ಶನಿವಾರ, ಜನವರಿ 10, 2009

ಬರಗಾಲದಲ್ಲೊಂದು ಅಧಿಕ ಮಾಸ

ಅಂತರಾಳ - ೬

ಹೊಸ ವರ್ಷ ೨೦೦೯ನ್ನು ಸ್ವಾಗತಿಸಲು ಒಂದು ಕವನ ಬರೆಯಬೇಕೆಂಬ ಹಂಬಲ ನನ್ನದಾಗಿತ್ತು, ಹಾಗಾಗಿ ೩೧ ಡಿಸೆಂಬರ್ ಬೆಳಿಗ್ಗೆ :೩೦ ಸುಮಾರಿಗೆ ಎದ್ದು, ನನ್ನ ದಿನಚರಿ ಪುಸ್ತಕವನ್ನು ಕೈಯಲ್ಲಿ ಹಿಡಿದು ಕುಳಿತೆ, ಇದಕ್ಕೆಂದೇ ನೆನಪಿಗೆ ಬಂದಾಗ ಒಂದೊಂದು ಸಾಲನ್ನು ಬರೆದಿಟ್ಟಿದ್ದೆ, ಈಗ ಸಂಕಲನ ಮಾಡುವ ಸಮಯವಾಗಿತ್ತು. ಸುಮಾರು :೪೫ ವೇಳೆಗೆ ನನಗೆ ನನ್ನ ಕೈನೆಟಿಕ್ ನಲ್ಲಿ ಇಟ್ಟಿದ್ದ ನನ್ನ ಟಿಪ್ಪಣಿ ಪುಸ್ತಕ ನೆನಪಾಗಿ ಗಾಡಿ ಕೀಲಿ ಹುಡುಕ ತೊಡಗಿದೆ, ಬಹಳಷ್ಟು ಹೊತ್ತು ಹುಡುಕಿದರು ಸಿಗಲಿಲ್ಲ, ಕೊನೆಗೆ ನನಗೆ ನೆನಾಪಗಿದ್ದೆಂದರೆ ನನ್ನ ಕಾಲೇಜು ದಿನಗಳ ಮಿತ್ರ, ನನ್ನ ರೂಮ್ ಮೇಟ್, ಮತ್ತೀಗ ಸಹೋದ್ಯೋಗಿಯು ಆಗಿರುವ ಗೆಳೆಯ ನವೀನನ ಬಳಿ ರಾತ್ರಿ ಗಾಡಿ ಒಳಗೆ ನಿಲ್ಲಿಸುವಂತೆ ಹೇಳಿದ್ದೆ, ಅವನು ಸ್ವಲ್ಪ ಮೈಮರೆವಿನವನಾದುದರಿಂದ ಕೀಲಿ ಗಾಡಿಯಲ್ಲೇ ಬಿಟ್ಟು ಬಂದಿರಬಹುದೆಂದು, ಗಾಡಿ ನಿಲ್ಲಿಸುವ ಸ್ಥಳಕ್ಕೆ ತೆರಳಿದೆ. ಒಂದು ಕ್ಷಣ ನನ್ನ ಹೃದಯ ತನ್ನ ಕೆಲಸವನ್ನು ಮರೆತಂತೆ ಸುಮ್ಮನಾಗಿತ್ತು, ಎದೆಯೊಳಗೆ ಒಂದೆಳೆಯ ನಡುಕ, ಏಕೆಂದರೆ ಎಂದಿನ ಜಾಗದಲ್ಲಿ ನನ್ನ ಗಾಡಿ ಇಲ್ಲ. ಅತ್ತಿತ್ತ ನೋಡಿದರೂ ಗಾಡಿಯ ಸುಳಿವೇ ಇಲ್ಲ, ದಿಕ್ಕೇ ತೋಚದಂತಾಗಿ ನಿಂತವನಿಗೆ ನೆನಪಾಗಿದ್ದೇನೆಂದರೆ, ಹಿಂದಿನ ದಿನ ಸಂಜೆ ಕಛೇರಿಯಿಂದ ಹಿಂತಿರುಗಿ ಬಂದು ಗಾಡಿಯಿಂದ ಇಳಿವ ವೇಳೆಗೆ ನನಗೆ ಊರಿಂದ ಫೋನ್ ಕರೆ ಬಂದಿತ್ತು, ಹಾಗಾಗಿ ಗಾಡಿಯಿಂದ ಕೀ ತೆಗೆದವನು, ಮತ್ತೆ ಅದಕ್ಕೆ ವಾಪಸ್ಸು ಹಾಕಿ ನಿಲ್ಲಿಸಿ, ಅದಾಗಲೇ ಫೋನ್ ಕರೆಯಲ್ಲಿ ಮಗ್ನನಾಗಿದ್ದ ನವೀನನಿಗೆ ಗಾಡಿ ಒಳಗೆ ನಿಲ್ಲಿಸುವಂತೆಯೂ, ಸ್ವಲ್ಪ ಹೊತ್ತಿನಲ್ಲಿ ನಾನು ವಾಪಸ್ಸು ಬರುವುದಾಗಿಯೂ ಹೇಳಿದ್ದೆ.

ನಾವು ಒಟ್ಟು ನಾಲ್ವರು ಒಂದೇ ಮನೆಯಲ್ಲಿದ್ದೇವೆ, ನಾವೆಲ್ಲ ಕಾಲೇಜು ದಿನಗಳ ಗೆಳೆಯರು, ಈಗ ಎಲ್ಲರು ವೃತ್ತಿಪರರು. ಎಲ್ಲರಿಗೂ ಗೊತ್ತಿರುವಂತೆ ನಮ್ಮ ನವೀನನ ಸಮಸ್ಯೆ ಎಂದರೆ ಯಾರು ಏನೇ ಹೇಳುವ ಮುನ್ನ ಗೊತ್ತು ಅಂತಲೋ, ಇಲ್ಲ ಆಯ್ತು ಅಂತಲೋ ಅನ್ನುವುದು, ಆದರೆ ಎಂದಿಗೂ ಎದುರಿನವರು ಹೇಳಿದ್ದೇನು ಎಂಬುದನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ನನಗೆ ಅದು ಸ್ವಲ್ಪ ಮುಖ್ಯವಾದ ಫೋನ್ ಕರೆಯಾದುದರಿಂದ, ನಾನು ಹೇಳಿದ್ದು ಇವನು ಗಮನಿಸಿದ ಎಂದೇ ಭಾವಿಸಿದ್ದೆ. ನಮ್ಮ ಮನೆಗೆ ಎರಡು ಬಾಗಿಲಿರುವುದರಿಂದ ಇನ್ನೊಂದು ಬಾಗಿಲಿಂದ ನಾನು ಒಳಗೆ ಬಂದು ಸೇರಿದೆ. ನನ್ನ ದುರಾದೃಷ್ಟಕ್ಕೆ ಅವನು ಗಾಡಿ ಒಳಗೆ ನಿಲ್ಲಿಸಿರಲಿಲ್ಲ.

ನನ್ನ ಇನ್ನುಳಿದ ಇಬ್ಬರು ಗೆಳೆಯರು ಬಂದ ನಂತರ ಊಟ ಮಾಡಿ ಚೆನ್ನಾಗಿ ಹರಟಿ ಮಲಗುವ ಮುನ್ನ, ಇನ್ನೊಬ್ಬ ಗೆಳೆಯನಾದ ಪ್ರಸನ್ನ ಗೋಪಾಲ ಸ್ವಭಾವತಃ ಸೋಮಾರಿಯಾಗಿರುವದರಿಂದ ಅವನ ಕಾಲೆಳೆಯುತ್ತಾ ಇದ್ದ ನಮ್ಮ ನವೀನ, ರಾತ್ರಿಯೊಮ್ಮೆ ನಾಯಿ ಕೂಗಿದಾಗ ಎದ್ದು ಪ್ರಸನ್ನನನ್ನು ಎಬ್ಬಿಸಿ ನಾಯಿ ಕೂಗುತ್ತಿದೆ ಈಗ ಎದ್ದು ಹೋದರೆ ನಿನ್ನ ಗಾಡಿ(ಬಜಾಜ್ ಡಿಸ್ಕವರ್-ಕೆಂಪು ಬಣ್ಣ) ಕದಿಯಲು ಬಂದಿರಬಹುದಾದ ಕಳ್ಳ ನಿನ್ನ ಕೈಗೆ ಸಿಗುತ್ತಾನೆ ಎಂದು ಕಿಚಾಯಿಸಿ ಮಲಗಿದ್ದ, ಇಷ್ಟೆಲ್ಲಾ ಮಾತನಾಡಿದರು ಗೆಳೆಯ ಮಹಾಶಯನಿಗೆ ನನ್ನ ಗಾಡಿ ಹೊರಗೆ ಬಿಟ್ಟಿರುವುದು ನೆನಪೇ ಇರಲಿಲ್ಲ.

ಬೆಳಿಗ್ಗೆ ಬೇಗ ಎದ್ದ ನನಗೆ ೨೦೦೮ರ ಕೊನೆಯ ದಿನ ಇದೊಂದು ಆಘಾತಕಾರಿ ಘಟನೆ ಕಾದಿತ್ತು, ಇಷ್ಟೆಲ್ಲಾ ನಡೆದು, ನನ್ನ ಗಾಡಿ ಕಾಣುತ್ತಿಲ್ಲ ಎಂದು ನನ್ನ ಗೆಳೆಯರ ಬಳಿ ಹೇಳಿದರೆ, ಮೂವರು ಹೊದಿಕೆಯ ಒಳಗಿಂದಲೇ, ನಿನಗೆ ನಿದ್ರೆ ಸರಿಯಾಗಿಲ್ಲ ಅನ್ಸುತ್ತೆ, ಏನೇನೋ ಗೀಚುತ್ತಿಯಲ್ಲ ಹಾಗಾಗಿ ನಿನಗೊಂದು ರೀತಿಯ ಭ್ರಮೆ, ನಿನ್ನ ಗಾಡಿಯನ್ನು ಕಳ್ಳ ಕದ್ದಿದ್ದರೆ ನಿಜಕ್ಕೂ ಅದು ಅವನಿಗಾದ ಅನ್ಯಾಯ, ಇದನ್ನು ನಾವು ಖಂಡಿಸುತ್ತೇವೆ ಎಂದೆಲ್ಲಾ ತರಹೇವಾರಿ ಉತ್ತರ ನೀಡಿದರು. ನನ್ನ ಅವಸ್ಥೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟವೆಂಬಂತಾಗಿತ್ತು. ಅವಸ್ಥೆಯಲ್ಲಿ ನನಗೆ ನೆನಪಾಗಿದ್ದು ಪೊಲೀಸರು, ನಾನು ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿ ಬರುತ್ತೇನೆ ಎಂದಾಗ ನನ್ನ ಗೆಳೆಯರಿಗೆ ಪೂರ್ಣವಾಗಿ ಎಚ್ಚರವಾಗಿತ್ತು. ಆದರು ನಮ್ಮ ನವೀನ ತನಗೇನು ಗೊತ್ತಿಲ್ಲವೆಂಬಂತೆ ಅಮಾಯಕನಂತೆ ಪೆಚ್ಚು ಮೋರೆ ಹಾಕಿಕೊಂಡು ಕುಳಿತಿದ್ದ, ಒಂದೆಡೆ ಗಾಡಿ ಇಲ್ಲದ ನನ್ನ ಸಂಕಟ, ಇನ್ನೊಂದೆಡೆ "ನಂಗೆ ಗೊತ್ತಾಗ್ಲಿಲ್ಲ ಮಾರಾಯ" ಅಂತ ರಾಮನಾಮ ಜಪಿಸಿದಂತೆ ಸರಿ ಸುಮಾರು ನೂರೈವತ್ತು ಸಾರಿ ಹೇಳುತ್ತಿದ್ದ ನವೀನ.

ಗೆಳೆಯ ಪ್ರಸನ್ನನ ಗಾಡಿಯೇರಿ ನೇರವಾಗಿ ಪೋಲಿಸ್ ಠಾಣೆಗೆ ಹೋದರೆ, ಠಾಣೆಯ ಬಾಗಿಲಿನ ಎದುರಲ್ಲಿ ರಾಜ ಗಾಂಭೀರ್ಯದಲ್ಲಿ ನನ್ನ ಕೈನೆಟಿಕ್ ಪೊಲೀಸರ ಅತಿಥಿಯಂತೆ ನಿಂತಿತ್ತು, ಅದನ್ನು ನೋಡಿದ ನನಗೆ ಹೋದ ಜೀವ ಬಂದ ಅನುಭವ. ರಾತ್ರಿ ಕೀ ಸಮೇತ ಹೊರಗೆ ನಿಂತಿದ್ದ ಗಾಡಿಯನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದರು. ನನ್ನ ಗಾಡಿಯ ಮೂಲ ದಾಖಲೆಗಳು ಊರಿನಲ್ಲಿತ್ತು, ವಿಮೆ ಅವಧಿ ನವೆಂಬರಿನಲ್ಲಿಯೇ ಮುಗಿದು ಹೋಗಿತ್ತು. ನಮ್ಮ ಮುಂದಿದ್ದ ದೊಡ್ಡ ಸವಾಲೆಂದರೆ ಪೊಲೀಸಪ್ಪನಿಗೆ ಸಮಜಾಯಿಷಿ ನೀಡಿ, ನಮ್ಮನ್ನು ಸಮರ್ಥಿಸಿಕೊಂಡು ಗಾಡಿ ಪಡೆದುಕೊಳ್ಳುವುದು. ಎಲ್ಲವನ್ನು ಪರೀಕ್ಷಿಸಿದ ಪೋಲೀಸಪ್ಪ ಹುಸಿ ಮುನಿಸು ತೋರುತ್ತ ಬಿಡಲಾಗುವುದಿಲ್ಲ ಕನಿಷ್ಟವೆಂದರೆ ಮೂರು ಸಾವಿರ ದಂಡ ತೆರಬೇಕು ಎಂದ, ಗೆಳೆಯನ ಗಾಡಿ ತುಸು ದೂರದಲ್ಲಿ ನಿಲ್ಲಿಸಿದ್ದುದರಿಂದ ನಾನು ಕಾಲೇಜು ವಿದ್ಯಾರ್ಥಿ ಎಂದು ಕಥೆ ಹೇಳಿ ಒಪ್ಪಿಸಿ, ಇನ್ನೇನು ಹೊರಡುವುದರಲ್ಲಿದ್ದೆ.

ಆಗ ನನ್ನ ಮೂರನೇ ಗೆಳೆಯ ಶರತ್ ಪ್ರವೇಶವಾಯಿತು, ಇವನ ಮೂಲ ಸ್ವಭಾವವೆಂದರೆ ಸಮಸ್ಯೆ ಏನೇ ಇರಲಿ ಅದರ ಆಳ ತಿಳಿವ ಮುನ್ನ ನಾನು ಬಗೆಹರಿಸಿ ಬಿಡುವೆ ಎಂದು ಕಣ್ಮುಚ್ಚಿ ಮುನ್ನುಗ್ಗುವುದು, ಅಕಸ್ಮಾತ್ ಸೋತರೆ ನಾನು ಇದನ್ನು ಹೀಗೆ ಎಂದು ಕೊಂಡಿರಲಿಲ್ಲ ಕಣೋ ಎಂದು ಸಬೂಬು ಹೇಳಿ ನುಣುಚಿಕೊಳ್ಳುವುದು, ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ ಎಂಬಂತಹವನು. ಪೊಲೀಸಪ್ಪನಿಗೆ ಒಪ್ಪಿಸಿ ಸಾಧನೆ ಮಾಡಿದ್ದೇವೆ ಎಂಬಂತೆ ನಿಂತವರೆದುರು ತನ್ನ ಬಜಾಜ್ ಡಿಸ್ಕವರ್ - ನೀಲಿ ಬಣ್ಣದ ಗಾಡಿ ತಂದು ಧುತ್ತನೆ ನಿಲ್ಲಿಸಿ, ಪೊಲೀಸಪ್ಪನಿಗೆ ಉದ್ದೇಶಿಸಿ "ನೀವು ಬಿಡಲ್ಲ ಅಂದರೆ ತೊಂದರೆ ಇಲ್ಲ ನಾವು ಎಲ್ಲಾ ಮೂಲ ದಾಖಲೆಗಳನ್ನು ತಂದು ತೋರಿಸಿ ತೆಗೆದುಕೊಂಡು ಹೋಗುತ್ತೀವಿ" ಎಂದು ಒಂದೇ ಉಸಿರಿಗೆ ಹೇಳಿ, ಸಾಧನೆ ಮಾಡಿದೆ ಎಂಬಂತೆ ನಮ್ಮೆಡೆಗೆ ಖುಷಿಯ ನಗು ಬೀರಿದ, ನನಗೆ ಬಿಸಿ ತುಪ್ಪ ನುಂಗಿದ ಅನುಭವವಾಗಿತ್ತು, ಸುಮಾರು ಒಂದು ಘಂಟೆಯಿಂದ ಪೊಲೀಸಪ್ಪನಿಗೆ ತರಹೇವಾರಿ ಕಥೆ ಹೇಳಿ ಒಪ್ಪಿಸಿ, ಕೊಡಲು ದುಡ್ಡಿಲ್ಲ ಎಂಬಂತೆ ಹೇಳಿದ್ದ ನಮ್ಮೆಡೆಗೆ ಪೋಲೀಸಪ್ಪ ತನ್ನ ವಕ್ರ ದೃಷ್ಟಿ ಬೀರಿದ್ದ, ಕೊಡಲು ದುಡ್ಡೇ ಇಲ್ಲ ಎಂದಿದ್ದ ನಾನು ನನ್ನ ಗೆಳೆಯರೆಡೆಗೆ ನೋಡಿ ಮತ್ತೆ ಮೂರು ಗಾಡಿ ನೋಡಿ, ಕನಿಷ್ಠ ಸಾವಿರ ರೂಪಾಯಿ ದಂಡ ಕಟ್ಟಲೆ ಬೇಕೆಂದು ದೂರು ದಾಖಲಿಸಿದ.

ಒಂದೆಡೆ ಗಾಡಿ ಒಳಗೆ ನಿಲ್ಲಿಸು ಎಂದರೆ ಹೊರಗೇ ಬಿಟ್ಟ ಒಬ್ಬ ಗೆಳೆಯ, ಎಲ್ಲಾ ಸರಿಯಾಯಿತು ಎಂಬ ಹೊತ್ತಿನಲ್ಲಿ ಬಂದು ಎಲ್ಲಾ ಹಾಳುಗೆಡವಿದ ಇನ್ನೊಬ್ಬ ಗೆಳೆಯ. ೨೦೦೮ ನನ್ನ ಪಾಲಿಗೆ ಬರಗಾಲದಲ್ಲೊಂದು ಅಧಿಕ ಮಾಸ ತಂದಿತ್ತು, ಕೊನೆಗೆ ಸುಮಾರು ಹೊತ್ತು ಪೋಲಿಸ್ ಠಾಣೆಯಲ್ಲಿ ಕಾದು, ದಂಡ ಕಟ್ಟಿ ಗಾಡಿ ಬಿಡಿಸಿಕೊಂಡು ತರುವಾಗ ನನ್ನ ಮೂರು ಮಿತ್ರರ ನೆನಪು ಕಾಡದೇ ಇರಲಿಲ್ಲ.

10 ಕಾಮೆಂಟ್‌ಗಳು:

shivu.k ಹೇಳಿದರು...

ರಾಜೇಶ್,

ಕೊನೆ ದಿನ ನಿಮಗೆ ಹೀಗಾಗಬಾರದಿತ್ತು...ಮತ್ತು ಗಾಡಿ ಪುರಾಣ ಜೊತೆ ನಿಮ್ಮ ಗೆಳೆಯರ ಪುರಾಣವೂ ಚಿನ್ನಾಗಿದೆ. ಇದ್ದುದ್ದನ್ನು ಇದ್ದಾ ಹಾಗೆ ಹೇಳಿಕೊಂಡು ಹೋಗಿದ್ದೀರಿ.....ಮುಂದೆ ಹಾಗೆ ಆಗಾಗದಂತೆ ನೋಡಿಕೊಳ್ಳಿ ಎಂದು ಮಾತ್ರ ಹೇಳಬಲ್ಲೆ......

Ittigecement ಹೇಳಿದರು...

ರಾಜೇಶ್....

ನಿಮಗೆ ಗೆಳೆಯರಿಂದ ತೊಂದರೆ ಆದರೂ...
ನಿಮ್ಮ ಸಮಸ್ಯೆಯಲ್ಲಿ.. ನಿಮ್ಮ ತೊಂದರೆಯಲ್ಲಿ...
ನಿಮ್ಮ ಸಂಗಡ ಅವರಿದ್ದರಲ್ಲ...

ಅದು ಗೆಳೆತನ...

ಈ ವಯಸ್ಸಿನಲ್ಲಿ ಹುಡುಗಾಟಿಕೆ ಸಹಜ...

ಸಮಸ್ಯೆ ಪರಿಹಾರವಾಯಿತಲ್ಲ...
ಅದು ಸಮಾಧಾನ.. ಅಲ್ಲವಾ..?

ಚಂದದ ಲೇಖನ...
ವೈವಿಧ್ಯ ಮಯವಾಗಿರುತ್ತದೆ.. ನಿಮ್ಮ ಬ್ಲೋಗ್...
ಅಭಿನಂದನೆಗಳು....

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಶಿವೂ ಸರ್,
ವರ್ಷದ ಕೊನೆ ದಿನ ಆಗಿದ್ದಕ್ಕೆ ಒಂದು ರೀತಿ ನಿರಾಳ, ಇಲ್ಲವಾಗಿದ್ದಿದ್ದರೆ ವರ್ಷವಿಡಿ ಹೀಗೆ ಏನೋ ಅನ್ನೋ ಭಯ ಕಾಡ್ತಿತ್ತು :). ಧನ್ಯವಾದಗಳು ನಿಮ್ಮ ಹಾರೈಕೆಗೆ ಮತ್ತು ಭೇಟಿ ನೀಡಿದ್ದಕ್ಕೆ.

ಪ್ರಕಾಶ್ ಸರ್,
ನಿಜಕ್ಕೂ ಇದು ವಯೋಸಹಜ ಪ್ರಸಂಗಗಳು, ಪ್ರತಿಯೊಂದರಲ್ಲೂ ಜೊತೆ ಇರುವ ಈ ಗೆಳೆಯರ ಬಗ್ಗೆ ಹೆಮ್ಮೆ ಅನ್ಸುತ್ತೆ, ನಮ್ಮ ರೂಮ್ ನಲ್ಲೂ ಒಂದ್ರೀತಿ ಮಜವಾಗಿರುತ್ತೆ, ಪ್ರತಿ ಮಾತಿಗೂ ತಮಾಷೆ ಮಾಡುವುದು, ರೇಗಿಸುವುದು. ಒಬ್ಬರ ನೋವಿಗೆ ಒಬ್ಬರು ಹೆಗಲು ಕೊಡುವುದು. ಹೇಳಬೇಕೆಂದರೆ ಗೆಳೆತನದ ಪರಾಕಾಷ್ಟೇಯಲ್ಲಿದ್ದೇವೆ :). ಇನ್ನು ಗೆಳೆಯ ನವೀನ ನಾನು ಇಲ್ಲಿ ಬರೆದಿದ್ದು ಓದಿಲ್ಲ, ಓದಿದ ಇಬ್ಬರು ಪ್ರತಿಕ್ರಿಯೆ ಬರೆವ ತರಾತುರಿಯಲ್ಲಿದ್ದಾರೆ, ಈ ಮೂವರು ಒಟ್ಟು ಸೇರಿ ಪ್ರತಿಕ್ರಿಯೆ ಬರೆಯಬೇಕೆಂದು ತೀರ್ಮಾನಿಸಿದಂತಿದೆ. ಕಾದು ನೋಡಬೇಕು.
ನನ್ನ ಬರಹಗಳೆಡಗಿನ ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಋಣಿ.
-ರಾಜೇಶ್ ಮಂಜುನಾಥ್

Ittigecement ಹೇಳಿದರು...

ರಾಜೇಶ್...

ಅಭಿನಂದನೆಗಳು..!!!!!!!

ಇಂದಿನ ಕನ್ನಡ ಪ್ರಭದಲ್ಲಿ "ಬ್ಲೋಗಾಯಣ" ಓದಿರಿ...!

ಮತ್ತೊಮ್ಮೆ ಅಭಿನಂದನೆಗಳು..!!

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರಕಾಶ್ ಸರ್,
ನೀವು ಹೇಳದೆ ಇದ್ದಿದ್ದರೆ ನಂಗೆ ಗೊತ್ತೇ ಆಗ್ತಿರಲಿಲ್ಲ. ಕನ್ನಡ ಪ್ರಭದಲ್ಲಿ ನನ್ನ ಕವನ ಅಂದಾಗ ಪುಳಕಿತಗೊಂಡೆ.
ನಿಮ್ಮ ಅಭಿನಂದನೆಗೆ ಮತ್ತು ಪ್ರೋತ್ಸಾಹಕ್ಕೆ ನಾನು ತುಂಬು ಹೃದಯದ ಅಭಾರಿ.
-ರಾಜೇಶ್ ಮಂಜುನಾಥ್

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ರಾಜೇಶ್ ಅವರೆ...

ನಿಮ್ಮ ಸ್ಕೂಟಿ ಹಿಂದಿನವರ್ಷ ಕಳೆದುಹೋಗಿದ್ದಲ್ಲದೇ ಹೊಸವರ್ಷ ಬರುವುದಕ್ಕೆ ಮುನ್ನವೇ ಸಿಕ್ಕಿದ್ದನ್ನು ಸುಂದರವಾಗಿ ನಿರೂಪಿಸಿದ್ದೀರಿ.
ಒಳ್ಳೆಯ ಸ್ನೇಹಿತರ ಬಗ್ಗೆ ನವಿರಾಗಿ ಹಾಸ್ಯಭರಿತವಾಗಿ ಗೋಳು ತೋಡಿಕೊಂಡಿದ್ದೀರಿ.
ಹೊಸವರ್ಷ ನಿಮ್ಮೆಲ್ಲರಿಗೂ ಇನ್ನಷ್ಟು ಶುಭತರಲಿ. ಸುಂದರ ಸ್ನೇಹ ಹಂದರ ಇನ್ನಷ್ಟು ಸುಂದರವಾಗಿ ಹಬ್ಬಲಿ.

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಶಾಂತಲಾರವರೆ,
ನನ್ನ ಪಿಸುಮಾತಿನ ಮೊಗಸಾಲೆಗೆ ಸ್ವಾಗತ, ಮತ್ತು ನಿಮ್ಮ ಹಾರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು. ತಪ್ಪಿಸದೇ ಆಗಾಗ ಬರ್ತಾ ಇರೀ.
-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

ರಾಜೇಶ್ ಅವರೇ,
ಇದನ್ನು ಓದಿದ ಮೇಲೆ ನಿಮ್ಮ ಬಗ್ಗೆ ಕನಿಕರ ಬಂದಿತು.....ಹೋಗಲಿ renew ಮಾಡಿಸಿಕೊಂಡ್ರಾ ?

ದಿವ್ಯಾ ಮಲ್ಯ ಕಾಮತ್ ಹೇಳಿದರು...

ಲೇಖನಿಯೆಂಬ ಖಡ್ಗ ಇರುವ ನೀವು , ಗೆಳೆಯರ ಗುಣಗಾನ ಮಾಡಿ, ನಿಮ್ಮ ಬ್ಲಾಗಿನಲ್ಲಿ ಅವರ ಮೇಲೆ ಪ್ರಹಾರ ಮಾಡುತ್ತೀರಾ.. ನಿಮ್ಮ ಬಗ್ಗೆ ತಿಳಿಯಲು, ನಾವು ಅವರನ್ನು ಭೇಟಿಯಾಗಬೇಕಷ್ಟೇ! :) ಸುಂದರ ಬರಹ, ಸಂದರ್ಭ ಚಿತ್ರಣ.. ಓದಲು ಆರಂಭ ಮಾಡಿದರೆ ಕೊನೆ ತನಕ ಮುಗಿಸದೆ ಬಿಡಲಾಗದು ! ಅಭಿನಂದನೆಗಳು

kumar ಹೇಳಿದರು...

Hi I like ur profile