ಪಿಸು ಮಾತು - ೩
ನನ್ನ ಅಂತರಾಳದ ಅಭಿಸಾರಿಕೆ,
ಇನ್ನು ಗಡಿಯಾರ ಸರಿಯಾಗಿ ಬೆಳಿಗ್ಗಿನ ಜಾವದ 6:30 ರ ಗೆರೆ ದಾಟಿಲ್ಲ, ಇವತ್ತು 14 ಫೆಬ್ರವರಿ, ಶನಿವಾರ ಪ್ರೇಮಿಗಳ ದಿನ, ನಿನ್ನ ಹಣೆಯ ಮೇಲೇರಿ ಕುಳಿತಿದ್ದ ನವಿರು ಕೂದಲನ್ನು ಸರಿಸಿ, ಅಲ್ಲೊಂದು ಸಿಹಿ ಮುತ್ತನ್ನು ಪ್ರತಿಷ್ಟಾಪಿಸಿದೆ.
ಇವತ್ತು ನಿನ್ನ ಪಾಲಿನ ಕೆಲಸಗಳೆಲ್ಲವನ್ನು ನಾನೇ ಮಾಡಿ ಮುಗಿಸಿಬಿಡಬೇಕು ಎಂದು ತೀರ್ಮಾನಿಸಿಯೇ ಎದ್ದಿದ್ದೆ, ಕಿಟಕಿಯಿಂದ ಬೀಸುತ್ತಿದ್ದ ತಂಡಿ ಗಾಳಿಯನ್ನು ತಡೆದು ನಿಲ್ಲಿಸಲು ಕಿಟಕಿಯ ಬಾಗಿಲನ್ನು ತುಸು ಓರೆ ಮಾಡಿ, ನಿನಗೆ ಹೊದಿಕೆಯನ್ನು ಹೊದ್ದಿಸಿ, ಕೋಣೆಯ ಬಾಗಿಲನ್ನು ಮುಚ್ಚಿ, ಹೊರ ಬಂದವನು. ಅಂಗಳ ಗುಡಿಸುವ ಪೊರಕೆಯನ್ನು ಕೈಯಲ್ಲಿ ಹಿಡಿದೆ, ಪೊರಕೆ ಅದೆಷ್ಟು ಒರಟಾಗಿದೆ, ನಿನ್ನ ಮೃದುಲ ಕೈಗಳಲ್ಲಿ ದಿನನಿತ್ಯ ಇದನ್ನು ಹೇಗೆ ಹಿಡಿಯುತ್ತೀಯ? ಹೀಗೆ ಯೋಚಿಸುತ್ತಾ ಅಂಗಳದ ಕಸ ಹೊಡೆದು, ನೀರೆರಚಿ, ಹೊಸ್ತಿಲು ಸಾರಿಸಿದೆ. ರಂಗೋಲಿ ಪುಡಿಯಿಂದ ಹೊಸ್ತಿಲಿನ ಮೇಲೆ ಪುಟ್ಟದಾಗಿ ನಾಲ್ಕು ಓರೆ ಗೆರೆ ಎಳೆದು, ಮಧ್ಯ ಭಾಗದಲ್ಲಿ ಒಂದು ಶಂಕು ಬರೆದು, ಅಂಗಳದಲ್ಲಿ ಒಂದು ನಕ್ಷತ್ರ ಬರೆದೆ. ನಾನು ಬರೆದಿದ್ದು ರಂಗೋಲಿಯ, ನನಗೆ ಏಕೋ ಅನುಮಾನ ಕಾಡಿತು, ಅದರ ಕೆಳಗೆ ಬರೆದು ಬಿಡಲೇ ಇದು "ರಂಗೋಲಿ" ಎಂದು, ರಂಗೋಲಿಗೆ ಬಣ್ಣ ತುಂಬುವ ಕೆಲಸ ನನ್ನಿಂದ ಸಾಧ್ಯವೇ ಇಲ್ಲ ಎಂದೆನಿಸಿ ಅದನ್ನು ಅಲ್ಲಿಯೇ ಬಿಟ್ಟೆ.
ಮುಂದಿನ ಕೆಲಸ ಕಸ ಗುಡಿಸಿ-ನೆಲ ಒರೆಸೋದು, ಒಂದು ಲೋಟ ಚಹಾ ಬೇಕೆ ಬೇಕು ಎಂದೆನಿಸಿತು, ಸ್ನಾನ ಮಾಡದೆ ಅಡುಗೆ ಮನೆ ಹೊಕ್ಕರೆ ನೀನು ದುರ್ಗಾವತಾರ ಎತ್ತುವೆ ಎಂದು ನೆನಪಾಗಿ ಸುಮ್ಮನಾದೆ. ಸೊಂಟಕ್ಕೆ ಬುದ್ದಿವಾದ ಹೇಳಿ ಒಳ ಮನೆಯ ಪೊರಕೆ ಕೈಯಲ್ಲಿ ಹಿಡಿದು, ತುಸು ಬಾಗಿ ಕಸ ಗುಡಿಸುವಾಗ, ನಾಳೆಯಿಂದ ಕಸ ಹಾಕಲೇ ಬಾರದೆಂದು ತೀರ್ಮಾನಿಸಿದೆ. ಒಂದು ಚಿಕ್ಕ ಪಾತ್ರೆಯಲ್ಲಿ ನೀರು ತುಂಬಿ, ಒರೆಸುವ ಬಟ್ಟೆಯನ್ನು ಅದರಲ್ಲಿ ನೆನೆಸಿ ತೆಗೆದು ನೆಲ ಒರೆಸಲು ಆರಂಭಿಸಿದೆ. ನನ್ನ ಬೆನ್ನು ವಿಕಾರವಾಗಿ ನರಳಲಾರಂಭಿಸಿತ್ತು, ಕಂದಾ ದಿನ ನಿತ್ಯ ನೀನು ಇಷ್ಟು ನೋವನ್ನು ಅನುಭವಿಸಿ ಇಷ್ಟೆಲ್ಲಾ ಕೆಲಸ ಮಾಡುತ್ತೀಯ, ನಾಳೆಯಿಂದ ನಿನ್ನ ಪಾಲಿನ ಅರ್ಧ ಕೆಲಸ ನಾನು ಮಾಡುತ್ತೇನೆ ಆಯ್ತಾ ಅಂದು ಕೊಂಡೆ. ಒಟ್ಟಿನಲ್ಲಿ ಮನೆ ಗುಡಿಸಿ, ಒರೆಸಿ ಮುಗಿದಾಗ ನನಗೆ ನೆಟ್ಟಗೆ ನಿಲ್ಲಲು ಸರಿಯಾಗಿ 3-4 ನಿಮಿಷ ಬೇಕಾಯಿತು, ಸೊಂಟ ಪೂರ್ಣ ಬಾಗಿ ಮಂಥರೆಯನ್ನು ಹೋಲುತ್ತಿತ್ತು. ಅದು ಹೇಗೋ ಮಾಡಿ ಸುಧಾರಿಸಿಕೊಂಡು ನಿಂತರೆ, ಸ್ನಾನಕ್ಕೆ ನೀರು ಬೆಚ್ಚಗೆ ಕಾದು ಕುಳಿತಿತ್ತು.
ಸ್ನಾನ ಮುಗಿಸಿ, ನಮ್ಮ ಬೀದಿಯ ಕೊನೆಯಲ್ಲಿರುವ ಅಮ್ಮನವರ ಗುಡಿಗೆ ಹೋಗಿ, ನಿನ್ನ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಿಸಿದೆ, ನಿನಗೆಂದು 3 ರಕ್ತಗೆಂಪು ಗುಲಾಬಿ ಹೂವು, ಅದರ ಜೊತೆಗೆ ಒಂದು ಮೊಳ ಮಲ್ಲಿಗೆ ಕೊಡುವಂತೆ, ದೇವಸ್ಥಾನದೆದುರಿನ ಹೂಮಾರುವವಳಿಗೆ ಕೇಳಿದೆ, ಅವಳು ನಸು ನಕ್ಕು ನುಲಿಯುತ್ತ ಅಮ್ಮಾವ್ರಿಗಾ ಬುದ್ಧಿ ಎಂದಳು. ಅವಳ ಮಾತಿಗೆ ಏಕಾಏಕಿ ಏನು ಉತ್ತರಿಸ ಬೇಕೆಂದು ತಿಳಿಯದೆ ಸಂಕೋಚದ ಮುದ್ದೆಯಾಗಿದ್ದೆ ನಾನು, ನೀನು ತುಂಬ ನೆನಾಪಗಿದ್ದೆ ಆವಾಗ.
ಮನೆಗೆ ಬಂದವನೇ ಪ್ರಸಾದ, ಹೂವು ದೇವರ ಕೋಣೆ ಸೇರಿಸಿ, ನೇರ ನುಗ್ಗಿದ್ದೆ ಅಡುಗೆ ಮನೆಗೆ. ಈಗ ಏನು ಮಾಡುವುದು, ಮೊದಲು ಒಲೆ ಒರೆಸಿ, ಪಾತ್ರೆ ತೊಳೆದು ಹಾಲು ಕಾಯಿಸ ಬೇಕು. ತಿಂಡಿ ಏನು ಮಾಡುವುದು, ನಿನಗೆ ಪಲಾವ್ ಇಷ್ಟ. ನನಗೆ ಮಾಡಲು ಬರುತ್ತಾ, ನಾನು ಮಾಡಿದರೆ ಅದು ಚೆನ್ನಾಗಿರುತ್ತಾ. ಆಗ ನನಗೆ ನೆನಪಾಗಿದ್ದೇನು ಗೊತ್ತೇನೆ ಶ್ರೀಮತಿ...
"ಭೀಮ ಸೇನ ನಳ ಮಹಾರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹಾನೀಯರಲ್ಲವೇ..."
ಇನ್ನೇಕೆ ತಡ, ಕೆಲಸ ಆರಂಭಿಸಿದೆ, ಒಲೆ ಸ್ವಚ್ಚವಾಗುತ್ತಿದ್ದಂತೆ, ಹಾಲಿಟ್ಟು ಕಾಯಿಸಿ, ಸ್ವಲ್ಪವೇ ಸ್ವಲ್ಪ ನೀರಿಟ್ಟು, ಮುಕ್ಕಾಲು ಭಾಗದಷ್ಟು ಹಾಲು ಸುರಿದು, ಮಿತವಾಗಿ ಟೀ ಪುಡಿ, ಹಿತವಾದಷ್ಟು ಸಕ್ಕರೆ ಬೆರೆಸಿ ಕಾಯಲು ಇಟ್ಟೆ. ಇನ್ನೊಂದೆಡೆ ತರಕಾರಿ ಹೆಚ್ಚಿ, ಅಕ್ಕಿ ಆರಿಸಿ, ಎಲ್ಲ ಮಸಾಲೆ ಹುರಿದಿಟ್ಟು ಕೊಂಡೆ. ಅಷ್ಟರಲ್ಲಾಗಲೇ ಟೀ ತಯಾರಾಗಿತ್ತು, ಆತುರದಲ್ಲಿ ಮಸಿ ಬಟ್ಟೆ ಮರೆತು ನೇರವಾಗಿ ಪಾತ್ರೆಗೆ ಕೈ ಹಾಕಿ, ಕೈ ಸುಟ್ಟಿತು . ಆಗ ನಿನ್ನ ಬಳಿ ಓಡಿ ಬರೋಣವೆಂದು ಕೊಂಡೆ, ದಿನ ನಿತ್ಯ ನೀನು ನೋವನ್ನು ಅನುಭವಿಸುವಾಗ ನಾನು ಇರೋದಿಲ್ಲ ಅಲ್ವ, ನನ್ನ ಬಗ್ಗೆ ನನಗೆ ಬೇಸರವಾಯ್ತು ರಾಣಿ. ಟೀ ಒಂದು ಲೋಟಕ್ಕೆ ಬಗ್ಗಿಸಿ, ಉಳಿದಿದ್ದನ್ನು ಫ್ಲಾಸ್ಕ್ ಗೆ ಹಾಕಿಟ್ಟೆ. ಮಸಾಲೆ ಹುರಿದು, ಹಸಿ ಮೆಣಸು, ಬೆಳ್ಳುಳ್ಳಿ ಮಿಶ್ರಣ ಮಾಡಿ, ರುಬ್ಬಿಟ್ಟು ಕೊಂಡೆ. ಹದವಾದ ಎಣ್ಣೆಯಲ್ಲಿ ಒಗ್ಗರಣೆ ಹಾಕಿ, ಎಲ್ಲ ಸೇರಿಸಿ ಕುಕ್ಕರ್ ಕೂಗಿಸಿದೆ, ಅಷ್ಟರಲ್ಲಿ ಅಡುಗೆ ಮನೆ ಸ್ವಚ್ಚ ಮಾಡಿ, ಪಾತ್ರೆ ಕೂಡ ತೊಳೆದು ಮುಗಿಸಿದೆ.
ಅಡುಗೆ ಮನೆಯಲ್ಲಿ ದಿಗ್ವಿಜಯ ಸಾಧಿಸಿದೆ ಎಂಬಂತೆ ನಿಂತು, ಪಲಾವಿನ ರುಚಿ ನೋಡಿದವನಿಗೆ ದಿಗಿಲು ಬಡಿದಿದ್ದೆಂದರೆ ಉಪ್ಪು ಹಾಕಿಯೇ ಇರಲಿಲ್ಲ. ಮತ್ತೆ ಒಂದು ಲೋಟದಲ್ಲಿ, ಸ್ವಲ್ಪ ನೀರು ತೆಗೆದು ಕೊಂಡು, ಸ್ವಲ್ಪ ಉಪ್ಪನ್ನು ಆ ನೀರಿನಲ್ಲಿ ಬೆರೆಸಿ, ಪಲಾವಿಗೆ ಸೇರಿಸಿ, ಮತ್ತೆ ಒಲೆಯ ಮೇಲಿಟ್ಟೆ. ಪಲಾವ್ ಈಗ ಬಿಸಿ ಬೆಳೆ ಬಾತ್ ಆಗ ಹೊರಟಿತ್ತು. ಇಳಿಸಿ ನೋಡಿದರೆ, ನೀರು ಸ್ವಲ್ಪ ಜಾಸ್ತಿ ಎಂದೆನಿಸಿದರು, ಪರವಾಗಿಲ್ಲ ಚೆನ್ನಾಗಿದೆ ಅಂತ ಸಮಾಧಾನವಾಯಿತು.
ಅಂದ ಹಾಗೆ ನಾನು ಈ ಪತ್ರ ಏಕೆ ಬರೆದಿಟ್ಟೆ ಗೊತ್ತ ಪ್ರಾಣವೇ, ಇವತ್ತು ಪ್ರೇಮಿಗಳ ದಿನ, ನಿನ್ನನ್ನು ಎಬ್ಬಿಸಿ ನಿನಗೆ ಶುಭ ಕೋರೋಣ ಎಂದು ಕೊಂಡರೆ, ಏಕೋ ಮನಸ್ಸಿಗೆ ನಿನ್ನ ನಿದ್ದೆ ಹಾಳು ಮಾಡುವುದು ಇಷ್ಟವಿರಲಿಲ್ಲ. ಪ್ರತಿ ದಿನ ನಾನು ಹೊರಡುವುದರೊಳಗೆ ಎಲ್ಲ ತಯಾರು ಮಾಡಿ ಕೊಡುವ ನಿನಗೆ, ಇವತ್ತಾದರೂ ನೀನು ಏಳುವ ಮುನ್ನ ಎಲ್ಲಾ ತಯಾರು ಮಾಡಿರಬೇಕು ಎಂದು ಬೇಗ ಎದ್ದೆ. ನಿನ್ನನ್ನು ಹೊರಗೆಲ್ಲಾ ಹೋಟೆಲ್ಲಿಗೆ ಕರೆದೊಯ್ದು, ಇನ್ನೆಲ್ಲೋ ಖರೀದಿಗೆ ಕರೆದೊಯ್ದು ವ್ಯಯಿಸುವುದು ನನ್ನಿಂದ ಆಗದ ಮಾತು, ಮತ್ತು ನಿನಗೆ ಅದು ಇಷ್ಟವು ಆಗಲ್ಲ. ನಾನು ನಿನ್ನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎನ್ನುವುದು, ನನ್ನ ಕೈ ಸುಟ್ಟಿತಲ್ಲ ಅಡುಗೆ ಮನೆಯ ಬೆಂಕಿ, ಅದರಷ್ಟೇ ಸತ್ಯ. ಇನ್ನೆಲ್ಲೋ ಸುಖವಾಗಿ ಬೆಳೆದು, ನನ್ನ ಮನೆಯ ನಂದಾದೀಪ ಬೆಳಗಲು ಬಂದ ಬಾಳ ಜ್ಯೋತಿ ನೀನು, ನಿನಗೆ ಅಗತ್ಯ ವಿಚಾರಗಳಲ್ಲಿ ಯಾವುದೇ ಕೊರತೆ ಮಾಡುವುದಿಲ್ಲ, ಆದರೆ ಇರುವುದರೊಳಗೆ ನಾಲ್ಕು ಕಾಸು ನಾಳಿನ ಜೀವನಕ್ಕೆ ಎತ್ತಿಡೋಣ, ನಾಳೆ ಬರುವ ನಮ್ಮ ಕಂದಮ್ಮನ ಬದುಕನ್ನು ಕಟ್ಟಲು ಆ ಸೊತ್ತನ್ನು ಬಳಸೋಣ, ಏನಂತೀಯ, ನನಗೆ ಗೊತ್ತು ನೀನು ನನ್ನ ಯಾವ ಮಾತಿಗೂ ಇಲ್ಲ ಎಂದವಳಲ್ಲ, ನೀನೀಗ ನನ್ನೆದುರು ನಿಂತಿದ್ದರೆ ಹಾಗೆ ನನ್ನ ಭುಜಕ್ಕೊರಗುತ್ತಿದ್ದೆ, ನಿನ್ನ ಕಣ್ಣೀರು ನನ್ನ ಎದೆಯ ಮೇಲೆ ಇಳಿಯುತ್ತಿತ್ತು.
ನಿನಗೆಂದು ಟೀ ತಯಾರಿದೆ, ನಿನ್ನಿಷ್ಟದ ಪಲಾವ್ ಮಾಡಿಟ್ಟಿದ್ದೇನೆ, ದೇವರ ಕೋಣೆಯಲ್ಲಿ ಸಿಂಧೂರವಿದೆ, ಅದರ ಪಕ್ಕದಲ್ಲಿ ಹೂವಿದೆ, ಮೂರು ಗುಲಾಬಿ ಮುಡಿದು, ಅದರ ಸುತ್ತ ಮಲ್ಲಿಗೆ ಏರಿಸಿ ಮುಡಿದು ಕೊಂಡು ಬಿಡು, ತಿಳಿ ಕೇಸರಿ ಬಣ್ಣದ ಸೀರೆ ಉಟ್ಟು ಸಿದ್ಧಳಾಗಿರು, ಅದರಲ್ಲಿ ನೀನು ಬಹಳ ಮುದ್ದಾಗಿ ಕಾಣುವೆ, ಇಬ್ಬರು ಕೈ ಹಿಡಿದು, ನವ ಜೋಡಿಯಂತೆ ಸಂಜೆ ಒಂದು ಸುತ್ತು ವಿಹರಿಸೋಣ, ಬದುಕಿಗಾಗಿ ಅದಿನ್ನೆಷ್ಟೋ ಕನಸುಗಳಿವೆ ನನ್ನ ಬಳಿ, ಸಂಜೆ ಎಲ್ಲಾ ಹೇಳಿ ಕೊಳ್ಳುತ್ತೇನೆ, ಮುದ್ದಾದ ಒಂದು ಬದುಕು ಕಟ್ಟಿ ಕೊಳ್ಳೋಣ, ಪ್ರೀತಿಯಿಂದ ಎಂದಿನಂತೆ ಜೊತೆ ನಡೆಯಲು ಸಿದ್ಧಳಾಗಿರು, ನಾವು ಈ ಬದುಕಿನಲ್ಲಿ ಕ್ರಮಿಸ ಬೇಕಾದ ದೂರ ಇನ್ನೂ ಬಹಳವಿದೆ.
ಇಂತಿ,
- ಕೇವಲ ನಿನ್ನವನು