ಸೋಮವಾರ, ಡಿಸೆಂಬರ್ 1, 2008

ಮದುವೆ - ಸಣ್ಣ ತಪ್ಪಿಗೆ ಹೀಗೊಂದು ಜೀವಾವಧಿ ಶಿಕ್ಷೆ

ಅಂತರಾಳ - ೩

ಎಷ್ಟೋ ಬಾರಿ ಸ್ನಾನ ಗೃಹದಲ್ಲಿ ನನ್ನ ಕಾಡಿದ ಹಾಗು ಕಾಡುವ ಪ್ರಶ್ನೆಯೆಂದರೆ, ದೇವರು ಕೈಗೆಟುಕದಂತೆ ಬೆನ್ನನ್ನು ಏಕೆ ಇಟ್ಟ.

ಈ ಬಾರಿ ಊರಿಗೆ ಹೋಗಿದ್ದರಿಂದ, ಇಷ್ಟು ಅನಿಸಿದ ಕೂಡಲೇ ಅಜ್ಜಿಯನ್ನು ಕರೆದೆ... "ಅಜ್ಜಿ ಒಂಚೂರು ಬೆನ್ನು ತಿಕ್ಕಿ ಕೊಡಿ ಬನ್ನಿ". ಅದಾಗ ತಾನೆ ಬಂದ ಮೊಮ್ಮಗನಿಗೆಂದು ಒಲೆ ಮೇಲೆ ಚಹಾ ಕಾಯಲು ಇಟ್ಟಿದ ಅಜ್ಜಿ, ಹುಸಿ ಮುನಿಸು ತೋರುತ್ತ "ಅಯ್ಯೋ ನಿನ್ನ ಸೊಕ್ಕೆ, ಈ ವಯಸ್ಸಲ್ಲಿ ನನ್ನನ್ನು ಇಷ್ಟು ಗೋಳು ಹೊಯ್ಕೊಳ್ತೀಯಲ್ಲ, ನಿನ್ನ ಅಮ್ಮನನ್ನು ಕರೆಯಬಾರದೇನು?" ಎನ್ನುತ್ತಾ ಬಂದು, ಎರಡು ಚೊಂಬು ಬಿಸಿ ನೀರು ಚೆಲ್ಲಿ, ನಿಧಾನವಾಗಿ ಮೊಮ್ಮಗನಿಗೆ ಅಭ್ಯಂಗ ಸ್ನಾನ ಮಾಡಿಸಲು ಅಣಿಯಾದರು.

ನನ್ನ ಮಾಮೂಲಿ ಮಾತಿನವರಸೆಯಂತೆ ನನ್ನ ಅಜ್ಜಿಯನ್ನು ಸರಿ ಸುಮಾರು ೫ ದಶಖ ಹಿಂದೆ ಎಳೆದೊಯ್ವ ಪ್ರಯತ್ನ ಮಾಡಿದೆ. ಮಾತು ಶುರುವಿಟ್ಟೆ "ಅಜ್ಜಿ ಅಜ್ಜನಿಗೂ ಹೀಗೆ ಸ್ನಾನ ಮಾಡಿಸಿಕೊಡ್ತಿದ್ರ?", ಮೈ ಮೇಲೆ ಕೆಂಡ ಬಿದ್ದಂತಾದ ಅಜ್ಜಿ, ಸ್ವಲ್ಪ ಸಿಡುಕು, ಸೆಡವು ಜೊತೆಗೊಂದಿನಿತು ನಗು ಸೇರಿಸಿ, ಅಂಗಳ ಸಾರಿಸುತ್ತಿದ್ದ ಅಮ್ಮನನ್ನು ಕೂಗಿ "ಕಮಲಿ, ನೋಡೇ ನಿನ್ನ ಮಗ ಎಂತ ಮಾತಾಡ್ತಾನೆ, ದೊಡ್ಡವರ ಹತ್ತಿರ ಮಾತಾಡೋ ಮಾತಾ ಇದು" ಎಂದು ಮೊಮ್ಮಗನ ಗುಣಗಾನ ಆರಂಭಿಸಿತು. ಏನು ಅರಿಯದ ನನ್ನ ಅಮ್ಮ, "ಏನಾಯ್ತಮ್ಮ?" ಎಂಬಂತೆ ಪ್ರಶ್ನೆಯೆದುರು ಹಿಡಿದು ನಿಂತರು, ಅಜ್ಜಿ "ಏನೇನೋ ಕೇಳ್ತಾನೆ ಕಣೆ" ಎಂದಷ್ಟೇ ಉತ್ತರಿಸಿ ನಾಚಿಕೆಯಿಂದೆಂಬಂತೆ ಒಳಮನೆಯ ಹಾದಿ ಹಿಡಿದರು, ನಾನು ಕಿಚಾಯಿಸುವುದು ನಿಲ್ಲಿಸಿಯೇ ಇರಲಿಲ್ಲ, ಅಮ್ಮ "ನಿನ್ನ ದಮ್ಮಯ್ಯ ಸುಮ್ನಿರೋ" ಅಂದಾಗ, ಸುಮ್ಮನೆ ನಕ್ಕೆ, ಕೂಡಲೇ ಮನೆಯೊಳಗಿಂದ ಅಜ್ಜಿಯ ಅಶರೀರವಾಣಿ ಮೊಳಗಿತು "ಬೇಗ ನಿನ್ನ ಮಗನಿಗೊಂದು ಮದುವೆ ಮಾಡು, ಬಂದವಳು ಇವನನ್ನು ಸರಿ ಮಾಡ್ತಾಳೆ. " ಬಿಸಿ ನೀರ ನಡುವೆ ಒಂದು ಬಿಂದಿಗೆ ತಣ್ಣೀರು ತಲೆ ಮೇಲೆ ಚೆಲ್ಲಿದಂತಾಯ್ತು.

ಅಮ್ಮ ಮದುವೆ ವಿಚಾರ ಮಾತನಾಡಲು ಪರವಾನಗಿ ಸಿಕ್ಕಿತೆಂಬಂತೆ ಎದುರು ನಿಂತಿದ್ದರು, ನಾನು ಮನಸ್ಸಿನೊಳಗೆ ಪ್ಲೀಸ್ ಇಷ್ಟು ಬೇಗ ಬೇಡ ಎಂಬಂತೆ ಜಾಣ ಕಿವುಡು ಪ್ರದರ್ಶಿಸುತ್ತ ಬಚ್ಚಲಿನ ಒಳ ಅಗುಣಿ ಭದ್ರ ಪಡಿಸಿದೆ.

ಅಜ್ಜಿ ಮಾತ್ರ ಯುದ್ಧ ಗೆದ್ದ ಖುಷಿಯಲ್ಲಿ ಮನೆಯೆಲ್ಲ ಓಡಾಡಿಕೊಂಡಿದ್ದರು, ನಾನು ಮಾತ್ರ ಬಾಲ ಸುಟ್ಟ ಬೆಕ್ಕಂತಾಗಿದ್ದೆ, ಅಮ್ಮ ಮಾತ್ರ ಮನೆಗೆ ಸೊಸೆ ತರುವ ಯೋಚನೆಯಲ್ಲಿ ಲೀನವಾಗಿದ್ದರು.

7 ಕಾಮೆಂಟ್‌ಗಳು:

ಚಿತ್ರಾ ಸಂತೋಷ್ ಹೇಳಿದರು...

ಒಳ್ಳೆ ಪ್ರಶ್ನೇರೀ..ಅದೇ ನಮ್ಮಂಥ ದಡ್ಡರಿಗೆ ಇದೆಲ್ಲ ಕಾಡಲ್ಲ ಬಿಡಿ.
-ಚಿತ್ರಾ

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಚಿತ್ರ
idle mind is the devil's work shop ಅಂತಾರಲ್ಲ ಹಾಗೆ ನನ್ನಂತವರಿಗೆ ಹೀಗೆಲ್ಲ ಹೊಳೆಯುತ್ತೆ ಅನ್ಸುತ್ತೆ, ನಿಮ್ಮನ್ನು ನೀವು ದಡ್ಡರು ಅಂದರೆ, ನನ್ನಂತಹವರನ್ನು ವಿಶ್ಲೇಷಿಸಲು ಅಸಾಧ್ಯ ಬಿಡಿ. ಭೇಟಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು, ಹೀಗೆ ಆಗಾಗ ಬಂದು ನಿಮ್ಮ ಅನಿಸಿಕೆಗಳನ್ನು ಬಿಟ್ಟು ಹೋಗಿ.
-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

thanx for supporting

ranjith ಹೇಳಿದರು...

ಆ ನಿಟ್ಟಿನಲ್ಲಾದರೂ ನಮ್ಮ ಪ್ರೀತಿಪಾತ್ರರಾದವರ ಸ್ಪರ್ಶ ಪಡೆಯಬಹುದು ಬಿಡಿ...

ಚಿಕ್ಕವರಿದ್ದಾಗ ನಮ್ಮಲ್ಲಿ ಮುಗ್ಧತೆ ಇರೋದು ಅಮ್ಮನ ಸ್ಪರ್ಶದಿಂದಲೇ ಅನ್ಸುತ್ತೆ. ದೊಡ್ಡವರಾಗ್ತಾ ಆಗ್ತಾ ಅಮ್ಮನಿಂದ ದೂರ ದೂರವಾಗೋದು ಅರಿವಿಗೇ ಬರಲ್ಲ. ಮುಗ್ಧತೆನೂ ನಶಿಸ್ತಾ ಹೋಗೋದು ವಿಷಾದಕರ.

ಮದುವೆ ವಿಚಾರದಲ್ಲಿ ಅಮ್ಮನನ್ನು ಕಾಡಿಸುವುದು ಒಳ್ಳೇದಲ್ಲ. ಅಂದ ಹಾಗೆ ಯಾವಾಗ ಮದ್ವೆ ಊಟ ಹಾಕಿಸ್ತಿದ್ದೀರಿ?

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ನೀಲಾಂಜಲರವರೆ,
ಬೆಂಬಲಿಸುವುದು ನಮ್ಮ ಮೂಲ ಕರ್ತವ್ಯ, ಥ್ಯಾಂಕ್ಸ್ ಹೇಳ್ಬೇಡಿ ದಯವಿಟ್ಟು.

ರಂಜಿತ್,
ಬಹುಶಃ ಒಂದು ಹಂತದಲ್ಲಿ ಬದುಕು ನಮ್ಮ ಮುಗ್ಧತೆಯನ್ನು ಹುರಿದು ಮುಕ್ಕಿಬಿಡುತ್ತೆ ಅನ್ಸುತ್ತೆ. ವಿಚಿತ್ರವೋ ಇಲ್ಲಾ ವಿಪರ್ಯಾಸವೋ ಅರ್ಥವೇ ಆಗದೆ ಉಳಿದು ಹೋಗ್ತೀವಿ ಅಲ್ವ.
ಮದುವೆ ಬಗ್ಗೆ ಇಷ್ಟು ಬೇಗ ಯಾವ ಆಲೋಚನೆಯೂ ಇಲ್ಲ, ಇದೀಗ ತಾನೇ ಬದುಕು ಆರಂಭವಾದಂತಿದೆ, ಅಕಸ್ಮಾತ್ ಯಾವತ್ತಾದ್ರು ಮದುವೆ ಅಂತ ಆದ್ರೆ ಖಂಡಿತ ನಿಮ್ಮನ್ನು ಕರೀತೀನಿ, ಸೃಜನಶೀಲ ಕವಿಗಳ ಉಪಸ್ಥಿತಿ ನಮಗೂ ಸಂತೋಷವನ್ನುಂಟು ಮಾಡುತ್ತಲ್ವ(ಸ್ವಾರ್ಥಿ ಅಂತೀರಾ). ಅಗಾಗ ತಪ್ಪದೆ ಬಂದು ಹೋಗ್ತಿರೀ.ಪ್ರೀತಿಯಿರಲಿ.

-ರಾಜೇಶ್ ಮಂಜುನಾಥ್

shivu.k ಹೇಳಿದರು...

ರಾಜೇಶ್,
ಬೆನ್ನು ತಿಕ್ಕಿಸಿಕೊಳ್ಳುವ ಕಾರಣ ಮದುವೆಗೆ ಬಂದು ನಿಂತಿದೆ ! ನಿಮ್ಮಜ್ಜಿಯ ಆಸೆಯಂತೆ ಆಗಲಿ ಎಂದು ನನ್ನ ಆರೈಕೆ ಕೂಡ ! ಪರ್ವಾಗಿಲ್ಲ, ನಿಮ್ಮ ಬರವಣಿಗೆಯಲ್ಲಿ ವಿನೋದಪೂರ್ಣ ಚಾಪು ಇದೆ! ಇಂಥವು ನನಗಿಷ್ಟ! ಮುಂದುವರಿಸಿ ......

ಅನಾಮಧೇಯ ಹೇಳಿದರು...

ನಿಮ್ಮ ಅಜ್ಜಿಯ ಆಸೆ ಆದಷ್ಟು ಬೇಗ ಈಡೇರಿಸಿ.....
ಮದುವೆ ಊಟಕ್ಕಾಗಿ ಕಾಯುತ್ತಿರುವೆ.... ಕರೀತೀರಿ ಅಲ್ವಾ?