ಮಂಗಳವಾರ, ಜನವರಿ 27, 2009

ಅಂದು ದೀಪಾವಳಿಯ ಪ್ರಣತಿ ದೇದೀಪ್ಯಮಾನವಾಗಿ ಜ್ವಲಿಸಲಿ

ಮನೆಯ ಹೊರಗಿನ ಕಿಟಕಿಯ ಮೊದಲ ಸರಳನ್ನು ಕೈ ಚಾಚಿ ಹಿಡಿದು ಆಚೆ ನೋಡುತ್ತಾ ನಿಂತವನಿಗೆ ಎದುರು ಮನೆಯ ಹೊಸ್ತಿಲಿನ ಬಳಿಯಿಟ್ಟಿದ್ದ ಪುಟ್ಟ ಹಣತೆ ಕೂಗಿ ಕರೆದಂತಿತ್ತು. ಅದು ಶುಕ್ರವಾರದ ರಾತ್ರಿ ಮನೆಯೆದುರು ಗುಡಿಸಿ, ನೀರು ಚೆಲ್ಲಿ, ರಂಗವಲ್ಲಿಯನಿಟ್ಟು, ಜ್ಯೋತಿ ಬೆಳಗಿಸಿದ್ದರು. ಈ ದೀಪದ ಜ್ಯೋತಿ ನನ್ನನ್ನು ಕೆಲವಾರು ವರ್ಷಗಳಷ್ಟು ಹಿಂದಕ್ಕೆ ತೇಲಿಸಿ ಕೊಂಡು ಹೋಯಿತು ನೆನಪ ನಾವೆಯಲ್ಲಿ, ಮನಸ್ಸು ತನ್ನ ನೆರಳನ್ನೇ ಬೆನ್ನಟ್ಟಿ ಓಡುವ ಪುಟ್ಟ ಮಗುವಿನಂತೆ ಓಡುತ್ತಿತ್ತು. ಆ ದಿನ ಸಂಜೆ 6:15 ರ ಸುಮಾರಿಗೆ ಅಮ್ಮ ದರಗು(ಒಣಗಿದ ಎಲೆ) ಗುಡಿಸಲು ಹೋದ ಸಣ್ಣ ವಿರಾಮದಲ್ಲಿ ನನಗೆ ಆತುರಾತುರವಾಗಿ ನೀನು ಫೋನಾಯಿಸಿದ್ದೆ. ಮನೆಯ ಫೋನು ರಿಂಗಣಿಸಿದ ತಕ್ಷಣ ಅಮ್ಮ "ಅದು ನಿನಗೇ ಕಣೋ, ಒಂದು ನಿಮಿಷ ಕೊಡುತ್ತೀನಿ, ಮತ್ತೆ ನನ್ನ ಧ್ವನಿ ಕೇಳಿದರೆ ಹಾಗೆ ಫೋನ್ ಇಟ್ಟೇ ಬಿಡುತ್ತಾರೆ ನಿನ್ನ ಗೆಳೆಯರು" ಎನ್ನುತ್ತಾ ಅಡುಗೆ ಮನೆಯಿಂದ ಸ್ಥಿರ ದೂರವಾಣಿಯ ಕಡೆಗೆ ನಡೆದರು. ನನಗೋ ಶಸ್ತ್ರಚಿಕಿತ್ಸೆಯ ಹೆಸರಿನಲ್ಲಿ ವೈದ್ಯರು ಹೊಟ್ಟೆಯನ್ನು ಸಿಗಿದು ಅನಾಮತ್ತಾಗಿ 21 ಹೊಲಿಗೆ ಹಾಕಿ ಮಲಗಿಸಿದ್ದರು, ನಾನು ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದರು ಫೋನಿನ ರಿಂಗಣ ತುಂಬ ಹಿತವಾಗಿದೆ ಎಂಬಂತೆ ಕಿವಿಗೊಟ್ಟು ಕೇಳಿದ್ದು ಸುಳ್ಳಲ್ಲ. ಫೋನನ್ನು ಕೈಗಿತ್ತ ಅಮ್ಮ "ಮಾತನಾಡಿ ಫೋನನ್ನು ಇಲ್ಲೇ ಇಟ್ಟು ಬಿಡು" ಎಂದಷ್ಟೇ ಹೇಳಿ ಒಳಗೆ ನಡೆದರು. ಫೋನನ್ನು ಕಿವಿಗಿಟ್ಟು "ಹಲೋ" ಅಂದರೆ, ಆ ಕಡೆಯಿಂದ ನೀನು "ಸದ್ಯ ನೀನೇ ಫೋನ್ ಎತ್ಕೊಂಡ್ಯಲ್ಲ, ದೀಪಾವಳಿ ಹಬ್ಬದ ಶುಭಾಶಯಗಳು, ಅಮ್ಮ ದರಗು ಗುಡಿಸಲಿಕ್ಕೆ ಹೋದರು, ಅವರು ಕಡೆ ಹೋಗುತ್ತಿದ್ದಂತೆ ಫೋನು ಮಾಡಿದೆ, ಬೆಳಿಗ್ಗೆಯಿಂದ ಅಪ್ಪ ಫೋನ್ ಹತ್ರಾನೇ ಇದ್ರೂ ಹಾಗಾಗಿ ಫೋನ್ ಮಾಡಲಿಕ್ಕಾಗಿರಲಿಲ್ಲ, ಹಾಂ! ಒಮ್ಮೆ ಮಾಡಿದೆ, ನಿಮ್ಮ ಅಮ್ಮ ಎತ್ತಿದರು ಮತ್ತೆ ಇಟ್ಬಿಟ್ಟೆ, ನನಗೆ ಭಯ ಆಯ್ತು. ನಿನಗೆ ಗೊತ್ತ ನೆನ್ನೆ ರಾತ್ರಿ ಅಪ್ಪ ಬರೋದು ತಡವಾಗಿತ್ತು, ಚಂಪಾಳಿಗೆ ವಿಪರೀತ ಹೊಟ್ಟೆ ನೋವು ಶುರುವಾಗಿ ಬಿಟ್ಟಿತ್ತು, ನಂಗೆ ಮತ್ತು ಅಮ್ಮನಿಗೆ ಏನು ಮಾಡ ಬೇಕು ಗೊತ್ತೇ ಆಗಲಿಲ್ಲ, ಕೊನೆಗೆ ಒಂಬತ್ತು ಗಂಟೆಗೆ ಚಂಪಾ ಕರು ಹಾಕಿದ್ಳು, ಗಂಡು ಕರು ಕಣೋ, ಅಮ್ಮ ಕೇಳ್ತಿದ್ರು ಏನು ಹೆಸರು ಇಡೋಣ ಅಂತ, ನಾನು ನಿನ್ನ ಹೆಸರು ಹೇಳೋಣ ಅಂದ್ಕೊಂಡೆ. ಇವತ್ತು ಸಂಜೆ ಒಂದು ಮೈನಾ ಹಕ್ಕಿ ಬಂದು, ನಮ್ಮ ಮನೆಯೆದುರಿನ ಗಿಡದಲ್ಲಿ ಕುಳಿತಿತ್ತು. ಜೋಡಿ ಮೈನಾ ನೋಡಿದರೆ ತುಂಬ ಒಳ್ಳೆಯದಂತೆ ಹಾಗಾಗಿ ಇನ್ನೊಂದು ಹುಡುಕುತ್ತಿದ್ದೆ, ಅಷ್ಟರಲ್ಲಿ ಇನ್ನೊಂದು ಬಂದು ಅದರ ಪಕ್ಕದಲ್ಲಿ ಕುಳಿತುಕೊಳ್ತು, ನೀನು ಬಂದು ನನ್ನ ಬಳಿ ನಿಂತು ಕೊಳ್ತೀಯಲ್ಲ ಹಾಗೆ. ನನಗೆ ಅದೆಷ್ಟು ಖುಷಿಯಾಯ್ತು ಗೊತ್ತ ಅವನ್ನು ನೋಡಿ. ಇವತ್ತು ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿದ್ದೆ, ನೀನು ಬೇಗ ಹುಶಾರಾಗಲಿ ಅಂತ ದೇವರಲ್ಲಿ ಕೇಳ್ಕೊಂಡು ಪೂಜೆ ಮಾಡಿಸಿದೆ, ಆದಷ್ಟು ಬೇಗ ನಾನು ನಿನ್ನ ಹೆಂಡತಿಯಾಗುವಂತಾಗಲಿ ಅಂತ ಬೇಡ್ಕೊಂಡೆ. ಆಮೇಲೆ ನಾನು ನಿನ್ನ ಪಕ್ಕದಲ್ಲೇ ಇರಬಹುದಲ್ವಾ, ನಿನ್ನ ನಲಿವಿಗೂ-ನೋವಿಗೂ ಆಸರೆಯಾಗಿ. ನೀನಿಲ್ದೆ ಹಬ್ಬ ಮಾಡೋದು ತುಂಬ ಬೇಜಾರು ಕಣೋ, ಅಪ್ಪ-ಅಮ್ಮ ಸಿಟ್ಟು ಮಾಡ್ಕೊತಾರೆ ಅಂತ ಇವೆಲ್ಲ ಮಾಡಬೇಕಷ್ಟೇ. ನಮ್ಮ ಮದುವೆಯಾದ ಮೇಲೆ ನೀನು ಬಾಗಿಲಿಗೆ ಮಾವಿನ ತೋರಣ ಕಟ್ಟು, ನಾನು ಬಾಗಿಲು ಸಾರಿಸಿ ರಂಗೋಲಿ ಹಾಕ್ತೀನಿ, ನಾನು ದೇವರ ಸಾಮಗ್ರಿ ತೊಳೆಯುತ್ತೇನೆ, ನೀನು ದೇವರ ಕೋಣೆ ಸ್ವಚ್ಚ ಮಾಡು, ಪೂಜೆ ಒಟ್ಟಿಗೆ ಮಾಡೋಣ. ಅಡುಗೆಗೆ ಸಹಾಯ ಮಾಡ್ಬೇಕು, ನಾನು ಏನು ಸಿಹಿ ಮಾಡಿದ್ರು ಸುಮ್ಮನೆ ತಿನ್ನಬೇಕು, ಅಣಕಿಸುವಂತಿಲ್ಲ. ನನಗೆ ನಿನ್ನಷ್ಟು ಚೆನ್ನಾಗಿ ಅಡುಗೆ ಮಾಡಲಿಕ್ಕೆ ಬರಲ್ಲ ಕಣೋ. ಸರಿ ಸರಿ ಹಿತ್ತಲಲ್ಲಿ ಸದ್ದಾಗುತ್ತಿದೆ, ಅಮ್ಮ ಬಂದರು ಅನ್ಸುತ್ತೆ, ಬಾಗಿಲಿಗೆ ದೀಪ ಇಡಲು ಹೇಳಿದ್ರು, ನಿನ್ನನ್ನು ತುಂಬ ಮಿಸ್ ಮಾಡ್ಕೊಳ್ತಿದೀನಿ ಕಣೋ ಗೂಬೆ, ನನ್ನ ಜೀವ ಹೋಗುವಷ್ಟು. ಸರಿ ಅಮ್ಮ ಬಂದೇ ಬಿಟ್ರು, ನಾಳೆ ಫೋನ್ ಮಾಡ್ತೀನಿ", ಇಷ್ಟು ಹೇಳಿ ನೀನು ಫೋನ್ ಇಟ್ಟಿದ್ದೆ, ನಾನು ಏನು ಮಾತನಾಡದೇ, ಸುಮ್ಮನೆ ನಿನ್ನ ಮಾತುಗಳಿಗೆ ಕಿವಿಯಾಗಿದ್ದೆ ತುಂಬು ಪ್ರೀತಿಯಿಂದ. ನನಗೆಂದು ಕೈಯಲ್ಲಿ ಒಂದು ಲೋಟ ಹಾಲು ಹಿಡಿದು ಬಂದ ಅಮ್ಮ "ನಾನು ಫೋನೆತ್ತಿದರೆ ಅದೇಕೆ ಇಟ್ಟು ಬಿಡುತ್ತಾರೋ ಪುಣ್ಯಾತ್ಮರು" ಅನ್ನುತ್ತಾ ಸ್ವಗತ ಹಾಡಿ ಫೋನನ್ನು ಸ್ವಸ್ಥಾನಕ್ಕೆ ಸೇರಿಸಿದ್ದರು. ನಾನು ಮಲಗಿದ್ದ ಮಂಚ ಕಿಟಕಿಯ ಸಮೀಪದಲ್ಲೇ ಇದ್ದಿದ್ದರಿಂದ ಹೊರಗೆ ಕಣ್ಣು ಹಾಯಿಸಿದೆ, ಕಿಟಕಿಯ ಹೊರಬಾಗದಲ್ಲಿ ಅಮ್ಮ ಹಚ್ಚಿಟ್ಟಿದ್ದ ದೀಪ ಗಾಳಿಯ ಲಯಕ್ಕೆಂಬಂತೆ ನರ್ತಿಸುತ್ತಾ ಬೆಳಗುತ್ತಿತ್ತು, ಸಣ್ಣ ಚಿಟ್ಟೆಯಂತ ಹುಳುಗಳು ದೀಪವನ್ನು ಅಣಕಿಸಲೆಂಬಂತೆ ಹಾರಿ, ಮುತ್ತಿಡುವ ಭರದಲ್ಲಿ ಸುಟ್ಟು ಧರೆಗೆ ಉರುಳುತ್ತಿದ್ದವು. ನಾನು ನಿನ್ನ ಮಾತುಗಳನ್ನು ನೆನಪಿಸಿಕೊಂಡು ಕಣ್ಣಾಲಿಗಳಲ್ಲಿ ಕಂಡು ಕಾಣದಂತೆ ಕಣ್ಣೀರು ತುಂಬಿ ಕೊಂಡಿದ್ದೆ. ಹುಡುಗಿ ನಿನಗೆ ಗೊತ್ತಿರಲಿಕ್ಕಿಲ್ಲ ಇನ್ನೇನು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ನನ್ನನ್ನು ಸಾಗಿಸುವಾಗ ಅಮ್ಮನಿಗಿಂತ ಹೆಚ್ಚು ನೆನಪಾದವಳು ನೀನು, ನಿನ್ನ ಮುಖ ಒಮ್ಮೆ ನೋಡಬೇಕು ಎಂದು ತೀವ್ರವಾಗಿ ಹಂಬಲಿಸಿದ್ದೆ ನಾನು. ಇದನ್ನೆಲ್ಲಾ ಯೋಚಿಸಿ ಕನ್ನಡಕ ತೆಗೆದಿರಿಸಿ, ಕಣ್ಣು ಒರೆಸಿಕೊಂಡು ಹೊರಗೆ ದಿಟ್ಟಿಸಿದವನಿಗೆ ಕಂಡಿದ್ದು ದೀಪಾಲಂಕಾರದಲ್ಲಿ ಸಿಂಗಾರಗೊಂಡಿದ್ದ ನಮ್ಮ ಬೀದಿ, ಪಟಾಕಿ ಸಿಡಿಸುತ್ತಿದ್ದ ಮಕ್ಕಳು, ಅವರ ಜೊತೆಗೆ ನಲಿಯುತ್ತಿದ್ದ ಹಿರಿಯರು. ನಮ್ಮ ಮನೆಗೆ ಪಟಾಕಿ ವರ್ಜ್ಯ, ಪಟಾಕಿ ಸಿಡಿಸುವುದು ಪರಿಸರ ಮಾಲಿನ್ಯಕ್ಕೆ ಕಾರಣ ಎನ್ನುತ್ತಿದ್ದ ಅಮ್ಮ, ಕೇವಲ ದೀಪ ಬೆಳಗಿದರೆ ಸಾಕು ಎಂದೇ ನನಗೆ ಬಾಲ್ಯದಿಂದ ಹೇಳುತ್ತಾ ಬಂದಿದ್ದಳು. ಅಮ್ಮ ಕ್ರಾಂತಿಕಾರಿ ಅಲ್ಲ, ಬಹಳ ದೊಡ್ಡ ಪರಿಸರ ಪ್ರೇಮಿಯಂತೆ ಮಾತನಾಡಲು ನಿಲ್ಲುವವಳು ಅಲ್ಲ, ಬೇರೆಯವರಿಗೆ ಅದು ಸರಿಯೆನ್ನಿಸಿದರೆ ಮಾಡಲಿ, ನಾವು ಮಾಡುವುದು ಬೇಡ ಎನ್ನುವ ಕಠೋರ ನಿಲುವಿನವಳು. ಆಕೆ ಬೇರೆಯವರು ತಾನು ಹೇಳಿದಂತೆ ಕೇಳಬೇಕೆಂದು ಎಂದಿಗೂ ನಿರೀಕ್ಷಿಸಿದವಳಲ್ಲ ಮತ್ತು ನಿರೀಕ್ಷಿಸುವುದು ಇಲ್ಲ. ಆದರೆ ನೀನು ಮನೆಗೆ ಚಿಕ್ಕವಳು, ಹಾಗಾಗಿ ನಿನಗೆ ಒಂದು ಹಿಡಿ ಮುದ್ದು ಜಾಸ್ತಿಯೇ, ನಿನಗೆ ಪಟಾಕಿ ಇಷ್ಟ, ನೀನು ನನಗೆ ಹೇಳ್ತಾ ಇದ್ದಿದ್ದು ಹೀಗೆ ಅಲ್ವ "ಮುಂದೆ ನೀನು ನನಗೆ ಪಟಾಕಿ ತಂದು ಕೊಡು, ನೀನು ಹೊಡೆಯೋದು ಬೇಡ, ಎರಡೇ-ಎರಡು ಪಟಾಕಿ ನಾನು ಹೊಡೆಯುತ್ತೀನಿ, ನಾನು ಧೈರ್ಯವಂತೆ ಕಣೋ, ಲಕ್ಷ್ಮಿ ಪಟಾಕಿಯೆಲ್ಲ ಹೊಡಿತೀನಿ. ನೀನು ಬೇಡ ಅನ್ನಬಾರದು ಆಯ್ತಾ, ಅನ್ನಲ್ಲ ಅಲ್ವ? ಹೇಳು, ಬೇಡ ಅನ್ನಲ್ಲ ಅಲ್ವ? " ಹೀಗೆನ್ನುತ್ತ ದುಂಬಾಲು ಬೀಳುತ್ತಿದ್ದೆ. ನಾನು ಬೇಕೆಂದೇ ನಿನಗೆ ಕಾಡಿಸಿ, ಕೊನೆಗೆ "ಬೇಡ ಅನ್ನಲ್ಲ ಕಣೋ" ಅಂದರೆ, ನೀನು "ಬೇಡ ಅಂದರು ನಾನು ಹೊಡಿತೀನಪ್ಪ" ಎಂದು ನನಗೆ ರೇಗಿಸಿ, ಮತ್ತೆ "ಹೀಗೆಂದೇ ಅಂತ ಬೇಜಾರಾಯ್ತೇನೋ?" ಅಂತ ಕೇಳುತ್ತಿದ್ದೆ, ನಿನ್ನ ಮಾತಿಗೆ ನಾನು ನಗುತ್ತಿದ್ದೆ, ಆಗ ನೀನು ನನ್ನೆದುರು ನಾಚಿ ನಿಲ್ಲುತ್ತಿದ್ದ ಮೌನ ಗೌರಿ.
"ಹೀಗೆ ನೀನಿರದ ಹೊತ್ತಲ್ಲಿ, ನೀನಿದ್ದಾಗಿನ ನಿನ್ನ ನೆನಪುಗಳು ಬಂದು ಕಾಡುತಿವೆ, ನನ್ನೆದೆಯ ಚುಚ್ಚುತಿವೆ. ನಾನು ನರಳುತ್ತೇನೆ, ನೋವ ದನಿಗೆ ಕೊರಳಾಗುತ್ತೇನೆ, ಮತ್ತೆ ನೆನಪ ಪುಟಗಳ ಮಡಿಕೆಗೆ ಮರಳುತ್ತೇನೆ, ಮತ್ತಲ್ಲೇ ಹೊರಳಾಡುತ್ತೇನೆ, ನಾಲಿಗೆ ಒಣಗುತ್ತದೆ, ಪುಟ ತಿರುವಿ ಹಾಕಲು ಅಲ್ಲಿ ಈಗ ತೇವವು ಇಲ್ಲ"
ಈಗ ನೋಡು ಹುಡುಗಿ, ನಾವಿಬ್ಬರೂ ಒಟ್ಟಾಗಿ ಆಚರಿಸುವ ಯಾವ ದೀಪಾವಳಿಯು ಬರುವುದಿಲ್ಲ ಎಂದು ಯೋಚಿಸಿದಾಗ ನನ್ನ ಆಂತರ್ಯ ನಡುಗುತ್ತದೆ, ದನಿ ಅತೀವವಾಗಿ ಕಂಪಿಸುತ್ತದೆ. ಕಿಟಕಿಯ ಮೊದಲ ಸರಳು ಹಿಡಿದು ನಿಂತವನು, ಸೋತು ಕುಸಿಯುತ್ತೇನೆ, ಕೈ ಕೊನೆಯ ಸರಳನ್ನು ತಲುಪುತ್ತದೆ. ಉರಿಯುತ್ತಿರುವ ಎದುರು ಮನೆಯ ಹಣತೆ ನಕ್ಕಂತಾಗುತ್ತದೆ. ನಾನು ಅದನ್ನು ನೋಡಲಾಗದೆ ಕಣ್ಣು ಮುಚ್ಚುತ್ತೇನೆ, ಮತ್ತೆ ನೀನು ನೆನಪಾಗುತ್ತೀಯ. ಅವಳಿರುವಾಗ ನಾವು ಹೇಗೆ ಇರಲು ಸಾಧ್ಯ ಎಂದು ಮುನಿದು ಕಂಬನಿಗಳು ಧರಣಿ ಮಾಡಲೆಂಬಂತೆ ಮೆರವಣಿಗೆ ಹೊರಡುತ್ತವೆ. ನಾನು ಅವನ್ನು ತಡೆಯ ಹೊರಡುತ್ತೇನೆ, ಅವುಗಳ ಹರಿವು ಇನ್ನು ಜೋರಾಗುತ್ತದೆ, ನಾನು ತಡೆಯಲೆತ್ನಿಸಿದಷ್ಟು. ಬರುವ ದೀಪಾವಳಿ ನಿನಗೆ ದಾಂಪತ್ಯದ ಹೊಸ ಹಬ್ಬವಾಗಬಹುದು, ಅಲ್ಲಿ ನಮ್ಮ ಪ್ರೀತಿಯ ನೆನಪಿಗೊಂದು ಹಣತೆ ಹಚ್ಚಿ, ಅದಕ್ಕೆ ನಾನು-ನೀನು ಎಂದಷ್ಟೇ ಹೆಸರಿಡು. ದೀಪ ಬೆಳಗಿ ಬಿಡಲಿ, ನೆನಪು ಕರಗುವ ತನಕ, ಜೊತೆಗೆ ನನ್ನ ಈ ಉಸಿರು ನಿಲ್ಲುವ ತನಕ.

ಬುಧವಾರ, ಜನವರಿ 14, 2009

ನಾನು, ಅವಳು ಮತ್ತು ಪ್ರೀತಿ

ಪಿಸು ಮಾತು - ೧

ಪ್ರೀತಿಯ ಅವಳೇ,
"ಒಮ್ಮೆ ಗತಿಸಿದ ಸಮಯ ಮತ್ತೆ ಬಾರದು
ಪ್ರೀತಿ ಸಂದೇಶ ಮುಟ್ಟಿಸುವ ಹೊಣೆ ನನ್ನದು
ಸ್ವೀಕಾರ-ತಿರಸ್ಕಾರದ ನಿರ್ಧಾರ ನಿನ್ನದೂ
ಪ್ರೀತಿ-ಪ್ರೇಮದ ವಿಚಾರದಲ್ಲಿ ಒತ್ತಾಯ ಸಲ್ಲದು"
ಈ ಸಾಲುಗಳಿಗೆ ಸರಿಯಾಗಿ ಎಂಟು ವರ್ಷ ತುಂಬಿದೆ, ನಿನ್ನಲ್ಲಿ ಪ್ರೀತಿ ನಿವೇದನೆ ಮಾಡಿ ಮನೆಗೆ ಬಂದ ದಿನ ಮನಸ್ಸಿಗೆ ತೋಚಿದಂತೆ ಗೀಚಿಟ್ಟ ಸಾಲುಗಳಿವು, ನಾನು ನಿನ್ನಲ್ಲಿ ನನ್ನ ಭಾವನೆಯನ್ನು ಹೇಳಿಕೊಂಡು ನೆನ್ನೆಗೆ ಅಂದರೆ ಜನವರಿ ೧೨ಕ್ಕೆ ಎಂಟು ವರ್ಷ ತುಂಬಿದೆ, ನಿನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡವನು ನಿನ್ನ ಮುಖವನ್ನೂ ನೋಡಲಾಗದೆ ಹಾಗು ನಿನ್ನ ಉತ್ತರಕ್ಕೂ ಕಾಯದೆ ಅಲ್ಲಿಂದ ಕಾಲ್ಕಿತ್ತಿದ್ದೆ, ನಂತರ ನೀನು ನನ್ನ ಅಕ್ಕನಂತಹ ಗೆಳತಿಯ ಬಳಿ, ಇವನು ಹೀಗೆ ಕೇಳ್ತಾನೆ ಅಂತ ನಿರೀಕ್ಷಿಸಿಯೇ ಇರಲಿಲ್ಲ ಅಂತ ಹೇಳಿದೆ ಎಂದು ಗೊತ್ತಾದಾಗ, ನಿನ್ನ ಪ್ರೀತಿ ಇಲ್ಲದಿದ್ದರೂ ಬೇಡ ಆದರೆ ನಿನ್ನನ್ನು ನೋಯಿಸಬಾರದಿತ್ತು ಅನ್ನೋ ಉದ್ದೇಶದಿಂದ ಎಂಟು ವರ್ಷಗಳ ಹಿಂದೆ ಸಂಕ್ರಾಂತಿಯ ಹಿಂದಿನ ದಿನ ಇದೆ ರೀತಿ ಬರೆಯಲು ಕುಳಿತಿದ್ದೆ.

ಅದೊಂದು ಕ್ಷಮೆ ಕೋರಿ ಬರೆದ ಪತ್ರ. ಬರೆವ ಮುನ್ನ ಒಳ ಕೋಣೆಯಲ್ಲಿ ಮಲಗಿದ್ದ ಅಜ್ಜನ ಬಳಿ ಕೇಳಿದ್ದೆ ಸಂಕ್ರಾಂತಿ ದಿನ ನಾವು ಏನೇ ಅಂದುಕೊಂಡರು ಅದು ಆಗುತ್ತಾ ಅಂತ, ಅಜ್ಜ ಹೌದೆಂಬಂತೆ ತಲೆಯಾಡಿಸಿದ್ದರು, ಬಹುಶಃ ನಾನು ಬರೆಯುತ್ತಿದ್ದ ವಿಚಾರ ನನ್ನಜ್ಜನಿಗೆ ಗೊತ್ತಾಗಿದ್ದಿದ್ದರೆ ಅಜ್ಜನ ಕೈಯಲ್ಲಿದ್ದ ಕೋಲು ಪುಡಿಯಾಗಿ ಇವತ್ತಿಗೆ ಎಂಟು ವರ್ಷಗಳಾಗಿರುತ್ತಿತ್ತು.

ಆಮೇಲೆ ನಾನು ಆ ಪತ್ರ ನಿನ್ನ ಕೈಗಿತ್ತು ನಿನ್ನ ಕ್ಷಮಾಪಣೆ ಕೇಳಿದ್ದು, ಆಮೇಲೆ ನಾನು ಸಹ ನಿನ್ನನ್ನು ಪ್ರೀತಿಸ್ತಿದ್ದೀನಿ ಕಣೋ ಅಂತ ನೀನು ಹೇಳಿದ್ದು, ಪ್ರತಿ ಕ್ಷಣ ಬದುಕಿನ ಬಗ್ಗೆ ನೂರಾರು ಕನಸು ಹೆಣೆದಿದ್ದು, ನೀನು ಊಟ ಮಾಡದೆ ನಾನು ಮಾಡೋದಿಲ್ಲ ಅಂತ ಕಣ್ಣೀರಾಗಿದ್ದು, ಮನಸ್ಸು ಹೇಳಿದಾಗೆಲ್ಲ ಒಂದೊಂದು ಪತ್ರ ಬರೆದು ನಿನ್ನ ಕೈಸೇರಿಸಿದ್ದು, ನೀನು ಬರೆದ ಪತ್ರವನ್ನು ಎದೆಗೊತ್ತಿಕೊಂಡು ನನ್ನ ಕೋಣೆ ಕತ್ತಲಾಗಿಸಿಕೊಂಡು ನಿನ್ನ ನೆನಪಿನಲ್ಲಿ ನಾನು ರಾತ್ರಿ ಕಳೆದಿದ್ದು. ಎಂತೆಂತಹ ಅಮೂಲ್ಯ ದಿನಗಳಲ್ಲವೇ ಅವುಗಳು.

ನಮ್ಮಿಬ್ಬರ ಪ್ರೀತಿಯ ಮೊದಲ ಭೇಟಿ ಆ ತಾಲ್ಲೂಕ್ ಕಚೇರಿ ಬಸ್ ನಿಲ್ಧಾಣದ ಬಳಿ, ಅವತ್ತು ನೀನು ಮಲ್ಲಿಗೆ ಮುಡಿದಿದ್ದೆ, ಅದೆಷ್ಟು ಮುದ್ದಾಗಿ ಕಾಣಿಸುತ್ತಿದ್ದೆ ಗೊತ್ತ. ಆದರೆ ಈಗ ನೋಡು ಆ ಬಸ್ ನಿಲ್ಧಾಣದಲ್ಲಿ ನೀನಿಲ್ಲ, ಎದುರಿನ ಹೂವಿನಂಗಡಿಯವನು ನನ್ನೆಡೆಗೆ ನೋಡಿದರೆ ಅವನು ನನ್ನನ್ನು ಅಪಹಾಸ್ಯ ಮಾಡುತ್ತಿದ್ದಾನೇನೋ ಎಂದೆನಿಸುತ್ತದೆ. ಅಲ್ಲೆಲ್ಲಾ ನಿನ್ನನ್ನು ಹುಡುಕಾಡಿ ಸೋಲುತ್ತೇನೆ, ಕಣ್ಣೀರು ತುಂಬಿ ನಿಲ್ಲುತ್ತೇನೆ. ನನಗೆ ನೀನು ಹೇಳುತ್ತಿದ್ದುದು ನೆನಪಿದೆ "ಹುಡುಗರು ಅಳಬಾರದು ಕಣೋ, ಅದು ಹೇಡಿಗಳ ಲಕ್ಷಣ", ಕಣ್ಣೀರಿಗೆ ಲಿಂಗ-ಭೇಧ ಗೊತ್ತಿಲ್ಲ ಕಣೇ ಹುಡುಗಿ, ಸುಮ್ಮನೆ ಸುರಿಯುತ್ತೆ ಮುಂಗಾರಿನ ಮಳೆಯಂತೆ, ಕಣ್ಣೀರು ಬರಿಯ ಅಸಹಾಯಕತೆಯನ್ನು ತೋರುತ್ತೆ ಅದು ಯಾವುದೇ ಸಮಸ್ಯೆಗೆ ಪರಿಹಾರ ಹೇಳೋದಿಲ್ಲ ಅನ್ನೋದು ನನಗೂ ಚೆನ್ನಾಗಿ ಗೊತ್ತು, ಏನು ಮಾಡಲಿ ಹೇಳು ಮನಸ್ಸು ಕೇಳೋದಿಲ್ಲ, ನಮ್ಮ ಪ್ರೀತಿ ಪಾತ್ರರಿಗೆ ಮಾತ್ರ ನಾವು ಕಣ್ಣೀರು ಸುರಿಸುತ್ತೇವೆ, ಎಲ್ಲರಿಗು ನೀಡೋದಕ್ಕೆ ಇದು ಪುರಪಂಚಾಯತಿಯ ನಲ್ಲಿ ನೀರಲ್ಲ ಕಣೇ. ಇದನ್ನು ನೀನು ಹೇಡಿತನವೆಂದು ಕೊಂಡೆ ಎಂದರೆ ಅದು ಬದುಕಿನ ಬಹು ದೊಡ್ಡ ದುರಂತ.

ಅಮ್ಮ ನನಗೆ ಯಾವತ್ತು ಜಾತಿ ಎಂದರೆ ಏನು ಅಂತ ಹೇಳಿರಲೇ ಇಲ್ಲ ನೋಡು, ಹಾಗಾಗಿ ನನಗೆ ಗೊತ್ತಿರಲಿಲ್ಲ ನಿನ್ನನ್ನು ಮದುವೆಯಾಗಲು ನಾನು ನಿಮ್ಮ ಜಾತಿಯವನಾಗಿರಬೇಕೆಂದು. ಹುಡುಗಿ ನಿನಗೆ ಗೊತ್ತ ನಿನ್ನನ್ನು ಪ್ರೀತಿಸುವ ಮೊದಲಿಂದ ಹಾಗು ಪ್ರೀತಿಸಿದ ಮೇಲೆ ಸಹ ನನ್ನ ಜಾತಿ ಬದಲಾಗಲಿಲ್ಲ, ನನ್ನದು ಮೊದಲಿಂದ ಒಂದೇ ಜಾತಿ ಕಣೇ. ಮನೆಯಲ್ಲಿ ಒಪ್ಪೋದಿಲ್ಲ ಕಣೋ ಅಂತ ನೀನು ಗೋಗರೆದಾಗ ನನಗೇನು ಅನ್ನಿಸಿತ್ತು ಗೊತ್ತ ಗೆಳತಿ. ಈ ಕ್ಷಣದಲ್ಲಿ ನನ್ನ ಜಾತಿ ಬದಲಿಸಿ ಕೊಳ್ಳುವಂತಿದ್ದರೆ, ರೂಪ ಹೆಚ್ಚಿಸಿಕೊಳ್ಳುವಂತಿದ್ದರೆ, ಇವೆಲ್ಲ ಅಸಾಧ್ಯದ ಪರಮ ಶಿಖರಗಳು. ಓಡಿ ಹೋಗೋಣ ಅಂತ ಕೇಳಲು ನನ್ನ ಆತ್ಮ ಸಾಕ್ಷಿ ಒಪ್ಪಲಿಲ್ಲ, ಎಲ್ಲರೆದುರು ನಿನ್ನನ್ನು ಮದುವೆಯಾಗ ಬೇಕೆಂದು ನಿನ್ನ ಪ್ರೀತಿಸಲು ಆರಂಭಿಸಿದ ದಿನವೇ ತೀರ್ಮಾನಿಸಿದವರು ನಾವು. ಏನೇ ಹೇಳು ಈ ಬದುಕಿನಲ್ಲಿ ಯಾರನ್ನೇ ಆದರು ನೀನು ನನಗೆ ಬೇಡ ಅನ್ನಲು ಕಾರಣಗಳೇ ಬೇಕಾಗೋದಿಲ್ಲ.

ನೀನು ಆಗೋದಿಲ್ಲ ಅಂತ ದೂರ ನಡೆದ ಕ್ಷಣದಿಂದ ನಾನು ತತ್ತರಿಸಿದ್ದೀನಿ, ನಾನು ಹುಡುಗ ನೋಡು ಎಲ್ಲರೆದುರು ಅಳುವ ಹಕ್ಕು ಹುಡುಗರಾದ ನಮಗಿರುವುದಿಲ್ಲ, ಗೆಳೆಯರೆದುರು ಕಣ್ಣೀರಾದರೆ ಬೇಸರಿಸುತ್ತಾರೆ ಹಾಗಾಗಿ ನನ್ನ ಅಳುವಿಗೆ ಕತ್ತಲು ಬೇಕು, ಅತ್ತು ಸುಸ್ತಾಗಿ ನಿಂತಾಗ ಒರಗಲು ಗೋಡೆ ಬೇಕು, ಅಲ್ಲಿ ನೀರವ ಮೌನವಿರಬೇಕು, ನನ್ನ ಜೊತೆ ನಿನ್ನ ನೆನಪಿನ ಮಹಾಸಾಗರವಿದೆ, ಅದರ ಅಲೆಯ ಹೊಡೆತಗಳಿಗೆ ಸಿಕ್ಕು ಸೋತಿದ್ದೇನೆ ಅದರ ರಭಸದ ಹರಿವಿನಲ್ಲಿ ಮುಳುಗೇಳುತ್ತಿದ್ದೇನೆ, ಅವು ನನ್ನನ್ನು ತಂದು ದಡಕ್ಕೆಸೆಯುತ್ತವೆ, ಇನ್ನೇನು ನಾನು ಎದ್ದು ನಿಲ್ಲ ಬೇಕು, ಮತ್ತೆ ಎಳೆದೊಯ್ಯುತ್ತವೆ.

ನೀನು ಮತ್ತೆ ನನ್ನ ಬದುಕಿಗೆ ಬರುತ್ತೀಯ ಎಂದು ಕೇಳುವ ಧೈರ್ಯ ನನ್ನಲ್ಲಿಲ್ಲ, ಆದರೆ ಒಂದು ಹಂತದಲ್ಲಿ ನನ್ನ ಬದುಕು ನಿನಗೆ ಏನು ಅಲ್ಲ ಅಂತ ಅನ್ನಿಸಿತಲ್ಲ ಅದಕ್ಕೆ ನೋವಿದೆ ಗೆಳತಿ, ಹೊರಡುವ ಮುನ್ನ ನೀನು ಹೇಳಿದ್ದಿಷ್ಟು ನಿನ್ನಂತವನಿಗೆ ನನಗಿಂತ ಒಳ್ಳೆಯವಳು ಸಿಗುತ್ತಾಳೆ ಅಂತ. ಇದನ್ನು ಕೇಳಿದವನಿಗೆ ಸಾಹಿಲ್ ನ ಸಾಲುಗಳು ನೆನಪಾಗುತ್ತವೆ...
ख़त लिखने के लिए शाई है
लेकिन मेरा खून जैसा नहीं
लड़की तो मिल सकती है
मगर तुम जैसी नहीं
ಬದುಕನ್ನು ಮತ್ತೆ ಮೊದಲಿಂದ ಆರಂಭಿಸ ಹೊರಟಿದ್ದೇನೆ, ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದೆವಲ್ಲ ಅದೇ ಬಸ್ಸು ನಿಲ್ದಾಣದಿಂದ, ಈಗ ನಾನು ಒಂಟಿ, ಇಲ್ಲಿ ನೀನಿಲ್ಲ. ಅಮ್ಮ ಹೇಳಿದ್ದಾಳೆ ನಾನು ಬದುಕಲ್ಲಿ ಸೋಲಬಾರದಂತೆ. ಆದರು ನಿನ್ನ ನೆನಪು ತುಂಬಾನೆ ಕಾಡುತ್ತೆ ಕಣೇ ಮರೆಯೋಕೆ ಪ್ರಯತ್ನಿಸಿದಷ್ಟು, ನಾವಿಬ್ಬರೂ ನಡೆದು ಬಂದ ಹಾದಿ ನೆನಪಿದೆ, ಆದರೆ ಇಂದು ಆ ದಾರಿಯಲ್ಲಿ ನಾನು ಒಬ್ಬಂಟಿ ಪಯಣಿಗ, ನಿನಗೂ ಹೀಗೆ ಅನ್ಸುತ್ತಾ, ನಮ್ಮ ಎಲ್ಲ ಕನಸುಗಳಿಗೆ ನಾವೇ ವ್ಯವಸ್ಥಿತವಾಗಿ ಸಮಾಧಿ ಕಟ್ಟಿದೆವೇನೋ ಅಂತ ಯೋಚಿಸಿ ಮನಸ್ಸು ಕುಸಿಯುತ್ತಿದೆ. ನನಗೆ ಗೊತ್ತು ನಿನ್ನ ಬಳಿಯೂ ಇದಕ್ಕೆ ಉತ್ತರವಿಲ್ಲ. ನನ್ನದಲ್ಲದ ಕವನವೊಂದು ಇವತ್ತು ನನ್ನನ್ನು ತುಂಬಾನೇ ಕಾಡುತ್ತಿದೆ.
"ನಡೆದ ಹಾದಿಯ ಚಿತ್ರ ಕಣ್ಣಲ್ಲೇ ಉಳಿದಿತ್ತು
ಮತ್ತೆ ಆ ಹಾದಿಯಲೇ ಹೊರಳುತಿಹೆನು
ಹೊರಟವನ ಕಣ್ಣಲ್ಲಿ ಎಂತೆಂತ ಕನಸಿತ್ತು
ಬರಿಯ ನಿರಾಸೆಯ ಹೊತ್ತು ಮರಳುತಿಹೆನು"
-ನಾನು

( ಬರಹ ಸಂಪೂರ್ಣ ಕಾಲ್ಪನಿಕವಷ್ಟೇ, ಸುಮ್ಮನೆ ಏನಾದರು ಬರೆಯಬೇಕೆಂದು ಶುರುವಿಟ್ಟಾಗ ಬರಹ ಹೀಗೆಲ್ಲ ಕವಲೊಡೆದು ನಿಂತಿತು. ಇದು ಯಾವ ವ್ಯಕ್ತಿ, ವ್ಯಕ್ತಿತ್ವಕ್ಕೆ, ಹಾಗು ಸಂಬಂಧಕ್ಕೆ ಸಂಬಂಧಿಸಿದ್ದಲ್ಲ, ಬರಹದ ಅವಳು ಕೂಡ ಕಾಲ್ಪನಿಕ, ಹಾಗೆ ಬರೆದ ನಾನು ಎಂಬ ಪಾತ್ರ ಕೂಡ)
*** ನನ್ನ ಮನದಂಗಳದ ಅತಿಥಿಗಳಿಗೆಲ್ಲಾ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ***

ಶನಿವಾರ, ಜನವರಿ 10, 2009

ಬರಗಾಲದಲ್ಲೊಂದು ಅಧಿಕ ಮಾಸ

ಅಂತರಾಳ - ೬

ಹೊಸ ವರ್ಷ ೨೦೦೯ನ್ನು ಸ್ವಾಗತಿಸಲು ಒಂದು ಕವನ ಬರೆಯಬೇಕೆಂಬ ಹಂಬಲ ನನ್ನದಾಗಿತ್ತು, ಹಾಗಾಗಿ ೩೧ ಡಿಸೆಂಬರ್ ಬೆಳಿಗ್ಗೆ :೩೦ ಸುಮಾರಿಗೆ ಎದ್ದು, ನನ್ನ ದಿನಚರಿ ಪುಸ್ತಕವನ್ನು ಕೈಯಲ್ಲಿ ಹಿಡಿದು ಕುಳಿತೆ, ಇದಕ್ಕೆಂದೇ ನೆನಪಿಗೆ ಬಂದಾಗ ಒಂದೊಂದು ಸಾಲನ್ನು ಬರೆದಿಟ್ಟಿದ್ದೆ, ಈಗ ಸಂಕಲನ ಮಾಡುವ ಸಮಯವಾಗಿತ್ತು. ಸುಮಾರು :೪೫ ವೇಳೆಗೆ ನನಗೆ ನನ್ನ ಕೈನೆಟಿಕ್ ನಲ್ಲಿ ಇಟ್ಟಿದ್ದ ನನ್ನ ಟಿಪ್ಪಣಿ ಪುಸ್ತಕ ನೆನಪಾಗಿ ಗಾಡಿ ಕೀಲಿ ಹುಡುಕ ತೊಡಗಿದೆ, ಬಹಳಷ್ಟು ಹೊತ್ತು ಹುಡುಕಿದರು ಸಿಗಲಿಲ್ಲ, ಕೊನೆಗೆ ನನಗೆ ನೆನಾಪಗಿದ್ದೆಂದರೆ ನನ್ನ ಕಾಲೇಜು ದಿನಗಳ ಮಿತ್ರ, ನನ್ನ ರೂಮ್ ಮೇಟ್, ಮತ್ತೀಗ ಸಹೋದ್ಯೋಗಿಯು ಆಗಿರುವ ಗೆಳೆಯ ನವೀನನ ಬಳಿ ರಾತ್ರಿ ಗಾಡಿ ಒಳಗೆ ನಿಲ್ಲಿಸುವಂತೆ ಹೇಳಿದ್ದೆ, ಅವನು ಸ್ವಲ್ಪ ಮೈಮರೆವಿನವನಾದುದರಿಂದ ಕೀಲಿ ಗಾಡಿಯಲ್ಲೇ ಬಿಟ್ಟು ಬಂದಿರಬಹುದೆಂದು, ಗಾಡಿ ನಿಲ್ಲಿಸುವ ಸ್ಥಳಕ್ಕೆ ತೆರಳಿದೆ. ಒಂದು ಕ್ಷಣ ನನ್ನ ಹೃದಯ ತನ್ನ ಕೆಲಸವನ್ನು ಮರೆತಂತೆ ಸುಮ್ಮನಾಗಿತ್ತು, ಎದೆಯೊಳಗೆ ಒಂದೆಳೆಯ ನಡುಕ, ಏಕೆಂದರೆ ಎಂದಿನ ಜಾಗದಲ್ಲಿ ನನ್ನ ಗಾಡಿ ಇಲ್ಲ. ಅತ್ತಿತ್ತ ನೋಡಿದರೂ ಗಾಡಿಯ ಸುಳಿವೇ ಇಲ್ಲ, ದಿಕ್ಕೇ ತೋಚದಂತಾಗಿ ನಿಂತವನಿಗೆ ನೆನಪಾಗಿದ್ದೇನೆಂದರೆ, ಹಿಂದಿನ ದಿನ ಸಂಜೆ ಕಛೇರಿಯಿಂದ ಹಿಂತಿರುಗಿ ಬಂದು ಗಾಡಿಯಿಂದ ಇಳಿವ ವೇಳೆಗೆ ನನಗೆ ಊರಿಂದ ಫೋನ್ ಕರೆ ಬಂದಿತ್ತು, ಹಾಗಾಗಿ ಗಾಡಿಯಿಂದ ಕೀ ತೆಗೆದವನು, ಮತ್ತೆ ಅದಕ್ಕೆ ವಾಪಸ್ಸು ಹಾಕಿ ನಿಲ್ಲಿಸಿ, ಅದಾಗಲೇ ಫೋನ್ ಕರೆಯಲ್ಲಿ ಮಗ್ನನಾಗಿದ್ದ ನವೀನನಿಗೆ ಗಾಡಿ ಒಳಗೆ ನಿಲ್ಲಿಸುವಂತೆಯೂ, ಸ್ವಲ್ಪ ಹೊತ್ತಿನಲ್ಲಿ ನಾನು ವಾಪಸ್ಸು ಬರುವುದಾಗಿಯೂ ಹೇಳಿದ್ದೆ.

ನಾವು ಒಟ್ಟು ನಾಲ್ವರು ಒಂದೇ ಮನೆಯಲ್ಲಿದ್ದೇವೆ, ನಾವೆಲ್ಲ ಕಾಲೇಜು ದಿನಗಳ ಗೆಳೆಯರು, ಈಗ ಎಲ್ಲರು ವೃತ್ತಿಪರರು. ಎಲ್ಲರಿಗೂ ಗೊತ್ತಿರುವಂತೆ ನಮ್ಮ ನವೀನನ ಸಮಸ್ಯೆ ಎಂದರೆ ಯಾರು ಏನೇ ಹೇಳುವ ಮುನ್ನ ಗೊತ್ತು ಅಂತಲೋ, ಇಲ್ಲ ಆಯ್ತು ಅಂತಲೋ ಅನ್ನುವುದು, ಆದರೆ ಎಂದಿಗೂ ಎದುರಿನವರು ಹೇಳಿದ್ದೇನು ಎಂಬುದನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ನನಗೆ ಅದು ಸ್ವಲ್ಪ ಮುಖ್ಯವಾದ ಫೋನ್ ಕರೆಯಾದುದರಿಂದ, ನಾನು ಹೇಳಿದ್ದು ಇವನು ಗಮನಿಸಿದ ಎಂದೇ ಭಾವಿಸಿದ್ದೆ. ನಮ್ಮ ಮನೆಗೆ ಎರಡು ಬಾಗಿಲಿರುವುದರಿಂದ ಇನ್ನೊಂದು ಬಾಗಿಲಿಂದ ನಾನು ಒಳಗೆ ಬಂದು ಸೇರಿದೆ. ನನ್ನ ದುರಾದೃಷ್ಟಕ್ಕೆ ಅವನು ಗಾಡಿ ಒಳಗೆ ನಿಲ್ಲಿಸಿರಲಿಲ್ಲ.

ನನ್ನ ಇನ್ನುಳಿದ ಇಬ್ಬರು ಗೆಳೆಯರು ಬಂದ ನಂತರ ಊಟ ಮಾಡಿ ಚೆನ್ನಾಗಿ ಹರಟಿ ಮಲಗುವ ಮುನ್ನ, ಇನ್ನೊಬ್ಬ ಗೆಳೆಯನಾದ ಪ್ರಸನ್ನ ಗೋಪಾಲ ಸ್ವಭಾವತಃ ಸೋಮಾರಿಯಾಗಿರುವದರಿಂದ ಅವನ ಕಾಲೆಳೆಯುತ್ತಾ ಇದ್ದ ನಮ್ಮ ನವೀನ, ರಾತ್ರಿಯೊಮ್ಮೆ ನಾಯಿ ಕೂಗಿದಾಗ ಎದ್ದು ಪ್ರಸನ್ನನನ್ನು ಎಬ್ಬಿಸಿ ನಾಯಿ ಕೂಗುತ್ತಿದೆ ಈಗ ಎದ್ದು ಹೋದರೆ ನಿನ್ನ ಗಾಡಿ(ಬಜಾಜ್ ಡಿಸ್ಕವರ್-ಕೆಂಪು ಬಣ್ಣ) ಕದಿಯಲು ಬಂದಿರಬಹುದಾದ ಕಳ್ಳ ನಿನ್ನ ಕೈಗೆ ಸಿಗುತ್ತಾನೆ ಎಂದು ಕಿಚಾಯಿಸಿ ಮಲಗಿದ್ದ, ಇಷ್ಟೆಲ್ಲಾ ಮಾತನಾಡಿದರು ಗೆಳೆಯ ಮಹಾಶಯನಿಗೆ ನನ್ನ ಗಾಡಿ ಹೊರಗೆ ಬಿಟ್ಟಿರುವುದು ನೆನಪೇ ಇರಲಿಲ್ಲ.

ಬೆಳಿಗ್ಗೆ ಬೇಗ ಎದ್ದ ನನಗೆ ೨೦೦೮ರ ಕೊನೆಯ ದಿನ ಇದೊಂದು ಆಘಾತಕಾರಿ ಘಟನೆ ಕಾದಿತ್ತು, ಇಷ್ಟೆಲ್ಲಾ ನಡೆದು, ನನ್ನ ಗಾಡಿ ಕಾಣುತ್ತಿಲ್ಲ ಎಂದು ನನ್ನ ಗೆಳೆಯರ ಬಳಿ ಹೇಳಿದರೆ, ಮೂವರು ಹೊದಿಕೆಯ ಒಳಗಿಂದಲೇ, ನಿನಗೆ ನಿದ್ರೆ ಸರಿಯಾಗಿಲ್ಲ ಅನ್ಸುತ್ತೆ, ಏನೇನೋ ಗೀಚುತ್ತಿಯಲ್ಲ ಹಾಗಾಗಿ ನಿನಗೊಂದು ರೀತಿಯ ಭ್ರಮೆ, ನಿನ್ನ ಗಾಡಿಯನ್ನು ಕಳ್ಳ ಕದ್ದಿದ್ದರೆ ನಿಜಕ್ಕೂ ಅದು ಅವನಿಗಾದ ಅನ್ಯಾಯ, ಇದನ್ನು ನಾವು ಖಂಡಿಸುತ್ತೇವೆ ಎಂದೆಲ್ಲಾ ತರಹೇವಾರಿ ಉತ್ತರ ನೀಡಿದರು. ನನ್ನ ಅವಸ್ಥೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟವೆಂಬಂತಾಗಿತ್ತು. ಅವಸ್ಥೆಯಲ್ಲಿ ನನಗೆ ನೆನಪಾಗಿದ್ದು ಪೊಲೀಸರು, ನಾನು ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿ ಬರುತ್ತೇನೆ ಎಂದಾಗ ನನ್ನ ಗೆಳೆಯರಿಗೆ ಪೂರ್ಣವಾಗಿ ಎಚ್ಚರವಾಗಿತ್ತು. ಆದರು ನಮ್ಮ ನವೀನ ತನಗೇನು ಗೊತ್ತಿಲ್ಲವೆಂಬಂತೆ ಅಮಾಯಕನಂತೆ ಪೆಚ್ಚು ಮೋರೆ ಹಾಕಿಕೊಂಡು ಕುಳಿತಿದ್ದ, ಒಂದೆಡೆ ಗಾಡಿ ಇಲ್ಲದ ನನ್ನ ಸಂಕಟ, ಇನ್ನೊಂದೆಡೆ "ನಂಗೆ ಗೊತ್ತಾಗ್ಲಿಲ್ಲ ಮಾರಾಯ" ಅಂತ ರಾಮನಾಮ ಜಪಿಸಿದಂತೆ ಸರಿ ಸುಮಾರು ನೂರೈವತ್ತು ಸಾರಿ ಹೇಳುತ್ತಿದ್ದ ನವೀನ.

ಗೆಳೆಯ ಪ್ರಸನ್ನನ ಗಾಡಿಯೇರಿ ನೇರವಾಗಿ ಪೋಲಿಸ್ ಠಾಣೆಗೆ ಹೋದರೆ, ಠಾಣೆಯ ಬಾಗಿಲಿನ ಎದುರಲ್ಲಿ ರಾಜ ಗಾಂಭೀರ್ಯದಲ್ಲಿ ನನ್ನ ಕೈನೆಟಿಕ್ ಪೊಲೀಸರ ಅತಿಥಿಯಂತೆ ನಿಂತಿತ್ತು, ಅದನ್ನು ನೋಡಿದ ನನಗೆ ಹೋದ ಜೀವ ಬಂದ ಅನುಭವ. ರಾತ್ರಿ ಕೀ ಸಮೇತ ಹೊರಗೆ ನಿಂತಿದ್ದ ಗಾಡಿಯನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದರು. ನನ್ನ ಗಾಡಿಯ ಮೂಲ ದಾಖಲೆಗಳು ಊರಿನಲ್ಲಿತ್ತು, ವಿಮೆ ಅವಧಿ ನವೆಂಬರಿನಲ್ಲಿಯೇ ಮುಗಿದು ಹೋಗಿತ್ತು. ನಮ್ಮ ಮುಂದಿದ್ದ ದೊಡ್ಡ ಸವಾಲೆಂದರೆ ಪೊಲೀಸಪ್ಪನಿಗೆ ಸಮಜಾಯಿಷಿ ನೀಡಿ, ನಮ್ಮನ್ನು ಸಮರ್ಥಿಸಿಕೊಂಡು ಗಾಡಿ ಪಡೆದುಕೊಳ್ಳುವುದು. ಎಲ್ಲವನ್ನು ಪರೀಕ್ಷಿಸಿದ ಪೋಲೀಸಪ್ಪ ಹುಸಿ ಮುನಿಸು ತೋರುತ್ತ ಬಿಡಲಾಗುವುದಿಲ್ಲ ಕನಿಷ್ಟವೆಂದರೆ ಮೂರು ಸಾವಿರ ದಂಡ ತೆರಬೇಕು ಎಂದ, ಗೆಳೆಯನ ಗಾಡಿ ತುಸು ದೂರದಲ್ಲಿ ನಿಲ್ಲಿಸಿದ್ದುದರಿಂದ ನಾನು ಕಾಲೇಜು ವಿದ್ಯಾರ್ಥಿ ಎಂದು ಕಥೆ ಹೇಳಿ ಒಪ್ಪಿಸಿ, ಇನ್ನೇನು ಹೊರಡುವುದರಲ್ಲಿದ್ದೆ.

ಆಗ ನನ್ನ ಮೂರನೇ ಗೆಳೆಯ ಶರತ್ ಪ್ರವೇಶವಾಯಿತು, ಇವನ ಮೂಲ ಸ್ವಭಾವವೆಂದರೆ ಸಮಸ್ಯೆ ಏನೇ ಇರಲಿ ಅದರ ಆಳ ತಿಳಿವ ಮುನ್ನ ನಾನು ಬಗೆಹರಿಸಿ ಬಿಡುವೆ ಎಂದು ಕಣ್ಮುಚ್ಚಿ ಮುನ್ನುಗ್ಗುವುದು, ಅಕಸ್ಮಾತ್ ಸೋತರೆ ನಾನು ಇದನ್ನು ಹೀಗೆ ಎಂದು ಕೊಂಡಿರಲಿಲ್ಲ ಕಣೋ ಎಂದು ಸಬೂಬು ಹೇಳಿ ನುಣುಚಿಕೊಳ್ಳುವುದು, ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ ಎಂಬಂತಹವನು. ಪೊಲೀಸಪ್ಪನಿಗೆ ಒಪ್ಪಿಸಿ ಸಾಧನೆ ಮಾಡಿದ್ದೇವೆ ಎಂಬಂತೆ ನಿಂತವರೆದುರು ತನ್ನ ಬಜಾಜ್ ಡಿಸ್ಕವರ್ - ನೀಲಿ ಬಣ್ಣದ ಗಾಡಿ ತಂದು ಧುತ್ತನೆ ನಿಲ್ಲಿಸಿ, ಪೊಲೀಸಪ್ಪನಿಗೆ ಉದ್ದೇಶಿಸಿ "ನೀವು ಬಿಡಲ್ಲ ಅಂದರೆ ತೊಂದರೆ ಇಲ್ಲ ನಾವು ಎಲ್ಲಾ ಮೂಲ ದಾಖಲೆಗಳನ್ನು ತಂದು ತೋರಿಸಿ ತೆಗೆದುಕೊಂಡು ಹೋಗುತ್ತೀವಿ" ಎಂದು ಒಂದೇ ಉಸಿರಿಗೆ ಹೇಳಿ, ಸಾಧನೆ ಮಾಡಿದೆ ಎಂಬಂತೆ ನಮ್ಮೆಡೆಗೆ ಖುಷಿಯ ನಗು ಬೀರಿದ, ನನಗೆ ಬಿಸಿ ತುಪ್ಪ ನುಂಗಿದ ಅನುಭವವಾಗಿತ್ತು, ಸುಮಾರು ಒಂದು ಘಂಟೆಯಿಂದ ಪೊಲೀಸಪ್ಪನಿಗೆ ತರಹೇವಾರಿ ಕಥೆ ಹೇಳಿ ಒಪ್ಪಿಸಿ, ಕೊಡಲು ದುಡ್ಡಿಲ್ಲ ಎಂಬಂತೆ ಹೇಳಿದ್ದ ನಮ್ಮೆಡೆಗೆ ಪೋಲೀಸಪ್ಪ ತನ್ನ ವಕ್ರ ದೃಷ್ಟಿ ಬೀರಿದ್ದ, ಕೊಡಲು ದುಡ್ಡೇ ಇಲ್ಲ ಎಂದಿದ್ದ ನಾನು ನನ್ನ ಗೆಳೆಯರೆಡೆಗೆ ನೋಡಿ ಮತ್ತೆ ಮೂರು ಗಾಡಿ ನೋಡಿ, ಕನಿಷ್ಠ ಸಾವಿರ ರೂಪಾಯಿ ದಂಡ ಕಟ್ಟಲೆ ಬೇಕೆಂದು ದೂರು ದಾಖಲಿಸಿದ.

ಒಂದೆಡೆ ಗಾಡಿ ಒಳಗೆ ನಿಲ್ಲಿಸು ಎಂದರೆ ಹೊರಗೇ ಬಿಟ್ಟ ಒಬ್ಬ ಗೆಳೆಯ, ಎಲ್ಲಾ ಸರಿಯಾಯಿತು ಎಂಬ ಹೊತ್ತಿನಲ್ಲಿ ಬಂದು ಎಲ್ಲಾ ಹಾಳುಗೆಡವಿದ ಇನ್ನೊಬ್ಬ ಗೆಳೆಯ. ೨೦೦೮ ನನ್ನ ಪಾಲಿಗೆ ಬರಗಾಲದಲ್ಲೊಂದು ಅಧಿಕ ಮಾಸ ತಂದಿತ್ತು, ಕೊನೆಗೆ ಸುಮಾರು ಹೊತ್ತು ಪೋಲಿಸ್ ಠಾಣೆಯಲ್ಲಿ ಕಾದು, ದಂಡ ಕಟ್ಟಿ ಗಾಡಿ ಬಿಡಿಸಿಕೊಂಡು ತರುವಾಗ ನನ್ನ ಮೂರು ಮಿತ್ರರ ನೆನಪು ಕಾಡದೇ ಇರಲಿಲ್ಲ.

ಗುರುವಾರ, ಜನವರಿ 1, 2009

ಕಾಲ ಚಕ್ರ

ಇನ್ನೊಂದು ವರುಷ ಉರುಳಿದೆ
ಕಾಲನ ತೆಕ್ಕೆಯೊಳಗೆ ಯಾರ ಅಂಕೆಗೂ ಸಿಗದೆ
ಎಷ್ಟು ಎಣಿಸುವೆನೆಂದರು ಯಾವ ಸಂಖ್ಯೆಗೂ ಎಟುಕದೆ

ಎಲ್ಲ ಅವಿತಿಹುದಿಲ್ಲಿ ನಮ್ಮ ನೆನಪಿನಂಗಳದಲ್ಲಿ
ಅವು ಇನ್ನೆಷ್ಟು ಆಸೆ-ಆಶೋತ್ತರಗಳೋ
ಸೇರ ಬಲ್ಲವೇ ಗುರಿಯ ಅರಿತವರು ಯಾರಿಲ್ಲಿ

ಮೂಕ ಹಕ್ಕಿಯ ಗತ ವೈಭವದ ಹಾಡು
ಹಿಡಿದು ಬದುಕ ಹಾದಿಯ ಜಾಡು
ಹೊರಟ ಸಂಭ್ರಮದ ನೆನಪು ಕೊನೆಗೆ ಸೇರಿದ್ದೆಲ್ಲಿಗೆ

ಮತ್ತೊಂದು ಹೊಸ ವರ್ಷ
ಮನದಾಳದಲ್ಲಿ ಮತ್ತಷ್ಟೇ ಹರುಷ
ಎಲ್ಲ ತರ್ಕದ ಸರಕ ಹೊತ್ತು ಹೊರಟಿಹೆವಿಲ್ಲಿ

ಯಾರು ನಗುವರೋ ಇಲ್ಲಿ
ಇನ್ಯಾರು ಅಳುವರೋ ನರಳಿ
ಹೇಳ ಬಲ್ಲಿರೇನು ನೀವು ಇಲ್ಲಿ

ಏನು ಘಟಿಸಿದರೇನು, ಎಷ್ಟು ಹರಸಿದರೇನು
ಅತ್ತು ತಡೆದರೆ ಕಾಲ ಹಿಂತಿರುಗಿ
ಮರಳುವುದೇನು ಇಲ್ಲಿ

ತಡೆದು ನಿಲ್ಲಿಸಿ ನಿನ್ನ ಹೋಗದಿರು
ಮುಂದೆಂದೂ ನಿಲ್ಲಿಸುವ ಗೈರತ್ತು
ಯಾರಿಗಿದೆ ಇಲ್ಲಿ

ಯಾವುದೇನೆ ಇರಲಿ, ಗಾಳಿ ಹೇಗೇ ಬರಲಿ
ಯಾರ ಮೊಗದಲೂ ನಗುವ ಸೆಲೆ
ತಾ ಬತ್ತದಿರಲಿ

ಎಲ್ಲಾ ನಕ್ಕ ನಗುವ ಸದ್ದು ಸ್ವರ್ಗಕ್ಕೆ
ಕಿಚ್ಚು ಹಚ್ಚಿದಂತಿರಲಿ, ಕಿಚ್ಚ ಬೇಗೆಯಲಿ
ದೇವಾನುದೇವತೆಗಳು ಬೆವತು ಬಿಡಲಿ

ನನ್ನವರಿಗೆಲ್ಲಾ ಹೊಸವರುಷ
ಹೊಸತನವ ಹೊತ್ತು ತರಲಿ
ನಿಮ್ಮ ಮೊಗದಲ್ಲೆಂದು ನಗುವೇ
ರಾರಾಜಿಸಲಿ...

(ನನ್ನ ಮನದಂಗಳದ ಅತಿಥಿಗಳಿಗೆಲ್ಲಾ ಹೊಸ ವರುಷದ ಹಾರ್ಧಿಕ ಶುಭಾಶಯಗಳು)