ಪಿಸು ಮಾತು - ೫
(ಹುಡುಗಿಯ ಮನಸ್ಸಿನ ತುಮುಲಗಳು ಹೇಗಿರಬಹುದು ಪ್ರೀತಿಯಿಂದ ಹೊರ ನಡೆದಾಗ ಅನ್ನೋದು ಒಂದು ಯಕ್ಷ ಪ್ರಶ್ನೆಯೇ ಸರಿ, ಹೀಗಿರಬಹುದೇನೋ ಎಂದು ಊಹಿಸಿಕೊಂಡು ಈ ಪತ್ರ ಬರೆದಿದ್ದೇನೆ. ಅಂದ ಹಾಗೆ ಇದು ನನ್ನ ಹಿಂದಿನ ಬರಹಗಳಿಗೆ ಮತ್ತು
ಧರಿತ್ರಿಯಲ್ಲಿ ಪ್ರಕಟವಾಗಿರುವ ಪ್ರೇಮ ಪತ್ರಕ್ಕೆ ಉತ್ತರ ನೀಡುವ ಬಾಲಿಶ ಪ್ರಯತ್ನ. ಎಂದಿನಂತೆ ತಪ್ಪಿದ್ದರೆ ಕ್ಷಮಿಸಿ ತಿದ್ದುತ್ತೀರಿ ಎಂಬ ನಂಬಿಕೆಯಿದೆ.)
ಪ್ರೇಮ ಲೋಕದ ಹಿಮ ಬಿಂದು,
ಹೀಗೆ ಕರೆಯುವ ಮುನ್ನ "ನನ್ನ ಪ್ರೀತಿಯ" ಅಂತ ಸೇರಿಸಲು ಯಾಕೋ ಇವತ್ತು ಮನಸ್ಸು ಕೇಳುತ್ತಿಲ್ಲ ಗೆಳೆಯ, ನಾನು ಆ ಯೋಗ್ಯತೆ ಕಳೆದುಕೊಂಡಿದ್ದೇನೆ ಎಂದು ನೀನು ಹೇಳುತ್ತೀಯೇನೋ, ನನ್ನ ಬಳಿ ಅದಕ್ಕೆ ಉತ್ತರವಿಲ್ಲ. ನೀನೂ ನನಗಿನ್ನು ಬೇಡ ಎಂದು ತೀರ್ಮಾನಿಸಿ ನಿನ್ನೆದುರು ಹಾಗೆ ನಿಂತು ಕಣ್ಣಿಗೆ ಕಣ್ಣು ಬೆರೆಸಲಾಗದೆ ಒತ್ತರಿಸಿ ಬರುತ್ತಿದ್ದ ದುಃಖ ತಡೆದು
ಕ್ಷಮಿಸಿ ಬಿಡು ಇಲ್ಲಿಂದ ಮುಂದೆ ನಾವು ಒಂದೇ ದಾರಿಯಲ್ಲಿ ಸಾಗಲಾರೆವು ಎಂದು ನಾನೇ ಅಂದ ಕ್ಷಣ ನನಗೆ ಈ ಭೂಮಿ ಇಲ್ಲೇ ಬಾಯಿ ಬಿಟ್ಟು ಬಿಡಬಾರದೆ ಎಂದೆನಿಸಿದ್ದು ಸುಳ್ಳಲ್ಲ.
ಪ್ರೀತಿಸಲು ನೂರು ಕಾರಣಗಳು ಬೇಕು, ಪ್ರೀತಿ ನಿರಾಕರಿಸಲು ಕಾರಣವೇ ಬೇಕಾಗುವುದಿಲ್ಲ ಎಂಬ ನಿನ್ನ ಮಾತನ್ನು ನಾನು ಎಂದಿಗೂ ಒಪ್ಪಲಾರೆ ಗೆಳೆಯ. ಇಂದು ಈ ಪ್ರೀತಿ ಮುಂದುವರೆಸಲು ಸಾಧ್ಯವಿಲ್ಲ ಎಂದೆನಲು ನನ್ನಲ್ಲಿ ಸಾವಿರ ಕಾರಣಗಳಿವೆ ಹುಡುಗ.
ನಿನ್ನಲ್ಲಿಂದ ಬಂದು ಅಮ್ಮನಿಗೆ ಮುಖವನ್ನು ತೋರಿಸದೇ ನೇರ ಸ್ನಾನ ಗೃಹಕ್ಕೆ ಹೋದವಳು, ಅನಾಮತ್ತು ೫ ಬಿಂದಿಗೆ ತಣ್ಣೀರು ಸುರಿದು ಕೊಂಡಿದ್ದೆ, ಆ ತಣ್ಣೀರಿನ ನಡುವೆ ನನ್ನ ಕಣ್ಣೀರು ಕಾಣದೆ ಹೋಗಿ ಬಿಡಲೆಂದು. ನನ್ನಿಂದ ಆಗಲಿಲ್ಲ ಗೆಳೆಯ, ಅಮ್ಮನಿಗೆ ಮುಖ ಕೊಟ್ಟು ಮಾತನಾಡಲಾಗಲಿಲ್ಲ, ಅಪ್ಪನ ಮಾತಿಗೆ ಉತ್ತರಿಸಲಾಗಲಿಲ್ಲ. ನಿನ್ನನ್ನು ಪ್ರೀತಿಸಿದ ಮೇಲೆ ನನ್ನ ಮನೆಯಲ್ಲಿ ನಾನು ಪರಕೀಯಳೇನೋ ಎಂದೆನಿಸಲಾರಂಭಿಸಿ ಬಿಟ್ಟಿತು ಕಣೋ.
"ನನ್ನ ಮುದ್ದು ಮಗಳೇ ನಿನಗೆ ಒಬ್ಬ ಒಳ್ಳೆ ಹುಡುಗನನ್ನು ನೋಡಿ ಅಂಗಳಕ್ಕೆಲ್ಲ ಚಪ್ಪರ ಹಾಕಿ, ಚೆಂದದ ಅಲಂಕಾರದಲ್ಲಿ, ಗುರು ಹಿರಿಯರ ಎದುರಲ್ಲಿ, ಮತ್ತು ಎಲ್ಲ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟು, ಊರಿನವರೆಲ್ಲ ಎಷ್ಟು ಚೆನ್ನಾಗಿತ್ತು ಮದುವೆ, ಹಸೆ ಮಣೆಯ ಮೇಲೆ ನಿನ್ನ ಮಗಳು ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಾಣುತ್ತಿದ್ದಳು, ಅದೆಷ್ಟು ಮುದ್ದಾಗಿದ್ದಾಳೋ ನಿನ್ನ ಮಗಳು ಎಂದೆನ್ನ ಬೇಕು" ಎಂದು ಅಪ್ಪ ನನ್ನ ತಲೆ ನೇವರಿಸಿ ನುಡಿದಾಗ ನೀನು ಅದೆಷ್ಟು ನೆನಪಾಗಿದ್ದೆ ಗೊತ್ತಾ ಗೆಳೆಯ, ನಾನು ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ಅಪ್ಪನ ಮಡಿಲಲ್ಲಿ ಮುಖ ಹುದುಗಿಸಿ ಮಲಗಿದರೆ, ಆಗ ಕಣ್ಣೀರು ತುಂಬಿ ಅಪ್ಪ ಏನೆಂದರು ಗೊತ್ತ
"ಅಪ್ಪ-ಅಮ್ಮನ್ನ ಬಿಟ್ಟು ಹೋಗ ಬೇಕು ಅಂತ ಅಳ್ತೀಯಲ್ಲೋ ಕಂದ, ನನಗೆ ಗೊತ್ತು ನಿನಗೆ ಎಷ್ಟು ಕಷ್ಟ ಆಗುತ್ತೆ ಅಂತ, ಎಲ್ಲರೆದುರು ನಿನ್ನ ಮದುವೆ ತುಂಬಾ ಚೆನ್ನಾಗಿ ಮಾಡಿ ಕೊಡಬೇಕು ಅನ್ನೋದೇ ನನ್ನ ಆಸೆ, ನಿನ್ನ ನೋಡಿ ಎಲ್ಲಾರು ಎಂತಹ ಸಂಸ್ಕಾರದಿಂದ ಮಗಳನ್ನು ಬೆಳೆಸಿದ್ದಾನೆ ಅಂತ ಖುಷಿ ಪಡಬೇಕು, ಮತ್ತು ನಾನು ಅವರ ಮಾತು ಕೇಳಿ ಹೆಮ್ಮೆ ಪಡಬೇಕು." ಎಂದು ಹೇಳಿ, ಅಮ್ಮನ ಕುರಿತು
"ನೋಡೇ ನಮ್ಮ ಮಗಳು ಮದುವೆ ಆಗಿ ಅಪ್ಪ-ಅಮ್ಮನ್ನ ಬಿಟ್ಟು ಹೋಗೋದಿಲ್ಲ ಅಂತ ಅಳ್ತಾ ಇದ್ದಾಳೆ." ಎಂದಾಗ ಅದಕ್ಕೆ ದನಿಗೂಡಿಸಿದ ಅಮ್ಮ
"ಪುಟ್ಟ, ನಿಮ್ಮಪ್ಪನ ಒಂದೇ ಒಂದು ಆಸೆ ಕಣೋ ಬಂಗಾರಿ ಇದು, ನೀನು ಮದುವೆ ಆಗಲೇ ಬೇಕು ಕಂದ, ಹಠಮಾಡ ಬಾರದು ಚಿನ್ನಾ" ಅಂತ ನನ್ನ ಅಪ್ಪಿ ಹಿಡಿದಿದ್ದಳು. ಯಾಕೋ ನೀನು ನನ್ನ ತಬ್ಬಿ ಹಿಡಿದಿದ್ದು ಕೂಡ ಇಷ್ಟು ಹಿತವಾಗಿರಲಿಲ್ಲವೇನೋ ಅಂತ ಮೊದಲ ಬಾರಿಗೆ ಅನ್ನಿಸಿ ಬಿಟ್ಟಿತು ಕಣೋ ಗೆಳೆಯ.
ರಾತ್ರಿಯೊಬ್ಬಳೆ ಕೋಣೆ ಸೇರಿ ಸದ್ದೇ ಮಾಡದೆ ಅದೆಷ್ಟು ಅತ್ತು ಬಿಟ್ಟಿದ್ದೆ ಗೊತ್ತ ಗೆಳೆಯ, ನೀನು ತುಂಬಾ ನೆನಪಾಗಿದ್ದೆ ಅವತ್ತು. ನಾನು ಪ್ರೀತಿಸಿ ತಪ್ಪು ಮಾಡಿದೆನೇನು ಎಂಬ ಪ್ರಶ್ನೆ ಜೀವ ಹೋಗುವಷ್ಟು ಕಾಡಿದ್ದೆ ಆ ರಾತ್ರಿ. ನೀನು ಯಾವಾಗಲು ಹೇಳ್ತೀಯಲ್ಲ
"ಪ್ರೀತಿಸಿದ ಮೇಲೆ ಮನೆಯವರು ಚಪ್ಪರ ಹಾಕಿ ಮದುವೆ ಮಾಡಿ ಕೊಡ ಬೇಕು ಅಂತ ನಿರೀಕ್ಷಿಸೋದು ತಪ್ಪು, ಒಪ್ಪಿದರೆ ಸಂತೋಷ, ಒಪ್ಪದಿದ್ದರೆ ನಾವು ಮದುವೆ ಆಗಿ ಇವರಿಬ್ಬರನ್ನು ಬೇರೆ ಮಾಡಿದ್ದಿದ್ದರೆ ಎಂತಹ ತಪ್ಪಾಗುತ್ತಿತ್ತು ಅಂತ ಅವರಿಗೇ ಅನ್ನಿಸಿ ಬಿಡುವಷ್ಟು ಚೆಂದಗೆ ಬದುಕಿ ಬಿಡೋಣ", ನಿನ್ನ ಜೀವನ ಪ್ರೀತಿಗೆ ನೀನೆ ಸಾಟಿ ಗೆಳೆಯ, ಆದರೆ ನನ್ನಿಂದ ಇಂದು ಸಾಧ್ಯವಾಗುತ್ತಿಲ್ಲ ಕಣೋ. ಯಾಕೋ ನನಗೆ ಇವತ್ತು ಈ ಮಾತು ಇಷ್ಟ ಆಗುತ್ತಿಲ್ಲ ಕ್ಷಮಿಸಿ ಬಿಡು ಗೆಳೆಯ. ನನ್ನ ಮದುವೆಗೆ ಚಪ್ಪರ ಇರಲೇ ಬೇಕು, ನನಗೋಸ್ಕರ ಅಲ್ಲದಿದ್ದರೂ ಅಪ್ಪ-ಅಮ್ಮನಿಗೊಸ್ಕರ ಮತ್ತು ಅವರ ಗೌರವಕ್ಕೋಸ್ಕರ. ನನ್ನಪ್ಪ ಅಂದರೆ ಊರಿನವರಿಗೆಲ್ಲ ತುಂಬು ಗೌರವ, ಅದನ್ನು ನಮ್ಮ ಸ್ವಾರ್ಥಕ್ಕಾಗಿ ಕಳೆದು ಬಿಡಲೇನೋ ಗೆಳೆಯ.
ಅಪ್ಪ-ಅಮ್ಮ ನಮ್ಮ ಪ್ರೀತಿಗೆ ಒಪ್ಪಲಾರರು ಗೆಳೆಯ ನಮ್ಮಿಬ್ಬರದು ಬೇರೆ ಬೇರೆ ಜಾತಿ, ಮತ್ತು ಜಾತಿ ಬಿಟ್ಟವಳು ಎಂದೆನಿಸಿ ಕೊಂಡು ನಿನ್ನ ಜೊತೆ ಬಂದು ಬಿಡಲು ನಾನು ಸಿದ್ಧಳಾದರು. ನಾಳೆ ನಮ್ಮ ಮಗುವಿನದು ಯಾವ ಜಾತಿ ಗೆಳೆಯ. ನೀನು ಯಾವಾಗಲು ಹೇಳುತ್ತಿದ್ದೆಯಲ್ಲ
ಜಗತ್ತಿನಲ್ಲಿರುವುದು ಕೇವಲ ಎರಡೇ ಜಾತಿ ಒಂದು ಗಂಡು-ಇನ್ನೊಂದು ಹೆಣ್ಣು ಅಂತ, ಆದರೆ ಇದನ್ನು ಯಾವ ಅರ್ಜಿಯ ಜಾತಿಯ ಕಾಲಂ ನಲ್ಲಿ ಬರೆದರೆ ನಮ್ಮ ಸರ್ಕಾರ ಮಾನ್ಯತೆ ನೀಡುತ್ತದೆ ಹೇಳು ಹುಡುಗ, ನಮ್ಮದು ಹೆಸರಿಗಷ್ಟೇ ಕಣೋ ಜಾತ್ಯಾತೀತ ರಾಷ್ಟ್ರ. ನಾನು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಾದ ಕ್ಷಣ ಅಪ್ಪ-ಅಮ್ಮನನ್ನು ಕಳೆದು ಕೊಂಡು ಬಿಡುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತಿತ್ತು ಕಣೋ ಹುಡುಗ.
ನಿನ್ನನ್ನು ನೆನಪಿಸಿಕೊಂಡು ನಾನು ರಾತ್ರಿಯಿಡೀ ಅತ್ತಿದ್ದೇನೆ ಗೆಳೆಯ, ಆದರೆ ಹುಡುಗಿ ನೋಡು ನಿನ್ನಂತೆ ಎಲ್ಲವನ್ನು ಎದುರಿಸಿ ನಿಂತು ಘರ್ಜಿಸುವ ಶಕ್ತಿಯಿಲ್ಲದೆ ಹೋಯಿತು. ಅಮ್ಮ ತಾನು ಗಂಜಿ ಕುಡಿದು ನನಗೆ ಅನ್ನ ಮಾಡಿ ಹಾಕಿದ್ದಾಳೆ, ಅಪ್ಪ ಅದೇ ತನ್ನ ಹಳೆಯ ಅಂಗಿಗೆ ತೇಪೆ ಹಾಕಿಸಿ ಕೊಂಡು ನನಗೆ ಹೊಸ ಬಟ್ಟೆ ಹಬ್ಬಕ್ಕೆ ಅಂತ ತಂದು ಕೊಟ್ಟಿದ್ದಾರೆ.
ರಾತ್ರಿ ಹೊತ್ತು ಆಕಾಶದ ಚಂದಿರನನ್ನು ನೋಡು, ನಾನು ನೋಡುತ್ತೇನೆ, ಅವನಲ್ಲೂ ಕಲೆಗಳಿವೆಯಂತೆ ಪ್ರೀತಿಯಲ್ಲಿ ನನ್ನ ತಪ್ಪುಗಳಿದ್ದಂತೆ, ಅವನಲ್ಲಿ ನಿನ್ನನ್ನು ಕಾಣಲು ಯತ್ನಿಸುತ್ತೇನೆ. ಆದರೆ ಕಣ್ಣೀರ ಬೆಲೆ ಅರ್ಥವಾಗದವಳು ಎಂದೆನ್ನ ಬೇಡ ಗೆಳೆಯ, ನಿನ್ನ ಕಣ್ಣ ಬಿಂದುಗಳನ್ನು ತಡೆಯ ಬೇಕೆಂದು ಮನಸ್ಸು ನುಡಿದರು, ಆಂತರ್ಯ ಅಳುಕಿತ್ತು, ದೂರ ಹೋಗ ಹೊರಟವಳು ಮತ್ತೆ ನಿಂತು ನಕ್ಕು ಹೊರಡುವುದು ತರವಲ್ಲ ಅಲ್ವೇನೋ ಹುಡುಗ, ಮತ್ತೆ ನನಗೆ ನಿನ್ನ ಪಾಲಿನ ದೌರ್ಬಲ್ಯ ಎಂದೆನಿಸಿ ಕೊಳ್ಳುವುದು ಬೇಕಾಗಿರಲಿಲ್ಲ. ಮತ್ತೆ ನಾಳೆಯಿಂದ ನಾನಿರದ ಬದುಕಿನಲಿ ನಿನ್ನ ಕಣ್ಣೀರ ಬಿಂದುವನ್ನು ನೀನೆ ಒರೆಸಿ ಕೊಳ್ಳಬೇಕು ಕಣೋ.
"ವರ್ಷಗಟ್ಟಲೆ ಜತನದಿಂದ ಓದಿ ಕೊನೆಗೆ ಪರೀಕ್ಷೆಯನ್ನು ಬರೆಯಗೊಡದೆ ನೀನು ಅನುತ್ತೀರ್ಣ ಎಂದು ಘೋಷಿಸುತ್ತೀಯೇನೆ ಹುಡುಗಿ" ಅಂತ ನನ್ನನ್ನು ಪ್ರಶ್ನಿಸುತ್ತೀಯ ಗೆಳೆಯ, ಕ್ಷಮಿಸಿ ಬಿಡೋ ಪರೀಕ್ಷಿಸುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೇನೆ. ನಿನ್ನನ್ನು ಬಿಟ್ಟು ಹೊರಟು ಹೋಗುವುದು ನಾನು ಮಾಡುವ ಮೋಸ, ಅತ್ಯಾಚಾರ, ದ್ರೋಹ ಅಂತಾದರೆ, ಹೆತ್ತವರ ಆಸೆಗೆ ಮಣ್ಣೆರಚಿ ನಿನ್ನ ಜೊತೆಗೆ ಬಂದಾಗ ಅಪ್ಪ-ಅಮ್ಮನಿಗೆ ನನ್ನಿಂದ ಆಗುವ ನೋವಿಗೆ ಹತ್ಯೆ ಎಂದೆನ್ನ ಬಹುದಲ್ಲವೇ ಗೆಳೆಯ, ಕೊಂದು ಬಿಡಲೇ ನನ್ನ ಹೆತ್ತವರನ್ನು, ಉತ್ತರಿಸು ಹುಡುಗ.
ನೀನೆ ಹೇಳಿದಂತೆ ನಾನು ನಿನ್ನ ಬದುಕಿನ ಫುಟ್ ಪಾತ್ ಆಗಿಬಿಡುತ್ತೇನೆ, ನೀನು ನಿನ್ನದೇ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟು ಬಿಡು. ನಿಸರ್ಗವನ್ನು ಪ್ರೀತಿಸ ಹೊರಟಿದ್ದೀಯ, ಆದರೆ ಒಂದಂತು ಸತ್ಯ ಧಾರೆಯೆರೆದಷ್ಟು ದಿನ ನನ್ನ ನಿಷ್ಕಳಂಕ ಪ್ರೀತಿಯನ್ನು ಧಾರೆಯರೆದ ತೃಪ್ತಿಯಿದೆ ನನಗೆ. ಇಲ್ಲಿ ನನ್ನ ಕಣ್ಣ ಬಿಂದುವಿಗೆ ಹೊಣೆಯಾರು ಇಲ್ಲ, ಆದರೆ ನಿನ್ನ ಕಣ್ಣಲ್ಲಿ ಹನಿ ಬಿಂದುವಿಗೆ ಜಾಗ ಮಾಡಿ ಕೊಟ್ಟಿದ್ದಕ್ಕೆ ದಯವಿಟ್ಟು ಕ್ಷಮಿಸಿ ಬಿಡೋ ಗೆಳೆಯ. ಇನ್ನೇನು ಬರೆಯಲಾಗುತ್ತಿಲ್ಲ ನನ್ನಿಂದ, ಕಣ್ಣೀರ ಕಟ್ಟೆ ಒಡೆದಿದೆ ಇಲ್ಲಿ, ಜೊತೆಗೆ ಕೈ ಕೂಡ ನಡುಗುತ್ತಿದೆ ಕಣೋ.
ಇಂತಿ,
-ಅವಳೇ (?)