ಅಂತರಾಳ - ೪
ಕೋಣೆಯಲ್ಲಿನ ನೀರವ ಮೌನ, ಮನಸ್ಸೇಕೋ ಇಂದು ಖಾಲಿ-ಖಾಲಿ... "ಕರೆದರು ಕೇಳದೆ..." ಹಾಡಿನ ಕರೆಗಂಟೆಯ ದನಿಯೊಂದಿಗೆ ನನ್ನ ಮೊಬೈಲ್, ಕೋಣೆಯ ಮೌನ ಮುರಿದಿತ್ತು, ಇನ್ನೇನು ಕುಳಿತಲ್ಲಿಂದ ಎದ್ದು ಕರೆ ಸ್ವೀಕರಿಸಬೇಕೆಂದು ಕೊಳ್ಳುವಷ್ಟರಲ್ಲಿ, ಅದು ತಪ್ಪಿದ ಕರೆಗಳ ಪಟ್ಟಿಯಲ್ಲಿ ಸೇರಿಹೋಗಿತ್ತು. ಅದನ್ನೇ ದಿಟ್ಟಿಸುತ್ತಾ ಕುಳಿತವನ ಮನಸ್ಸು ೬-೭ ವರ್ಷಗಳಷ್ಟು ಹಿಂದೆ ಜಾರಿತ್ತು.
ಕೋಣೆಯಲ್ಲಿನ ನೀರವ ಮೌನ, ಮನಸ್ಸೇಕೋ ಇಂದು ಖಾಲಿ-ಖಾಲಿ... "ಕರೆದರು ಕೇಳದೆ..." ಹಾಡಿನ ಕರೆಗಂಟೆಯ ದನಿಯೊಂದಿಗೆ ನನ್ನ ಮೊಬೈಲ್, ಕೋಣೆಯ ಮೌನ ಮುರಿದಿತ್ತು, ಇನ್ನೇನು ಕುಳಿತಲ್ಲಿಂದ ಎದ್ದು ಕರೆ ಸ್ವೀಕರಿಸಬೇಕೆಂದು ಕೊಳ್ಳುವಷ್ಟರಲ್ಲಿ, ಅದು ತಪ್ಪಿದ ಕರೆಗಳ ಪಟ್ಟಿಯಲ್ಲಿ ಸೇರಿಹೋಗಿತ್ತು. ಅದನ್ನೇ ದಿಟ್ಟಿಸುತ್ತಾ ಕುಳಿತವನ ಮನಸ್ಸು ೬-೭ ವರ್ಷಗಳಷ್ಟು ಹಿಂದೆ ಜಾರಿತ್ತು.
ಆಗಿನ್ನೂ ಮೊಬೈಲ್ ಹಾವಳಿ ಆರಂಭವಾಗಿತ್ತಷ್ಟೇ, ದೂರದಲ್ಲಿ ಯಾರದೋ ಕೈಯಲ್ಲಿ ಮೊಬೈಲ್ ನೋಡಿದರೆ "ಓಹೋ ಅದೇ ಮೊಬೈಲಾ" ಎಂದು ಅಚ್ಚರಿಯ ಸುಳಿ ಮುಖದಲ್ಲಿ ಸುಳಿದು ಮರೆಯಾಗುತ್ತಿತ್ತು. ಸ್ಥಿರ ದೂರವಾಣಿಗೆ ಅಲವತ್ತು ಕೊಂಡು ಮಾತು ಆರಂಭಿಸಿದರೆ ಪ್ರತಿ ೩ ನಿಮಿಷಕ್ಕೆ ೧.೨೦ ಪೈಸೆಯಂತೆ ಅದೆಷ್ಟಾಗುತ್ತಿತ್ತೋ ಎಸ್.ಟಿ.ಡಿ ಬೂತ್ ನ ಮಾಲೀಕನೆ ಬಲ್ಲ. ಪ್ರೀತಿಯ ಹುಡುಗಿಯ ಮನೆಗೊಂದು ಖಾಲಿ ಕರೆ(ಆಂಗ್ಲದ ಬ್ಲಾಂಕ್ ಕಾಲ್) ಮಾಡಿ ಸಂಭ್ರಮಿಸುವುದು, ಅಪ್ಪಿ-ತಪ್ಪಿ ಅವಳೇ ಕರೆ ಸ್ವೀಕರಿಸಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ಮನೋಸ್ಥಿತಿ. ಮನೆಯಲ್ಲಿ ಕುಳಿತಿದ್ದಾಗ ಮನೆ ದೂರವಾಣಿ ರಿಂಗಣಿಸಿದರೆ ಶರವೇಗದಲ್ಲಿ ಬಂದು, ನೆಗೆದು, ನನಗೆ-ನನಗೆ ಎಂದು ಕೂಗಿ ದೂರವಾಣಿಯ ಕುತ್ತಿಗೆ ಹಿಡಿದು ಕಿವಿಗೆ ಒತ್ತಿ ಮನದಲ್ಲಿ ಅವಳೇ ಇರಬಹುದಾ ಎಂದು ಯೋಚಿಸುತ್ತಾ, ಅತ್ತಲಿನ ದನಿ ಬೇರೆಯಾರದೋ ಆಗಿದ್ದರೆ ಕಸಿವಿಸಿ-ಸಿಡಿಮಿಡಿಗಳನ್ನೆಲ್ಲ ತೋರಿ, ದೂರವಾಣಿಯನ್ನು ಸ್ವಸ್ಥಾನಕ್ಕೆ ಕುಕ್ಕರಿಸಿಡುವುದು, ಅಕಸ್ಮಾತ್ ಕರೆ ಅವಳದೇ ಆಗಿದ್ದರೆ "ಮತ್ತೆ ಏನೋ ವಿಶೇಷ, ಅಮ್ಮ ಇಲ್ಲೇ ಇದ್ದಾರೆ(ಹಾಗಾಗಿ ಸರಿಯಾಗಿ ಮಾತನಾಡಲು ಆಗುತ್ತಿಲ್ಲ, ಬೇಜಾರು ಮಾಡ್ಕೋಬೇಡ ಎಂಬ ಸಂಜ್ಞ ಪೂರ್ವಕ ಮಾಹಿತಿ ಕೊಟ್ಟು)". ಮಾತು ಮುಗಿಸಿ, ಅಮ್ಮನ ಕಡೆ ತಿರುಗಿ, ಆಕೆ ಕೇಳದಿದ್ದರೂ "ಅಮ್ಮ ಫ್ರೆಂಡು, ಅವನೇನಮ್ಮ ನಿಂಗೂ ಗೊತ್ತು" ಎಂದು ನಾಟಕೀಯವಾಗಿ ರಾಗ ಎಳೆದು ಮನೆಯಿಂದ ಹೊರಗೆ ಕಾಲಿಟ್ಟು, ಎಷ್ಟೋ ಹೊತ್ತಿಗೆ ತಿಂದು ಇನ್ನೆಷ್ಟೋ ಹೊತ್ತಿನ ತನಕ ಮೆಲುಕು ಹಾಕುವ ಎಮ್ಮೆಯಂತೆ, ಸವಿಯಾದ ಸಂಭಾಷಣೆಯನ್ನು ಮತ್ತು ಅವಳ ನೆನಪನ್ನು ಮತ್ತಿನ್ನೆಷ್ಟೋ ಹೊತ್ತಿನವರೆಗೆ ಮನದಲ್ಲಿ ಮೆಲುಕು ಹಾಕಿ, ಒಳಗೊಳಗೇ ನಕ್ಕು ಸಂಭ್ರಮಿಸಿ, ಮತ್ತೆ ಮುಂದಿನ ಕರೆ ಬರುವವರೆಗೆ ಕಾಯುವುದು (ಇದು ಬಹುತೇಕರ ಬದುಕ ನೈಜ ಘಟನೆ ಎಂದು ಭಾವಿಸುತ್ತೇನೆ, ಬಹುಶಃ ಅವನು ಅವಳಾಗಿರಬಹುದು, ಇಲ್ಲ ಅವಳು ಅವನಾಗಿರಬಹುದು).
ಆಮೇಲೆ ಮೊಬೈಲ್ ತನ್ನ ವ್ಯಾಪ್ತಿಯನ್ನು ನನ್ನೂರಿಗೂ ವಿಸ್ತರಿಸಿತು. ಮೊದಲಿಗೆ ನಿಮಿಷಕ್ಕೆ ಮೂರು ರೂಪಾಯಿಂದ ಆರಂಭವಾಗಿ, ನಿಮಿಷಕ್ಕೆ ಒಂದು ರೂಪಾಯಿ, ಐವತ್ತು ಪೈಸೆ, ನಲವತ್ತು ಪೈಸೆ, ಮೂವತ್ತು ಪೈಸೆ, ಇಪ್ಪತ್ತು ಪೈಸೆ, ಹತ್ತು ಪೈಸೆ, ಮತ್ತು ಕೊನೆಗೆ ನಿಗದಿತ ಸಂಖ್ಯೆಗೆ ಅನಿಯಮಿತ ಉಚಿತ ಕರೆಯವರೆಗೂ ಬಂತು(ಕರೆ ಮಾಡಿದವರಿಗೆ ಹಣ ಪಾವತಿ ಮಾಡುವ ಕಾಲ ಬಂದರು ಅಚ್ಚರಿಯಿಲ್ಲ). ನಿಜಕ್ಕೂ ಸಂಬಂಧಗಳು ಅರ್ಥ ಕಳೆದುಕೊಂಡಿದ್ದೆ ಆವಾಗ, ಮಾತುಗಳು ಮೌಲ್ಯ ಹೀನವಾದವು. ಎಸ್.ಎಂ.ಎಸ್ ಗಳು ಬೆರಳ ತುದಿಗಳ ಮೂಕ ಸಂಭಾಷಣೆಗಳಾದವು. ಅಪರಿಚಿತ ಮುಖಗಳು ಎಸ್.ಎಂ.ಎಸ್ ಮುಖಾಂತರ ನೇರ ಮನೆಯಂಗಳಕ್ಕೆ ಲಗ್ಗೆ ಇಟ್ಟವು, ಭಾವನೆಗಳು ತೀರ ಕೊಡು-ಕೊಳ್ಳುವಿಕೆಯಷ್ಟು ಅಗ್ಗ ಹಾಗು ಸುಲಭವಾದವು, ಕೊನೆ ಕೊನೆಗೆ ಎಸ್.ಎಂ.ಎಸ್ ಚಟವಾಯ್ತು, ಮೊಬೈಲ್ ಕರೆ ವ್ಯಾಧಿಯಾಯಿತು. ಎಷ್ಟೇ ಮೊಬೈಲ್ ಯಶಸ್ವೀ ಸಂಪರ್ಕ ಸಾಧನ ಎಂತೆನಿಸಿದರು, ಭಾವನೆಗಳನ್ನು ತಲುಪಿಸುವಲ್ಲಿ ಬಹಳ ಕೆಟ್ಟ ರೀತಿಯಲ್ಲಿ ಸೋತಿತು. ನಾವು ಮೊಬೈಲ್ ನ ಇನ್ನೊಂದು ತುದಿಯಲ್ಲಿ ಮಾತನಾಡುವವರ ಭಾವನೆ ಅರಿಯದೇ ಹೋದೆವು, ಮಾತುಗಾಳು ತೀರ ಯಾಂತ್ರಿಕವಾದವು, ಎಸ್. ಎಂ. ಎಸ್ ನ ಭಾಷೆ ಇಂಗ್ಲೀಷನ್ನು ಖಂಡ-ತುಂಡವಾಗಿಸಿತು ಜೊತೆಗೆ ನಮ್ಮಲ್ಲನೇಕರು ಬರವಣಿಗೆಯನ್ನು ಮರೆತರು, ಬೆರಳ ತುದಿ ಇದನ್ನೆಲ್ಲಾ ಮರೆವಂತೆ ಮಾಡಿತು. ಪತ್ರ ಬರೆದವನ/ಳ ಹಸ್ತಾಕ್ಷರ ಅವರ ಮನಸ್ಥಿತಿಗೆ ಕನ್ನಡಿ ಹಿಡಿದಂತಿರುತ್ತಿತ್ತು, ಕೈಬರಹ ಸ್ವಲ್ಪ ನಡುಗಿದ್ದಂತೆ ಕಂಡು ಬಂದರೆ ಮನೆಯವರಿಗೆಲ್ಲ ಒಂದು ಆತಂಕ "ಆರೋಗ್ಯ ಸರಿಯಿದೆಯೋ? ಇಲ್ವೋ?".
ಪ್ರತಿ ಅಕ್ಷರ ಹೃದಯದ ತೇರಿನಲ್ಲೊಂದು ಪುಟ್ಟ ಪಯಣಕ್ಕೆ ಅಣಿಗೊಳಿಸುತ್ತಿತ್ತು, ಈಗ ಅಂತರ್ದೆಶಿಯ ಪತ್ರಗಳು ಅಂಗಡಿಗಲ್ಲಿಯೂ ಮಾಯವಾಗಿದೆ, ಅಲ್ಲೆಲ್ಲಾ ಮೊಬೈಲ್ ಕರೆನ್ಸಿ ಕೂಪನ್ ಗಳು ಬಂದು ಕುಳಿತಿವೆ. ಪತ್ರದ ಎಡ ಮೇಲ್ತುದಿಯಲ್ಲಿ "ಕ್ಷೇಮ", ನಡು ಮಧ್ಯದಲ್ಲಿ "ಶ್ರೀ", ಬಲ ಮೇಲ್ತುದಿಯಲ್ಲಿ "ದಿನಾಂಕ, ಸ್ಥಳ" ಬರೆದು, ತೀರ್ಥರೂಪ ತಂದೆಯವರಲ್ಲಿ ಹಾಗು ಮಾತ್ರುಶ್ರೀಯವರಾದ ತಾಯಿಯವರಲ್ಲಿ ಎಂದು ಶುರುವಿಟ್ಟು ಹಿರಿಯರಿಂದ ಆಶಿರ್ವಾದ ಬೇಡಿ, ಕಿರಿಯರಿಗೆ ಆಶೀರ್ವಾದ ನೀಡಿ, ಸಕಲರ ಆರೋಗ್ಯ-ಭಾಗ್ಯ ವಿಚಾರಿಸಿ. ಮುಂದಿನ ಸಾಲಿನಲ್ಲಿ "ಸಾಂಪ್ರತಾ" ಎಂದು ಬರೆದು ಪತ್ರ ಬರೆದ ಕಾರಣವನ್ನು ವಿವರವಾಗಿ ವಿವರಿಸಿ, ಕೊನೆಗೆ ಮತ್ತೊಮ್ಮೆ ಆಶಿರ್ವಾದ ಬೇಡಿ, ನಿಮ್ಮ ಪತ್ರಕ್ಕಾಗಿ ಕಾಯುತ್ತಿರುವ ಹಾಗು ಆಗಿಂದಾಗ್ಗೆ ಪತ್ರ ಬರೆಯುತ್ತೀರಾಗಿ ನಂಬಿರುವ ನಿಮ್ಮ ಮಗ/ಮಗಳು ಎಂದು ಸಹಿ ಹಾಕಿ, ಅಂಚೆ ಪೆಟ್ಟಿಗೆ ಸೇರಿಸಿ ಬಂದರೆ, ಮನಸ್ಸು ಊರಿಗೆ ಹೋದಷ್ಟೇ ಹಗುರ, ಪತ್ರ ಸಿಕ್ಕವರಿಗೆ ಜೊತೆಗೆ ಇದ್ದಷ್ಟು ಹತ್ತಿರ (ಇನ್ನು ಪ್ರೇಮ ಪತ್ರದ ಸೊಬಗಂತೂ ಬರೆದು, ಓದಿದವನೆ ಧನ್ಯ, ಅದರ ಬಗ್ಗೆ ಇನ್ಯಾವಾಗಲಾದರೂ ಬರೆದೇನು).
ಎದುರಿಗೆ ಸಿಕ್ಕವರಿಂದ ತಪ್ಪಿಸಿಕೊಂಡು ಮುಂದೆ ಸಾಗಲೆಂಬಂತೆ, "ನಿನ್ನ ನಂಬರ್ ಇದ್ರೆ ಕೊಡು, ಮತ್ತೆ ಕಾಲ್ ಮಾಡ್ತೀನಿ, ಈಗ ಸ್ವಲ್ಪ ಅರ್ಜೆನ್ಟ ಕೆಲಸ ಇದೆ" ಎಂಬಂತೆ ಕಾಲು ಕೀಳುವವರೇ ಹೆಚ್ಚು, ಅವರಿಗೆಲ್ಲ ಮೊಬೈಲ್ ಒಂದು ನೆಪವಾಯಿತು. ಎಲ್ಲರನ್ನು ಹಾಗು ಎಲ್ಲವನ್ನು ಹತ್ತಿರವನ್ನಾಗಿಸಲು ಬಂದ ಮೊಬೈಲ್, ಇನ್ನಷ್ಟು ದೂರ ನಿಲ್ಲಿಸಿತು, ಈಗೀಗ ಪರಿಚಿತರು, ಅಪರಿಚಿತರಾಗಿದ್ದರೆ. ಪ್ರೀತಿ ಪಾತ್ರರನ್ನು ಭೇಟಿಮಾದುವುದ ಬಿಟ್ಟು, ಕರೆ ಮಾಡಿದರಾಯ್ತು ಎಂಬಲ್ಲಿಗೆ ಸಂಬಂಧದೆಡೆಗಿನ ಅಸಡ್ಡೆ ಬೆಳೆದು ನಿಂತಿದೆ, ಇನ್-ಲ್ಯಾಂಡ್ ಲೆಟರ್ ಕೊಡಿ ಅಂತ ಅಂಗಡಿಯವನನ್ನು ಕೇಳಿದ್ದು ಮರೆತೆ ಹೋಗಿದೆ, ಹತ್ತಿರದ ಅಂಚೆ-ಪೆಟ್ಟಿಗೆ ಎಲ್ಲಿದೆ ಎಂಬುದೇ ನೆನಪಿಲ್ಲ, ಏಕೆಂದರೆ ಪತ್ರ ಬರೆದು ಕೆಲವು ವರ್ಷಗಳಾಗಿದೆ.
ಮತ್ತೆ ಮೊಬೈಲ್ ಕರೆಯುತ್ತಿದೆ "ಕರೆದರು ಕೇಳದೆ..." ಎಂದು, ತಪ್ಪಿ ಹೋದ ಕರೆಗಳ ಪಟ್ಟಿ ಸೇರುವುದರೊಳಗೆ, ಕರೆ ಸ್ವೀಕರಿಸಬೇಕಿದೆ, ಮತ್ತೆ ಒಂದು ಮುದ್ದಾದ ಪತ್ರ ಬರೆಯ ಬೇಕಿದೆ ನನ್ನ ನೆನಪಿನಂಗಳಕ್ಕೆ, ಪತ್ರ ಬರೆದ ನಂತರ ಅಂಚೆ-ಪೆಟ್ಟಿಗೆ ಬಳಿ ಸಿಗೋಣ.
6 ಕಾಮೆಂಟ್ಗಳು:
ರಾಜೇಶ್ ಮಂಜುನಾಥ್...
ಈ ಮೊಬೈಲು ಸುಳ್ಳು ಹೇಳುವದನ್ನೂ ಕಲಿಸಿದೆ...
ಎಲ್ಲೋ ಇದ್ದರೆ ಬೇರೆಲ್ಲೋ ಇದ್ದೀನಿ ಅಂತ ಹೇಳುವದು..ಇತ್ಯಾದಿ...
ನೀವು ಹೇಳಿದಹಾಗೆ ಇದರಿಂದಾದ ಹಾನಿಯೇ ಜಾಸ್ತಿ...
ಧನ್ಯವಾದಗಳು..
ಇಂದು ಮೊಬೈಲ್ ಇಲ್ಲದೆ ಬದುಕುವುದು ಕಷ್ಟ. ಅಪ್ಪಿ ತಪ್ಪಿ ಮನೆಯಲ್ಲಿ ಮೊಬೈಲು ಬಿಟ್ಟು ಬಂದಿರಾ? ಮತ್ತೆ ಹೋಗಿ ತರದೇ ಇರ್ತೀರಾ!! ಒಳ್ಳೆಯ ಬರಹ.
ಒಲವಿನಿಂದ
ಬಾನಾಡಿ
ಪ್ರಕಾಶ್ ಸರ್,
ಮೊಬೈಲ್ ಎಷ್ಟು ಸುಳ್ಳು ಹೇಳಿಸುತ್ತೆ ಅನ್ನೋದನ್ನ ಯೋಚಿಸಿದರೆ ಬೇಸರವಾಗುತ್ತೆ, ಅಥವಾ ನಾವು ಇದನ್ನ ದುರುಪಯೋಗ ಪಡಿಸ್ಕೊಂದ್ವೇನೋ ಅಂತಾನು ಅನ್ಸುತ್ತೆ. ನಿಮ್ಮ ಅನಿಸಿಕೆ-ಅಭಿಪ್ರಾಯಗಳು ಹೀಗೆ ಬರ್ತಿರ ಬೇಕು ನನ್ನ ಬರಹಗಳ ಕಡೆಗೆ ಎಂದು ಪ್ರೀತಿಯಿಂದ ಆಗ್ರಹಿಸುತ್ತಿದ್ದೇನೆ.
ಬಾನಾಡಿಯವರೇ,
ಖಂಡಿತ ಸರ್, ಈ ಲೇಖನ ಬರೆದ ಮೇಲೆ, ಅಂದರೆ ಈ ದಿನ ಬೆಳಿಗ್ಗೆ ತಾನೇ ಕಚೇರಿಗೆ ಹೊರಟವನು ವಾಪಸ್ ಬಂದು ಬಿಟ್ಟು ಹೊರಟಿದ್ದ ಮೊಬೈಲ್ ತಗೊಂಡು ಹೋದೆ, ಹೋಗುವಾಗ ಇದೆ ಪ್ರಶ್ನೆ ನನ್ನನ್ನು ಕಾಡ್ತಾ ಇತ್ತು, ವಿಪರ್ಯಾಸವೋ ಅಥವಾ ಕಾಕತಾಳಿಯವೋ ಅರ್ಥವಾಗಲಿಲ್ಲ.
ಮೆಚ್ಚುಗೆಗೆ ಧನ್ಯಾವಾದಗಳ ಮಹಾಪೂರ ನನ್ನ ಕಡೆಯಿಂದ, ನಿಮ್ಮ ಪ್ರೀತಿ ಹೀಗೆಯಿರಲಿ...
-ರಾಜೇಶ್ ಮಂಜುನಾಥ್
ಸಾರ್,
ಅಲೆದಾಡುತ್ತಾ ನಿಮ್ಮ ಬ್ಲಾಗಿಗೆ ಬಂದೆ. ನೀವು ಮೊಬೈಲ್ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.. ಮೊಬೈಲಿನಿಂದಾಗಿ ಪತ್ರ ವ್ಯವಹಾರದ ಮಜ ಖುಷಿ ಎಲ್ಲಾ ತಪ್ಪಿಹೋದಂತಾಗಿದೆ. ಚೆನ್ನಾಗಿದೆ ಬರಹ. ಬಿಡುವು ಮಾಡಿಕೊಂಡು ನನ್ನ ಬ್ಲಾಗಿಗೊಮ್ಮೆ ಬನ್ನಿ. ಅಲ್ಲಿರುವ ಫೋಟೊ ಮತ್ತು ಲೇಖನ ನಿಮಗಿಷ್ಟವಾಗಬಹುದು.
ನನ್ನ ಬ್ಲಾಗ್ ಗಳ ವಿಳಾಸ:
http://chaayakannadi.blogspot.com/
http://camerahindhe.blogspot.com/
ಶಿವು ಸರ್,
ನಾನು ನಿಮ್ಮ ಬ್ಲಾಗ್ಗೆ ಕೆಲವೊಮ್ಮೆ ಭೇಟಿ ನೀಡಿದ್ದೇನೆ, ಸುಳಿವು ನೀಡದೆ ಹೊರ ಬಂದಿದ್ದೆ. ಈಗ ನನ್ನ ಬ್ಲಾಗ್ ನಲ್ಲಿ ನಿಮ್ಮೆರಡು ಬ್ಲಾಗ್ ನ ಕೊಂಡಿ ಸಿಕ್ಕಿಸಿಯಾಗಿದೆ ಇನ್ನಂತೂ ನಿಮ್ಮ ಲೇಖನಗಳ ಖಾಯಂ ಓದುಗ ಹಾಗು ಚಿತ್ರಗಳ ವೀಕ್ಷಕ. ನಮ್ಮ ಕಡೆಗೂ ಅಗಾಗ ಬಂದು ಹೋಗ್ತಿರಿ. ಇಷ್ಟಪಟ್ಟಿದ್ದಕ್ಕೆ ತುಂಬಾ ಖುಷಿಯಾಯ್ತು. ದಯವಿಟ್ಟು ಸರ್ ಅನ್ನಬೇಡಿ, ರಾಜೇಶ್ ಅನ್ನಿ ಆತ್ಮೀಯವಾಗಿರುತ್ತದೆ.
-ರಾಜೇಶ್ ಮಂಜುನಾಥ್
ರಾಜೇಶ್,
ಈಗೀಗ ಮೊಬೈಲ್ ಹಾವಳಿ ವಿಪರೀತವಾಗಿಬಿಟ್ಟಿದೆ..ಮನೆಯಲ್ಲಿ ಮಕ್ಕಳು ಬಿಟ್ಟರೆ ಬೇರೆಲ್ಲರ ಬಳಿಯಲ್ಲೂಂದೊಂದು ಮೊಬೈಲ್ಗಳು ಇರುತ್ತವೆ... ನಿಮ್ಮ ಮಾತುಗಳು ನೈಜವಾಗಿದೆ.... ನೀವು ಹೇಳುವುದು ಸರಿ..ಯಾವುದೇ ಒಂದು ವಸ್ತುವಿನಿಂದ ಎಷ್ಟು ಉಪಯೋಗವಿರುತ್ತೋ ಅಷ್ಟೇ ತೊಂದರೆಗಳೂ ಇರುತ್ತವೆ..ಅದಕ್ಕೆ ಈ ಮೊಬೈಲ್ ಉದಾಹರಣೆಯಾಗಿದೆ....
ಹೌದು ಪತ್ರ ಬರೆದು ಪೋಸ್ಟ್ ಮಾಡಿದ್ದೀರಾ?
ಕಾಮೆಂಟ್ ಪೋಸ್ಟ್ ಮಾಡಿ