ಸೋಮವಾರ, ಏಪ್ರಿಲ್ 20, 2015

ಧ್ಯಾನ


(ಚಿತ್ರ ಕೃಪೆ: ಅಂತರ್ಜಾಲ)

ಅನುಭಾವದನುಭವದ ಅಚ್ಚರಿಯು ಅನುರಣಿಸಿ
ಅನುದಿನವೂ ಮನವ ಕಾಡುತಲಿರಲು
ಕಾರ್ಮುಗಿಲ ನಡುವಿಂದ ಕೋಲ್ಮಿಂಚು ಸುಳಿದಂತೆ
ಕಗ್ಗತ್ತಲಾ ನಡುವೆ ಕಿಡಿಯೊಂದು ಇಣುಕಿರಲು

ಧಾರಿಣಿಯ ಮೈ ಮೇಲೆ ಜಾರಿದಾ ಹನಿಯೊಂದು
ಕಣ್ಣೀರೋ ಪನ್ನೀರೋ ಮಳೆ ನೀರೋ ಅರಿಯದೆ
ಅಸ್ಥಿತ್ವ ಕಳೆದು ಕರಗಿರಲು ಮಡಿಲಿನೊಳು

ಹೆಜ್ಜೆಯೆಷ್ಟಿಟ್ಟರು ಮತ್ತೆ ಗಾವುದ ಹೆಚ್ಚು
ನಡೆದಷ್ಟೂ ದೂರಕು ಸವೆಯದಿರೆ ದಾರಿ

ನಿರ್ಭಾವ ನಿರ್ಭೀಡೆಗಳ ನಡುವೆ
ಗೋಳಿಡುವ ಓ ಮನವೇ
ಜಗದ ಗೊಡವೆಗೆ ಹೋಗದಿರು ನೀನು
ನಿನಗೇಕೆ ಇಲ್ಲ ಸಲ್ಲದ ಬೇವಸು

ಕರಗಿರಲು ಶಬ್ಧಾಂತರಾಳದ ಭಾವಧಾರೆಯೊಳು
ತನುವು ಮುಷ್ಟಿ ಬಿಗಿಯಲಿ ಜಲವ ಹಿಡಿದಿಡುವ ಭರದಿ
ಬಿಟ್ಟು ಬಿಡು ಮನವನ್ನು ಹಾರಿ ಹೋಗಲಿ ದೂರ
ತಾನೇ ಮರಳಲಿ ಹಾಗೆ ಹಕ್ಕಿ ಗೂಡ ಸೇರುವ ತೆರದಿ

(ಬಹಳ ದಿನಗಳ ನಂತರ ಹಾಗೆ ಸುಮ್ಮನೆ ಧ್ಯಾನದ ಕುರಿತ ಚಿಂತನೆಯಲ್ಲಿ ಉಧ್ಭವಿಸಿದ ಕವನ)

ಬುಧವಾರ, ಅಕ್ಟೋಬರ್ 14, 2009

ನಾನಿನ್ನು ಬರ್ತೀನಿ... ಅಲ್ಲಿ ಸಿಗೋಣ.

ನಾನಿವತ್ತು ಬೀಗ ಹಿಡಿದು ಕೊಂಡೆ ಬ್ಲಾಗಿನ ಕಡೆ ಬಂದಿದ್ದು, ನಾನಾಗಲೆ ತೀರ್ಮಾನಿಸಿಯಾಗಿತ್ತು ಇವತ್ತಿನಿಂದ ನನ್ನ ಬ್ಲಾಗಿಗೆ ದೊಡ್ಡದೊಂದು ಬೀಗ ಹಾಕಲೇ ಬೇಕು ಅಂತ. ಇದಕ್ಕೆ ಕಾರಣ ಹಲವು, ಅದರಲ್ಲಿ ಬಹು ಮುಖ್ಯವಾದದ್ದು ಬ್ಲಾಗರ್ ಕೆಲವು ತಾಂತ್ರಿಕ ಲೋಪ-ದೋಷಗಳು ಮತ್ತೆ ಕೆಲವು ನ್ಯೂನ್ಯತೆಗಳು. ಈಗ ಹೊಸದೊಂದು ಬ್ಲಾಗಿನರಮನೆಯನ್ನು ಕಟ್ಟಿಕೊಂಡು ಅತ್ತ ವಲಸೆ ಹೊರಟಿದ್ದೇನೆ ಹೊರಟವನು ಮನೆಯ ನೆನಪಿನ ಬುತ್ತಿಯನ್ನು ಹೊತ್ತು ಹೊರಟಿದ್ದೇನೆ. ನನ್ನ ಬ್ಲಾಗಿಗೆ ವರುಷ ತುಂಬಿದ್ದಷ್ಟೇ ಅಲ್ವ, ಹಾಗಾಗಿ ಈಗ ಹೊಸ ಮನೆಗೆ ಕರೆದೊಯ್ಯುತ್ತಿದ್ದೇನೆ. ಮತ್ತೆ ಎಂದಿನಂತೆ ನೀವು ಜೊತೆಯಿರುತ್ತೀರಿ ಎಂಬ ವಿಶ್ವಾಸದಲ್ಲಿ, ನನ್ನ ಹೊಸ ಮನೆ ತೀರ ದೂರವೇನು ಇಲ್ಲ, ನಿಮ್ಮಿಂದ ಕೇವಲ ಇನ್ನೊಂದೇ ಕ್ಲಿಕ್ ನಷ್ಟು ದೂರದಲ್ಲಿದೆ. ಪ್ರೀತಿಯಿಂದ ಆಜ್ಞಾಪಿಸುತ್ತಿದ್ದೇನೆ ನೀವು ಬರಲೇ ಬೇಕು, ಬರಲಿಲ್ಲ ಅಂದ್ರೆ ನೋಡಿ ಮತ್ತೆ, ಚೆನ್ನಾಗಿರೋಲ್ಲ. ನಿಮ್ಮನ್ನು ಸ್ವಾಗತಿಸುವುದಕ್ಕೆ, ನಿಮ್ಮ ದಾರಿ ಕಾಯುತ್ತ ನನ್ನ ಹೊಸ ಮನೆಯ ಬಾಗಿಲಲ್ಲಿ ಕುಳಿತಿರುತ್ತೇನೆ.



ಮಂಗಳವಾರ, ಅಕ್ಟೋಬರ್ 6, 2009

ಭಯ


ಕನಸೇ ಕದಲದ ಕಾರಿರುಳ ರಾತ್ರಿಯೊಳು
ನೆನಪ ಅಗೆದಗೆದು ತೆಗೆವ ಹುಚ್ಚನಿವ ಅಕ್ಷರಾರ್ಥಃ
ಇವನೆದೆಗೆ ಏನು ಒಗ್ಗುವುದಿಲ್ಲ, ಇವನ ನಿಂದನೆಗೆ
ಸಕಲವೂ ಎದೆ ಸುಡುವ ಜ್ವಲನ ಪದಾರ್ಥ

ಯಶದ ಹಾದಿಯ ಸರಣಿಯಾರಂಭಕು ಮುನ್ನ
ನಿರ್ಲಿಪ್ತ ಮೋರೆ ಹೊತ್ತು ಗುರಿಯ ದಿಟ್ಟಿಸುವನು
ದುಡಿದು ದಣಿಯುವ ಮುನ್ನ ವಿಶ್ರಾಂತಿ ಬೇಕಂತೆ
ಗಾವುದವು ಹೆಜ್ಜೆ ಊರದ ಎಗ್ಗ ಗಾವಿಲನು

ಬದುಕ ಶಪಿಸುತ್ತಾನೆ, ಒಳಗೆ ಕೊರಗುತ್ತಾನೆ
ಕುಸಿದು ಮರುಗುತ್ತಾನೆ ಮೂಢನಿವನು
ಸೂರ್ಯ ರಶ್ಮಿಯ ಕಾಂತಿ ಕಂಡೊಡನೆ ಮತಿ ಭ್ರಾಂತಿ
ಅಕ್ಷಿ ಪಟಲವ ಮುಚ್ಚಿ ಜಗ ಕತ್ತಲೆನ್ನುವವನಿವನು

ಒಳಗೆ ಕುಳಿತಿಹನಂತೆ, ಕಂಡು ಕಾಣದ ಹಾಗೆ
ಕಿಡಿಯ ಸೋಕಿಸಿ ಹೊತ್ತಿಸುತ ಎದೆಯ ಬೇಗೆ

ಮುಟ್ಟಿ ನೋಡಿರಿ ಒಮ್ಮೆ ಮಗ್ಗುಲು ಬದಲಿಸುವನು
ಇವನದೀಗ ನಿಮ್ಮೆದಯ ಅಂಗಳದಿ ಪಾರ್ಶ್ವ ಶಯನ
ಇವನಿಂದ ಅಡ್ಡಿ ನೂರೆಂಟು ಆತಂಕ ಇದಿರುಂಟು
ತಡೆದು ನಿಲ್ಲಿಸುವ ನಿಮ್ಮ ಹಿಡಿಯಲಾರದ ಹಾಗೆ ಗುರಿಯ ಅಯನ

ಬಲು ಚಿಕ್ಕ ಬದುಕಿಹುದು ಅಕ್ಕರೆಯು ಇರಲೆದೆಗೆ
ನಡೆವ ಹಾದಿಯ ಗುರಿಯು ಅಪರಿಮಿತವು
ಹೆಡೆಮುರಿಯ ಕಟ್ಟಿ ತಳ್ಳಿ ಬಿಡಿ ಇವನನ್ನು
ಶಾಶ್ವತವಾಗಿ ಏರಿ ಬಿಡಲಿವನು ಮರಣ ಶಯನ

"ನನ್ನ ಬ್ಲಾಗಿನಲ್ಲಿ ಮೊದಲ ಕವನ ಪ್ರಕಟಿಸಿ ಒಂದು ವರ್ಷ ಸಂದಿದೆ, ಬರೆದಿದ್ದು ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಜೊಳ್ಳೇ ಹೆಚ್ಚು ಎಂಬುದು ನನ್ನ ಮನದ ಅಂಬೋಣ. ಆದರು ಒಂದು ವರ್ಷದ ಅವಧಿಯಲ್ಲಿ ಬ್ಲಾಗು ನನಗೆ ಅನೇಕ ಆತ್ಮೀಯ ಗೆಳೆಯ, ಗೆಳತಿಯರನ್ನು, ಅಕ್ಕರೆಯ ಅಕ್ಕಂದಿರನ್ನು ಮತ್ತು ನಲ್ಮೆಯ ಅಣ್ಣಂದಿರನ್ನು ನೀಡಿದೆ, ಪ್ರತಿ ಬರಹ ಪ್ರಕಟಿಸಿದಾಗ ಜೊತೆ ನಿಂತು ತಿದ್ದಿ, ಪ್ರೋತ್ಸಾಹಿಸಿದ ನಿಮಗೆಲ್ಲ ನಾನು ಆಭಾರಿ. ನಿಮ್ಮ ಪ್ರೀತಿ ನನ್ನ ಜೊತೆ ಹೀಗೆ ಇರಲಿ ಎಂದು ಆಶಿಸುತ್ತೇನೆ."

ಮಂಗಳವಾರ, ಜೂನ್ 2, 2009

ನೀನಿಲ್ಲ ಅನ್ನೋ ಕೊರತೆ ನನ್ನನ್ನು ತುಂಬಾನೆ ಕಾಡುತ್ತೆ...

ಅಂತರಾಳ - ೭

ನಿಂಗೊತ್ತಾ ???!!!

ನಾನು ತೀರ ಚಿಕ್ಕವನಿದ್ದಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಅಮ್ಮ ಶನಿವಾರದ ಬೆಳಗಿನ ಶಾಲೆಗೆ ತಡವಾಗುತ್ತೆ ಅಂತ ಓಡೋಡಿ ಹೋದ ಮೇಲೆ ನಾನು ಸ್ನಾನದ ಮನೆಯಲ್ಲಿ ಬಿಸಿ ನೀರು ಬೆರೆಸಿಕೊಳ್ಳಲು ಬರದೆ ಬರಿ ತಣ್ಣೀರು ಸುರಿದು ಕೊಂಡು ಸ್ನಾನ ಮುಗಿಸಿದಾಗೆಲ್ಲ ನೀನು ವಿಪರೀತ ಬೇಕು ಅಂತ ಅನ್ನಿಸಿಬಿಡುತ್ತಿದ್ದೆ. ನೀನಿಲ್ಲ ಅನ್ನೋ ಕೊರಗು ಮತ್ತು ಕೊರತೆ ನನ್ನನ್ನು ಕಾಡುತ್ತಿದ್ದಿದ್ದೆ ಅಂತಹ ಕ್ಷಣಗಳಲ್ಲಿ.

ಅಮ್ಮ ಜ್ವರದಿಂದ ಹಾಸಿಗೆ ಹಿಡಿದ ದಿನಗಳಲ್ಲಿ ಅಕ್ಕಿ ಅಥವಾ ಗೋಧಿ ರವೆಯನ್ನೋ ಹುರಿದು, ಕುದಿವ ನೀರಿನಲ್ಲಿ ಹಾಕಿ, ಚೆನ್ನಾಗಿ ಬೇಯಿಸಿ ಗಂಜಿ ಮಾಡಿ ಇಳಿಸುವ ಹೊತ್ತಲ್ಲಿ ಪಾತ್ರೆಯಂಚು ಕೈ ತಾಕಿ ಸುಟ್ಟಾಗ ನೀನಿದ್ದಿದ್ರೆ ಹೀಗೆಲ್ಲ ಆಗ್ತಿರಲಿಲ್ಲ ಅಲ್ವ ಅಂತ ಕಣ್ಣೀರು ತುಂಬಿ ಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಪಾಚಿಯ ಮೇಲೆ ಕಾಲಿಟ್ಟು ಕೆಸರಲ್ಲಿ ಜಾರಿ ಬಿದ್ದು ಮನೆಗೆ ಬಂದಾಗ, ಪರೀಕ್ಷೆ ಹಿಂದಿನ ದಿನ ನಿದ್ದೆ ಬಾರದಿದ್ದಾಗ, ನಡು ಮಧ್ಯ ರಾತ್ರಿ ಬೀದಿ ನಾಯಿ ವಿಕಾರವಾಗಿ ಊಳಿಟ್ಟಾಗ, ಏನೋ ತಪ್ಪು ಮಾಡಿದಾಗ ಅಮ್ಮ ಗದರಿದಾಗ ನೀನಿಲ್ಲ ಅನ್ನೋದು ತುಂಬಾ ನೋವು ನೀಡುತ್ತಿತ್ತು.

ಎರಡನೇ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಬಿಡದೆ ಧೋ ಎಂದು ಸುರಿದ ಮಳೆಯಿಂದ ಮನೆಗೆ ಬರಲಾಗದೆ ಶಾಲೆಯ ಮೆಟ್ಟಿಲ ಮೇಲೆ ಗೆಳೆಯನ ಜೊತೆ ಕುಳಿತಿದ್ದಾಗ ಛತ್ರಿ ಹಿಡಿದು ಬಂದ ಅವನಕ್ಕ ಅವನ ತಲೆ ಒರೆಸಿ ಛತ್ರಿ ಒಳಗೆ ಸೇರಿಸಿ ಕೊಂಡಾಗ, " ಮಳೆ ನನಗೇನು ಅಲ್ಲ, ಮಳೆಯಂದ್ರೆ ಮತ್ತು ಮಳೆಯಲ್ಲಿ ನೆನೆಯೋದಂದ್ರೆ ನನಗೆ ತುಂಬಾನೆ ಇಷ್ಟ" ಅಂತ ಸುಳ್ಳೇ ನಕ್ಕು ಸಮವಸ್ತ್ರದ ಅಂಗಿಯೊಳಗೆ ಶಾಲೆ ಚೀಲ ಸೇರಿಸಿ ಕಣ್ಣೀರಾಗಿ ಮಳೆಯಲ್ಲಿ ಓಡಿದ ದಿನ. ಮನೆ ತಲುಪಿದ ಮೇಲೆ "ಮಳೆಯಲ್ಲಿ ನೆಂದು ಬಂದಿದೀಯಲ್ಲ, ಸ್ವಲ್ಪ ಹೊತ್ತು ಕಾದಿದ್ದು ಬರಬಹುದಿತ್ತಲ್ಲ" ಎಂದು ಅಮ್ಮ ರೇಗಿದಾಗ, ನನ್ನ ಪಾಲಿಗೆ ನೀನು ಯಾಕಿಲ್ಲ ಅಂತ ದೇವರಲ್ಲಿ ಜಗಳಕ್ಕೆ ನಿಲ್ಲ ಬೇಕು ಅಂತ ಅನ್ನಿಸಿ ಬಿಡುತ್ತಿತ್ತು. ನೀನಿದ್ದಿದ್ದರೆ ನಾನು ಮಳೆಯಲ್ಲಿ ನೆನೆಯುತ್ತಿರಲಿಲ್ಲ ಅಂತೇನು ಇಲ್ಲ, ಆದರೆ ನೆನೆದು ಮುದ್ದೆಯಾಗಿ ಬಂದಾಗ ಕನಿಷ್ಠ ತಲೆ ಒರೆಸಿ ಕೊಡಲಿಕ್ಕಾದರು ನೀನು ಇರುತ್ತಿದ್ದಿದ್ದರೆ ಅನ್ನೋ ತುಡಿತ ನನಗಿತ್ತು.

ಮೊನ್ನೆ ಹೀಗೆ ಈ ಯಾಂತ್ರಿಕ ನಗರಿಯ ಮಳೆಗೆ ಸಿಕ್ಕಿ ಒದ್ದೆಯಾಗಿ ಮನೆ ಸೇರಿದಾಗ ಫೋನಾಯಿಸಿದ ಅಮ್ಮ ಮದುವೆ ಬಗ್ಗೆ ಏನು ತೀರ್ಮಾನಿಸಿದೆ ಎಂದಾಗ, ಕೊನೆ ಪಕ್ಷ ನನ್ನ ತಮ್ಮ ಚಿಕ್ಕವನು, ಇಷ್ಟು ಬೇಗ ಮದುವೆ ಬೇಡ ಅಂತ ಅಮ್ಮನಿಗೆ ಒಪ್ಪಿಸಲಿಕ್ಕಾದರು ಅಥವಾ ಅಮ್ಮ ನೋಡುವ ಹುಡುಗಿ ನನ್ನ ತಮ್ಮನಿಗೆ ಸೂಕ್ತಳೋ ಇಲ್ಲವೊ ಅಂತ ನಿರ್ಧರಿಸಲು ನೀನಿರಬೇಕಿತ್ತು.

ಕೊನೆ ಪಕ್ಷ ಎದೆಯ ದುಗುಡ ತೀರ ಹೆಚ್ಚಾದಾಗ ಮುಖ ಮುಚ್ಚಿಕೊಂಡು ಮಲಗಿ ಬಿಡಲು ನಿನ್ನ ಮಡಿಲು ಬೇಕಿತ್ತು, ಅಲ್ಲಿ ತಲೆ ನೇವರಿಸಿ ಸಮಾಧಾನಿಸಲು ನನಗೂ ಒಬ್ಬಳು ಅಕ್ಕ ಇರಬೇಕಿತ್ತು.

ಶುಕ್ರವಾರ, ಏಪ್ರಿಲ್ 17, 2009

ಅಸ್ತಿತ್ವವೇ ಇಲ್ಲದ ಮೀನಿನ ಕಣ್ಣೀರಾಗಿತ್ತು ನನ್ನಳಲು ಅಂದು

ಪಿಸು ಮಾತು - ೫

(ಹುಡುಗಿಯ ಮನಸ್ಸಿನ ತುಮುಲಗಳು ಹೇಗಿರಬಹುದು ಪ್ರೀತಿಯಿಂದ ಹೊರ ನಡೆದಾಗ ಅನ್ನೋದು ಒಂದು ಯಕ್ಷ ಪ್ರಶ್ನೆಯೇ ಸರಿ, ಹೀಗಿರಬಹುದೇನೋ ಎಂದು ಊಹಿಸಿಕೊಂಡು ಈ ಪತ್ರ ಬರೆದಿದ್ದೇನೆ. ಅಂದ ಹಾಗೆ ಇದು ನನ್ನ ಹಿಂದಿನ ಬರಹಗಳಿಗೆ ಮತ್ತು ಧರಿತ್ರಿಯಲ್ಲಿ ಪ್ರಕಟವಾಗಿರುವ ಪ್ರೇಮ ಪತ್ರಕ್ಕೆ ಉತ್ತರ ನೀಡುವ ಬಾಲಿಶ ಪ್ರಯತ್ನ. ಎಂದಿನಂತೆ ತಪ್ಪಿದ್ದರೆ ಕ್ಷಮಿಸಿ ತಿದ್ದುತ್ತೀರಿ ಎಂಬ ನಂಬಿಕೆಯಿದೆ.)

ಪ್ರೇಮ ಲೋಕದ ಹಿಮ ಬಿಂದು,

ಹೀಗೆ ಕರೆಯುವ ಮುನ್ನ "ನನ್ನ ಪ್ರೀತಿಯ" ಅಂತ ಸೇರಿಸಲು ಯಾಕೋ ಇವತ್ತು ಮನಸ್ಸು ಕೇಳುತ್ತಿಲ್ಲ ಗೆಳೆಯ, ನಾನು ಆ ಯೋಗ್ಯತೆ ಕಳೆದುಕೊಂಡಿದ್ದೇನೆ ಎಂದು ನೀನು ಹೇಳುತ್ತೀಯೇನೋ, ನನ್ನ ಬಳಿ ಅದಕ್ಕೆ ಉತ್ತರವಿಲ್ಲ. ನೀನೂ ನನಗಿನ್ನು ಬೇಡ ಎಂದು ತೀರ್ಮಾನಿಸಿ ನಿನ್ನೆದುರು ಹಾಗೆ ನಿಂತು ಕಣ್ಣಿಗೆ ಕಣ್ಣು ಬೆರೆಸಲಾಗದೆ ಒತ್ತರಿಸಿ ಬರುತ್ತಿದ್ದ ದುಃಖ ತಡೆದು ಕ್ಷಮಿಸಿ ಬಿಡು ಇಲ್ಲಿಂದ ಮುಂದೆ ನಾವು ಒಂದೇ ದಾರಿಯಲ್ಲಿ ಸಾಗಲಾರೆವು ಎಂದು ನಾನೇ ಅಂದ ಕ್ಷಣ ನನಗೆ ಈ ಭೂಮಿ ಇಲ್ಲೇ ಬಾಯಿ ಬಿಟ್ಟು ಬಿಡಬಾರದೆ ಎಂದೆನಿಸಿದ್ದು ಸುಳ್ಳಲ್ಲ. ಪ್ರೀತಿಸಲು ನೂರು ಕಾರಣಗಳು ಬೇಕು, ಪ್ರೀತಿ ನಿರಾಕರಿಸಲು ಕಾರಣವೇ ಬೇಕಾಗುವುದಿಲ್ಲ ಎಂಬ ನಿನ್ನ ಮಾತನ್ನು ನಾನು ಎಂದಿಗೂ ಒಪ್ಪಲಾರೆ ಗೆಳೆಯ. ಇಂದು ಈ ಪ್ರೀತಿ ಮುಂದುವರೆಸಲು ಸಾಧ್ಯವಿಲ್ಲ ಎಂದೆನಲು ನನ್ನಲ್ಲಿ ಸಾವಿರ ಕಾರಣಗಳಿವೆ ಹುಡುಗ.

ನಿನ್ನಲ್ಲಿಂದ ಬಂದು ಅಮ್ಮನಿಗೆ ಮುಖವನ್ನು ತೋರಿಸದೇ ನೇರ ಸ್ನಾನ ಗೃಹಕ್ಕೆ ಹೋದವಳು, ಅನಾಮತ್ತು ೫ ಬಿಂದಿಗೆ ತಣ್ಣೀರು ಸುರಿದು ಕೊಂಡಿದ್ದೆ, ಆ ತಣ್ಣೀರಿನ ನಡುವೆ ನನ್ನ ಕಣ್ಣೀರು ಕಾಣದೆ ಹೋಗಿ ಬಿಡಲೆಂದು. ನನ್ನಿಂದ ಆಗಲಿಲ್ಲ ಗೆಳೆಯ, ಅಮ್ಮನಿಗೆ ಮುಖ ಕೊಟ್ಟು ಮಾತನಾಡಲಾಗಲಿಲ್ಲ, ಅಪ್ಪನ ಮಾತಿಗೆ ಉತ್ತರಿಸಲಾಗಲಿಲ್ಲ. ನಿನ್ನನ್ನು ಪ್ರೀತಿಸಿದ ಮೇಲೆ ನನ್ನ ಮನೆಯಲ್ಲಿ ನಾನು ಪರಕೀಯಳೇನೋ ಎಂದೆನಿಸಲಾರಂಭಿಸಿ ಬಿಟ್ಟಿತು ಕಣೋ.

"ನನ್ನ ಮುದ್ದು ಮಗಳೇ ನಿನಗೆ ಒಬ್ಬ ಒಳ್ಳೆ ಹುಡುಗನನ್ನು ನೋಡಿ ಅಂಗಳಕ್ಕೆಲ್ಲ ಚಪ್ಪರ ಹಾಕಿ, ಚೆಂದದ ಅಲಂಕಾರದಲ್ಲಿ, ಗುರು ಹಿರಿಯರ ಎದುರಲ್ಲಿ, ಮತ್ತು ಎಲ್ಲ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟು, ಊರಿನವರೆಲ್ಲ ಎಷ್ಟು ಚೆನ್ನಾಗಿತ್ತು ಮದುವೆ, ಹಸೆ ಮಣೆಯ ಮೇಲೆ ನಿನ್ನ ಮಗಳು ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಾಣುತ್ತಿದ್ದಳು, ಅದೆಷ್ಟು ಮುದ್ದಾಗಿದ್ದಾಳೋ ನಿನ್ನ ಮಗಳು ಎಂದೆನ್ನ ಬೇಕು" ಎಂದು ಅಪ್ಪ ನನ್ನ ತಲೆ ನೇವರಿಸಿ ನುಡಿದಾಗ ನೀನು ಅದೆಷ್ಟು ನೆನಪಾಗಿದ್ದೆ ಗೊತ್ತಾ ಗೆಳೆಯ, ನಾನು ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ಅಪ್ಪನ ಮಡಿಲಲ್ಲಿ ಮುಖ ಹುದುಗಿಸಿ ಮಲಗಿದರೆ, ಆಗ ಕಣ್ಣೀರು ತುಂಬಿ ಅಪ್ಪ ಏನೆಂದರು ಗೊತ್ತ "ಅಪ್ಪ-ಅಮ್ಮನ್ನ ಬಿಟ್ಟು ಹೋಗ ಬೇಕು ಅಂತ ಅಳ್ತೀಯಲ್ಲೋ ಕಂದ, ನನಗೆ ಗೊತ್ತು ನಿನಗೆ ಎಷ್ಟು ಕಷ್ಟ ಆಗುತ್ತೆ ಅಂತ, ಎಲ್ಲರೆದುರು ನಿನ್ನ ಮದುವೆ ತುಂಬಾ ಚೆನ್ನಾಗಿ ಮಾಡಿ ಕೊಡಬೇಕು ಅನ್ನೋದೇ ನನ್ನ ಆಸೆ, ನಿನ್ನ ನೋಡಿ ಎಲ್ಲಾರು ಎಂತಹ ಸಂಸ್ಕಾರದಿಂದ ಮಗಳನ್ನು ಬೆಳೆಸಿದ್ದಾನೆ ಅಂತ ಖುಷಿ ಪಡಬೇಕು, ಮತ್ತು ನಾನು ಅವರ ಮಾತು ಕೇಳಿ ಹೆಮ್ಮೆ ಪಡಬೇಕು." ಎಂದು ಹೇಳಿ, ಅಮ್ಮನ ಕುರಿತು "ನೋಡೇ ನಮ್ಮ ಮಗಳು ಮದುವೆ ಆಗಿ ಅಪ್ಪ-ಅಮ್ಮನ್ನ ಬಿಟ್ಟು ಹೋಗೋದಿಲ್ಲ ಅಂತ ಅಳ್ತಾ ಇದ್ದಾಳೆ." ಎಂದಾಗ ಅದಕ್ಕೆ ದನಿಗೂಡಿಸಿದ ಅಮ್ಮ "ಪುಟ್ಟ, ನಿಮ್ಮಪ್ಪನ ಒಂದೇ ಒಂದು ಆಸೆ ಕಣೋ ಬಂಗಾರಿ ಇದು, ನೀನು ಮದುವೆ ಆಗಲೇ ಬೇಕು ಕಂದ, ಹಠಮಾಡ ಬಾರದು ಚಿನ್ನಾ" ಅಂತ ನನ್ನ ಅಪ್ಪಿ ಹಿಡಿದಿದ್ದಳು. ಯಾಕೋ ನೀನು ನನ್ನ ತಬ್ಬಿ ಹಿಡಿದಿದ್ದು ಕೂಡ ಇಷ್ಟು ಹಿತವಾಗಿರಲಿಲ್ಲವೇನೋ ಅಂತ ಮೊದಲ ಬಾರಿಗೆ ಅನ್ನಿಸಿ ಬಿಟ್ಟಿತು ಕಣೋ ಗೆಳೆಯ.

ರಾತ್ರಿಯೊಬ್ಬಳೆ ಕೋಣೆ ಸೇರಿ ಸದ್ದೇ ಮಾಡದೆ ಅದೆಷ್ಟು ಅತ್ತು ಬಿಟ್ಟಿದ್ದೆ ಗೊತ್ತ ಗೆಳೆಯ, ನೀನು ತುಂಬಾ ನೆನಪಾಗಿದ್ದೆ ಅವತ್ತು. ನಾನು ಪ್ರೀತಿಸಿ ತಪ್ಪು ಮಾಡಿದೆನೇನು ಎಂಬ ಪ್ರಶ್ನೆ ಜೀವ ಹೋಗುವಷ್ಟು ಕಾಡಿದ್ದೆ ಆ ರಾತ್ರಿ. ನೀನು ಯಾವಾಗಲು ಹೇಳ್ತೀಯಲ್ಲ "ಪ್ರೀತಿಸಿದ ಮೇಲೆ ಮನೆಯವರು ಚಪ್ಪರ ಹಾಕಿ ಮದುವೆ ಮಾಡಿ ಕೊಡ ಬೇಕು ಅಂತ ನಿರೀಕ್ಷಿಸೋದು ತಪ್ಪು, ಒಪ್ಪಿದರೆ ಸಂತೋಷ, ಒಪ್ಪದಿದ್ದರೆ ನಾವು ಮದುವೆ ಆಗಿ ಇವರಿಬ್ಬರನ್ನು ಬೇರೆ ಮಾಡಿದ್ದಿದ್ದರೆ ಎಂತಹ ತಪ್ಪಾಗುತ್ತಿತ್ತು ಅಂತ ಅವರಿಗೇ ಅನ್ನಿಸಿ ಬಿಡುವಷ್ಟು ಚೆಂದಗೆ ಬದುಕಿ ಬಿಡೋಣ", ನಿನ್ನ ಜೀವನ ಪ್ರೀತಿಗೆ ನೀನೆ ಸಾಟಿ ಗೆಳೆಯ, ಆದರೆ ನನ್ನಿಂದ ಇಂದು ಸಾಧ್ಯವಾಗುತ್ತಿಲ್ಲ ಕಣೋ. ಯಾಕೋ ನನಗೆ ಇವತ್ತು ಈ ಮಾತು ಇಷ್ಟ ಆಗುತ್ತಿಲ್ಲ ಕ್ಷಮಿಸಿ ಬಿಡು ಗೆಳೆಯ. ನನ್ನ ಮದುವೆಗೆ ಚಪ್ಪರ ಇರಲೇ ಬೇಕು, ನನಗೋಸ್ಕರ ಅಲ್ಲದಿದ್ದರೂ ಅಪ್ಪ-ಅಮ್ಮನಿಗೊಸ್ಕರ ಮತ್ತು ಅವರ ಗೌರವಕ್ಕೋಸ್ಕರ. ನನ್ನಪ್ಪ ಅಂದರೆ ಊರಿನವರಿಗೆಲ್ಲ ತುಂಬು ಗೌರವ, ಅದನ್ನು ನಮ್ಮ ಸ್ವಾರ್ಥಕ್ಕಾಗಿ ಕಳೆದು ಬಿಡಲೇನೋ ಗೆಳೆಯ.

ಅಪ್ಪ-ಅಮ್ಮ ನಮ್ಮ ಪ್ರೀತಿಗೆ ಒಪ್ಪಲಾರರು ಗೆಳೆಯ ನಮ್ಮಿಬ್ಬರದು ಬೇರೆ ಬೇರೆ ಜಾತಿ, ಮತ್ತು ಜಾತಿ ಬಿಟ್ಟವಳು ಎಂದೆನಿಸಿ ಕೊಂಡು ನಿನ್ನ ಜೊತೆ ಬಂದು ಬಿಡಲು ನಾನು ಸಿದ್ಧಳಾದರು. ನಾಳೆ ನಮ್ಮ ಮಗುವಿನದು ಯಾವ ಜಾತಿ ಗೆಳೆಯ. ನೀನು ಯಾವಾಗಲು ಹೇಳುತ್ತಿದ್ದೆಯಲ್ಲ ಜಗತ್ತಿನಲ್ಲಿರುವುದು ಕೇವಲ ಎರಡೇ ಜಾತಿ ಒಂದು ಗಂಡು-ಇನ್ನೊಂದು ಹೆಣ್ಣು ಅಂತ, ಆದರೆ ಇದನ್ನು ಯಾವ ಅರ್ಜಿಯ ಜಾತಿಯ ಕಾಲಂ ನಲ್ಲಿ ಬರೆದರೆ ನಮ್ಮ ಸರ್ಕಾರ ಮಾನ್ಯತೆ ನೀಡುತ್ತದೆ ಹೇಳು ಹುಡುಗ, ನಮ್ಮದು ಹೆಸರಿಗಷ್ಟೇ ಕಣೋ ಜಾತ್ಯಾತೀತ ರಾಷ್ಟ್ರ. ನಾನು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಾದ ಕ್ಷಣ ಅಪ್ಪ-ಅಮ್ಮನನ್ನು ಕಳೆದು ಕೊಂಡು ಬಿಡುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತಿತ್ತು ಕಣೋ ಹುಡುಗ.

ನಿನ್ನನ್ನು ನೆನಪಿಸಿಕೊಂಡು ನಾನು ರಾತ್ರಿಯಿಡೀ ಅತ್ತಿದ್ದೇನೆ ಗೆಳೆಯ, ಆದರೆ ಹುಡುಗಿ ನೋಡು ನಿನ್ನಂತೆ ಎಲ್ಲವನ್ನು ಎದುರಿಸಿ ನಿಂತು ಘರ್ಜಿಸುವ ಶಕ್ತಿಯಿಲ್ಲದೆ ಹೋಯಿತು. ಅಮ್ಮ ತಾನು ಗಂಜಿ ಕುಡಿದು ನನಗೆ ಅನ್ನ ಮಾಡಿ ಹಾಕಿದ್ದಾಳೆ, ಅಪ್ಪ ಅದೇ ತನ್ನ ಹಳೆಯ ಅಂಗಿಗೆ ತೇಪೆ ಹಾಕಿಸಿ ಕೊಂಡು ನನಗೆ ಹೊಸ ಬಟ್ಟೆ ಹಬ್ಬಕ್ಕೆ ಅಂತ ತಂದು ಕೊಟ್ಟಿದ್ದಾರೆ.

ರಾತ್ರಿ ಹೊತ್ತು ಆಕಾಶದ ಚಂದಿರನನ್ನು ನೋಡು, ನಾನು ನೋಡುತ್ತೇನೆ, ಅವನಲ್ಲೂ ಕಲೆಗಳಿವೆಯಂತೆ ಪ್ರೀತಿಯಲ್ಲಿ ನನ್ನ ತಪ್ಪುಗಳಿದ್ದಂತೆ, ಅವನಲ್ಲಿ ನಿನ್ನನ್ನು ಕಾಣಲು ಯತ್ನಿಸುತ್ತೇನೆ. ಆದರೆ ಕಣ್ಣೀರ ಬೆಲೆ ಅರ್ಥವಾಗದವಳು ಎಂದೆನ್ನ ಬೇಡ ಗೆಳೆಯ, ನಿನ್ನ ಕಣ್ಣ ಬಿಂದುಗಳನ್ನು ತಡೆಯ ಬೇಕೆಂದು ಮನಸ್ಸು ನುಡಿದರು, ಆಂತರ್ಯ ಅಳುಕಿತ್ತು, ದೂರ ಹೋಗ ಹೊರಟವಳು ಮತ್ತೆ ನಿಂತು ನಕ್ಕು ಹೊರಡುವುದು ತರವಲ್ಲ ಅಲ್ವೇನೋ ಹುಡುಗ, ಮತ್ತೆ ನನಗೆ ನಿನ್ನ ಪಾಲಿನ ದೌರ್ಬಲ್ಯ ಎಂದೆನಿಸಿ ಕೊಳ್ಳುವುದು ಬೇಕಾಗಿರಲಿಲ್ಲ. ಮತ್ತೆ ನಾಳೆಯಿಂದ ನಾನಿರದ ಬದುಕಿನಲಿ ನಿನ್ನ ಕಣ್ಣೀರ ಬಿಂದುವನ್ನು ನೀನೆ ಒರೆಸಿ ಕೊಳ್ಳಬೇಕು ಕಣೋ.

"ವರ್ಷಗಟ್ಟಲೆ ಜತನದಿಂದ ಓದಿ ಕೊನೆಗೆ ಪರೀಕ್ಷೆಯನ್ನು ಬರೆಯಗೊಡದೆ ನೀನು ಅನುತ್ತೀರ್ಣ ಎಂದು ಘೋಷಿಸುತ್ತೀಯೇನೆ ಹುಡುಗಿ" ಅಂತ ನನ್ನನ್ನು ಪ್ರಶ್ನಿಸುತ್ತೀಯ ಗೆಳೆಯ, ಕ್ಷಮಿಸಿ ಬಿಡೋ ಪರೀಕ್ಷಿಸುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೇನೆ. ನಿನ್ನನ್ನು ಬಿಟ್ಟು ಹೊರಟು ಹೋಗುವುದು ನಾನು ಮಾಡುವ ಮೋಸ, ಅತ್ಯಾಚಾರ, ದ್ರೋಹ ಅಂತಾದರೆ, ಹೆತ್ತವರ ಆಸೆಗೆ ಮಣ್ಣೆರಚಿ ನಿನ್ನ ಜೊತೆಗೆ ಬಂದಾಗ ಅಪ್ಪ-ಅಮ್ಮನಿಗೆ ನನ್ನಿಂದ ಆಗುವ ನೋವಿಗೆ ಹತ್ಯೆ ಎಂದೆನ್ನ ಬಹುದಲ್ಲವೇ ಗೆಳೆಯ, ಕೊಂದು ಬಿಡಲೇ ನನ್ನ ಹೆತ್ತವರನ್ನು, ಉತ್ತರಿಸು ಹುಡುಗ.

ನೀನೆ ಹೇಳಿದಂತೆ ನಾನು ನಿನ್ನ ಬದುಕಿನ ಫುಟ್ ಪಾತ್ ಆಗಿಬಿಡುತ್ತೇನೆ, ನೀನು ನಿನ್ನದೇ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟು ಬಿಡು. ನಿಸರ್ಗವನ್ನು ಪ್ರೀತಿಸ ಹೊರಟಿದ್ದೀಯ, ಆದರೆ ಒಂದಂತು ಸತ್ಯ ಧಾರೆಯೆರೆದಷ್ಟು ದಿನ ನನ್ನ ನಿಷ್ಕಳಂಕ ಪ್ರೀತಿಯನ್ನು ಧಾರೆಯರೆದ ತೃಪ್ತಿಯಿದೆ ನನಗೆ. ಇಲ್ಲಿ ನನ್ನ ಕಣ್ಣ ಬಿಂದುವಿಗೆ ಹೊಣೆಯಾರು ಇಲ್ಲ, ಆದರೆ ನಿನ್ನ ಕಣ್ಣಲ್ಲಿ ಹನಿ ಬಿಂದುವಿಗೆ ಜಾಗ ಮಾಡಿ ಕೊಟ್ಟಿದ್ದಕ್ಕೆ ದಯವಿಟ್ಟು ಕ್ಷಮಿಸಿ ಬಿಡೋ ಗೆಳೆಯ. ಇನ್ನೇನು ಬರೆಯಲಾಗುತ್ತಿಲ್ಲ ನನ್ನಿಂದ, ಕಣ್ಣೀರ ಕಟ್ಟೆ ಒಡೆದಿದೆ ಇಲ್ಲಿ, ಜೊತೆಗೆ ಕೈ ಕೂಡ ನಡುಗುತ್ತಿದೆ ಕಣೋ.

ಇಂತಿ,
-ಅವಳೇ (?)

ಬುಧವಾರ, ಏಪ್ರಿಲ್ 15, 2009

ಸೋಲಿನ ಅಮಲು ಎಂಬ ಬದುಕಿನ ಅಪಭ್ರಂಶು

ಇಡೀ ಕೋಣೆಯ ತುಂಬಾ ಅಸ್ತವ್ಯಸ್ತವಾಗಿ ಏನೇನೋ ಹರಡಿ ಹೋಗಿದೆಯೇನೋ ಎಂಬಂತಿದೆ, ಅಲ್ಲಿಯ ಪ್ರತಿ ವಸ್ತುವು ಒಪ್ಪವಾಗಿ-ಅಚ್ಚುಕಟ್ಟಾಗಿ ತಮ್ಮ ಜಾಗದಲ್ಲಿ ಕುಳಿತಿವೆಯಾದರು ಅಲ್ಲಿ ಎಲ್ಲವು ಅವ್ಯವಸ್ಥಿತ ಅನ್ನುವ ಅಮೂರ್ತ ಭಾವ, ಅವನು ಏನನ್ನೋ ಕಳೆದು ಕೊಂಡಿರುವವನಂತೆ ಹುಡುಕಾಡುತ್ತಿದ್ದಾನೆ, ಅಲ್ಲಿರುವ ಎಲ್ಲವನ್ನು ತಡಕಾಡುತ್ತಿದ್ದಾನೆ, ಅಸಲಿಗೆ ಅವನು ಹುಡುಕುತ್ತಿರುವುದೇನು ಅಥವಾ ಹುಡುಕಲು ಅವನು ಕಳೆದುಕೊಂಡಿರುವುದೇನು ಎಂಬುದರ ಅರಿವೇ ಅವನಿಗಿಲ್ಲ. ಅಲ್ಲಿ ಕತ್ತಲಿಲ್ಲ ಆದರೂ ಅವನಿಗೆ ಪ್ರತಿ ವಸ್ತುವು ಅಗೋಚರ.

ಸುಮ್ಮನೆ ಹೆಜ್ಜೆ ಇಟ್ಟು ಹೊರಟವನ ಕಾಲಿಗೆ ಅದೇನೋ ಎಡ ತಾಕಿ ಮುಗ್ಗರಿಸುತ್ತಾನೆ, ಮತ್ತೆ ಸಾವರಿಸಿ ಕೊಂಡು ಎದ್ದು ನಿಂತು ಕಾಲಿಗೆ ಸಿಕ್ಕ ವಸ್ತುವನ್ನು ಕೈಯಲ್ಲಿ ಹಿಡಿಯ ಹೋಗುತ್ತಾನೆ, ಅದು ಸಿಗಲೊಲ್ಲದು. ಮತ್ತೆ ದಿಟ್ಟಿಸಿ ನೋಡುತ್ತಾನೆ, ಅದು ಏನು? ಊಹೂಃ ಗೊತ್ತಾಗಲಿಲ್ಲ. ನಿಧಾನವಾಗಿ ಅದರತ್ತ ಕೈ ಚಾಚಿ ಆರ್ದ್ರನಾಗುತ್ತಾನೆ, ಅದಾಗಲೇ ಅವನ ಕೈಜಾರಿದೆ. ಆದರೆ ಏನದು? ಅವನ ಮನದಲ್ಲೊಂದು ಪ್ರಶ್ನೆ ಮೂಡುತ್ತದೆ, ಮತ್ತೆ ಅದರತ್ತ ದೃಷ್ಟಿ ಹಾಯಿಸಿ ನೋಡುತ್ತಾನೆ. ಅದು ಕೈಗೆಟುಕುತ್ತಿಲ್ಲ ಮತ್ತು ಕೈಗೆಟುಕದು ಕೂಡ. ಅಷ್ಟರಲ್ಲಿ ಅದು ಅವನ ಕಣ್ಣಿಗೆ ಮಿಂಚಿದಂತೆ ಕಾಣುತ್ತದೆ, ಸಣ್ಣಗೆ ಚೀತ್ಕರಿಸುತ್ತಾನೆ...

ಹೌದು! ಇದೆ? ನಾನು ಹುಡುಕುತ್ತಿದ್ದದ್ದು ಇದೆ? ನಾನು ಕಳೆದು ಕೊಂಡಿದ್ದು ಇದೆ?

ಅದರೆಡೆಗೆ ದೃಷ್ಟಿ ನೆಟ್ಟು ಕುಳಿತುಕೊಂಡು ಬಿಕ್ಕುತ್ತಾನೆ. ಅದು ಅವನು ವರ್ಷಗಳ ಕಾಲ ತನ್ನ ಜೊತೆಗೆ ತುಂಬಾ ಜತನದಿಂದ ಕಾಯ್ದಿರಿಸಿ ಕೊಂಡು, ಇಷ್ಟಿಷ್ಟೇ ಎನುವಷ್ಟು ಕಟ್ಟಿಕೊಂಡಿದ್ದ ಅವನವೇ ಕನಸುಗಳು. ಅವನ ಮನಸ್ಸು ಮರುಗುತ್ತದೆ, ತನ್ನ ಪ್ರತಿ ಕನಸಿಗೂ ಅವನು ಒಂದು ಹೆಸರಿಟ್ಟು ಕೊಂಡಿದ್ದ. ಅವೆಲ್ಲ ಕಳೆದಿವೆ ಅಲ್ಲಿ, ಅಳಿದುಳಿದುದನೆಲ್ಲ ಕೈ ತುಂಬಾ ತುಂಬಿ ಕೊಳ್ಳಲು ಧಾವಿಸುತ್ತಾನೆ, ಕೈ ಹಿಡಿತ ಬಿಗಿಯಾದಾಗ ಸ್ವಲ್ಪವು ಉಳಿಯದೆ ಜಾರಿ ಹೋಗುವ ಜಲಧಾರೆಯಂತೆ ಅಷ್ಟೂ ಅವನ ಕೈಯಲ್ಲಿ ನಿಲ್ಲಲಾರದೆ ಜಾರುತ್ತವೆ, ಮತ್ತೆ ತಡವರಿಸುತ್ತಾನೆ, ಅವನು ಅಸಹಾಯಕನಂತೆ ನಿಲ್ಲುತ್ತಾನೆ, ಇದನ್ನೆಲ್ಲಾ ಕಳೆದು ಕೊಂಡಿದ್ದೆಲ್ಲಿ ಅನ್ನುವುದು ಅವನಿಗೆ ನೆನಪಿಗೆ ಬರುತ್ತಿಲ್ಲ. ಕಳೆದಿದ್ದನ್ನು ಕಳೆದು ಕೊಂಡಲ್ಲೇ ಹುಡುಕ ಬೇಕು ಎಂಬುದು ಅವನಿಗೂ ಗೊತ್ತಿದೆ, ಆದರೆ ಅವನಿಗೆ ಕಳೆದು ಕೊಂಡ ಸ್ಥಳದ ಗುರುತಿಲ್ಲ, ಇಲ್ಲೇ ಹುಡುಕುತ್ತೇನೆ ಅಂದು ಕೊಂಡು ಹುಡುಕುತ್ತಾನೆ, ಸಿಗಲಾರದು ಎಂಬುದು ಗೊತ್ತಿದ್ದರೂ ಮತ್ತಷ್ಟು ಆಸ್ಥೆಯಿಂದ ಹುಡುಕುತ್ತಾನೆ.

ಅವನು ಹಠಮಾರಿಯೇನಲ್ಲ, ಮೊಂಡನಂತು ಅಲ್ಲವೇ ಅಲ್ಲ. ಏನೋ ಮಾಡಲು ಹೊರಡುತ್ತಾನೆ. ಸೋಲುತ್ತೇನೆ ಎಂಬ ಇಲ್ಲದ ಭಯ ಅವನ ಮನವನ್ನು ಕಾಡುತ್ತದೆ. ಆ ಭಯದಿಂದಲೇ ಇನ್ನು ತನ್ನಿಂದಾಗದು ಎಂದು ಕೈ ಚೆಲ್ಲಿ ಕುಳಿತು ಕೊಳ್ಳುತ್ತಾನೆ, ಜೊತೆಗೆ ಅವನ ಆಂತರ್ಯದ ಶಕ್ತಿ ಕುಂದುತ್ತದೆ. ಅವನಿಗೆ ಗೆದ್ದು ಗೊತ್ತೇ ಇಲ್ಲ ಎಂಬಂತೇನು ಇಲ್ಲ. ಅವನು ಕಳೆದು ಕೊಂಡ ಎಲ್ಲ ಕನಸುಗಳು ಅವನೇ ಹೆಣೆದ ಸಂಕೀರ್ಣಗಳು, ಅದು ಅವನೇ ಬರೆದಿಟ್ಟ ಅವನದೇ ಬದುಕಿನಧ್ಯಾಯದ ಹೊನ್ನಿನ ಸಾಲುಗಳು, ಆದರೆ ಈಗ ಅವೆಲ್ಲ ಅವನಿಂದಾಗುತ್ತಿಲ್ಲ.

ಅವನು ಈಗ ಇನ್ನಾತರಲ್ಲೋ ಸೋತಿದ್ದಾನೆ, ಆ ಸೋಲು ಅವನನ್ನು ಯಾವ ಪರಿ ಹೆದರಿಸಿದೆಯೆಂದರೆ ನನ್ನಿಂದ ಏನು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದಾನೆ. ತನ್ನ ಪ್ರತಿ ಸೋಲಿಗೂ ಒಂದು ಕಾರಣ ಕೊಡುತ್ತಾನೆ. ಅವನು ಸೋಲಿನ ಗುಂಗಿನಿಂದ ಹೊರ ಬರುತ್ತಿಲ್ಲ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಲು ಇಲ್ಲ, ಅದು ತಪ್ಪು ಎಂಬುದರ ಅರಿವು ಅವನಿಗೂ ಇದೆ. ಆದರೆ ಸೋಲಿನಲ್ಲೇ ಅವನು ನೆಮ್ಮದಿ ಹುಡುಕುತ್ತಿದ್ದಾನೆ, ಸೋಲಿನ ನೋವು ಅವನಿಗೀಗ ಹಿತವೆನಿಸುತ್ತಿದೆ, ಅದಕ್ಕೇ ಒಗ್ಗಿ ಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ತನ್ನಿಂದ ಗೆಲ್ಲಲಾಗದು ಎಂದು ಈಗಾಗಲೇ ತೀರ್ಮಾನಿಸಿ ಬಿಟ್ಟಿದ್ದಾನೆ, ಪ್ರತಿ ಕನಸಿಗೂ "ಸೋತಿದ್ದೇನೆ, ನನ್ನಿಂದ ಸಾಧ್ಯವಿಲ್ಲ" ಎಂದು ಒಂದು ಅಡಿ ಬರಹ ಬರೆದು ನೇತು ಹಾಕ ಹೊರಟಿದ್ದಾನೆ.

ಎಲ್ಲಾ ಕನಸುಗಳನ್ನು ಕೋಣೆಯ ಮೂಲೆಗೆ ಗುಡಿಸಿದ್ದಾನೆ. ಈಗ ಅವನ ಕಣ್ಣಂಚಿನಲ್ಲಿ ಒಂದು ಹನಿ ಕಣ್ಣೀರು ಇಲ್ಲ, ತುಂಬಾ ಇಷ್ಟ ಪಟ್ಟು ಓದಿ ಮುಗಿಸಿದ ಪುಸ್ತಕದ ಕೊನೆಯ ಪುಟವನ್ನು ಇನ್ನೊಮ್ಮೆ ಎಂದು ಓದುವಂತೆ ಮೂಲೆ ಸೇರಿದ ಕನಸುಗಳತ್ತ ಕೊನೆಯ ಬಾರಿಗೆಂಬಂತೆ ದೃಷ್ಟಿ ಹಾಯಿಸುತ್ತಾನೆ. ಎಲ್ಲಾ ಮುಗಿಯಿತೇನು? ಎಂದು ಮನಸ್ಸಿಗಷ್ಟೇ ಕೇಳುವಂತೆ ಉದ್ಗರಿಸಿ ಕಣ್ಣು ಮುಚ್ಚುತ್ತಾನೆ.

ಮತ್ತೆ ಮೇಲ್ಚಾವಣಿಯಿಂದ ಏನೋ ಕೆಳಗೆ ಬಿದ್ದು ಒಡೆದ ಸದ್ದು, ತಿರುಗಿ ನೋಡುತ್ತಾನೆ ಅಲ್ಲಿ ಇನ್ನೊಂದು ಕನಸು ಬಿದ್ದು ಒಡೆದಿದೆ ಅದರ ಹೆಸರೇ ಬದುಕು.