ಮಂಗಳವಾರ, ಅಕ್ಟೋಬರ್ 6, 2009

ಭಯ


ಕನಸೇ ಕದಲದ ಕಾರಿರುಳ ರಾತ್ರಿಯೊಳು
ನೆನಪ ಅಗೆದಗೆದು ತೆಗೆವ ಹುಚ್ಚನಿವ ಅಕ್ಷರಾರ್ಥಃ
ಇವನೆದೆಗೆ ಏನು ಒಗ್ಗುವುದಿಲ್ಲ, ಇವನ ನಿಂದನೆಗೆ
ಸಕಲವೂ ಎದೆ ಸುಡುವ ಜ್ವಲನ ಪದಾರ್ಥ

ಯಶದ ಹಾದಿಯ ಸರಣಿಯಾರಂಭಕು ಮುನ್ನ
ನಿರ್ಲಿಪ್ತ ಮೋರೆ ಹೊತ್ತು ಗುರಿಯ ದಿಟ್ಟಿಸುವನು
ದುಡಿದು ದಣಿಯುವ ಮುನ್ನ ವಿಶ್ರಾಂತಿ ಬೇಕಂತೆ
ಗಾವುದವು ಹೆಜ್ಜೆ ಊರದ ಎಗ್ಗ ಗಾವಿಲನು

ಬದುಕ ಶಪಿಸುತ್ತಾನೆ, ಒಳಗೆ ಕೊರಗುತ್ತಾನೆ
ಕುಸಿದು ಮರುಗುತ್ತಾನೆ ಮೂಢನಿವನು
ಸೂರ್ಯ ರಶ್ಮಿಯ ಕಾಂತಿ ಕಂಡೊಡನೆ ಮತಿ ಭ್ರಾಂತಿ
ಅಕ್ಷಿ ಪಟಲವ ಮುಚ್ಚಿ ಜಗ ಕತ್ತಲೆನ್ನುವವನಿವನು

ಒಳಗೆ ಕುಳಿತಿಹನಂತೆ, ಕಂಡು ಕಾಣದ ಹಾಗೆ
ಕಿಡಿಯ ಸೋಕಿಸಿ ಹೊತ್ತಿಸುತ ಎದೆಯ ಬೇಗೆ

ಮುಟ್ಟಿ ನೋಡಿರಿ ಒಮ್ಮೆ ಮಗ್ಗುಲು ಬದಲಿಸುವನು
ಇವನದೀಗ ನಿಮ್ಮೆದಯ ಅಂಗಳದಿ ಪಾರ್ಶ್ವ ಶಯನ
ಇವನಿಂದ ಅಡ್ಡಿ ನೂರೆಂಟು ಆತಂಕ ಇದಿರುಂಟು
ತಡೆದು ನಿಲ್ಲಿಸುವ ನಿಮ್ಮ ಹಿಡಿಯಲಾರದ ಹಾಗೆ ಗುರಿಯ ಅಯನ

ಬಲು ಚಿಕ್ಕ ಬದುಕಿಹುದು ಅಕ್ಕರೆಯು ಇರಲೆದೆಗೆ
ನಡೆವ ಹಾದಿಯ ಗುರಿಯು ಅಪರಿಮಿತವು
ಹೆಡೆಮುರಿಯ ಕಟ್ಟಿ ತಳ್ಳಿ ಬಿಡಿ ಇವನನ್ನು
ಶಾಶ್ವತವಾಗಿ ಏರಿ ಬಿಡಲಿವನು ಮರಣ ಶಯನ

"ನನ್ನ ಬ್ಲಾಗಿನಲ್ಲಿ ಮೊದಲ ಕವನ ಪ್ರಕಟಿಸಿ ಒಂದು ವರ್ಷ ಸಂದಿದೆ, ಬರೆದಿದ್ದು ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಜೊಳ್ಳೇ ಹೆಚ್ಚು ಎಂಬುದು ನನ್ನ ಮನದ ಅಂಬೋಣ. ಆದರು ಒಂದು ವರ್ಷದ ಅವಧಿಯಲ್ಲಿ ಬ್ಲಾಗು ನನಗೆ ಅನೇಕ ಆತ್ಮೀಯ ಗೆಳೆಯ, ಗೆಳತಿಯರನ್ನು, ಅಕ್ಕರೆಯ ಅಕ್ಕಂದಿರನ್ನು ಮತ್ತು ನಲ್ಮೆಯ ಅಣ್ಣಂದಿರನ್ನು ನೀಡಿದೆ, ಪ್ರತಿ ಬರಹ ಪ್ರಕಟಿಸಿದಾಗ ಜೊತೆ ನಿಂತು ತಿದ್ದಿ, ಪ್ರೋತ್ಸಾಹಿಸಿದ ನಿಮಗೆಲ್ಲ ನಾನು ಆಭಾರಿ. ನಿಮ್ಮ ಪ್ರೀತಿ ನನ್ನ ಜೊತೆ ಹೀಗೆ ಇರಲಿ ಎಂದು ಆಶಿಸುತ್ತೇನೆ."

14 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ರಾಜೇಶ್...
ಬ್ಲಾಗಿಗೆ ವರ್ಷ ತುಂಬಿತಾ? ನಮ್ಮನೆಯ ಬ್ಲಾಗ್ ಮರಿಯ ಹುಟ್ಟುಹಬ್ಬದ ಕೇಕ್ ಇನ್ನೂ ಕತ್ತರಿಸಿಲ್ಲ, ಒಟ್ಟಿಗೇ ಕೇಕ್ ಕತ್ತರಿಸಿದರಾಯ್ತು ಬಿಡು.
ವರ್ಷತುಂಬಿದ ಚಂದದ ಬ್ಲಾಗಿಗೆ ಶುಭಾಶಯ. ಚೆಂದದಬ್ಲಾಗನ್ನು ನಮ್ಮ ಮುಂದಿಟ್ಟ ನಿನಗೆ ಧನ್ಯವಾದ.

ದಿವ್ಯಾ ಮಲ್ಯ ಕಾಮತ್ ಹೇಳಿದರು...

ಹೌದು, ಎಲ್ಲರ ಮನದಲ್ಲೂ ಒಂದಲ್ಲ ಒಂದು ಸಮಯದಲ್ಲಿ ಧುತ್ತನೆ ಎದ್ದು ಕಾಡಿ ಮನಸ್ಸು ರಾಡಿ ಮಾಡುತ್ತೆ ಈ ಭಯ...ಇದನ್ನು ಹೆಡೆ ಮುರಿ ಕಟ್ಟಿ ಹೊಡೆದೋಡಿಸುವ ತನಕ ಖಂಡಿತ ಯಶಸ್ಸು ನಮ್ಮದಾಗಲಾರದು...ಚೆನ್ನಾಗಿ ಬರೆದಿದ್ದೀರಾ ರಾಜೇಶ್...
ಬ್ಲಾಗಿಗೆ ವರ್ಷ ತುಂಬಿದ ಸಂಭ್ರಮಕ್ಕೆ ಶುಭ ಹಾರೈಕೆಗಳು..

PARAANJAPE K.N. ಹೇಳಿದರು...

ರಾಜೇಶ್, ನಿಮ್ಮ ಬ್ಲಾಗಿಗೆ ವರುಷ ತು೦ಬಿದ ಹರುಷ. ಅಭಿನಂದನೆಗಳು. ನೀವು ತು೦ಬಾ ಚೆನ್ನಾಗಿ ಬರೀತೀರಾ, ಶುಭವಾಗಲಿ

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ರಾಜೇಶ,

ಬಹಳ ದಿನದ ನಂತರ ಅರ್ಥಪೂರ್ಣ ಬರಹ.

ಬ್ಲಾಗಿಗೆ ವರ್ಷ ತುಂಬಿದಕ್ಕೆ ಶುಭಾಶಯಗಳು

ಮನಸು ಹೇಳಿದರು...

ರಾಜೇಶ್,
ಜೊಳ್ಳು ಎನ್ನುವುದು ಯಾವುದಿಲ್ಲ ಎಲ್ಲದರಲ್ಲೊ ಒಂದೊಂದು ಅರ್ಥವಿರುತ್ತೆ ತಿಳಿದುಕೊಳ್ಳುವುವರ ಮೇಲಿರುತ್ತೆ ಅಷ್ಟೆ ನಿಮ್ಮ ಲೇಖನ ಕವನಗಳು ಎಲ್ಲವೂ ಹಾಗೆ ವಿಭಿನ್ನತೆಯನ್ನು ಸೂಸಿವೆ.
ಬ್ಲಾಗ್ ವೃಂದದವರ ಪ್ರೀತಿ ನಿಮ್ಮೊಂದಿಗಿರುತ್ತೆ... ಬರವಣಿಗೆಯ ಹಾದಿ ಸುಗಮವಾಗಿರಲಿ... ನಿಮ್ಮ ಜೀವನ ಸುಖಮಯವಾಗಿರಲೆಂದು ಆಶಿಸುತ್ತೇನೆ.
ಮನಸು....

ವಿನುತ ಹೇಳಿದರು...

ರಾಜೇಶ್,

ಈ ಕವನಕ್ಕೊಂದು ಶೀರ್ಷಿಕೆ ಇಲ್ಲದಿದ್ದಿದ್ದರೆ, ಇದು ಮನುಷ್ಯನ ಹುಚ್ಚು ಮನಸ್ಸಿನ ಹಲವು ಭಾವನೆಗಳನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಶೀರ್ಷಿಕೆ ಕೊಟ್ಟು ನಮ್ಮನ್ನು ಒಂದು ದಿಕ್ಕಿನೆಡೆಗೆ ಕರೆದೊಯ್ದಿದ್ದೀರಿ. ಆದಾಗ್ಯೂ, ಈ ಭಾವನೆಗಳ ಹಂದರದಲ್ಲಿ ಮಾನವನ ಅಭಿವೃದ್ಧಿಗೆ ತೊಡಕಾಗಬಹುದಾದ ಕೀಳರಿಮೆ, ಅಸಹನೆ, ಹೊಟ್ಟೆಯುರಿ ಹೀಗೆ ಹಲವು ಕಾರಣಗಳು ಪಾತ್ರವಾಗುತ್ತವೆ. ಬಹು ಆಯಾಮದ ಹಾಗೂ ಅಷ್ಟೇ ಮಾರ್ಮಿಕವಾದ ಕವನ.
ವಾರ್ಷಿಕೋತ್ಸವದ ಸಂಭ್ರಮಕ್ಕೆ ಇದಕ್ಕಿಂತಲೂ ಉತ್ತಮ ಕಾಣಿಕೆ ಸಾದ್ಯವಿರಲಿಲ್ಲವೇನೋ ಎನಿಸುತ್ತದೆ. ತುಂಬು ಹೃದಯದ ಅಭಿನಂದನೆಗಳು.

chetana ಹೇಳಿದರು...

ಕವಿತೆ ಚೆನ್ನಾಗಿದೆ.
ಬರೀ ಚೆಂದ ಅಲ್ಲ, ಅರ್ಥಪೂರ್ಣವಾಗಿದೆ
ಬರೀತಿರು
- ಚೇ.ತೀ

ಅನಾಮಧೇಯ ಹೇಳಿದರು...

ಪ್ರೀತಿಯ ರಾಜೇಶ್ ಅವರೇ,
ತುಂಬಾ ಅರ್ಥಗರ್ಭಿತವಾದ ಕವನ.... ಒಂದು ಸರ್ತಿ ಅಲ್ಲ ಎಷ್ಟೋ ಸರ್ತಿ ಓದಿದ ನಂತರ ಅರ್ಥವಾಯಿತು....
ಕವಿತೆಯ ಆಳ ಅಪರೂಪವಾಗಿದೆ, ನೈಜತೆಯಿಂದ ತುಂಬಿದೆ.
ದೊಡ್ದ ಕವಿ ಬರೆದ ಕವನದಂತೆಯೇ ಇದೆ...
ಮುಂದಿನ ಜ್ನ್ಯಾನ ಪೀಠ ಪ್ರಶಸ್ತಿಗೆ ಹಾತೊರೆಯುವ ಹಾಗಿದೆ ನಿಮ್ಮ ಕವನ.....
ನಿಮ್ಮ ಮುದ್ದಾದ ಮನದ ಪಿಸುಮಾತಿಗೆ ಮುದ್ದಾದ ಹಾರ್ಧಿಕ ಶುಭಾಷಯಗಳು....
ಒಳ್ಳೆಯದಾಗಲಿ....
- ಇಂಚರ

Geethashri Ashwathaiah ಹೇಳಿದರು...

v.v.v.nice poetry, i read nearly three to four times to understand the in depth meaning in it...awesome composition,hatss off...i really look forward for you further postings..;)

Geetha

ಅನಾಮಧೇಯ ಹೇಳಿದರು...

Congrats!! :)

Veena DhanuGowda ಹೇಳಿದರು...

Congrats Rajesh :)
ondu varshada haasu gussu nagu nagutha inu hechu kavana galana thanna daagisikolali.....

mathe mathe odidastu hosa arta
koduva kavana....
santhosa vayithu
thanks for updating the blog

ಸಾಗರದಾಚೆಯ ಇಂಚರ ಹೇಳಿದರು...

ರಾಜೇಶ್,
ವರುಷ ತುಂಬಿದ ಹರುಶಕ್ಕೆ ನಮ್ಮ ಅಭಿನಂದನೆಗಳು, ಸುಂದರ ಕವನದೊಂದಿಗೆ ಇನ್ನೊಂದು ವರ್ಷ ಆರಂಭವಾಗಿದೆ,

ಹೆಚ್ಚಿನ ಯಶಸ್ಸು ಸಿಗಲಿ

shivu.k ಹೇಳಿದರು...

ರಾಜೇಶ್,

ಕವನ ಯಾರದೋ ಭಯ, ನೋವು, ವಿಷಾದದ ಕತೆಯನ್ನು ಹೇಳಿಕೊಳ್ಳುವಂತಿದೆ. ಯಾರದು ಅಂತ ನನಗೆ ಗೊತ್ತಾಯ್ತು...ಬಳಸಿರುವ ಪದಬಳಕೆಗಳು ತುಂಬಾ ವಿಭಿನ್ನವೆನಿಸಿವೆ. ಅಪರೂಪಕ್ಕೆ ಕವನವೆಂದರೂ ಹೀಗೆ ಬರೆದುಬಿಡಬೇಕು.

ಅಲೆಮಾರಿ ಹೇಳಿದರು...

olleya kavana sir