ಸೋಮವಾರ, ಫೆಬ್ರವರಿ 16, 2009

ಬದುಕೆ ಇಂದು ನಾನು ನೀನಾಗುತ್ತೇನೆ... ನೀನು ನನ್ನುಸಿರಾಗಿ ಬಿಡು...



ಪಿಸು ಮಾತು - ೩

ನನ್ನ ಅಂತರಾಳದ ಅಭಿಸಾರಿಕೆ,

ಇನ್ನು ಗಡಿಯಾರ ಸರಿಯಾಗಿ ಬೆಳಿಗ್ಗಿನ ಜಾವದ 6:30 ರ ಗೆರೆ ದಾಟಿಲ್ಲ, ಇವತ್ತು 14 ಫೆಬ್ರವರಿ, ಶನಿವಾರ ಪ್ರೇಮಿಗಳ ದಿನ, ನಿನ್ನ ಹಣೆಯ ಮೇಲೇರಿ ಕುಳಿತಿದ್ದ ನವಿರು ಕೂದಲನ್ನು ಸರಿಸಿ, ಅಲ್ಲೊಂದು ಸಿಹಿ ಮುತ್ತನ್ನು ಪ್ರತಿಷ್ಟಾಪಿಸಿದೆ.

ಇವತ್ತು ನಿನ್ನ ಪಾಲಿನ ಕೆಲಸಗಳೆಲ್ಲವನ್ನು ನಾನೇ ಮಾಡಿ ಮುಗಿಸಿಬಿಡಬೇಕು ಎಂದು ತೀರ್ಮಾನಿಸಿಯೇ ಎದ್ದಿದ್ದೆ, ಕಿಟಕಿಯಿಂದ ಬೀಸುತ್ತಿದ್ದ ತಂಡಿ ಗಾಳಿಯನ್ನು ತಡೆದು ನಿಲ್ಲಿಸಲು ಕಿಟಕಿಯ ಬಾಗಿಲನ್ನು ತುಸು ಓರೆ ಮಾಡಿ, ನಿನಗೆ ಹೊದಿಕೆಯನ್ನು ಹೊದ್ದಿಸಿ, ಕೋಣೆಯ ಬಾಗಿಲನ್ನು ಮುಚ್ಚಿ, ಹೊರ ಬಂದವನು. ಅಂಗಳ ಗುಡಿಸುವ ಪೊರಕೆಯನ್ನು ಕೈಯಲ್ಲಿ ಹಿಡಿದೆ, ಪೊರಕೆ ಅದೆಷ್ಟು ಒರಟಾಗಿದೆ, ನಿನ್ನ ಮೃದುಲ ಕೈಗಳಲ್ಲಿ ದಿನನಿತ್ಯ ಇದನ್ನು ಹೇಗೆ ಹಿಡಿಯುತ್ತೀಯ? ಹೀಗೆ ಯೋಚಿಸುತ್ತಾ ಅಂಗಳದ ಕಸ ಹೊಡೆದು, ನೀರೆರಚಿ, ಹೊಸ್ತಿಲು ಸಾರಿಸಿದೆ. ರಂಗೋಲಿ ಪುಡಿಯಿಂದ ಹೊಸ್ತಿಲಿನ ಮೇಲೆ ಪುಟ್ಟದಾಗಿ ನಾಲ್ಕು ಓರೆ ಗೆರೆ ಎಳೆದು, ಮಧ್ಯ ಭಾಗದಲ್ಲಿ ಒಂದು ಶಂಕು ಬರೆದು, ಅಂಗಳದಲ್ಲಿ ಒಂದು ನಕ್ಷತ್ರ ಬರೆದೆ. ನಾನು ಬರೆದಿದ್ದು ರಂಗೋಲಿಯ, ನನಗೆ ಏಕೋ ಅನುಮಾನ ಕಾಡಿತು, ಅದರ ಕೆಳಗೆ ಬರೆದು ಬಿಡಲೇ ಇದು "ರಂಗೋಲಿ" ಎಂದು, ರಂಗೋಲಿಗೆ ಬಣ್ಣ ತುಂಬುವ ಕೆಲಸ ನನ್ನಿಂದ ಸಾಧ್ಯವೇ ಇಲ್ಲ ಎಂದೆನಿಸಿ ಅದನ್ನು ಅಲ್ಲಿಯೇ ಬಿಟ್ಟೆ.

ಮುಂದಿನ ಕೆಲಸ ಕಸ ಗುಡಿಸಿ-ನೆಲ ಒರೆಸೋದು, ಒಂದು ಲೋಟ ಚಹಾ ಬೇಕೆ ಬೇಕು ಎಂದೆನಿಸಿತು, ಸ್ನಾನ ಮಾಡದೆ ಅಡುಗೆ ಮನೆ ಹೊಕ್ಕರೆ ನೀನು ದುರ್ಗಾವತಾರ ಎತ್ತುವೆ ಎಂದು ನೆನಪಾಗಿ ಸುಮ್ಮನಾದೆ. ಸೊಂಟಕ್ಕೆ ಬುದ್ದಿವಾದ ಹೇಳಿ ಒಳ ಮನೆಯ ಪೊರಕೆ ಕೈಯಲ್ಲಿ ಹಿಡಿದು, ತುಸು ಬಾಗಿ ಕಸ ಗುಡಿಸುವಾಗ, ನಾಳೆಯಿಂದ ಕಸ ಹಾಕಲೇ ಬಾರದೆಂದು ತೀರ್ಮಾನಿಸಿದೆ. ಒಂದು ಚಿಕ್ಕ ಪಾತ್ರೆಯಲ್ಲಿ ನೀರು ತುಂಬಿ, ಒರೆಸುವ ಬಟ್ಟೆಯನ್ನು ಅದರಲ್ಲಿ ನೆನೆಸಿ ತೆಗೆದು ನೆಲ ಒರೆಸಲು ಆರಂಭಿಸಿದೆ. ನನ್ನ ಬೆನ್ನು ವಿಕಾರವಾಗಿ ನರಳಲಾರಂಭಿಸಿತ್ತು, ಕಂದಾ ದಿನ ನಿತ್ಯ ನೀನು ಇಷ್ಟು ನೋವನ್ನು ಅನುಭವಿಸಿ ಇಷ್ಟೆಲ್ಲಾ ಕೆಲಸ ಮಾಡುತ್ತೀಯ, ನಾಳೆಯಿಂದ ನಿನ್ನ ಪಾಲಿನ ಅರ್ಧ ಕೆಲಸ ನಾನು ಮಾಡುತ್ತೇನೆ ಆಯ್ತಾ ಅಂದು ಕೊಂಡೆ. ಒಟ್ಟಿನಲ್ಲಿ ಮನೆ ಗುಡಿಸಿ, ಒರೆಸಿ ಮುಗಿದಾಗ ನನಗೆ ನೆಟ್ಟಗೆ ನಿಲ್ಲಲು ಸರಿಯಾಗಿ 3-4 ನಿಮಿಷ ಬೇಕಾಯಿತು, ಸೊಂಟ ಪೂರ್ಣ ಬಾಗಿ ಮಂಥರೆಯನ್ನು ಹೋಲುತ್ತಿತ್ತು. ಅದು ಹೇಗೋ ಮಾಡಿ ಸುಧಾರಿಸಿಕೊಂಡು ನಿಂತರೆ, ಸ್ನಾನಕ್ಕೆ ನೀರು ಬೆಚ್ಚಗೆ ಕಾದು ಕುಳಿತಿತ್ತು.

ಸ್ನಾನ ಮುಗಿಸಿ, ನಮ್ಮ ಬೀದಿಯ ಕೊನೆಯಲ್ಲಿರುವ ಅಮ್ಮನವರ ಗುಡಿಗೆ ಹೋಗಿ, ನಿನ್ನ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಿಸಿದೆ, ನಿನಗೆಂದು 3 ರಕ್ತಗೆಂಪು ಗುಲಾಬಿ ಹೂವು, ಅದರ ಜೊತೆಗೆ ಒಂದು ಮೊಳ ಮಲ್ಲಿಗೆ ಕೊಡುವಂತೆ, ದೇವಸ್ಥಾನದೆದುರಿನ ಹೂಮಾರುವವಳಿಗೆ ಕೇಳಿದೆ, ಅವಳು ನಸು ನಕ್ಕು ನುಲಿಯುತ್ತ ಅಮ್ಮಾವ್ರಿಗಾ ಬುದ್ಧಿ ಎಂದಳು. ಅವಳ ಮಾತಿಗೆ ಏಕಾಏಕಿ ಏನು ಉತ್ತರಿಸ ಬೇಕೆಂದು ತಿಳಿಯದೆ ಸಂಕೋಚದ ಮುದ್ದೆಯಾಗಿದ್ದೆ ನಾನು, ನೀನು ತುಂಬ ನೆನಾಪಗಿದ್ದೆ ಆವಾಗ.

ಮನೆಗೆ ಬಂದವನೇ ಪ್ರಸಾದ, ಹೂವು ದೇವರ ಕೋಣೆ ಸೇರಿಸಿ, ನೇರ ನುಗ್ಗಿದ್ದೆ ಅಡುಗೆ ಮನೆಗೆ. ಈಗ ಏನು ಮಾಡುವುದು, ಮೊದಲು ಒಲೆ ಒರೆಸಿ, ಪಾತ್ರೆ ತೊಳೆದು ಹಾಲು ಕಾಯಿಸ ಬೇಕು. ತಿಂಡಿ ಏನು ಮಾಡುವುದು, ನಿನಗೆ ಪಲಾವ್ ಇಷ್ಟ. ನನಗೆ ಮಾಡಲು ಬರುತ್ತಾ, ನಾನು ಮಾಡಿದರೆ ಅದು ಚೆನ್ನಾಗಿರುತ್ತಾ. ಆಗ ನನಗೆ ನೆನಪಾಗಿದ್ದೇನು ಗೊತ್ತೇನೆ ಶ್ರೀಮತಿ...
"ಭೀಮ ಸೇನ ನಳ ಮಹಾರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹಾನೀಯರಲ್ಲವೇ..."
ಇನ್ನೇಕೆ ತಡ, ಕೆಲಸ ಆರಂಭಿಸಿದೆ, ಒಲೆ ಸ್ವಚ್ಚವಾಗುತ್ತಿದ್ದಂತೆ, ಹಾಲಿಟ್ಟು ಕಾಯಿಸಿ, ಸ್ವಲ್ಪವೇ ಸ್ವಲ್ಪ ನೀರಿಟ್ಟು, ಮುಕ್ಕಾಲು ಭಾಗದಷ್ಟು ಹಾಲು ಸುರಿದು, ಮಿತವಾಗಿ ಟೀ ಪುಡಿ, ಹಿತವಾದಷ್ಟು ಸಕ್ಕರೆ ಬೆರೆಸಿ ಕಾಯಲು ಇಟ್ಟೆ. ಇನ್ನೊಂದೆಡೆ ತರಕಾರಿ ಹೆಚ್ಚಿ, ಅಕ್ಕಿ ಆರಿಸಿ, ಎಲ್ಲ ಮಸಾಲೆ ಹುರಿದಿಟ್ಟು ಕೊಂಡೆ. ಅಷ್ಟರಲ್ಲಾಗಲೇ ಟೀ ತಯಾರಾಗಿತ್ತು, ಆತುರದಲ್ಲಿ ಮಸಿ ಬಟ್ಟೆ ಮರೆತು ನೇರವಾಗಿ ಪಾತ್ರೆಗೆ ಕೈ ಹಾಕಿ, ಕೈ ಸುಟ್ಟಿತು . ಆಗ ನಿನ್ನ ಬಳಿ ಓಡಿ ಬರೋಣವೆಂದು ಕೊಂಡೆ, ದಿನ ನಿತ್ಯ ನೀನು ನೋವನ್ನು ಅನುಭವಿಸುವಾಗ ನಾನು ಇರೋದಿಲ್ಲ ಅಲ್ವ, ನನ್ನ ಬಗ್ಗೆ ನನಗೆ ಬೇಸರವಾಯ್ತು ರಾಣಿ. ಟೀ ಒಂದು ಲೋಟಕ್ಕೆ ಬಗ್ಗಿಸಿ, ಉಳಿದಿದ್ದನ್ನು ಫ್ಲಾಸ್ಕ್ ಗೆ ಹಾಕಿಟ್ಟೆ. ಮಸಾಲೆ ಹುರಿದು, ಹಸಿ ಮೆಣಸು, ಬೆಳ್ಳುಳ್ಳಿ ಮಿಶ್ರಣ ಮಾಡಿ, ರುಬ್ಬಿಟ್ಟು ಕೊಂಡೆ. ಹದವಾದ ಎಣ್ಣೆಯಲ್ಲಿ ಒಗ್ಗರಣೆ ಹಾಕಿ, ಎಲ್ಲ ಸೇರಿಸಿ ಕುಕ್ಕರ್ ಕೂಗಿಸಿದೆ, ಅಷ್ಟರಲ್ಲಿ ಅಡುಗೆ ಮನೆ ಸ್ವಚ್ಚ ಮಾಡಿ, ಪಾತ್ರೆ ಕೂಡ ತೊಳೆದು ಮುಗಿಸಿದೆ.

ಅಡುಗೆ ಮನೆಯಲ್ಲಿ ದಿಗ್ವಿಜಯ ಸಾಧಿಸಿದೆ ಎಂಬಂತೆ ನಿಂತು, ಪಲಾವಿನ ರುಚಿ ನೋಡಿದವನಿಗೆ ದಿಗಿಲು ಬಡಿದಿದ್ದೆಂದರೆ ಉಪ್ಪು ಹಾಕಿಯೇ ಇರಲಿಲ್ಲ. ಮತ್ತೆ ಒಂದು ಲೋಟದಲ್ಲಿ, ಸ್ವಲ್ಪ ನೀರು ತೆಗೆದು ಕೊಂಡು, ಸ್ವಲ್ಪ ಉಪ್ಪನ್ನು ಆ ನೀರಿನಲ್ಲಿ ಬೆರೆಸಿ, ಪಲಾವಿಗೆ ಸೇರಿಸಿ, ಮತ್ತೆ ಒಲೆಯ ಮೇಲಿಟ್ಟೆ. ಪಲಾವ್ ಈಗ ಬಿಸಿ ಬೆಳೆ ಬಾತ್ ಆಗ ಹೊರಟಿತ್ತು. ಇಳಿಸಿ ನೋಡಿದರೆ, ನೀರು ಸ್ವಲ್ಪ ಜಾಸ್ತಿ ಎಂದೆನಿಸಿದರು, ಪರವಾಗಿಲ್ಲ ಚೆನ್ನಾಗಿದೆ ಅಂತ ಸಮಾಧಾನವಾಯಿತು.

ಅಂದ ಹಾಗೆ ನಾನು ಈ ಪತ್ರ ಏಕೆ ಬರೆದಿಟ್ಟೆ ಗೊತ್ತ ಪ್ರಾಣವೇ, ಇವತ್ತು ಪ್ರೇಮಿಗಳ ದಿನ, ನಿನ್ನನ್ನು ಎಬ್ಬಿಸಿ ನಿನಗೆ ಶುಭ ಕೋರೋಣ ಎಂದು ಕೊಂಡರೆ, ಏಕೋ ಮನಸ್ಸಿಗೆ ನಿನ್ನ ನಿದ್ದೆ ಹಾಳು ಮಾಡುವುದು ಇಷ್ಟವಿರಲಿಲ್ಲ. ಪ್ರತಿ ದಿನ ನಾನು ಹೊರಡುವುದರೊಳಗೆ ಎಲ್ಲ ತಯಾರು ಮಾಡಿ ಕೊಡುವ ನಿನಗೆ, ಇವತ್ತಾದರೂ ನೀನು ಏಳುವ ಮುನ್ನ ಎಲ್ಲಾ ತಯಾರು ಮಾಡಿರಬೇಕು ಎಂದು ಬೇಗ ಎದ್ದೆ. ನಿನ್ನನ್ನು ಹೊರಗೆಲ್ಲಾ ಹೋಟೆಲ್ಲಿಗೆ ಕರೆದೊಯ್ದು, ಇನ್ನೆಲ್ಲೋ ಖರೀದಿಗೆ ಕರೆದೊಯ್ದು ವ್ಯಯಿಸುವುದು ನನ್ನಿಂದ ಆಗದ ಮಾತು, ಮತ್ತು ನಿನಗೆ ಅದು ಇಷ್ಟವು ಆಗಲ್ಲ. ನಾನು ನಿನ್ನನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎನ್ನುವುದು, ನನ್ನ ಕೈ ಸುಟ್ಟಿತಲ್ಲ ಅಡುಗೆ ಮನೆಯ ಬೆಂಕಿ, ಅದರಷ್ಟೇ ಸತ್ಯ. ಇನ್ನೆಲ್ಲೋ ಸುಖವಾಗಿ ಬೆಳೆದು, ನನ್ನ ಮನೆಯ ನಂದಾದೀಪ ಬೆಳಗಲು ಬಂದ ಬಾಳ ಜ್ಯೋತಿ ನೀನು, ನಿನಗೆ ಅಗತ್ಯ ವಿಚಾರಗಳಲ್ಲಿ ಯಾವುದೇ ಕೊರತೆ ಮಾಡುವುದಿಲ್ಲ, ಆದರೆ ಇರುವುದರೊಳಗೆ ನಾಲ್ಕು ಕಾಸು ನಾಳಿನ ಜೀವನಕ್ಕೆ ಎತ್ತಿಡೋಣ, ನಾಳೆ ಬರುವ ನಮ್ಮ ಕಂದಮ್ಮನ ಬದುಕನ್ನು ಕಟ್ಟಲು ಆ ಸೊತ್ತನ್ನು ಬಳಸೋಣ, ಏನಂತೀಯ, ನನಗೆ ಗೊತ್ತು ನೀನು ನನ್ನ ಯಾವ ಮಾತಿಗೂ ಇಲ್ಲ ಎಂದವಳಲ್ಲ, ನೀನೀಗ ನನ್ನೆದುರು ನಿಂತಿದ್ದರೆ ಹಾಗೆ ನನ್ನ ಭುಜಕ್ಕೊರಗುತ್ತಿದ್ದೆ, ನಿನ್ನ ಕಣ್ಣೀರು ನನ್ನ ಎದೆಯ ಮೇಲೆ ಇಳಿಯುತ್ತಿತ್ತು.

ನಿನಗೆಂದು ಟೀ ತಯಾರಿದೆ, ನಿನ್ನಿಷ್ಟದ ಪಲಾವ್ ಮಾಡಿಟ್ಟಿದ್ದೇನೆ, ದೇವರ ಕೋಣೆಯಲ್ಲಿ ಸಿಂಧೂರವಿದೆ, ಅದರ ಪಕ್ಕದಲ್ಲಿ ಹೂವಿದೆ, ಮೂರು ಗುಲಾಬಿ ಮುಡಿದು, ಅದರ ಸುತ್ತ ಮಲ್ಲಿಗೆ ಏರಿಸಿ ಮುಡಿದು ಕೊಂಡು ಬಿಡು, ತಿಳಿ ಕೇಸರಿ ಬಣ್ಣದ ಸೀರೆ ಉಟ್ಟು ಸಿದ್ಧಳಾಗಿರು, ಅದರಲ್ಲಿ ನೀನು ಬಹಳ ಮುದ್ದಾಗಿ ಕಾಣುವೆ, ಇಬ್ಬರು ಕೈ ಹಿಡಿದು, ನವ ಜೋಡಿಯಂತೆ ಸಂಜೆ ಒಂದು ಸುತ್ತು ವಿಹರಿಸೋಣ, ಬದುಕಿಗಾಗಿ ಅದಿನ್ನೆಷ್ಟೋ ಕನಸುಗಳಿವೆ ನನ್ನ ಬಳಿ, ಸಂಜೆ ಎಲ್ಲಾ ಹೇಳಿ ಕೊಳ್ಳುತ್ತೇನೆ, ಮುದ್ದಾದ ಒಂದು ಬದುಕು ಕಟ್ಟಿ ಕೊಳ್ಳೋಣ, ಪ್ರೀತಿಯಿಂದ ಎಂದಿನಂತೆ ಜೊತೆ ನಡೆಯಲು ಸಿದ್ಧಳಾಗಿರು, ನಾವು ಈ ಬದುಕಿನಲ್ಲಿ ಕ್ರಮಿಸ ಬೇಕಾದ ದೂರ ಇನ್ನೂ ಬಹಳವಿದೆ.

ಇಂತಿ,
- ಕೇವಲ ನಿನ್ನವನು

15 ಕಾಮೆಂಟ್‌ಗಳು:

Ittigecement ಹೇಳಿದರು...

ರಾಜೇಶ್...

ಪ್ರೀತಿಗೆ ಆಡಂಬರ ಬೇಕಿಲ್ಲ..

ನಾಟಕದ ಸೋಗಲಾಡಿತನ ಬೇಕಿಲ್ಲ...

ಶುದ್ಧ ಹ್ರದಯದ..
ಸ್ವಚ್ಛ ಪ್ರೇಮವನ್ನು ..

ಎಷ್ಟು ಚಂದಾವಾಗಿ ವರ್ಣಿಸಿದ್ದೀರಿ...

ಸರಳತೆ ಎಲ್ಲರಿಗೂ ಇಷ್ಟವಾಗುತ್ತದೆ..
ಅದು ನಿಮ್ಮ ಕಥೆಯ ಪ್ರೇಮದಲ್ಲೂ ಇದೆ..
ಬರಹದಲ್ಲೂ ಇದೆ..

ನನಗೆ ಇಷ್ಟವಾಯಿತು..

ನಾನು ನಿರೀಕ್ಷೆ ಮಾಡಿದುದರಿಂದ ..ನಿರಾಸೆಯಾಗಲಿಲ್ಲ..

ಚಂದದ ಬರಹಕ್ಕೆ..
ಅಭಿನಂದನೆಗಳು...

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರಕಾಶ್ ಸರ್,

ಪ್ರೀತಿ ನವಿರು ಭಾವನೆಯ ಚೆಂದನೆಯ ತಳಿರು,
ಬದುಕ ವಾತಾವರಣದಲ್ಲಿ ಸ್ವಲ್ಪ ಏರುಪೇರಾದರೂ ಬಾಡಿ ಬಿಡುತ್ತಲ್ಲವೇ ಪ್ರೀತಿಯ ಲತೆ.

ನಾನು publish post button click ಮಾಡಿ, ಸರಿಯಾಗಿ 5 ನಿಮಿಷ ಕಳೆದಿರಲಿಲ್ಲ, ಅಷ್ಟರಲ್ಲಾಗಲೇ ನಿಮ್ಮ ಪ್ರತಿಕ್ರಿಯೆ!!!, ಅದು ಈ ನಡು ರಾತ್ರಿಯಲ್ಲಿ!!!

ಇದಕ್ಕಿಂತ ಪ್ರೋತ್ಸಾಹ ಇನ್ನೇನು ಬೇಕು ಒಬ್ಬ ಬರಹಗಾರನಿಗೆ, ನೀವು ಹೇಳಿದಂತೆ ಇನ್ನು ಮುಂದೆ ಕಾಯಿಸುವುದಿಲ್ಲ.

ನಿಮ್ಮ ಪ್ರೀತಿಗೆ ನಾನು ತುಂಬು ಹೃದಯದ ಆಭಾರಿ...

-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

ರಾಜೇಶ್,
ತುಂಬಾ ಪ್ರೀತಿ ಇತ್ತು ಈ ಪತ್ರದಲ್ಲಿ...
ಮುದ್ದು-ಮುದ್ದಾಗಿತ್ತು .... ನಿಮ್ಮ ಹೆಂಡತಿ ಆಗುವವರು ಪುಣ್ಯ ಮಾಡಿರುತ್ತಾರೆ ರಾಜೇಶ್......
ನಿಮಗೆ ಒಳ್ಳೆಯ ಹೆಂಡತಿ ಸಿಗಲಿ....ಇದು ನನ್ನ ಶುಭ ಹಾರೈಕೆ...

ಅನಾಮಧೇಯ ಹೇಳಿದರು...

ಅಬ್ಬಾ ಎಷ್ಟು ಕಾಯಿಸಿ ಬಿಟ್ರಿ ರಾಜೇಶ್
ನಿಮ್ಮ ಪ್ರೀತಿ ತುಂಬಿದ ಸರಳ ಬರಹ ತುಂಬಾನೇ ಇಷ್ಟವಾಯಿತು.ರೀ ಆ ಪಲಾವ್ ನ ರುಚಿ ನಮಗೂ ಹಿಡಿಸಿತು. ಎಷ್ಟು ಗಂಟೆಗೆ ಎದ್ರಿ ರಾಜೇಶ್. ಪಾಪ ಎಲ್ಲಾ ಕೆಲಸ ಮಾಡಿ ಆಯಾಸ ಆಗಿರುತ್ತೆ ಅನ್ಕೊಂಡೆ. ಆದರೆ ಕೊನೆಗೆ ಆ ಪತ್ರ ಬರೆದು ನಿಮ್ಮ ಅಯಾಸನ ಎಲ್ಲಾ ಮರೆತಿರಲ್ರಿ !!!!!

ಅನಾಮಧೇಯ ಹೇಳಿದರು...

AhA!!
ee bhAvanegaLE sogasu!!
maduveyAda mEle ninna henDatige heegeyE ondu patra baredu beragugoLisu! ee baraha kAlpanikavAdarU bhAvanegaLu kAlpanikavAgadirali!!

adu saree... yAkO namma huDugaru itteechege barahakkella 'kAlpanijka' antalO 'mattobbana anuBava' antalO Tag line u koDtidAralla, ellO EnO miss hoDeetide!! :)
~ Chet Akka

I am Naveen ಹೇಳಿದರು...

ತುಂಬಾ ಚೆನ್ನಾಗಿದೆ ರಾಜೇಶ್..........
Expecting some more........

naveen

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ಪ್ರೀತಿಯ ಗೆಳೆಯ,
ನಿನ್ನ ಬರಹ ! ಆಹಾ! ಅದರಲ್ಲಿನ ನೈಜತೆ, ಓದಿಸಿಕೊಂಡು ಹೋಗುವ ರೀತಿ……
ಆ ಅನುಭವ ವಿವರಿಸಲು ಹಾಗೂ ನನಗೆ ಅನಿಸ್ಸಿದ್ದನ್ನ ಹೇಳಲು ನನಗೆ ಶಬ್ದಗಳ ಕೊರತೆ ….
ಆದರೂ ವಿವರಿಸುವ ಪ್ರಯತ್ನ….

ಓದಿದರೆ , ಸರಳ ಸುಂದರ ಶಬ್ದದ ಅಲಂಕಾರವಿಲ್ಲದ ಚೆಂದದ ಬರಹ,
ಸುಂದರ ತರುಣಿ ತಿಳಿ ಬಣ್ಣದ ಕಾಟನ್ ಸೀರೆಯುಟ್ಟು, ಮಲ್ಲಿಗೆ ಮುಡಿದು, ಹಸಿರು ಬಳೆಯ ತೊಟ್ಟು ಬಳಕುತ್ತಾ ಬಂದಂತಿದೆ ನಿನ್ನ ಬರಹ.
ಓದಿದರೆ ಇದೇನಿದು , ಮನೆಗೇಲಸವನ್ನ ಬರೆದಿದಾನೆ ಅಂತ ಅನಿಸುತ್ತೆ,
ಆದರೆ ಅದರ ಆಳ ನೊಡಿದಂತೆ(ತಿಳಿದುಕೋಂಡಂತೆ) ಜಾಸ್ತಿ ಆಗುತ್ತಾ ಹೊಗುತ್ತದೆ.
ಇದು ಕಾಲ್ಪನಿಕವಲ್ಲೋ ಮಾರಾಯ, ಅದು ನಿನ್ನ ಮನಸ್ಸಿನಾಳದ ಬಯಕೆ ಕಣೋ.
ಬರಹದಲ್ಲಿ ನಾನು ಗೃಹಿಣಿಯ ಮೌಲ್ಯ, , ಗಂಡನ ಪ್ರೀತಿ(ಕಾಳಜಿ), ಮನೆಗೆಲಸದ ಕಷ್ಟ, ಬದುಕಿನ ಸರಳತೆ, ಪ್ರೀತಿಯ ವ್ಯಾಖ್ಯಾನ ಇವೆಲ್ಲವನ್ನು ಕಂಡೆ.
ಒಟ್ಟಿನಲ್ಲಿ ಬಿಸಿಲಿಗೆ ಬಾಯಾರಿದ ಗೆಳತಿಗೆ ಹತ್ತಿರದ ಕೋಳದಿಂದ ಬೊಗಸೆಯಲ್ಲಿ ಜತನದಿಂದ ತಿಳಿನೀರು
ತಂದು ಕುಡಿಸಿದಂತಿತ್ತು.
ನಿನ್ನ ಬರಹ ಕಂಡು ನಮ್ಮ ಬೇಂದ್ರೆ ಅಜ್ಜನ ಕವನ ನೆನಪು ಬಂತು.
“ಓಲುಮೆ ನಮ್ಮ ಬದುಕು, ಅದನ್ನೇ ಬಳ್ಸಿಕೊಳ್ಳುವೆವು ಅದಕು,ಇದಕು,ಎದಕು….”

ಇಂತಿ ಪ್ರೀತಿಯ
ಲಕ್ಷ್ಮಣ

ಜ್ಞಾನಮೂರ್ತಿ ಹೇಳಿದರು...

ಗೆಳೆಯ ರಾಜೇಶ್,

ನಿಮ್ಮ ಅಂತರಾಳದ ಕಾಲ್ಪನಿಕ ಬರವಣಿಗೆಯ ಕಣಜದಲ್ಲಿ ಇನ್ನು ಏನ್ ಇದೆ ಗೆಳೆಯ, ತುಂಬಾ ದಿನ ಕಾಯಿದ್ರು ಸಹ ಮನದ ಸಣ್ಣ ಸಣ್ಣ ನವಿರು ಬಾವನೆಗಳನ್ನು ಪದವಾಗಿಸಿ ಸುಂದರವಾಗಿ ಬರದಿದ್ದಿಯ ತುಂಬಾ ಇಷ್ಟವಾಯಿತು....

shivu.k ಹೇಳಿದರು...

ರಾಜೇಶ್,

ಕ್ಷಮೆಯಿರಲಿ...ತಡವಾಗಿದ್ದಕ್ಕೆ...ಸ್ವಲ್ಪ ಮೈಗೆ ಹುಷಾರಿರಲಿಲ್ಲ ಅಷ್ಟೆ......ನಿಮ್ಮ ಪ್ರೀತಿಯಲ್ಲಿ ಅದ್ದಿ ತೆಗೆದ ಈ ಪತ್ರವನ್ನು ಓದುತ್ತಿದ್ದಂತೆ ನನ್ನ ಜ್ವರ ನನ್ನಿಂದ ಮತ್ತಷ್ಟು ದೂರವಾಯಿತು.....ಎಷ್ಟು ಚೆನ್ನಾದ ಮಮತೆ ಪ್ರೀತಿಯಿಂದ ಪತ್ರ ಬರೆದಿದ್ದೀರಿ ರಾಜೇಶ್. [ನನಗೆ ನನ್ನ ಹುಟ್ಟುಹಬ್ಬದ ದಿನ ನನ್ನಾಕೆಯನ್ನು ಅರಾಮವಾಗಿ ಕೂರಿಸಿ, ನಾನು ಇದೇ ರೀತಿ ಬೇಗ ಎದ್ದು ಅಡುಗೆ ಮಾಡಿ....ಸಸ್ಪೆನ್ಸ್ ಆಗಿ ಮೂವರಿಗೆ ಮಾತ್ರ ಮನೆಗೆ ಬರಲು ಹೇಳಿದ್ದೆ...ಹುಟ್ಟುಹಬ್ಬದ ವಿಚಾರವನ್ನು ಹೇಳಿರಲಿಲ್ಲ. ಸುಮ್ಮನೆ ಬನ್ನಿ ಅಂದಿದ್ದೆ. ಅಂದು ನನ್ನ ಹಿರಿಯರನ್ನು ನೆನೆದು...ಪ್ರಕಾಶ್ ಹೆಗಡೆಯವರು, ನನ್ನ ಶ್ರೀಮತಿ, ಸೇರಿದಂತೆ ಇನ್ನಿಬ್ಬರು ಗೆಳೆಯರಿಗೆ ನಾನೇ ಪ್ರೀತಿಯಿಂದ ಊಟ ಬಡಿಸಿದ್ದೆ....ಆಗ ಆದ ಅನಂದದ ಅನುಭವ ಇಲ್ಲಿ ವರ್ಣಿಸಲು ಸಾಧ್ಯವಿಲ್ಲ....ಈಗ ಎಲ್ಲಾ ನೆನಪಾಯಿತು...]ನಿಮ್ಮ ಲೇಖನ ಓದಿ ಮನಸ್ಸು ಮತ್ತೊಮ್ಮೆ ಉಲ್ಲಾಸಗೊಂಡಿತು...

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರೀತಿಯ ಇಂಚರ,
ಈ ಪತ್ರ ಇಷ್ಟ ಪಟ್ಟಿದ್ದಕ್ಕೆ ಮತ್ತು ನಿಮ್ಮ ನಲ್ಮೆಯ ಹಾರೈಕೆಗೆ ತುಂಬು ಮನಸ್ಸಿನ ಧನ್ಯವಾದಗಳು.
ಯಾವಾಗಲು ನೀವು ಹೀಗೆ ಬರುತ್ತಿರ ಬೇಕು.

ನಲ್ಮೆಯ ರೋಹಿಣಿ,
ಕಾಯಿಸಿದ್ದಕ್ಕೆ ಕ್ಷಮೆಯಿರಲಿ...
ಬರಹ ಮತ್ತು ಪಲಾವ್ ಇಷ್ಟಪಟ್ಟಿದ್ದಕ್ಕೆ ತುಂಬ ತುಂಬ ಥ್ಯಾಂಕ್ಸ್...
ಸುಮ್ಮನೆ ಮನಸ್ಸನ್ನು ಎಬ್ಬಿಸಿ ಬರೆದ ಪತ್ರವಿದು, ಕಾಣದ ಬಾಳ ಗೆಳತಿಗೆ.
ಈಗ ಆಯಾಸವೇನು ಇಲ್ಲ... ತಪ್ಪದೆ ಬಂದಿದ್ದಕ್ಕೆ ಇನ್ನೊಂದು ಡಜನ್ ನಷ್ಟು ಧನ್ಯವಾದ...

ಚೇತನಕ್ಕ,
ನೀವು ಇಲ್ಲಿಯವರೆಗೂ ಬಂದಿದ್ದೆ ನನಗೊಂದು ಗರಿಮೆ.
ಅಕ್ಕ, ಖಂಡಿತ ಬರುವ ಹೆಂಡತಿಗೆ ಒಂದು ಪತ್ರ ಬರೆದು ಕೈಗಿಡುವೆ, ಅವಳು ಓದಿ ಇಷ್ಟಪಟ್ಟರೆ ಖಂಡಿತ ನಿಮಗೆ ಥ್ಯಾಂಕ್ಸ್ ಹೇಳಲು ಕರೆ ಮಾಡುವೆ, ಸುಮ್ಮನೆ ಹಾಗೆ ಕಸದ ಬುಟ್ಟಿ ಸೇರಿಸಿದರೆ, ನಾನು ಸುಮ್ಮನಾಗುವೆ, ಸಂಸಾರದ ಗುಟ್ಟು, ವ್ಯಾಧಿ ರಟ್ಟು ಅಂತಾರಲ್ಲ ಹಾಗೆ [:)].
ನನ್ನ ಬರಹದ ಸನ್ನಿವೇಶ ಮಾತ್ರ ಕಾಲ್ಪನಿಕ, ಭಾವನೆಗಳಲ್ಲಿ ಯಾವುದೇ ಕೃತ್ರಿಮತೆ ಅಥವಾ ಕಾಲ್ಪನಿಕತೆಯಿಲ್ಲ, ಇದು ನನ್ನ ಮನದ ಅಪ್ಪಟ ಪಿಸು ಮಾತು. ನೀವು ಹೇಳಿದಂತೆ ಇನ್ಮುಂದೆ ಕಾಲ್ಪನಿಕ ಎಂದು ಪ್ರಸ್ತಾಪಿಸಿ, ಸಮಜಾಯಿಷಿ ಕೊಡುವುದಿಲ್ಲ, ನಿಮ್ಮ ಅಮೂಲ್ಯ ಸಲಹೆಗೆ ಮತ್ತು ತಮ್ಮನೆಡೆಗಿನ ಪ್ರೀತಿಗೆ ಸಹಸ್ರಾರು ನಮಸ್ಕಾರ, ಜೊತೆಗೆ ಧನ್ಯವಾದ. ಬರುತ್ತಿರಿ...

ಪ್ರೀತಿಯ ನವೀನ,
ನಿರೀಕ್ಷೆ ಖಂಡಿತ ಸುಳ್ಳು ಮಾಡುವುದಿಲ್ಲ...
ಇಷ್ಟ ಪಟ್ಟಿದ್ದಕ್ಕೆ ಅನಂತಾನಂತ ಧನ್ಯವಾದಗಳು, ನಿಮ್ಮ ಈ ಪ್ರೀತಿಯೇ ನನ್ನ ಲೇಖನಿಗೆ ಆನೆ ಬಲ ನೀಡುತ್ತದೆ.

ಹಿರಿಯ ಗೆಳೆಯ ಮತ್ತು ಸಹೋದ್ಯೋಗಿ ಲಕ್ಷ್ಮಣ್,
ಬರಹದ ವಿಶ್ಲೇಷಣೆಗೆ ಮತ್ತು ನಿಮ್ಮ ಪ್ರೀತಿಗೆ ನಾನು ಆಭಾರಿ.
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ, ನಿಮ್ಮ ವಿಶ್ಲೇಷಣೆ ಕೂಡ ನನಗೆ ಇಷ್ಟವಾಯಿತು.
ನನ್ನ ಬರಹ ನಿಮಗೆ ವರ ಕವಿಗಳ ನೆನಪು ತಂದಿದ್ದರೆ ನನ್ನ ಪಾಲಿಗೆ "ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ"

ಆತ್ಮೀಯ ಗೆಳೆಯ ಜ್ಞಾನ,
ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹವೇ ನನ್ನ ನಾಲ್ಕಾರು ಅಕ್ಷರಗಳು ಒಂದು ರೂಪ ಪಡೆಯಲು ಸಹಾಯಕವಾಗಿವೆ.
ಆ ನಿಟ್ಟಿನಲ್ಲಿ ನಾನು ನಿಮ್ಮೆಲ್ಲರಿಗೂ ಋಣಿ... ಪ್ರೀತಿ ಹೀಗೆ ಇರಲಿ.

ಪ್ರೀತಿಯ ಶಿವು ಸರ್,
ನೀವು ಯಾವಾಗ ಬಂದರು ಖುಷಿಯೇ, ಆದರೆ ನೀವು ಬರುವಷ್ಟು ಹೊತ್ತು ನಾನು ಕಾದಿದ್ದು ಸುಳ್ಳಲ್ಲ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ...
ನಿಮ್ಮ ಅನುಭವದ ಮುಂದೆ ನನ್ನ ಕಲ್ಪನೆ ಖಾಲಿ-ಖಾಲಿ. ನಿಮ್ಮ ಪ್ರೀತಿಯ ಮಾತುಗಳಿಗೆ ನಾನು ಋಣಿ, ಮತ್ತು ನನ್ನ ಲೇಖನಿಯ ಜವಾಬ್ಧಾರಿ ಇನ್ನು ಹೆಚ್ಚುತ್ತಿದೆ.

-ರಾಜೇಶ್ ಮಂಜುನಾಥ್

Unknown ಹೇಳಿದರು...

ರಾಜೇಶ ಸರ್
ಮದುವೆಗೆ ಕರೀತೀನಿ ಅಂದು ಕರೀಲೆ ಇಲ್ಲ, ನಿಮ್ಮ ಬದುಕು ಚೆನ್ನಾಗಿರಲಿ. ನಿಮ್ಮ ಹೆಂಡತಿ ಪುಣ್ಯ ಮಾಡಿದ್ದರು. ನನ್ನ ನಮಸ್ಕಾರ ತಿಳಿಸಿ ಅವರಿಗೆ.

Hema Powar ಹೇಳಿದರು...

ರೀ ರಾಜೇಶ್,
ಹೊಟ್ಟೆ ಕಿಚ್ಚಾಗುತ್ತಲ್ರೀ ನಿಮ್ ಹುಡುಗೀನ ನೆನಸಿಕೊಂಡರೆ. :) ಹ್ಹ ಹ್ಹ. ತುಂಬಾ ಭಾವುಕರಾಗಿ ಬರ್ದಿದ್ದೀರಿ. ಚಂದದ ಬರಹ. ಧನ್ಯವಾದಗಳು

ಚಿತ್ರಾ ಸಂತೋಷ್ ಹೇಳಿದರು...

ರಾಜೇಶ್..ಚೆಂದದ ಬರಹಕ್ಕೆ ನನ್ನ ಅಭಿನಂದನೆ. ಕಲ್ಪನೆಯಲ್ಲಿ ಮೂಡಿಬಂದ ಹಾಗೇ ಅನುಭವಗಳನ್ನು ಬರೆಯೋದು ತೀರ ಕಷ್ಟ ಅಂತ ನನ್ನ ಅಭಿಪ್ರಾಯ. ಆಡಂಬರವಿಲ್ಲದ ಪ್ರೀತಿಯನ್ನು ಬರಹದಲ್ಲಿ ನಿರೂಪಿಸಿದ್ದೀರಿ.
-ಚಿತ್ರಾ

Veena DhanuGowda ಹೇಳಿದರು...

hello rajesh,
Manasige hidisthu :)
preethi thumbi thulkutha ide nim barahadali....
" ಪಲಾವಿನ ರುಚಿ ನೋಡಿದವನಿಗೆ ದಿಗಿಲು ಬಡಿದಿದ್ದೆಂದರೆ ಉಪ್ಪು ಹಾಕಿಯೇ ಇರಲಿಲ್ಲ. ಮತ್ತೆ ಒಂದು ಲೋಟದಲ್ಲಿ, ಸ್ವಲ್ಪ ನೀರು ತೆಗೆದು ಕೊಂಡು, ಸ್ವಲ್ಪ ಉಪ್ಪನ್ನು ಆ ನೀರಿನಲ್ಲಿ ಬೆರೆಸಿ, ಪಲಾವಿಗೆ ಸೇರಿಸಿ, ಮತ್ತೆ ಒಲೆಯ ಮೇಲಿಟ್ಟೆ. "
andre adige madi abyasa idde ani ??? [ uppu kammi yadre neerinali kalsi hagbeku anodhu gothide ]
Good writing... Its awesome :)

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಹೇಮಾ, ಚಿತ್ರಾ ಬರಹ ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು, ತಪ್ಪದೆ ಬರ್ತಿರಿ.

ವೀಣಾ,
ನನ್ನ ಬ್ಲಾಗಿಗೆ ಆದರದ ಸ್ವಾಗತ...
ಅಡುಗೆ ಮಾಡ್ಲಿಕ್ಕೆ ಬರುತ್ತೆ, ಅಮ್ಮ ಯಾವಾಗಲು ಹೇಳ್ತಿದ್ರು ನಾನು ಪಲಾವ್ ತುಂಬಾ ಚೆನ್ನಾಗಿ ಮಾಡ್ತೀನಂತ :P, ಬರಹ ಇಷ್ಟ ಪಟ್ಟಿದ್ದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಆಗಾಗ ಬರ್ತಾ ಇರಿ.