ಸೋಮವಾರ, ಡಿಸೆಂಬರ್ 22, 2008

ನೆನ್ನೆ-ನಾಳೆಗಳೆಂಬ ಎರಡು ದಿಗಂತಗಳ ನಡುವೆ...

ಅಂತರಾಳ - ೫

ಭಾನುವಾರದ
ಇಳಿ ರಾತ್ರಿಯಲಿ ಎಫ್. ಎಂ ಆಕಾಶವಾಣಿ ತಣ್ಣಗೆ ಹಳೆಯ ಕನ್ನಡ ಹಾಡುಗಳನ್ನು ಒಂದರ-ಮೇಲೊಂದರಂತೆ ಪುಂಖಾನುಪುಂಖವಾಗಿ ಪ್ರಸಾರ ಮಾಡುತ್ತಿತ್ತು. ಎಲ್ಲವು ಬಹುತೇಕ ೧೯೬೦-೧೯೮೦ ನಡುವಿನ ಅತಿ-ಮಧುರ ಕನ್ನಡ ಚಿತ್ರ ಗೀತೆಗಳು, ಪ್ರತಿ ಸಾಲನ್ನು ಮೌನವಾಗಿ ಆಹ್ಲಾದಿಸುತ್ತ ಕುಳಿತವನಿಗೆ ಸಾಲುಗಳು ತೀವ್ರವಾಗಿ ಕಾಡಲಾರಂಬಿಸಿದವು...
"ಒಂದೆ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೆ ಏತಕೋ!"
(ಗೀತೆ : ಯುಗ ಯುಗಾದಿ ಕಳೆದರೂ, ಚಿತ್ರ : ಕುಲವಧು, ಬಿಡುಗಡೆಯಾದ ವರ್ಷ : ೧೯೬೩)
ಅಲ್ಲಿಂದ ಮುಂದೆ ಗೆಳೆಯನೊಡನೆ ಅಂತರಂಗದ ವಾಕ್-ಕದನಕ್ಕಿಳಿದೆ. ನೆನ್ನೆ ಇತಿಹಾಸದ ಪುಟಗಳಲ್ಲಿ ವಿರಾಜಮಾನವಾಗಿದೆ, ನಾಳೆ ಅನಿಶ್ಚಿತತೆಯ ಹೊಸ್ತಿಲನ್ನು ದಾಟಿ ಇನ್ನು ಬರಬೇಕಿದೆ, ಇಂದು ನಮ್ಮ ಕೈಯಲ್ಲಿದೆ. ಆದರೆ ನಾವು ನೆನ್ನೆಯೆಂಬ ಭೂತ ಹಾಗು ನಾಳೆಯೆಂಬ ಭವಿಷ್ಯದಲ್ಲಿ ಬದುಕಿದ್ದೇವೆ, ಹಾಗು ಬದುಕಲು ಹವಣಿಸುತ್ತಿದ್ದೇವೆ. ನಮಗೆ ವರ್ತಮಾನದ ಇವತ್ತು ಎಂಬುದು ವರ್ಜ್ಯ, ಅದರೆಡೆಗೆ ಅದೆಂತಹುದೋ ನಿರಾಸಕ್ತಿ ಹಾಗು ಬೇಸರ. ನಾನು ೧-೨ ನೇ ತರಗತಿ ಓದುವಾಗ ಅಜ್ಜಿಯ ಮನೆಗೆ ಅಪರೂಪಕ್ಕೆ ಹೋದಾಗ, ಅಜ್ಜಿಯ ಮಗ್ಗುಲಿನಲ್ಲಿ ಮಲಗಿ ಇನ್ನೇನು ನಿದ್ರಾ ಲೋಕಕ್ಕೆ ಜಾರುವ ಮುನ್ನ ಅಜ್ಜಿಯನ್ನು ಕೇಳುತ್ತಿದ್ದೆ "ಅಜ್ಜಿ ನಾಳೆ ಏನು ತಿಂಡಿ?", ಅದಕ್ಕೆ ಅಜ್ಜಿಯದು ಸದಾ ಒಂದೇ ಉತ್ತರ "ಮಗಾ ನಾಳೆ ಕತೆ ನಾರಾಯಣ ಬಲ್ಲ" (ನನ್ನ ದೂರದೂರಿನಲ್ಲಿದ್ದ ಒಬ್ಬ ಚಿಕ್ಕಪ್ಪನ ಹೆಸರು ನಾರಾಯಣ ಆಗಿದ್ದರಿಂದ, ಬಹಳ ದಿನಗಳವರೆಗೆ ಅಜ್ಜಿ ಏಕೆ ಚಿಕ್ಕಪ್ಪನಿಗೆ ಗೊತ್ತು ಅಂತಾರೆ ಎಂಬುದು ನನ್ನಲ್ಲಿನ ಯಕ್ಷ ಪ್ರಶ್ನೆಯಾಗಿತ್ತು, ಅಜ್ಜಿ ಮಾಡುವ ತಿಂಡಿಗೂ, ಚಿಕ್ಕಪ್ಪನಿಗೋ ಏನು ಸಂಬಂಧ ಎಂಬುದು ನನಗೆ ಗೋಜಲಿನಂತಾಗಿತ್ತು. ಕೊನೆಗೊಮ್ಮೆ ನನಗೆ ಗೊತ್ತಾಗಿದ್ದು ನಾರಾಯಣ ಅಂದರೆ ಶ್ರೀ ವಿಷ್ಣು ಸ್ವರೂಪಿ ಶ್ರೀಮಾನ್ ನಾರಾಯಣ ಸ್ವಾಮಿ). ನನ್ನಜ್ಜಿ ವಾಸ್ತವ ಪ್ರಿಯೆ, ಆಕೆಗೆ ನಾಳೆಯ ಬಗ್ಗೆ ಉತ್ಸಾಹವಿದೆಯೇ ಹೊರತು ಅತೀವ ಕುತೂಹಲವಿಲ್ಲ, ಆಕೆ ಇವತ್ತನ್ನು ಬದುಕಿದ್ದಾಳೆ ಮತ್ತು ಬದುಕುತ್ತಾಳೆ.

ನಾವು ನೆನ್ನೆ ನಡೆದದ್ದಕ್ಕೆ ವಿಷಾದಿಸಿ, ರೋದಿಸುತ್ತೇವೆ. ನೆನ್ನೆ ಸೋತ ಸೋಲಿಗೆ ಇಲ್ಲಾ ಗೆದ್ದ ಗೆಲುವಿಗೆ ಕಾರಣ ಹುಡುಕುವುದು ತಪ್ಪಲ್ಲ, ಅದಕ್ಕೆ ವಿಶ್ಲೇಷಣೆಯ ಅಗತ್ಯ ಖಂಡಿತ ಇದೆ. ಆದರೆ ನೆನ್ನೆ ಸೋಲಿನಲ್ಲಿ ಮೂಲೆ ಸೇರುವುದೋ ಇಲ್ಲಾ ನೆನ್ನೆ ಗೆಲುವಿನಲ್ಲಿ ಮೈಮರೆವುದೋ ಆದಲ್ಲಿ, ಇವತ್ತು ಕೈ ಜಾರುತ್ತದೆ, ಕಾಲ ಯಾರನ್ನೂ ಕಾಯುವುದಿಲ್ಲ. ನೆನ್ನೆಯ ವಿಚಾರ ಮಾತನಾಡುತ್ತ ಇಂದಿನ ದಿನ ಕಳೆದರೆ, ಇಂದಿನ ಬಗ್ಗೆ ಮಾತನಾಡಲು ನಾಳೆಗೆ ಏನು ಉಳಿದಿರುವುದಿಲ್ಲ, ನಿಷ್ಪ್ರಯೋಜಕ ದಿನದ ಗುಲಾಮರಾಗುತ್ತೇವೆ. ನಮ್ಮಲ್ಲದೆಷ್ಟೋ ಜನ ಇಂದು ಹೊಟ್ಟೆ-ಬಟ್ಟೆ ಕಟ್ಟಿ ಕಾಣದ ನಾಳೆಯ ಬದುಕಿಗೆ ಕನಸು ಕಟ್ಟುತ್ತೇವೆ, ಮತ್ತು ಇದೇ ಪ್ರಯತ್ನದಲ್ಲಿ ಇವತ್ತನ್ನು ಹೊಸಕಿ ಹಾಕಿರುತ್ತೇವೆ, ನೆಮ್ಮದಿ ಕಳೆದುಕೊಂಡಿರುತ್ತೇವೆ, ಮತ್ತು ಬದುಕು ಹೀಗಾಗಿ ಯಾಂತ್ರಿಕ ಎಂದೆನಿಸುತ್ತದೆ. ನಮ್ಮ ಬದುಕು ಯಾಂತ್ರಿಕವಾಗಿದೆ ಎನ್ನುವ ನಾವು, ಎಂದಿಗೂ ಇದರ ಬಗ್ಗೆ ಚಿಂತಿಸಲಾರೆವು, ನಾವೆಲ್ಲ ಕಾರ್ಯ ನಿರತರು ನಾಳೆ ಕಟ್ಟಲು.

ನಾಳೆಯ ಬಗ್ಗೆ ಅದ್ಭುತವಾದ ಯೋಜನೆಗಳಿರಲಿ, ಆದರೆ ನಾಳೆ ಬರುವವರೆಗೆ ತಾಳ್ಮೆಯಿಂದ ಇವತ್ತನ್ನು ಪೂರ್ತಿಯಾಗಿ ಬದುಕೋಣ. ವಾಸ್ತವವಾಗಿ ನೆನ್ನೆಯಲ್ಲಿ ನಾವು ಇಲ್ಲವೇ ಇಲ್ಲಾ, ಜೊತೆಗೆ ನಾಳೆಯನ್ನು ನೋಡುವುದೇ ಇಲ್ಲ. ಆದರು ಈ ನೆನ್ನೆ-ನಾಳೆಯೆಂಬ ಮಾಯಾಜಿಂಕೆಯನ್ನು ಬೆನ್ನಟ್ಟಿ ಓಡುತ್ತಿದ್ದೇವೆ. ಶಾಲಾ ದಿನಗಳಲ್ಲೂ ಹೀಗೆ, ಪರೀಕ್ಷೆ ಹಿಂದಿನ ದಿನ ಒಂದು ಹಠಾತ್ ತೀರ್ಮಾನಕ್ಕೆ ಬರುತ್ತಿದ್ದೆವು, ಮುಂದಿನ ವರ್ಷದಿಂದ ಅವತ್ತಿನ ಪಾಠ ಅವತ್ತೇ ಓದಬೇಕು, ಮುಂದಿನ ವರ್ಷ ಬರಲೇ ಇಲ್ಲ, ಪ್ರತಿ ವರ್ಷ ಇದೆ ಹೇಳಿ ಮನಸ್ಸನ್ನು ಸುಮ್ಮನಾಗಿಸಿದೆವು, ಜೊತೆಗೆ ಮುಂದಿನ ವರ್ಷದ ಸುಳಿಯಲ್ಲಿ ಈ ವರ್ಷ ಮತ್ತೆ ನೆನೆಗುದಿಗೆ ಬಿತ್ತು.

ನಾವು ನಮಗಾಗಿ ಬದುಕಲಾರೆವು, ನಮ್ಮ ಆಲೋಚನೆಗಳೆಲ್ಲ ನಾನು ಎಲ್ಲರನ್ನು ಅಚ್ಚರಿಗೊಳಿಸಿ ಬಿಡುವಂತೆ ಬದುಕಲ್ಲಿ ಬೆಳೆಯ ಬೇಕು, ಎಲ್ಲರು ಮೂಗಿನ ಮೇಲೆ ಬೆರಳಿಡುವಂತೆ ಯಶಸ್ಸನ್ನು ಪಡೆಯಬೇಕು ಎನ್ನುವಂತವು. ಆದರೆ ಈ 'ಎಲ್ಲರು' ಅಂದರೆ ಯಾರು, ಅದು ನಮಗೆ ಗೊತ್ತಿಲ್ಲ. ನಾವು ಏನೋ ಸಾಧಿಸ ಬೇಕು ಎಂದು ಕೊಳ್ಳುವುದು ಇನ್ನಾರನ್ನೋ ಖುಷಿ ಪಡಿಸಲಿಕ್ಕೆ ಅಥವಾ ಇನ್ನಾರದೋ ಮನಸ್ಸಿನಲ್ಲಿ ಕಿಚ್ಚು ಹಚ್ಚಲಿಕ್ಕೆ, ನಮಗಾಗಿ ಅಲ್ಲವೇ ಅಲ್ಲ. ನಾವು ಗಾಣಕ್ಕೆ ಕಟ್ಟಿರುವ ಎತ್ತಿನಂತೆ, ತಿರುಗಬೇಕು ಹಾಗಾಗಿ ತಿರುಗುತ್ತಿದ್ದೇವೆ, ಏತಕ್ಕಾಗಿ ತಿರುಗುತ್ತಿದ್ದೇವೆ ಎಂಬುದು ನಮಗೇ ಅರ್ಥವಾಗಿರದ ಸತ್ಯ. ನಾವು ಪ್ರತಿ ದಿನ ಹೊಸ ಆಲೋಚನೆಯನ್ನು, ಯೋಜನೆಯನ್ನು ಆರಂಭಿಸುತ್ತೇವೆ, ಹೊರತಾಗಿ ಅದಾಗಲೇ ರೂಪಿತವಾಗಿ ಮತ್ತು ಆರಂಭವಾಗಿರುವ ಯೋಜನೆಯನ್ನು ಪೂರ್ಣಗೊಳಿಸಲಾರೆವು ಏಕೆಂದರೆ ಯೋಜನೆ ಆರಂಭಿಸುತ್ತಿದ್ದಂತೆ ನಮ್ಮನ್ನು ನಾಳೆ ಕಾಡುತ್ತದೆ, ಮತ್ತೆ ಅದರ ಬಗ್ಗೆ ನಮ್ಮ ಗಮನ ಹರಿಯುತ್ತದೆ, ಅಲ್ಲಿಗೆ ನೆನ್ನೆ ಇಡೀ ದಿನ ಹಾಳುಗೆಡವಿ ಇವತ್ತಿಗಾಗಿ ಹಾಕಿದ ಯೋಜನೆ ತಳ ಹಿಡಿದು ಕರಕಲಾದ ಉಪ್ಪಿಟ್ಟಾಗುತ್ತದೆ, ಮತ್ತದನ್ನು ತಿನ್ನಲಾರದೆ ಎಸೆಯುತ್ತೇವೆ. ರವೆ-ಇತರೆ ಸಾಮಗ್ರಿ-ಪರಿಶ್ರಮ ಎಲ್ಲ ವ್ಯರ್ಥ, ಜೊತೆಗೆ ಮನಸ್ಸು ಕೂಡ.

ಬದುಕಿನಲ್ಲಿ ದೂರದರ್ಶಿತ್ವ ತುಂಬಾ ಮುಖ್ಯ ಖಂಡಿತ, ನಾಳೆಯ ಬಗ್ಗೆ ಒಂದು ಸೂಚ್ಯ ಪರಿವೆ ನಮ್ಮಲ್ಲಿದ್ದರೆ ಸಾಕು. ನಾಳೆ ಗೆಲ್ಲಲು ಇಂದು ಏನು ಮಾಡ ಬೇಕು ಎಂಬ ಆಲೋಚನೆ ನಮ್ಮ ಮನದಲ್ಲಿ ಮೂಡಿದರೆ ಅರ್ಧ ಗೆದ್ದಂತೆಯೇ, ನಾಳೆ ಗೆಲ್ಲಲು ನಾಳೆ ಏನು ಮಾಡಬೇಕು ಎಂಬುದು ನಿರರ್ಥಕ ಕಾಲ ಹರಣದ ಯೋಚನೆ ಮತ್ತು ಮೂರ್ಖ ಯೋಜನೆ. ನೇರವಾಗಿ ಗುಡ್ಡದ ತುದಿಗೆ ಹಾರಿ ಕುಳಿತವರು ನಮ್ಮಲ್ಲಿ ಯಾರು ಇಲ್ಲ (ಅತಿ-ಮಾನುಷ ಶಕ್ತಿಗಳಲ್ಲಿ ನನಗೆ ನಂಬಿಕೆ ಇಲ್ಲ), ಗುಡ್ಡದ ತುದಿಯೇರಲು ಒಂದೊಂದೇ ಹೆಜ್ಜೆಯಿಡುವ ಅಗತ್ಯವಿದೆ, ದಾರಿ ಕ್ಲಿಷ್ಟವಾಗಿದೆ ಎಂಬುದರ ಅರಿವು ನಮಗಿರ ಬೇಕು. ಗುಡ್ಡದ ತುದಿಯಲ್ಲಿ ಧ್ವಜ ನೆಡಬೇಕೆಂಬ ಆಲೋಚನೆ ಸೊಗಸಾಗಿದೆ, ಇಲ್ಲೇ ನಿಂತು ಪ್ರಯತ್ನಿಸುವ ಹುಂಬತನ ಮತ್ತು ಕಾಲ ಹರಣ ಪ್ರಕ್ರಿಯೆ ಎರಡು ಬೇಡ, ಧ್ವಜ ಕೈಯಲ್ಲಿದೆ, ಮೊದಲು ಜಾಣ್ಮೆಯಿಂದ, ವೇಗವಾಗಿ ಹಾಗು ಸುರಕ್ಷಿತವಾಗಿ ಗುಡ್ಡದ ತುದಿಗೆರೋಣ, ಕೊನೆಗೆ ಧ್ವಜ ನೆಟ್ಟರಾಯಿತು ಗುರಿ ತಲುಪಿದ ನೆನಪಿಗೆ.

ಪೂರ್ತಿಯಾಗಿ ಗೆಳೆಯ ನನ್ನ ಮಾತಿಗೆ ಒಪ್ಪಿದಂತೆ ಕಾಣಲಿಲ್ಲ, ಮತ್ತವನ ಕಿವಿಯಲ್ಲಿ ಉಸುರಿದೆ "ಒಂದೆ ಒಂದು ಜನ್ಮದಲಿ, ಒಂದೇ ಬಾಲ್ಯ, ಒಂದೇ ಹರೆಯ, ನಮಗದಷ್ಟೆ ಏತಕೋ!", ಅಂದ ಹಾಗೆ ಗೆಳೆಯನ ಹೆಸರು "ಮನಸ್ಸು".

5 ಕಾಮೆಂಟ್‌ಗಳು:

shivu.k ಹೇಳಿದರು...

ರಾಜೇಶ್,

ಇಂದು ಬೆಳಿಗ್ಗೆ ಮೊದಲು ನಿಮ್ಮ ಲೇಖನ ಓದಿದೆ. ಮನಸ್ಸಿಗೆ ಖುಷಿಯಾಯಿತು. ಇಂದಿನ ಈ ಕ್ಷಣದ ಮಹತ್ವದ ಬಗ್ಗೆ, ನಿನ್ನೆ ಮತ್ತು ನಾಳೆಗಳ ಬಗ್ಗೆ ಒಂದು ಉತ್ತಮ ಲೇಖನ. ಇಂಥದ್ದನ್ನು ಓದಿದ ಮೇಲೆ ಇವತ್ತಿನ ದಿನ ನನ್ನದು ಅನ್ನಿಸಿದೆ. ಮತ್ತೆ ನಿಮ್ಮ ಬ್ಲಾಗನ್ನು ನಿನ್ನೆ ರಾತ್ರಿ ಲಿಂಕಿಸಿಕೊಂಡಿದ್ದರಿಂದ ಇವತ್ತು ನಿಮ್ಮ ಲೇಖನ ಓದಲು ಸಾಧ್ಯವಾಯಿತು. ಈಗಿನಿಂದ ನಾನು ಕೂಡ ನಿಮ್ಮ ಬ್ಲಾಗಿನ ಖಾಯಂ ಓದುಗ.

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಶಿವೂ ಸರ್,
ನನ್ನ ಮನದಂಗಳಕ್ಕೆ ಸುಸ್ವಾಗತ ನಿಮಗೆ, ತಪ್ಪಿಸದೇ ಆಗಾಗ ಬಂದು ಹೋಗಿ.
ಪ್ರೀತಿಯಿರಲಿ...
-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

ಖುಷಿಯಾಯಿತು ಬರಹ ಓದಿ.

ನಮ್ಮ "ಇಂದು"ಗಳನ್ನು ಚೆನ್ನಾಗಿರಿಸಿಕೊಂಡರೆ ನಿನ್ನೆ, ನಾಳೆಗಳೆಲ್ಲ ತನ್ನಂತಾನೆ ಸರಿಹೋಗುತ್ತದಲ್ಲವೇ?

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ರಂಜಿತ್,
ಸುಮ್ಮನೆ ಕುಳಿತವನಿಗೆ ಹೀಗೆ ಅನ್ನಿಸಿತು, ನಿಜ ಅಲ್ವ, ಸರಿ ಮಾಡಬಹುದು ಅಂದ್ರೆ ಅದರ ಬಗ್ಗೆ ಚಿಂತಿಸುವುದು ಏನಕ್ಕೆ, ಸರಿ ಮಾಡೋದಕ್ಕೆ ಆಗಲ್ಲ ಅಂತ ಅನ್ನಿಸಿದ ಮೇಲೆ ಅದರ ಬಗ್ಗೆ ಯೋಚಿಸುವುದು ಏತಕ್ಕೆ. ಆದರು ಮನಸ್ಸು ಕೇಳಲ್ಲ ಅಲ್ವ.
ಹೀಗೆ ಹರಿದು ಬರಲಿ ನಿಮ್ಮ ಅನಿಸಿಕೆಯ ಮಹಾಪೂರ, ಬರುವುದು ತಪ್ಪಿಸ ಬೇಡಿ.
-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

ಇಂದು-ನಾಳೆಗಳ ಮಹತ್ವವನ್ನು ಅರ್ಥೈಸಿದ್ದಕ್ಕೆ ತುಂಬಾ ಧನ್ಯವಾದಗಳು....... ಲೇಖನ ಚೆನ್ನಾಗಿದೆ ರಾಜೇಶ್