ಮಂಗಳವಾರ, ಡಿಸೆಂಬರ್ 23, 2008

ಒಮ್ಮೆ ಹೀಗೂ ಆಗಿತ್ತು!

(ಏನಾದರು ಬರೆಯುತ್ತಿರುತ್ತೇನಾದರು, ಮನದ ಗೆಳೆಯ ಎಲ್ಲವನ್ನು ಸೋಸಿ, ಪ್ರಕಟಿಸಲು ಯೋಗ್ಯವೆಂಬಂತಹ ಒಂದೆರಡು ಬರಹ ಮಾತ್ರ ಎತ್ತಿ ಕೈಗಿಡುತ್ತಾನೆ. ನನ್ನ ಪ್ರೀತಿಯ ಕೆಲವು ಸಹೋದ್ಯೋಗಿಗಳು ಹಾಗು ಗೆಳೆಯರೆಲ್ಲರಿಗೂ ನನ್ನ ಬರಹಗಳೆಂದರೆ ರೋದಿಸುವ ಮಗುವಂತೆ, ಇಲ್ಲವೇ ತತ್ವ ಸಿಧ್ಧಾಂತದ ಇಳಿ ವಯಸ್ಸಿನ ಹಿರಿಯನಂತೆ. ಓದಿ ಇಷ್ಟವಾಗಿ ನಗುವಂತೆ ಏನಾದರು ಬರಿ ಎನ್ನುತ್ತಿದ್ದ ಹಿರಿಯಕ್ಕನಂತಹ ಸಹೋದ್ಯೋಗಿಯೊಬ್ಬರ ಮಾತಿನಂತೆ ಇದನ್ನು ಬರೆಯುತ್ತಿದ್ದೇನೆ, ಘಟನೆಗಳು ನಡೆದ ಕ್ಷಣದಲ್ಲಿ ನನ್ನನ್ನು ತಬ್ಬಿಬ್ಬಾಗಿಸಿ, ಕೊನೆಗೆ ಇನ್ಯಾವಾಗಲೋ ನೆನಪಿಸಿ ಕೊಂಡು ನಗುವಂತೆ ಮಾಡಿವೆ. ಪೀಠಿಕೆ ತುಂಬ ಆಯ್ತು ಅನ್ಸುತ್ತೆ, ಅಂದ ಹಾಗೆ ವಿಷಯಕ್ಕೆ ಬರ್ತೀನಿ, ಓದಿ ನಗು ಬರದಿದ್ರೆ ದಯವಿಟ್ಟು ಬಯ್ಕೊಬೇಡಿ...)

ಘಟನೆ ೧:
ನನ್ನೂರಿನಲ್ಲಿ ನನ್ನ ಆತ್ಮೀಯ ಗೆಳೆಯನೊಬ್ಬ ಛಾಯಾಚಿತ್ರಗ್ರಾಹಕ, ಹಾಗಾಗಿ ನನಗೂ ಸಹ ಚಿತ್ರ ಸೆರೆಹಿಡಿವ ಗೀಳು ಹಿಡಿಸಿದ್ದ. ಅವನು ಒಬ್ಬನೇ ಇದ್ದುದರಿಂದ, ಒಂದೇ ದಿನ ಎರಡು ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ, ಒಂದಕ್ಕೆ ನಾನು-ಇನ್ನೊಂದಕ್ಕೆ ಆತ ಹೋಗುತ್ತಿದ್ದೆವು. ಅದು ೨೦೦೩ರ ಜೂನ್ ತಿಂಗಳು, ಮೊದಲೇ ಮಳೆಗಾಲವಾದದ್ದರಿಂದ, ವಿದ್ಯುತ್ ಅಭಾವ ನಮ್ಮ ಕಡೆ ಸರ್ವೇ ಸಾಮಾನ್ಯ. ನಾನು ಗರ್ತಿಕೆರೆಯ ಬಳಿಯ ಇನ್ನೊಂದು ಸಣ್ಣ ಹಳ್ಳಿಗೆ ಹೋಗಬೇಕೆಂದು ತಿಳಿಸಿದ, ನಾನು ವಿವಿಟಾರ್ ೨೮ ಅಗಲ ಕೋನದ ಕ್ಯಾಮೆರ, ಹಾಗು ಒಂದು ನ್ಯಾಷನಲ್ ಫ್ಲಾಶ್, ಹತ್ತು ಫ್ಯುಜಿ ರೋಲಿನ ಒಂದು ಸಣ್ಣ ಗೊಂಚಲು, ಜೊತೆಗೆ ಒಂದಿಪ್ಪತ್ತು ಶೆಲ್ಲಿನದೊಂದು ಸರವನ್ನು ನನ್ನ ಕೈ ಚೀಲಕ್ಕೆ ಸೇರಿಸಿಕೊಂಡು ಹೊರಟೆ.

ಹಳ್ಳಿಮನೆಯಾದದ್ದರಿಂದ ಅವರೆಲ್ಲರಿಗೂ ಕ್ಯಾಮೆರ ಒಂದು ಕೌತುಕವೆ ಸರಿ, ಪ್ರತಿಯೊಬ್ಬರೂ ನಂದೊಂದು ಪೋಟ-ನಂದೊಂದು ಪೋಟ ಎಂದು ಮುಗಿ ಬೀಳುವವರೇ, ಇನ್ನೊಂದು ಕಡೆ ವರ-ಮಹಾಶಯನ ಅಜ್ನಾಪನೆ, ಯಾವುದೇ ಕಾರಣಕ್ಕೂ ಫೋಟೋ ೬೦-೮೦ ದಾಟ ಬಾರದು. ಹಾಗಾಗಿ ಎಲ್ಲರಿಗೂ ಸುಮ್ಮನೆ ಫ್ಲಾಶ್ ಬೆಳಕು ತೋರಿಸಿ, ಖುಷಿ ಪಡಿಸಿದೆ. ಒಬ್ಬರು ಬಂದು ನೀವು ಮಲಗಿ ಎಂದರೆ, ಮಲಗಿದ ಮರು ಕ್ಷಣದಲ್ಲಿ ಇನ್ನೊಬ್ಬರು ಬಂದು ಅಣ್ಣಾ ಫೋಟ ಹೊಡಿಲಿಕ್ಕಿತ್ತು, ಎಳ್ಬೈದ ಎಂದು ಎಬ್ಬಿಸುತ್ತಿದ್ದರು. ಶಾಸ್ತ್ರ ವಿಪರೀತವಾದದ್ದರಿಂದ ರಾತ್ರಿಯಿಡೀ ಅತ್ತ ಫೋಟೋ ತೆಗೆಯಲಿಕ್ಕಾಗದೆ, ಇತ್ತ ಸುಮ್ಮನೆ ಕುಳಿತುಕೊಳ್ಳಲು ಆಗದೆ ಕಳೆದೆ. ಕೊನೆಗೆ ಮಲಗಲು ಭಾರಿ ವ್ಯವಸ್ಥೆ ಮಾಡ್ತೀವಿ, ಚಳಿ ಬಗ್ಗೆ ಹೆದರುವ ಅಗತ್ಯವೇ ಇಲ್ಲ ಅಂದಿದ್ದ ವರನ ಕಡೆಯವರು, ಒಂದು ಈಚಲ ಚಾಪೆ, ಹಾಗು ಹಳೆಯ ಸೀರೆ ತುಂಡೊಂದನ್ನು ಹೊದ್ದು ಕೊಳ್ಳಲು ಕೊಟ್ಟರು, ಮಲೆನಾಡ ಜಡಿ ಮಳೆಯ ರಭಸ ಮತ್ತು ಭರಾಟೆ ಬಲ್ಲವನೇ ಬಲ್ಲ, ರಾತ್ರಿ ನನ್ನ ಪಾಲಿಗೆ ನರಕ ಸದೃಶವಾಗಿತ್ತು.

ಮಾರನೆ ದಿನ ಹಾರಹಾಕುವ, ಹಾಗು ತಾಳಿ ಕಟ್ಟುವ ಪ್ರತಿ ದೃಶ್ಯಾವಳಿಯ ನಡುವೆ ಎಲ್ಲ ಹಳ್ಳಿಗರು ಇಣುಕಿ ಮರೆಯಾಗುತ್ತಿದ್ದರು, ಹೇಗೇಗೋ ಹೆಣಗಾಡಿ ಫೋಟೋ ಸೆರೆ ಹಿಡಿದಿದ್ದೆ. ಕೊನೆಗೂ ಮದುವೆ ಕೊನೆಯ ಹಂತಕ್ಕೆ ಬಂದು ನಿಂತಿತ್ತು, ಎಲ್ಲ ಶಾಸ್ತ್ರ ಮುಗಿಸಿ, ಹೊರಡುವ ಮುನ್ನ, ಹುಡುಗ-ಹುಡುಗಿಯ ವಿಭಿನ್ನ ಭಂಗಿಯ ಚಿತ್ರ ತೆಗೆಯುವುದು ವಾಡಿಕೆ. ನಾನು ಹುಡುಗನ ವಿವಿಧ ಫೋಟೋಗಳನ್ನು, ಹುಡುಗ-ಹುಡುಗಿಯ ಜೋಡಿ ಫೋಟೋಗಳನ್ನು ತೆಗೆದೆ. ನಂತರ ಹುಡುಗಿಯ ಫೋಟೋ ತೆಗೆಯಲು ಅನುವಾದೆ. ಅಲ್ಲಿಯವರೆಗೂ ಇತರರು ಹೇಳುತ್ತಿದ್ದದ್ದನ್ನು ಕೇಳಿದ್ದೆ ಅದೇನೆಂದರೆ ಹುಡುಗ ಹುಡುಗಿಯ ಬಗ್ಗೆ ಸ್ವಲ್ಪ ಜಾಸ್ತಿಯೇ ಎಂಬಷ್ಟು ಪೊಸೆಸ್ಸಿವ್. ಆಕೆಯ ಫೋಟೋ ತೆಗೆಯುವ ಮುನ್ನ ಆತ ಕೇಳಿದ ಇದರ ಅಗತ್ಯ ಇದೆಯಾ ಎಂದು, ನಾನು ಹೌದು ಎಂದಷ್ಟೇ ತಲೆಯಾಡಿಸಿದೆ.

ಮದುಮಗಳಿಗೆ ಮೊಗ್ಗಿನ ಜಡೆ ಫೋಟೋ ತೆಗೆಯ ಬೇಕು, ಸ್ವಲ್ಪ ಕಡೆ ತಿರುಗಿ ನಿಲ್ತೀರ ಎಂದು ಕೇಳಿದೆ. ಆಕೆ ತಿರುಗಿ ನಿಲ್ಲುವಷ್ಟರಲ್ಲಿ, ನಮ್ಮ ವರ-ಮಹಾಶಯ ಮೇಲೆರಗಿ ಬಂದು "ನೀವೇನು ಹಿಂಗೆಲ್ಲ ಪೋಟ ತಗೀತೀರಿ " ಎಂದು ರೇಗಾಡಿದ, ಕೊನೆಗೆ ಮದರಂಗಿ ಕೈ ಫೋಟೋ ತೆಗೆಯಲು ಆಲೋಚಿಸಿ ಮದುಮಗನ ಬಳಿ ಅನುಮತಿ ಕೇಳಿದೆ, ಆತ ಸಾಧ್ಯವೇ ಇಲ್ಲವೆಂಬಂತೆ ಕುಣಿದಾಡಿದ. ನಾನು ಸೇರಿದ್ದ ಜನರಿಗೆ ತಮಾಷೆಯ ವಸ್ತುವಾಗಿ, ನೋಡುಗರ ನಗುವಿಗೆ ಆಹಾರವಾಗಿದ್ದೆ.

ಘಟನೆ ೨:
ಸುಮಾರು ೬ ವರ್ಷದ ಕೆಳಗೆ, ಗೆಳೆಯನ ಅಕ್ಕನ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮವಿತ್ತು. ನಾವು ಮೂರ್ನಾಲ್ಕು ಗೆಳೆಯರು ತುಂಬ ಆತ್ಮೀಯರಾಗಿದ್ದದ್ದರಿಂದ ಎಲ್ಲ ಸಮಯ-ಸಂಧರ್ಭಕ್ಕೂ ಒಬ್ಬರ ಮನೆಗೆ ಒಬ್ಬರು ಹೋಗುವ ಅಭ್ಯಾಸವಿಟ್ಟು ಕೊಂಡಿದ್ದೆವು. ಆ ದಿನ ಸಂಜೆ ಕಾರ್ಯಕ್ರಮವಿತ್ತು, ನಮ್ಮ ಗೆಳೆಯ ಕೆಲಸದೊತ್ತಡದಿಂದೆಂಬಂತೆ ಸಿಕ್ಕ ಒಬ್ಬ ಗೆಳೆಯನ ಬಳಿ ಆಹ್ವಾನ ಕಳಿಸಿದ. ಯಥಾಪ್ರಕಾರ ನಾವು ಸಂಜೆಗೆ ಹಾಜರು. ನಾವು ಬಂದಿದ್ದು ನೋಡಿ ಖುಷಿಯಾದ ಗೆಳೆಯ, ಅವರ ಮನೆಗೆ ಬಂದಿದ್ದ ಎಲ್ಲ ಅತಿಧಿಗಳ ಸಮ್ಮುಖದಲ್ಲಿ ಒಂದೇ ಉಸಿರಿಗೆಂಬಂತೆ ಹೇಳಿದ "ತುಂಬ ಖುಷಿಯಾಯ್ತು ಕಣ್ರೋ, ನಾನೇ ಕರೀ ಬೇಕು ಅಂತ ಅಂದ್ಕೊಂಡೆ, ನೀವ್ಯಾರು ಸಿಕ್ಕಿರಲಿಲ್ಲ, ಕರೀದೆ ಇದ್ರೂ ಬಂದ್ರಲ್ಲ ಅದೇ ಸಂತೋಷ", ಒಂದು ರೀತಿಯಲ್ಲಿ ರೇಶಿಮೆ ಬಟ್ಟೆಯಲ್ಲಿ ಪಾದುಕೆ ಸುತ್ತಿ ಪ್ರೀತಿಯಿಂದೆಂಬಂತೆ ಹೊಡೆದಂತಿತ್ತು, ಅವನು ನಾನೇ ಸ್ವತಃ ಕರಿಬೇಕು ಅಂದ್ಕೊಂಡಿದ್ದೆ ಅನ್ನ ಬೇಕಾಗಿತ್ತು, ಹೀಗೆಂದು ನೆರೆದವರೆಲ್ಲ ಮತ್ತೊಮ್ಮೆ- ಮಗದೊಮ್ಮೆ ಎಂಬಂತೆ ಅಡಿಯಿಂದ-ಮುಡಿವರೆಗೆ ನಮ್ಮ ದರ್ಶನ ಪಡೆದರು, ನಾವು ನಾಚಿ ನೀರಾಗಿದ್ದೆವು.


ಘಟನೆ ೩:
ಮಲೆನಾಡಿನ ಕೆಲವರಿಗೆ ಊಟವಾದ ಮೇಲೆ ವೀಳ್ಯದೆಲೆ ಜಗಿಯುವ ಅಭ್ಯಾಸ, ಮೊನ್ನೆ ಊರಿಗೆ ಹೋಗಿದ್ದಾಗ ನನ್ನ ಸೋದರತ್ತೆ-ಮಾವ, ಅವರ ಮಕ್ಕಳು ಮನೆಗೆ ಬಂದಿದ್ದರು, ನಾವೆಲ್ಲ ವಾರಕ್ಕೊಮ್ಮೆಯಾದರೂ ಒಟ್ಟಾಗಿ ಸೇರುವ ಅಭ್ಯಾಸ ಮೊದಲಿನಿಂದಲೂ ಇದೆ. ಮೊನ್ನೆ ಹಾಗೆ, ಊಟ ಮುಗಿಸಿ ಕುಳಿತಾಗ, ಸೋದರತ್ತೆ ಅವರ ವರ್ಷದ ಮಗನಿಗೆ ಮನೆಯೆದುರು ಬೆಳೆದ ಬಳ್ಳಿಯಿಂದ ವೀಳ್ಯದೆಲೆ ತರಲು ಹೇಳಿದರು. ಅವನು ಒಮ್ಮೆ ಹೋಗಿ, ಒಂದು ಸಣ್ಣ ಎಲೆ ತಂದು ಅವರಮ್ಮನ ಕೈಗಿತ್ತು ಇಷ್ಟೇ ಇರೋದು ಎಂದ. ಅವರಮ್ಮ, ಸರಿಯಾಗಿ ನೋಡಿ ಇನ್ನೊಂದೆರಡು ಕಿತ್ಕೋ ಬಾ ಅಂತ ಕಳಿಸಿದರು, ಮತ್ತೆ ಹೋದವ ಇಲ್ಲ ಎನ್ನುತ್ತಾ ಬಂದ. ಮತ್ತೆ ಜೋರು ಮಾಡಿ ಸರಿಯಾಗಿ ನೋಡಿಕೊಂಡು ಒಂದೆರಡು ಎಲೆ ಕಿತ್ಕೋ ಬಾ ಎಂದಾಗ, ಸಿಟ್ಟಿನಲ್ಲಿ ಹೋದ ನಮ್ಮ ಗುಂಡ ಬಳ್ಳಿಯನ್ನು ಬೇರು ಸಮೇತ ಕಿತ್ತು ತಂದಿದ್ದ, ಎಲೆ ಇಲ್ಲ ಎಂದು ಸಾಬೀತು ಮಾಡಲು, ಎಲೆ ಕೇಳಿದವರೆಲ್ಲ ಸುಸ್ತೋ ಸುಸ್ತು.

ಘಟನೆ ೪:
ನನ್ನ ಸಹೋದರ(ತಮ್ಮ) ವೃತ್ತಿಯಲ್ಲಿ ಪ್ರಖ್ಯಾತ ಫಾರ್ಮಾ ಕಂಪನಿಯೊಂದರ ಔಶಧಿಗಳ ಪ್ರತಿನಿಧಿ, ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯ ನಿರತ, ನಗರದ ಬಹುತೇಕ ವೈದ್ಯರನ್ನು ಭೇಟಿ ಮಾಡಿ ರೋಗಿಗಳು ತುಂಬಾ ಇದ್ದರೆ ಕಾದು, ನಂತರ ವೈದ್ಯರಿಗೆ ಔಶಧಿಗಳ ವಿವರ ನೀಡುತ್ತಾನೆ. ಕೆಲವು ದಿನಗಳ ಹಿಂದೆ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಭಕ್ತಾದಿಗಳು ಕಡಿಮೆಯಿದ್ದದ್ದನ್ನು ಕಂಡು ಚಕಿತಗೊಂಡ ನನ್ನ ಸಹೋದರೋತ್ತಮ ಎಂದಿನಂತೆ ಉದ್ಗರಿಸಿದ್ದ "ಅಯ್ಯೋ! ಏನಿದು ಪೇಶೆಂಟ್ಸೇ ಇಲ್ಲ", ಜೊತೆಯಲ್ಲಿದ್ದವರು ಇವನ ಕಾರ್ಯ ತತ್ಪರತೆ-ತಲ್ಲೀನತೆ ಕಂಡು ಹೌಹಾರಿದ್ದರು.

ಇತ್ತೀಚೆಗೆ ಮದುವೆಯಾದ ಗೆಳೆಯನ ಬಗ್ಗೆ ಮಾತನಾಡುವಾಗ, ನನ್ನ ತಮ್ಮ ಕೇಳಿದ "ಹುಡುಗಿಯದು ಯಾವ ಕಾಂಬಿನೇಶನ್ (ಅವರು ಔಶಧಿಗಳನ್ನು ಗುರುತಿಸುವುಸು ಇದರ ಮೇಲೆಯೇ) ", ಅವನ ಉದ್ದೇಶವಿದ್ದದ್ದು ಆಕೆ ಏನು ಮಾಡುತ್ತಿದ್ದಾಳೆ ಎಂದು ಕೇಳುವುದು. ಅದು ಅರ್ಥವಾಗ ಬೇಕಾದರೆ ನನಗೆ ಸುಸ್ತಾಗಿತ್ತು.

ನಾನು ಎಷ್ಟೋ ಬಾರಿ ಹೊರಗೆ ಹೊರಟಾಗ ಗೆಳೆಯರಿಗೆ ಕೇಳಿದ್ದುಂಟು "ರೂಮ್ shutdown ಮಾಡಿದ್ದೀರ?" ಎಂದು, ನಾನು ವೃತ್ತಿಯಲ್ಲಿ ತಂತ್ರಾಂಶ ಅಭಿಯಂತರ!

11 ಕಾಮೆಂಟ್‌ಗಳು:

Ittigecement ಹೇಳಿದರು...

ರಾಜೇಶ್ ರಾಮನಾಥ್...

ಹೊಟ್ಟೆ ತುಂಬಾ ನಕ್ಕು ಬಿಟ್ಟೆ....
"ಕರೆದು ಕೆರದಲ್ಲಿ ಹೊಡೆದರು" ಈ ಥರಹದ ಅನುಭವ ನನಗೂ ಆಗಿದೆ....!
ತುಂಬಾ ಮಜವಾಗಿತ್ತು...

ನಗಿಸಿದ್ದಕ್ಕೆ
ಧನ್ಯವಾದಗಳು...

Ushasree ಹೇಳಿದರು...

hhaaaaaaaa...good...at last...u tried your hand at making people smile...I was literally controlling my laugh while reading this. Funny....keep it up..

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರೀತಿಯ ಪ್ರಕಾಶ್ ಸರ್,
ನಿಮ್ಮ ಸಿಮೆಂಟು ಮತ್ತು ಮರಳಿನ ಮಧ್ಯೆ ನನ್ನ ಹೆಸರು ರಾಜೇಶ್ ರಾಮನಾಥ್ ಆಗಿದೆ, ನನ್ನ ಪೂರ್ಣ ಹೆಸರು ರಾಜೇಶ್ ಮಂಜುನಾಥ್ :). ಹೆಸರು ಏನಾದರು ಆಗಲಿ, ನೀವು ಬಂದು ಓದಿ ಹೋದರೆ ಸಾಕು.
ನೀವು ನಕ್ಕಿದ್ದಷ್ಟೇ ನನಗೆ ತೃಪ್ತಿ... ಹೀಗೆ ಬಂದು ಹೋಗ್ತಿರಿ.
ಪ್ರೀತಿಯಿಂದ...
-ರಾಜೇಶ್ ಮಂಜುನಾಥ್

ಚಿತ್ರಾ ಸಂತೋಷ್ ಹೇಳಿದರು...

ರಾಜೇಶ್ ಸರ್..ನಾನು ನಗ್ತಾ ಇದ್ದೀನಿ ಹಹಹ(:)..ಕೇಳ್ತಾ ಇದ್ಯಾ?!ಮಜಾ ಇತ್ತು..ಓದಕ್ಕೆ..
-ತುಂಬುಪ್ರೀತಿ,
ಚಿತ್ರಾ

ಅನಾಮಧೇಯ ಹೇಳಿದರು...

ಹಾಸ್ಯ ಲೇಖ(ಪ)ನ ಬೊಂಬಾಟಾಗಿದೆ ಸರ್‍..:)

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಉಷಾ,
ಕೊನೆಗೂ ನಾನು ಯಾರಾದರು ನಗಬಹುದಾದಂತದ್ದು ಬರ್ದಿದೀನಿ ಅನ್ನೋ ಖುಷಿ ಇದೆ, ನೀವು ಹೇಳಿದ ಹಾಗೆ ಕೊನೆಗೂ ಬರೆದಿದ್ದೇನೆ. ನಿಮ್ಮ ಕನ್ನಡದ ಕಡೆಗಿನ ಆಸಕ್ತಿ ಮಾತು ಪ್ರೀತಿಗೆ ನಾನು ಆಭಾರಿ.

ಚಿತ್ರ,
ನಾನು ಕೆ.ಇ.ಬಿ transformer ಸಿಡಿದಿದ್ದು ಅಂತ ಅಂದ್ಕೊಂಡೆ, ಅದು ನೀವು ನಕ್ಕಿದ್ದ ಮಾರಾಯ್ರೆ. ಹೆದ್ರಿ ಕಂಗಾಲು ನಾನು.
ನೀವು ಓದಿ ಖುಷಿ ಪಟ್ಟಿದ್ದರೆ, ನನ್ನ ಬರಹ ನಿಮ್ಮ ಮುಖದಲ್ಲಿ ನಗು ತರಿಸಿದ್ದರೆ, ನನ್ನಷ್ಟು ಪುಣ್ಯವಂತ ಯಾರು ಇಲ್ಲ, ಏಕೆಂದರೆ ಇದನ್ನು ಬರೆದ ನಂತರ ನಾನೇ ಒಮ್ಮೆ ಓದಿದೆ, ನೀರಸ ಎನಿಸಿ ಅಳಿಸಿ ಹಾಕುವ ಯೋಚನೆ ಮಾಡಿ, ಕೊನೆಗೆ ಇರಲಿ ಎಂಬಂತೆ ಬಿಟ್ಟೆ. ತುಂಬಾ ತುಂಬಾ ಧನ್ಯವಾದಗಳು ಭೇಟಿ ಕೊಟ್ಟಿದ್ದಕ್ಕೆ.
ಕೊನೆಯದಾಗಿ ಒಂದು ಮಾತು ದಯವಿಟ್ಟು ಸರ್ ಅನ್ಬೇಡಿ, ಪ್ರೀತಿಯಿರಲಿ.

ರಂಜಿತ್,
ಧನ್ಯವಾದಗಳು, ಇದು ನನ್ನ ಒಂದು ಸಣ್ಣ ಪ್ರಯತ್ನ ಅಷ್ಟೇ, ನಿಮ್ಮ ಬರಹಗಳ ಮುಂದೆ ನನ್ನವೆಲ್ಲ ಬೋರು-ಬೋರು.
-ರಾಜೇಶ್ ಮಂಜುನಾಥ್

Ittigecement ಹೇಳಿದರು...

ರಾಜೇಶ್ ಮಂಜುನಾಥ್...

ಹೆಸರು ತಪ್ಪಾಗಿ ಉಚ್ಛರಿಸಿದ್ದಕ್ಕಾಗಿ ಕ್ಷಮೆ ಇರಲಿ...
ಓದಿ ಮಸ್ತ್ ಮಜಾ ಮಾಡಿದ್ದೇನೆ..
ಮತ್ತೊಮ್ಮೆ ಧನ್ಯವಾದಗಳು...

shivu.k ಹೇಳಿದರು...

ರಾಜೇಶ್,
ಮದುವೆ ಮನೆಯ ಅನುಭವ ಅದು ನನ್ನದೂ ಕೂಡ. ನಾನು ಮದುವೆ ಫೋಟೋ ತೆಗೆಯಲು ಹೋಗುವವನಾದ್ದರಿಂದ ಇದಕ್ಕಿಂತಲೂ ಕೆಟ್ಟ ಅನುಭವಗಳು ಆಗಿವೆ. ನಿಮ್ಮ ಕಾಮೆಂಟ್ ಬಾಕ್ಸಿನಲ್ಲಿ ಬರೆದಿರುವವರು ನಗುತ್ತಿದ್ದಾರೆ ! ಅದರೆ ನನಗೆ ನಗುಬರಲಿಲ್ಲ. ಕಷ್ಟ ಅನುಭವಿಸಿದವರಿಗೆ ಹೇಗೆ ನಗು ಬರಲು ಸಾಧ್ಯ !
ಲೇಖನ ಚೆನ್ನಾಗಿದೆ. ಚೆನ್ನಾಗಿ ಬರೆಯುತ್ತೀರಿ....

Pramod ಹೇಳಿದರು...

ಚೆನ್ನಾಗಿದೆ :)

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರೀತಿಯ ಪ್ರಮೋದ್,
ಧನ್ಯವಾದಗಳು ನನ್ನ ಬ್ಲಾಗ್ ಅನುಸರಿಸುತ್ತಿರುವುದಕ್ಕೆ, ಮತ್ತು ಇಲ್ಲಿ ಬಂದು ಹೋಗಿದ್ದಕ್ಕೆ. ಆಗಾಗ ಬಂದು ಹೋಗಿ.
ಪ್ರೀತಿಯಿರಲಿ,
ರಾಜೇಶ್ ಮಂಜುನಾಥ್

Veena DhanuGowda ಹೇಳಿದರು...

Hi Rajesh,

ಘಟನೆ ೩:ii kathe chennagithu :)
nagisidake thnks :)