ನಿಂಗೊತ್ತಾ ???!!!
ನಾನು ತೀರ ಚಿಕ್ಕವನಿದ್ದಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಅಮ್ಮ ಶನಿವಾರದ ಬೆಳಗಿನ ಶಾಲೆಗೆ ತಡವಾಗುತ್ತೆ ಅಂತ ಓಡೋಡಿ ಹೋದ ಮೇಲೆ ನಾನು ಸ್ನಾನದ ಮನೆಯಲ್ಲಿ ಬಿಸಿ ನೀರು ಬೆರೆಸಿಕೊಳ್ಳಲು ಬರದೆ ಬರಿ ತಣ್ಣೀರು ಸುರಿದು ಕೊಂಡು ಸ್ನಾನ ಮುಗಿಸಿದಾಗೆಲ್ಲ ನೀನು ವಿಪರೀತ ಬೇಕು ಅಂತ ಅನ್ನಿಸಿಬಿಡುತ್ತಿದ್ದೆ. ನೀನಿಲ್ಲ ಅನ್ನೋ ಕೊರಗು ಮತ್ತು ಕೊರತೆ ನನ್ನನ್ನು ಕಾಡುತ್ತಿದ್ದಿದ್ದೆ ಅಂತಹ ಕ್ಷಣಗಳಲ್ಲಿ.
ಅಮ್ಮ ಜ್ವರದಿಂದ ಹಾಸಿಗೆ ಹಿಡಿದ ದಿನಗಳಲ್ಲಿ ಅಕ್ಕಿ ಅಥವಾ ಗೋಧಿ ರವೆಯನ್ನೋ ಹುರಿದು, ಕುದಿವ ನೀರಿನಲ್ಲಿ ಹಾಕಿ, ಚೆನ್ನಾಗಿ ಬೇಯಿಸಿ ಗಂಜಿ ಮಾಡಿ ಇಳಿಸುವ ಹೊತ್ತಲ್ಲಿ ಪಾತ್ರೆಯಂಚು ಕೈ ತಾಕಿ ಸುಟ್ಟಾಗ ನೀನಿದ್ದಿದ್ರೆ ಹೀಗೆಲ್ಲ ಆಗ್ತಿರಲಿಲ್ಲ ಅಲ್ವ ಅಂತ ಕಣ್ಣೀರು ತುಂಬಿ ಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಪಾಚಿಯ ಮೇಲೆ ಕಾಲಿಟ್ಟು ಕೆಸರಲ್ಲಿ ಜಾರಿ ಬಿದ್ದು ಮನೆಗೆ ಬಂದಾಗ, ಪರೀಕ್ಷೆ ಹಿಂದಿನ ದಿನ ನಿದ್ದೆ ಬಾರದಿದ್ದಾಗ, ನಡು ಮಧ್ಯ ರಾತ್ರಿ ಬೀದಿ ನಾಯಿ ವಿಕಾರವಾಗಿ ಊಳಿಟ್ಟಾಗ, ಏನೋ ತಪ್ಪು ಮಾಡಿದಾಗ ಅಮ್ಮ ಗದರಿದಾಗ ನೀನಿಲ್ಲ ಅನ್ನೋದು ತುಂಬಾ ನೋವು ನೀಡುತ್ತಿತ್ತು.
ಎರಡನೇ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಬಿಡದೆ ಧೋ ಎಂದು ಸುರಿದ ಮಳೆಯಿಂದ ಮನೆಗೆ ಬರಲಾಗದೆ ಶಾಲೆಯ ಮೆಟ್ಟಿಲ ಮೇಲೆ ಗೆಳೆಯನ ಜೊತೆ ಕುಳಿತಿದ್ದಾಗ ಛತ್ರಿ ಹಿಡಿದು ಬಂದ ಅವನಕ್ಕ ಅವನ ತಲೆ ಒರೆಸಿ ಛತ್ರಿ ಒಳಗೆ ಸೇರಿಸಿ ಕೊಂಡಾಗ, "ಈ ಮಳೆ ನನಗೇನು ಅಲ್ಲ, ಈ ಮಳೆಯಂದ್ರೆ ಮತ್ತು ಮಳೆಯಲ್ಲಿ ನೆನೆಯೋದಂದ್ರೆ ನನಗೆ ತುಂಬಾನೆ ಇಷ್ಟ" ಅಂತ ಸುಳ್ಳೇ ನಕ್ಕು ಸಮವಸ್ತ್ರದ ಅಂಗಿಯೊಳಗೆ ಶಾಲೆ ಚೀಲ ಸೇರಿಸಿ ಕಣ್ಣೀರಾಗಿ ಮಳೆಯಲ್ಲಿ ಓಡಿದ ದಿನ. ಮನೆ ತಲುಪಿದ ಮೇಲೆ "ಮಳೆಯಲ್ಲಿ ನೆಂದು ಬಂದಿದೀಯಲ್ಲ, ಸ್ವಲ್ಪ ಹೊತ್ತು ಕಾದಿದ್ದು ಬರಬಹುದಿತ್ತಲ್ಲ" ಎಂದು ಅಮ್ಮ ರೇಗಿದಾಗ, ನನ್ನ ಪಾಲಿಗೆ ನೀನು ಯಾಕಿಲ್ಲ ಅಂತ ದೇವರಲ್ಲಿ ಜಗಳಕ್ಕೆ ನಿಲ್ಲ ಬೇಕು ಅಂತ ಅನ್ನಿಸಿ ಬಿಡುತ್ತಿತ್ತು. ನೀನಿದ್ದಿದ್ದರೆ ನಾನು ಮಳೆಯಲ್ಲಿ ನೆನೆಯುತ್ತಿರಲಿಲ್ಲ ಅಂತೇನು ಇಲ್ಲ, ಆದರೆ ನೆನೆದು ಮುದ್ದೆಯಾಗಿ ಬಂದಾಗ ಕನಿಷ್ಠ ತಲೆ ಒರೆಸಿ ಕೊಡಲಿಕ್ಕಾದರು ನೀನು ಇರುತ್ತಿದ್ದಿದ್ದರೆ ಅನ್ನೋ ತುಡಿತ ನನಗಿತ್ತು.
ಮೊನ್ನೆ ಹೀಗೆ ಈ ಯಾಂತ್ರಿಕ ನಗರಿಯ ಮಳೆಗೆ ಸಿಕ್ಕಿ ಒದ್ದೆಯಾಗಿ ಮನೆ ಸೇರಿದಾಗ ಫೋನಾಯಿಸಿದ ಅಮ್ಮ ಮದುವೆ ಬಗ್ಗೆ ಏನು ತೀರ್ಮಾನಿಸಿದೆ ಎಂದಾಗ, ಕೊನೆ ಪಕ್ಷ ನನ್ನ ತಮ್ಮ ಚಿಕ್ಕವನು, ಇಷ್ಟು ಬೇಗ ಮದುವೆ ಬೇಡ ಅಂತ ಅಮ್ಮನಿಗೆ ಒಪ್ಪಿಸಲಿಕ್ಕಾದರು ಅಥವಾ ಅಮ್ಮ ನೋಡುವ ಹುಡುಗಿ ನನ್ನ ತಮ್ಮನಿಗೆ ಸೂಕ್ತಳೋ ಇಲ್ಲವೊ ಅಂತ ನಿರ್ಧರಿಸಲು ನೀನಿರಬೇಕಿತ್ತು.
ಕೊನೆ ಪಕ್ಷ ಎದೆಯ ದುಗುಡ ತೀರ ಹೆಚ್ಚಾದಾಗ ಮುಖ ಮುಚ್ಚಿಕೊಂಡು ಮಲಗಿ ಬಿಡಲು ನಿನ್ನ ಮಡಿಲು ಬೇಕಿತ್ತು, ಅಲ್ಲಿ ತಲೆ ನೇವರಿಸಿ ಸಮಾಧಾನಿಸಲು ನನಗೂ ಒಬ್ಬಳು ಅಕ್ಕ ಇರಬೇಕಿತ್ತು.
26 ಕಾಮೆಂಟ್ಗಳು:
ರಾಜೇಶ್...
ಕೊನೆಯವರೆಗೂ, ಆ "ನೀನು" ಯಾರಿರಬಹುದು ಅಂತ ಮಾಡಿದ ಊಹೆಗಳೆಲ್ಲ ತಪ್ಪಾಯ್ತು :-)..... ಒಡ ಹುಟ್ಟಿದ ಅಕ್ಕ ಇಲ್ಲದಿದ್ದರೇನಾಯ್ತು? ಅಕ್ಕನಂತೆ ಪ್ರೀತಿಯಿಂದ ವಿಚಾರಿಸಿಕೊಳ್ಳುವವರಿದ್ದಾರೆ ತಾನೇ?
-ದಿವ್ಯಾ
ಭಾವನೆಗಳನ್ನು ಚೆನ್ನಾಗಿ ಪದಗಳಲ್ಲಿಡುತ್ತೀರಿ. ಓದಿ ಮುಗಿಸಿದ ನ೦ತರವೂ, ಆ ಭಾವನೆಗಳ ಗು೦ಗಿನಲ್ಲೇ ಇರುವ೦ತಾಗುತ್ತದೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..?
Rajesh,
Matte matte odbeku anisoo baraha...
obba huduga akkanu eepari miss madokotane anta yesto akkandirige kothirlikila :)
sambandagala yeleyana thumba naviragi vivarisi baritiri
chennagide :)
ನನ್ನ ಪ್ರೀತಿಯ ಚೇತನಕ್ಕ (ಚೇತನಾ ತೀರ್ಥಹಳ್ಳಿ)ನವರ ನಲ್ಮೆಯ ಪ್ರತಿಕ್ರಿಯೆ...
ರಾಜೇಶ,
ಇದುವರೆಗೆ ಇಲ್ಲದಿದ್ದ ಅಕ್ಕ, ಈಗ ಇದ್ದಾಳೆ. ಈಗ ಏನು? ಅಮ್ಮನ ಹತ್ತಿರ ನನ್ನ ತಮ್ಮನಿಗೆ ಇಷ್ಟು ಬೇಗೆ ಮದುವೆ ಬೇಡ ಅಂತ ಜಗಳ ಆಡಬೇಕು ತಾನೆ? ನಡಿ ಹೋಗುವಾ!
ನಾನಂತೂ ನಿನ್ನ ಜತೆಗಿದ್ದೇನೆ.
ತುಂಬು ಪ್ರೀತಿಯ,
ಅಕ್ಕ.
(ಚೇತನಾ)
ರಾಜೇಶ್,
ಕಣ್ಣೀರು ಅನ್ನುವುದು ಬೇರೆಯವರಿಗಾಗಿ ಅಲ್ಲ...ಅದು ಇರುವುದೇ ನಮಗಾಗಿ, ನಮ್ಮ ದುಃಖವನ್ನು ಹೊರಹಾಕಲು, ಖುಷಿಯಾದಾಗ ಆನಂದಬಾಷ್ಪ ಸ್ಪುರಿಸಲು ನಮಗಾಗಿ ಇರುವ ಏಕೈಕೆ ಆಸ್ತಿ ಕಣ್ಣೀರು.[ಇದು ಧರಿತ್ರಿ ಲೇಖನಕ್ಕೆ ಹಾಕಿದ ಕಾಮೆಂಟು. ಅದನ್ನು ಇಲ್ಲಿ ಹೇಳಬೇಕೆನಿಸಿತು] ಇದನ್ನು ಮುಂದುವರಿಸಿ ಹೇಳಬೇಕೆನಿಸಿದರೆ,
ನಮ್ಮ ಕಣ್ಣೀರು ನಮಗಾಗೆ ಇದ್ದರೂ ಅದನ್ನು ಹೊರತರಲು ನಿಮ್ಮ ಅನಿಸಿಕೆಯ ಅಕ್ಕ ಇರಬೇಕಾಗಿತ್ತು ಅನ್ನುವ ನಿಮ್ಮ ಭಾವನೆ ಅಕ್ಷರಶಃ ಸರಿಯೆನಿಸುತ್ತದೆ...
ಈ ವಿಚಾರವನ್ನು ನೀವು ನನ್ನಲ್ಲಿ ಚರ್ಚಿಸಿದಾಗ ನನಗೆ ಸತ್ಯದ ಅರಿವಾಗಿತ್ತು. ಮತ್ತು ಅದೇ ಮನಸ್ಥಿತಿಯಲ್ಲಿ ನೀವು ಬರೆದ ಈ ಲೇಖನ ವಿಶಿಷ್ಟವೆನಿಸುತ್ತದೆ. ಈ ವಿಚಾರದಲ್ಲಿ ಚೇತನಕ್ಕ ಜೊತೆಯಲ್ಲಿ ನಾನು ಇದ್ದೇನೆ..
ಸದ್ಯಕ್ಕೆ ನೀವು ಅಂದುಕೊಂಡಂತೆ ಆಗಲಿ...
ಧನ್ಯವಾದಗಳು.
ಪ್ರೀತಿಯ ರಾಜೇಶ
ಬಹಳ ದಿನದಿಂದ ಕಾಯುತ್ತಾ ಇದ್ದೆ
ನೀನು ಏನು ಬರಿತೀಯಾ ಅಂತ,
ಅಕ್ಕನ ಬಗ್ಗೆ ಬರಹ ತುಂಬಾ ಚೆನ್ನಾಗಿದೆ.
ನನಗೂ “ಅಕ್ಕ” ಇಲ್ಲ ಎಂಬ ಕೊರತೆ ಇದ್ದೆ ಇದೆ.
ಆ ಮನದ ಭಾವನೆಗಳನ್ನ ತುಂಬಾ ಸರಳವಾಗಿ
ಚೆಂದವಾಗಿ ಅದು ಹೇಗೆ ಪದಗಳನ್ನಾಗಿಸಿತ್ತಿಯೋ?
ಅಕ್ಕನ ಬಗ್ಗೆ ನನಗ್ನಿಸಿದ್ದು
“ ಅಮ್ಮನ ಮಮತೆ, ಅಪ್ಪನ ಜವಾಬ್ದಾರಿ,
ಗೇಳೆಯನ ಪ್ರೀತಿ, ಸಹೋದರಿಯ ಕಕ್ಕುಲಾತಿ
ಎಲ್ಲವನ್ನು ಸಮ್ಮೀಲನವೇ ಅಕ್ಕ“
ವಾರಕ್ಕೊಂದಾದರು ಲೇಖನ ಬರಿತಾ ಇರು,
ಲಕ್ಷ್ಮಣ
ರಾಜೇಶ..ರಿಯಲೀ ವಂಡರ್ ಫುಲ್ ಲೇಖನ. 'ನೀನು' ಯಾರಪ್ಪಾ ಅಂತ ಪ್ರಶ್ನೆಯೊಂದಿಗೆ ಓದಿ ಮುಗಿಸಿದಾಗ..!! ನೀನು ಅನ್ನೋದು ಅಮ್ಮನಂಥ ಅಕ್ಕನನ್ನು ಅನಿಸಿತ್ತು. ನಾನು ಹಿಂದೆ ನನಗೂ ಅಕ್ಕಾ ಇರುತ್ತಿದ್ರೆ ..ಅಂತ ಲೇಖನ ಬರೆದಿದ್ದೆ ಬಹುಶಃ ನೀನು ಓದಿದ್ದಿ ಅಂದುಕೊಂಡಿದ್ದೀನಿ.
ತುಂಬಾ ದಿನಗಳ ನಂತರ ಒಳ್ಳೆಯ ಬರಹವನ್ನು ನೀಡಿದ್ದೀಯಾ..ಅಭಿನಂದನೆಗಳು. ಯಾವತ್ತೂ ಮನುಷ್ಯನ ಮನಸ್ಸು ಇಲ್ಲದುದರೆಡೆಗಗೆ ತುಡಿಯೋದು...ನಂಗೂ ಅನಿಸುತ್ತೆ ನಂಗೂ ಅಕ್ಕಾ ಇರಬೇಕಿತ್ತು..ನಾನೇ ಅಕ್ಕನಾಗಿಬಿಟ್ಟಿದ್ದೀನಲ್ಲ! ಬದುಕಿನ ಸಂಬಂಧಗಳತ್ತ ಮುಖಮಾಡುವ ಇಂಥ ಲೇಖನಗಳು ಇನ್ನಷ್ಟು ಬರಲಿ...ಮುಂದುವರಿ..ಹಾರೈಕೆಗಳು.
-ಧರಿತ್ರಿ
ರಾಜೇಶ್,
ಜೀವನದಲ್ಲಿ ಕೆಲವು ಹಾಗೆಯೇ.. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕೊರತೆ ಇದ್ದೇ ಇರುತ್ತೆ.. ನನ್ನಂತೆ ಮತ್ತು ನಿಮ್ಮಂತೆ ಕೆಲವರಿಗೆ ಅಕ್ಕ ಇರುವುದಿಲ್ಲ, ಕೆಲವರಿಗೆ ನಲ್ಮೆಯ ತಂಗಿ, ಕೆಲವರಿಗೆ ಕಾಡುವ ತಮ್ಮ, ಕೆಲವರಿಗೆ ಗೆಳೆಯನಂತ ಅಣ್ಣ, .. ಹೀಗೆ ಪ್ರತಿಯೊಬ್ಬರಿಗೂ ಒಬ್ಬರು ಇಲ್ಲ ಇನ್ನೊಬ್ಬರ ಕೊರತೆ ಜೀವನಪೂರ್ತಿ ಕಾಡುತ್ತಿರುತ್ತದೆ. "ಇರುವುದೆಲ್ಲವ ಬಿಟ್ಟು ಇರದಿರುವುದರ ಕಡೆಗೆ ತುಡಿಯುವುದೇ ಜೀವನ" ಅಲ್ಲವೇ..
ಚಂದದ ಬರಹ, ಅಭಿನಂದನೆಗಳು :)
ಜಗಳ ಆಡಲು ನನಗೂ ಅಕ್ಕನ ಕ೦ಪನಿ ಇಲ್ಲ.. :( .ತು೦ಬಾ 'feel' ಇರೋ ಲೇಖನ..:)
ರಾಜೇಶ್....
ಎಲ್ಲಿಯೋ ಕಳೆದು ಹೋಗಿದ್ದೀರಿ ಅಂದುಕೊಂಡಿದ್ದೆ...
ಬಹಳ ಚಂದದ , ಭಾವ ಪೂರ್ಣವಾದ ಲೇಖನ...
ಆತ್ಮ ನೀವೇದನ....
ಓದಿಯಾದ ಮೇಲೆ ಅದೇ ಗುಂಗಿನಲ್ಲಿದ್ದೆ...
ಮನಸ್ಸಿಗೆ ತಟ್ಟುವ ಹಾಗೆ ಬರೆಯುತ್ತೀರಿ..
ನನಗೂ ನನ್ನ ಅಕ್ಕನ ನೆನಪು ಮಾಡಿಸಿದ್ದೀರಿ...
ರಾಜೇಶ್,
ಓದಲು ಶುರು ಮಾಡಿದಾಗ ಮೊದಲಿಗೆ ಅಮ್ಮ ಇರಬಹುದೆ ಅನ್ನಿಸಿತು ತದ ನಂತರ ಪ್ರೇಯಸಿ ಇರಬಹುದೇ ಅನಿಸಿತು...
ಹೀಗೆ ಏನೆಲ್ಲಾ ಊಹೆ ಮಾಡುತ ಬಂದಾಗ ಕೊನೆಗೆ ಅಕ್ಕ ಎಂದು ತಿಳಿಯಿತು... ಕೊನೆವರೆಗು ಗೆಸ್ ಮಾಡುತ್ತಾ ಇರಲೇಬೇಕು...ಈ ಧಾಟಿ ತುಂಬಾ ಇಷ್ಟ ಆಯ್ತು...
ಕೆಲವೆಡೆ ವಿವರಿಸಿರುವ ಮುಗ್ಧತೆ ಮನಮುಟ್ಟಿತು..
ಅಕ್ಕನ ಅವಶ್ಯಕತೆ ಎಲ್ಲಿ,ಹೇಗೆ ಇರುತ್ತೆ ಅನ್ನೋದನ್ನು ಅಮೋಘವಾಗಿ ವಿವರಿಸಿದ್ದೀರಿ... ತುಂಬಾ ಚೆನ್ನಾಗಿದೆ
ನಿಮಗೆ ಹೇಗೆ ಅಕ್ಕನ ಕೊರತೆ ಇದೆಯೋ ಹಾಗೆಯೇ ನನಗೆ ಅಣ್ಣನ ಕೊರತೆ ಇದೆ.....ಅದು ತುಂಬಾ ಕಾಡುತ್ತೆ..
ಮುಂದಿನ ಜನುಮದಲ್ಲಿ ನಿಮಗೆ ಒಳ್ಳೆಯ ಅಕ್ಕ ಸಿಗಲಿ ಎಂದು ಹಾರೈಸುತ್ತೇನೆ..
ಇಷ್ಟು ದಿನ ಕಾದಿದಕ್ಕು ಒಳ್ಳೆಯ ಬರಹ ಕಂಡಿದ್ದು ಮನಸಿಗೆ ಕುಷಿ ನೀಡಿತು.
ರಾಜೇಶ್, ಕೊನೆವರೆಗೆ ಸಸ್ಪೆನ್ಸ್ ಉಳಿಸಿದ್ದೀರಿ. ಪ್ರೀತಿಪಾತ್ರರನ್ನು ಕಳೆದುಕೊಂಡಾಗಿನ ನೋವು ಎದ್ದು ಕಾಣುತ್ತದೆ ನಿಮ್ಮ ಬರಹದಲ್ಲಿ. ನೋವನ್ನು ಮರೆಯಲು ಪ್ರಯತ್ನಿಸಿ
ನನಗೂ ಅಕ್ಕ ಇಲ್ಲಾ ಅನ್ನೊ ಕೊರತೆ ಬಹಳ ಕಾಡಿದೆ, ತಂಗಿ ಇರುವುದೇನೊ ನಿಜ ಆದ್ರೆ, ನನ್ನನ್ನೂ ಬಯ್ದು ಬುಧ್ಧಿ ಹೇಳುವ ಅಕ್ಕ ಇದ್ದಿದ್ದರೆ ಅಂತ ನನಗೂ ಬಹಳ ಸಾರಿ ಅನಿಸಿದ್ದಿದ್ದೆ. ನನ್ನ ಸ್ವಗತವೇನೊ ಅನ್ನಿಸುವಷ್ಟು ಚೆನ್ನಾಗಿ ಬರವಣಿಗೆಯಲ್ಲಿ ಇಳಿಸಿದ್ದೀರಿ, ಸೂಪರ... ಹೀಗೆ ಬರೀತಾ ಇರಿ...
ರಾಜೇಶ್, ನಿಮ್ಮಂತೆ ನನಗೂ ಎಷ್ಟೋ ಬಾರಿ ಅನಿಸಿದೆ...ಅಕ್ಕ ಇರಬಾರದಿತ್ತೆ...
ನಿಜ ಒಡ ಹುಟ್ಟಿದ ಅಕ್ಕನಿಲ್ಲದಿದ್ದರೆ ಏನಾಯ್ತು...ಮನದನಿಸಿಕೆಯನು ಮನಮಿಡಿಯುವಂತೆ ಮುಂದಿಡಲು ಅಕ್ಕಂದಿರು ಖಂಡಿತಾ ಸಿಗುತ್ತಾರೆ..ಏಕೆಂದರೆ...ತಮ್ಮನಿಗಾಗಿ ಹಾತೊರೆಯುವ ತಮ್ಮನಿಲ್ಲದ ಅಕ್ಕಂದಿರೂ ಇರುವುದರಿಂದ...ಪುಟ್ಟದಾದರೂ ಚೊಕ್ಕ, ಹೃದಯಕದಡಿ..ತುಮುಲಗಳಬಿಚ್ಚಿಡಬಲ್ಲ ಲೇಖನ....
ರಾಜೇಶ್,
ಭಾವ ಚೆನ್ನಾಗಿದೆ ಹಿಡಿಸಿತು. ಅಕ್ಕ ಇರಬೇಕು, ನನಗಿದ್ದಾಳೆ, ಗೆಳತಿಯಂತೆ, ಅಮ್ಮನಂತೆ, ಅಣ್ಣನಂತೆ, ಅಪ್ಪನಂತೆ; ಗದರುತ್ತಾಳೆ, ಮುದ್ದಿಸುತ್ತಾಳೆ, ರಮಿಸುತ್ತಾಳೆ, ಸಿಟ್ಟಾಗುತ್ತಾಳೆ, ಸುಮ್ಮನಿರುತ್ತಾಳೆ. ಇಷ್ಟು ಬೇಗ ಮದುವೆ ಬೇಡ ಎನ್ನುವ ನನ್ನ ಪರ ನಿಲ್ಲುತ್ತಾಳೆ, ಪರೀಕ್ಷೆಗೆಂದು ಓದುತ್ತಿದ್ದರೆ ಮಧ್ಯರಾತ್ರಿಯಲ್ಲಿ ಕಾಫಿ ಮಾಡಿ ಜೊತೆ ಕೂತು ಕುಡಿಯುತ್ತಾಳೆ, ಯಾರೂ ಬೇಡವೆನಿಸಿದ ರಾತ್ರಿ ಸುಮ್ಮನೊಂದು ವಾಕಿಗೆ ಕರೆದೊಯ್ಯುತ್ತಾಳೆ ಮತ್ತು ಮಾತೇ ಆಡದೇ ನಾನಿದ್ದೇನೆ ಎಂಬ ಭಾವ ಮೂಡಿಸುತ್ತಾಳೆ, ನನಗೊಬ್ಬ ಅಕ್ಕ ಇದ್ದಾಳೆ. ನಿಮ್ಮ ಬರಹ ಓದಿ ನೆನಪಾದಳು ಮತ್ತು ಇನ್ನಷ್ಟು ಇಷ್ಟವಾದಳು. ಥ್ಯಾಂಕ್ಸ್ :)
ಹೇ...ಅಕ್ಕನ ಚಿಂತೇಲಿ ಕೊರಗಬೇಡ..ನಾವೆಲ್ಲ ಜೊತೆಗಿದ್ವಿ. ಇನ್ಯಾವಾಗ 'ಲಗೋರಿಯಾಟ' ಾಡ್ತೀಯಾ ನೀನು?
-ಧರಿತ್ರಿ
ಮನ ಮುಟ್ಟುವಂತಿದೆ ಒಳ್ಳೆಯ ಬರಹ.
tumba chennagide.
tumba chennagide nanna akkana nenapayitu...
ಯಾಕ್ರೀ ರಾಜೇಶ್... ತುಂಬಾ ದಿನಾ ಆಯ್ತು.. ಏನೂ ಬರೆದೇ ಇಲ್ಲ.. ಸಿಕ್ಕಾಪಟ್ಟೆ ಬ್ಯೂಜಿ ನಾ? ನಿಮ್ಮ ಬರಹಗಳು ಚೆನ್ನಾಗಿರ್ತವೆ.. ಮತ್ತೆ ಬರೀರಿ...
ರಾಜೇಶ್...
ಮನದ ಭಾವನೆಗಳನ್ನು ಪದಗಳಲ್ಲಿ ಚೆನ್ನಾಗಿ ಜೋಡಿಸಿದ್ದೀರಿ.
ನನಗೂ ನನ್ನ ಅಕ್ಕನ ನೆನಪು ಮಾಡಿಸಿದ್ದೀರಿ..
ಎರಡ್ ತಿಂಗ್ಳಿಂದ ಏನೂ ಇಲ್ಲಾ ಸ್ವಾಮಿ.. ದಯವಿಟ್ಟು ಒಂದು ಪೋಸ್ಟ್ ಇದ್ರೆ ಹಾಕಿ ಸಾಮೀ..:)
ಮನದ ನೋವನ್ನು ಪದಗಳಲ್ಲಿ ಇಟ್ಟಾಗ ಕಣ್ಣಲ್ಲಿ ನೀರು ಬಾರದೇ... ಪ್ರೀತಿಯನ್ನು ಯಾರಿಂದ ಪಡೆಯಬೇಕೋ ಅವರು ಇಲ್ಲದೆ ಇದ್ದಾಗ ಅದೆಷ್ಟು ನೋವಲ್ಲವೇ..
ರಾಜೇಶಾ...
ನಾನಿಲ್ಲ ಅನ್ನೋ ಕೊರತೆ ನಿನ್ನನ್ನ ಇಷ್ಟೇಲ್ಲ ಕಾಡತ್ತೆ ಅಂತ ಗೊತ್ತಿರ್ಲಿಲ್ಲ ಕಣೋ :-)
ಈಗ ಬಂದಿದೀನಲ್ಲ, ಬೇಗ ಬೇಗ ಹೊಸದೇನಾದ್ರೂ ಬರಿ. ಕಾಯ್ತಿರ್ತೀನಿ :-)
ಬ್ಲಾಗ್ ತುಂಬ ಚೆನಾಗಿದೆ. ಚೆನ್ನಾಗಿ ಬರೀತೀರಿ.
ಆದರೆ ಅಪ್ಡೇಟ್ ತುಂಬಾ ನಿಧಾನವಾಗಿ ಮಾಡ್ತಿದೀರಿ.
tumbaa cennaagide, mana muttutte..... tumbaa bhaavukaraagi barediddiri......
ಕಾಮೆಂಟ್ ಪೋಸ್ಟ್ ಮಾಡಿ