಷ್ಟೇ ಬಿಡಿಸೆ ಬದುಕ ಒಗಟು ಮತ್ತೆ ಜಟಿಲಗೊಳ್ವುದು...
ಭಯವೂ ನನಗೆ! ಅಚ್ಚರಿಯು ಕೂಡ ಹೀಗೇಕೆ ಬದುಕು ನಡೆವುದು ???

ನಾಳೆ ಕನಸು ಪೂರ್ಣ ಕಮರಿ ಒಂಟಿಯಾಗಿ ನಿಂತಿಹೆ !!!
ಸೋತು ಕೂಡ ಗೆಲ್ಲ ಬಲ್ಲ ಶಕ್ತಿಯುಂಟು ಮನಸ್ಸಿಗೆ...
ಏಳು ನನ್ನ ಮುದ್ದು ಮನಸ್ಸೇ ಗುರಿಯ ತಲುಪ ಬೇಕಿದೆ... ???
ಎಂದೂ ನೀನು ಒಂಟಿಯಲ್ಲ ನಿನ್ನ ಜೊತೆಗೆ ನಾನಿಹೆ... !!!