ಗುರುವಾರ, ಡಿಸೆಂಬರ್ 25, 2008

ನನ್ನ ಕನ್ನಡ ತಾಯಿ ಬಂಜೆಯಾದಳೆ...

(ನಾನೀಗ ಬರೆಯೋದಕ್ಕೆ ಶುರು ಮಾಡಿರುವ ವಿಷಯಕ್ಕೆ ಈ ಸ್ಥಳ ಸರಿಯೇ? ನನಗೆ ಖಂಡಿತ ಗೊತ್ತಿಲ್ಲ, ಮನದ ತಳಮಳಗಳನ್ನು, ನಾನು ಬರೀತಿದ್ದನ್ನು ಇಲ್ಲಿ ಪ್ರಕಟಿಸ್ತ ಬಂದಿದ್ದೇನೆ. ಈ ಬರಹ ಓದುವುದಕ್ಕಿಂತ ಮುನ್ನ ದಯವಿಟ್ಟು ಒಂದು ಮಾತು, ನಾನು ಯಾರನ್ನೋ ಹೀಗಳೆಯಲೋ, ಅಥವಾ ನಿಂದಿಸಲೋ, ಅಥವಾ ಖಂಡಿಸಲೋ ಅಂತ ಇದನ್ನು ಬರೆಯುತ್ತಿಲ್ಲ. ಇದು ನನ್ನನ್ನು ತುಂಬ ತುಂಬ ಕಾಡಿದ, ಹಾಗು ಕಾಡುತ್ತಿರುವ ವಿಚಾರ, ಆದರೆ ಉತ್ತರ ಸಿಕ್ಕಿಲ್ಲ...)

ಇತ್ತೀಚೆಗಿನ ಬಹುತೇಕ ಕನ್ನಡ ಚಲನ ಚಿತ್ರಗಳಿಗೆ ಹಿನ್ನೆಲೆ ಗಾಯಕರು ಪರಭಾಷಿಗರು. ಹೆಚ್ಚಿನ ಹಾಡುಗಳನ್ನು ಹಾಡಿದವರು ಸೋನು ನಿಗಮ್, ಉದಿತ್ ನಾರಾಯಣ್, ಶಂಕರ್ ಮಹಾದೇವನ್, ಕುನಾಲ್ ಗಾಂಜಾವಾಲ, ಸುನಿಧಿ ಚೌಹನ, ಮತ್ತು ಶ್ರೇಯಾ ಘೋಶಾಲ್. ನಾನು ಶ್ರುತಿ, ತಾಳ, ಮತ್ತು ಲಯದ ಅರಿವಿಲ್ಲದ ದಿಗ್ಮೂಡ, ಇವರುಗಳ ಹಾಡುಗಾರಿಕೆ ನಿಜಕ್ಕೂ ಮನಕ್ಕೆ ಹಿತವೆನಿಸುತ್ತದೆ, ಇದರಲ್ಲಿ ಯಾವುದೇ ಅನುಮಾನವಿಲ್ಲ, ಇವರುಗಳ ಗಾಯನ ಸಾಮರ್ಥ್ಯವನ್ನು ಇಲ್ಲಿ ಪ್ರಶ್ನಿಸುವ ಗೋಜಿಗೂ ನಾನು ಹೋಗುತ್ತಿಲ್ಲ. ಆದರೆ ನನ್ನದೊಂದು ಪ್ರಶ್ನೆ ನಮ್ಮ ಕನ್ನಡದಲ್ಲಿ ಗಾಯಕ ಪ್ರತಿಭೆಗಳೇ ಇಲ್ಲವೇ. "ನೂರು ಜನ್ಮಕೂ ನೂರಾರು ಜನ್ಮಕೂ" ಎಂದು ಹಾಡಿದ ಸ್ಪಷ್ಟ ಉಚ್ಚಾರಣೆಯ ಹಾಗು ಅದ್ಭುತ ಎಂದೆನಿಸುವಂತ ಗಾಯಕ ರಾಜೇಶ್ ಕೃಷ್ಣನ್ ಈಗ ಹಾಡುವುದನ್ನೇ ಮರೆತಿದ್ದಾರ, ಮಧುರ ಕಂಠದ ನಂದಿತಾ ಎಲ್ಲಿ ಮರೆಯಾಗಿದ್ದಾರೆ, ಇನ್ನು ಹೇಮಂತ್, ಲಕ್ಷ್ಮಿ ಚಂದ್ರ ಶೇಖರ್, ರಾಜು ಅನಂತ ಸ್ವಾಮಿ, ಕನ್ನಡದ ಜೇಸು ದಾಸ್ ರಮೇಶ್ಚಂದ್ರ, ಅಶೋಕ್ ಶರ್ಮ, ಗುರುರಾಜ್ ಕೋಟೆ ಎಲ್ಲಿ ಕಳೆದು ಹೋಗಿದ್ದಾರೆ. "ಮುರಿದಿರುವ ಕೊಳಲು ನುಡಿಸುವವರಾರು" ಎಂದು ಮೈನವಿರೇಳುವಂತೆ ಹಾಡಿದ ಗಾಯಕಿ ಅರ್ಚನಾ ಉಡುಪಾರನ್ನು ಪೂರ್ಣ ಪ್ರಮಾಣದ ಕಾರ್ಯಕ್ರಮ ನಿರೂಪಕಿ ಎಂಬಂತೆ ಮಾಡಲಾಗಿದೆ. ಅಮೃತಧಾರೆಯ ಮಧುರ ಗಾಯಕಿ ಸುಪ್ರಿಯಾ ಆಚಾರ್ಯ, ಎಂ. ಡಿ. ಪಲ್ಲವಿ, ಸಂಗೀತ ಕಟ್ಟಿ, ರತ್ನ ಮಾಲಾ ಪ್ರಕಾಶ್ ಎಲ್ಲ ತೆರೆ ಮರೆಗೆ ಸರಿದು ವರ್ಷ ಉರುಳಿದೆ.

ದೂರದರ್ಶನ ಗಾಯನ ಕಾರ್ಯಕ್ರಮಗಳಲ್ಲಿ ಮನಸೆಳೆದ ಉದಯೋನ್ಮುಖ ಗಾಯಕರಾದ ನಿತಿನ್ ರಾಜಾರಾಂ ಶಾಸ್ತ್ರೀ, ವಿನಯ್, ಚಿನ್ಮಯ್, ಆಕಾಂಕ್ಷ ಬಾದಾಮಿ ಎಲ್ಲಾ ಎಲ್ಲಿ ಅಸ್ತಂಗತರಾದರು. ಇವರ್ಯಾರು ನಮ್ಮ ಕನ್ನಡ ಚಿತ್ರ ಗೀತೆಗಳನ್ನೂ ಹಾಡಲು ಯೋಗ್ಯರಿಲ್ಲವೆ. ಪರಭಾಷಾ ಗಾಯಕರು ಕನ್ನಡ ಉಚ್ಚರಿಸುವ ರೀತಿ ನೋಡಿದರೆ ತುಂಬಾ ಹಿಂಸೆ ಎನಿಸುತ್ತದೆ. ಅವರು ಬರಿ ಹಾಡುತ್ತಾರೆ ಅಷ್ಟೆ, ಪ್ರತಿ ಸಾಲಿಗೂ ಒಂದೇ ಭಾವ, ಅವರಿಗೆ ಹಾಡುವ ಸಾಹಿತ್ಯದ ಸಾಲಿನ ಅರ್ಥ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಅಗತ್ಯವೂ ಅವರಿಗಿಲ್ಲ, ಸಂಗೀತದ ಏರಿಳಿತಕ್ಕೆ ಸರಿಯಾಗಿ ಹಾಡಿದ ಮಾತ್ರಕ್ಕೆ ಹಾಡು ಇಂಪೆನಿಸಬಹುದು, ಆದರೆ ಭಾಷೆ ಹಾಗು ಸಾಹಿತ್ಯ ಉಸಿರು ಕಟ್ಟಿ ಸಾಯುತ್ತದೆ. ಉದಾಹರಣೆಗೆ "ಹುಚ್ಚ" ಚಿತ್ರದ ಉಸಿರೇ ಉಸಿರೇ ಎಂಬ ಗೀತೆ ಸೋನು ನಿಗಮ್ ಹಾಗು ರಾಜೇಶ್ ಕೃಷ್ಣನ್ ಇಬ್ಬರೂ ಹಾಡಿದ್ದಾರೆ, ಗಾಯನದ ತುಲನೆಯಲ್ಲಿ ರಾಜೇಶ್ ಕೃಷ್ಣನ್ ಸೋನು ನಿಗಮ್ ಗಿಂತ ಲವಲೇಶವೂ ಕಡಿಮೆ ಇಲ್ಲ, ಹಾಗು ಪ್ರತಿ ಸಾಲನ್ನು ಅನುಭವಿಸಿ ಹಾಡಿದ್ದಾರೆ. ಸೋನು ಶಬ್ದ ಬಳಕೆಯನ್ನು ಕೇಳಿದರೆ ನಿಜಕ್ಕೂ ಎಂತಹ ಕನ್ನಡ ಬಲ್ಲವನಿಗೂ ಸೋಜಿಗವೆನಿಸುತ್ತದೆ, ಪ್ರೇಮ ಗೀತೆಯೊಂದನ್ನು ಆತ ಪ್ರಣಯ ಗೀತೆಯೆಂಬಂತೆ ಹಾಡಿರುವ ಬಗೆ ಖೇದವೆನಿಸುತ್ತದೆ. ಕೇಳುವುದಾದರೆ ಕೊಂಡಿ ಇಲ್ಲಿದೆ http://www.kannadaaudio.com/Songs/Moviewise/home/Hucchha.php
ವಿಪರ್ಯಾಸವೆಂದರೆ ರಾಜೇಶ್ ಹಾಡಿದ ಹಾಡು ಇಲ್ಲಿ ಲಭ್ಯವಿಲ್ಲ.

ಇದಕ್ಕೂ ಮೀರಿ ಈ ಆಮದು ಗಾಯಕರುಗಳ ಗಾಯನ ಇಷ್ಟವಾದರೆ ಅದು ನಮ್ಮ ಚಿತ್ರ ಗೀತೆ ಸಾಹಿತ್ಯದಿಂದ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್, ಕವಿರಾಜ್, ಹೃದಯ ಶಿವರವರ ಸರಳ ಹಾಗು ಅರ್ಥಪೂರ್ಣ ಸಾಹಿತ್ಯ ಕಿವಿಗೆ ಇಂಪು ನೀಡುತ್ತದೆ, ಇದರಿಂದ ಆಮದು ಗಾಯಕರ ಗಾಯನ ಸಹ್ಯವೆನಿಸಿರಬಹುದು.

ನಮ್ಮ ಗಾಯಕ-ಗಾಯಕಿಯರು ಯಾವ ರೀತಿಯಲ್ಲಿ ಈ ಆಮದು ಗಾಯಕರಿಗಿಂತ ಕಡಿಮೆ ಇದ್ದಾರೆ. ಇಂಪಾದ ದನಿಯಿದೆ, ಭಾಷಾ ಜ್ಞಾನವಿದೆ. ನಮ್ಮ ಚಿತ್ರ ರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಹಾಗು ಪ್ರಭಾವಿಗಳಿಗೆ ಈ ಪರಭಾಷಾ ವ್ಯಾಮೋಹ ಏಕೆ. ನಮ್ಮ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೇಕೆ, ಇತ್ತೀಚಿನ ದಿನಗಳಲ್ಲಿ ನಮ್ಮ ಗಾಯಕರು ಹಾಡಿದಂತಹ ಮುಖ್ಯ ಹಾಡುಗಳು ಯಾವುದೂ ಇಲ್ಲವೆನಿಸುತ್ತದೆ. ಇದೆಲ್ಲಾ ಇನ್ನೂ ಎಲ್ಲಿಯ ತನಕ? ನಮ್ಮವರು ಹೀಗೆ ಎಲೆ ಮರೆಯ ಕಾಯಾಗಿಯೇ ಉದುರಿ ಹೋಗುವರೆನು? ಕನ್ನಡ ಸಾಹಿತ್ಯ ಈ ಚಿತ್ರೋದ್ಯಮದಲ್ಲಿ ಹೀಗೆ ದುಡ್ಡಿಗೆ ಬಿಕರಿಯಾಗಿ ಹೋಗುತ್ತದೇನು? ಬರಿಯ ಪ್ರಶ್ನೆಗಳು ಕಾಡುತ್ತವೆ. ಮನಸ್ಸಿಗೆ ತುಂಬಾ ನೋವಾಗುತ್ತದೆ, ಏನು ಮಾಡಲಾಗದ ಅಸಹಾಯಕತೆ ನಮಗೇ ಅಸಹ್ಯವೆನಿಸುತ್ತದೆ.

ತಿನ್ನುವ ಅನ್ನದ ತುತ್ತಿನಲ್ಲಿ ಒಂದು ತುತ್ತು ಹಂಚಿ ತಿನ್ನೋಣ, ಆದರೆ ನಮ್ಮವರ ತುತ್ತನ್ನೇ ಕಸಿದು ಇಡೀ ತಟ್ಟೆಯನ್ನೇ ದಾನ ಮಾಡಿ ನಮ್ಮವರನ್ನು ಉಪವಾಸ ಮಲಗಿಸುವುದು ಎಂತಹ ಜಾಣತನ ಹಾಗು ಎಲ್ಲಿಯ ನ್ಯಾಯ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ, ಉತ್ತರ ಇನ್ನೆಲ್ಲೋ ಸಮಾಧಿಯಲ್ಲಿ ಆಕಳಿಸಿ ತನ್ನ ಮಗ್ಗುಲು ಬದಲಿಸುತ್ತದೆ.

7 ಕಾಮೆಂಟ್‌ಗಳು:

Ittigecement ಹೇಳಿದರು...

ಕನ್ನಡದಲ್ಲಿ ಹಾಡುವವರು ಬೇಕಾದಷ್ಟು ಗಾಯಕರು ಇದ್ದಾರೆ...
ಆದರೆ ಸೋನು ನಿಗಮ್ ಥರ ನಖರಾ ಇವರು ಮಡೋದಿಲ್ವಲ್ಲ...!
ನಮ್ಮನಾಡಿನಲ್ಲಿ ನಮ್ಮ ಭಾಷೆ, ನಮ್ಮ ನುಡಿ, ನಮ್ಮ ಜನಕ್ಕೆ ಪ್ರಾಮುಖ್ಯತೆ ಇರಲೇ ಬೇಕು...
ಆದರೆ ..?


thank you...

shivu.k ಹೇಳಿದರು...

ರಾಜೇಶ್ ಮಂಜುನಾಥ್,

ನಿಮ್ಮ ಅಭಿಪ್ರಾಯವೇ ನನ್ನದೂ ಕೂಡ. ನಿಮ್ಮಷ್ಟೇ ತಳಮಳ, ಮತ್ತು ಬೇಸರ ನನಗೂ ಇದೆ...

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರಕಾಶ್ ಸರ್,
ಪ್ರಾಮುಖ್ಯತೆ ಇರಬೇಕು ಖಂಡಿತ, ಕೊನೆ ಪಕ್ಷ ಅವಕಾಶವನ್ನಾದರೂ ಕೊಡಬೇಕಲ್ಲವೇ, ಅದ್ಬುತ ಸಾಲುಗಳು ಅವಿವೇಕಿಗಳ ಬಾಯಲ್ಲಿ, ನೊಂದು ನರಳುತ್ತಿವೆ, ಇದನ್ನು ಕೇಳಿದಾಗ ಹೊಟ್ಟೆ ಉರಿಯುತ್ತೆ. ನನ್ನ ಬರಹಗಳ ಕಡೆಗಿನ ನಿಮ್ಮ ಪ್ರೀತಿಗೆ ನಾನು ಋಣಿ.

ಶಿವು ಸರ್,
ಎರಡು ದಿನದಿಂದ ನಿಮ್ಮ ದಾರಿ ಕಾದಿದ್ದೆ :), ಕೊನೆಗೂ ಬಂದಿರಲ್ಲ, ತುಂಬಾ ಧನ್ಯವಾದಗಳು.
ಒಳ್ಳೊಳ್ಳೆ ಸಾಹಿತ್ಯ ಇವರ ಬಾಯಲ್ಲಿ ಸಿಕ್ಕಿ ಹಾಳಾಗುತ್ತಿರುವುದನ್ನು ನೋಡಿ ಸಹಿಸಲಾಗುತ್ತಿಲ್ಲ, ಅವರು ಕನ್ನಡ ಹಾಡುಗಳನ್ನು ಹಾಡಲಿ, ಆದರೆ ಪ್ರತಿಯೊಂದಕ್ಕೂ ಒಂದು ಮಿತಿಯಿರಬೇಕಲ್ಲವೇ, ನಮ್ಮವರು ಈ ಪರಿ ಅವಕಾಶ ವಂಚಿತರಾದರೆ, ನಮ್ಮ ಸಾಹಿತ್ಯ ಹೀಗೆ ಕೊಲ್ಲಲ್ಪಟ್ಟರೆ ಹೇಗೆ ಅನ್ಸುತ್ತೆ, ಬೇಸರವಾಗುತ್ತೆ.
-ರಾಜೇಶ್ ಮಂಜುನಾಥ್

ಶರಶ್ಚಂದ್ರ ಕಲ್ಮನೆ ಹೇಳಿದರು...

ಇದೆ ನೋವು ನನಗು ಕಾಡುತ್ತಿತ್ತು, ನನ್ನ ಬ್ಲಾಗ್ ನ ಮೊದಲ ಬರಹ ಇದೆ ವಿಷಯದ ಮೇಲೆ ಇದೆ. ಇನ್ನು ಅಸಹಾಯಕತೆಯಿಂದ ಹಾಡುಗಳನ್ನು ಕೇಳುತ್ತಿದ್ದೇನೆ. ಬಹುಶ ನಾವು ಏನನ್ನು ಮಾಡಲು ಆಗುವುದಿಲ್ಲ ಎಂದೆನಿಸುತ್ತದೆ.

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಶರತ್,
ಅದೆಷ್ಟು ಅಸಹಾಯಕರಲ್ಲವೇ ನಾವು ನಮ್ಮದೇ ನಾಡಿನಲ್ಲಿ, ಬೇಸರವಾಗುತ್ತದೆ.
ನನ್ನ ಮನದಂಗಳಕ್ಕೆ ಸ್ವಾಗತ, ಹೀಗೆ ಬಂದು ಹೋಗ್ತಿರಿ.
-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

ಸರ್ ಕನ್ನಡದ ಗಾಯಕರಿಗೆ ರಿಯಾಲಿಟಿ ಶೋಗಳಲ್ಲಿ ತುಂಬಾ ಕೆಲ್ಸವಿದೆ ಬಿಡಿ ಸಾರ್...ಅವರ ಪಾಡಿಗೆ ಅವರು ಕೆಲ್ಸ ಮಾಡಿಕೊಂಡಿರಲಿ..ಪಾಪ ಯಾಕೆ ಸುಮ್ಮನೆ ಅವರ ತಲೆ ಕೆಡ್ಸೋದು ಅಲ್ವಾ?

ಶರಶ್ಚಂದ್ರ ಕಲ್ಮನೆ ಸರ್....ಇನ್ನು ಅಸಹಾಯಕತೆಯಿಂದ ಹಾಡುಗಳನ್ನು ಕೇಳುತ್ತಿದ್ದೇನೆ.ಅನ್ನುತ್ತಿದ್ದೀರಿ...ಸೋನುವಿನ ಮತ್ತೆ ಶ್ರೇಯಾಳ ಕನ್ನಡ ಗೀತೆಗಳನ್ನ ಸಂತೋಷದಿಂದ ಕೇಳಿ.ಸಾರ್..ಇತ್ತೀಚೆಗೆ ಕನ್ನಡ ಗೀತೆಗಳನ್ನ ಕೇಳಬೇಕು ಅನ್ನುವ ಹುಚ್ಚು ಹತ್ತಿಸದವರವರು..:)

ಕನ್ನಡ ಗಾಯಕ ಗಾಯಕಿಯರಿಗೆ ಅವಕಾಶಗಳನ್ನ ತಪ್ಪಿಸುತ್ತಿರೋರು ಯಾರು ? ಪರಭಾಷ ಗಾಯಕ ಗಾಯಕಿಯರಾ? ಹಾಗಾದ್ರೆ ಅವರನ್ನ ಇಲ್ಲಿ ತಂದು ಹಾಡಿಸುತಿರೋರು ಯಾರು?

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ನವಿಲುಗರಿಯ ಸೋಮು ಸರ್,
ಪರಭಾಷಾ ಗಾಯಕರ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ, ಸಿಗುತ್ತಿರುವ ಅವಕಾಶಗಳನ್ನು ಅವರು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಮೆಚ್ಚುವಂತಹುದು. ಜೊತೆಗೆ ಸೋನು ಗಾಯನದ ಹಿಂದಿ ಹಾಡುಗಳು ನನ್ನ ಅಚ್ಚುಮೆಚ್ಚು ಕೂಡ ಅದರಲ್ಲೂ "अब मुझे रात दिन तुम्हारा ही ख्याल है" ನನಗೆ ವಿಪರೀತ ಅನ್ನುವಷ್ಟು ಇಷ್ಟ. ಆದರೆ ಎಲ್ಲೋ ಕನ್ನಡವನ್ನು ತಪ್ಪಾಗಿ ಉಚ್ಚರಿಸುವಾಗ ವೇದನೆಯೆನಿಸುತ್ತದೆ, ಜೊತೆಗೆ ನಮ್ಮ ಕನ್ನಡದ ಗಾಯಕರು ಅವಕಾಶ ವಂಚಿತಾಗುತ್ತಿದ್ದಾರೆನ್ದಾಗ ನೋವಾಗುತ್ತದೆ.
ಇಲ್ಲಿ ಕಾರಣ ಏನೇ ಇರಬಹುದು, ಕಾರಣೀಕರ್ತರು ಯಾರೇ ಇರಬಹುದು. ಆದರೆ ಏಕೆ ಹೀಗೆ ಎಂದು ಯೋಚಿಸಿದಾಗ ಉತ್ತರ ಸಿಗದೇ ಮನಸ್ಸು ಪರಿತಪಿಸುತ್ತದೆ.
ನನ್ನ ಮನದಂಗಳಕ್ಕೆ ನಿಮಗೆ ಆದರದ ಸ್ವಾಗತ. ಆಗಾಗ ತಪ್ಪದೆ ಬರುತ್ತಿರಿ.
ಪ್ರೀತಿಯಿರಲಿ
-ರಾಜೇಶ್ ಮಂಜುನಾಥ್