ಬುಧವಾರ, ಏಪ್ರಿಲ್ 15, 2009

ಸೋಲಿನ ಅಮಲು ಎಂಬ ಬದುಕಿನ ಅಪಭ್ರಂಶು

ಇಡೀ ಕೋಣೆಯ ತುಂಬಾ ಅಸ್ತವ್ಯಸ್ತವಾಗಿ ಏನೇನೋ ಹರಡಿ ಹೋಗಿದೆಯೇನೋ ಎಂಬಂತಿದೆ, ಅಲ್ಲಿಯ ಪ್ರತಿ ವಸ್ತುವು ಒಪ್ಪವಾಗಿ-ಅಚ್ಚುಕಟ್ಟಾಗಿ ತಮ್ಮ ಜಾಗದಲ್ಲಿ ಕುಳಿತಿವೆಯಾದರು ಅಲ್ಲಿ ಎಲ್ಲವು ಅವ್ಯವಸ್ಥಿತ ಅನ್ನುವ ಅಮೂರ್ತ ಭಾವ, ಅವನು ಏನನ್ನೋ ಕಳೆದು ಕೊಂಡಿರುವವನಂತೆ ಹುಡುಕಾಡುತ್ತಿದ್ದಾನೆ, ಅಲ್ಲಿರುವ ಎಲ್ಲವನ್ನು ತಡಕಾಡುತ್ತಿದ್ದಾನೆ, ಅಸಲಿಗೆ ಅವನು ಹುಡುಕುತ್ತಿರುವುದೇನು ಅಥವಾ ಹುಡುಕಲು ಅವನು ಕಳೆದುಕೊಂಡಿರುವುದೇನು ಎಂಬುದರ ಅರಿವೇ ಅವನಿಗಿಲ್ಲ. ಅಲ್ಲಿ ಕತ್ತಲಿಲ್ಲ ಆದರೂ ಅವನಿಗೆ ಪ್ರತಿ ವಸ್ತುವು ಅಗೋಚರ.

ಸುಮ್ಮನೆ ಹೆಜ್ಜೆ ಇಟ್ಟು ಹೊರಟವನ ಕಾಲಿಗೆ ಅದೇನೋ ಎಡ ತಾಕಿ ಮುಗ್ಗರಿಸುತ್ತಾನೆ, ಮತ್ತೆ ಸಾವರಿಸಿ ಕೊಂಡು ಎದ್ದು ನಿಂತು ಕಾಲಿಗೆ ಸಿಕ್ಕ ವಸ್ತುವನ್ನು ಕೈಯಲ್ಲಿ ಹಿಡಿಯ ಹೋಗುತ್ತಾನೆ, ಅದು ಸಿಗಲೊಲ್ಲದು. ಮತ್ತೆ ದಿಟ್ಟಿಸಿ ನೋಡುತ್ತಾನೆ, ಅದು ಏನು? ಊಹೂಃ ಗೊತ್ತಾಗಲಿಲ್ಲ. ನಿಧಾನವಾಗಿ ಅದರತ್ತ ಕೈ ಚಾಚಿ ಆರ್ದ್ರನಾಗುತ್ತಾನೆ, ಅದಾಗಲೇ ಅವನ ಕೈಜಾರಿದೆ. ಆದರೆ ಏನದು? ಅವನ ಮನದಲ್ಲೊಂದು ಪ್ರಶ್ನೆ ಮೂಡುತ್ತದೆ, ಮತ್ತೆ ಅದರತ್ತ ದೃಷ್ಟಿ ಹಾಯಿಸಿ ನೋಡುತ್ತಾನೆ. ಅದು ಕೈಗೆಟುಕುತ್ತಿಲ್ಲ ಮತ್ತು ಕೈಗೆಟುಕದು ಕೂಡ. ಅಷ್ಟರಲ್ಲಿ ಅದು ಅವನ ಕಣ್ಣಿಗೆ ಮಿಂಚಿದಂತೆ ಕಾಣುತ್ತದೆ, ಸಣ್ಣಗೆ ಚೀತ್ಕರಿಸುತ್ತಾನೆ...

ಹೌದು! ಇದೆ? ನಾನು ಹುಡುಕುತ್ತಿದ್ದದ್ದು ಇದೆ? ನಾನು ಕಳೆದು ಕೊಂಡಿದ್ದು ಇದೆ?

ಅದರೆಡೆಗೆ ದೃಷ್ಟಿ ನೆಟ್ಟು ಕುಳಿತುಕೊಂಡು ಬಿಕ್ಕುತ್ತಾನೆ. ಅದು ಅವನು ವರ್ಷಗಳ ಕಾಲ ತನ್ನ ಜೊತೆಗೆ ತುಂಬಾ ಜತನದಿಂದ ಕಾಯ್ದಿರಿಸಿ ಕೊಂಡು, ಇಷ್ಟಿಷ್ಟೇ ಎನುವಷ್ಟು ಕಟ್ಟಿಕೊಂಡಿದ್ದ ಅವನವೇ ಕನಸುಗಳು. ಅವನ ಮನಸ್ಸು ಮರುಗುತ್ತದೆ, ತನ್ನ ಪ್ರತಿ ಕನಸಿಗೂ ಅವನು ಒಂದು ಹೆಸರಿಟ್ಟು ಕೊಂಡಿದ್ದ. ಅವೆಲ್ಲ ಕಳೆದಿವೆ ಅಲ್ಲಿ, ಅಳಿದುಳಿದುದನೆಲ್ಲ ಕೈ ತುಂಬಾ ತುಂಬಿ ಕೊಳ್ಳಲು ಧಾವಿಸುತ್ತಾನೆ, ಕೈ ಹಿಡಿತ ಬಿಗಿಯಾದಾಗ ಸ್ವಲ್ಪವು ಉಳಿಯದೆ ಜಾರಿ ಹೋಗುವ ಜಲಧಾರೆಯಂತೆ ಅಷ್ಟೂ ಅವನ ಕೈಯಲ್ಲಿ ನಿಲ್ಲಲಾರದೆ ಜಾರುತ್ತವೆ, ಮತ್ತೆ ತಡವರಿಸುತ್ತಾನೆ, ಅವನು ಅಸಹಾಯಕನಂತೆ ನಿಲ್ಲುತ್ತಾನೆ, ಇದನ್ನೆಲ್ಲಾ ಕಳೆದು ಕೊಂಡಿದ್ದೆಲ್ಲಿ ಅನ್ನುವುದು ಅವನಿಗೆ ನೆನಪಿಗೆ ಬರುತ್ತಿಲ್ಲ. ಕಳೆದಿದ್ದನ್ನು ಕಳೆದು ಕೊಂಡಲ್ಲೇ ಹುಡುಕ ಬೇಕು ಎಂಬುದು ಅವನಿಗೂ ಗೊತ್ತಿದೆ, ಆದರೆ ಅವನಿಗೆ ಕಳೆದು ಕೊಂಡ ಸ್ಥಳದ ಗುರುತಿಲ್ಲ, ಇಲ್ಲೇ ಹುಡುಕುತ್ತೇನೆ ಅಂದು ಕೊಂಡು ಹುಡುಕುತ್ತಾನೆ, ಸಿಗಲಾರದು ಎಂಬುದು ಗೊತ್ತಿದ್ದರೂ ಮತ್ತಷ್ಟು ಆಸ್ಥೆಯಿಂದ ಹುಡುಕುತ್ತಾನೆ.

ಅವನು ಹಠಮಾರಿಯೇನಲ್ಲ, ಮೊಂಡನಂತು ಅಲ್ಲವೇ ಅಲ್ಲ. ಏನೋ ಮಾಡಲು ಹೊರಡುತ್ತಾನೆ. ಸೋಲುತ್ತೇನೆ ಎಂಬ ಇಲ್ಲದ ಭಯ ಅವನ ಮನವನ್ನು ಕಾಡುತ್ತದೆ. ಆ ಭಯದಿಂದಲೇ ಇನ್ನು ತನ್ನಿಂದಾಗದು ಎಂದು ಕೈ ಚೆಲ್ಲಿ ಕುಳಿತು ಕೊಳ್ಳುತ್ತಾನೆ, ಜೊತೆಗೆ ಅವನ ಆಂತರ್ಯದ ಶಕ್ತಿ ಕುಂದುತ್ತದೆ. ಅವನಿಗೆ ಗೆದ್ದು ಗೊತ್ತೇ ಇಲ್ಲ ಎಂಬಂತೇನು ಇಲ್ಲ. ಅವನು ಕಳೆದು ಕೊಂಡ ಎಲ್ಲ ಕನಸುಗಳು ಅವನೇ ಹೆಣೆದ ಸಂಕೀರ್ಣಗಳು, ಅದು ಅವನೇ ಬರೆದಿಟ್ಟ ಅವನದೇ ಬದುಕಿನಧ್ಯಾಯದ ಹೊನ್ನಿನ ಸಾಲುಗಳು, ಆದರೆ ಈಗ ಅವೆಲ್ಲ ಅವನಿಂದಾಗುತ್ತಿಲ್ಲ.

ಅವನು ಈಗ ಇನ್ನಾತರಲ್ಲೋ ಸೋತಿದ್ದಾನೆ, ಆ ಸೋಲು ಅವನನ್ನು ಯಾವ ಪರಿ ಹೆದರಿಸಿದೆಯೆಂದರೆ ನನ್ನಿಂದ ಏನು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದಾನೆ. ತನ್ನ ಪ್ರತಿ ಸೋಲಿಗೂ ಒಂದು ಕಾರಣ ಕೊಡುತ್ತಾನೆ. ಅವನು ಸೋಲಿನ ಗುಂಗಿನಿಂದ ಹೊರ ಬರುತ್ತಿಲ್ಲ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಲು ಇಲ್ಲ, ಅದು ತಪ್ಪು ಎಂಬುದರ ಅರಿವು ಅವನಿಗೂ ಇದೆ. ಆದರೆ ಸೋಲಿನಲ್ಲೇ ಅವನು ನೆಮ್ಮದಿ ಹುಡುಕುತ್ತಿದ್ದಾನೆ, ಸೋಲಿನ ನೋವು ಅವನಿಗೀಗ ಹಿತವೆನಿಸುತ್ತಿದೆ, ಅದಕ್ಕೇ ಒಗ್ಗಿ ಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ತನ್ನಿಂದ ಗೆಲ್ಲಲಾಗದು ಎಂದು ಈಗಾಗಲೇ ತೀರ್ಮಾನಿಸಿ ಬಿಟ್ಟಿದ್ದಾನೆ, ಪ್ರತಿ ಕನಸಿಗೂ "ಸೋತಿದ್ದೇನೆ, ನನ್ನಿಂದ ಸಾಧ್ಯವಿಲ್ಲ" ಎಂದು ಒಂದು ಅಡಿ ಬರಹ ಬರೆದು ನೇತು ಹಾಕ ಹೊರಟಿದ್ದಾನೆ.

ಎಲ್ಲಾ ಕನಸುಗಳನ್ನು ಕೋಣೆಯ ಮೂಲೆಗೆ ಗುಡಿಸಿದ್ದಾನೆ. ಈಗ ಅವನ ಕಣ್ಣಂಚಿನಲ್ಲಿ ಒಂದು ಹನಿ ಕಣ್ಣೀರು ಇಲ್ಲ, ತುಂಬಾ ಇಷ್ಟ ಪಟ್ಟು ಓದಿ ಮುಗಿಸಿದ ಪುಸ್ತಕದ ಕೊನೆಯ ಪುಟವನ್ನು ಇನ್ನೊಮ್ಮೆ ಎಂದು ಓದುವಂತೆ ಮೂಲೆ ಸೇರಿದ ಕನಸುಗಳತ್ತ ಕೊನೆಯ ಬಾರಿಗೆಂಬಂತೆ ದೃಷ್ಟಿ ಹಾಯಿಸುತ್ತಾನೆ. ಎಲ್ಲಾ ಮುಗಿಯಿತೇನು? ಎಂದು ಮನಸ್ಸಿಗಷ್ಟೇ ಕೇಳುವಂತೆ ಉದ್ಗರಿಸಿ ಕಣ್ಣು ಮುಚ್ಚುತ್ತಾನೆ.

ಮತ್ತೆ ಮೇಲ್ಚಾವಣಿಯಿಂದ ಏನೋ ಕೆಳಗೆ ಬಿದ್ದು ಒಡೆದ ಸದ್ದು, ತಿರುಗಿ ನೋಡುತ್ತಾನೆ ಅಲ್ಲಿ ಇನ್ನೊಂದು ಕನಸು ಬಿದ್ದು ಒಡೆದಿದೆ ಅದರ ಹೆಸರೇ ಬದುಕು.

12 ಕಾಮೆಂಟ್‌ಗಳು:

ವಿನುತ ಹೇಳಿದರು...

ಸೋಲಿನಲ್ಲೂ ಅಮಲು!! ಗಟ್ಟಿಯಾದ ಬರಹ ರಾಜೇಶ್. ಸೋಲೇ ಗೆಲುವಿನ ಮೆಟ್ಟಿಲು ಎ೦ದಿದ್ದರೂ, ಪ್ರತಿ ಹೆಜ್ಜೆಯಲ್ಲಿಯೂ ಸೋಲುವ ವ್ಯಕ್ತಿಯ ಮನಸಿನ ವಿಶ್ಲೇಷಣೆ ಚೆನ್ನಾಗಿದೆ. ನಮ್ಮ ಕನಸುಗಳಿಗೆ ನಾವೇ ಗೋರಿ ಕಟ್ಟುವ ಸಮಯದಲ್ಲಿ, ಮೂಡುವ ತಲ್ಲಣ, ನಿರಾಶೆ, ಹತಾಶೆಗಳ ಚಿತ್ರಣ ಸು೦ದರವಾಗಿದೆ. ಅಭಿನ೦ದನೆಗಳು.

Veena DhanuGowda ಹೇಳಿದರು...

Hi,

Modalaneyadagi EE baraha baredadake thumbu hrudayada dhanyavadagalu :)
solina novu anubhavisidavane bala
prathi dina prathi kshana hosa kanasu mathe adara savu, mattade novina dariyali aseya payana alwa?
thumba chennagi varnisidira
thnks again :)

ಸಾಗರದಾಚೆಯ ಇಂಚರ ಹೇಳಿದರು...

ಸೋಲೇ ಗೆಲುವಿನ ಮೆಟ್ಟಿಲು, ಸೋತಾಗ ಮಾತ್ರ ಪ್ರಬಲವಾಗಿ ಎದ್ದು ಬರಲು ಸಾದ್ಯ,

ಅನಾಮಧೇಯ ಹೇಳಿದರು...

ಅರಳುವ ಹೂವುಗಳೇ ಆಲಿಸಿರಿ
ಬಾಳೊಂದು ಹೋರಾಟ ಮರೆಯದಿರಿ....

....
..
"ಉಳಿಪೆಟ್ಟು ಬೀಳುವ ಕಲ್ಲೆಶಿಲೆಯಾಗಿ ನಿಲ್ಲುವುದು..."

ರಾಜೇಶ್,
ನಿಮ್ಮ ಬರಹ ಓದುತ್ತಾ ಇದ್ದರೆ ಈ ಸಾಲುಗಳೂ ನೆನಪಿಗೆ ಬರುತ್ತಿದೆ....
ಸೋಲಿನ ಬಗ್ಗೆ ವಿಷ್ಲೇಶಿಸಿರುವ ಪರಿ ಚೆನ್ನಾಗಿದೆ....
ಒಳ್ಳೆಯ ಆರ್ಟಿಕಲ್.....

ಜ್ಞಾನಮೂರ್ತಿ ಹೇಳಿದರು...

.....ಹೀಗೆ ಕಳೆದು ಹೋದ ಕನಸುಗಳು ಎಂಬುದು ನಮ್ಮ ಮಟ್ಟಿಗೆ ತುಂಬ ಮುಖ್ಯ ಅನಿಸುವುದಿಲ್ಲ.

ನಾವು ಬದುಕಿನ ಬಗ್ಗೆ ಆಸಕ್ತಿಯಿರುವ ಮನುಷ್ಯರು,ನಮ್ಮ ಬದುಕುಗಳ ಅತ್ಯುತ್ತಮ ಕಾಲವನ್ನು ಕನಸು ಕಾಣಲು ಬಯಸುವವರು....

ಇರುವುದು ಒಂದೇ ಬದುಕು ಅದನ್ನ ಒಡೆಯಲು ಬಿಡಬೇಡಿ..

Ittigecement ಹೇಳಿದರು...

ರಾಜೇಶ್...

ಈ ಲೇಖನ... ನನಗೆ ತುಂಬಾ ಇಷ್ಟವಾಯಿತು...

ಸೋಲಿನ ಮೇಲೆ ಸೋಲು..
ಸೋಲಿನ ಮೇಲೆ ಸೋಲು..
ನನ್ನನ್ನೂ ಧ್ರತಿಗೆಡಿಸಿತ್ತು...

ನಿಮ್ಮ ಈ ಭಾಷ್ಯ... ಮನಸ್ಸಿನಲ್ಲಿ ಉಳಿಯುತ್ತದೆ...

ನೀವು ಇಷ್ಟವಾಗುವದು...
ನಿಮ್ಮ ಇಂಥಹ ಬರಹಗಳಿಂದ....

ಧರಿತ್ರಿ ಹೇಳಿದರು...

ರಾಜೇಶ್..
ತುಂಬಾ ಚೆನ್ನಾಗಿ ಬರೆದುಬಿಟ್ಟಿದ್ದೀರಾ...ನಿರೂಪಣೆ, ಪದ ಬಳಕೆ ತುಂಬಾ ಇಷ್ಟವಾಯಿತು. ಯಾಕೋ ನೆನಪಾಯಿತು, "ಗೆದ್ದ ಕಲಿಗಳು ಬಾಳನ್ನು ಆಳಿ ಇತಿಹಾಸಕ್ಕೆ ವಸ್ತುವಾಗುತ್ತಾರೆ. ಸೋತ ವೀರರು ತಮ್ಮ ಬದುಕಿನ ಇತಿಹಾಸ ತಾವೇ ಬರೆಯುತ್ತಾರೆ"(ಗೌರೀಶ ಕಾಯ್ಕಿಣಿ). ಸೋಲಿನ ಅಮಲು..ಇದು ಬದುಕಿನ ಒಂದು ಮಗ್ಗುಲು! ಸೋತ ವ್ಯಕ್ತಿಯ ಮನದ ತುಮುಲವನ್ನು ಸುಂದರವಾಗಿ ಪದಗಳಲ್ಲಿ ಕಟ್ಟಿಕೊಟ್ಟಿದ್ದೀರಿ. ಆದರೆ ನೆನಪಿಡಿ, ಕೆಲವೊಮ್ಮೆ ಸೋಲುಗಳಿಗೂ ನಮ್ಮನ್ನು ಸೋಲಿಸಲು ಧೈರ್ಯವಿರುವುದಿಲ್ಲ!!!
ಅಭಿನಂದನೆಗಳು ರಾಜೇಶ್
-ಧರಿತ್ರಿ

shivu.k ಹೇಳಿದರು...

ರಾಜೇಶ್,

ಅಭಿನಂದನೆಗಳು...ಒಂದು ಸುಂದರ ಗಾಢತೆಯನ್ನುಂಟುಮಾಡುವ, ಓದಿದ ಮೇಲು ಕಾಡುವ..
ಪಕ್ಕಾ ಹಿಡಿತ ಹೊಂದಿದ ಬರಹವನ್ನು ಕೊಟ್ಟಿದ್ದಕ್ಕೆ...

ಇಲ್ಲಿ ಸೋಲು... ಗೆಲುವು...ಕನಸು ಇತ್ಯಾದಿ.. ಚರ್ಚೆಗಿಂತ ಲೇಖನದುದ್ದಕ್ಕೂ ಒಂದು ವಿಷಾದ ಕಾಣದ ನೆರಳಿನಂತೆ ಹರಿಯುತ್ತದೆ...ಮತ್ತು ಲೇಖನದ ಸಾರ್ಥಕತೆಯನ್ನು ಗಟ್ಟಿಗೊಳಿಸುತ್ತದೆ...

ಮತ್ತೆ ಇಂಥ ವಿಚಾರವನ್ನು ಆಯ್ದುಕೊಂಡಾಗ ಬರವಣಿಗೆಯಲ್ಲಿ ಎದುರಾಗುವ ಪದಕೋಶಗಳ ಜೋಡಣೆಯಲ್ಲಿ ನೀವು ಗೆದ್ದಿದ್ದೀರಿ..ಮತ್ತು ಓದುಗರಿಗೆ ಅದು ಚೆನ್ನಾಗಿ ತಲುಪುತ್ತದೆ ಕೂಡ. ಇದು ಬರಹಗಾರನ ಯಶಸ್ಸು.

ಒಟ್ಟಾರೆ ಒಂದು ಪಕ್ವವಾದ ಬರಹ..ಧನ್ಯವಾದಗಳು.

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಚೇತನಕ್ಕನವರ ಪ್ರೀತಿಯ ಪ್ರತಿಕ್ರಿಯೆ ಹೀಗಿದೆ...

"ಇನ್ನೊಂದು ಕನಸು ಒಡೆದು ಬಿದ್ದಿದೆ, ಅದರ ಹೆಸರು 'ಬದುಕು'!!! "
ಅಬ್ಬಾ ಕಾಡುತ್ತಿದೆ ಇಡಿಯ ಲೇಖನ...

Hema Powar ಹೇಳಿದರು...

ನಿಮ್ಮ ಬರಹಗಳೆಲ್ಲೆಲ್ಲ ನನಗೆ ಅತಿ ಇಷ್ಟವಾದ ಬರಹವಿದು ರಾಜೇಶ್! ವಿಶ್ಲೇಷಣೆ ಮಾಡಲಾಗುತ್ತಿಲ್ಲ, ಒಟ್ಟಿನಲ್ಲಿ ನೆನಪಿನಲ್ಲುಳಿಯುವಂತೆ ಬರೆದಿದ್ದೀರಿ!! ಅಭಿನಂದನೆಗಳು :)

Prabhuraj Moogi ಹೇಳಿದರು...

ನಿಮ್ಮೆಲ್ಲ ಬರಹಗಳಲ್ಲೇ ಇದು ಅತ್ಯಂತ ಮೆಚ್ಚಿನದ್ದು, ಎಲ್ಲಾ ಹೇಳಿದ್ದೀರಿ, ಹೇಳೂ ಹೇಳದ ಹಾಗೆ, ಮಾತಿನಲ್ಲೇ ಶಬ್ದಗಳ ಸಂಕೋಲೆಯಲ್ಲೇ ಬದುಕಿನ ಕನಸುಗಳ ಸಾವನ್ನು ತೋರಿಸಿದ್ದೀರಿ... ಇಡೀ ಲೇಖನ ನನ್ನ ಸತ್ತ ಕನಸುಗಳಿಗೆಲ್ಲ ಮತ್ತೆ ಜೀವ ತುಂಬಿಬಿಟ್ಟಿತು, ಅದೆಷ್ಟು ಅಂತ ಲೆಕ್ಕ ಇಲ್ಲ, ಕನಸುಗಳೆಲ್ಲ ನನಸಾದರೆ ಕನಸಿಗೆ ಅರ್ಥವಿಲ್ಲ ಬಿಡಿ...

ಅನಾಮಧೇಯ ಹೇಳಿದರು...

ಸೂಪರ್ಬ್ ಲೇಖನ ರಾಜೇಶ್.. ಅದರಲ್ಲೂ ಕೊನೆಯ ಸಾಲು ಅಲ್ಟಿಮೇಟ್. ಹೇಮಾ ಅಂದಂತೆ ಬಹುಶಃ ಇದು ನೀವು ಬರೆದುದರಲ್ಲೇ ಬೆಸ್ಟ್.